ಬೆಕ್ಕಿನ ಮರಿಗಳೂ, ಚುನಾವಣಾ ನೀತಿಸಂಹಿತೆಯೂ
ಚುನಾವಣೆಗಳಲ್ಲಿ ರಾಜಕಾರಣಿಗಳಿಗೆ ನೀತಿಸಂಹಿತೆಯ ಮೂಲಕ ಚುರುಕುಮುಟ್ಟಿಸಿದ ಮೊಟ್ಟಮೊದಲ ಚುನಾವಣಾ ಆಯುಕ್ತರೆಂದರೆ ಟಿ.ಎನ್. ಶೇಷನ್. ಅವರ ಹೆಸರನ್ನು ಕೇಳಿದರೆ ಸಾಕು ರಾಜಕಾರಣಿಗಳು ಹಾವನ್ನು ತುಳಿದವರಂತೆ ಬೆಚ್ಚಿಬೀಳುತ್ತಿದ್ದರು. ಚುನಾವಣಾ ಆಯುಕ್ತರಾಗಿ ಇಡೀ ದೇಶದಲ್ಲಿ ತುಂಬಾ ಜನಪ್ರಿಯತೆಯನ್ನು ಗಳಿಸಿದ್ದ ಈ ಆದಿಶೇಷ ನಿವೃತ್ತರಾದ ಮೇಲೆ ಸ್ವತಃ ಚುನಾವಣೆಗೆ ನಿಂತು ನಾಮಾವಶೇಷರಾಗಿ ಹೋದರು. ಈ ದೇಶದ ಜನರ ನಾಡಿಯ ಮಿಡಿತವನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಅವರ ನಂತರ ಬಂದ ಎಲ್ಲ ಚುನಾವಣಾ ಆಯುಕ್ತರುಗಳೂ ಶೇಷನ್ ಹಾಕಿಕೊಟ್ಟ ದಾರಿಯಲ್ಲಿಯೇ ಭದ್ರವಾದ ಹೆಜ್ಜೆಗಳನ್ನಿಟ್ಟು ಅವರಿಗಿಂತ ಹೆಚ್ಚಿನ ಕಟ್ಟುನಿಟ್ಟಿನಿಂದ ಚುನಾವಣೆಗಳನ್ನು ನಡೆಸುತ್ತಾ ಬಂದಿರುತ್ತಾರೆ. ಹೀಗಾಗಿ ಚುನಾವಣೆಗೂ ನೀತಿಸಂಹಿತೆಗೂ ಏನು ಸಂಬಂಧವಿದೆಯೆಂದು ಈಗ ಒಬ್ಬ ಹಳ್ಳಿಯ ದನಕಾಯುವ ಹುಡುಗನಿಗೂ ಗೊತ್ತಿದೆ. ಆದರೆ ಬೆಕ್ಕಿನ ಮರಿಗಳಿಗೂ ನೀತಿಸಂಹಿತೆಗೂ ಏನು ಸಂಬಂಧವಿದೆಯೆಂದು ಶೇಷನ್ಗೂ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದೇ ಇತ್ತೀಚೆಗೆ ಪತ್ರಿಕೆಗಳಿಂದ. ಅಂತಹ ಒಂದು ಅಪರೂಪದ ಪ್ರಸಂಗ ಕಳೆದ ವಾರ ಹಾವೇರಿಯಲ್ಲಿ ನಡೆಯಿತು. ವಿಜಯ ಕರ್ನಾಟಕ ಪತ್ರಿಕೆಯು ತನ್ನ ಮುಖಪುಟದಲ್ಲಿ ಪ್ರಕಟಿಸಿದ ಈ ಸುದ್ದಿಯನ್ನು ನೀವು ಓದಿರಲೇಬೇಕು.
