ವೃದ್ದಮಹಿಳೆಯೂ, ಆಕೆಯ ಬಂಗಾರದ ಸರವೂ

  •  
  •  
  •  
  •  
  •    Views  

ಫ್ರಿಕಾ ಖಂಡದ ಮಧ್ಯಭಾಗದಲ್ಲಿ ಪಶ್ಚಿಮದ ಕಡೆಗೆ ಕಮರೂನ್ (Camaroon) ಎಂಬ ಒಂದು ಚಿಕ್ಕ ದೇಶವಿದೆ. ಒಂದು ಕಾಲದಲ್ಲಿ ಬ್ರಿಟಿಷ್ ಮತ್ತು ಫ್ರೆಂಚರ ವಸಾಹತುವಾಗಿದ್ದು 1960 ರಲ್ಲಿ ಸ್ವತಂತ್ರಗೊಂಡ ರಾಷ್ಟ್ರ, ಇದು ದಕ್ಷಿಣದ ಅಟ್ಲಾಂಟಿಕ್ ಸಾಗರದ ತೀರದಲ್ಲಿದ್ದು ಇದರ ಪಶ್ಚಿಮಕ್ಕಿರುವ ನೆರೆಯ ದೇಶವೆಂದರೆ ನೈಜೀರಿಯಾ, ಸುಂದರವಾದ ಕಡಲತೀರ, ವಿಶಾಲವಾದ ಮರುಭೂಮಿ, ದಟ್ಟವಾದ ಅರಣ್ಯ ಮತ್ತು ಗುಡ್ಡಬೆಟ್ಟಗಳಿಂದ ಕೂಡಿದ ವೈವಿಧ್ಯಮಯವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ ಈ ದೇಶ ಆಫ್ರಿಕಾಖಂಡದಲ್ಲಿಯೇ ಭೌಗೋಲಿಕ ಹಾಗೂ ಸಾಂಸ್ಕೃತಿಕ ಸೊಬಗಿಗೆ ಅತ್ಯಂತ ಹೆಸರಾಗಿದೆ. ಇದನ್ನು ಪ್ರವಾಸಿಗರು “ಪುಟ್ಟ ಆಫ್ರಿಕಾ (Africa in miniature) ಎಂದೇ ಬಣ್ಣಿಸುತ್ತಾರೆ. ಇಲ್ಲಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಕೆಲವಾರು ವರ್ಷ ಸಂದರ್ಶನ ಪ್ರಾಧ್ಯಾಪಕಿಯಾಗಿ ಬೋಧನೆಮಾಡಿದ ಅಮೇರಿಕದ ಮಿಚಿಗನ್ ವಿಶ್ವವಿದ್ಯಾನಿಲಯದ ಶ್ರೀಮತಿ ಸೂಸನ್ ವೈನ್ಗರ್ (Susan Weinger) ಇತ್ತೀಚೆಗೆ “African Studies?” ಎಂಬ ಒಂದು ಜರ್ನಲ್ನಲ್ಲಿ “ಕಮರೂನ್ ಜಾನಪದ ಕಥೆಗಳಲ್ಲಿ ಮಹಿಳೆಯರ ಈರ್ಷೆಯ ಅನಾವರಣ” (Unmasking Womens Rivalry in Cameroonian Folktales) ಎಂಬ ಸಂಶೋಧನಾ ಪ್ರಬಂಧವನ್ನು ಬರೆದಿರುತ್ತಾರೆ. ಅದನ್ನು ಓದಿದಾಗ ದೂರದ ಆಫ್ರಿಕಾಖಂಡದ ಜನರ ಕೌಟುಂಬಿಕ ಜೀವನದಲ್ಲಿ ಕಂಡುಬರುವ ವಿವಾಹಿತ ಮಹಿಳೆಯರ ಸ್ಥಾನಮಾನ ಮತ್ತು ಮನೋಧರ್ಮ ಭಾರತದ ಮಹಿಳೆಯರಿಗಿಂತ ವಿಭಿನ್ನವಾಗಿದೆಯೆಂದು ಅನ್ನಿಸಲಿಲ್ಲ. ಆ ಪ್ರಬಂಧದಲ್ಲಿ ಶ್ರೀಮತಿ ಸೂಸನ್ ಉಲ್ಲೇಖಿಸಿರುವ ಸ್ಥಳೀಯ ಜನರ ಆಡುಮಾತಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಕಥೆಯೇ ನಮ್ಮ ಈ ಲೇಖನದ ಶಿರೋನಾಮೆ: “The Old Woman and her Golden Necklace”, ಕಥಾನಿರೂಪಣೆಗಿಂತ ಮೊದಲು ಅದಕ್ಕೆ ಪೂರಕವಾಗಿ ನಮ್ಮ ಅನುಭವಕ್ಕೆ ಬಂದ ಕೆಲವು ಘಟನಾವಳಿಗಳನ್ನು ಹೇಳಬೇಕೆನಿಸುತ್ತದೆ. ಕಥೆಯ ಶೀರ್ಷಿಕೆಯನ್ನು ಓದುತ್ತಿದ್ದಂತೆಯೇ ನಮಗೆ ನೆನಪಾಗಿದ್ದು ಪ್ರತಿ ಸೋಮವಾರ ನಡೆಯುವ ನಮ್ಮ “ಸದ್ಧರ್ಮ ನ್ಯಾಯಪೀಠದ ಮುಂದೆ ಬಂದ ಒಂದೆರಡು ಪ್ರಕರಣಗಳು:   

