ಏಡಿಸಿ ಕಾಡಿತ್ತು ಶಿವನ ಡಂಗುರ!....
ಕೆಲವು ವರ್ಷಗಳ ಹಿಂದೆ ಸಂಸ್ಕೃತ ಮಾಸಪತ್ರಿಕೆಯೊಂದರಲ್ಲಿ ಓದಿದ ಒಂದು ಸ್ವಾರಸ್ಯಕರವಾದ ಕಥೆ, ಚಿಕ್ಕ ಮಕ್ಕಳಿಗೆಂದು ಬರೆದಿದ್ದ ಕಥೆಯಾದರೂ ದೊಡ್ಡವರು ತಿಳಿದುಕೊಳ್ಳಬೇಕಾದ್ದು ಬಹಳವಿದೆ. ಒಬ್ಬ ಹೆಸರಾಂತ ಶಿಲ್ಪಿಯಿದ್ದ. ಅವನು ಕಟೆದು ನಿರ್ಮಿಸುತ್ತಿದ್ದ ಕಲ್ಲಿನ ವಿಗ್ರಹಗಳು ತುಂಬಾ ಸುಂದರವಾಗಿಯೂ ಆಕರ್ಷಕವಾಗಿಯೂ ಇರುತ್ತಿದ್ದವು. ಅವನ ಕಲಾಜಾಣ್ಮೆ ಹಾಗೂ ನೈಪುಣ್ಯ ನಾಡಿನ ಸುತ್ತೆಲ್ಲಾ ಅತ್ಯಂತ ಹೆಸರುವಾಸಿಯಾಗಿತ್ತು. ಒಮ್ಮೆ ಆತನಲ್ಲಿಗೆ ಒಬ್ಬ ಜ್ಯೋತಿಷಿ ಬಂದ; ಅವನು ಕೆತ್ತಿದ ಕಲಾಕೃತಿಗಳನ್ನು ನೋಡಿ ಅತ್ಯಂತ ಸಂತೋಷಗೊಂಡು ಶ್ಲಾಘಿಸಿ ತನಗೆ ಬೇಕಾಗಿದ್ದ ಒಂದು ಪ್ರತಿಮೆಯನ್ನು ಮಾಡಿಕೊಡಲು ಕೇಳಿಕೊಂಡ. ಬಂದ ವ್ಯಕ್ತಿ ಪ್ರಖ್ಯಾತ ಜ್ಯೋತಿಷಿಯೆಂದು ತಿಳಿದ ಶಿಲ್ಪಿಗೆ ತನ್ನ ಭವಿಷ್ಯವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಉಂಟಾಯಿತು. ಆ ಜ್ಯೋತಿಷಿಯ ಮುಂದೆ ತನ್ನ ಕೈಚಾಚಿ ಭವಿಷ್ಯವನ್ನು ಹೇಳಬೇಕೆಂದು ಕೇಳಿಕೊಂಡ. ಅವನ ಕೈಯಲ್ಲಿರುವ ಗೆರೆಗಳನ್ನು ನೋಡಿ ಲೆಕ್ಕಹಾಕಿ ಜ್ಯೋತಿಷಿ ಮೆಲುದನಿಯಲ್ಲಿ ಹೇಳಿದ: “ಅಯ್ಯಾ ನಿನ್ನಂತಹ ಶಿಲ್ಪಿ ಜಗತ್ತಿನಲ್ಲಿಯೇ ಇಲ್ಲ, ಆದರೇನು ಮಾಡುವುದು, ನೀನು ಅಲ್ಪಾಯುಷಿ. ನಿನ್ನ ಆಯಸ್ಸು ಮುಗಿಯುತ್ತಾ ಬಂದಿದೆ. ಇನ್ನೊಂದು ತಿಂಗಳಲ್ಲಿ ನೀನು ಸಾಯುತ್ತೀಯ”. ಈ ಮಾತುಗಳನ್ನು ಕೇಳಿದೊಡನೆಯೇ ಶಿಲ್ಪಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ಇದಕ್ಕೇನೂ ಪರಿಹಾರವಿಲ್ಲವೇ ಜ್ಯೋತಿಷಿಗಳೇ ಎಂದು ಪರಿಪರಿಯಾಗಿ ಅಂಗಲಾಚಿ ಬೇಡಿದ. ಆಗ ಜ್ಯೋತಿಷಿ ಒಂದು ಉಪಾಯವನ್ನು ಸೂಚಿಸಿದ. “ನೋಡು, ನಿನಗೆ ಎರಡು ಕಂಟಕಗಳಿವೆ. ಇಲ್ಲಿಗೆ ಸರಿಯಾಗಿ 15 ದಿನಗಳಿಗೆ ನಿನ್ನನ್ನು ಎಳೆದೊಯ್ಯಲು ಯಮದೂತನು ಬರುತ್ತಾನೆ. ಅಷ್ಟರೊಳಗೆ ನೀನು ನಿನ್ನ ಹಾಗೆಯೇ ಇರುವ ಒಂಬತ್ತು ಪ್ರತಿಮೆಗಳನ್ನು ನಿರ್ಮಾಣ ಮಾಡು. ಅವುಗಳ ಮಧ್ಯೆ ನೀನು ಸ್ವಲ್ಪವೂ ಅಲ್ಲಾಡದೆ ನಿಂತುಕೊ. ಬಂದ ಯಮದೂತನಿಗೆ ನೀನು ಯಾರೆಂದು ತಿಳಿಯದೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಾಗೆಯೇ ವಾಪಾಸು ಹೋಗಿಬಿಡುತ್ತಾನೆ. ಇದೇ ರೀತಿ ಇಲ್ಲಿಂದ ಒಂದು ತಿಂಗಳಿಗೆ ಸರಿಯಾಗಿ ನಿನಗೆ ಎರಡನೆಯ ಕಂಟಕ ಬರುತ್ತದೆ. ಅದರಿಂದ ನೀನು ಪಾರಾಗುವುದು ಬಹಳ ಕಷ್ಟ. ಆದರೂ ಮೇಲಿನಂತೆಯೇ ನೀನು ನಿನ್ನ ತದ್ರೂಪು ವಿಗ್ರಹಗಳ ಮಧ್ಯೆ ಸ್ವಲ್ಪವೂ ಅಲ್ಲಾಡದಂತೆ ನಿಂತುಕೊಂಡರೆ ಖಂಡಿತವಾಗಿಯೂ ಪಾರಾಗುತ್ತೀಯಾ.” ಇದನ್ನು ಕೇಳಿದ ಶಿಲ್ಪಿಗೆ ಹೋದ ಜೀವ ಮರಳಿ ಬಂದಂತಾಯಿತು. ಅಂದಿನಿಂದ ಬೇರೆ ವಿಗ್ರಹಗಳನ್ನು ಕೆತ್ತುವುದನ್ನು ಬಿಟ್ಟು ರಾತ್ರಿ ಹಗಲು ಕಷ್ಟಪಟ್ಟು ತನ್ನಂತೆಯೇ ಇರುವ ಒಂಬತ್ತು ವಿಗ್ರಹಗಳನ್ನು ತನ್ನೆಲ್ಲ ನೈಪುಣ್ಯವನ್ನೂ ಬಳಸಿ ಕೆತ್ತ ತೊಡಗಿದ. ಜ್ಯೋತಿಷಿ ಹೇಳಿದಂತೆ 15 ದಿನಗಳಿಗೆ ಸರಿಯಾಗಿ ಯಮದೂತ ಬಂದ. ಆ ವೇಳೆಗೆ ಮುಂಚಿತವಾಗಿಯೇ ಶಿಲ್ಪಿ ತಾನು ಕಟೆದು ನಿಲ್ಲಿಸಿದ ತನ್ನ ವಿಗ್ರಹಗಳ ಮಧ್ಯೆ ಮಿಸುಕಾಡದೆ ನಿಂತುಕೊಂಡಿದ್ದ. ಯಮದೂತನು ದೂರದಲ್ಲಿ ಬರುವುದನ್ನು ನೋಡಿದಾಗ ಎದೆಯ ಬಡಿತ ಜಾಸ್ತಿಯಾಯಿತು. ಆದರೂ ಜೀವಭಯದಿಂದ ಧೈರ್ಯ ತಂದುಕೊಂಡು ಕಣ್ಣುರೆಪ್ಪೆಯನ್ನೂ ಅಲುಗಾಡಿಸದಂತೆ ನಿಂತುಕೊಂಡ. ಹತ್ತಿರ ಬಂದ ಯಮದೂತನು ದಿಗ್ಬ್ರಾಂತನಾದ. ಅವರೆಲ್ಲರೂ ಒಂದೇ ರೂಪವುಳ್ಳ, ಹತ್ತು ಜನರೆಂದೇ ಕೋಣನ ತಲೆಯ ಆ ಯಮದೂತ ಪರಿಭಾವಿಸಿದ. ಆಯುಷ್ಯ ಪೂರ್ತಿಯಾಗದ ವ್ಯಕ್ತಿಯ ಮೇಲೆ ಅವನು ತನ್ನ ಪಾಶವನ್ನು ಬೀಸುವಂತಿರಲಿಲ್ಲ. ಆ ಹತ್ತರಲ್ಲಿ ನಿಜವಾದ ಶಿಲ್ಪಿ ಯಾರೆಂದು ತಿಳಿಯದೆ ತಬ್ಬಿಬ್ಬಾಗಿ ವಾಪಾಸ್ಸು ಹೊರಟುಹೋದ. ಬದುಕಿದೆಯಾ ಬಡಜೀವವೇ ಎಂದು ಶಿಲ್ಪಿ ನಿಟ್ಟುಸಿರುಬಿಟ್ಟ. ಅತ್ತ ಬರಿಗೈಯಲ್ಲಿ ಬಂದ ದೂತನನ್ನು ನೋಡಿ ಯಮ ಸಿಡಿಮಿಡಿಗೊಂಡ, ಯಮದೂತ ದೈನ್ಯದಿಂದ ತನಗಾದ ಕಷ್ಟವನ್ನು ಹೇಳಿಕೊಂಡ. ಜ್ಯೋತಿಷಿಯ ಸಲಹೆಯಂತೆ ಶಿಲ್ಪಿಯು ಸಾವಿನಿಂದ ಪಾರಾಗಲು ಮಾಡಿದ ತಂತ್ರಗಾರಿಕೆ ಇದೆಂದು ಯಮರಾಜನಿಗೆ ತಿಳಿಯಿತು. ಅವನು ನಸುನಕ್ಕು ತನ್ನ ದೂತನನ್ನು ಹತ್ತಿರ ಕರೆದು ಮುಂದಿನ ಸಾರಿ ಹೋದಾಗ ಏನು ಮಾಡಬೇಕೆಂದು ಗುಟ್ಟಾಗಿ ಕಿವಿಯಲ್ಲಿ ಹೇಳಿ ಆ ಶಿಲ್ಪಿಯನ್ನು ಬಿಡದೆ ಎಳೆದು ತಾ ಎಂದು ಅಪ್ಪಣೆ ಮಾಡಿ ಕಳುಹಿಸಿದ.
ಇತ್ತ ಶಿಲ್ಪಿಯು ಯಮದೂತ ಹಿಂತಿರುಗಿ ಹೋದುದಕ್ಕೆ ಬಹಳ ಸಂತೋಷಗೊಂಡು ಜ್ಯೋತಿಷಿಯ ಬಳಿ ಹೋಗಿ ತಾನು ಸಾವಿನಿಂದ ಪಾರಾದ ಸಂಗತಿಯನ್ನು ಹೆಮ್ಮೆಯಿಂದ ಹೇಳಿಕೊಂಡ. ತನ್ನ ಪ್ರಾಣವನ್ನು ಉಳಿಸಿದ್ದಕ್ಕಾಗಿ ಅವನು ಕೇಳಿದ ವಿಗ್ರಹವನ್ನು ಉಚಿತವಾಗಿ ಮಾಡಿಕೊಡುವುದಾಗಿ ವಿನಂತಿಸಿಕೊಂಡ. ಅದಕ್ಕೆ ಜ್ಯೋತಿಷಿ ಈ ಕಂಕಟದಲ್ಲೇನೋ ನೀನು ಸುಲಭವಾಗಿ ಪಾರಾಗಿದ್ದೀಯಾ, ಮುಂದಿನ ಕಂಟಕದಿಂದ ನೀನು ಪಾರಾಗುವುದು ಅಷ್ಟು ಸುಲಭವಿಲ್ಲ. ಆದರೆ ಈ ಬಾರಿ ಮಾಡಿದಂತೆ ತಪ್ಪದೆ ಮಾಡಿದರೆ, ನೀನು ಖಂಡಿತ ಬದುಕಿ ಉಳಿಯುತ್ತೀಯಾ, ಬಹಳ ಹುಷಾರಾಗಿ ವರ್ತಿಸು ಎಂದು ಕಿವಿಮಾತು ಹೇಳಿ ಕಳುಹಿಸಿದ. ಮೊದಲನೆಯ ಕಂಟಕದಲ್ಲಿ ಪಾರಾದ ಅನುಭವವಿದ್ದ ಶಿಲ್ಪಿಗೆ ಎರಡನೆಯದರಲ್ಲಿ ಪಾರಾಗುವ ಬಗ್ಗೆ ಯಾವ ಅನುಮಾನವೂ ಇರಲಿಲ್ಲ. ಜ್ಯೋತಿಷಿಯು ಹೇಳಿದಂತೆ ಅಲ್ಲಿಂದ 15 ದಿನಗಳಿಗೆ ಸರಿಯಾಗಿ ಎರಡನೆಯ ಬಾರಿ ಯಮದೂತ ಮತ್ತೆ ಬಂದಾಗ ಶಿಲ್ಪಿಗೆ ಅಷ್ಟಾಗಿ ಎದೆನಡುಕ ಇರಲಿಲ್ಲ. ಹಿಂದಿನಂತೆ ಶಿಲ್ಪಿಯು ಈ ಬಾರಿ ಯಮದೂತನಿಗೆ ಸ್ವಲ್ಪವೂ ಹೆದರದೆ ಧೈರ್ಯವಾಗಿ ತನ್ನ ವಿಗ್ರಹಗಳ ಮಧ್ಯೆ ಮಿಸುಕಾಡದೆ ನಿಂತಿದ್ದ. ಯಮದೂತನೂ ಸಹ ಶಿಲ್ಪಿಯನ್ನು ಹುಡುಕುವ ಗೋಜಿಗೆ ಹೋಗಲಿಲ್ಲ. ಪ್ರತಿಮೆಗಳ ಹತ್ತಿರ ಹೋಗಿ ತನ್ನ ಬೆನ್ನ ಹಿಂದೆ ಕೈಯಲ್ಲಿ ಯಮಪಾಶವನ್ನು ಬಚ್ಚಿಟ್ಟುಕೊಂಡ. ತನ್ನ ಒಡೆಯ ಯಮರಾಜ ಗುಟ್ಟಾಗಿ ಹೇಳಿಕೊಟ್ಟ ರೀತಿಯಲ್ಲಿ ಪ್ರತಿಯೊಂದು ವಿಗ್ರಹದ ಮುಂದೆ ನಿಂತು “ಆಹಾ! ಎಷ್ಟು ಸುಂದರವಾಗಿದೆ ಈ ವಿಗ್ರಹ! ಎಷ್ಟೊಂದು ನೈಜತೆಯಿಂದ ಕೂಡಿದೆ! ಕಲ್ಲಿನ ವಿಗ್ರಹವಾದರೂ ಜೀವಂತವಾಗಿ ನಡೆದು ಬರುತ್ತಿದೆಯೇನೋ ಎನ್ನುವ ಭ್ರಮೆಯನ್ನುಂಟುಮಾಡುವಂತಿದೆಯಲ್ಲಾ! ಎಷ್ಟೊಂದು ಅದ್ಭುತವಾಗಿ ಈ ವಿಗ್ರಹಗಳನ್ನು ಕೆತ್ತಿರುವನಲ್ಲಾ ಆ ಶಿಲ್ಪಿ! ಇವುಗಳನ್ನು ಕೆತ್ತಿದ ಆ ಪ್ರತಿಭಾವಂತ ಶಿಲ್ಪಿ ಯಾರಿರಬಹುದು? ಎಂದು ಆ ಶಿಲ್ಪಿಯ ಕಲಾಚಾತುರ್ಯವನ್ನು ಮೆಚ್ಚಿ ಹೊಗಳತೊಡಗಿದೆ. ಈ ಮೆಚ್ಚುಗೆಯ ಮಾತುಗಳನ್ನು ಕೇಳಿ ಉಬ್ಬಿಹೋದ ಆ ಶಿಲ್ಪಿಯು ಬಂದವನು ಯಮದೂತನೆಂಬುದನ್ನೂ ಮೈಮರೆತು ಈ ಎಲ್ಲಾ ವಿಗ್ರಹಗಳನ್ನೂ ನಾನೇ ಮಾಡಿದ್ದು, ನಾನೇ ಮಾಡಿದ್ದು ಎಂದು ಬೀಗುತ್ತಾ ಹೇಳಿದನಂತೆ! ಕೂಡಲೇ ಯಮದೂತನು ಹೌದಾ? ನನಗೆ ನೀನೇ ಬೇಕಾಗಿತ್ತು, ನೀನೇ ಬೇಕಾಗಿತ್ತು, ಬಾ, ನಡೆ! ಎಂದು ತನ್ನ ಕೈಯಲ್ಲಿದ್ದ ಪಾಶವನ್ನು ಅವನ ಕುತ್ತಿಗೆಗೆ ಬೀಸಿ ಯಮರಾಜನಲ್ಲಿಗೆ ಎಳೆದುಕೊಂಡು ಹೋದನಂತೆ!
ವ್ಯಕ್ತಿಯು ಅಹಂಕಾರಕ್ಕೆ ಒಳಗಾದರೆ ಹೇಗೆ ಅವನತಿಯನ್ನು ಹೊಂದುತ್ತಾನೆ ಎಂಬುದನ್ನು ಈ ಕಥೆಯು ತುಂಬಾ ಮಾರ್ಮಿಕವಾಗಿ ಬಿಂಬಿಸುತ್ತದೆ. ಶಿಲ್ಪಿಯ ಮನಸ್ಸಿನಲ್ಲಿ ನಾನು ಎಂಬ ಅಹಂಕಾರ ಸುಳಿಯುವತನಕ ಯಮದೂತ ಅವನನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಅವನಲ್ಲಿ ಇವು ನಾನು ಕೆತ್ತಿದ ವಿಗ್ರಹಗಳು ಎಂಬ ಅಹಂಕಾರ ಮೊಳಕೆಯೊಡೆದ ಗಳಿಗೆಯೇ ಅವನ ಪಾಲಿಗೆ ಮುಳುವಾಯಿತು. “ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ ಎನ್ನುತ್ತಾರೆ" ಬಸವಣ್ಣನವರು. ಮನುಷ್ಯನು ತನ್ನ ಮನಸ್ಸಿನಲ್ಲಿ ಯಾವಾಗ ನಾನು ಎಂಬ ಅಹಂಕಾರವನ್ನು ತುಂಬಿಕೊಳ್ಳುತ್ತಾನೋ ಅಂದಿನಿಂದ ಪ್ರಾರಂಭವಾಗುತ್ತದೆ ಅವನ ಅವನತಿ. ನೀವು ಹೊಸದಾಗಿ ಒಂದು ಮನೆಯನ್ನು ಕಟ್ಟಿಸಿದಾಗಲೋ ಅಥವಾ ಹೊಸದೊಂದು ವ್ಯವಹಾರ ಉದ್ದಿಮೆ ಆರಂಭಿಸಿದಾಗಲೋ ಆಹ್ವಾನಿತರಾಗಿ ಬಂದ ನಿಮ್ಮ ಸ್ನೇಹಿತರು ಮತ್ತು ಬಂಧುಬಾಂಧವರು ನೋಡಿ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಅದೆಲ್ಲವನ್ನೂ ಸ್ವತಃ ನೀವೇ ಕಷ್ಟಪಟ್ಟು ಮಾಡಿದ್ದರೂ ನಾನು ಮಾಡಿದ್ದು ಎಂದು ಹೇಳಿಕೊಂಡು ಬೀಗದೆ ಇದೆಲ್ಲಾ ಗುರುಹಿರಿಯರಾದ ತಮ್ಮಂಥವರ ಆಶೀರ್ವಾದದಿಂದ ಆಗಿದ್ದು ಎಂದು ಸೌಜನ್ಯದ ಮಾತುಗಳನ್ನಾಡುತ್ತೀರಿ. ಹೆಚ್ಚು ವಿಚಾರಮಾಡದೆ ಸಾಂಪ್ರದಾಯಿಕವಾಗಿ ಹೇಳುವ ಈ ಶಿಷ್ಟಾಚಾರದ ಮಾತುಗಳ ಹಿಂದೆ ಮನುಷ್ಯನ ಮನಸ್ಸಿನಲ್ಲಿ ಅಹಂಕಾರ ಮೊಳಕೆಯೊಡೆಯಬಾರದೆಂಬ ವಿವೇಕವಿದೆ. "ವ್ಯಕ್ತಿ ಅಹಂಕಾರದಿಂದ ಬೀಗದೆ, ವಿನಯಶೀಲನಾಗಿರಬೇಕು" ಎಂಬ ಹಿತೋಕ್ತಿ ಅಡಗಿದೆ. ಸದುವಿನಯವೇ ಸದಾಶಿವನೊಲಿಮೆಯಯ್ಯಾ ಎಂದು ಬಸವಣ್ಣನವರು ನುಡಿದದ್ದು ಈ ಅರ್ಥದಲ್ಲಿಯೇ. ಆ ಶಿಲ್ಪಿಯು ಈ ಹಿತೋಕ್ತಿಗಳ ಹಿಂದಿರುವ ಆಶಯವನ್ನು ಅರ್ಥಮಾಡಿಕೊಂಡು ಸುಮ್ಮನಿದ್ದಿದ್ದರೆ ಗಂಡಾಂತರದಿಂದ ಪಾರಾಗುತ್ತಿದ್ದ. ಒಂದು ವೇಳೆ ನಾನೇ ಮಾಡಿದ್ದು ಎಂದು ಅಹಂಕಾರದಿಂದ ಹೇಳಿಕೊಳ್ಳದೆ ಸಾಂಪ್ರದಾಯಿಕವಾಗಿ ಹೇಳುವಂತೆ ಇದೆಲ್ಲಾ ತಮ್ಮಂಥವರ ಆಶೀರ್ವಾದದ ಬಲದಿಂದ ಆಗಿದ್ದು ಎಂದು ಹೇಳಿದ್ದರೂ ಯಮದೂತನು ಅವನನ್ನು ಎಳೆದುಕೊಂಡುಹೋಗದೆ ಬಿಡುತ್ತಿರಲಿಲ್ಲ ಎಂಬುದನ್ನು ಓದುಗರು ಇಲ್ಲಿ ಗಮನಿಸಬೇಕು. ಮೆಚ್ಚುಗೆಯ ಮಾತುಗಳನ್ನು ಕೇಳಿದಾಗ ಒಳಗೊಳಗೇ ಉಬ್ಬಿ ಖುಷಿಪಟ್ಟು ಹೊರಗೆ ವಿನಯದ ಮಾತುಗಳನ್ನು ಆಡುವುದರಿಂದಲೂ ಪ್ರಯೋಜನವಿಲ್ಲ. ಏಕೆಂದರೆ ಸಾಂಪ್ರದಾಯಿಕವಾಗಿ ಆಡುವ ಇಂತಹ ಮಾತುಗಳು ಕೇವಲ ಶಿಷ್ಟಾಚಾರದ ಮಾತುಗಳಾಗುತ್ತವೆ; ಅಂತರಂಗದ ಆಚಾರವಾಗಿ ಪರಿಣಮಿಸಿರುವುದಿಲ್ಲ. ಯಾವುದೇ ಕೆಲಸದಲ್ಲಿ ನಿರತನಾದ ವ್ಯಕ್ತಿಯು ಆ ಕೆಲಸವನ್ನು ಮಾಡುವಾಗ ಎಂತಹ ಮನೋಧರ್ಮವನ್ನು ಹೊಂದಿರಬೇಕೆಂಬುದನ್ನು ಬಸವಣ್ಣನವರು ಕೆಳಗಿನ ವಚನದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ:
ಮಾಡುವಂತಿರಬೇಕು, ಮಾಡದಂತಿರಬೇಕು
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು!
ಮಾಡುವ ಕ್ರಿಯೆಯಲ್ಲಿ ತಾನಿದ್ದೂ ಇಲ್ಲದಂತಿರಬೇಕು. ಅಂದರೆ ಇಂದಿನ ಸರ್ಕಾರಿ ಕಛೇರಿಗಳಲ್ಲಿ ಕೆಲಸದ ವೇಳೆಯಲ್ಲಿ ಕುರ್ಚಿಯ ಹಿಂದೆ ಕೋಟನ್ನು ತಗಲುಹಾಕಿ ಕ್ಯಾಂಟೀನಿಗೆ ಕಾಫಿ ಕುಡಿಯಲು ಹೋದಂತೆ ಅಲ್ಲ! ಮೇಲಧಿಕಾರಿಗಳ ಭಯಕ್ಕೆ ಕುರ್ಚಿಯಲ್ಲಿ ಕುಳಿತು ಕಡ್ಡಾಯಕ್ಕೆ ಮಾಡುವ ಕೆಲಸವೂ ಕೆಲಸವಲ್ಲ. ತಾನು ಮಾಡುವ ಕೆಲಸದ ಬಗ್ಗೆ ಅವಜ್ಞೆ ಸಲ್ಲ, ಅದರಲ್ಲಿ ಆತ್ಮತೃಪ್ತಿ ಇರಬೇಕು. ಮೇಲಧಿಕಾರಿಗಳನ್ನು ಓಲೈಸಿ ಸೇವೆ ತೃಪ್ತಿಕರವಾಗಿದೆಯೆಂದು ಶಿಫಾರಿಸು ಪಡೆದು ಮುಂಬಡ್ತಿಯನ್ನು ಪಡೆಯುವ ಹವಣಿಕೆಯಾಗಬಾರದು. ಯಾವುದೋ ಪತ್ರಿಕೆಯಲ್ಲಿ ನೋಡಿದ ಒಂದು ವ್ಯಂಗ್ಯಚಿತ್ರ ನೆನಪಾಗುತ್ತದೆ. ಉನ್ನತ ಅಧಿಕಾರಿಯೊಬ್ಬ ತನ್ನ ಕಾರ್ಯಾಲಯದ ಛೇಂಬರ್ನಲ್ಲಿ ಸುಖಾಸನದ ಮೇಲೆ ಕುಳಿತು, ಟೇಬಲ್ ಮೇಲೆ ಆಳೆತ್ತರಕ್ಕೆ ಬಿದ್ದಿದ್ದ ಫೈಲುಗಳನ್ನು ನೋಡಿ, ಕೈಯಲ್ಲಿದ್ದ ಫೈಲನ್ನು ಥತ್ ಎಂದು ಬಿಸಾಡಿ, ಕೊರಳಲ್ಲಿರುವ ಟೈಯನ್ನು ಸಡಿಲಿಸಿಕೊಂಡು, ಹಿಂದಕ್ಕೆ ಒರಗಿ ಬಾಯಲ್ಲಿ ಸಿಗರೇಟಿನ ಹೊಗೆ ಬಿಡುತ್ತಾ, ಮುಖ ಸಿಂಡರಿಸಿಕೊಂಡು ಉದ್ಗರಿಸುತ್ತಾನೆ: “I am very proud of my job, but I hate this work!”, ತನಗೆ ಸಿಕ್ಕಿರುವ ಹುದ್ದೆಯ ಬಗ್ಗೆ ಅವನಿಗೆ ಹೆಮ್ಮೆಯೇನೋ ಇದೆ. ಆದರೆ ಆ ಹುದ್ದೆಯಲ್ಲಿದ್ದು ಮಾಡಬೇಕಾದ ಜವಾಬ್ದಾರಿ ಕೆಲಸಗಳ ಬಗ್ಗೆ ಅವನಿಗೆ ಬೇಸರವೋ ಬೇಸರ; ಸ್ವಲ್ಪವೂ ಮನಸ್ಸಿಲ್ಲ, ಗೊಣಗಾಟ. ಒಂದು ಕೆಲಸವನ್ನು ಕರ್ತವ್ಯದೃಷ್ಟಿಯಿಂದ ಮಾಡುವುದು ಬೇರೆ, ಲೆಕ್ಕಾಚಾರವರಿತು ಮಾಡುವುದು ಬೇರೆ. ಕರ್ತವ್ಯವೆಂದು ಮಾಡುವ ಕೆಲಸದಲ್ಲಿಯೂ ಖಿನ್ನತೆಯಿಂದ ಮಾಡುವುದು ಬೇರೆ, ಖುಷಿಯಿಂದ ಮಾಡುವುದು ಬೇರೆ.
ಮಾಡುವುದು ಮಾಡುವುದು ತನು ಮುಟ್ಟಿ
ಮಾಡುವುದು ಮಾಡುವುದು ಮನ ಮುಟ್ಟಿ
ತನು ಮುಟ್ಟಿ ಮನ ಮುಟ್ಟದಿದ್ದರೆ
ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ!
ಎನ್ನುತ್ತಾರೆ ಬಸವಣ್ಣನವರು. ಈ ದೃಷ್ಟಿಯಿಂದ ನೀವು ನಿಮ್ಮ ಕರ್ತವ್ಯಗಳನ್ನು ಮಾಡಿದರೆ ಕಛೇರಿಯಿಂದ ಮನೆಗೆ ಹಿಂತಿರುಗುವಾಗ ಉಂಟಾಗಿರುವ ಬಳಲಿಕೆ ದೈಹಿಕವೇ ಹೊರತು ಮಾನಸಿಕ ಬಳಲಿಕೆ ಆಗಿರಬಾರದು. ಒಂದು ಪಕ್ಷ ಅದು ಮಾನಸಿಕ ಬಳಲಿಕೆ ಆಗಿದ್ದರೆ ನೀವು ಮಾಡಿದ ಕೆಲಸ ತನು ಮುಟ್ಟಿ ಮಾಡಿದ ಕೆಲಸವೇ ಹೊರತು ಮನಮುಟ್ಟಿ ಮಾಡಿದ ಕೆಲಸ ಖಂಡಿತಾ ಅಲ್ಲ!
ತಾನು ಮಾಡುವ ಕೆಲಸದಲ್ಲಿ ಅಹಂಕಾರಪಟ್ಟುಕೊಳ್ಳುವುದು ಸರಿಯಲ್ಲವೆಂದು ತಿಳಿಹೇಳಿದರೂ ಕೆಲವೊಮ್ಮೆ ಅಹಂಕಾರ ಮತ್ತಷ್ಟೂ ಪುಟಿದೆದ್ದು ದುರಹಂಕಾರಕ್ಕೆ ಎಡೆಮಾಡಿಕೊಡುತ್ತದೆ. ಅಂತಹ ಒಂದು ಉದಾಹರಣೆಯನ್ನು ಪಂಪ ಮಹಾಕವಿಯ ಆದಿಪುರಾಣದಲ್ಲಿ ನೋಡಬಹುದು. ಷಟ್ಖಂಡ ಭೂಮಂಡಲವನ್ನು ಗೆದ್ದ ಭರತ ಚಕ್ರವರ್ತಿಯು ಹಿಮಾಲಯಪರ್ವತದವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿ ಹೆಮ್ಮೆಯಿಂದ ಬೀಗುತ್ತಾನೆ. ಅಲ್ಲಿನ ಕಲ್ಲುಬಂಡೆಗಳ ಮೇಲೆ ತನ್ನ ದಿಗ್ವಿಜಯದ ಕೀರ್ತಿಯನ್ನು ದಾಖಲಿಸಬೇಕೆಂದು ಬಯಸುತ್ತಾನೆ. ಆದರೆ ಯಾವ ಬಂಡೆಯನ್ನು ನೋಡಿದರೂ ಅದರಲ್ಲಿ ಬರೆಸಲು