ಏಪ್ರಿಲ್ 30 ರಂದು ನಡೆದ ಹಾವೇರಿ ಕ್ಷೇತ್ರದ ಲೋಕಸಭಾ ಚುನಾವಣೆಯ ಮತಯಂತ್ರಗಳನ್ನು ಸ್ಥಳೀಯ ಕಾಲೇಜೊಂದರ ಕೊಠಡಿಯಲ್ಲಿ ಭದ್ರವಾಗಿ ಇಡಲಾಗಿತ್ತು. ಅದೇ ಕೊಠಡಿಯನ್ನು ಸುರಕ್ಷಿತ ತಾಣವೆಂದು ತಿಳಿದ ಬೆಕ್ಕೊಂದು ತನ್ನ ಐದು ಮರಿಗಳನ್ನು ಮೊದಲೇ ಇಟ್ಟು ಹೋಗಿತ್ತು. ಸಂಜೆ ವಾಪಾಸ್ಸು ಬರುವ ವೇಳೆಗೆ ಕೊಠಡಿಯ ಬಾಗಿಲಿಗೆ ಬೀಗಹಾಕಲಾಗಿತ್ತು. ಒಳಗೆ ಬೆಕ್ಕಿನ ಮರಿಗಳು, ಹೊರಗೆ ತಾಯಿಬೆಕ್ಕು, ರಾತ್ರಿ-ಹಗಲು ಮಿಯಾಂವ್, ಮಿಯಾಂವ್ ಎಂದು ರೋದಿಸತೊಡಗಿದವು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿಯಿಂದ ಎಸ್.ಪಿ. ಗೆ ವರದಿ. ಎಸ್.ಪಿ.ಯಿಂದ ಜಿಲ್ಲಾಧಿಕಾರಿಗೆ ವರದಿ. ಮತ ಎಣಿಕೆಗೆ ನಿಗದಿಪಡಿಸಿದ ದಿನಾಂಕ ಮೇ 16 ರೊಳಗೆ ಸೀಲು ಮಾಡಿದ ಕೊಠಡಿಯೊಳಗೆ ಯಾರೂ ಪ್ರವೇಶಿಸುವಂತಿಲ್ಲ. ಆದಕಾರಣ ಜಿಲ್ಲಾಧಿಕಾರಿಯಿಂದ ಬೆಂಗಳೂರಿನ ಚುನಾವಣಾ ಆಯೋಗಕ್ಕೆ ವರದಿ. ಆಲ್ಲಿಂದ ದೆಹಲಿಯಲ್ಲಿರುವ ಮುಖ್ಯಚುನಾವಣಾ ಆಯುಕ್ತರಿಗೆ ವರದಿ. ಕೂಡಲೇ ಬಾಗಿಲು ತೆರೆದು ಬೆಕ್ಕಿನ ಮರಿಗಳನ್ನು ಹೊರಗೆ ಬಿಡಲು ಅವರಿಂದ ಅನುಮತಿ. ಮತ್ತೆ ಅದೇ ಮಾರ್ಗವಾಗಿ ದೆಹಲಿಯಿಂದ ಬೆಂಗಳೂರು, ಬೆಂಗಳೂರಿನಿಂದ ಹಾವೇರಿಗೆ ಅನುಮತಿಯ ಆದೇಶ ಕ್ಷಿಪ್ರಗತಿಯಲ್ಲಿ ರವಾನೆಯಾಗಿ ಎಲ್ಲ ರಾಜಕೀಯ ಪ್ರಮುಖರ ಸಮ್ಮುಖದಲ್ಲಿ ಬೆಕ್ಕಿನ ಮರಿಗಳ ಬಿಡುಗಡೆ, ತಾಯಿಬೆಕ್ಕಿನೊಂದಿಗೆ ಸಮಾಗಮ! ಆಪರೇಷನ್ ಮಿಯಾಂವ್ ಯಶಸ್ವಿ!
ಈ ವರದಿಯನ್ನು ಓದಿದಾಕ್ಷಣ ನಮ್ಮ ಮನಸ್ಸಿನಲ್ಲಿ ಸುಳಿದಾಡಿದ ವಿಚಾರವೆಂದರೆ: ದೆಹಲಿಯ ಮುಖ್ಯಚುನಾವಣಾ ಆಯುಕ್ತರು ಹಾವೇರಿಯ ತಾಯಿ ಬೆಕ್ಕು ಮತ್ತು ಬೆಕ್ಕಿನ ಮರಿಗಳ ಸಂಕಷ್ಟಕ್ಕೆ ಮಾನವೀಯತೆಯಿಂದ ಸ್ಪಂದಿಸಿದಂತೆ ನಮ್ಮ ರಾಜಕೀಯ ಧುರೀಣರು ತಾವು ಪ್ರತಿನಿಧಿಸುವ ಕ್ಷೇತ್ರದ ಜನರ ನೋವು ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆಯೇ? ಹಾವೇರಿಯ ಆ ತಾಯಿ ಬೆಕ್ಕು ಪೋಲೀಸರ ಹತ್ತಿರವಾಗಲೀ, MLA/MP ಗಳ ಹತ್ತಿರವಾಗಲೀ ಯಾರಿಗೂ ಅರ್ಜಿಯನ್ನೇನೂ ಬರೆದುಕೊಂಡು ಹೋಗಿರಲಿಲ್ಲ, ಆದರೂ ಅದರ ಆಕ್ರಂದನ ದೆಹಲಿಯವರೆಗೂ ಮುಟ್ಟಿತ್ತು. ಸಕಾಲದಲ್ಲಿ ಪರಿಹಾರವೂ ಸಿಕ್ಕಿತು. ಚುನಾವಣಾ ಆಯೋಗವು ಉಪೇಕ್ಷೆ ಮಾಡಿ ಬೆಕ್ಕಿನ ಮರಿಗಳೆಲ್ಲಾ ಸತ್ತುಹೋಗಿದ್ದರೆ ಉಳಿದ ಬೆಕ್ಕುಗಳು ಹಾವೇರಿಯ ದಾರಿಬೀದಿಗಳಲ್ಲಿ ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಧರಣಿ ಕೂತು ಮುಷ್ಕರವನ್ನೇನೂ ಮಾಡುತ್ತಿರಲಿಲ್ಲ. ಬಸ್ಸುಗಳಿಗೆ ಬೆಂಕಿ ಹಚ್ಚುತ್ತಿರಲಿಲ್ಲ. ಲಾಠಿಚಾರ್ಜ್, ಗೋಲಿಬಾರ್, ತನಿಖೆ ಇತ್ಯಾದಿ ರಗಳೆಗಳೂ ಇರುತ್ತಿರಲಿಲ್ಲ. ಚುನಾವಣಾ ಆಯೋಗವು ಬೆಕ್ಕಿಗೆ ತೋರಿದ ಈ ಕಾಳಜಿಯನ್ನು ನಮ್ಮ ಜನಪ್ರತಿನಿಧಿಗಳು ಜನಸಾಮಾನ್ಯರ ಸಂಕಷ್ಟಗಳ ನಿವಾರಣೆಗೆ ಏಕೆ ತೋರಿಸಲು ಆಗುತ್ತಿಲ್ಲ? ಸರ್ಕಾರಕ್ಕೆ ಎಷ್ಟೇ ಅರ್ಜಿ ಬರೆದುಕೊಂಡರೂ ಏಕೆ ಅವರ ಕೆಲಸಕಾರ್ಯಗಳು ಆಗುತ್ತಿಲ್ಲ? ನಾಡಿನ ಬೆನ್ನೆಲುಬಾದ ರೈತರು ಆತ್ಮಹತ್ಯೆ ಮಾಡಿಕೊಂಡು ಸತ್ತರೂ ಏಕೆ ಅವರ ಸಮಸ್ಯೆಗಳು ಇನ್ನೂ ಪರಿಹಾರವನ್ನು ಕಂಡಿಲ್ಲ, ನೌಕರನ ಭವಿಷ್ಯಜೀವನಕ್ಕೆಂದು ಸ್ಥಾಪಿತವಾದ ಭವಿಷ್ಯನಿಧಿ (Provident Fund) ಅವನು ಸತ್ತರೂ ದೊರೆಯದಂತಹ ಸ್ಥಿತಿ ಏಕೆ ನಿರ್ಮಾಣವಾಗಿದೆ? ನಿಯಮಗಳು ಇರುವುದು ನಿಯಮಗಳಿಗಾಗಿ ಅಲ್ಲ; ಜನರ ಹಿತಕ್ಕಾಗಿ. ಜನರ ಹಿತವನ್ನು ಸಾಧಿಸದ ನಿಯಮಗಳಿರುವುದು ಯಾವ ಪುರುಷಾರ್ಥಕ್ಕಾಗಿ? ಸರಕಾರದ ಎಷ್ಟೋ ನಿಯಮಗಳು ಯಾರ ಹಿತಕ್ಕಾಗಿ ರೂಪಿತವಾಗಿವೆಯೋ ಅವರ ಹಿತಕ್ಕಾಗಿ ಬಳಕೆಯಾಗುವುದಕ್ಕಿಂತ ಅವರ ಶೋಷಣೆಯನ್ನು ಮಾಡಲೂ ದುರ್ಬಳಕೆಯಾಗುತ್ತಿರುವುದು ವಿಪರ್ಯಾಸ ಹಾಗೂ ಖೇದಕರ ಸಂಗತಿ.
ಹಾವೇರಿಯ ಮಾರ್ಜಾಲ ಪ್ರಕರಣ ಒಂದು ಮನಮಿಡಿಯುವ ಪ್ರಸಂಗ. ದಾರ್ಶನಿಕರು ಭಕ್ತಿಯ ವಿಚಾರವನ್ನು ಹೇಳುವಾಗ ಬೆಕ್ಕಿನ ಉದಾಹರಣೆಯನ್ನು ಕೊಡುತ್ತಾರೆ. ಇದಕ್ಕೆ ಮಾರ್ಜಾಲ ನ್ಯಾಯ ಎಂದು ಕರೆಯುತ್ತಾರೆ. ಬೆಕ್ಕಿನ ಮರಿಗಳು ಸಂಪೂರ್ಣವಾಗಿ ತಾಯಿಬೆಕ್ಕನ್ನು ಅವಲಂಬಿಸಿರುತ್ತವೆ. ಅಪಾಯದ ಪರಿಸ್ಥಿತಿಯಲ್ಲಿ ಸ್ವಂತ ರಕ್ಷಣೆ ಮಾಡಿಕೊಳ್ಳುವ ಶಕ್ತಿ ಅವುಗಳಿಗೆ ಇರುವುದಿಲ್ಲ. ತಾಯಿಬೆಕ್ಕು ತನ್ನ ಮರಿಗಳಿಗೆ ಏನೊಂದೂ ತೊಂದರೆಯುಂಟಾಗದಂತೆ ಅವುಗಳ ಪಾಲನೆ ಪೋಷಣೆ ಮಾಡುತ್ತದೆ. ಹಾಗೆ ಭಕ್ತನಾದವನು ದೇವರಲ್ಲಿ ಸಂಪೂರ್ಣ ನಂಬಿಕೆಯುಳ್ಳವನಾಗಬೇಕು.
