ನೀನಾರೆಂದು ಹೇಳಾ ಎಲೆ ಅವ್ವಾ!...
ಕಾರು ಮುಂದೆ ಮುಂದೆ ಓಡುತ್ತಿದ್ದರೆ ಮನಸ್ಸು ಗತಕಾಲದ ನೆನಪುಗಳ ಕುದುರೆಯನ್ನೇರಿ ಹಿಂದೆ ಹಿಂದೆ ಧಾವಿಸುತ್ತಿತ್ತು!....
ನಮ್ಮ ಪೂರ್ವಾಶ್ರಮದ ಮಾತೃಶ್ರೀಯವರ ನಿಧನದ ವಾರ್ತೆ ಎಲ್ಲೆಡೆ ಹರಡಿ ಹೊನ್ನಾಳಿ ತಾಲ್ಲೂಕು ಕಂಸಾಗರ ಗ್ರಾಮದ ಜನರಿಗೆ ಅವರ ಊರಿನ ಕಾರ್ಯಕ್ರಮಕ್ಕೆ ನಾವು ಬರುತ್ತೇವೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಈ ಸಂಗತಿಯು ಸಭೆಯ ಕಾರ್ಯಕಲಾಪಗಳು ಆರಂಭವಾದಾಗ ತಿಳಿಯಿತು. ಹೆತ್ತ ತಾಯಿಯ ಸಾವಿನ ಸುದ್ದಿಯನ್ನು ಸಮಾಜದ ಪ್ರಮುಖರು ಸಭೆಯ ಗಮನಕ್ಕೆ ತಂದಾಗ ಶಿಷ್ಯರ ಹೃದಯ ಭಾವುಕತೆಯಿಂದ ಆರ್ದ್ರಗೊಂಡಿತು. ಕಳೆದ ಶತಮಾನದ ಆರಂಭದಲ್ಲಿ ಮಠಕ್ಕೆ ಬೆಳ್ಳಿ ಪಲ್ಲಕ್ಕಿ ಮಾಡಿಸಿಕೊಟ್ಟ ಹೊಳೆಬೆನಕನಹಳ್ಳಿಯ ಸಿದ್ದಪ್ಪಗೌಡರ ವಂಶಜರಾದ ಶಾಂತನಗೌಡರು ಮಾತನಾಡುತ್ತಾ ಶಿಷ್ಯರ ಮನೆಯಲ್ಲಿ ಇಂತಹ ಸಾವು-ನೋವಿನ ಘಟನೆಗಳು ಸಂಭವಿಸಿದಾಗ ಗುರುಗಳು ದಯಮಾಡಿಸುವಂತೆ ಲಿಂಗೈಕ್ಯ ತಾಯಿ ಗಂಗಮ್ಮನವರನ್ನೂ ಸಹ ಸಮಾಜದಲ್ಲಿ ಒಬ್ಬರು ಶಿಷ್ಯರು ಎಂದು ತಿಳಿದುಕೊಂಡು ಸೂಗೂರಿಗೆ ಅವರ ಅಂತ್ಯ ಸಂಸ್ಕಾರಕ್ಕೆ ಗುರುಗಳು ಏಕೆ ದಯಮಾಡಿಸಬಾರದು? ಎಂದು ಭಾವುಕರಾಗಿ ಬಹಿರಂಗವಾಗಿಯೇ ಪ್ರಸ್ತಾಪಿಸಿದರು. ಸಭೆ ಅವರ ವಾದವನ್ನು ಅನುಮೋದಿಸಿದಂತೆ ಕಾಣಿಸಿತು. ಅನಿರೀಕ್ಷಿತವಾದ ಈ ಪ್ರಶ್ನೆ ನಮ್ಮನ್ನು ಉದ್ವಿಗ್ನರನ್ನಾಗಿಸಿತು. ಸತ್ವಪರೀಕ್ಷೆಗೆ ಒಳಗುಮಾಡಿತು. ಅಂತರಂಗದಲ್ಲಿ ಹೃದಯ ಮತ್ತು ಬುದ್ಧಿಯ ಸಂಘರ್ಷ ನಡೆದಿತ್ತು! ಬಹಿರಂಗವಾಗಿ ಸಮರ್ಪಕವಾದ ಉತ್ತರವನ್ನು ನೀಡಬೇಕಾದ ಅನಿವಾರ್ಯತೆ ಇತ್ತು. ಎಲ್ಲರ ಭಾಷಣ ಮುಗಿಯುವವರೆಗೂ ನಮ್ಮ ಚಿಂತನೆ ಸಾಗಿತು. ಶಾಂತನಗೌಡರು ಕೇಳಿದ ಪ್ರಶ್ನೆಗೆ ಉತ್ತರ ಅವರ ಪ್ರಶ್ನೆಯಲ್ಲಿಯೇ ಅಡಗಿತ್ತು. ಶಿಷ್ಯರ ಮನೆಯಲ್ಲಿ ಸಾವು-ನೋವು ಘಟಿಸಿದಾಗ ನಾವು ಹೋಗಿ ಸಂತೈಸಿರುವುದು ನಿಜ. ಆದರೆ ಅಂತಹ ಸಂದರ್ಭಗಳಲ್ಲಿ ಎಷ್ಟು ಜನರ ಮನೆಗೆ ಹೋಗಿದ್ದೇವೆ? ಹೋದ ಮನೆಗಳಿಗಿಂತ ಹೋಗದ ಮನೆಗಳೇ ಜಾಸ್ತಿಯಲ್ಲವೇ? ಹೀಗಿರುವಾಗ ಹೊಗದ ಮನೆಗಳಲ್ಲಿ ಇದೂ ಒಂದು ಎಂದು ಏಕೆ ತಿಳಿದುಕೊಳ್ಳಬಾರದು? ಅದೇ ಬೇರೆ ಇದೇ ಬೇರೆ ಎನ್ನುವುದಾದರೆ ಏನದು ಬೇರೆ? ಇದು ಬೇರೆ ಎನ್ನಲು ಕೊಡುವ ಕಾರಣವೇನು? ಆಳವಾಗಿ ಚಿಂತಿಸಿದರೆ ಅದು ಮತ್ತೆ ಬೇರೇನೂ ಆಗಿರದೆ ಹೆತ್ತ ತಾಯಿ ಎಂಬ ಲೌಕಿಕ ಸಂಬಂಧವೇ ತಾನೆ? ಸಭೆ ನಿರುತ್ತರಗೊಂಡಿತು ಅಥವಾ ಈ ಸಂದರ್ಭದಲ್ಲಿ ಮರುಪ್ರಶ್ನೆ ಕೇಳಿ ಗುರುಗಳ ಮನಸ್ಸಿಗೆ ನೋವುಂಟುಮಾಡಬಾರದೆಂಬ ಸೌಜನ್ಯದಿಂದಲೋ ಏನೋ ಸಭೆಯಲ್ಲಿ ಮೌನ ಆವರಿಸಿತು. ಸಭೆಯ ಕಾರ್ಯಕಲಾಪಗಳನ್ನು ಮುಗಿಸಿಕೊಂಡು ತಾಯಿಯವರ ಅಂತ್ಯಸಂಸ್ಕಾರಕ್ಕೆ ಹೋಗದೆ ಸೀದಾ ಸಿರಿಗೆರೆಗೆ ಹಿಂದಿರುಗಿದೆವು.
ಅಂದೇ ಸೂಗೂರಿನಲ್ಲಿ ನಮ್ಮ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆದು ಲಿಂಗೈಕ್ಯ ತಂದೆಯವರ ಸಮಾಧಿಯ ಪಕ್ಕದಲ್ಲಿಯೇ ತಾಯಿಯ ಸಮಾಧಿಯನ್ನೂ ಮಾಡಿದರೆಂದು ತಿಳಿಯಿತು. ನಮ್ಮ ಪೂರ್ವಾಶ್ರಮದ ತಂದೆಯವರ ಸಮಾಧಿಗೂ ಬಂದಿರಲಿಲ್ಲವೆಂದು ಜನರು ಜ್ಞಾಪಿಸಿಕೊಂಡರೆಂದು ತಿಳಿಯಿತು. ನಂತರ ಶಿವಗಣಾರಾಧನೆಗಾದರೂ ಗುರುಗಳು ದಯಮಾಡಿಸಲಿ ಎಂದು ಅನೇಕ ಪ್ರಾಂತ್ಯಗಳಿಂದ ಶಿಷ್ಯಪ್ರಮುಖರು ನಮ್ಮನ್ನು ಆಹ್ವಾನಿಸಲು ಸಿರಿಗೆರೆಗೆ ಬಂದರು. ಸಭೆ ನಮ್ಮ "ಸದ್ಧರ್ಮ ನ್ಯಾಯಪೀಠ’ ದ ವಿಶಾಲ ಕೊಠಡಿಯಲ್ಲಿ ಸೇರಿತ್ತು. ಆದರೆ ನಾವು ಮಾತ್ರ ನ್ಯಾಯಪೀಠದಲ್ಲಿ ಕುಳಿತಿರದೆ ಕೆಳಗೆ ಎಲ್ಲರೊಟ್ಟಿಗೆ ಕುಳಿತುಕೊಂಡಿದ್ದೆವು. ಭದ್ರಾವತಿಯ ಹಿರಿಯ ವಕೀಲರಾದ ಹೆಬ್ಬಂಡಿ ಬಸವರಾಜಪ್ಪನವರು ಮೇಲೆದ್ದು ಲಿಂಗೈಕ್ಕೆ ಶರಣೆ ಗಂಗಮ್ಮನವರು ತಮಗೆ ಜನ್ಮ ನೀಡಿದ ತಾಯಿ. ಇರುವ ಒಬ್ಬನೇ ಮಗನನ್ನು ಮಠಕ್ಕೆ ಕೊಟ್ಟ ತ್ಯಾಗಮಯಿ, ತಮ್ಮ ಮಾರ್ಗದರ್ಶನದಲ್ಲಿ ಶಿಷ್ಯರಾದ ನಾವೆಲ್ಲರೂ ಮುಂದೆ ಬರುವಂತಾದ ಕಾರಣ ನಮಗೆ ಅವರು ಮಹಾತಾಯಿ. ತಾವು ದೊಡ್ಡಮನಸ್ಸು ಮಾಡಿ ಆ ಮಹಾತಾಯಿಯ ಶಿವಗಣಾರಾಧನೆಗೆ ದಯಮಾಡಿಸಬೇಕು. ಶಂಕರಾಚಾರ್ಯರೂ ಸಹ ಅವರ ತಾಯಿ ತೀರಿಕೊಂಡಾಗ ಹೋಗಿ ಅಂತ್ಯಸಂಸ್ಕಾರವನ್ನು ಸ್ವತಃ ಮುಂದೆ ನಿಂತು ಮಾಡಲಿಲ್ಲವೇ? ಎಂದು ನೆರೆದ ಶಿಷ್ಯಪ್ರಮುಖರ ಪರವಾಗಿ ಅತ್ಯಂತ ಸ್ಪುಟವಾಗಿ ಆಗ್ರಹಪೂರ್ವಕವಾಗಿ ವಿನಂತಿಸಿಕೊಂಡರು. ಅವರ ಮಾತುಗಳು ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ಮಂಡಿಸಿದ ವಾದದಂತೆ ಇದ್ದವು. ನಂತರ ಮಾತನಾಡಿದ ಶಿಷ್ಯರು ದನಿಗೂಡಿಸಿದರು. ಶಿಷ್ಯರ ಮಾತುಗಳನ್ನು ಮೌನವಾಗಿ ಆಲಿಸಿದೆವು. ಈ ರೀತಿ ನ್ಯಾಯಾಲಯಗಳಲ್ಲಿ ಹಿಂದಿನ ಘಟನಾವಳಿಗಳನ್ನು ಅಥವಾ ಹಿಂದಿನ ತೀರ್ಪುಗಳನ್ನು ಉದ್ದರಿಸಿ ತಮ್ಮ ವಾದವನ್ನು ವಕೀಲರು ಸಮರ್ಥಿಸಿಕೊಳ್ಳುವ ಪರಿಪಾಠವಿದೆ. ಇದಕ್ಕೆ ನ್ಯಾಯಾಲಯದ ಪರಿಭಾಷೆಯಲ್ಲಿ citation ಎಂದು ಕರೆಯುತ್ತಾರೆ. ಶಂಕರಾಚಾರ್ಯರು ಯಾವ ಹಿನ್ನೆಲೆಯಲ್ಲಿ ತಮ್ಮ ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದರು ಎಂಬ ಪೂರ್ಣ ಮಾಹಿತಿ ಈ ವಾದ ಮಂಡಿಸಿದ ಶಿಷ್ಯರಿಗೆ ಇದ್ದಂತೆ ಕಾಣಲಿಲ್ಲ.
