ಶಿವರಾತ್ರಿ ಸಿನಿಮಾ ರಾತ್ರಿ ಆಗದಿರಲಿ....!
ಹಬ್ಬಹರಿದಿನಗಳು ನಮ್ಮ ನಾಡಿನ ಸಾಂಸ್ಕೃತಿಕ ಬೇರುಗಳು, ತರಗೆಲೆಗಳು ಉದುರಿ ಒಣಗಿಹೋದ ಮರದ ರೆಂಬೆಕೊಂಬೆಗಳಲ್ಲಿ ವಸಂತಕಾಲ ಮತ್ತೆ ಹೊಸ ಚಿಗುರನ್ನು ಮೂಡಿಸುವಂತೆ ಸಂಸಾರದ ಜಂಜಾಟದಲ್ಲಿ ಸೊರಗಿದ ಜೀವಗಳಿಗೆ ಜೀವನದಲ್ಲಿ ಮತ್ತೆ ಹೊಸ ಚೈತನ್ಯವನ್ನು ತಂದುಕೊಡುವ ದಿನಗಳೇ ಈ ಹಬ್ಬಗಳು, ಬಂಧು ಬಳಗ, ಮಕ್ಕಳು ಮೊಮ್ಮಕ್ಕಳು ಒಂದುಗೂಡಿ ಉಲ್ಲಾಸದಿಂದ ನಲಿದು ಜೀವನೋತ್ಸಾಹವನ್ನು ಚಿಗುರಿಸುವ ದಿನಗಳು. ಸಹಸ್ರಾರು ವರ್ಷಗಳಿಂದ ಭಾರತೀಯರು ಆಚರಿಸಿಕೊಂಡು ಬಂದಿರುವ ಇಂತಹ ಅನೇಕ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಶಿವರಾತ್ರಿಯನ್ನು ಕುರಿತು ಅನೇಕ ಪುರಾಣ ಪುಣ್ಯಕಥೆಗಳು ಇವೆ. ಅವುಗಳಲ್ಲಿ ಒಂದು ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮನು ಶರಮಂಚದ ಮೇಲೆ ಮಲಗಿದ್ದಾಗ ಸ್ಮರಿಸಿಕೊಂಡ ಕಥಾನಕ ಹೀಗಿದೆ:
ಇಕ್ಷ್ವಾಕು ವಂಶದಲ್ಲಿ ಚಿತ್ರಭಾನು ಎಂಬ ಹೆಸರಿನ ಒಬ್ಬ ಮಹಾರಾಜನಿದ್ದ. ಅವನು ಮಹಾಶಿವರಾತ್ರಿಯಂದು ತನ್ನ ರಾಣಿಯೊಂದಿಗೆ ಉಪವಾಸ ವ್ರತವನ್ನು ಆಚರಿಸುತ್ತಿದ್ದ. ಅದಕ್ಕೆ ಕಾರಣ ಅವನು ತನ್ನ ಪೂರ್ವ ಜನ್ಮದಲ್ಲಿ ಕಾಶಿಯಲ್ಲಿ ಸುಸ್ವರ ಎಂಬ ಹೆಸರಿನ ಒಬ್ಬ ಬೇಡನಾಗಿದ್ದ. ಕಾಡಿನಲ್ಲಿ ಪ್ರಾಣಿಪಕ್ಷಿಗಳನ್ನು ಬೇಟೆಯಾಡಿ ತಂದು ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಸಂಸಾರ ನಿರ್ವಹಣೆ ಮಾಡುತ್ತಿದ್ದ. ಒಂದು ದಿನ ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಬಹಳ ಹೊತ್ತಿನವರೆಗೂ ಯಾವ ಪ್ರಾಣಿಯೂ ಸಿಗದೆ ನಿರಾಶೆಗೊಂಡ. ಸಂಜೆಗತ್ತಲು ಆವರಿಸುತ್ತಿದ್ದಂತೆ ಒಂದು ಜಿಂಕೆ ಸಿಕ್ಕಿತು. ಅದನ್ನು ಬೇಟೆಯಾಡಿ ಹೊತ್ತುಕೊಂಡು ಹೊರಡುವುದರೊಳಗೆ ಕಗ್ಗತ್ತಲು ಆವರಿಸಿತು. ಊರಿಗೆ ಹಿಂದಿರುಗಲು ದಾರಿ ಕಾಣದಾಯಿತು. ಬೇಟೆಯಾಡಿದ ಜಿಂಕೆಯನ್ನು ಮರದ ಕೊಂಬೆಗೆ ಕಟ್ಟಿದ. ತನ್ನ ರಕ್ಷಣೆಗಾಗಿ ಮರವನ್ನು ಹತ್ತಿ ಕುಳಿತ. ರಾತ್ರಿಯೆಲ್ಲಾ ಮಡದಿ ಮಕ್ಕಳದೇ ಚಿಂತೆ. ಅಡುಗೆ ಮಾಡಲು ಆಹಾರ ಸಾಮಗ್ರಿಗಳು ಇಲ್ಲದೆ ಹಸಿದ ಹೊಟ್ಟೆಯಲ್ಲಿಯೇ ಮಲಗಿರಬಹುದೆಂದು ನೆನೆಸಿಕೊಂಡು ಕಣ್ಣೀರು ಸುರಿಸಿದ. ಅದೇ ಚಿಂತೆಯಲ್ಲಿ ರಾತ್ರಿಯೆಲ್ಲಾ ಮಲಗದೆ ಹಸಿವು ನೀರಡಿಕೆ ಎನ್ನದೆ, ಕಾಲ ಕಳೆಯಲು ಮರದ ಮೇಲಿಂದ ಒಂದೊಂದೇ ಎಲೆಯನ್ನು ಕಿತ್ತು ಕೆಳಕ್ಕೆ ಹಾಕತೊಡಗಿದ. ಮುಂಜಾವದ ನಸುಕಿನಲ್ಲಿಯೇ ಮರದಿಂದ ಸರಸರನೆ ಇಳಿದು ಜಿಂಕೆಯನ್ನು ಹೊತ್ತು ಊರ ಕಡೆ ಧಾವಿಸಿದ. ಅದನ್ನು ಮಾರಾಟ ಮಾಡಿ ಆಹಾರ ಸಾಮಗ್ರಿಗಳನ್ನು ಕೊಂಡು ತಂದು ಮಡದಿಗೆ ಕೊಟ್ಟ. ಮಡದಿ ಅಡುಗೆ ಮಾಡಿ ಗಂಡನಿಗೆ ಪ್ರೀತಿಯಿಂದ ಉಣಬಡಿಸಿದಳು. ಕೈತುತ್ತು ಬಾಯಿಗೆ ಸೇರುವುದರೊಳಗೆ ಭಿಕ್ಷುಕನೊಬ್ಬ ಮನೆಯ ಬಾಗಿಲಲ್ಲಿ ನಿಂತು ದೈನ್ಯದಿಂದ ಬೇಡುತ್ತಿರುವುದು ಕೇಳಿಸಿತು. ಬೇಡನಿಗೆ ಉಣ್ಣಲು ಮನಸ್ಸು ಬರಲಿಲ್ಲ. ತನ್ನ ತಟ್ಟೆಯಲ್ಲಿ ಹೆಂಡತಿ ಬಡಿಸಿದ್ದ ಅನ್ನವನ್ನೇ ಭಿಕ್ಷುನಿಗೆ ಕೊಟ್ಟು ಉಳಿದಿದ್ದನ್ನು ತಾನು ಉಂಡು ತೃಪ್ತಿಪಟ್ಟುಕೊಂಡ. ಬಂದಿದ್ದ ಭಿಕ್ಷುಕ ಮತ್ತೆ ಬೇರೆ ಯಾರೂ ಅಲ್ಲ. ಸಾಕ್ಷಾತ್ ಶಿವನೇ ಭಿಕ್ಷುಕನ ವೇಷದಲ್ಲಿ ಬಂದಿದ್ದನು. ಹಿಂದಿನ ರಾತ್ರಿ ಬೇಡ ಹತ್ತಿ ಕುಳಿತಿದ್ದ ಮರ ಬೇರೆ ಯಾವುದೂ ಆಗದೆ ಬಿಲ್ವ ಮರವಾಗಿತ್ತು. ಬೇಡ ಸುರಿಸಿದ ಕಣ್ಣೀರೇ ಮರದ ಬುಡದಲ್ಲಿದ್ದ ಶಿವಲಿಂಗಕ್ಕೆ ಅಭಿಷೇಕವಾಗಿತ್ತು. ರಾತ್ರಿಯೆಲ್ಲಾ ನಿದ್ರೆಗೆಟ್ಟು ಮರದಿಂದ ಹರಿದು ಕೆಳಗೆ ಹಾಕುತ್ತಿದ್ದ ಎಲೆಯೇ ಲಿಂಗದ ಮೇಲೆ ಬೀಳುತ್ತಿದ್ದ ಬಿಲ್ವಪತ್ರೆಯಾಗಿತ್ತು. ಬೇಡ ತನಗೆ ಅರಿವಿಲ್ಲದೆಯೇ ಇಡೀ ರಾತ್ರಿ ಶಿವನ ಪೂಜೆ ಮಾಡಿದಂತಾಗಿತ್ತು. ಹೀಗಾಗಿ ಶಿವ ಅವನಿಗೆ ಕೈಲಾಸ ಪದವಿಯನ್ನು ಅನುಗ್ರಹಿಸಿದ. ಈ ಹಿನ್ನೆಲೆಯಲ್ಲಿ ಶಿವರಾತ್ರಿಯಂದು ಇಡೀ ರಾತ್ರಿ ಜಾಗರಣೆ ಮಾಡುವುದು, ಉಪವಾಸ ಮಾಡುವುದು, ಶಿವನ ನಾಮಸ್ಮರಣೆ ಮಾಡುವುದು ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ನಡೆದು ಬಂದಿದೆ.