ಅನನ್ಯಾಂಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||
(ಭಗವದ್ಗೀತಾ 9.22)
ಯಾರು ದೇವರನ್ನು ಪೂರ್ಣವಾಗಿ ನಂಬಿರುತ್ತಾರೋ ಅವರ ಯೋಗಕ್ಷೇಮವನ್ನು ದೇವರೇ ನೋಡಿಕೊಳ್ಳುತ್ತಾನೆ ಎನ್ನುತ್ತದೆ ಭಗವದ್ಗೀತೆ. ಆದಕಾರಣ ತನ್ನ ಕಷ್ಟಪರಿಹಾರಕ್ಕಾಗಿ ದೇವರನ್ನು ಬೇಡಿಕೊಳ್ಳಬೇಕಾಗಿಲ್ಲ. ದೇವರನ್ನು ಶರಣಾಗತ ವತ್ಸಲ ಎಂದು ಬಣ್ಣಿಸುತ್ತಾರೆ. ಸರ್ವಜ್ಞನಾದ, ಕರುಣಾಮಯಿಯಾದ ದೇವರಲ್ಲಿ ಅನನ್ಯ ವಿಶ್ವಾಸವನ್ನಿಟ್ಟುಕೊಂಡು ಯಾರು ಸಂಪೂರ್ಣವಾಗಿ ಶರಣಾಗತರಾಗುತ್ತಾರೋ ಅಂಥವರನ್ನು ದೇವರು ಕೈಬಿಡುವುದಿಲ್ಲವೆಂಬುದೇ ಭಕ್ತಿಮಾರ್ಗ. ಇದಕ್ಕೆ ವೈಷ್ಣವ ದರ್ಶನದಲ್ಲಿ ಪ್ರಪತ್ತಿ ಎಂದು ಕರೆಯುತ್ತಾರೆ. ಪ್ರಪತ್ತಿ ಎಂದರೆ ದೇವರಲ್ಲಿ ಸಂಪೂರ್ಣ ಶರಣಾಗತಿ (total surrender), ಉದಾಹರಣೆಗೆ ಬೆಕ್ಕಿನ ಮರಿಗಳಿಗೆ ತಾಯಿಬೆಕ್ಕಿನ ಮೇಲಿರುವ ಪೂರ್ಣ ನಂಬಿಕೆ. ಇಲ್ಲಿ ಮರಿಬೆಕ್ಕುಗಳು ಜೀವಾತ್ಮಗಳ ಪ್ರತೀಕವಾದರೆ, ತಾಯಿಬೆಕ್ಕು ಪರಮಾತ್ಮನ ಪ್ರತೀಕ. ದುಶ್ಯಾಸನನು ದೌಪ್ರದಿಯ ಸೀರೆಯ ಸೆರಗನ್ನು ಹಿಡಿದೆಳೆಯುವಾಗ ಆಕೆ ಒಂದೇ ಒಂದು ಕೈಯನ್ನು ಮೇಲೆತ್ತಿ ಶ್ರೀಕೃಷ್ಣನನ್ನು ಬೇಡಿಕೊಳ್ಳುತ್ತಾಳೆ. ಇನ್ನೊಂದು ಕೈಯಿಂದ ತನ್ನ ಸೀರೆಯ ಗಂಟನ್ನು ಭದ್ರವಾಗಿ ಹಿಡಿದುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ. ಆಗ ತನ್ನ ಮಾನವನ್ನು ತಾನು ರಕ್ಷಣೆಮಾಡಿಕೊಳ್ಳಬಲ್ಲೆನೆಂಬ ಅಹಂ ಆಕೆಗೆ ಇನ್ನೂ ಇದೆಯೆಂದು ಶ್ರೀಕೃಷ್ಣ ಸಹಾಯಕ್ಕೆ ಬರಲಿಲ್ಲವಂತೆ. ಯಾವಾಗ ಎರಡೂ ಕೈಗಳನ್ನು ಮೇಲೆತ್ತಿ ಸಂಪೂರ್ಣ ಶರಣಾಗತಳಾಗಿ ಬೇಡಿಕೊಂಡಳೋ ಆಗ ಶ್ರೀಕೃಷ್ಣ ನೆರವಿಗೆ ಧಾವಿಸಿದ. ಆದರೆ ಇಂತಹ ಸಂದರ್ಭಗಳಲ್ಲಿ ವ್ಯಕ್ತಿ ತನ್ನಿಂದ ಸಾಧ್ಯವಾದ ಪ್ರಯತ್ನವನ್ನು ಮಾಡದೆ ಕೈಕಟ್ಟಿಕೊಂಡು ಸುಮ್ಮನಿರಬೇಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮಾರ್ಜಾಲ ನ್ಯಾಯಕ್ಕೆ ವಿಭಿನ್ನವಾದ ಮರ್ಕಟನ್ಯಾಯ ಎಂಬುದೊಂದಿದೆ. ಮರ್ಕಟ ಎಂದರೆ ಕೋತಿ, ಬೆಕ್ಕಿನ ಮರಿಗಳಿಗೂ ಕೋತಿಯ ಮರಿಗಳಿಗೂ ಒಂದು ವ್ಯತ್ಯಾಸವಿದೆ. ತಾಯಿಬೆಕ್ಕು ತನ್ನ ಮರಿಗಳನ್ನು ಎಲ್ಲಿಗಾದರೂ ಕರೆದುಕೊಂಡು ಹೋಗಬೇಕೆಂದಿದ್ದರೆ ಮರಿಬೆಕ್ಕುಗಳ ಕರ್ತವ್ಯವೇನೂ ಇರುವುದಿಲ್ಲ. ಅವುಗಳಿಗೆ ಇನ್ನೂ ಕಣ್ಣು ಕಾಣಿಸುತ್ತಿರುವುದಿಲ್ಲ. ತಾಯಿಬೆಕ್ಕೇ ಹೋಗಬೇಕೆಂದ ಜಾಗಕ್ಕೆ ತನ್ನ ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಸಾಗಿಸುತ್ತದೆ. ಆದರೆ ತಾಯಿಕೋತಿಯ ವಿಚಾರ ಹಾಗಲ್ಲ, ಮರಿಕೋತಿಗಳು ಅದರ ಹೊಟ್ಟೆಯನ್ನು ಬಿಗಿಯಾಗಿ ಅಪ್ಪಿಕೊಳ್ಳಬೇಕಾಗುತ್ತದೆ. ಹಾಗೆ ಮರಿಗಳು ಹೊಟ್ಟೆಯನ್ನು ಹಿಡಿದುಕೊಳ್ಳದಿದ್ದರೆ ತಾಯಿಕೋತಿ ಬೆಕ್ಕಿನಂತೆ ತನ್ನ ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಸಾಗಿಸುವುದಿಲ್ಲ, ತಾತ್ವಿಕವಾಗಿ ಭಕ್ತಿಮಾರ್ಗದಲ್ಲಿ ಮಾರ್ಜಾರನ್ಯಾಯ ಸರಿ. ಆದರೆ ರಾಜಕೀಯವಾಗಿ ಮರ್ಕಟನ್ಯಾಯವೇ ಸರಿ. ಜನರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಮಾರ್ಜಾಲ ನ್ಯಾಯಕ್ಕೆ ಅನುಸರಿಸಲು ಹೋದರೆ ನಮ್ಮ ದೇಶದಲ್ಲಿ ಬದುಕಿ ಉಳಿಯುವುದು ಕಷ್ಟ. ಕೋತಿಯ ಮರಿಗಳಂತೆ ರಾಜಕಾರಣಿಗಳನ್ನು ಹಿಡಿದುಕೊಂಡಿದ್ದರೆ ಮಾತ್ರ ಕೆಲಸ ಆಗುತ್ತದೆ. ಬೆಕ್ಕಿನ ಮರಿಗಳಂತೆ ಕಣ್ಮುಚ್ಚಿ ಮನೆಯಲ್ಲಿ ಕುಳಿತುಕೊಂಡಿದ್ದರೆ ಖಾಯಂ ಆಗಿ ಕಣ್ಮುಚ್ಚುವುದಂತೂ ಖಚಿತ!
ಅಮೇರಿಕಾ ದೇಶ ಶ್ರೀಮಂತರನ್ನು ಪೋಷಿಸುವ ಬಂಡವಾಳಶಾಯಿ ರಾಷ್ಟ್ರ ಎಂದು ಮೂಗುಮುರಿಯುತ್ತಾರೆ. ಭಾರತ ಬಡವರನ್ನು ಪೋಷಿಸುವ ಪ್ರಜಾತಂತ್ರ ರಾಷ್ಟ್ರ ಎಂದು ಗುಣಗಾನ ಮಾಡುತ್ತಾರೆ. ಆದರೆ ವಾಸ್ತವವಾಗಿ ಭಾರತ ಬಡವರ ಗೋರಿಯ ಮೇಲೆ ಮಹಲುಗಳನ್ನು ಕಟ್ಟಿಸಿಕೊಳ್ಳುತ್ತಿರುವ ಬಂಡವಾಳಶಾಯಿಗಳ ರಾಷ್ಟ್ರವಾಗಿದೆ. ಸ್ವತಂತ್ರ ಭಾರತದ ಆರು ದಶಕಗಳ ರಾಜಕೀಯ ವಿದ್ಯಮಾನಗಳನ್ನು ಸ್ಕೂಲವಾಗಿ ಮೂರು ಹಂತಗಳಾಗಿ ವರ್ಗೀಕರಿಸಬಹುದು. ಆರಂಭದ ದಶಕಗಳಲ್ಲಿ ಬಹುಮಟ್ಟಿಗೆ ವಕೀಲವೃತ್ತಿಯಿಂದ ಬಂದ ರಾಜಕಾರಣಿಗಳು. ನಂತರದ ದಶಕಗಳಲ್ಲಿ ವ್ಯಾಪಾರ ಉದ್ದಿಮೆಗಳಿಂದ ಬಂದ ಶ್ರೀಮಂತ ಮನೆತನಗಳ ರಾಜಕಾರಣಿಗಳು, ಇತ್ತೀಚೆಗೆ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದು ನಿವೃತ್ತಿ ಪಡೆದು ರಾಜಕೀಯ ಪ್ರವೇಶ ಮಾಡುತ್ತಿರುವ ಅಧಿಕಾರಿ ವರ್ಗದ ರಾಜಕಾರಣಿಗಳು. ಈಗ ಈ ಮೂವರೂ ರಾಜಕೀಯ ಗದ್ದುಗೆಯನ್ನೇರಲು ಹಣದ ಆಧಾರದ ಮೇಲೆ ಪರಸ್ಪರ ಪೈಪೋಟಿ ನಡೆಸಿದ್ದು, ಹಣವಿಲ್ಲದವರು ರಾಜಕೀಯ ಪ್ರವೇಶ ಮಾಡಲು ಸುತರಾಂ ಸಾಧ್ಯವಿಲ್ಲದಂತಾಗಿದೆ. ಈಗೀಗ ಹೊಡಿ, ಬಡಿ, ಕಡಿ ಎಂಬ ರೌಡಿಗಳೂ ಈ ಕ್ಷೇತ್ರದಲ್ಲಿ ನೆಲೆಯೂರಿದ್ದಾರೆ.