ಶಂಕರಾಚಾರ್ಯರು ಹುಟ್ಟಿದ್ದು ಕೇರಳದ ಕಾಲಡಿ ಎಂಬ ಗ್ರಾಮದ ನಂಬೂದರಿ ಬ್ರಾಹ್ಮಣರ ಬಡ ಕುಟುಂಬವೊಂದರಲ್ಲಿ, ಬಾಲ್ಯದಲ್ಲಿಯೇ ತಂದೆ ಶಿವಗುರು ತೀರಿಕೊಂಡನು. ತಾಯಿ ಆರ್ಯಾಂಬಾ ಮಗನನ್ನು ಅಕ್ಕರೆಯಿಂದ ಜೋಪಾನವಾಗಿ ಬೆಳೆಸಿದಳು. ಚಿಕ್ಕವಯಸ್ಸಿನಲ್ಲಿಯೇ ವೇದಶಾಸ್ತ್ರಫಾರಂಗತನನ್ನಾಗಿ ಮಾಡಿದಳು. ಬಾಲಕ ಶಂಕರನಿಗೆ ಸಂನ್ಯಾಸಿಯಾಗಬೇಕೆಂಬ ಉತ್ಕಟೇಚ್ಛೆ ಇತ್ತು. ಇದಕ್ಕೆ ತಾಯಿ ಆರ್ಯಾಂಬಾ ಒಪ್ಪಲಿಲ್ಲ. ತನಗೆ ವಯಸ್ಸಾದಾಗ ತನ್ನನ್ನು ನೋಡಿಕೊಳ್ಳುವವರು ಯಾರು? ತಾನು ಸತ್ತಾಗ ತನ್ನ ಅಂತ್ಯಸಂಸ್ಕಾರವನ್ನು ಮಾಡುವವರು ಯಾರು? ಅಪುತ್ರಸ್ಯ ಗತಿರ್ನಾಸ್ತಿ ಎನ್ನುವಂತೆ ನೀನು ಸಂನ್ಯಾಸಿಯಾದರೆ ಮಗನಿದ್ದೂ ಇಲ್ಲದಂತಾಗಿ ನಾನು ನರಕಕ್ಕೆ ಹೋಗಬೇಕೇ? ಎಂದು ವಿರೋಧಿಸಿದಳು. ಆಗ ಶಂಕರನು ತಾಯಿಯನ್ನು ಸಮಾಧಾನಪಡಿಸುತ್ತಾ ಅವಳಿಗೆ ವಯಸ್ಸಾದಾಗ ಬಂದು ಶುಶ್ರೂಷೆ ಮಾಡುವುದಾಗಿಯೂ, ಅಂತ್ಯಸಂಸ್ಕಾರವನ್ನೂ ತಾನೇ ಮಾಡುವುದಾಗಿಯೂ ಮಾತು ಕೊಟ್ಟನು. ಆದರೂ ತಾಯಿ ಆರ್ಯಾಂಬಾ ಒಪ್ಪಲಿಲ್ಲ. ಶಂಕರನಿಗೆ ಹತಾಶೆಯುಂಟಾಯಿತು. ಒಮ್ಮೆ ತಾಯಿ ಮತ್ತು ಮಗ ಸ್ನಾನಕ್ಕೆಂದು ನದಿಗೆ ಹೋಗಿದ್ದರು. ಬಾಲಕ ಶಂಕರನು ಈಜುತ್ತಾ ನದಿಯ ಆಳಕ್ಕೆ ಹೋದನು. ಮೊಸಳೆಯೊಂದು ಅವನ ಕಾಲನ್ನು ಹಿಡಿದು ಎಳೆಯಿತು. ಬಾಲಕ ಶಂಕರ ದಡದಲ್ಲಿದ ತಾಯಿಗೆ ಕೂಗಿ ಹೇಳಿದ. ಸಂನ್ಯಾಸಿಯಾಗಲು ನೀನು ಒಪ್ಪಿಗೆ ನೀಡಲಿಲ್ಲವೆಂಬ ಕೊರಗಿನಿಂದ ಸಾಯದೆ ತೃಪ್ತಿಯಿಂದ ಸಾಯಲು ಈಗಲಾದರೂ ಒಪ್ಪಿಗೆಯನ್ನು ನೀಡು ಎಂದು ಅಂಗಲಾಚಿ ಬೇಡಿಕೊಂಡ. ಮಗನನ್ನು ಸಾವಿನ ದವಡೆಯಿಂದ ತಪ್ಪಿಸಲಾಗದೆ ಅಸಹಾಯಕಳಾದ ತಾಯಿ ಅನ್ಯಮಾರ್ಗವಿಲ್ಲದೆ ದುಃಖದಿಂದ ಒಪ್ಪಿಗೆ ನೀಡಿದಳು. ಶಂಕರ ಮೊಸಳೆ ಬಾಯಿಂದ ಹೇಗೋ ತಪ್ಪಿಸಿಕೊಂಡು ಬಂದು ದಡ ಸೇರಿದ. ತಾಯಿಗೆ ಮಗ ಬದುಕಿದನೆಂದು ಸಂತೋಷವಾಯಿತು. ಆದರೆ ಆಗಲೇ ಸಂನ್ಯಾಸಿಯಾಗಲು ಒಪ್ಪಿಗೆ ಕೊಟ್ಟಾಗಿತ್ತು. ಶಂಕರ ಯೋಗ್ಯ ಗುರುವನ್ನರಸಿ ಮನೆಯಿಂದ ಹೊರನಡೆದ. ಸಂನ್ಯಾಸಿಯಾಗಿ ಅದ್ವೈತವೇದಾಂತದ ಆಚಾರ್ಯಪುರುಷನಾಗಿ ದೇಶದೇಶಾಂತರ ಸುತ್ತಿದ. ವಯಸ್ಸಾದ ತಾಯಿ ಹಾಸಿಗೆ ಹಿಡಿದಿದ್ದಾಳೆಂದು ತಿಳಿದು ಮಾತು ಕೊಟ್ಟ ಪ್ರಕಾರ ಆಚಾರ್ಯ ಶಂಕರರು ತಮ್ಮ ಹುಟ್ಟಿದ ಊರು ಕಾಲಡಿಗೆ ಬಂದರು. ಅಷ್ಟರಲ್ಲಿ ತಾಯಿಯು ಕೊನೆಯುಸಿರೆಳೆದಿದ್ದಳು. ಶಂಕರರು ಹೆತ್ತತಾಯಿಯ ಅಂತ್ಯ ಸಂಸ್ಕಾರವನ್ನು ಮಾಡಲು ಮುಂದಾದರು. ಸಂಪ್ರದಾಯಸ್ಥ ಸಮಾಜ, ಬಂಧು-ಬಳಗ ಸಂನ್ಯಾಸಿಯಾಗಿ ತಾಯಿಯ ಅಂತಿಮ ಸಂಸ್ಕಾರ ಮಾಡುವುದನ್ನು ವಿರೋಧಿಸಿತು. ಯಾರೂ ಸಹಕರಿಸಲಿಲ್ಲ. ಆದರೂ ಸಮಾಜದ ವಿರೋಧವನ್ನು ಕಟ್ಟಿಕೊಂಡು ಶಂಕರಾಚಾರ್ಯರು ತಾಯಿಯ ಶವವನ್ನು ಒಬ್ಬರೇ ಹೊತ್ತುಕೊಂಡು ಹೋಗಿ ಚಿತೆ ಏರಿಸಿ ಅಂತ್ಯಸಂಸ್ಕಾರವನ್ನು ಮಾಡಿದರು.
ಶಂಕರಾಚಾರ್ಯರ ವೈಯಕ್ತಿಕ ಜೀವನಕ್ಕೂ ಮತ್ತು ನಮ್ಮ ಜೀವನಕ್ಕೂ ಕೆಲವೊಂದು ಹೋಲಿಕೆ ವ್ಯತ್ಯಾಸಗಳು ಇವೆ. ಶಂಕರಾಚಾರ್ಯರು ವೇದಾಂತಸೂತ್ರಗಳ ಮೇಲೆ ಶಾಂಕರಭಾಷ್ಯವನ್ನು ಬರೆಯುವುದಕ್ಕೆ ಮುಂಚೆ 18 ಬಾರಿ ಓದಿದ್ದರೆನ್ನಲಾದ ಸೂತಸಂಹಿತೆಯೇ ಕಾಶಿಯಲ್ಲಿ ನಮ್ಮ ಡಾಕ್ಟರೇಟ್ ಪ್ರೌಢಪ್ರಬಂಧಕ್ಕೆ ಆಯ್ಕೆಮಾಡಿಕೊಂಡಿದ್ದ ಗ್ರಂಥ. ಶಂಕರಾಚಾರ್ಯರೂ ಅವರ ತಾಯಿಗೆ ಒಬ್ಬನೇ ಮಗ. ಆದರೆ ಸಂನ್ಯಾಸಿಯಾಗಲು ಅವರ ತಾಯಿಯಿಂದ ವಿರೋಧವಿದ್ದಂತೆ ಸ್ವಾಮಿಗಳಾಗಲು ನಮಗೆ ಆ ತೆರನಾದ ಯಾವ ವಿರೋಧ ನಮ್ಮ ಪೂರ್ವಾಶ್ರಮದ ತಾಯಿಯಿಂದ ಬರಲಿಲ್ಲ. ಶಂಕರಾಚಾರ್ಯರಂತೆ ಬಾಲ್ಯದಲ್ಲಿ ತುಂಗಾ ನದಿಯಲ್ಲಿ ಈಜಲು ಹೋಗಿದ್ದೆವು. ತಾಯಿ ನದಿಯ ದಡದಲ್ಲಿ ಬಟ್ಟೆ ಸೆಳೆಯುತ್ತಿದ್ದಳು. ನದಿಯ ಆಳ ಅಷ್ಟೇನೂ ಇರಲಿಲ್ಲ, ಕೊರಳಿನ ಮಟ್ಟ ಇತ್ತು. ನದಿಯ ಮಧ್ಯದಲ್ಲಿ ಮಾತ್ರ ಮುಳುಗಿಸುವಷ್ಟು ಆಳ, ನೀರಿನ ಸೆಳೆತ ಇತ್ತು. ಸ್ವಲ್ಪ ದೂರ ಈಜಿದರೆ ನಡೆದುಕೊಂಡೇ ನದಿಯ ಆಚೆಯ ದಡ ಸೇರಬಹುದಿತ್ತು, ಧೈರ್ಯ ಮಾಡಿ ಮುಂದೆ ನಡೆದೆವು. ನದಿಯ ಮಧ್ಯಭಾಗದಲ್ಲಿ ಈಜುವಾಗ ಕೈ ಸೋತು ಗಾಬರಿಯಾಗಿ ಕೂಗಿಕೊಂಡೆವು. ಗೆಳೆಯರೆಲ್ಲಾ ಮುಂದೆ ಬಹು ದೂರ ಸಾಗಿದ್ದರು. ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಹತ್ತಿರದಲ್ಲಿದ್ದ ಅಗಸರ ರಾಮಜ್ಜ ಗಮನಿಸಿ ಕೂಡಲೇ ಬಂದು ರಕ್ಷಿಸಿದ. ಇದೆಲ್ಲಾ ದೈವಾನುಗ್ರಹ!