ಶಿವರಾತ್ರಿಯ ಹಿನ್ನೆಲೆಯನ್ನು ವಿವರಿಸುವ ಈ ಕಥೆ ಅನೇಕ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ತಾನು ಹತ್ತಿ ಕುಳಿತಿರುವುದು ಬಿಲ್ವ ಮರ, ಅದರಿಂದ ಕಿತ್ತು ಕೆಳಗೆ ಎಸೆಯುತ್ತಿರುವುದು ಬಿಲ್ವಪತ್ರೆ, ಕೆಳಗೆ ಅದರ ಬುಡದಲ್ಲಿರುವುದು ಶಿವಲಿಂಗ, ತನ್ನ ಕಣ್ಣೀರು ಬೀಳುತ್ತಿರುವುದು ಆ ಲಿಂಗದ ಮೇಲೆ, ಇದಾವುದರ ಪರಿವೇ ಇಲ್ಲದ ಆ ಬೇಡ ಇಡೀ ರಾತ್ರಿ ಅನ್ಯಮನಸ್ಕನಾಗಿ ಮಾಡುತ್ತಿದ್ದ ಅವನ ಯಾಂತ್ರಿಕ ದೈಹಿಕ ಕ್ರಿಯೆ ಶಿವನ ಪೂಜೆ ಹೇಗಾಗಬಲ್ಲುದು? ಹೀಗೆ ಮನುಷ್ಯನು ತಿಳಿಯದೆ ಮಾಡುವ ಕ್ರಿಯೆಗಳು ಫಲಕಾರಿಯಾಗಲು ಸಾಧ್ಯವಿಲ್ಲ ಎಂದು ಅಲ್ಲಗಳೆಯುವವರೂ ಇದ್ದಾರೆ; ತಿಳಿಯಲಿ ತಿಳಿಯದಿರಲಿ ಒಟ್ಟಾರೆ ಮಾಡಿದ ಕ್ರಿಯೆಗೆ ತಕ್ಕ ಪ್ರತಿಫಲ ದೊರಕೇ ದೊರಕುತ್ತದೆ ಎಂದು ದೃಢವಾಗಿ ನಂಬುವವರೂ ಇದ್ದಾರೆ. ಮಗು ತಿಳಿಯದೆ ಬೆಂಕಿಯನ್ನು ಮುಟ್ಟಿದರೆ ಕೈ ಸುಡುವುದಿಲ್ಲವೇ? ಮನುಷ್ಯ ತಿಳಿಯದೆ ವಿಷವನ್ನು ಕುಡಿದರೆ ಸಾಯುವುದಿಲ್ಲವೇ? ಗ್ಲಾಸಿನಲ್ಲಿ ಇರುವುದು ನೀರೆಂದು ಕುಡಿದೆ, ಗೊತ್ತಾಗಲಿಲ್ಲ ಎಂದು ಪರಿತಪಿಸಿದರೆ ಸಾಯದಿರಲು ಸಾಧ್ಯವೇ? ಎಂದು ಸಮರ್ಥನೆ ಮಾಡಿಕೊಳ್ಳುವವರೂ ಇದ್ದಾರೆ. ಆದರೆ ಪೂಜೆ ಮಾಡುತ್ತಿದ್ದೇನೆಂಬ ಅರಿವೇ ಇಲ್ಲದೆ ಬೇಡ ಮಾಡುತ್ತಿದ್ದ ಇಂತಹ ಯಾಂತ್ರಿಕ ಕ್ರಿಯೆಯನ್ನು ನೋಡಿ ಮೋಸಹೋಗುವಷ್ಟು ಶಿವನು ದಡ್ಡನೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಫೀಸಿನಿಂದ ಗಂಡ ಫೋನ್ ಮಾಡಿ “I love you, honey!” ಎಂದ ಮಾತ್ರಕ್ಕೆ ಯಾವ ಹೆಂಡತಿಯೂ ತನ್ನ ಗಂಡ ತನ್ನನ್ನು ತುಂಬಾ ಪ್ರೀತಿಸುತ್ತಾನೆಂದು ನಂಬಿ ಮೋಸಹೋಗುವುದಿಲ್ಲ. ಹೀಗಿರುವಾಗ ಸರ್ವಜ್ಞನೆನಿಸಿಕೊಂಡ ಶಿವನಿಗೆ ತನ್ನನ್ನು ನಿಜವಾದ ಭಕ್ತಿಯಿಂದ ಪೂಜೆ ಮಾಡುತ್ತಿರುವ ಸದ್ಭಕ್ತ ಯಾರು? ಕಾಟಾಚಾರಕ್ಕೆ ಮಾಡುತ್ತಿರುವ ಡಾಂಭಿಕ ವ್ಯಕ್ತಿ ಯಾರು ಎಂದು ತಿಳಿದಿರಲೇಬೇಕಲ್ಲವೇ? ಹಾಗೆ ನೋಡಿದರೆ ಆ ಬೇಡ ಮಾಡುತ್ತಿದ್ದುದು