ಹೆತ್ತ ಕರುಳ ಮಿಡಿತಕ್ಕೆ ಎಣೆಯುಂಟೇ.?

  •  
  •  
  •  
  •  
  •    Views  

ಹಳ ವರ್ಷಗಳ ಹಿಂದೆ ಅಮೇರಿಕೆಗೆ ಹೋದಾಗ ಅಲ್ಲಿಯ ಪ್ರಮುಖ ದಿನಪತ್ರಿಕೆಯೊಂದರ ಮುಖಪುಟದಲ್ಲಿ ಒಂದು ಕುತೂಹಲಕಾರಿ ಸಂಗತಿ ವರದಿಯಾಗಿತ್ತು; ಶೀರ್ಷಿಕೆ "Baby Baking!" ಎಂದು ದಪ್ಪಕ್ಷರಗಳಲ್ಲಿ ಮುದ್ರಿತವಾಗಿತ್ತು! ಅದು ಕಣ್ಣಿಗೆ ಬಿದ್ದಾಗ ಥಟ್ಟನೆ ನಮಗೆ ನೆನಪಾಗಿದ್ದು ಅಮೇರಿಕಾದಲ್ಲಿರುವ ಭಾರತೀಯ ಮಕ್ಕಳಿಂದ ಖಾಸಗಿ ಸಂಭಾಷಣೆಯಲ್ಲಿ ಕೇಳಿದ್ದ ಒಂದು ಪ್ರಹಸನ:  

ಸೃಷ್ಟಿಕರ್ತನಾದ ಬ್ರಹ್ಮ ಜಗತ್ತಿನ ಎಲ್ಲಾ ಜೀವರಾಶಿಗಳನ್ನು ಸೃಷ್ಟಿ ಮಾಡಿದ ಮೇಲೆ ಆ ಅನುಭವದ ಹಿನ್ನೆಲೆಯಲ್ಲಿ ಮನುಷ್ಯನನ್ನು ನಿರ್ಮಾಣಮಾಡಲು ಕುಳಿತನಂತೆ. ಕುಂಬಾರನಂತೆ ಮಣ್ಣಿನಿಂದ ಮನುಷ್ಯನ ಆಕೃತಿಯನ್ನು ನಿರ್ಮಿಸಿ ಬೆಂಕಿಯಲ್ಲಿ ಕಾಯಿಸಲು ಹಾಕಿದನಂತೆ. ಮನುಷ್ಯನ ಸೃಷ್ಟಿ ಅದೇ ಮೊದಲಾಗಿದ್ದರಿಂದ ಎಷ್ಟು ಹೊತ್ತು ಕಾಯಿಸಬೇಕೆಂದು ಬ್ರಹ್ಮನಿಗೆ ಗೊತ್ತಿರಲಿಲ್ಲ. ಕೆಲ ಹೊತ್ತಿನ ಮೇಲೆ ಅದನ್ನು ಹೊರತೆಗೆದಾಗ ಆ ಶರೀರ ತೀರಾ ಕಪ್ಪಾಗಿತ್ತು. ಅವರೇ ಆಫ್ರಿಕಾ ಖಂಡದ ಕರಿಜನರು! ನಂತರ ಬ್ರಹ್ಮ ಅಷ್ಟು ಹೊತ್ತು ಕಾಯಿಸಬಾರದೆಂದು ಮುಂದಿನ ಸೃಷ್ಟಿಯಲ್ಲಿ ಮೃತ್ತಿಕೆಯನ್ನು ಬೆಂಕಿಯಿಂದ ಬೇಗನೆ ಹೊರತೆಗೆದ. ಆ ಶರೀರ ತೀರಾ ಬಿಳಿಚಿ ಹೋಗಿತ್ತು. ಅವರೇ ಯೂರೋಪ್‌ ಖಂಡದ ಬಿಳಿಯ ಜನಾಂಗದವರು! ಸರಿಯಾಗಿ ಕಾಯಿಸದೆ ಬೇಗನೆ ತೆಗೆದಿದ್ದರಿಂದ ಹೀಗಾಯಿತೆಂದು ತಿಳಿದ ಸೃಷ್ಟಿಕರ್ತ ಬ್ರಹ್ಮ ಮುಂದಿನ ಮಣ್ಣಿನ ಆಕೃತಿಯನ್ನು ಬಹಳ ಎಚ್ಚರಿಕೆಯಿಂದ ಹದವರಿತು ಕಾಯಿಸಿ ಹೊರತೆಗೆದ. ಅವರೇ ಸುಂದರವಾದ ನಸುಗೆಂಪಿನ ಭಾರತೀಯರು! ಸೃಷ್ಟಿಕರ್ತ ಬ್ರಹ್ಮನಿಗೆ ತುಂಬಾ ಸಂತೋಷವಾಯಿತಂತೆ. ಬಿಳಿಯರ ಮಧ್ಯೆ ಬೆಳೆಯುತ್ತಿರುವ ಭಾರತೀಯ ಮಕ್ಕಳು ಖಾಸಗಿಯಾಗಿ ಮಾಡುವ ಈ ವಿನೋದ ಅವರ ಸ್ವಾಭಿಮಾನದ ಪ್ರತೀಕ. ಅದೇನು ಬ್ರಹ್ಮನ ದುರದೃಷ್ಟವೋ ಏನೋ ತೆತ್ತೀಸಕೋಟಿ ದೇವರುಗಳನ್ನು ಪೂಜಿಸುವ ಭಾರತೀಯರಾರೂ ತಮ್ಮನ್ನು ಸೃಷ್ಟಿಸಿದ ಬ್ರಹ್ಮನನ್ನು ಮಾತ್ರ ಅಷ್ಟಾಗಿ ಪೂಜಿಸುತ್ತಿಲ್ಲ! ತ್ರಿಮೂರ್ತಿಗಳಲ್ಲಿ ಇಬ್ಬರಾದ ಶಿವ ಮತ್ತು ವಿಷ್ಣುವಿನ ಹೆಸರುಗಳಲ್ಲಿ ಸಾವಿರಾರು ದೇವಾಲಯಗಳಿದ್ದರೆ ಇಡೀ ಭಾರತದಲ್ಲಿ ಬ್ರಹ್ಮನ ಹೆಸರಿನಲ್ಲಿರುವ ದೇವಾಲಯಗಳು ಕೈಬೆರಳೆಣಿಕೆಯಷ್ಟು ಮಾತ್ರ. ಬ್ರಹ್ಮನ ಈ ಹಣೆಯ ಬರಹ ಏನಾದರಾಗಲಿ ನಾವು ಕುತೂಹಲದಿಂದ ಓದಿದ "Baby Baking" ಶಿರೋನಾಮೆಯ ಪತ್ರಿಕಾ ವರದಿ ಮಾತ್ರ ಇದಾಗಿರದೆ ಬೇರೆಯದೇ ಆಗಿತ್ತು. ವರದಿಯು ತುಂಬಾ ಹೃದಯವಿದ್ರಾವಕವಾಗಿತ್ತು.