ಶಂಕರಾಚಾರ್ಯರಿಗೆ ಅಂದಿನ ಸಮಾಜ ವಿರೋಧಿಸಿದಂತೆ ನಮ್ಮ ಪೂರ್ವಾಶ್ರಮದ ತಾಯಿಯ ಅಂತ್ಯಸಂಸ್ಕಾರಕ್ಕಾಗಲೀ, ಸಮಾರಾಧನೆಗಾಗಲೀ ನಮಗೆ ಸಮಾಜದಿಂದ ಯಾವ ವಿರೋಧವೂ ಇರಲಿಲ್ಲ. ಪ್ರತಿಯಾಗಿ ಬರಬೇಕೆಂಬ ಒತ್ತಾಸೆ ಇತ್ತು. ಆದರೆ ಅದು ತಾತ್ವಿಕವಾಗಿ ಸರಿಯಲ್ಲವೆಂಬ ನಿಲುವು ಒಂದೆಡೆಯಾದರೆ ತಾಯಿಯ ಕಳೇಬರವನ್ನು ನೋಡಿದಾಗ ಭಾವೋದ್ವೇಗಗಳಿಗೆ ಒಳಗಾಗಬಹುದೆಂಬ ಆತಂಕವೂ ನಮ್ಮ ಆ ನಿರ್ಧಾರಕ್ಕೆ ಮುಖ್ಯ ಕಾರಣವಾಗಿತ್ತು. ತಂದೆಯ ಸಮಾರಾಧನೆಗೆ ಬಂದಿರಲಿಲ್ಲವೇ? ಎಂದು ಮರು ಪ್ರಶ್ನೆ ಹಾಕುವ ತಾರ್ಕಿಕ ಬುದ್ದಿಯನ್ನು ಪ್ರದರ್ಶಿಸಲು ಯಾವ ಶಿಷ್ಯರೂ ಮುಂದಾಗಲಿಲ್ಲ. ಸಮಾಧಿಗಲ್ಲದಿದ್ದರೂ ಸಮಾರಾಧನೆಗಾದರೂ ಬರಬಹುದೇನೋ ಎಂಬ ಆಶಾಭಾವನೆಯಿಂದ ಶಿಷ್ಯರು ಆಹ್ವಾನಿಸಲು ಸಿರಿಗೆರೆಗೆ ಬಂದಿದ್ದರು. ಬುದ್ದಿಯ ಶುಷ್ಕ ತರ್ಕ ಬೇರೆ, ಹೃದಯದ ಭಾವನೆಗಳು ಬೇರೆ. ತಂದೆಗಿಂತ ತಾಯಿಯ ವಾತ್ಸಲ್ಯ ದೊಡ್ಡದು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ! ಆ ದಿನ ಆಹ್ವಾನಿಸಲು ಬಂದಿದ್ದ ಶಿಷ್ಯರೆಲ್ಲರೂ ನಮ್ಮನ್ನು ಹೆಚ್ಚು ಒತ್ತಾಯಪಡಿಸದೆ ನಮ್ಮ ಭಾವನೆಗಳನ್ನು ಮತ್ತು ವಿಚಾರಗಳನ್ನು ಅರ್ಥಮಾಡಿಕೊಂಡು ತಮ್ಮ ಮನಸ್ಸಿಗೆ ನೋವುಂಟುಮಾಡಿದ್ದರೆ ಕ್ಷಮಿಸಿ! ಎಂದು ವಿನೀತಭಾವದಿಂದ ನಮಸ್ಕರಿಸಿ ಹೋದ ರೀತಿ ಶಿಷ್ಯರಿಗೆ ಅಂಜಿ ಗುರುವೂ, ಗುರುವಿಗೆ ಅಂಜಿ ಶಿಷ್ಯರೂ ನಡೆಯಬೇಕು ಎಂಬ ನಮ್ಮ ಲಿಂಗೈಕ್ಯ ಗುರುವರ್ಯರ ಆಣತಿಯನ್ನು ಸ್ಮರಣೆಗೆ ತಂದುಕೊಟ್ಟಿತು.