ಒಮ್ಮೆ ಹಳ್ಳಿಯ ಒಂದು ಕುಟುಂಬದ ಸಹೋದರರ ಮಧ್ಯೆ ಆಸ್ತಿವಿವಾದ ಉಂಟಾಗಿತ್ತು. ತಂದೆ ತೀರಿಕೊಂಡಿದ್ದನು. ಹಳ್ಳಿಯಲ್ಲಿ ಹಿರಿಯರು ಎಷ್ಟೇ ಪಂಚಾಯಿತಿ ಮಾಡಲು ಪ್ರಯತ್ನಿಸಿದರೂ ಬಗೆಹರಿದಿರಲಿಲ್ಲ, ಜಗಳವಾಡುತ್ತಿದ್ದ ಸಹೋದರರು ನಮ್ಮ ಮುಂದೆ ಹಾಜರಾದರು. ಮಧ್ಯಸ್ತರ ಮುಖಾಂತರ ಸುದೀರ್ಘ ವಿಚಾರಣೆ ನಡೆಸಿ ಬಗೆಹರಿಸಿ ಎಲ್ಲಾ ಸಹೋದರರಿಗೂ ಸಮನಾಗಿ ಬರುವಂತೆ ಅವರ ಎಲ್ಲ ಚರ-ಸ್ಥಿರಾಸ್ತಿಗಳನ್ನೂ, ಚಿನ್ನಾಭರಣಗಳನ್ನು ಹಂಚಿಕೆಮಾಡಿಕೊಟ್ಟೆವು. ಸಹೋದರರೆಲ್ಲರೂ ಸಂತೋಷದಿಂದ ಒಪ್ಪಿ ಪಾಲುವಿಭಾಗಕ್ಕೆ ಸಹಿ ಹಾಕಿದರು. ಇನ್ನೇನು ಮುಂದಿನ ಕೇಸನ್ನು ಕೂಗಿಸಬೇಕೆನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆಯೇ ಅವರ ವೃದ್ದ ತಾಯಿ ನಮ್ಮತ್ತ ತಿರುಗಿ “ಎಲ್ಲ ಸರಿ, ಆದರೆ ನನ್ನ ಕೊರಳಲ್ಲಿ ಒಂದು ಬಂಗಾರದ ಸರ ಇಲ್ಲದಂಗೆ ಮಾಡಿದೆಯಲ್ಲಾ ನೀನು!” ಎಂದು ನಮ್ಮ ತೀರ್ಮಾನದ ಬಗ್ಗೆ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದಳು. ನಮ್ಮನ್ನು ಏಕವಚನದಲ್ಲಿ ಮಾತನಾಡಿಸಿದ ಅಜ್ಜಿಯ ಮಾತುಗಳನ್ನು ಕೇಳಿ ಹಾಜರಿದ್ದ ಉಳಿದ ಭಕ್ತಾದಿಗಳಿಗೆ ಕೋಪ ಬಂದಿತ್ತು. ಇಷ್ಟೊಂದು ವಯಸ್ಸಾಗಿದೆ ನಿನಗೆ ಗುರುಗಳ ಸನ್ನಿಧಾನದಲ್ಲಿ ಹೇಗೆ ಮಾತನಾಡಬೇಕೆಂಬ ಪ್ರಜ್ಞೆ ಬೇಡವಾ  ಎಂದು ಅಜ್ಜಿಯನ್ನು ಗದರಿಸಿದರು ಆದರೆ ನಮಗೆ ನಗು ಬಂದಿತ್ತು! “ಅಲ್ಲಾ ಅಜ್ಜಿ, ಈ ಇಳಿವಯಸ್ಸಿನಲ್ಲಿ ನಿನಗೆ ಬಂಗಾರದ ಮೇಲೆ ಅಷ್ಟೊಂದು ಆಸೆ ಏಕೆ? ಏನಾಗಬೇಕಾಗಿದೆ ನಿನಗೆ ಅದರಿಂದ?” ಎಂದು ಕೇಳಿದೆವು. ನಮ್ಮ ಪ್ರಶ್ನೆಗೆ ಅಜ್ಜಿಯು ಕೊಟ್ಟ ಉತ್ತರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು: “ನನಗೇನೂ ಬಂಗಾರದ ಮೇಲೆ ಆಸೆ ಇಲ್ಲ, ಆದರೆ ನನ್ನ ಕೊರಳಲ್ಲಿ ಒಂದು ಬಂಗಾರದ ಸರ ಇದ್ದರೆ ನನ್ನ ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಅದಕ್ಕೆ” ಎಂದು ಅಜ್ಜಿ ಮುಖ ಸಿಂಡರಿಸಿಕೊಂಡು ಸೊಸೆಯ ಕಡೆ ನೋಡುತ್ತಾ ಕಡ್ಡಿಮುರಿದಂತೆ ಹೇಳಿದಳು! ಅಜ್ಜಿಯ ವ್ಯಾವಹಾರಿಕ ಜ್ಞಾನ ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು. ದೇಶವಿದೇಶಗಳ ವಿಶ್ವವಿದ್ಯಾನಿಲಯಗಳಲ್ಲಿನ ನಮ್ಮ ಓದು ಅಜ್ಜಿಯ ಈ ಲೋಕಾನುಭವದ ಮುಂದೆ ಶೂನ್ಯ ಎನಿಸಿತು! 

ಮತ್ತೊಂದು ಮನಮಿಡಿಯುವ ಪ್ರಕರಣ. ತುಂಬಾ ವಯಸ್ಸಾದ ಓರ್ವ ವೃದ್ದ ಮಹಿಳೆ ನಮ್ಮ ನ್ಯಾಯಪೀಠದ ಮುಂದೆ ಹಾಜರಾದಳು. ನೋಡಿದರೆ ಮುಖಭಾವದಿಂದ ಯಾವುದೋ ದೊಡ್ಡಮನೆತನದ ಮಹಿಳೆಯೆಂದು ಕಾಣಿಸುತ್ತಿತ್ತು. ಗಂಡನಿದ್ದರೂ ಆಕೆಯ ಬಾಳಿನಲ್ಲಿ ಇಲ್ಲದಂತಾಗಿತ್ತು. ಮದುವೆಯಾದ ಹೊಸತರಲ್ಲಿ ಹಾಲುಜೇನಿನಂತಹ ಸುಮಧುರ ಸಂಸಾರ, ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಗಂಡ. ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಸ್ವರ್ಗವೇ ಧರೆಗಿಳಿದಂತಹ ಅನುಭವ. ಆದರೆ ವರ್ಷಗಳು ಕಳೆದಂತೆ ಆಕೆಯ ಸಂತೋಷಕ್ಕೆ ಸಂಚಕಾರ ಬಂತು. ವಂಶದ ಕುಡಿ ಚಿಗುರಲಿಲ್ಲ. ಮಕ್ಕಳಿಲ್ಲವೆಂಬ ಚಿಂತೆ ಅವಳನ್ನು ಆವರಿಸಿ ಕಂಗಾಲಾದಳು. ನೆರೆಹೊರೆಯವರ ಬಾಯಲ್ಲಿ ತೆರೆಮರೆಯಲ್ಲಿ ಕೇಳಿಬರುತ್ತಿದ್ದ ಬಂಜೆ ಎಂಬ ಶಬ್ದ ಆಕೆಯ ಹೃದಯವನ್ನು ಶೂಲದಿಂದ ಇರಿದಂತಾಗುತ್ತಿತ್ತು. ವೈದ್ಯರು ಪರೀಕ್ಷಿಸಿ ಮಕ್ಕಳಾಗುವುದಿಲ್ಲವೆಂದು ಹೇಳಿದ ಮೇಲಂತೂ ಆಕೆಗೆ ದಿಕ್ಕೇ ತೋಚದಂತಾಯಿತು. ಅದರಿಂದ ಗಂಡನ ಪ್ರೀತಿಗೇನೂ ಕೊರತೆಯುಂಟಾಗಲಿಲ್ಲ, ಆದರೂ ಮನೆತನದ ದೃಷ್ಟಿಯಿಂದ ಚಿಂತಿಸಿದಳು. ಮದುವೆ ವಯಸ್ಸಿಗೆ ಬಂದಿದ್ದ ಆಕೆಯ ತಂಗಿಗೆ ತಂದೆ ಗಂಡನ್ನು ಹುಡುಕುತ್ತಿದ್ದ. ತನ್ನ ತಂಗಿಯನ್ನೇ ಏಕೆ ಗಂಡನಿಗೆ ಎರಡನೆಯ ಹೆಂಡತಿಯನ್ನಾಗಿ ತಂದುಕೊಳ್ಳಬಾರದು ಎಂಬ ಆಲೋಚನೆ ಮನಸ್ಸಿನಲ್ಲಿ ಸುಳಿದಾಡಿತು. ಅಪ್ಪನೊಂದಿಗೆ ಮಾತನಾಡಿ ಅವನ ಒಪ್ಪಿಗೆಯನ್ನು ಪಡೆದಳು. ಗಂಡನೊಂದಿಗೆ ಏಕಾಂತದಲ್ಲಿ ಪ್ರಸ್ತಾಪಿಸಿದಳು. ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ಗಂಡ ತನಗೆ ಮಕ್ಕಳಿಲ್ಲದಿದ್ದರೂ ಪರವಾಗಿಲ್ಲ, ಎರಡನೆಯ ಮದುವೆ ಬೇಡ ಎಂದು ತಿರಸ್ಕರಿಸಿದ. ಹೆಂಡತಿ ಹಠ ಹಿಡಿದಳು. ಬಲವಂತವಾಗಿ ಅವನನ್ನು ಒಪ್ಪಿಸಿದಳು. ತಾನೆ ಮುಂದೆ ನಿಂತು ತನ್ನ ತಂಗಿಯ ಮದುವೆಯನ್ನು ಗಂಡನೊಂದಿಗೆ ವಿಜೃಂಭಣೆಯಿಂದ ಮಾಡಿಸಿದಳು. ಮದುವೆಯಾದ ಒಂದೆರಡು ವರ್ಷಗಳಲ್ಲಿ ತಂಗಿಗೆ ಮಕ್ಕಳಾದವು. ಅಕ್ಕನಿಗೆ ಆದ ಸಂತೋಷ ಅಷ್ಟಿಷ್ಟಲ್ಲ.