ಕಾಟಾಚಾರದ ಪೂಜೆಯೂ ಅಲ್ಲ. ಒಟ್ಟಾರೆ ಪೂಜೆಯೇ ಅಲ್ಲ, ಇಲ್ಲಿ ಶಿವನು ಮೆಚ್ಚುವಂತಹ ಕ್ರಿಯೆ ಏನಿದೆ? ಬಹುಶಃ ಆ ಬೇಡನ ಹೃದಯದಲ್ಲಿ ತನ್ನ ವೈಯಕ್ತಿಕ ಸುಖಕ್ಕಿಂತ ತನ್ನ ಮಡದಿ-ಮಕ್ಕಳ ಮತ್ತು ಭಿಕ್ಷುಕನ ಬಗ್ಗೆ ಇದ್ದ ಮಾನವೀಯ ಭಾವನೆಗಳನ್ನು ಬಿಟ್ಟರೆ ಬೇರೆ ಏನೂ ಇಲ್ಲ.
ಪೂಜೆ ಮಾಡುವ ಭಕ್ತನ ಮನಸ್ಸಿನಲ್ಲಿ ದೇವರ ಮೇಲೆ ನಿಜವಾದ ಭಕ್ತಿ ಇರಬೇಕು. ಭಕ್ತಿ ಎಂದರೇನು? ಲೌಕಿಕ ಜೀವನದ ವಿವಿಧ ಸಂಬಂಧಗಳಲ್ಲಿ ಪರಸ್ಪರರ ಮಧ್ಯೆ ಇರುವ ಅನುರಾಗವೇ ಪ್ರೀತಿ (love), ಪಾರಲೌಕಿಕ ಜೀವನದಲ್ಲಿ ಭಕ್ತನಿಗೆ ಭಗವಂತನ ಮೇಲೆ ಇರುವ ಪ್ರೀತಿಯೇ ಭಕ್ತಿ (devotion), ಸಾ ಪರಾನುರಕ್ತಿರೀಶ್ವರೇ ಎನ್ನುತ್ತದೆ ನಾರದ ಭಕ್ತಿಸೂತ್ರ, ಭಕ್ತನಿಗೆ ಭಗವಂತನ ಮೇಲಿರುವ ಅತ್ಯಂತ ಅನುರಾಗವೇ ಭಕ್ತಿ, ಇಬ್ಬರು ಮಕ್ಕಳಲ್ಲಿ ತಾಯಿಗೆ ಯಾರ ಮೇಲೆ ಹೆಚ್ಚು ಪ್ರೀತಿ ಇದೆ ಎಂಬುದನ್ನು ಸೂಕ್ಷ್ಮ ಸಂವೇದನೆಯ ಮಗು ಗುರುತಿಸಬಲ್ಲುದು. ಹಾಗೆಯೇ ಭಕ್ತನು ತನ್ನ ಮೇಲೆ ಇಟ್ಟಿರುವ ಭಕ್ತಿನಿಷ್ಠೆಯನ್ನು ಭಗವಂತ ಪರೀಕ್ಷಿಸುತ್ತಾನೆ. ಭಗವಂತನ ಒಲುಮೆಯನ್ನು ಪಡೆಯಲು ಮಾಡುವ ಪೂಜೆಯಲ್ಲಿ ಅವನ ಹೃದಯವನ್ನು ಗೆಲ್ಲುವ ಭಾವತೀವ್ರತೆ ಇರಬೇಕು. ಆಗ ಭಕ್ತಿಕಂಪಿತ ನಮ್ಮ ಕೂಡಲಸಂಗಮದೇವ. ಇಲ್ಲದೇ ಹೋದರೆ “ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ, ಆ ಪೂಜೆಯೂ ಆ ಮಾಟವೂ ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ, ಅಪ್ಪಿದರೆ ಸುಖವಿಲ್ಲ, ಮೆಲಿದರೆ ರುಚಿಯಿಲ್ಲ!” ಎನ್ನುತ್ತಾರೆ ಬಸವಣ್ಣನವರು. ಪ್ರಜ್ಞಾಪೂರ್ವಕವಾಗಿ ಮಾಡಿದರೂ ಪೂಜೆ ಮಾಡುವಾತನ ಮನಸ್ಸಿನಲ್ಲಿ ದೇವರ ಮೇಲೆ ಭಕ್ತಿ ಇಲ್ಲದೆ ಹೋದರೆ ಆ ಪೂಜೆ ಚಿತ್ರಪಟಲದಲ್ಲಿರುವ ಆತ್ಮೀಯ ವ್ಯಕ್ತಿಯ ಭಾವಚಿತ್ರವಿದ್ದಂತೆ. ಅಪ್ಪುಗೆಯ ಆನಂದ ಅಲ್ಲಿರುವುದಿಲ್ಲ. ಚಿತ್ರದಲ್ಲಿರುವ ಕಬ್ಬು ಇದ್ದಂತೆ. ಕಬ್ಬಿನ ರಸದ ರುಚಿ ಅಲ್ಲಿರುವುದಿಲ್ಲ, ರುಚಿಯ ಮಾತಿರಲಿ, ರಸವೇ ಅಲ್ಲಿರುವುದಿಲ್ಲ.
