ಕೀರ್ತಿಶನಿಯ ಬೆನ್ನ ಹಿಂದೆ ಬಿದ್ದರೆ....
ಹೊಗಳಿಕೆ ಹೊನ್ನ ಶೂಲ ಎನ್ನುತ್ತಾರೆ ಬಸವಣ್ಣನವರು. “ನೀನೆನಗೊಳ್ಳಿದನಾದರೆ ಎನ್ನ ಹೊಗಳತೆಗೆ ಅಡ್ಡಬಾರಾ ಧರ್ಮೀ” ಎಂದು ಕೂಡಲ ಸಂಗಮದೇವನನ್ನು ದೇವರನ್ನು ಅಂಗಲಾಚಿ ಬೇಡಿಕೊಳ್ಳುತ್ತಾರೆ. ಪಾರಲೌಕಿಕ ದೃಷ್ಟಿಯ ಬಸವಣ್ಣನವರಿಗೆ ಲೌಕಿಕ ಜೀವನದಲ್ಲಿ ಹೊಗಳಿಕೆ ಬೇಡವಾಗಿದ್ದಿರಬಹುದು. ಆದರೆ ಲೌಕಿಕ ಜನರಿಗೆ ಯಾರಿಗೆ ತಾನೆ ಬೇಡ, ಹೇಳಿ? ಹೊಗಳಿಕೆಯಿಂದ ಯಾರ ಮನಸ್ಸಾದರೂ ಮುದಗೊಳ್ಳುವುದಿಲ್ಲವೇ? ಈ ಹೊಗಳಿಕೆ, ಸನ್ಮಾನಗಳು ವಿಶೇಷವಾಗಿ ಅಧಿಕಾರದಲ್ಲಿರುವವರಿಗೆ ನಿತ್ಯವೂ ನಡೆಯುತ್ತಲೇ ಇರುತ್ತವೆ. ಆದರೆ ಅವುಗಳ ಹಿಂದಿನ ಮನೋಭಾವ ಮಾತ್ರ ಅನೇಕ ವೇಳೆ ಸ್ವಾರ್ಥಮೂಲವಾಗಿರುತ್ತದೆ. ಅಧಿಕಾರದಲ್ಲಿರುವವರನ್ನು ಹೊಗಳಿ, ಹಾರ ಹಾಕಿ, ತಲೆಯ ಮೇಲೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಬೆಳ್ಳಿಗದೆ, ಬೆಳಿಕತ್ತಿ ಕೊಟ್ಟು ಅವರಿಂದ ತಮ್ಮ ಕೆಲಸಗಳನ್ನು ಗಿಟ್ಟಿಸಿಕೊಳ್ಳುವ ಹುನ್ನಾರವೇ ಈ ಸನ್ಮಾನಗಳ ಹಿನ್ನೆಲೆಯಾಗಿರುತ್ತದೆ. ಇಂತಹ ಸಮಯಸಾಧಕತನದಿಂದ ಮಾಡುವ ಸನ್ಮಾನಗಳಿಂದ ಅಧಿಕಾರ ಸ್ಥಾನದಲ್ಲಿರುವವರು ದೂರವಿದ್ದಷ್ಟೂ ಒಳಿತು.
ಹೊಗಳಿಕೆಯಿಂದ ತಮ್ಮ ಕೆಲಸವನ್ನು ಸಾಧಿಸಿಕೊಳ್ಳುವಂತೆ ಕೆಲವರು ಸಂದರ್ಭಾನುಸಾರ ತೆಗಳಿಕೆಯಿಂದಲೂ ಸಾಧಿಸಿಕೊಳ್ಳುತ್ತಾರೆ. ನಿತ್ಯ ಹಾಲಮ್ಮನ ಮನೆಯಿಂದ ಮಜ್ಜಿಗೆ ತರುವ ಮಲ್ಲಮ್ಮನಿಗೆ ಇನ್ನು ಮೇಲೆ ಮಜ್ಜಿಗೆ ಸಿಗಲಾರದು ಎಂಬ ಅನುಮಾನ ಮೂಡಿದಾಗ ಮಲ್ಲಮ್ಮ ಮಾಡುವ ಹುನ್ನಾರವೇನು? ಹಾಲಮ್ಮನಿಗೆ ಆಗದ ನೆರೆಮನೆಯ ನೀಲಮ್ಮನನ್ನು ಮನಸ್ವೀ ಬಯ್ಯುವುದು. ನಿನ್ನೆ ಮಜ್ಜಿಗೆ ಕೊಡುವಾಗ ಮುಖ ಸಿಂಡರಿಸಿಕೊಂಡಿದ್ದ ಹಾಲಮ್ಮ ಅದರಿಂದ ಖುಷಿಗೊಂಡು, ಬರಿಗೈಯಲ್ಲಿ ಬಂದಿದ್ದ ಮಲ್ಲಮ್ಮನನ್ನು ಹಾಗೆಯೇ ಹಿಂದಕ್ಕೆ ಕಳುಹಿಸಲು ಮನಸ್ಸಾಗದೆ ತನ್ನ ಮನೆಯ ಪಾತ್ರೆಯಲ್ಲಿಯೇ ಮಜ್ಜಿಗೆಯನ್ನು ನೀಡಿ ಕಜ್ಜಾಯವನ್ನೂ ಕೊಟ್ಟು ಕಳುಹಿಸುತ್ತಾಳೆ. ಮಾರನೆಯ ದಿನವೂ ಮರೆಯದೆ ಬಂದು ಮಜ್ಜಿಗೆ ತೆಗೆದುಕೊಂಡು ಹೋಗಲು ಸ್ವತಃ ಆಹ್ವಾನಿಸುತ್ತಾಳೆ, ಅಧಿಕಾರದಲ್ಲಿರುವ ವ್ಯಕ್ತಿಯನ್ನು ಓಲೈಸಲು ಹೊಗಳಿಕೆ ಒಂದು ಮಾರ್ಗವಾದರೆ, ಆತನಿಗೆ ಆಗದವರು ಯಾರು ಎಂಬುದನ್ನು ತಿಳಿದುಕೊಂಡು ಅಂಥವರನ್ನು ತೆಗಳಿ ಆತನ ಮನಸ್ಸಿಗೆ ಸಂತೋಷವನ್ನುಂಟುಮಾಡಿ ಕೆಲಸ ಸಾಧಿಸಿಕೊಳ್ಳುವುದು ಮತ್ತೊಂದು ಮಾರ್ಗ. ಒಮ್ಮೆ ನಮ್ಮ ಲಿಂಗೈಕ್ಯ ಗುರುವರ್ಯರ ಬಳಿ ಒಬ್ಬ ಶಿಷ್ಯ ಬಂದಿದ್ದ. ಆಗಿನ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರಿಗೆ ಒಂದು ಶಿಫಾರಿಸ್ಸು ಪತ್ರವನ್ನು ತೆಗೆದುಕೊಂಡು ಹೋಗುವುದು ಅವನ ಉದ್ದೇಶವಾಗಿತ್ತು. ಒಂದು ಕಾಲದಲ್ಲಿ ಮಠದ ವಕೀಲರಾಗಿ ಮಠಕ್ಕೆ ಆಪ್ತರಾಗಿದ್ದ ನಿಜಲಿಂಗಪ್ಪನವರಿಗೂ ಮತ್ತು ನಮ್ಮ ಗುರುವರ್ಯರ ಮಧ್ಯೆ ಕಾಲಾನುಕ್ರಮೇಣ ರಾಜಕೀಯ ಕಾರಣಗಳಿಂದಾಗಿ ಮನಸ್ತಾಪ ಉಂಟಾಗಿತ್ತು. ಈ ವಿಷಯ ತಿಳಿಯದ ಶಿಷ್ಯನಿಗೆ ಗುರುವರ್ಯರು ಶಿಫಾರಿಸು ಪತ್ರ ಕೊಡದೆ ನಿರಾಕರಿಸಿ ಒಂದು ಕಿವಿ ಮಾತು ಹೇಳಿ ಕಳುಹಿಸಿದರು: “ನೋಡು, ನೀನು ಒಂದು ಕೆಲಸ ಮಾಡು. ನಮ್ಮ ಯಾವ ಶಿಫಾರಿಸು ಪತ್ರವೂ ಬೇಡ. ನೀನು ನಿಜಲಿಂಗಪ್ಪನವರ ಹತ್ತಿರ ನೇರವಾಗಿ ಹೋಗು; ಅವರ ಎದುರಿಗೆ ನಮ್ಮನ್ನು ಚೆನ್ನಾಗಿ ಬೈಯ್ಯಿ. ನಿನ್ನ ಕೆಲಸ ಆಗುತ್ತದೆ, ಹೋಗು.” ಗುರುಗಳ ಆಣತಿಯಂತೆ ಆ ಶಿಷ್ಯನು ನಿಜಲಿಂಗಪ್ಪನವರ ಹತ್ತಿರ ಹೋಗಿ ಅವರು ಏಕೆ ಬಂದೆ ಎಂದು ಕೇಳಿದಾಗ ಪೀಠಿಕೆಯಾಗಿ ಗುರುಗಳನ್ನು ಮನಸ್ವೀ ನಿಂದಿಸಿದನು. ಗುರುಗಳ ನಿರೀಕ್ಷೆಯಂತೆ ಅವನ ಕೆಲಸ ಕೈಗೂಡಿತು. ಆ ಶಿಷ್ಯನು ತಾನು ಹೋದ ಕೆಲಸ ಆಯಿತೆಂದು ಮರಳಿ ಸಿರಿಗೆರೆಗೆ ಬಂದು ಗುರುಗಳಿಗೆ ವರದಿ ಮಾಡಲು ಮರೆಯಲಿಲ್ಲ. ತಾನು ಮಾಡಿದ ಗುರುನಿಂದನೆಗಾಗಿ ಅಡ್ಡ ಬಿದ್ದು ಕ್ಷಮೆ ಯಾಚಿಸಿದನು. ಗುರುಗಳು ಶಿಷ್ಯ ವಾತ್ಸಲ್ಯದಿಂದ ನಕ್ಕು ಸಂತೋಷಪಟ್ಟರು.
ಈ ಹೊಗಳಿಕೆ, ಓಲೈಕೆ ಎಲ್ಲವೂ ಅಧಿಕಾರ ಇರುವ ತನಕ ಮಾತ್ರ, ಅಧಿಕಾರ ಹೋದ ಮರುದಿನವೇ ಅವೆಲ್ಲವೂ ಮಾಯವಾಗುತ್ತವೆ. ಯಾರಾದರೂ ನಿಃಸ್ಪೃಹತೆಯಿಂದ ಒಂದು ಒಳ್ಳೆಯ ಕೆಲಸವನ್ನು ಮಾಡಿದರೆ ಮೆಚ್ಚಿ ಬೆನ್ನುತಟ್ಟಿ ಪ್ರೋತ್ಸಾಹಿಸುವುದು, ಅಂತಹವರನ್ನು ಗುರುತಿಸಿ ಗೌರವಿಸುವುದು ಒಳ್ಳೆಯ ಸಂಪ್ರದಾಯವೇ. ಸಾಮಾಜಿಕ ಕಳಕಳಿಯಿಂದ ಮಾಡಿದ ಕೆಲಸವನ್ನು ಮೆಚ್ಚಿ ಸ್ವಾರ್ಥವಾವುದೂ ಇಲ್ಲದೆ ಕೇವಲ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಉದ್ದೇಶದಿಂದ ನೀಡುವ ಸನ್ಮಾನ ನಿಜಕ್ಕೂ ಸಾರ್ಥಕವಾಗಿರುತ್ತದೆ.
ಅಂಬೆಗಾಲಿಡುವ ಮಗು ಗೋಡೆಯ ಆಸರೆಯಲ್ಲಿ ನಿಧಾನವಾಗಿ ಮೇಲೆದ್ದು ನಡೆಯಲು ಪ್ರಯತ್ನಿಸಿ ಮುಗ್ಗರಿಸಿ ಬೀಳುತ್ತದೆ. ಆದರೂ ತಾಯಿಯ ಮೆಚ್ಚುಗೆಯ ಮಾತುಗಳಿಂದ ಉಬ್ಬಿ ಮತ್ತೆ ಮೇಲೆದ್ದು ತಾಯಿಯ ಕಡೆ ನೋಡಿ ಮುಗುಳ್ನಗುತ್ತಾ ಮಗು ಮತ್ತೆ ಮುನ್ನಡೆಯಲು ಯತ್ನಿಸುವುದನ್ನು ನೀವು ನೋಡಿರಬೇಕಲ್ಲವೇ? ಹೆಜ್ಜೆಗೆ ಹೆಜ್ಜೆ ಹಾಕಿ, ಗೆಜ್ಜೆಯ ಕಾಲುಗಳನ್ನು ತೊನೆದಾಡಿಸುತ್ತಾ, ಕಿಲ ಕಿಲನೆ ನಗುತ್ತಾ ಮಗು ಮುಂದೆ ಸಾಗಿ ನಡಿಗೆ ಕಲಿಯುವುದು ತಾಯಿಯ ನಿರ್ವ್ಯಾಜ ಪ್ರೇಮದ ಪ್ರಶಂಸೆಯ ಮಾತುಗಳಿಂದ. ಹೀಗಾಗಿ ಹೊಗಳಿಕೆಗೆ ಒಂದು ಮಾಂತ್ರಿಕ ಶಕ್ತಿ ಇರುತ್ತದೆ. ಅದರಿಂದ ಒಳ್ಳೆಯದೂ ಆಗಬಹುದು, ಎಚ್ಚರ ತಪ್ಪಿದರೆ ಕೆಟ್ಟದ್ದೂ ಆಗಬಹುದು. ಹೊಗಳಿಕೆಯ ಮಾತುಗಳಿಂದ ಉಬ್ಬಿ ಅಹಂಕಾರ ಪಡುವ ಅಥವಾ ಉಬ್ಬಿಸಿ ಸ್ವಾರ್ಥಸಾಧಿಸಿಕೊಳ್ಳುವ ಮನೋಭಾವ ಎರಡೂ ಸರಿಯಲ್ಲ.