ಆ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಅಕ್ಕರೆಯಿಂದ ನೋಡಿಕೊಂಡಳು ಆ ಮಕ್ಕಳು ಅಷ್ಟೆ.ತಾಯಿಗಿಂತ ದೊಡಮ್ಮನ ಒಡನಾಟವೇ ಹೆಚ್ಚು. ಗಂಡನಿಗೂ ಮೊದಲನೆಯ ಹೆಂಡತಿಯ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಇದರಿಂದ ಎರಡನೆಯ ಹೆಂಡತಿಗೆ ಅಸಹನೆಯುಂಟಾಯಿತು. ಅಷ್ಟೊಂದು ಪ್ರೀತಿಸುತ್ತಿದ್ದ ಗಂಡನ ತಲೆಕೆಡಿಸಿ ಅಕ್ಕನನ್ನು ಮನೆಯಿಂದ ಹೊರಗೆ ದೂಡಿಸಿದಳು. ಸ್ವಾಭಿಮಾನಿಯಾದ ಅಕ್ಕ ಬೇಸತ್ತು ಹೊರನಡೆದಳು. ಅಂದು ಯುವಾವಸ್ಥೆಯಲ್ಲಿ ಮನೆ ಬಿಟ್ಟವಳು ಮತ್ತೆ ಮನೆಯ ಕಡೆ ತಿರುಗಿ ನೋಡಲಿಲ್ಲ. ನಮ್ಮ ನ್ಯಾಯಪೀಠದ ಮುಂದೆ ಹಾಜರಾದಾಗ ಹಣ್ಣು ಹಣ್ಣು ಮುದುಕಿ. ಈ ಮಧ್ಯೆ ಜಿಲ್ಲಾ ನ್ಯಾಯಾಲಯದಲ್ಲಿ ಗಂಡನಿಂದ ಜೀವನಾಂಶ ಕೋರಿ ಅರ್ಜಿಸಲ್ಲಿಸಿದ್ದಳು. ನ್ಯಾಯಾಲಯವು ಆಕೆಗೆ ಗಂಡ ಮಾಸಿಕ 300/- ರೂ. ಜೀವನಾಂಶ ಕೊಡಬೇಕೆಂದು ತೀರ್ಪು ನೀಡಿತ್ತು. ಬಂಧುಗಳ ಮನೆಯಲ್ಲಿದ್ದು ಹೇಗೋ ಜೀವನ ನಿರ್ವಹಣೆ ಮಾಡಿಕೊಂಡು ಬಂದಿದ್ದ ಆ ಮಹಿಳೆ ವೃದ್ಧಾವಸ್ಥೆಯಲ್ಲಿ ಒಂದು ದಿನದ ಔಷಧೋಪಚಾರಗಳಿಗೂ ಆ ಹಣ ಸಾಕಾಗುತ್ತಿಲ್ಲವೆಂದು ತನ್ನ ಅಳಲನ್ನು ನಮ್ಮ ಮುಂದೆ ತೋಡಿಕೊಂಡಳು. ಅವಳ ಗಂಡನಿಗೆ ನೋಟೀಸ್ ಜಾರಿಮಾಡಿದೆವು. ಅವನು ತನ್ನ ಎರಡನೆಯ ಹೆಂಡತಿಯೊಂದಿಗೆ ಹಾಜರಾದ. ವಿಚಾರಣೆ ಆರಂಭವಾಯಿತು. • 

“ನ್ಯಾಯಾಲಯ ನಿಗದಿಪಡಿಸಿದ ಮಾಸಿಕ 300/- ರೂ. ಗಳಲ್ಲಿ ನಿನ್ನ ಹೆಂಡತಿ ಜೀವನ ನಡೆಸಲು ಸಾಧ್ಯವೇ?” • “
ಇಲ್ಲ, ಈಗಿನ ದುಬಾರಿ ಕಾಲದಲ್ಲಿ ಸಾಧ್ಯವಿಲ್ಲ.” • 
“ನಿನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಕೇಳಿದ್ದೇವೆ.” •
“ಹೌದು, ನಿಜ. ಎರಡನೆ ಮದುವೆ ಬೇಡ ಎಂದು ನಾನೇ ಹೇಳಿದ್ದೆ. ಈಕೆ ಕೇಳಲಿಲ್ಲ.” 