ಬಂಡಿ ತುಂಬ ಪತ್ರೆಯ ತಂದು
ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಿ,
ತಾಪತ್ರಯವ ಕಳೆದು ಪೂಜಿಸಿ, ತಾಪತ್ರಯವ ಲಿಂಗನೊಲ್ಲ,
ಕೂಡಲ ಸಂಗಮ ದೇವ ಬರಿಯುದಕದಲ್ಲಿ ನೆನೆವನೆ?
ಎನಿಸುಕಾಲ ಕಲ್ಲು ನೀರೊಳಗಿದ್ದು ಫಲವೇನು?
ನೆನೆದು ಮೃದುವಾಗಬಲ್ಲುದೇ?
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ?
ಮನದಲ್ಲಿ ದೃಢವಿಲ್ಲದನ್ನಕ್ಕ!
ಬಂಡಿ ತುಂಬ ಬರೀ ಪತ್ರೆಯನ್ನು ತಂದು ಲಿಂಗದ ಮೇಲೆ ಹಾಕಿದರೆ ಲಿಂಗಪೂಜೆ ಎನಿಸುವುದಿಲ್ಲ. ದೇವರನ್ನು ಮನಸ್ಸಿನಿಂದ ನೆನೆಯಬೇಕು. ತನ್ನೆಲ್ಲಾ ತಾಪತ್ರಯಗಳನ್ನು ಮರೆತು ಪೂಜಿಸಬೇಕು. ಯಾಂತ್ರಿಕವಾಗಿ ಲಿಂಗಕ್ಕೆ ಅಭಿಷೇಕ ಮಾಡಿದರೆ ಸಾಲದು. ಲಿಂಗವನ್ನು ನೆನೆಸಬೇಕು - ನೀರಿನಿಂದ ಅಲ್ಲ, ಮನಸ್ಸಿನಿಂದ ಮನಸ್ಸು ನಿಶ್ಚಲವಾಗಿರಬೇಕು. ಕಲ್ಲು ಸದಾ ನೀರಲ್ಲಿದ್ದ ಮಾತ್ರಕ್ಕೆ ತನ್ನ ಕಾಠಿಣ್ಯವನ್ನು ಕಳೆದುಕೊಂಡು ಮೃದುವಾಗುವುದಿಲ್ಲ. ಹಾಗೆಯೇ ದೇವರಲ್ಲಿ ದೃಢವಾದ ನಂಬಿಕೆ ಇಲ್ಲದೆ ಮಾಡುವ ಪೂಜೆ ನಿರರ್ಥಕ.
ಮಾಡುವುದು, ಮಾಡುವುದು ಮನಮುಟ್ಟಿ ಮಾಡುವುದು
ಮಾಡುವುದು, ಮಾಡುವುದು ತನುಮುಟ್ಟಿ ಮಾಡುವುದು
ತನುಮುಟ್ಟಿ ಮನಮುಟ್ಟದಿರ್ದಡೆ
ಕೂಡಲ ಸಂಗಮ ದೇವನೇತರಲ್ಲಿಯೂ ಮೆಚ್ಚ!