ರಾಜಕೀಯದಲ್ಲಿ ತಮ್ಮ ಶಿಷ್ಯರಿಗೆ ಟಿಕೆಟ್ ಕೊಡಿಸುವುದರಿಂದ ಹಿಡಿದು ಓಟು ಹಾಕಿಸುವವರೆಗೆ ಪ್ರಭಾವ ಬೀರುತ್ತಿರುವ ಮಠಾಧೀಶರ ಪಾತ್ರವೇನು ಕಡಿಮೆ ಇಲ್ಲ. ತೀರಾ ಇತ್ತೀಚೆಗೆ ನೇರವಾಗಿ ರಾಜಕೀಯ ಪ್ರವೇಶ ಮಾಡುವ ಪ್ರಯತ್ನ ಒಬ್ಬ ಮಠಾಧೀಶರಿಂದಲೂ ನಡೆದಿದೆ.
ಮತದಾರರೆಂಬ ಬೆಕ್ಕಿನ ಮರಿಗಳನ್ನು ಚುನಾವಣಾ ಆಯೋಗವು ಬಹಳ ಜತನದಿಂದ ಕಾಪಾಡಿಕೊಂಡು ಬಂದಿದೆ ಆದರೂ ಮೊನ್ನೆ ಮೊನ್ನೆ ನಡೆದ ಚುನಾವಣೆಯಲ್ಲಿ ಪ್ರತಿಷ್ಠಿತ ಪಕ್ಷಗಳ ಅಭ್ಯರ್ಥಿಗಳು ತಲಾ ಕನಿಷ್ಠ 25 ಕೋಟಿ ರೂ. ಗಳನ್ನು ಖರ್ಚು ಮಾಡಿದ್ದಾರೆಂಬುದು ರಹಸ್ಯದ ಸಂಗತಿಯಾಗಿ ಏನೂ ಉಳಿದಿಲ್ಲ. ಚುನಾವಣಾ ಆಯೋಗವು ಎಷ್ಟೇ ಬಿಗಿ ಬಂದೋಬಸ್ತು ಮಾಡಿ ಕಾರುಬಾಡಿಗೆ, ಮೈಕ್ ಸೆಟ್, ಬ್ಯಾನರ್ಸ್, ಕಟೌಟ್, ಫೆಕ್ಸ್ ಇತ್ಯಾದಿ ಖರ್ಚುಗಳಿಗೆ ಕಡಿವಾಣ ಹಾಕಿದ್ದರೂ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ ಕೋಟಿಗಟ್ಟಲೆ ಹಣ ಮತ್ತು ಗಡಿಗೆಗಟ್ಟಲೆ ಮದ್ಯ ಸುರಿದು ಮತ ಖರೀದಿಸಿರುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ, ಮಠಗಳಲ್ಲಿ ನಡೆಸುವ ಸಾಮೂಹಿಕ ಮದುವೆಗಳಲ್ಲಿ ಹೊರಗಿನ ಖರ್ಚುಗಳಾದ ಮದುವೆ ಚಪ್ಪರ, ಊಟ, ಓಲಗದ ಖರ್ಚನ್ನು ಕಡಿಮೆ ಮಾಡಲು ಸಾಧ್ಯವಾಗಿದೆಯೇ ಹೊರತು ಮದುವೆಯಾಗುವ ಗಂಡುಗಳು ವರದಕ್ಷಿಣೆ ಪಡೆಯುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಮತ್ತಷ್ಟೂ ಜಾಸ್ತಿಯಾಗಿದೆ. ಹಾಗೆಯೇ ಅಲ್ಲಲ್ಲಿ ಸಾಗರದ ಹಿಮಶಿಖೆಯಂತೆ (tip of the iceberg) ಗೋಚರಿಸಿದ ಚುನಾವಣಾ ಅಕ್ರಮಗಳನ್ನು ಚುನಾವಣಾ ಆಯೋಗವು ತಡೆಗಟ್ಟಲು ಸಾಧ್ಯವಾಗಿದೆಯೇ ಹೊರತು ಸಂಪೂರ್ಣವಾಗಿ ಹಣ ಮತ್ತು ಮದ್ಯದ ಆಮಿಷವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ, ಸಾಧ್ಯವಾಗುವುದೂ ಇಲ್ಲ ಎನಿಸುತ್ತದೆ.