“ಈಕೆಯ ಜೀವನಾಂಶಕ್ಕೆ ಎಷ್ಟು ಕೊಡಲು ಸಿದ್ದನಿದ್ದೀಯಾ?” 
“ತಾವು ನಿಗದಿಪಡಿಸುವಷ್ಟು ಕೊಡುತ್ತೇನೆ, ಬುದ್ದಿ.” | 
“ನಮ್ಮಿಂದ ಹೇಳಿಸುವುದು ಬೇಡ. ಆಕೆಯ ಮೇಲಿನ ನಿನ್ನ ಪ್ರೀತಿ ನಿಜವಾಗಿದ್ದರೆ, ನೀನೇ ಹೇಳು ಎಷ್ಟು ಕೊಡುತ್ತೀಯಾ.” •
 “ತಿಂಗಳಿಗೆ ಐದು ಸಾವಿರ ರೂಪಾಯಿ ಕೊಡುತ್ತೇನೆ.” 

ನಮಗೆ ತುಂಬಾ ಸಂತೋಷವಾಯಿತು. ತಾನಾಗಿಯೇ ಅಷ್ಟೊಂದು ಜೀವನಾಂಶವನ್ನು ಕೊಡುವುದಾಗಿ ಪ್ರತಿವಾದಿಯು ಹೇಳಿದ್ದನ್ನು ಕೇಳಿ ಅಂದು ನ್ಯಾಯಪೀಠದ ಮುಂದೆ ಹಾಜರಿದ್ದ ಶಿಷ್ಯರೆಲ್ಲರೂ ಆಶ್ಚರ್ಯಚಕಿತರಾದರು. ಆರ್ಥಿಕ ಶ್ರೀಮಂತಿಕೆಯ ಜೊತೆಗೆ ಅವನ ಹೃದಯಶ್ರೀಮಂತಿಕೆ ಎಷ್ಟಿದೆಯೆಂಬುದು ನಿಚ್ಚಳವಾಗಿ ಗೋಚರಿಸಿತ್ತು. ನಾವು ಕರಣಿಕರು ತಿರುಗಿ ಪ್ರತಿವಾದಿಯು ಅರ್ಜಿದಾರಳಾದ ತನ್ನ ಮೊದಲನೆಯ ಹೆಂಡತಿಗೆ ಸ್ವಯಂಪ್ರೇರಣೆಯಿಂದ ಮಾಸಿಕ 5,000/- ರೂ. ಗಳ ಜೀವನಾಂಶವನ್ನು ಕೊಡಲು ಒಪ್ಪಿದ್ದಾನೆಂದು ಬರೆಸುತ್ತಿದ್ದಂತೆಯೇ ಅವನ ಎರಡನೆಯ ಹೆಂಡತಿ ತಕರಾರು ತೆಗೆದು ಗಂಡನನ್ನು ದುರುಗುಟ್ಟಿಕೊಂಡು ನೋಡಿ “ಇವಳಿಗೆ ತಿಂಗಳಿಗೆ 5,000/- ರೂ. ಕೊಟ್ಟು ನನ್ನ ಮಕ್ಕಳ ಕೈಗೆ ತೆಂಗಿನ ಚಿಪ್ಪು ಕೊಡಬೇಕೆಂದು ಇದ್ದೀಯಾ?” ಎಂದು ಗಂಡನ ಮೇಲೆ ರೇಗಿದಳು. ಯಾವ ಟಿ.ವಿ ಸೀರಿಯಲ್ ಕಥಾ ಬರಹಗಾರರಿಗೂ ಇಂತಹ ಮೊನಚಾದ ಮಾತು ಸುರಿಸಿರಲಾರದು! ನಿಮ್ಮ ಮಧ್ಯೆ ವ್ಯವಹಾರದಲ್ಲಿ ಏನೇ ಕೆಟ್ಟುಬಂದಿದ್ದರೂ ನಿನ್ನ ಅಕ್ಕ ಸ್ವತಃ ಮುಂದೆ ನಿಂತು ನಿನ್ನನ್ನು ತನ್ನ ಗಂಡನೊಂದಿಗೆ ಮದುವೆ ಮಾಡಿಸಿದ ಆ ದಿನಗಳನ್ನು ಮರೆಯಬಾರದು ಎಂದು ಕಿವಿಮಾತು ಹೇಳಿ ಆಕೆ ತೀರಾ ಹಠಮಾಡಿದ್ದರಿಂದ 5,000/ ರೂ. ಬದಲು 3,000/- ಗಳಿಗೆ ಒಪ್ಪಿಸಿ ಬ್ಯಾಂಕ್ ಮೂಲಕ ಆಕೆಯ ಅಕ್ಕನ ಖಾತೆಗೆ ಪ್ರತಿ ತಿಂಗಳು ಜೀವನಾಂಶದ ಹಣ ಜಮಾ ಆಗುವಂತೆ ತೀರ್ಪಿತ್ತು ಕಳುಹಿಸಿದೆವು. 