ಏನೇ ಮಾಡಿದರೂ ಶ್ರದ್ಧೆಯಿಂದ ಮಾಡಬೇಕು. ನಂಬಿ ಕರೆದೊಡೆ ಓ ಎನ್ನನೇ ಶಿವನು. ಹೀಗೆ ವೈಚಾರಿಕ ದೃಷ್ಟಿಯಿಂದ ನೋಡಿದರೆ ಯಾಂತ್ರಿಕವಾಗಿ ಮಾಡಿದ ಪೂಜೆ ನಿಜವಾದ ಪೂಜೆ ಆಗುವುದಿಲ್ಲ, ನಮ್ಮ ಅನೇಕ ಸಂಪ್ರದಾಯಗಳಿಗೆ ಮತ್ತು ಧಾರ್ಮಿಕ ವಿಧಿ-ವಿಧಾನಗಳಿಗೆ ತನ್ನದೇ ಆದ ವಿಶಿಷ್ಟ ಅರ್ಥವಿರುತ್ತದೆ. ಕಾಲಕ್ರಮೇಣ ಅವು ತಮ್ಮ ಮೂಲಾರ್ಥವನ್ನು ಕಳೆದುಕೊಂಡು ಅಂಧಾನುಕರಣೆಯ ಶುಷ್ಕ ಆಚರಣೆಗಳಾಗಿಬಿಡುತ್ತವೆ.
ಹಬ್ಬದ ದಿನದಂದು ಮೊಮ್ಮೊಗನೊಬ್ಬ ಪೂಜೆಗೆ ಕುಳಿತ, ಪೂಜಾಪರಿಕರಗಳಲ್ಲಿ ಏನೋ ಕೊರತೆ ಇದೆಯೆಂದು ಅನ್ನಿಸಿತು. ಏನಿರಬಹುದೆಂದು ಯೋಚಿಸಿದ. ಅಜ್ಜನ ಪಕ್ಕದಲ್ಲಿ ಕುಳಿತು ಪೂಜಾವಿಧಾನವನ್ನು ನೋಡಿದ್ದ ಅವನಿಗೆ ತಟ್ಟನೆ ನೆನಪಾಯಿತು. ಅಜ್ಜ ಹಬ್ಬದ ದಿನಗಳಲ್ಲಿ ಮರೆಯದೆ ಮನೆಯಲ್ಲಿದ್ದ ಬೆಕ್ಕನ್ನು ಹಿಡಿದು ಅದರ ಮೇಲೆ ಪುಟ್ಟಿಯನ್ನು ಬೋರಲು ಹಾಕಿ ಕಲ್ಲನ್ನು ಹೇರಿ ಪೂಜೆ ಆರಂಭಿಸುತ್ತಿದ್ದ. ದುರದೃಷ್ಟವಶಾತ್ ಅಜ್ಜ ಮರಣ ಹೊಂದಿದ ಕೆಲವೇ ದಿನಗಳಲ್ಲಿ ಬೆಕ್ಕೂ ಸಹ ಕೈಲಾಸವಾಸಿಯಾಗಿತ್ತು. ಮೊಮ್ಮೊಗ ಅಕ್ಕಪಕ್ಕದವರ ಮನೆಗೆ ಹೋಗಿ ಒಂದು ಕರಿಬೆಕ್ಕನ್ನು ಹಿಡಿದುಕೊಂಡು ಬಂದು ಅಜ್ಜ ಮಾಡಿದಂತೆ ಅದರ ಮೇಲೆ ಪುಟ್ಟಿಯನ್ನಿಟ್ಟು ಕಲ್ಲನ್ನು ಹೇರಿ ಪೂಜೆ ಆರಂಭಿಸಿದ. ಅಜ್ಜ ಏಕೆ ಹಾಗೆ ಮಾಡುತ್ತಿದ್ದನೆಂದು ಮೊಮ್ಮಗ ಆಲೋಚಿಸುವ ಗೋಜಿಗೇ ಹೋಗಲಿಲ್ಲ, ಅಜ್ಜ ಹಾಗೆ ಮಾಡಲು ಕಾರಣ ಪೂಜಾ ಸಂದರ್ಭದಲ್ಲಿ ಮನೆಯ ಬೆಕ್ಕು ಬಂದು ಪೂಜಾಪರಿಕರಗಳನ್ನು ಮುಟ್ಟಿ, ಮಡಿಯಲ್ಲಿದ್ದ ತನ್ನ ಮೈಮೇಲೆ ಕುಳಿತು ಅಪವಿತ್ರಗೊಳಿಸದಿರಲಿ ಎಂದು. ಆದರೆ ಮೊಮ್ಮೊಗ ತಿಳಿದುಕೊಂಡದ್ದೇ ಬೇರೆ: ಹಿರಿಯರಿಂದ ನಡೆದುಕೊಂಡು ಬಂದ ಸಂಪ್ರದಾಯದ ಪ್ರಕಾರ ಬೆಕ್ಕನ್ನು ಹಾಗೆ ಪುಟ್ಟಿಯಲ್ಲಿಟ್ಟು ಪೂಜೆ ಆರಂಭಿಸದೇ ಹೋದರೆ ಪೂಜೆ ಅಪೂರ್ಣ ಎಂದು! ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ನಮ್ಮ ಅನೇಕ ಸಂಪ್ರದಾಯಗಳು ಈ ರೀತಿ ಅರ್ಥವಿಲ್ಲದ ಅಂಧಾನುಕರಣೆಯ ಆಚರಣೆಗಳಾಗಿವೆ.