ಯಾವುದೋ ನಗರದ ಯುವದಂಪತಿಗಳಿಗೆ ಮುದ್ದಾದ ಒಂದು ಪುಟ್ಟ ಮಗುವಿತ್ತು. ಇಬ್ಬರೂ ಕೆಲಸದಲ್ಲಿದ್ದುದರಿಂದ ಮಗುವನ್ನು ನೋಡಿಕೊಳ್ಳಲು ಒಬ್ಬ Babysitter ನನ್ನು ನೇಮಕಮಾಡಿಕೊಂಡಿದ್ದರು. ಒಮ್ಮೆ ಆ ದಂಪತಿಗಳು ಅವರ ಸ್ನೇಹಿತರು ಏರ್ಪಡಿಸಿದ್ದ ಒಂದು ಔತಣಕೂಟಕ್ಕೆ ಹೋಗಬೇಕಾಗಿತ್ತು. ರಾತ್ರಿ ಮನೆಗೆ ಬರುವುದು ಬಹಳ ತಡವಾಗುತ್ತದೆಯೆಂದು Babysitter ಗೆ ಹೇಳಿ ಮಗುವನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಿ ಹೋದರು. ಔತಣಕೂಟ ಮುಗಿದು ಮನೆಗೆ ಹಿಂತಿರುಗಿದಾಗ ಮಧ್ಯರಾತ್ರಿ ಮೀರಿತ್ತು. ಮಗು ಅಳುತ್ತಿರಲಿಲ್ಲ, Babysitter ಮಲಗಿಸಿರುತ್ತಾನೆಂದುಕೊಂಡು ಆ ದಂಪತಿಗಳು ಮಗುವನ್ನು ನೋಡಲು ಹೋಗದೆ ಮಲಗಿಕೊಂಡರು. ಬೆಳಗ್ಗೆ ಎದ್ದೊಡನೆ ಉಪಾಹಾರ ಸಿದ್ಧಪಡಿಸಲೆಂದು ಪತ್ನಿ ಅಡುಗೆ ಮನೆಗೆ ಹೋದಳು. ಚಹಾಕ್ಕೆ ನೀರನ್ನು ಕುದಿಯಲು ಇಟ್ಟು ಬ್ರೆಡ್ ಟೋಸ್ಟ್ ಮಾಡುವ ಸಲುವಾಗಿ ಓವನ್ (Oven) ಡ್ರಾ ಹೊರಗೆಳೆದಳು. ಅಯ್ಯೋ ದೇವರೇ! ಅಲ್ಲಿ ಆಕೆಗೆ ಕಾಣಿಸಿದ್ದೇನು! ಸುಟ್ಟು ಕರಕಲಾಗಿ ಅಂಗಾತ ಮಲಗಿದ್ದ ಅವಳ ಮಗುವಿನ ಶವ! ಆ ಭೀಕರ ದೃಶ್ಯ ನೋಡಿ ಹೌಹಾರಿದ ಮಹಿಳೆ ಕಿಟಾರನೆ ಕಿರುಚಿಕೊಂಡು ಕುಸಿದುಬಿದ್ದಳು. ಗಂಡ ಓಡೋಡಿ ಬಂದ. ಆಗಿದ್ದೇನು? ಹಿಂದಿನ ರಾತ್ರಿ ಮಗುವನ್ನು ನೋಡಿಕೊಳ್ಳಲು ನೇಮಕಗೊಂಡಿದ್ದ Babysitter ತುಂಬಾ ಕುಡಿದಿದ್ದು ಮದ್ಯದ ಅಮಲಿನಲ್ಲಿ ಆ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು ಅಡುಗೆ ಮನೆಯ Oven ನಲ್ಲಿ ಮಲಗಿಸಿ ವಿದ್ಯುಚ್ಛಕ್ತಿಯ ಗುಂಡಿಯನ್ನು ಒತ್ತಿದ್ದ! ಪಾಪ, ಏನೂ ಅರಿಯದ ಮುಗ್ಧ ಮಗು ಆ ಪಾಪಿಯ ಪೈಶಾಚಿಕ ಕೃತ್ಯದಿಂದ ಜೀವಂತವಾಗಿ ಸುಟ್ಟುಹೋಗಿತ್ತು! 

