ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ

  •  
  •  
  •  
  •  
  •    Views  

ಳೆದ ವಾರ ಸಕಲೇಶಪುರದ ಸಮೀಪದಲ್ಲಿರುವ ಜೋಡಿಹೊನ್ನವಳ್ಳಿ ಎಂಬ ಒಂದು ಚಿಕ್ಕಹಳ್ಳಿಯಲ್ಲಿ ನೂತನ ದೇವಾಲಯದ ಒಂದು ಕಾರ್ಯಕ್ರಮವಿತ್ತು. ಆ ಹಳ್ಳಿಗೆ ಇದೇ ಮೊದಲು ಹೋಗುತ್ತಿದ್ದುದರಿಂದ ಊರಲ್ಲಿ ಹೆಚ್ಚಿನ ಸಂಭ್ರಮ ಸಡಗರ ಕಾಣಿಸುತ್ತಿತ್ತು. ಕಾರ್ಯಕ್ರಮವನ್ನು ನಾವು ಒಪ್ಪಿಕೊಂಡ ಮೇಲೆ ಹಳ್ಳಿಯ ಯುವಕರಲ್ಲಿ ಉತ್ಸಾಹದ ಬುಗ್ಗೆ ಚಿಮ್ಮಿತ್ತು. ಅರ್ಧಕ್ಕೇ ನಿಂತಿದ್ದ ಕೆಲಸಕಾರ್ಯಗಳೆಲ್ಲವೂ ಮಿಂಚಿನ ವೇಗದಲ್ಲಿ ಪೂರ್ಣಗೊಂಡಿದ್ದವು. ಊರಿಗೆ ಊರೇ ಸಿಂಗಾರಗೊಂಡು ನಮ್ಮ ಬರವಿಗಾಗಿ ಕಾಯುತ್ತಿತ್ತು. ಊರ ಬಾಗಿಲಲ್ಲಿ ಸಾಲುಸಾಲಾಗಿ ನಿಂತಿದ್ದ ಸುಮಂಗಲೆಯರು ಸಾಂಪ್ರದಾಯಿಕವಾಗಿ ತಲೆಯ ಮೇಲೆ ಬಿಂದಿಗೆಗಳನ್ನು ಹೊತ್ತು ಬರಿಗಾಲಲ್ಲಿ ನಡೆದು ಪೂರ್ಣಕುಂಭ ಸ್ವಾಗತ ನೀಡಿದರು. ದಿನನಿತ್ಯ ಬೀದಿಗಳಲ್ಲಿ ಕಷ್ಟಪಟ್ಟು ನಲ್ಲಿಯ ನೀರು ಹಿಡಿಯುವ ಈ ಮಹಿಳೆಯರಿಗೆ ದೇವರ ಸೇವೆ ಮಾಡುವಾಗಲೂ ಕಷ್ಟ ತಪ್ಪಲಿಲ್ಲವಲ್ಲಾ ದೇವರೇ ಎನಿಸಿತು! ಆದರೆ ಅವರಿಗೆ ಅದೊಂದು ಕಷ್ಟದಾಯಕವಾದ ಕಾರ್ಯ ಎಂದೆನಿಸಿರಲಿಲ್ಲ. ತಲೆಯ ಮೇಲಿರುವ ಬಿಂದಿಗೆಗಳಲ್ಲಿ ಗಂಗಾಜಲ ತುಂಬಿದ್ದರೆ ಅವರ ಮುಖಭಾವದಲ್ಲಿ ಭಕ್ತಿಯ ರಸಗಂಗೆ ತುಂಬಿ ತುಳುಕುತ್ತಲಿತ್ತು! ಸಾಮಾನ್ಯ ಜನರಿಗೆ ಏನೊಂದು ಅರ್ಥವಾಗದ ಈ ಬ್ರಹ್ಮಾಂಡದ ಒಳಹೋರಗೆ ಆವರಿಸಿರುವ ಸಾಸಿರ ತಲೆ ಸಾಸಿರ ಕಣ್ಣು ಸಾಸಿರ ಪಾದಗಳ ವಿಶ್ವಾತ್ಮನನ್ನು ಕುರಿತ ಉದಾತ್ತ ಅರ್ಥವುಳ್ಳ ಪುರೋಹಿತರ ಪುರುಷ-ಸೂಕ್ತ ಮಂತ್ರಘೋಷ ಉದಾತ್ತಾನುದಾತ್ತಸ್ವರಿತಗಳ ಏರಿಳಿತಗಳಿಂದ ಕಿವಿಗಳಿಗೆ ಇಂಪಾಗಿ ಅನುರಣಿಸುತ್ತಿತ್ತು. ಮಂಗಳವಾದ್ಯಗಳ ನಿನಾದದ ಮಧ್ಯೆ ಊರ ಬೀದಿಯಲ್ಲಿ ನಡೆಯುವಾಗ ದಾರಿಯುದ್ದಕ್ಕೂ ಯುವಕರು ಪಟಾಕಿಗಳನ್ನು ಸಿಡಿಸಿ ಕೇಕೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರು. ವೇದಿಕೆಯ ಮೇಲೆ ಹೋಗಿ ಕುಳಿತೊಡನೆಯೇ ಸಭಾಕಾರ್ಯಕ್ರಮಗಳು ಆರಂಭವಾದವು.

ಚುನಾವಣಾ ನೀತಿಸಂಹಿತೆಯ ಕಾರಣದಿಂದಾಗಿ ಡೊಂಕುಬಾಲದ ನಾಯಕರ ಸಂದಣಿ ಅಷ್ಟಾಗಿ ಇರಲಿಲ್ಲ, ಧಾರ್ಮಿಕ ಸಮಾರಂಭಗಳಲ್ಲಿ ರಾಜಕಾರಣಿಗಳು ಭಾಗವಹಿಸುವುದು ಸರಿಯಲ್ಲವೆಂಬ ಭಾವನೆ ಇತ್ತೀಚೆಗೆ ಜನರಲ್ಲಿ ಮೂಡುತ್ತಿದೆ. ರಾಜಕಾರಣಿಗಳ ಮನಸ್ಸಿನಲ್ಲೂ ಬೇರಾವುದೋ ಸಮಾರಂಭದಲ್ಲಿ ಮಾತನಾಡಿದಂತೆ ಧಾರ್ಮಿಕ ಸಮಾರಂಭಗಳಲ್ಲಿ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಬಾರದೆಂಬ ಮಡಿಮೈಲಿಗೆಯ ಭಾವನೆ ಇದ್ದಂತೆ ತೋರುತ್ತದೆ. ಶಿಷ್ಯರು ನಮ್ಮ ಮಾತುಗಳನ್ನು ಕಿವಿಗೊಟ್ಟು ಆಲಿಸಿದರು. ಸಕಾಲದಲ್ಲಿ ಸಭೆ ಮುಗಿಯಿತು. ಸಮಾರಂಭದ ಕೊನೆಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡಂತೆ ಶಿಷ್ಯರು ಸಾಲುಗಟ್ಟಿ ನಮಸ್ಕರಿಸಲು ಮುಂದೆ ಬಂದರು. ನಾವು ಗಮನಿಸಿದಂತೆ ತಾಯಂದಿರು ಆಶೀರ್ವಾದ ಪಡೆಯುವಾಗ ಕಂಕುಳದಲ್ಲಿರುವ ತಮ್ಮ ಎಳೆಯ ಮಕ್ಕಳನ್ನು ಗುರುಗಳ ಪಾದಕ್ಕೆ ಅಡ್ಡಬೀಳಿಸಿ ನಂತರ ಅವರು ನಮಸ್ಕರಿಸುತ್ತಾರೆ. ತಮಗೆ ಒಳ್ಳೆಯದನ್ನು ಬೇಡಿಕೊಳ್ಳುವ ಮುನ್ನ ತಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವ ನಿಸ್ವಾರ್ಥ ಬುದ್ಧಿ ಅವರಲ್ಲಿರುತ್ತದೆ. ಹೀಗಾಗಿ ಮಕ್ಕಳ ಕೈಯಿಂದ ಕಾಣಿಕೆಯನ್ನು ಕೊಡಿಸಿ ಆಶೀರ್ವಾದ ಬೇಡುತ್ತಾರೆ. ಕೆಲವೊಂದು ಮಕ್ಕಳು ತಾಯಿ ಕೊಟ್ಟ ಹಣವನ್ನು ಬಿಗಿಯಾಗಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುತ್ತವೆ. ಅಷ್ಟು ಸುಲಭವಾಗಿ ಕೊಡುವುದಿಲ್ಲ. ನಾವು ಅವರ ಕೈಯಿಂದ ತೆಗೆದುಕೊಳ್ಳಲಿ ಎಂದು ತಾಯಂದಿರು ಅಪೇಕ್ಷಿಸುತ್ತಾರೆ. ಆದರೆ ಮಕ್ಕಳ ಬಿಗಿಮುಷ್ಟಿಯಲ್ಲಿರುವ ಕಾಣಿಕೆಯನ್ನು ಪಡೆಯಲು ನಮಗೆ ಮನಸ್ಸಾಗುವುದಿಲ್ಲ. ಮಕ್ಕಳಿಂದ ಕಸಿದುಕೊಂಡಂತಾಗುತ್ತದೆಯೆಂಬ ವೇದನೆ ನಮಗೆ. ಗುರುಗಳು ಕಾಣಿಕೆಯನ್ನು ಮುಟ್ಟಲಿಲ್ಲವಲ್ಲಾ ತಮ್ಮ ಮಗುವಿಗೆ ಆಶೀರ್ವಾದ ದೊರೆಯಲಿಲ್ಲವಲ್ಲಾ ಎಂಬ ವೇದನೆ ತಾಯಂದಿರಿಗೆ! ಅವರೇ ಮಕ್ಕಳ ಕೈಯಿಂದ ಬಲವಂತವಾಗಿ ಹಣವನ್ನು ಬಿಡಿಸಿಕೊಂಡು ನಮಗೆ ಕೊಟ್ಟರೂ ಎಷ್ಟೋ ವೇಳೆ ವಾಪಾಸು ಮಕ್ಕಳಿಗೆ ಕೊಟ್ಟಮೇಲೆಯೇ ನಮಗೆ ಸಮಾಧಾನವಾಗಿರುವುದು. ಮಕ್ಕಳಿಗೆ ಎಂದೂ ಅಷ್ಟೊಂದು ಹಣ ಕೈಗೆ ಸಿಕ್ಕಿರುವುದಿಲ್ಲ. ಹೀಗಾಗಿ ಅಪರೂಪಕ್ಕೆ ಕೈಗೆ ಸಿಕ್ಕ ಹಣವನ್ನು ಕೊಡಲು ಹೇಗೆ ಅವರಿಗೆ ಮನಸ್ಸು ಬರುತ್ತದೆ ಹೇಳಿ! ಅದರಲ್ಲಿ ಅದೆಷ್ಟೋ ಚಾಕಲೇಟ್ ಗಳು ಪೆಪ್ಟರ್ಮೆಂಟ್ ಗಳು ಅವರಿಗೆ ಕಾಣಿಸುತ್ತವೆಯೋ ಏನೋ! ಬಲವಂತವಾಗಿ ತೆಗೆದುಕೊಂಡರೆ ನಮ್ಮನ್ನು ಅದೆಂತಹ ಕ್ರೂರಿಗಳು ಇವರೆಂದು ಮಕ್ಕಳು ಶಪಿಸುವುದಂತು ಖಚಿತ! ಒಮ್ಮೊಮ್ಮೆ ಹಳ್ಳಿಯ ಮಹಿಳೆಯರು ಆರ್ಥಿಕವಾಗಿ ಎಷ್ಟೊಂದು ಅಸ್ವತಂತ್ರರು ಎಂಬುದು ನಿಚ್ಚಳವಾಗಿ ಕಾಣಿಸುತ್ತದೆ. ಕಾಣಿಕೆಯನ್ನು ಕೊಟ್ಟು ನಮಸ್ಕರಿಸಲು ಅವರ ಹತ್ತಿರ ಹಣವಿರುವುದಿಲ್ಲ. ಪಕ್ಕದಲ್ಲಿರುವ ಗಂಡನ ಕಡೆ ನೋಡುತ್ತಾರೆ. ಅವನು ಜೇಬಿನಿಂದ ತೆಗೆದುಕೊಟ್ಟಿದ್ದನ್ನು ಕೊಟ್ಟು ನಮಸ್ಕರಿಸುತ್ತಾರೆ.

ಹಳ್ಳಿಗಳಲ್ಲಿ ಪುರುಷರು ಕಾಣಿಕೆ ಕೊಟ್ಟು ಅಡ್ಡಬೀಳುವಾಗ ಮೊದಮೊದಲು ಅವರ ಜೇಬಿನಿಂದ ಬೀಡಿ ಬೆಂಕಿಪೊಟ್ಟಣಗಳು ಅಡ್ಡಬೀಳುತ್ತಿದ್ದವು. ಆದರೆ ಕಾಲಮಾನ ಬದಲಾವಣೆಯಾದಂತೆ ಈಗೀಗ ಸುಪ್ರಭಾತ ಹಾಡುತ್ತಾ ಮೊಬೈಲ್ ಫೋನುಗಳು ಆಡ್ಡಬೀಳುತ್ತವೆ! ಅವು ಬೀಳುವ ಮೊದಲೇ ಜೇಬಿಗೆ ಕೈಹಾಕಿ ಅವುಗಳನ್ನು ಸದ್ದುಗದ್ದಲವಿಲ್ಲದೆ ಎಗರಿಸುವ ಕೈಚಳಕವುಳ್ಳ ಕಳ್ಳಭಕ್ತರೂ ನಮಸ್ಕರಿಸುವವರ ಸಾಲಿನಲ್ಲಿ ಇರುತ್ತಾರೆ. ಬಸವಣ್ಣನವರ ಕಾಲದಲ್ಲಿ ರಾತ್ರಿ ಹೊತ್ತು ಮಲಗಿದ್ದಾಗ ಅವರ ಧರ್ಮಪತ್ನಿ ನೀಲಾಂಬಿಕೆಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಕದಿಯಲು ವಿಫಲ ಪ್ರಯತ್ನ ನಡೆಸಿದ ಕಳ್ಳಭಕ್ತರು ಇದ್ದರಲ್ಲವೇ ಹಾಗೆ! ಕೆಲವೊಮ್ಮೆ ಕಾಣಿಕೆ ಕೊಟ್ಟು ನಮಸ್ಕರಿಸುವಾಗ ಜೇಬಿನಲ್ಲಿದ್ದ ಚಿಲ್ಲರೆ ಹಣ ಕೆಳಕ್ಕೆ ಬೀಳುತ್ತದೆ. ಬಿದ್ದ ಮೊಬೈಲ್ ಫೋನನ್ನು ಎತ್ತಿಕೊಳ್ಳುತ್ತಾರೆಯೇ ವಿನಾ ಜೇಬಿನಿಂದ ಬಿದ್ದ ಪುಡಿಗಾಸನ್ನು ಎತ್ತಿಕೊಂಡು ಜೇಬಿಗೆ ಹಾಕಿಕೊಳ್ಳುವುದಿಲ್ಲ. ಸಂಪ್ರದಾಯದ ನೆರಳಲ್ಲಿ ಬೆಳೆದ ಕೆಲವರು ಗುರುಗಳಿಗೆ ಅಡ್ಡಬೀಳುವಾಗ ಜೇಬಿನಿಂದ ಬಿದ್ದ ಹಣ ತಮ್ಮದಲ್ಲವೆಂದು ಪರಿಭಾವಿಸುತ್ತಾರೆ. ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದ್ದರೂ ಬಿದ್ದ ಪುಡಿಗಾಸನ್ನೂ ಗುರುಗಳ ಕಾಣಿಕೆಯ ಬುಟ್ಟಿಗೆ ಹಾಕಿ ಕೃತಾರ್ಥಭಾವನೆ ಹೊಂದುತ್ತಾರೆ.