ನಮ್ಮ ನ್ಯಾಯಪೀಠದ ಮುಂದೆ ನಡೆದ ಈ ಪ್ರಕರಣವು ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಆಫ್ರಿಕಾದ ಕಮರೂನ್ ದೇಶದ “The Old Woman and her Golden Necklace” ಎಂಬ ಜಾನಪದ ಕಥೆಯನ್ನು ಬಹುಮಟ್ಟಿಗೆ ಹೋಲುತ್ತದೆ. ಈ ಕಥೆಯ ಶಿರೋನಾಮೆಯಲ್ಲಿರುವ ಬಂಗಾರವೆಂಬ ಶಬ್ದ ಆಕೆಯ ಸವತಿಯಾಗಿ ಹಗೆ ಸಾಧಿಸಿದ ಆತ್ಮೀಯ ಗೆಳತಿಯನ್ನು ಕುರಿತು ಸಾಂಕೇತಿಕವಾಗಿ ಬಳಸಲಾಗಿದೆ. ಕಥೆಯ ವಿವರ ಯಥಾವತ್ತಾಗಿ ಹೀಗಿದೆ: 

ಒಂದು ಹಳ್ಳಿಯಲ್ಲಿ ಏವಾ (Awah) ಎಂಬ ಹೆಸರಿನ ಶ್ರೀಮಂತನಿದ್ದ. ಆತ ತುಂಬಾ ಬುದ್ದಿವಂತ ಮತ್ತು ಧೈರ್ಯಶಾಲಿ. ಹಳ್ಳಿಯ ಜನರ ಗೌರವಾದರಗಳಿಗೆ ಪಾತ್ರನಾಗಿದ್ದ. ಅವನು ತನ್ನ ಹೆಂಡತಿಯಾದ ನಶಾಂಗ್ (Nchang) ಳನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಅವಳಾದರೋ ಕಷ್ಟಸಹಿಷ್ಣು; ಎಂದೂ ಗಂಡನಿಗೆ ಎದುರಾಡುತ್ತಿರಲಿಲ್ಲ. ದುರದೃಷ್ಟವಶಾತ್ ಮದುವೆಯಾಗಿ 15 ವರ್ಷಗಳಾದರೂ ಆಕೆಗೆ ಮಕ್ಕಳಾಗಲಿಲ್ಲ, ಆದರೂ ಗಂಡ ಆಕೆಯ ಮೇಲೆ ಕೋಪಿಸಿಕೊಳ್ಳದೆ ಅವಳನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದ. ನಶಾಂಗ್ ಬಹಳ ಯೋಚನೆಮಾಡಿ ತನ್ನ ಗಂಡನಿಗೆ ಎರಡನೆಯ ಮದುವೆ ಮಾಡಬೇಕೆಂದು ನಿರ್ಧರಿಸಿದಳು. ಗಂಡನು ಹೆಂಡತಿಯ ಮೇಲಿನ ಗಾಢವಾದ ಪ್ರೀತಿಯಿಂದ ಎರಡನೆಯ ಮದುವೆಯಾಗಲು ಸುತರಾಂ ಒಪ್ಪಲಿಲ್ಲ. ಏಕಾಂತದಲ್ಲಿ ಹೆಂಡತಿಯು ಬಹಳ ಹಠಮಾಡಿ ಅವನನ್ನು ಒಪ್ಪಿಸಿದಳು. ತನ್ನ ಆತ್ಮೀಯ ಸ್ನೇಹಿತೆಯಾದ ನಜಿಫೋರ್ (Ngefore) ಎಂಬುವವಳನ್ನು ಎರಡನೆಯ ಹೆಂಡತಿಯನ್ನಾಗಿ ತಾನೇ ಮುಂದೆ ನಿಂತು ಮದುವೆ ಮಾಡಿಸಿದಳು. ತನ್ನ ಸ್ನೇಹಿತೆ ಗಂಡನ ಎರಡನೆಯ ಹೆಂಡತಿಯಾಗಿ ಸುಖವಾಗಿರಲು