ಒಳ್ಳೆಯ ಕೆಲಸವನ್ನು ಮಾಡುವವರು ಅನೇಕರಿದ್ದಾರೆ. ಆದರೆ ಬಹಳಷ್ಟು ಜನರು ತಾವು ಸಮಾಜದಲ್ಲಿ ಒಳ್ಳೆಯವರೆನಿಸಿಕೊಳ್ಳಬೇಕು, ಕೀರ್ತಿಯನ್ನು ಸಂಪಾದಿಸಬೇಕು ಎನ್ನುವ ಮನೋಭಾವದಿಂದ ಒಳ್ಳೆಯ ಕೆಲಸ ಮಾಡಲು ಮುಂದಾಗುತ್ತಾರೆ. ಈ ಲೋಕದಲ್ಲಿ ಆತ್ಮತೃಪ್ತಿಗಾಗಿ ಕೆಲಸ ಮಾಡುವವರಿಗಿಂತ, ಕೀರ್ತಿ-ಪ್ರತಿಷ್ಠೆಗಳಿಗಾಗಿ ಮಾಡುವವರೇ ಹೆಚ್ಚು. ಲೌಕಿಕ ಜನರೇ ಏಕೆ ಮಠ-ಪೀಠಗಳ ಸ್ವಾಮಿಗಳೂ ಸಹ ಇದರಿಂದ ಹೊರತಾಗಿಲ್ಲ. ಮಾಡುವ ಕೆಲಸ ಸಣ್ಣದೇ ದೊಡ್ಡದೇ ಇರಲಿ, ಆತ್ಮತೃಪ್ತಿಗಾಗಿ ಯಾರು ಕೆಲಸಮಾಡುತ್ತಾರೋ ಅವರು ನಿಜವಾದ ಸ್ವರ್ಗಸುಖವನ್ನನುಭವಿಸುತ್ತಾರೆ. ಕಾಯಕವೇ ಕೈಲಾಸ ವೆಂಬ ಶರಣರ ಮಾತು ಅನುಭವವೇದ್ಯವಾಗುವುದು ಮಾಡುವ ಮಾಟದೊಳಗೆ ತಾನಿಲ್ಲದಂತೆ ತನ್ಮಯತೆಯಿಂದ ಮಾಡುವ ಬದುಕಿನಲ್ಲಿಯೇ ಹೊರತು, ವೇದಿಕೆಗಳ ಮೇಲೆ ಮಾಡುವ ಉದ್ಬೋಧಕ ಭಾಷಣಗಳಿಂದ ಖಂಡಿತಾ ಅಲ್ಲ, ತಾನಿರುವ ಪರಿಸರದಲ್ಲಿ ಒಂದು ಗಿಡವನ್ನೂ ನೆಡದೆ ಪರಿಸರದ ಬಗ್ಗೆ ಉದ್ದುದ್ದ ಭಾಷಣವನ್ನು ಬಿಗಿಯುವ, ಲೇಖನಗಳ ಸರಮಾಲೆಗಳನ್ನು ಸೃಜಿಸುವ ಪರಿಸರವಾದಿ ಗಳೆಂಬ ಬಿರುದಾಂಕಿತರು ಹೇರಳವಾಗಿ ಸಿಗುತ್ತಾರೆ. ಆದರೆ ನಮಗೆ ಇಂದು ಬೇಕಾಗಿರುವವರು ಪರಿಸರವಾದಿ ಗಳಲ್ಲ ಪರಿಸರಪ್ರೇಮಿ ಗಳು! ಗಿಡಮರಗಳನ್ನು ನೆಟ್ಟು ಅವು ಬೆಳೆಯುವುದನ್ನು ನೋಡಿ ಆನಂದಿಸುವ, ಅವುಗಳ ರೆಂಬೆಗಳನ್ನು ಕತ್ತರಿಸಿದರೆ ಅಯ್ಯೋ ಎಂದು ಮರುಗುವ ಸೂಕ್ಷ್ಮಸಂವೇದನೆಯ ಮಾನವೀಯ ಹೃದಯವುಳ್ಳವರು.