ಕೆಲವೊಮ್ಮೆ ಶಿಷ್ಯರ ಮನೆಗೆ ಹೋದಾಗ ಅವರು ಸಮರ್ಪಿಸುವ ಪಾದಕಾಣಿಕೆ ಆಗತಾನೇ ರಿಸರ್ವ್ ಬ್ಯಾಂಕಿನ ಟಂಕಸಾಲೆಯಿಂದ ಅಚ್ಚಾಗಿ ಹೊರಬಂದ ಹೊಚ್ಚ ಹೊಸ ನೋಟಿನ ಕಂತೆಯಾಗಿರುತ್ತದೆ. ಆ ನೋಟುಗಳನ್ನು ಯಾರೂ ಮುಟ್ಟಿರುವುದಿಲ್ಲ ಉಗುಳು ಹಚ್ಚಿ ಎಣಿಸಿರುವುದಿಲ್ಲ, ಯಾವ ವ್ಯಾಪಾರಿಗಳೂ ಆ ನೋಟುಗಳ ಮೇಲೆ ಲೆಕ್ಕ ಬರೆದಿರುವುದಿಲ್ಲ. ಅಂತಹ ಪರಿಶುಭ್ರವಾದ ಗರಿ ಗರಿ ನೋಟುಗಳನ್ನೇ ವಿಶೇಷವಾಗಿ ಕಾಳಜಿ ವಹಿಸಿ ತಂದು ಸಮರ್ಪಿಸುವ ಭಕ್ತಿಸಂಪನ್ನ ಶಿಷ್ಯರು ಇದ್ದಾರೆ. ಅಂಥವರನ್ನು ನೋಡಿದಾಗ ಮಹಾಕವಿ ಹರಿಹರನ ಬಸವರಾಜದೇವರ ರಗಳೆಯ ತೃತೀಯ ಸ್ಥಲದ ಈ ಮುಂದಿನ ಸಾಲುಗಳು ನೆನಪಿಗೆ ಬರುತ್ತವೆ:

ಅಳಿಯೆರಗದನಿಲನಲುಗದ ರವಿಕರಂ ಪುಗದ
ಸುರುಚಿರಮೆನಿಪ್ಪ ಮೀಸಲ ಮೊಗ್ಗೆಯಂ ಕೊಂಡು

ಬಾಲಕ ಬಸವಣ್ಣ ಸೂರ್ಯೋದಯಕ್ಕೆ ಮುನ್ನವೇ ಎದ್ದು ಹೂವಿನ ತೋಟಕ್ಕೆ ಹೋಗಿ ಅಳಿಯೆರಗದ ಅಂದರೆ ದುಂಬಿಗಳು ಮುಟ್ಟದ, ಅನಿಲನಲುಗದ ಅಂದರೆ ಗಾಳಿಯೂ ಅಲುಗಾಡಿಸದ, ರವಿಕರಂ ಪುಗದ ಅಂದರೆ ಸೂರ್ಯನ ಕಿರಣಗಳು ಇನ್ನೂ ತಾಗದ ಸುರುಚಿರಮೆನಿಪ್ಪ ಅಂದರೆ ಸುವಾಸನೆಯಿಂದ ಕೂಡಿದ ಮೀಸಲು ಮೊಗ್ಗುಗಳನ್ನು ಆಯ್ದು ತಂದು ಕಪ್ಪಡಿ ಸಂಗಮನಾಥನ ಅರ್ಚನೆಯನ್ನು ಮಾಡುತ್ತಿದ್ದನಂತೆ! 

ಆ ಹಳ್ಳಿಯಲ್ಲಿ ನಮಸ್ಕರಿಸಲು ನಿಂತಿದ್ದವರ ಸಾಲಿನಲ್ಲಿ ಐದಾರು ವರ್ಷದ ಒಬ್ಬ ಬಾಲಕನಿದ್ದ. ಯಾರೋ ಕಾಣಿಕೆಯನ್ನು ಕೊಡುವಾಗ ಕೈತಪ್ಪಿ ನಮ್ಮ ಪಾದದ ಸನಿಹದಲ್ಲಿ ಬೀಳಿಸಿದ್ದ ನಾಣ್ಯದ ಮೇಲೆ ಅವನ ಕಣ್ಣು ನೆಟ್ಟಿತ್ತು. ಅದನ್ನು ಎತ್ತಿಕೊಳ್ಳಲು ಅವನು ಹವಣಿಸುತ್ತಿರುವಾಗ ಅವನ ತಾಯಿಯು ಹುಬ್ಬುಗಂಟಿಕ್ಕಿ ಅದು ಗುರುಗಳ ಕಾಣಿಕೆ ಹಾಗೆಲ್ಲಾ ಮುಟ್ಟಬಾರದು ಎಂದು ಮೆಲುದನಿಯಲ್ಲಿ ಎಚ್ಚರಿಸಿದಳು. ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ನೀತಿವಾಕ್ಯ ನೆನಪಾಯಿತು. ಇದು ನಮ್ಮ ಧಾರ್ಮಿಕ ಪರಂಪರೆ. ಆದರೆ ಈಗೇನಾಗಿದೆ?

ಮಾರನೆಯ ದಿನ ಬೇರೊಂದು ಊರಿನಲ್ಲಿ ನಮ್ಮ ಸಮ್ಮುಖದಲ್ಲಿ ಇನ್ನೊಂದು ದೇವಾಲಯದ ಕಾರ್ಯಕ್ರಮವಿತ್ತು. ಅದರಲ್ಲಿ ಭಾಗವಹಿಸಿದ್ದ ಶಾಸಕರೊಬ್ಬರು ಯಾವ ಮುಚ್ಚುಮರೆಯಿಲ್ಲದೆ ಅವರ ಅನುಭವಕ್ಕೆ ಬಂದ ಒಂದು ಪ್ರಸಂಗವನ್ನು ಬಹಿರಂಗವಾಗಿ ವಿವರಿಸಿದರು. ಅವರು ಅಭ್ಯರ್ಥಿಯಾಗಿ ಒಂದು ಹಳ್ಳಿಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಾಗ ಆ ಹಳ್ಳಿಯ ಮುಖಂಡರು ಗ್ರಾಮದಲ್ಲಿ ನಿರ್ಮಾಣಮಾಡುತ್ತಿದ್ದ ನೂತನ ದೇವಾಲಯದ ಕಟ್ಟಡಕ್ಕೆ 10 ಸಾವಿರ ರೂ. ದೇಣಿಗೆಯನ್ನು ಕೇಳಿ ಅವರಿಂದ ಪಡೆದರಂತೆ. ಚುನಾವಣಾ ಫಲಿತಾಂಶ ಹೊರಬಿದ್ದಾಗ ಅವರು ಗೆದ್ದರೂ ಆ ಹಳ್ಳಿಯಿಂದ ನಿರೀಕ್ಷಿಸಿದಷ್ಟು ಓಟು ಬಿದ್ದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆ ಶಾಸಕರು ಹಳ್ಳಿಯ ಜನರು ನಂತರ ದೇವಾಲಯ ಕಟ್ಟಿ ಪೂರೈಸಿದ ಮೇಲೆ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋದಾಗ ಒಪ್ಪಲಿಲ್ಲವಂತೆ. “ನೀವು ನನಗೆ ಓಟು ಕೊಟ್ಟಿಲ್ಲ ನಿಮ್ಮ ಹಳ್ಳಿಗೆ ಏಕೆ ಬರಬೇಕು?” ಎಂದು ಅಸಮಾಧಾನ ವ್ಯಕ್ತಪಡಿಸಿದರಂತೆ. ಅದಕ್ಕೆ ಆ ಹಳ್ಳಿಯ ಜನರು “ಇಲ್ಲಾ ಸಾರ್, ನೀವು ದಯಮಾಡಿ ಬರಬೇಕು, ನೀವು ಯಾರಿಗೆ ದುಡ್ಡು ಕೊಟ್ಟಿದ್ದಿರೋ ಅವರು ನಿಮಗೇ ಓಟು ಹಾಕಿದ್ದಾರೆ, ಮೋಸ ಮಾಡಿಲ್ಲ, ಉಳಿದವರು ಮಾತ್ರ ಹಾಕಿಲ್ಲ, ಬೇಸರಪಟ್ಟುಕೊಳ್ಳಬೇಡಿ!” ಎಂದು ಹೇಳಿದರಂತೆ. ಊರ ದೇವಾಲಯಕ್ಕೆ ದುಡ್ಡು ಕೊಟ್ಟರೆ ಊರ ಜನರೆಲ್ಲಾ ತನಗೆ ಓಟು ಹಾಕುತ್ತಾರೆಂಬ ಆ ಶಾಸಕರ ಲೆಕ್ಕಾಚಾರ ತಲೆಕೆಳಗಾಗಿತ್ತು! ಇದರಲ್ಲಿ ತಪ್ಪು ಯಾರದು? ಶಾಸಕರದೇ, ಊರ ಪ್ರಮುಖರದೇ? ಶಾಸಕರು ಕೊಟ್ಟ ಹಣವನ್ನು ದೇವಾಲಯಕ್ಕೆ ಕೊಟ್ಟ ದಾನವೆಂದು ಪರಿಗಣಿಸಬಹುದೇ? ಊರ ಪ್ರಮುಖರು ಸ್ವಂತಕ್ಕೆ ಹಣ ಪಡೆಯದೆ ಒಂದು ಪುಣ್ಯಕಾರ್ಯಕ್ಕೆ ಪಡೆದ ನಿಃಸ್ವಾರ್ಥಿಗಳೆಂದು ಪ್ರಶಂಸಿಸಬಹುದೇ? ಆ ಶಾಸಕರು ಹಣ ಕೊಟ್ಟಿದ್ದು ದೇವರ ಮೇಲಿನ ಭಕ್ತಿಯಿಂದಲ್ಲ; ಓಟನ್ನು ಪಡೆಯುವ ಯುಕ್ತಿಯಿಂದ! ಊರ ಪ್ರಮುಖರಿಗೆ ದೇವರ ಮೇಲಿನ ಭಕ್ತಿಯೇನೊ ಇದೆ. ಆದರೆ ಅವರು ಮಾಡಿದ್ದು ಮತದಾನವಲ್ಲ; ಮತ ಮಾರಾಟ!  

ಇಂಥಹುದೇ ಇನ್ನೊಂದು ಪ್ರಕರಣ. ಒಂದೂರಲ್ಲಿ ಬಸವಣ್ಣನ ಗುಡಿಯ ಕೆಲಸ ಅರ್ಧಕ್ಕೆ ನಿಂತಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಬಂತು. ಅಧ್ಯಕ್ಷನ ಚುನಾವಣೆ ಆಗಬೇಕಾಗಿತ್ತು. ಹಳ್ಳಿಯಲ್ಲಿರುವ ಎಲ್ಲಾ ರಾಜಕೀಯಪಕ್ಷದವರೂ ಸೇರಿದರು. ಎಲ್ಲರೂ ಆ ದೇವರ ಭಕ್ತರು. ಸರಿ, ಸರ್ವಾನುಮತದಿಂದ ತೀರ್ಮಾನವಾಯಿತು: “ಯಾರು ಬಸವಣ್ಣನ ಗುಡಿಗೆ ಹೆಚ್ಚಿನ ದೇಣಿಗೆಯನ್ನು ಕೊಡುತ್ತಾರೋ ಅವರೇ ಗ್ರಾಮ ಪಂಚಾಯಿತಿ ಅಧ್ಯಕ್ಷರು”. ಗುಡಿಯ ಮುಂದೆ ಬಹಿರಂಗ ಹರಾಜು ಹಾಕಲಾಯಿತು. ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಗಳಿಗೆ ಹರಾಜು ನಿಂತಿತು. ದುಡ್ಡು ಕಟ್ಟಿದ ರಾಜಕೀಯ ಪಕ್ಷದವನು ಅಧ್ಯಕ್ಷನಾದ! ಇದನ್ನು ಇತ್ತೀಚೆಗೆ ಕೇಳಿಬರುತ್ತಿರುವ ರಾಜಕೀಯ ಒಳ ಒಪ್ಪಂದ ಎನ್ನಬಹುದೇ? ನಮಗೆ ತಿಳಿದಮಟ್ಟಿಗೆ ಇದು ಹಳ್ಳಿಯ ಜಾತ್ರೆಗಳಲ್ಲಿ ದೇವರ ಪಟ ಮತ್ತು ಹಾರ ಹರಾಜು ಹಾಕುವ ವಿನೂತನ ಭಕ್ತಿಸಮರ್ಪಣೆಯ ಪ್ರಭಾವ. ಸದ್ಯ ದೇವರನ್ನು ಹರಾಜು ಹಾಕುತ್ತಿಲ್ಲ! ಇಲ್ಲಿ ಹರಾಜಾಗಿದ್ದು ಧರ್ಮವೋ, ಪ್ರಜಾಪ್ರಭುತ್ವವೋ?