ಏನೆಲ್ಲ ಮಾಡಬೇಕೋ ಅದನ್ನು ನಶಾಂಗ್ ಬಹಳ ಸಂತೋಷದಿಂದ ಮಾಡಿದಳು. ನಜಿಫೋರ್ ಗರ್ಭವತಿಯಾದಾಗಲೆಲ್ಲಾ ಆಕೆಗೆ ಮನೆಯ ಒಳಹೊರಗೆ ಯಾವ ಕೆಲಸವನ್ನೂ ಮಾಡಲು ಬಿಡುತ್ತಿರಲಿಲ್ಲ. ತಾನೇ ಎಲ್ಲವನ್ನೂ ಮಾಡಿ ಹೊಸ ಹೊಸ ಬಟ್ಟೆಗಳನ್ನು ಆಕೆಗೆ ತಂದು ಕೊಡುತ್ತಿದ್ದಳು. ಹೀಗಿದ್ದರೂ ನಜಿಫೋರ್ ತನ್ನ ಗಂಡನಿಗೆ ಮೊದಲನೆಯ ಹೆಂಡತಿಯಾದ ನಶಾಂಗ್ ಮೇಲೆಯೇ ಹೆಚ್ಚಿನ ಪ್ರೀತಿ ಇದೆಯೆಂದು ಮನಗಂಡು ಒಳಗೊಳಗೆ ಬಹಳ ಅಸೂಯೆಪಡುತ್ತಾಳೆ. ನಶಾಂಗ್ ತನ್ನನ್ನು ಬಹಳವಾಗಿ ಹೊಡೆಯುತ್ತಾಳೆಂದೂ, ಆಕೆ ಒಬ್ಬ ಮಾಟಗಾತಿಯೆಂದೂ, ತನ್ನ ಹೊಟ್ಟೆಯೊಳಗಿರುವ ಮಗುವನ್ನು ಯಾರಿಗೂ ಗೊತ್ತಿಲ್ಲದಂತೆ ಸಾಯಿಸಲು ಮಾಟಮಂತ್ರ ಮಾಡುತ್ತಾಳೆಂದೂ ಗಂಡನಿಗೆ ಸುಳ್ಳುಹೇಳುತ್ತಾಳೆ. ಅವಳ ಚಾಡಿ ಮಾತನ್ನು ನಂಬಿದ ಗಂಡ ಕ್ರುದ್ದನಾಗಿ ಮೊದಲನೆಯ ಹೆಂಡತಿ ನಶಾಂಗ್ಳನ್ನು ಸಿಕ್ಕಾಪಟ್ಟೆ ಹೊಡೆಯುತ್ತಾನೆ. ಆಕೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ನಂತರ ಆಕೆ ಅನಿರೀಕ್ಷಿತವಾಗಿ ಗರ್ಭವತಿಯಾಗಿ ಗಂಡುಮಗುವಿಗೆ ಜನ್ಮ ನೀಡುತ್ತಾಳೆ. ನಜಿಫೋರ್ಗೆ ನಶಾಂಗ್ ಮೇಲೆ ಮತ್ತಷ್ಟೂ ಅಸೂಯೆ ಉಂಟಾಗುತ್ತದೆ. ಗುಟ್ಟಾಗಿ ಒಬ್ಬ ನಾಟಿವೈದ್ಯನನ್ನು ಸಂಪರ್ಕಿಸಿ ಅವನ ಸಲಹೆ ಪಡೆದು ಆಹಾರದಲ್ಲಿ ವಿಷವನ್ನು ಬೆರೆಸಿ ನಶಾಂಗ್ಳನ್ನು ಸಾಯಿಸುವ ಸನ್ನಾಹ ಮಾಡುತ್ತಾಳೆ. ವಿಷವು ನೆಲದ ಮೇಲೆ ಬೀಳದಂತೆ ಎಚ್ಚರವಹಿಸಬೇಕೆಂದು ನಾಟಿವೈದ್ಯ ಹೇಳಿರುತ್ತಾನೆ. ಆದರೂ ವಿಷಪ್ರಾಶನದ ಸಂದರ್ಭದಲ್ಲಿ ವಿಷವು ಅಪ್ಪಿತಪ್ಪಿ ಹೇಗೋ ನೆಲಕ್ಕೆ ಬಿದ್ದುದರಿಂದ ನಜಿಫೋರ್ ಹುಚ್ಚಿಯಾಗುತ್ತಾಳೆ. ಏವಾ ಮತ್ತು ನಶಾಂಗ್ ಮತ್ತೆ ಒಂದಾಗುತ್ತಾರೆ. ಮಕ್ಕಳೊಂದಿಗೆ ಸುಖ-ಸಂತೋಷಗಳಿಂದ ಬಾಳುತ್ತಾರೆ. 