ನೀತಿಸಂಹಿತೆ ಬಿಗಿಯಾದ್ದರಿಂದ ಮತ ಚಲಾಯಿಸುವವರ ಸಂಖ್ಯೆ ಕಡಿಮೆಯಾಯಿತೆಂದು ಅನೇಕ ರಾಜಕಾರಣಿಗಳ ಅಪಲಾಪ. ಅವರು ಹೇಳುವುದು ಒಂದರ್ಥದಲ್ಲಿ ನಿಜ. ನಿಯಮಗಳು ಬಿಗಿಯಾದ್ದರಿಂದ ಹಣ, ಹೆಂಡ ಸಿಗದ ಕಾರಣ ಜನ ಬೇಸತ್ತು ಓಟು ಮಾಡುವುದನ್ನು ಬಿಟ್ಟಿದ್ದಾರೆ. ಹಾಗೆ ಬಿಗಿ ಮಾಡಬೇಡಿ, ಹಣ, ಮದ್ಯ ಹಂಚಲು ಅವಕಾಶ ಮಾಡಿಕೊಡಿ ಎಂಬುದು ಅವರ ಮಾತಿನ ತಾತ್ಪರ್ಯವಿರಬೇಕು! ಚುನಾವಣೆಗೆ ಕೋಟಿಗಟ್ಟಲೆ ಹಣ ಸುರಿಯುವ ಈ ಅಸಾಮಾನ್ಯ ಜನರ ಲೆಕ್ಕಾಚಾರವಿದ್ದಂತೆ ದೈನಂದಿನ ಹೊಟ್ಟೆಪಾಡಿಗೆ ಪರದಾಡುವ ಜನಸಾಮಾನ್ಯರ ಲೆಕ್ಕಾಚಾರವೂ ಇರುತ್ತದೆಯಲ್ಲವೇ? ಹೊಟ್ಟೆಪಾಡಿನ ಚಿಂತೆಯಿಲ್ಲದ ಪ್ರಜ್ಞಾವಂತರಿರುವ ಅಮೇರಿಕಾದಲ್ಲಿಯೂ ಮತ ಚಲಾಯಿಸುವವರ ನೂರಕ್ಕೆ ನೂರು ಇಲ್ಲ.ಅಲ್ಲಿಯೂ ಮೊನ್ನೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮತ ಚಲಾಯಿಸಿದವರ ಸಂಖ್ಯೆ ಶೇಕಡ 55 ದಾಟಿಲ್ಲ. ಮತ ಚಲಾಯಿಸುವುದು ಕಡ್ಡಾಯವಾಗಬೇಕು. ಓಟು ಮಾಡದೇ ಇರುವ ಮತದಾರರು ಸರ್ಕಾರಿ/ಖಾಸಗಿ ಸೇವೆಯಲ್ಲಿದ್ದರೆ ಅವರ ಬಡ್ತಿಯನ್ನು ಖಾಯಂ ಆಗಿ ನಿಲ್ಲಿಸಬೇಕು. ಜನಸಾಮಾನ್ಯರಾಗಿದ್ದರೆ ಸರ್ಕಾರದಿಂದ ದೊರೆಯುವ ರಿಯಾಯಿತಿ ಸೌಲಭ್ಯಗಳನ್ನು ನಿಲ್ಲಿಸಬೇಕು.