ಕೆಲವರು ಪ್ರಶಂಸೆಯ ಆಸೆಯಿಂದಲಾದರೂ ಪ್ರಾಮಾಣಿಕವಾಗಿ ಅಷ್ಟೂ ಇಷ್ಟೂ ಒಳ್ಳೆಯ ಕೆಲಸಮಾಡುತ್ತಾರೆಂಬುದು ಎಷ್ಟೋ ಸಮಾಧಾನಕರ. ಆದರೆ ಇನ್ನು ಕೆಲವರು ಸ್ವತಃ ಏನೂ ಮಾಡದೆ, ಜವಾಬ್ದಾರಿಯರಿತು ಮಾಡುವವರನ್ನು ಟೀಕಿಸುತ್ತಾ ಏನೆಲ್ಲ ಮಾಡಿದಂತೆ ನಟಿಸಿ ಜನರ ಮೆಚ್ಚುಗೆಯನ್ನು ಗಳಿಸಲು ಹಪಹಪಿಸುತ್ತಾರೆ. ಇಂಥವರನ್ನು ಕಂಡೇ ಬಸವಣ್ಣನವರು ವ್ಯಥೆಯಿಂದ ನುಡಿದದ್ದು:
ಕೋಣನ ಹೇರಿಂಗೆ ಕುನ್ನಿ ಬುಸುಗುಟ್ಟುತ್ತ ಬಾಲವ ಬಡಿವಂತೆ
ತಾವೂ ಮಾಡರು, ಮಾಡುವವರನೂ ಮಾಡಲೀಯರು!
ಮಾಡುವ ಭಕ್ತರ ಕಂಡು ಸೈರಿಸಲಾರದವರ,
ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲ-ಸಂಗಮ-ದೇವ!
ಹೊತ್ತ ಹೊರೆಯ ಭಾರವೇನೆಂಬುದು ಅದನ್ನು ಹೊತ್ತ ಕೋಣನಿಗೆ ಗೊತ್ತೇ ಹೊರತು ಅದರ ಹಿಂದೆ ಮುಂದೆ ತನ್ನ ವಕ್ರವಾದ ಬಾಲವನ್ನು ಬಡಿದಾಡಿಸುತ್ತಾ ಬೊಗಳುವ ನಾಯಿಗೇನು ಗೊತ್ತು? ಒಂದು ಒಳ್ಳೆಯ ಕೆಲಸವನ್ನು ಮಾಡುವಾಗ ಅದರ ಹಿಂದೆ ಇರಬೇಕಾದ ಮಾನವೀಯ ಕಳಕಳಿಗಿಂತ ಮಾಡಿದ ಕೆಲಸದಿಂದ ಬರುವ ಮಾನ-ಸಮ್ಮಾನಗಳ ಹಂಬಲವೇ ಕೆಲವರಿಗೆ ಪ್ರಮುಖವಾಗಿರುತ್ತದೆ. ಈ ರೀತಿ ಕೀರ್ತಿಗಾಗಿ ಮಾಡುವವರನ್ನು ಬಸವಣ್ಣನವರು ಕಟುವಾಗಿ ಟೀಕಿಸುತ್ತಾರೆ:
ಬಲಿಯ ಭೂಮಿ, ಕರ್ಣನ ಕವಚ, ಖಚರನ ಅಸ್ಥಿ
ಶಿಬಿಯ ಮಾಂಸ ವೃಥಾ ಹೋಯಿತ್ತಲ್ಲಾ,
ಶಿವಭಕ್ತಿಮತಿಕ್ರಮ್ಯ ಯದ್ದಾನಂ ಚ ವಿಧೀಯತೇ|
ನಿಷ್ಕಲಂ ತು ಭವೇದ್ದಾನಂ ರೌರವಂ ನರಕಂ ವ್ರಜೇತ್||
ಇಂತೆಂದುದಾಗಿ, ಕೂಡಲಸಂಗನ ಶರಣರನರಿಯದೆ
ಕೀರ್ತಿವಾರ್ತೆಗೆ ಮಾಡಿದವನ ಧನವು ವೃಥಾ ಹೋಯಿತ್ತಲ್ಲಾ!