ಹೃದಯ ಕಲ್ಲುಬಂಡೆಯಲ್ಲ: ಭಾವನೆಗಳ ಮಹಾಪೂರ. ಅವುಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನವೇ ಅಧ್ಯಾತ್ಮಸಾಧನೆ. ಆ ಸಾಧನೆಯಲ್ಲಿ ಸಿದ್ದಿ ಪಡೆದವನೂ ಒಮ್ಮೊಮ್ಮೆ ಎಂತಹ ಮೋಹಕ್ಕೆ ಒಳಗಾಗಬಲ್ಲನೆಂಬುದಕ್ಕೆ ಅಜಗಣ್ಣ-ಮುಕ್ತಾಯಕ್ಕಗಳ ಪ್ರಸಂಗ ಸಾಕ್ಷಿ, ತಾತ್ವಿಕ ಬದುಕಿಗೆ ಹಿಡಿದ ಒಂದು ಕನ್ನಡಿ. ಅಣ್ಣ ಅಜಗಣ್ಣನ ಶವದ ಮುಂದೆ ಕುಳಿತು ಅಳುತ್ತಿದ್ದ ಮಹಾಶರಣೆ ಮುಕ್ತಾಯಕ್ಕಳನ್ನು ಅನುಭಾವಿ ಅಲ್ಲಮ ಪ್ರಭು ಎಚ್ಚರಿಸಿದ್ದು ಹೀಗೆ:
ಅಂಗೈಯೊಳಗೊಂದು ಅರಳ ತಲೆಯ ಹಿಡಿದುಕೊಂಡುಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ?
ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ
ಹಂಬಲಿಸುವ ಪರಿತಾಪವೇನು ಹೇಳಾ?
ಒಂದೆಂಬೆನೆ ಎರಡಾಗಿದೆ, ಎರಡೆಂಬೆನೆ ಒಂದಾಗಿದೆ
ಅರಿವಿನೊಳಗಣ ಮರಹಿದೇನು ಹೇಳಾ
ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ
ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ
ನೀನಾರೆಂದು ಹೇಳಾ ಎಲೆ ಅವ್ವಾ?
ತನ್ನ ಪ್ರೀತಿಯ ಅಣ್ಣ ಮನೆಯೊಳಗೆ ಬರುವಾಗ ಧಡ್ ಎಂದು ಆಕಸ್ಮಿಕವಾಗಿ ಬಾಗಿಲಿಗೆ ಹಣೆ ಬಡಿದು ನೋಡು ನೋಡುತ್ತಿದ್ದಂತೆಯೇ ಬಾಗಿಲ ಹೊಸ್ತಿಲಲ್ಲಿ ಸತ್ತು ಬಿದ್ದುದನ್ನು ನೋಡಿ ಘಾಸಿಗೊಂಡ ತಂಗಿ ಮುಕ್ತಾಯಕ್ಕ ರಕ್ತಸಿಕ್ತವಾದ ತನ್ನಣ್ಣನ ತಲೆಯನ್ನು ತೊಡೆಯ ಮೇಲಿರಿಸಿಕೊಂಡು ನೇವರಿಸುತ್ತಾ ದುಃಖ ಉಮ್ಮಳಿಸಿ ಭಾವುಕಳಾಗಿ ಅಳುತ್ತಾ ಕುಳಿತಿದ್ದಳು. ಈ ವಿಷಯ ತಿಳಿದು ಆಗಮಿಸಿದ ಮಹಾನುಭಾವಿ ಅಲ್ಲಮನಿಗೆ ಮುಕ್ತಾಯಕ್ಕನ ಕಣ್ಣುಗಳಿಂದ ಕೆಳಕ್ಕೆ ಬೀಳುತ್ತಿದ್ದ ಕಣ್ಣೀರಿನ ಹನಿಗಳು ಮುತ್ತಿನ ಸರಮಾಲೆಯಂತೆ ಕಾಣಿಸುತ್ತವೆ. ಅಣ್ಣ-ತಂಗಿಯರ ಅಧ್ಯಾತ್ಮಿಕ ಸಾಧನೆಯನ್ನು ಬಲ್ಲ ಅಲ್ಲಮ ಅವರಿಬ್ಬರ ಸಂಬಂಧವನ್ನು ಸಂಪಿಗೆಯ ಹೂವು ಮತ್ತು ದುಂಬಿಗೆ ಹೋಲಿಸುತ್ತಾನೆ. ಮುಕ್ತಾಯಿ ಸಂಪಿಗೆಯ ಹೂವಾದರೆ, ಅಜಗಣ್ಣ ಅದರ ಬಳಿ ಸಾರಿ ಬಂದ ದುಂಬಿ, ಒಂದೇ ಒಡಲಿನಿಂದ ಉದ್ಭವಿಸಿದ ಎರಡು ದೇಹ (ಒಂದೆಂಬೆನೆ ಎರಡಾಗಿದೆ). ಆಧ್ಯಾತ್ಮಿಕ ಸಾಧನೆಯಲ್ಲಿ ಒಬ್ಬರದು ದೂರದಿಂದಲೇ ಸೂಸುವ ಸಂಪಿಗೆಯ ಸೌಗಂಧದ ಕಂಪಿನಂತಾದರೆ, ಮತ್ತೊಬ್ಬರದು ಆಹ್ಲಾದಕರವಾದ ದುಂಬಿಯ ಝೇಂಕಾರದ ನಾದಮಾಧುರ್ಯದಂತೆ! ಹೂ ಬೇರೆ, ದುಂಬಿ ಬೇರೆ. ಆದರೆ ಹೂವಿನ ಮೇಲೆ ಕುಳಿತು ಒಂದಾಗಿ ಮೈಮರೆತು ಮಧುವನೀಂಟುವ ದುಂಬಿಯಂತೆ ಅವರಿಬ್ಬರ ದೇಹ ಎರಡಾದರೂ ಆತ್ಮ ಒಂದು (ಎರಡೆಂಬೆನೆ ಒಂದಾಗಿದೆ). ಅವರಿಬ್ಬರ ಮಧ್ಯೆ ಇದ್ದ ಆಕರ್ಷಣೆ ಗಾಢವಾದ ಸೋದರತೆಯ, ಆಧ್ಯಾತ್ಮಿಕ ಚಿಂತನೆಯ, ನಿರ್ವ್ಯಾಜ ಪ್ರೀತಿಯ ಪರಿಮಳ, ತಂಗಿಯ ಪ್ರೀತಿಯ ಮಕರಂದವನ್ನು ಆಸ್ವಾದಿಸಿದ ಅಜಗಣ್ಣ ಈಗ ಅಗಲಿ ಹೋಗಿದ್ದಾನೆ. ಮುಸ್ಸಂಜೆಯಲ್ಲಿ ಹಾರಿಹೋದ ದುಂಬಿಯಂತೆ! ಅಣ್ಣನ ಅಗಲಿಕೆಯ ಪರಿತಾಪದಿಂದ ಮುದುಡಿದ ಹೂವಿನಂತಾಗಿದ್ದಾಳೆ ಮುಕ್ತಾಯಿ, ತಾನು ಬೇರೆಯಲ್ಲ ತನ್ನಣ್ಣ ಬೇರೆಯಲ್ಲ ಎಂಬ ಅನುಭಾವದ ಅರಿವು ಮುಕ್ತಾಯಿಗೆ ಇದ್ದರೂ ಕ್ಷಣಕಾಲ ಮರಹು ಆವರಿಸಿ ಲೌಕಿಕ ಭಾವನೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳೆ. ಇದನ್ನು ಮನಗಂಡ ಅಲ್ಲಮ ಆಕೆಯನ್ನು ಎಚ್ಚರಿಸುತ್ತಾನೆ "ನೀನಾರೆಂದು ಹೇಳಾ ಎಲೆ ಅವ್ವಾ"? ನಿನ್ನಣ್ಣನ ಚೈತನ್ಯ ನಿನ್ನಿಂದ ದೂರ ಹೋಯಿತೆಂಬ ಭ್ರಮೆ ಏಕೆ? ಹಾಗಾದರೆ ನಿನ್ನೊಳಗಿರುವ ಚೈತನ್ಯವಾವುದು? ಅದು ನಿನ್ನಣ್ಣನ ಚೈತನ್ಯಕ್ಕಿಂತ ಹೇಗೆ ಭಿನ್ನ?
ಅಲ್ಲಮನ ಈ ವಚನ ನಮ್ಮ ವೈಯಕ್ತಿಕ ಬದುಕಿನಲ್ಲಿಯೂ ಒಳಗಣ್ಣನ್ನು ತೆರೆಸುವಂತಹದು. ನಮಗೆ ಜನ್ಮವಿತ್ತು ಹಾಲುಣಿಸಿ ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿ ನಮ್ಮಿಂದ ಏನನ್ನೂ ಬಯಸದೆ ಎಲೆ ಮರೆಯ ಕಾಯಿಯಂತಿದ್ದು ನಿಷ್ಕಳಂಕ ಜೀವನವನ್ನು ನಡೆಸಿ ಹಣ್ಣಾಗಿ ಸಾಂಸಾರಿಕ ಬಂಧನದಿಂದ ಕಳಚಿಕೊಂಡು ಕಣ್ಮರೆಯಾದ ಆ ಪುಣ್ಯಾತ್ಮಳನ್ನು ಅಲ್ಲಮನ ಮಾತಿನಲ್ಲಿಯೇ ಕೇಳಬೇಕೆನಿಸುತ್ತದೆ:
ನೀನಾರೆಂದು ಹೇಳಾ ಎಲೆ ಅವ್ವಾ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 26.8.2009.