ಇಂದಿನ ರಾಜಕೀಯ ದೊಂಬರಾಟವನ್ನು ನಿಲ್ಲಿಸಲು ಚುನಾವಣಾ ಆಯೋಗಕ್ಕೆ ನಮ್ಮ ಕೆಲವು ಸಲಹೆಗಳು ಇಂತಿವೆ:
- ರಾಜಕೀಯಪಕ್ಷಗಳು ಯಾವ ಮಾನಮರ್ಯಾದೆ ಇಲ್ಲದೆ ರಾಜಕೀಯ ವ್ಯಭಿಚಾರ ನಡೆಸುವ ಕೆಂಪುದೀಪದ ತಾಣಗಳಂತಾಗಿರುವುದರಿಂದ ಚುನಾವಣಾ ಆಯೋಗವು ಚುನಾವಣೆಯ ದಿನಾಂಕವನ್ನು ಪ್ರಕಟಿಸುವುದಕ್ಕಿಂತ ಮುಂಚೆ ಕನಿಷ್ಠ ಒಂದು ತಿಂಗಳ ಗಡುವು ಕೊಟ್ಟು ಅಷ್ಟರೊಳಗೆ ಪ್ರತಿಯೊಂದು ಪಕ್ಷವೂ ಸಂಭವನೀಯ ಅಭ್ಯರ್ಥಿಗಳ (probable candidates) ಪಟ್ಟಿಯನ್ನು ಅದು ಎಷ್ಟೇ ದೊಡ್ಡದಿರಲಿ ಆಯೋಗಕ್ಕೆ ಸಲ್ಲಿಸಿ ನೋಂದಾಯಿಸುವಂತೆ ಮಾಡಬೇಕು.
- ರಾಜಕೀಯ ಒಂದು ಲಾಭದಾಯಕ ದಂಧೆಯಾಗಿರುವುದರಿಂದ ಅಭ್ಯರ್ಥಿಗಳು ಈಗಿರುವಂತೆ ಆಸ್ತಿವಿವರ, ಲೆಕ್ಕಪತ್ರ ಕೊಡುವುದಲ್ಲದೆ ಯಾವ ಪಕ್ಷಕ್ಕೆ ಸೇರಿದವರೆಂದು Declaration of Party Affiliation ಕೊಡಬೇಕು.
- ಚುನಾವಣೆ ದಿನಾಂಕವನ್ನು ಘೋಷಿಸಿದ ಒಂದು ವಾರದೊಳಗೆ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿ ಯಾರು ಎಂದು ಆಯೋಗಕ್ಕೆ ತಿಳಿಸಬೇಕು. ಹಿಂದೆ ನೊಂದಾಯಿಸಿದವರ ಹೆಸರನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡಲು ಅವಕಾಶವಿರಬಾರದು.
- ಟಿಕೆಟ್ ಸಿಗದವರು ಬೇರೆ ಪಕ್ಷಕ್ಕೆ ವಲಸೆ ಹೋಗಲು ಅವಕಾಶವಿರಬಾರದು. ಸ್ವತಂತ್ರವಾಗಿ ನಿಲ್ಲಲು ಅವಕಾಶ ಕಲ್ಪಿಸಿಕೊಡಬಹುದು.ವೈಯಕ್ತಿಕ ನಿಂದನೆ, ಪರಸ್ಪರ ಕೆಸರು ಸಿಡಿಸುವವರನ್ನು ಅನರ್ಹಗೊಳಿಸಬೇಕು.
- ಸ್ವತಂತ್ರವಾಗಿ ನಿಂತು ಗೆದ್ದವನು ಯಾವ ಪಕ್ಷವನ್ನಾದರೂ ಬೆಂಬಲಿಸಲು ಸ್ವತಂತ್ರನು. ಆದರೆ ಯಾವುದೇ ಸರ್ಕಾರದಲ್ಲಿ ಮಂತ್ರಿಪದವಿಯನ್ನು ಅಥವಾ "ನಿಗಮಾಗಮ"ಗಳ ಸ್ಥಾನ ಪಡೆಯಲು ಅವಕಾಶವಿರಬಾರದು. ಬಹುಮತವಿಲ್ಲದ
ಪಕ್ಷವು ಸರ್ಕಾರದ ರಚನೆಗಾಗಿ ಅವನಿಗೆ ಅಧಿಕಾರದ ಆಮಿಷ ತೋರಿಸಿ ಸಲಾಮು ಹೊಡೆಯುವಂತಾಗಬಾರದು.
ಹೀಗೆ ಮಾಡದಿದ್ದರೆ ಅಧಿಕಾರಕ್ಕಾಗಿ ಕಿತ್ತಾಟಗಳು ನಡೆದು ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾದಂತೆ ಜನರ ಪರಿಸ್ಥಿತಿಯುಂಟಾಗುತ್ತದೆ. ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ತನ್ನ ಕುರ್ಚಿಯನ್ನು ಉಳಿಸಿಕೊಳ್ಳುವುದೇ ಪ್ರಧಾನವಾಗಿ ಜನಸಾಮಾನ್ಯರ ವಿಚಾರವಾಗಿ ಚಿಂತಿಸಲು ಪುರಸೊತ್ತೇ ಇಲ್ಲದಂತಾಗುತ್ತದೆ. ಇಂತಹ ನಿಯಮಗಳನ್ನು ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯೇ? ಇಲ್ಲದಿದ್ದರೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಮೂರು ಬಾರಿಯಲ್ಲ ನೂರು ಬಾರಿ ಹೊಲೆತೆಗೆಯುವ ಈ ರಾಜಕೀಯ ಕಳ್ಳಬೆಕ್ಕುಗಳ ಕೊರಳಿಗೆ ಗಂಟೆ ಕಟ್ಟುವವರು ಯಾರು?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 13.5.2009.