- ಬಸವಣ್ಣನವರು (ವಚನ 224)
ಮಾತಿಗೆ ತಪ್ಪಬಾರದೆಂಬುದು ಬಲಿಚಕ್ರವರ್ತಿಯ ವ್ರತವಾಗಿತ್ತು. ಅವನು ಮೂರಡಿ ಭೂಮಿಯನ್ನು ವಾಮನನಿಗೆ ದಾನ ನೀಡುವಲ್ಲಿ ಯಾವ ಮಾನವೀಯ ಕಳಕಳಿಯೂ ಇರಲಿಲ್ಲ, ಅದು ಅವನ ವ್ರತದ ಒಂದು ಕಟ್ಟುಪಾಡು ಮಾತ್ರವಾಗಿತ್ತು. ಕರ್ಣನಿಗಂತೂ ತಾನು ದಾನಶೂರನೆಂಬ ಕೀರ್ತಿಯನ್ನು ಗಳಿಸಬೇಕು ಎಂಬ ಅತಿ ಆಸೆಯೇ ಇತ್ತು. “ಒಡಲು ಕ್ಷಣಿಕ, ಕೀರ್ತಿ ಕಲ್ಪಾಂತರಸ್ಥಾಯಿ” ಎಂದೇ ಆತ ಭಾವಿಸಿದ್ದ. ದಧೀಚಿ ಎಂಬ ಋಷಿ ತಾನು ದಾನಿ ಎಂಬ ಕೀರ್ತಿಯನ್ನು ಉಳಿಸಿಕೊಳ್ಳಲು ತನ್ನ ಬೆನ್ನೆಲುಬನ್ನೇ ರಾಕ್ಷಸನ ಸಂಹಾರಕ್ಕಾಗಿ ಇಂದ್ರನಿಗೆ ದಾನಗೈದ. ತಾನು ಶರಣಾಗತ ರಕ್ಷಕನೆಂಬ ಕೀರ್ತಿ ಪಡೆಯುವ ಆಸೆಯು ಶಿಬಿ ಚಕ್ರವರ್ತಿಗೆ ಇತ್ತು. ಈ ಕೀರ್ತಿಗೆ ಕುಂದುಂಟಾಗಬಾರದೆಂದು ತನ್ನ ಮೈಮಾಂಸವನ್ನೇ ಕೊಡಲು ಮುಂದಾದ. ಹೀಗಾಗಿ ಇವರೆಲ್ಲರ ದಾನದ ಹಿಂದಿರುವ ಮನೋಭಾವ “ಕೀರ್ತಿವಾರ್ತೆ”. ಇಂಥ ಕೆಲಸ ವ್ಯರ್ಥವೆಂದೇ ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಶುದ್ಧಾಂತಃಕರಣದಿಂದ, ಮಾನವೀಯ ಕಳಕಳಿಯಿಂದ, ಸಮಾಜದ ಮೇಲಿನ ಪ್ರೀತಿಯಿಂದ ಕೆಲಸ ಮಾಡುವವರಿಗೆ ಕೀರ್ತಿ, ಗೌರವ, ಮನ್ನಣೆಗಳು ತಾವಾಗಿಯೇ ಬರುತ್ತವೆ. ಅವು ಕೇವಲ byproduct ಗಳು. ಆದರೆ ಅನೇಕರಿಗೆ ಈ by-product ಗಳೇ ಮುಖ್ಯವಾಗಿ ಉನ್ನತಮೌಲ್ಯಗಳು ಗೌಣವಾಗಿಬಿಡುತ್ತವೆ. ಅಂತಹವರು ಕೀರ್ತಿಗಾಗಿ ಮನ್ನಣೆಯನ್ನು, ಸನ್ಮಾನಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಕೀರ್ತಿ ಪ್ರತಿಷ್ಠೆಗಳ ಬಲೆಯಲ್ಲಿ ಬೀಳುತ್ತಾರೆ. ನಾನೇನು ಕಡಿಮೆ ಎಂಬ ಅಹಂಕಾರದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಬಹು ಸುಲಭವಾಗಿ ಸ್ವಾರ್ಥಸಾಧಕರ ಕೈಗೊಂಬೆಗಳಾಗುತ್ತಾರೆ. ಕೀರ್ತಿಶನಿಯ ಬೆನ್ನುಹತ್ತಿ ವಂದಿಮಾಗಧರ ಬಂಧಿಗಳಾಗಿಬಿಡುತ್ತಾರೆ.