ನಮಗೆ ಈ ಸಂದರ್ಭದಲ್ಲಿ ಜಪಾನ್ ದೇಶದ ಒಂದು ರೋಚಕ ಕಥೆ ನೆನಪಾಗುತ್ತದೆ. ಒಬ್ಬ ಕಳ್ಳ ನಡುರಾತ್ರಿಯಲ್ಲಿ ಒಂದು ಮನೆಯೊಳಗೆ ಕನ್ನ ಕೊರೆದು ನುಗ್ಗಿದ. ಮನೆಯ ಮಾಲೀಕ ಗಾಢ ನಿದ್ರೆಯಲ್ಲಿದ್ದ, ಕಳ್ಳ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿ ಗಂಟುಕಟ್ಟಿಕೊಂಡು ಇನ್ನೇನು ಹೊರಡಲಿದ್ದ. ಆ ವೇಳೆಗೆ ಮನೆಯ ಯಜಮಾನನಿಗೆ ಎಚ್ಚರವಾಯಿತು. ಕಳ್ಳ, ತಕ್ಷಣವೇ ಓಡಿಹೋಗದಂತೆ ಏನು ಮಾಡಬೇಕೆಂದು ಯೋಚಿಸಿದ. ಅವನಿಗೊಂದು ಉಪಾಯ ಹೊಳೆಯಿತು. ತಾನು ಮಲಗಿದ್ದ ಮಂಚದ ಪಕ್ಕದಲ್ಲಿದ್ದ ಟೇಪ್‌ ರೆಕಾರ್ಡ್ನಲ್ಲಿ ಜಪಾನ್ ದೇಶದ ರಾಷ್ಟ್ರಗೀತೆಯನ್ನು ಜೋರಾಗಿ ಕೇಳಿಸುವಂತೆ ಹಾಕಿದನಂತೆ. ರಾಷ್ಟ್ರಗೀತೆಯನ್ನು ಕೇಳಿದ ಕಳ್ಳ ಕೈಯಲ್ಲಿದ್ದ ಗಂಟನ್ನು ಕೆಳಗೆ ಇಟ್ಟು ಸೆಲ್ಯೂಟ್ ಹೊಡೆದು ನಿಂತುಕೊಂಡನಂತೆ! ಆ ಸಮಯವನ್ನು ಬಳಸಿಕೊಂಡು ಮನೆಯ ಮಾಲೀಕ ದೂರವಾಣಿಯಲ್ಲಿ ಪೊಲೀಸರಿಗೆ ತನ್ನ ಮನೆಯಲ್ಲಿ ಕಳ್ಳ ನುಗ್ಗಿದ್ದಾನೆಂಬ ಸುದ್ದಿ ತಿಳಿಸಿದ. ಪೋಲೀಸರು ಕೂಡಲೇ ಅವನ ಮನೆಗೆ ಧಾವಿಸಿ ಸೆಲ್ಯೂಟ್ ಹೊಡೆದು ನಿಂತಿದ್ದ ಕಳ್ಳನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದರು. ನ್ಯಾಯಾಲಯವು ವಿಚಾರಣೆ ನಡೆಸಿ ಕಳ್ಳನ ದೇಶಾಭಿಮಾನವನ್ನು ಪ್ರಶಂಸಿಸಿ ಅವನನ್ನು ಗೌರವಯುತವಾಗಿ ಬಿಡುಗಡೆ ಮಾಡಿತು. ರಾಷ್ಟ್ರಗೀತೆಗೆ ಗೌರವವನ್ನು ತೋರದ, ಅದನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡ ಮನೆಯ ಯಜಮಾನನಿಗೆ ದಂಡ ವಿಧಿಸಿತು!

ಈ ಕಥೆಯ ಹಿನ್ನೆಲೆಯಲ್ಲಿ ನಮ್ಮ ದೇಶದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಅಭ್ಯರ್ಥಿಗಳು ದೇವಾಲಯದ ನಿರ್ಮಾಣಕ್ಕೆಂದು ಹಣ ಕೊಡುವುದಾಗಲೀ ಅವರಿಂದ ದೇವಾಲಯಗಳ ವಿಶ್ವಸ್ಥಮಂಡಳಿಯವರು ಹಣವನ್ನು ಪಡೆಯುವುದಾಗಲೀ ಧರ್ಮಕಾರ್ಯವಾಗಬಲ್ಲುದೇ? ಇದು ಧರ್ಮದ ನೆಪದಲ್ಲಿ ರಾಜಕಾರಣಿಗಳು ಓಟನ್ನು ಖರೀದಿಸುವ, ಮತದಾರರು ಓಟನ್ನು ಮಾರಾಟಮಾಡುವ ಧರ್ಮಬಾಹಿರ ನಡವಳಿಕೆಯಲ್ಲದೆ ಮತ್ತೇನು? “Politics without principles is a sin” ಎಂದು ಗಾಂಧೀಜೀ ಹೇಳುತ್ತಾರೆ. ಅಂತಹ ಪಾಪಕೃತ್ಯವನ್ನು ಇಂದಿನ ರಾಜಕಾರಣಿಗಳು ಮತ್ತು ಮತದಾರರು ಪ್ರತಿ ಚುನಾವಣೆಯಲ್ಲೂ ಮಾಡುತ್ತಾ ಬಂದಿದ್ದಾರೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಅಗ್ಗದ ಜನಪ್ರಿಯತೆ ಗಳಿಸಲು ಸಾಲ ಮನ್ನಾ ಮಾಡುತ್ತವೆ. ಚುನಾವಣೆಯ ಕಾಲದಲ್ಲಿ ಮತದಾರರಿಗೆ ಶ್ರೀಮಂತ ಅಭ್ಯರ್ಥಿಗಳು ಹಂಚಲು ಕೊಟ್ಟ ಕೋಟ್ಯಂತರ ರೂಗಳು ಪಕ್ಷದ ಅನೇಕ ನಿಷ್ಠಾವಂತ ಕಾರ್ಯಕರ್ತರ ಕೈ ಬದಲಾವಣೆಯಾಗುತ್ತಾ ಸಾಗುತ್ತದೆ.ಯಾವುದೇ ದುಡಿಮೆಯಿಲ್ಲದೆ ಈ ಜನ ಮಾಡಿದ ಸಾಲವನ್ನು ತೀರಿಸಲಾಗದೆ ಹೆಣಗಾಡುತ್ತಾ ಇರುವಾಗ ಪ್ರತಿ ಚುನಾವಣೆ ಬಂದಾಗಲೂ ಸಾಲವನ್ನು ತೀರಿಸುವ ಅವರ ತಮನ್ನಾ ಆಯಾಚಿತವಾಗಿ ಈಡೇರುತ್ತದೆ. ಚುನಾವಣಾ ಆಯೋಗವು ಇದೆಲ್ಲವನ್ನೂ ಗಮನಿಸಿದಂತೆ ತೋರುವುದಿಲ್ಲ. ಹಳ್ಳಿ ಹಳ್ಳಿಗಳಲ್ಲಿರುವ ದೇವರುಗಳು ಭ್ರಷ್ಟಾಚಾರದ ಮೂಕ ಪ್ರೇಕ್ಷಕರಾಗಿವೆ. ಚುನಾವಣಾ ಆಯೋಗದ ಮುಂದೆ ಈ ದೇವರುಗಳೇನಾದರೂ ಸಾಕ್ಷಿ ನುಡಿದರೆ ಈಗ ಲೋಕಸಭೆಗೆ ಚುನಾಯಿತರಾಗಿರುವ ಎಲ್ಲ ಸದಸ್ಯರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವುದಂತೂ ಖಚಿತ. ಈ ದೃಷ್ಟಿಯಿಂದ ಅಬ್ರಹಂ ಲಿಂಕನ್ ಹೇಳಿದ “Democracy is the government of the people, by the people, for the people” (ಪ್ರಜಾಪ್ರಭುತ್ವ ಜನರ, ಜನರಿಂದ, ಜನರಿಗಾಗಿ ರೂಪಿತವಾದ ಸರಕಾರ) ಎಂಬ ಮಾತು ಒಂದು ಆದರ್ಶವೇ ಹೊರತು ಭಾರತದ ರಾಜಕೀಯದಲ್ಲಂತೂ ಕಂಡುಬರುವುದಿಲ್ಲ. ಈಗಿರುವ ವಾಸ್ತವತೆಯನ್ನು ಗಮನದಲ್ಲಿರಿಸಿಕೊಂಡು ಹೇಳಬಹುದಾದರೆ ಲಿಂಕನ್ ಮಾತನ್ನು ಈ ಮುಂದಿನಂತೆ ಪರಿಷ್ಕರಿಸಿ ಹೇಳಬೇಕೆನಿಸುತ್ತದೆ: "Democracy is the government of swindlers and criminals: Buy the people, off the people and far from the people!” ಈ ದೇಶದ ಜನರನ್ನು ಎಗ್ಗಿಲ್ಲದೆ ಖರೀದಿ ಮಾಡಲಾಗಿದೆ. ಅವರು ತುಟಿಪಿಟಕ್ ಎನ್ನುವಂತಿಲ್ಲ. ಇನ್ನು ಮುಂದಿನ ಚುನಾವಣೆಯವರೆಗೂ ಅವರ ಹಂಗೇನು? ಹಂಗ್ ಪಾರ್ಲಿಮೆಂಟಿನಲ್ಲಿ ಹೇಗಾದರೂ ಮಾಡಿ ಬಹುಮತ ಸಾಬೀತು ಮಾಡಿ ಸರ್ಕಾರ ರಚಿಸಿ ಹಾಕಿದ ಬಂಡವಾಳವನ್ನು ಬಡ್ಡಿ ಸಮೇತ ದುಡಿದುಕೊಳ್ಳಬೇಕಲ್ಲವೇ? ಈ ದೇಶದ ರಾಜಕಾರಣ “ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ” ಎಂಬ ಗಾದೆಮಾತಿನಂತಾಗಿದೆಯೆಂದು ನಿಮಗೆ ಅನ್ನಿಸುವುದಿಲ್ಲವೇ?

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 20.5.2009.