ಈ ಸಾಲುಗಳನ್ನು ಓದುವಾಗ ನಿಮ್ಮ ಮನಸ್ಸು ತೀವ್ರತರವಾದ ನೋವು ಮತ್ತು ಸಂಕಟವನ್ನು ಅನುಭವಿಸುತ್ತದೆಯೆಂಬುದು ನಮಗೆ ಚೆನ್ನಾಗಿ ಗೊತ್ತು. ಅಯ್ಯೋ ಪಾಪ ಎಂದು ಮರುಕಪಡುತ್ತೀರಿ. ಆ Babysitter ಏನಾದರೂ ಕೈಗೆ ಸಿಕ್ಕರೆ ಅವನ ತಲೆಯನ್ನು ಚಚ್ಚಿಬಿಡಬೇಕೆನ್ನುವಷ್ಟು ಸಿಟ್ಟು ಸಹ ನಿಮಗೆ ಬಂದಿರುತ್ತದೆ. ಆ ಮಗು ನಿಮಗೆ ಸಂಬಂಧಪಡದಿದ್ದರೂ ನಿಮ್ಮ ಹೃದಯ ಒಂದು ಅನಿರ್ವಚನೀಯವಾದ ನೋವಿನಿಂದ ಮಿಡಿಯುತ್ತದೆ; ಸಂಕಟಪಡುತ್ತದೆ. ಕಾರಣವೇನು? ಅದೇ ಮಾನವೀಯತೆ! ಆದರೆ ಈ ದುರ್ಘಟನೆಗೆ ಯಾರನ್ನು ದೂಷಿಸುತ್ತೀರಿ? ಆ ಮಗುವಿನ ದುರದೃಷ್ಟವನ್ನೋ, ಆ ಪಾಪಿ ಕುಡುಕ Babysitter ನನ್ನೋ ಅಥವಾ ಆ ಮಗುವನ್ನು ಹೆತ್ತ ಹೊಣೆಗೇಡಿ ತಂದೆತಾಯಿಗಳನ್ನೋ? ನಿಮ್ಮ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬ ಅಪೇಕ್ಷೆ ನಮಗಿದ್ದರೂ ಪತ್ರಿಕೆಯಲ್ಲಿ ಅದಕ್ಕೆ ಅವಕಾಶವಾಗುವುದಿಲ್ಲ, ಅದಕ್ಕಾಗಿ ಬಿಸಿಲುಬೆಳದಿಂಗಳು ಅಂಕಣದ ಸಹೃದಯ ಓದುಗರಿಗೆಂದೇ ಅಂತರಜಾಲದಲ್ಲಿ ವಿಶೇಷವಾಗಿ Google Group ನ ಈ ಮುಂದಿನ ತಾಣದಲ್ಲಿ ನಾವು ಸ್ಥಾಪಿಸಿರುವ ಸಂವಾದಗೋಷ್ಠಿಯ ಸದಸ್ಯರಾಗಿ ನೀವು ಚರ್ಚೆಯಲ್ಲಿ ಪಾಲ್ಗೊಳ್ಳಬಹುದು (http://groups.google.com/group/bisilu_beladingalu).