ಮಹಾಭಾರತದಲ್ಲಿ ಕ್ರೋಧಭಕ್ಷ್ಯ ಎಂಬ ಒಬ್ಬ ಕುರೂಪಿ ರಾಕ್ಷಸನ ಒಂದು ರೋಚಕ ಪ್ರಸಂಗ ಬರುತ್ತದೆ.ಇಂದ್ರಲೋಕದಲ್ಲಿ ಇಂದ್ರ ಇಲ್ಲದೇ ಇರುವ ಸಮಯವನ್ನು ಹೊಂಚು ಹಾಕಿ ಆ ಕುರೂಪಿ ರಾಕ್ಷಸ ಇಂದ್ರನ ಅರಮನೆಯೊಳಗೆ ನುಗ್ಗಿ ಇಂದ್ರನ ಸಿಂಹಾಸನವನ್ನು ಏರಿ ಕುಳಿತುಕೊಳ್ಳುತ್ತಾನೆ. ಕೆಲಹೊತ್ತಿನ ಮೇಲೆ ಇದನ್ನು ನೋಡಿದ ಇಂದ್ರನ ಭಟರು ಮತ್ತು ಇತರ ಇಂದ್ರಲೋಕ ನಿವಾಸಿಗಳು ಕೆಂಡಾಮಂಡಲವಾಗಿ ಅವನಿಗೆ ಕೆಳಗಿಳಿಯುವಂತೆ ಗದರಿಸುತ್ತಾರೆ. ಯಾರು ಎಷ್ಟು ಗದರಿಸಿದರೂ ಅವನು ಕೆಳಗಿಳಿಯುವುದಿಲ್ಲ, ಕೋಪಿಸಿದಷ್ಟೂ ಆ ರಾಕ್ಷಸನ ಕುರೂಪ ಹೋಗಿ ಅವನ ಶರೀರ ಕಾಂತಿಯುತವಾಗುತ್ತಾ ಹೋಗುತ್ತದೆ. ಮತ್ತಷ್ಟೂ ಬಿಗಿಯಾಗಿ ಸಿಂಹಾಸನದಲ್ಲಿ ಕುಳಿತು ಇಂದ್ರನಿಗಿಂತಲೂ ಹೆಚ್ಚು ಸುಂದರವಾಗಿ ಕಾಣಿಸತೊಡಗುತ್ತಾನೆ. ಅಷ್ಟರೊಳಗೆ ಎಲ್ಲಿಗೋ ಹೋಗಿದ್ದ ಇಂದ್ರ ಮರಳಿ ಬರುತ್ತಾನೆ. ತನ್ನ ಸಿಂಹಾಸನದ ಮೇಲೆ ಕುಳಿತಿರುವ ಅತ್ಯಂತ ಸುಂದರನಾದ ಆ ಅಪರಿಚಿತ ವ್ಯಕ್ತಿಯನ್ನು ನೋಡಿ ಅವಕ್ಕಾಗುತ್ತಾನೆ. ತಕ್ಷಣವೇ ಅವನಿಗೆ ಆತನು ಕ್ರೋಧಭಕ್ಷ್ಯನೆಂಬ ಕುರೂಪಿ ರಾಕ್ಷಸನೆಂದು ತಿಳಿಯುತ್ತದೆ. ಕ್ರೋಧವೇ ಅವನ ಆಹಾರ. ಬೆಂಕಿಗೆ ತುಪ್ಪವನ್ನು ಹಾಕಿದಷ್ಟೂ ಹೇಗೆ ಅದು ಹೆಚ್ಚು ಹೆಚ್ಚು ಪ್ರಜ್ವಲಿಸುತ್ತದೆಯೋ ಹಾಗೆ ಅವನ ಮೇಲೆ ಸಿಟ್ಟು ಮಾಡಿದಷ್ಟೂ ಅವನು ಹೆಚ್ಚು ಹೆಚ್ಚು ಸುಂದರನಾಗುತ್ತಾ ಹೋಗುತ್ತಾನೆಂಬ ರಹಸ್ಯ ಇಂದ್ರನಿಗೆ ಗೊತ್ತಿರುತ್ತದೆ. ಆದಕಾರಣ ಇಂದ್ರ ತನ್ನ ಸಹಚರರಂತೆ ಆ ರಾಕ್ಷಸನನ್ನು ಬಯ್ಯದೆ, ಏನೊಂದೂ ಸಿಟ್ಟು ಮಾಡದೆ ಅವನನ್ನು ಹೊಗಳಲು ಆರಂಭಿಸುತ್ತಾನೆ. ಇಂದ್ರ ಹಾಗೆ ಅವನನ್ನು ಹೊಗಳುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯ ಮತ್ತು ಮುಜುಗರ ಉಂಟಾಗುತ್ತದೆ. ಆದರೆ ಇಂದ್ರ ಅವನನ್ನು ಹೊಗಳಿದಷ್ಟೂ ಆ ರಾಕ್ಷಸನ ಸೌಂದರ್ಯ ಕಡಿಮೆಯಾಗುತ್ತಾ ಹೋಗಿ ಅವನು ಮೊದಲಿನಂತೆ ಕುರೂಪಿಯಾಗುತ್ತಾನೆ. ಇಂದ್ರ ಹೊಗಳುವುದನ್ನು ನಿಲ್ಲಿಸುವುದಿಲ್ಲ, ಪ್ರತಿಯಾಗಿ ಹೆಚ್ಚು ಹೆಚ್ಚು ಹೊಗಳುವುದನ್ನು ಮುಂದುವರಿಸುತ್ತಾನೆ. ಅದನ್ನು ಕೇಳುತ್ತ ಕೇಳುತ್ತ ಆ ಕುರೂಪಿ ರಾಕ್ಷಸ ಕುಬ್ಜನಾಗಿ ಸ್ವತಃ ಸಿಂಹಾಸನದಿಂದ ಕೆಳಗೆ ಧುಮುಕಿ ಯಾರಿಗೂ ಸಿಗದಂತೆ ಓಡಿಹೋಗುತ್ತಾನೆ. ಹೀಗೆ ಹೊಗಳಿಕೆಯ ಮಾತುಗಳಿಗೆ ಕಿವಿ ಸೋಲುವ ವ್ಯಕ್ತಿ ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ವಿಚಾರಶೀಲ ಜನರ ಕಣ್ಣಿಗೆ ಕುಬ್ಜನಾಗಿ ಕಾಣಿಸುತ್ತಾನೆ. ಹೊಗಳುವವರು ತಮ್ಮ ಸ್ವಾರ್ಥಸಾಧನೆಗಾಗಿ ಅವನ ಸುತ್ತಮುತ್ತ ಓಡಾಡಿಕೊಂಡಿದ್ದು ಕರ್ಣಾನಂದಕರವಾಗಿ ಮಾತನಾಡಿ ಅವನ ಈ ದೌರ್ಬಲ್ಯದ ದುರ್ಲಾಭವನ್ನು ಮಾಡಿಕೊಳ್ಳದೇ ಬಿಡುವುದಿಲ್ಲ. “ನಿಂದಕರಿರಬೇಕಯ್ಯಾ ಊರೊಳಗೆ ನಿಂದಕರಿರಬೇಕಯ್ಯಾ, ಹಂದಿಯಿದ್ದರೆ ಕೇರಿ ಹೇಗೆ ಶುದ್ದಿಯೋ ಹಾಗೆ!” ಎನ್ನುತ್ತಾರೆ ಪುರಂದರ ದಾಸರು, “ನಿಂದಕ್ ನಿಯರೆ ರಾಖಿಯೇ, ಆಂಗನ್ ಕುಟೀ ಛಬಾಯ್”, ಹೊಗಳುವವರನ್ನು ಹತ್ತಿರ ಇಟ್ಟುಕೊಳ್ಳುವುದಕ್ಕಿಂತ ನಿಂದಕರನ್ನು ತನ್ನ ಮನೆಯ ಅಂಗಳದಲ್ಲಿಯೇ ಒಂದು ಕುಟೀರ ಕಟ್ಟಿಕೊಟ್ಟು ಹತ್ತಿರ ಇಟ್ಟುಕೊಳ್ಳಬೇಕೆಂದು ಹಿಂದಿ ನಾಣ್ಣುಡಿಯೊಂದು ಹೇಳುತ್ತದೆ. ಹೊಗಳಿಕೆಯ ಮಾತುಗಳಿಗಿಂತ ಹೆಚ್ಚಾಗಿ ನಿಂದನೆಯ ಮಾತುಗಳು ಅಥವಾ ಅವಮಾನಕರ ಪ್ರಸಂಗಗಳು ವ್ಯಕ್ತಿಯ ಬೆಳವಣಿಗೆಗೆ ಕಾರಣವಾಗುತ್ತವೆ. ಅವಮಾನಿತನಾದ ವ್ಯಕ್ತಿ ಛಲತೊಟ್ಟು ಜೀವನದಲ್ಲಿ ಮೇಲೆ ಬರಲು ಪ್ರಯತ್ನಿಸುತ್ತಾನೆ. ಹೊಗಳಿಕೆಯಿಂದ ಉಬ್ಬಿದ ವ್ಯಕ್ತಿ ಕ್ರೋಧಭಕ್ಷನಂತೆ ಕೆಳಕ್ಕೆ ಬೀಳುತ್ತಾನೆ.
ಕೀರ್ತಿ-ಗೌರವಗಳು ಶರೀರದ ನೆರಳಿದ್ದಂತೆ. ದಾರಿಯಲ್ಲಿ ನಡೆಯುವವರು ಯಾರೂ ತಮ್ಮ ನೆರಳನ್ನು ನೋಡಿ ನಡೆಯುವುದಿಲ್ಲ. ಶರೀರದ ನೆರಳು ಕಪ್ಪು ಛಾಯೆಯಿಂದ ಕೂಡಿ ವಿಕೃತವಾಗಿರದೆ ಕನ್ನಡಿಯಲ್ಲಿ ಕಾಣುವಂತೆ ಸುಂದರ ರೂಪಿನಿಂದ ಕೂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ಏನೋ! ವ್ಯಕ್ತಿ ತನ್ನ ನೆರಳಿನ ಪರಿವೆಯೇ ಇಲ್ಲದೆ ತನ್ನ ಗುರಿ ಏನೆಂದು ಗುರುತಿಸಿಕೊಂಡು ನಡೆಯುತ್ತಾನೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ದಾರಿಯಲ್ಲಿ ತನ್ನ ಗೊತ್ತು-ಗುರಿಗಳೇನೆಂಬುದನ್ನು ಗುರುತಿಸಿಕೊಂಡು ಹೊಗಳಿಕೆ-ತೆಗಳಿಕೆಗಳಿಗೆ ಬಲಿಯಾಗದೆ ದೃಢವಾದ ಹೆಜ್ಜೆಗಳನ್ನಿಟ್ಟು ಮುನ್ನಡೆಯುವುದನ್ನು ಕಲಿತುಕೊಳ್ಳಬೇಕು.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 27.2.2008.