ಸ್ವಲ್ಪವೂ ಜಾಗ ಇರುವುದಿಲ್ಲ. ಹಿಂದೆ ಅಲ್ಲಿಗೆ ಗೆದ್ದು ಬಂದಿದ್ದ ನೂರಾರು ರಾಜಮಹಾರಾಜರುಗಳು ತಮ್ಮ ಪ್ರಶಸ್ತಿಗಳನ್ನು ಆಗಲೇ ಬರೆಸಿ ತುಂಬಿರುವುದು ಕಂಡುಬರುತ್ತದೆ. ಇದರಿಂದ ನಾಚಿಕೆಪಟ್ಟುಕೊಳ್ಳಬೇಕಾಗಿದ್ದ ಭರತ ಚಕ್ರವರ್ತಿ ಅವಮಾನಿತನಾಗಿ ಸಿಟ್ಟಿಗೆದ್ದು ತನ್ನ ಕೈಯಲ್ಲಿದ್ದ ರತ್ನದಂಡದಿಂದ ಅವೆಲ್ಲವನ್ನೂ ರೊಯ್ಯನೆ ಅಳಿಸಿಹಾಕಿ ತನ್ನ ಹೆಸರು ಮತ್ತು ಬಿರುದುಬಾವಲಿಗಳನ್ನು ಬರೆಸಲು ಸೇನಾಪತಿಗೆ ಆಜ್ಞಾಪಿಸುತ್ತಾನೆ (ಅಂತು ಗಲಿತಗರ್ವನಾಗಿ ಸಿಗ್ಗಾಗಿ ಪೂರ್ವಾವನಿಪಾಲಪ್ರಶಸ್ತಿಯೊಳೊಂದೊಂದಂ ದಂಡರತ್ನದಿಂ ಸೀಂಟಿ ಕಳೆದು ನಿಜಪ್ರಶಸ್ತಿಗೆಡೆಮಾಡಿ - ಆದಿಪುರಾಣ, ಅಧ್ಯಾಯ ೧೩). ಇಂಥವರನ್ನು ಕಂಡೇ ದಾಸಶ್ರೇಷ್ಠರಾದ ಪುರಂದರದಾಸರು ಕಿವಿಮಾತು ಹೇಳಿದ್ದು:
ಮುನ್ನ ಶತಕೋಟಿ ರಾಯರುಗಳಾಳಿದ ನೆಲನ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನು ಅಸುವಳಿಯೆ ಹೊರಗೆ ಹಾಕುವರು
ಉದ್ಯೋಗ ವ್ಯವಹಾರ ನೃಪಸೇವೆ ಕುಶಲಗತಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ದಿಯಿಂದಲಿ ಗಳಿಸಿ ಇಟ್ಟಿದ್ದ ಅರ್ಥವನು
ಸದ್ಯದಲಿ ಆರುಂಬುವರು ಪೇಳೊ ಮನುಜ
ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡ
ಸ್ವಸ್ಥದಲಿ ನೆನೆ ಕಂಡ್ಯ ಪರಮಾತ್ಮನ
ಚಿತ್ತದೊಳು ಶುದ್ದಿಯಿಂ ಪುರಂದರವಿಠಲನೆ
ಉತ್ತಮೋತ್ತಮನೆಂದು ಸುಖಿಯಾಗೊ ಮನುಜ!
ಇತ್ತೀಚಿನ ವರ್ಷಗಳಲ್ಲಿ “ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ" ತಮ್ಮ MLA/MP Grants ಗಳಿಂದ ನಿರ್ಮಿಸಿದ ರಸ್ತೆಗಳಲ್ಲಿ, ಸಭಾಭವನಗಳಲ್ಲಿ ತಂತಮ್ಮ ಹೆಸರುಗಳು ವಿಜೃಂಭಿಸುವಂತೆ ಶಿಲಾಫಲಕಗಳನ್ನು ಹಾಕಿಸಿಕೊಂಡು ದಿಲ್ಲಿಯ ಗದ್ದುಗೆಗಾಗಿ ಸೆಣೆಸಾಡುತ್ತಿರುವ ನಮ್ಮ ನಾಡಿನ ರಾಜಕೀಯ ಜಡಭರತರಿಗೆ ಪುರಂದರದಾಸರ ಈ ಕಿವಿಮಾತು ಕೇಳಿಸಬಲ್ಲುದೇ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 22.4.2009.