ಹೆಚ್ಚಿನ ಹಣ ಸಂಪಾದನೆಯಾಗುತ್ತದೆಯೆಂದು ವಿದ್ಯಾವಂತ ಮಹಿಳೆಯರು ಹೊರಗೆ ಕೆಲಸಮಾಡಲು ಹೋಗುವ ಸಲುವಾಗಿ ಎಳೆಯ ಮಕ್ಕಳನ್ನು Babysitter ಕೈಗೆ ಒಪ್ಪಿಸುವ ಪ್ರವೃತ್ತಿ ನಮ್ಮ ದೇಶದ ಸಂಸ್ಕೃತಿಯಲ್ಲೂ ನುಸುಳಿದೆ. ಈ ಸಮಸ್ಯೆ ಇರುವುದು ಹೆಚ್ಚಾಗಿ ನಗರಪ್ರದೇಶಗಳಲ್ಲಿ, ಇದು ಹಳ್ಳಿಗರ ಸಮಸ್ಯೆ ಅಲ್ಲ. ಹಳ್ಳಿಗಳಲ್ಲಿ ಅಜ್ಜ-ಅಜ್ಜಿಯರೇ Babysitter ಗಳು. ಅವರು ಇಲ್ಲದಿದ್ದರೆ ಪಕ್ಕದ ಮನೆಯ ಚಿಕ್ಕಹುಡುಗಿಗೆ ಹೇಳಿದರೆ ಸಾಕು ಅವಳು ಮಕ್ಕಳನ್ನು ಇಡೀ ದಿನವೆಲ್ಲ ಆಡಿಸಿಕೊಂಡು ಬರುತ್ತಾಳೆ. ಆಕೆಗೆ ಪ್ರೀತಿಯಿಂದ ಒಂದು ಉತ್ತುತ್ತಿ ಅಥವಾ ಒಂದು ತುಂಡು ಕಲ್ಲುಸಕ್ಕರೆ ಕೊಟ್ಟರೆ ಸಾಕು. ಮಾರನೆಯ ದಿನವೂ ಮಕ್ಕಳನ್ನು ಆಡಿಸುತ್ತಾಳೆ. ಹಳ್ಳಿಗರಿಗೆ ಇದೊಂದು ಸಮಸ್ಯೆಯೇ ಅಲ್ಲ. ಪೇಟೆಯ ವಾತಾವರಣ ಹಾಗಲ್ಲ. ಉದ್ಯೋಗವನ್ನು ಅರಸಿಕೊಂಡು ಹೋದ ವಿದ್ಯಾವಂತ ಯುವದಂಪತಿಗಳು ಹೆತ್ತ ತಂದೆತಾಯಿಗಳಿಂದ ದೂರವಾಗುತ್ತಿದ್ದಾರೆ. ಅವಿಭಕ್ತ ಕುಟುಂಬಗಳು ನಾಶವಾಗುತ್ತಿವೆ. ಈಗಂತೂ ವಿದ್ಯಾವಂತ ಗಂಡಹೆಂಡತಿಯರು ವಿವಾಹವಿಚ್ಛೇದನ ಮಾಡದೆ ಒಟ್ಟಿಗೆ ಬಾಳಿದರೆ ಅದೇ ಅವಿಭಕ್ತಕುಟುಂಬ ಎನ್ನುವಂತಾಗಿದೆ! ಮಕ್ಕಳು ಅಜ್ಜ-ಅಜ್ಜಿಯರ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ತಂದೆತಾಯಿಗಳಿಬ್ಬರೂ ನೌಕರಿ ಮಾಡುವುದರಿಂದ ಅವರ ಪ್ರೀತಿಯೂ ಪೂರ್ಣಪ್ರಮಾಣದಲ್ಲಿ ಮಕ್ಕಳಿಗೆ ಸಿಕ್ಕುತ್ತಿಲ್ಲ. ಇಂಗ್ಲೆಂಡಿನಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಅಜ್ಜ-ಅಜ್ಜಿಯರನ್ನು ಕುರಿತು ಹದಿಹರೆಯದ ಮಕ್ಕಳು ವ್ಯಕ್ತಪಡಿಸಿದ ಒಟ್ಟು ಅಭಿಪ್ರಾಯ ಹೀಗಿದೆ: ಅಜ್ಜ-ಅಜ್ಜಿಯರೊಂದಿಗೆ ಕಾಲಕಳೆಯಲು ಅವರಿಗೆ ಹೆಚ್ಚು ಇಷ್ಟ. ಅಜ್ಜಿ-ತಾತ ತುಂಬಾ ಒಳ್ಳೆಯವರು. ಅವರು ಏನು ಬೇಕೋ ಅದನ್ನು ತಂದುಕೊಡುತ್ತಾರೆ. ಅವರು ಸದಾಕಾಲ ಸಹಾಯ ಮಾಡಲು ಸಿದ್ಧರಿರುತ್ತಾರೆ. ಅವರಿಗೆ ಸಾಕಷ್ಟು ಜೀವನದ ಅನುಭವ, ಜ್ಞಾನ ಇರುವುದರಿಂದ ಅವರಿಂದ ಕಲಿಯಬೇಕಾದ್ದು ಬಹಳಷ್ಟು ಇದೆ. ತಂದೆತಾಯಿಗಳೊಂದಿಗೆ ಹೇಳಿಕೊಳ್ಳಲು ಸಾಧ್ಯವಾಗದೇ ಇರುವ ಸಂಗತಿಗಳನ್ನು ನಿರ್ಭಯವಾಗಿ, ನಿಸ್ಸಂಕೋಚವಾಗಿ ಅಜ್ಜ-ಅಜ್ಜಿಯರೊಂದಿಗೆ ಹೇಳಿಕೊಳ್ಳಬಹುದು. ಮಕ್ಕಳು ಯಾವ ದೇಶದವರಾದರೇನು? ತಂದೆತಾಯಿಗಳ ಮತ್ತು ಅಜ್ಜ-ಅಜ್ಜಿಯರ ಬಗ್ಗೆ ಅವರ ಭಾವನೆಗಳು ಒಂದೇ ತೆರನಾಗಿರುವುದನ್ನು ಮನಗಾಣಬಹುದು. ಹಾಗೇನೆ ಮೊಮ್ಮಕ್ಕಳ ಮೇಲಿನ ಅಜ್ಜ-ಅಜ್ಜಿಯರ ಮಧುರ ಭಾವನೆಗಳು, ಮಕ್ಕಳ ಮೇಲೆ ಸಿಟ್ಟು ಇದ್ದರೂ ಮೊಮ್ಮೊಕ್ಕಳ ಮೇಲೆ ಇರುವುದಿಲ್ಲ. ಹೀಗಾಗಿ ಮೊಮ್ಮೊಕ್ಕಳ ಹೆಸರಿಗೆ ಆಸ್ತಿ ಬರೆಯಲು ಇಷ್ಟಪಡುತ್ತಾರೆಯೇ ಹೊರತು ಮಕ್ಕಳ ಹೆಸರಿಗೆ ಅಲ್ಲ.   