ಮೇಲಿನ ಎರಡೂ ಘಟನೆಗಳನ್ನು ತುಲನೆಮಾಡಿ ನೋಡಿದಾಗ ಜಗತ್ತಿನಲ್ಲಿ ಯಾವ ದೇಶದವರಾದರೇನು ಕೌಟುಂಬಿಕ ಜೀವನದಲ್ಲಿ ವೈಯಕ್ತಿಕ ವಿಚಾರಗಳು ಬಂದಾಗ ಮನುಷ್ಯರ ಸ್ವಭಾವಗಳು ಬಹುಮಟ್ಟಿಗೆ ಒಂದೇ ತೆರನಾಗಿರುತ್ತವೆ ಎಂಬುದನ್ನು ಮನಗಾಣಬಹುದಾಗಿದೆ. ನಮ್ಮ ನ್ಯಾಯಪೀಠದ ಮುಂದೆ ನಡೆದ ಪ್ರಕರಣದೊಂದಿಗೆ ಹೋಲಿಸಿದಾಗ ಆಫ್ರಿಕಾದ ಈ ಜಾನಪದ ಕಥೆಯ ಪೂರ್ವಾರ್ಧ ಒಂದೇ ಆಗಿ ಕಂಡುಬಂದರೂ ಉತ್ತರಾರ್ಧದ ಕೊನೆಯ ಭಾಗ ಕಾಲ್ಪನಿಕ ಎನಿಸುತ್ತದೆ. ಒಳ್ಳೆಯತನದ ವಿರುದ್ಧ ನಡೆಯುವ ನೀಚಮನಸ್ಸಿನ ಸಂಘರ್ಷ ಹೇಗೆ ಅನರ್ಥಕಾರಿಯಾಗುತ್ತದೆಯೆಂಬ ನೀತಿಬೋಧನೆ ಆಫ್ರಿಕಾದ ಈ ಜಾನಪದ ಕಥೆಯಲ್ಲಿದ್ದಂತೆ ತೋರುತ್ತದೆ. ನಮ್ಮ ನಾಡಿನಲ್ಲಿ ಸವತಿಮಾತ್ಸರ್ಯಕ್ಕೆ ಉದಾಹರಣೆಯಾದ ಕೈಕೆಯಿ ಶ್ರೀರಾಮನನ್ನು ಸ್ವಂತ ಮಗನಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದಳೆಂಬುದನ್ನು ಆದಿಕವಿ ವಾಲ್ಮೀಕಿ ಚಿತ್ರಿಸಿದ್ದಾನೆ. ಶ್ರೀರಾಮನ ಪಟ್ಟಾಭಿಷೇಕದ ಸಂತಸದ ವಾರ್ತೆಯನ್ನು ತಂದ ಮಂಥರೆಗೆ ಕೈಕೆ ಹರ್ಷಚಿತ್ತಳಾಗಿ ಕೊರಳಲ್ಲಿದ್ದ ಚಿನ್ನಾಭರಣವನ್ನು ಕೊಟ್ಟು ಬಹುಮಾನಿಸುತ್ತಾಳೆ. ಅಂಥವಳ ಮನಸ್ಸನ್ನು ಕೆಡಿಸಿದವಳೆಂದರೆ ಚಾಡಿಮಾತುಗಳನ್ನು ಚುಚ್ಚಿದ ಮಂಥರೆ.     

ಅಹೋ ಖಲಭುಜಂಗಾನಾಂ ವಿಪರೀತೋ ಹಿ ವಧಕ್ರಮಃ||
ಕರ್ಣೌ ದಶತಿ ಚೈಕಸ್ಯ ಪ್ರಾಣೈರನ್ಯೋ ವಿಯುಜ್ಯತೇ ||

ನಾಗರಹಾವಿಗೂ ಮನುಷ್ಯನಿಗೂ ಮೂಲಭೂತವಾಗಿ ಒಂದು ವ್ಯತ್ಯಾಸವಿದೆ. ನಾಗರಹಾವು ಯಾರನ್ನು ಕಚ್ಚುತ್ತದೆಯೋ ಅವರು ಸಾಯುತ್ತಾರೆ. ಆದರೆ ಮನುಷ್ಯನೆಂಬ ದುಷ್ಟಸರ್ಪ ಒಬ್ಬರ ಕಿವಿಯನ್ನು ಕಚ್ಚಿದರೆ ಬೇರೊಬ್ಬರು ಸಾಯುತ್ತಾರೆ! 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 6.5.2009