ಸಂಸಾರದ ಖರ್ಚುವೆಚ್ಚಗಳನ್ನು ಸರಿದೂಗಿಸಲು ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರೂ ನೌಕರಿ ಸೇರಿ ಶಕ್ತಿಮೀರಿ ದುಡಿಯುತ್ತಿದ್ದಾರೆ. ಸರ್ಕಾರಿ ನೌಕರಿಗಳಲ್ಲಿ ಅವರಿಗಾಗಿ ಈಗ ಮೀಸಲಾತಿಯೂ ಬಂದಿದೆ. ಹೀಗೆ ಮನೆಯ ಒಳಹೊರಗೆ ಮನೆತನಕ್ಕಾಗಿ ದಣಿವಿಲ್ಲದಂತೆ ದುಡಿಯವವರೆಂದರೆ ಮಹಿಳೆಯರೇ. ಈ ದೃಷ್ಟಿಯಿಂದ ನೋಡಿದರೆ ಪುರುಷರು ಹೊರಗೆ ಎಷ್ಟೇ ಕೆಲಸ ಮಾಡಿ ದಣಿದು ಬಂದರೂ ಅವರದು ಪಾರ್ಟ್ಟೈಂ ಕೆಲಸವೆಂದೇ ಹೇಳಬೇಕು. ಮನೆಗೆ ಬಂದರೆಂದರೆ ಅಡುಗೆಮನೆಯೊಳಗೆ ಸುತರಾಂ ಕಾಲಿಡುವುದಿಲ್ಲ. ಮಹಿಳೆಯರು ಆಫೀಸಿನಿಂದ ಕೆಲಸ ಮುಗಿಸಿಕೊಂಡು ಬಂದರೂ ಮನೆಯೊಳಗಿನ ಕೆಲಸವನ್ನೂ ಅವರೇ ಮಾಡಬೇಕು. ಗಂಡಂದಿರು ಗಲಾಟೆ ಮಾಡದೆ ಉಂಡು ಎದ್ದು ಹೋದರೆ ಮಡದಿಯರು ಪುಣ್ಯಮಾಡಿದ್ದಿರಬೇಕು. ಇನ್ನು ಅವರ ಮಕ್ಕಳೋ ಅಪ್ಪನ ಅಪರಾವತಾರ! ಆ ತಾಯಂದಿರಿಗೇ ಗೊತ್ತು ಅವರನ್ನು ನಿಭಾಯಿಸುವ ಕಷ್ಟ ಏನೆಂಬುದು! ತಾಯಂದಿರ ತಾಳ್ಮೆಗೆ ಆಕಾಶದಂತೆ ಕೊನೆಯಿಲ್ಲ. ಇನ್ನು ಅತ್ತೆಮಾವಂದಿರ ಕಾಟವೋ ಆ ದೇವರಿಗೇ ಗೊತ್ತು. ನಮ್ಮ ಅಭಿಪ್ರಾಯದಲ್ಲಿ ಇಂದಿನ ದಿನಮಾನಗಳಲ್ಲಿ ಒಂದು ಮಠದ ಸ್ವಾಮಿಗಳಾಗಿ ಸೈ ಎನಿಸಿಕೊಳ್ಳುವುದಕ್ಕಿಂತ ಒಂದು ಮನೆಯ ಸೊಸೆಯಾಗಿ ಸೈ ಎನಿಸಿಕೊಳ್ಳುವುದು ಬಹಳ ಕಷ್ಟ! ಮನೆಯಲ್ಲಿ ಉಸಿರುಕಟ್ಟಿಸುವ ವಾತಾವರಣವಿದ್ದರೂ ಎದೆಗುಂದದೆ ಮನೆಯ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗುವ ನಿಃಸ್ವಾರ್ಥಜೀವಿ ಭಾರತೀಯ ಮಹಿಳೆ. 

ಅದು ಹೇಗೋ ಏನೋ ಅಡುಗೆಮನೆಯ ಕೆಲಸವೇನಿದ್ದರೂ ಅದು ಮಹಿಳೆಯರ ಕೆಲಸ ಎಂಬ ಅಲಿಖಿತ ಸಂವಿಧಾನ ಭಾರತೀಯ ಕೌಟುಂಬಿಕ ಜೀವನದಲ್ಲಿ ಶತಮಾನಗಳಿಂದ ಜಾರಿಯಲ್ಲಿದೆ. ಹೀಗೆ ಒಂದೆಡೆ ಪುರುಷರು ಅಡುಗೆಮನೆಯ ಕೆಲಸವನ್ನು ತಾತ್ಸಾರದಿಂದ ನೋಡಿದರೆ ಇತ್ತೀಚಿಗೆ ವಿದ್ಯಾವಂತ ಮಹಿಳೆಯರು ಹೊರಗೆ ಯಾವ ನೌಕರಿಯನ್ನೂ ಮಾಡದೆ ಮನೆಯೊಳಗೇ ಇದ್ದುಕೊಂಡು ಮನೆಯ ಕೆಲಸವನ್ನು ಮಾಡಿಕೊಂಡಿರಲು ಅಷ್ಟಾಗಿ ಇಷ್ಟಪಡುತ್ತಿಲ್ಲ. ಮೊದಲೆಲ್ಲಾ Housewife ಎಂದು ಯಾವ ಮುಜುಗರವಿಲ್ಲದೆ ಹೇಳಿಕೊಳ್ಳುತ್ತಿದ್ದ ಮಹಿಳೆಯರು ಈಗ ಹಾಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಆದಕಾರಣವೋ ಏನೋ ಈಗ ಪಾಶ್ಚಾತ್ಯರಾಷ್ಟ್ರಗಳಲ್ಲಿ Housewife ಎನ್ನುವ ಬದಲು Homemaker ಎಂಬ ಹೊಸ ಪದ ಪ್ರಚಲಿತವಾಗಿದೆ. ಇದು ಅಪ್ಪಟ ಭಾರತೀಯ ಸಂಸ್ಕೃತಿಯ ಗೃಹಿಣೀ ಎಂಬ ಪದದ ಪಡಿಯಚ್ಚು ಎನ್ನಬಹುದು. ನೀತಿಮಂಜರಿಯ ಈ ಕೆಳಗಿನ ನೀತಿಮಾತುಗಳನ್ನು ಗಮನಿಸಿ:

ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ |
ಗೃಹಂ ಚ ಗೃಹಿಣಿಹೀನಂ ಆರಣ್ಯಸದೃಶಂ ಮಮ ||
ನ ಗೃಹಂ ಕಾಷ್ಯಪಾಷಾಣೈಃ ದಯಿತಾ ಯತ್ರ ತದ್ಗೃಹಂ | 

ಭಾವಾರ್ಥ:
(ಮಡದಿಯಿಲ್ಲದ ಮನೆ ಅದೊಂದು ದಟ್ಟಡವಿ 
ಮನೆಯಿಂದ ಮನೆಯೆನಿಸುವುದಿಲ್ಲ 
ಮಡದಿಯಿಂದ ಮನೆ ಕಾಣಾ! 
ಕಲ್ಲು, ಕಟ್ಟಿಗೆಗಳಿಂದ ಮನೆಯಾಗುವುದಿಲ್ಲ 
ಮನೆಯೊಳಗೆ ಮಡದಿಯಿದ್ದರೆ ಮಾತ್ರ ಮನೆ ನೋಡಾ!)

“Centuries of tradition have made the Indian woman the most unselfish, the most self-denying, the most patient, and the most dutiful woman in the world whose pride is suffering” ಎನ್ನುತ್ತಾರೆ. ಭಾರತದ ಎಸ್. ರಾಧಾಕೃಷ್ಣನ್ ಅವರು. ನೂರಾರು ಶತಮಾನಗಳ ಸಾಂಸ್ಕೃತಿಕ ಇತಿಹಾಸವುಳ್ಳ ಭಾರತೀಯ ಮಹಿಳೆ ತ್ಯಾಗಮಯಿ, ತಾಳ್ಮೆಯ ಪ್ರತಿರೂಪ, ಕರ್ತವ್ಯಪರಾಯಣೆ. ಎಂತಹ ನೋವನ್ನೂ ಸಹಿಸಿಕೊಳ್ಳಬಲ್ಲ ಕಷ್ಟಸಹಿಷ್ಣು.

ಸುಖಾನಿ ಸುಖೇನೇಹ ನ ಜಾತು ಲಭ್ಯಂ 
ದುಃಖೇನ ಸಾದ್ವೀ ಲಭತೇ ಸುಖಾನಿ |
           (ಮಹಾಭಾರತ, ವನಪರ್ವ 233.4)

ಭಾರತೀಯ ಮಹಿಳೆ ಸುಖದಲ್ಲಿ ಸುಖವನ್ನು ಕಾಣುವವಳಲ್ಲ; ದುಃಖದಲ್ಲಿ ಸುಖವನ್ನು ಕಾಣಬಲ್ಲವಳು! ಮಹಾಭಾರತದ ಈ ಮಾತಿಗೆ ಪ್ರತಿರೂಪವೇನೋ ಎನ್ನುವಂತಿದೆ ಆಧುನಿಕ ಭಾರತದ ಗ್ರಾಮೀಣ ಮುಗ್ಧ ಮಹಿಳೆಯ ಈ ಕೆಳಗಿನ ವೃತ್ತಾಂತ: 

ಒಮ್ಮೆ ಗಾಂಧೀಜಿ ಅನಾರೋಗ್ಯದಿಂದಾಗಿ ಪೂನಾದ ಆಸ್ಪತ್ರೆಯಲ್ಲಿದ್ದರು. ಅವರನ್ನು ಶುಶ್ರೂಷೆ ಮಾಡುತ್ತಿದ್ದ ನರ್ಸ್ ಅವರು ಸೇರಿದ ಒಂದೆರಡು ದಿನಗಳ ಹಿಂದೆಯಷ್ಟೇ ಅದೇ ಆಸ್ಪತ್ರೆಯಲ್ಲಿ ನಡೆದ ಒಂದು ಅತ್ಯಂತ ಮನಮಿಡಿಯುವ ಘಟನೆಯನ್ನು ಗಾಂಧೀಜಿಗೆ ವಿವರಿಸಿದಳು. ಆ ಆಸ್ಪತ್ರೆಗೆ ತುಂಬು ಗರ್ಭಿಣಿಯೊಬ್ಬಳು ಬಂದಿದ್ದಳಂತೆ. ಅವಳನ್ನು ತಪಾಸಣೆ ಮಾಡಿದ ವೈದ್ಯರು ತುರ್ತಾಗಿ ಸಿಜೇರಿಯನ್ ಆಪರೇಷನ್ ಮಾಡಬೇಕೆಂದು ತೀರ್ಮಾನಿಸಿದರು. ಮಹಿಳೆಯನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು. ಆಪರೇಷನ್ ಮಾಡುವ ಮೊದಲು ಅವಳಿಗೆ ಅರವಳಿಕೆಯನ್ನು (anaesthesia) ಕೊಡಬೇಕಾಗಿತ್ತು. ಆದರೆ ಆ ಮಹಿಳೆ ಅರವಳಿಕೆಯನ್ನು ಪಡೆಯಲು ನಿರಾಕರಿಸಿದಳು. ಕಾರಣ ಅದರಿಂದ ತನ್ನ ಹೊಟ್ಟೆಯಲ್ಲಿರುವ ಕೂಸು ಸತ್ತುಹೋಗಬಹುದೆಂಬ ಅನುಮಾನ ಆ ಮುಗ್ಧ ಗ್ರಾಮೀಣ ಮಹಿಳೆಯ ಮನಸ್ಸಿನಲ್ಲುಂಟಾಗಿತ್ತು. ನಿನಗೂ ನಿನ್ನ ಮಗುವಿಗೂ ಏನೂ ತೊಂದರೆಯಾಗುವುದಿಲ್ಲ, ಶಸ್ತ್ರಚಿಕಿತ್ಸೆ ಮಾಡುವಾಗ ನೋವು ಉಂಟಾಗದಿರಲೆಂದು ಅರವಳಿಕೆ ಕೊಡಲಾಗುತ್ತದೆಯೆಂದು ಎಷ್ಟು ಹೇಳಿದರೂ ಆ ಮಹಿಳೆ ಒಪ್ಪಲಿಲ್ಲ. ತನಗೆ ಎಷ್ಟೇ ನೋವಾದರೂ ಪರವಾಗಿಲ್ಲ, ಆ ನೋವಿನಲ್ಲಿ ತಾನು ಸತ್ತರೂ ಚಿಂತೆಯಿಲ್ಲ ತನ್ನ ಮಗುವನ್ನು ಮಾತ್ರ ಉಳಿಸಿ ಎಂದು ಆಕೆ ವೈದ್ಯರನ್ನು ಅಂಗಲಾಚಿ ಬೇಡಿಕೊಂಡಳು. ಎಷ್ಟು ಹೇಳಿದರೂ ಕೇಳಲಿಲ್ಲ. ಆಗ ಅನಿವಾರ್ಯವಾಗಿ ವೈದ್ಯರು ಅರವಳಿಕೆಯನ್ನು ಕೊಡದೆ ಹಾಗೆಯೇ ಶಸ್ತ್ರಚಿಕಿತ್ಸೆಯನ್ನು ಮಾಡಿದರು. ಸುದೈವದಿಂದ ತಾಯಿ ಮತ್ತು ಮಗು ಇಬ್ಬರೂ ಬದುಕಿ ಉಳಿದರು. ಅಬ್ಬಾ! ಶಸ್ತ್ರಚಿಕಿತ್ಸೆಯ ವೇಳೆ ಆ ತಾಯಿಗೆ ಎಷ್ಟು ನೋವಾಗಿರಬಹುದು! ಆ ನೋವನ್ನು ಆಕೆ ಹೇಗೆ ಸಹಿಸಿಕೊಂಡಿದ್ದಾಳು! ಗಾಂಧೀಜಿ ಈ ಬಗ್ಗೆ ಚಿಂತಿಸುತ್ತಾ ಹೀಗೆ ಬರೆಯುತ್ತಾರೆ: “The only anaesthetic she had was her love for the baby, to save Whom no suffering Was too great!” (ತನ್ನ ಹೊಟ್ಟೆಯೊಳಗಿದ್ದ ಮಗುವಿನ ಮೇಲಿನ ಪ್ರೀತಿವಾತ್ಸಲ್ಯಗಳೇ ಆಕೆಗೆ ಅರವಳಿಕೆಯಾಗಿದ್ದವು. ತನ್ನ ಮಗುವನ್ನು ಉಳಿಸುವ ಸಲುವಾಗಿ ಯಾವ ನೋವೂ ಆಕೆಗೆ ದೊಡ್ಡದಾಗಿರಲಿಲ್ಲ!) 

ಸಹೃದಯ ಓದುಗರೇ! ನಿಮ್ಮೆಲ್ಲರ ಬದುಕಿನ ಹಿಂದೆ ನಿಮ್ಮನ್ನು ಹೊತ್ತು ಹೆತ್ತು ಸಲಹಿದ ಅಂತಹ ನಿರ್ವ್ಯಾಜ ಪ್ರೀತಿಯ ಮಾತೃಹೃದಯವಿದೆ. ಅದು ನಿಮ್ಮ ಕಣ್ಮುಂದೆ ಇರಲಿ ಇಲ್ಲದಿರಲಿ ಅದನ್ನು ನಿತ್ಯ ನೆನೆಸಿ ಮತ್ತು ಆರಾಧಿಸಿ: ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 29.4.2009.