ಕೆಲವೊಮ್ಮೆ ಈ ಸಾಂಪ್ರದಾಯಿಕ ಆಚರಣೆಗಳು ಕಾಲಕ್ರಮೇಣ ಹೊಸ ಹೊಸ ರೂಪವನ್ನು ತಾಳುತ್ತಾ ಹೋಗುತ್ತವೆ. ಹರಿವ ನದಿಗೆ ಹಳ್ಳಕೊಳ್ಳಗಳು ಸೇರಿದಂತೆ! ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ ನಗರದ ಸಮೀಪದಲ್ಲಿರುವ ಬೃಂದಾವನದ ಹೊರವಲಯದಲ್ಲಿ ಗೋಪೀಶ್ವರ್ ಮಹಾದೇವ್ ಎಂಬ ಹೆಸರಿನ ಶಿವದೇವಾಲಯವಿದೆ. ಎಲ್ಲೆಲ್ಲಿ ಶ್ರೀಕೃಷ್ಣನ ಪುಣ್ಯಕ್ಷೇತ್ರಗಳಿವೆಯೋ ಅಲ್ಲೆಲ್ಲಾ ಈಶ್ವರನ ದೇವಾಲಯಗಳೂ ಇವೆ: ಮಥುರಾದಲ್ಲಿ ಭೂತೇಶ್ವರ ಮಹಾದೇವ್, ಗೋವರ್ಧನದಲ್ಲಿ ಚಕ್ರೇಶ್ವರ ಮಹಾದೇವ್, ನಂದಗಾಂವ್ನಲ್ಲಿ ನಂದೀಶ್ವರ ಮಹಾದೇವ್ ಇತ್ಯಾದಿ! ಬೃಂದಾವನದಲ್ಲಿರುವ ಗೋಪೀಶ್ವರ್ ಮಹಾದೇವ್ ಕುರಿತು ಒಂದು ರೋಚಕವಾದ ಐತಿಹ್ಯವಿದೆ. ಬೃಂದಾವನದಲ್ಲಿ ಗೋಪಿಕೆಯರೊಂದಿಗೆ ನಡೆಯುತ್ತಿದ್ದ ಶ್ರೀಕೃಷ್ಣನ ಮಹಾರಾಸಲೀಲೆಯನ್ನು ನೋಡಬೇಕೆಂದು ಶಿವನಿಗೆ ಮನಸ್ಸಾಯಿತಂತೆ. ಅದಕ್ಕಾಗಿ ಶಿವ ಪಾರ್ವತಿಯೊಡನೆ ಬಂದಾಗ ಪಾರ್ವತಿಗೆ ಮಾತ್ರ ಪ್ರವೇಶ ದೊರೆಯಿತು. ಆದರೆ ಶಿವನನ್ನು ಬೃಂದಾವನದ ಹೊರವಲಯದಲ್ಲಿಯೇ ಬೃಂದಾ ಎಂಬ ಹೆಸರಿನ ಗೋಪಿ ತಡೆದು ನಿಲ್ಲಿಸಿದಳಂತೆ. ರಾಸಲೀಲೆಯಲ್ಲಿ ಭಾಗವಹಿಸಲು ಗೋಪಿಕಾ ಸ್ತ್ರೀಯರಿಗೆ ಮಾತ್ರ ಅವಕಾಶವಿದೆಯೇ ಹೊರತು ಕೃಷ್ಣನನ್ನು ಬಿಟ್ಟು ಬೇರಾವ ಪರಪುರುಷರಿಗೂ ಅವಕಾಶವಿಲ್ಲವೆಂದು ನಿರಾಕರಿಸಿದಳಂತೆ. ಆದಕಾರಣ ಶಿವನು ಹಿಂದಿರುಗಿ ಗೋಪಿಯ ರೂಪವನ್ನು ಧರಿಸಿ ಬಂದು ಯಾವ ಅಡೆತಡೆ ಇಲ್ಲದೆ ಒಳಗೆ ಹೋದನಂತೆ. ಇದನ್ನು ಗಮನಿಸಿದ ಶ್ರೀಕೃಷ್ಣ ನೂತನವಾಗಿ ಸೇರ್ಪಡೆಯಾದ ಈ ಗೋಪಿಗೆ ಗೋಪೀಶ್ವರಾ ಎಂದು ಹೆಸರಿಟ್ಟನಂತೆ. ಇದರಿಂದ ಎಲ್ಲಾ ಗೋಪಿಕೆಯರ ಒಡತಿಯಾದ ರಾಧೆ ಮುನಿಸಿಕೊಂಡಳು. ನಂತರ ಕೃಷ್ಣನಿಂದ ವಿಷಯ ತಿಳಿದು ಸಂತೋಷಪಟ್ಟಳಂತೆ. ಶ್ರೀಕೃಷ್ಣನು ರಾಸಲೀಲೆಯ ಸಂರಕ್ಷಣೆಯ ಜವಾಬ್ದಾರಿಯನ್ನು ಗೋಪೀಶ್ವರ ಮಹಾದೇವ್ ಗೆ ವಹಿಸಿದನಂತೆ. ಆದಕಾರಣ ವೃಂದಾವನಕ್ಕೆ ಬರುವ ಯಾತ್ರಾರ್ಥಿಗಳು ಮೊದಲು ಗೋಪೀಶ್ವರ ಮಹಾದೇವನ ದರ್ಶನ ಮಾಡಿಕೊಂಡು ನಂತರ ವೃಂದಾವನದೊಳಗೆ ಪ್ರವೇಶಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗೋಪೀಶ್ವರ ಮಹಾದೇವ್ ಗುಡಿಯಲ್ಲಿರುವ ಶಿವಲಿಂಗವನ್ನು ಗೋಪಿಕಾಸ್ತ್ರೀಯರ ವಸ್ತ್ರಾಭರಣಗಳಿಂದ ಅಲಂಕರಿಸುತ್ತಾರೆ. ಇದುವರೆಗೂ ಸಾಂಪ್ರದಾಯಿಕವಾಗಿ ಸೀರೆ, ರವಿಕೆ, ಬಳೆ, ಕುಂಕುಮ, ಬಾಚಣಿಕೆಗಳಿಂದ ಅಲಂಕರಿಸಿಕೊಂಡು ಬಂದಿದ್ದ ಗೋಪೀಶ್ವರ್ ಮಹಾದೇವನ ಪಕ್ಕದಲ್ಲಿ ಈಗ ಆಧುನಿಕ ವಿದ್ಯಾವಂತ ಮಹಿಳೆಯರ ವ್ಯಾನಿಟಿ ಬ್ಯಾಗ್, ಲೇಡೀಸ್ ಪರ್ಸ್ ಮತ್ತು ಲಿಪ್ಸ್ಟಿಕ್ಗಳಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ! ಇವುಗಳ ಜೊತೆಗೆ ಇನ್ನು ಮುಂದೆ ಶಿವಲಿಂಗದ ಎಡಬಲದಲ್ಲಿ ಆಧುನಿಕ ಮಹಿಳೆಯರ ನಿತ್ಯವಿನೂತನ ಸೌಂದರ್ಯವರ್ಧನಗಳ, ಸುಗಂಧ ದ್ರವ್ಯಗಳ ಕರಂಡಕಗಳು ಸೇರ್ಪಡೆಯಾಗುತ್ತಾ ಹೋದಲ್ಲಿ ಮುಂದೊಂದು ದಿನ ಗೋಪೀಶ್ವರ್ ಮಹಾದೇವನ ಈ ಗುಡಿ ಆಧುನಿಕ ಗೋಪಿಕೆಯರಿಗೆ ಬ್ಯೂಟಿ ಪಾರ್ಲರ್ ಆಗಿ ಪರಿಣಮಿಸಿದರೆ ಆಶ್ಚರ್ಯವೇನಿಲ್ಲ!
ಶಿವರಾತ್ರಿಯ ಮೂಲ ಆಶಯ ಮನುಷ್ಯ ವರ್ಷಕ್ಕೊಮ್ಮೆಯಾದರೂ ಸಾಂಸಾರಿಕ ಜೀವನದ ಜಂಜಾಟವನ್ನು ಮರೆತು ಶಿವನನ್ನು ಆರಾಧಿಸಿ ಶರೀರದ ಹಸಿವು-ತೃಷೆಗಳನ್ನು ಮೆಟ್ಟಿ ನಿಂತು ತನ್ನೊಳಗೆ ಅಡಗಿರುವ ಆತ್ಮದ ಅರಿವನ್ನು ಪಡೆಯಲಿ; ಆಧ್ಯಾತ್ಮಿಕ ಹಸಿವು-ತೃಷೆಗಳ ಕಡೆ ಗಮನ ಹರಿಸಲಿ ಎಂಬುದಾಗಿದೆ. ತಾನೆಷ್ಟೇ ಶ್ರೀಮಂತನಾಗಿದ್ದರೂ, ಬುದ್ದಿವಂತನಾಗಿದ್ದರೂ ಆತ್ಮಜ್ಞಾನವಿಲ್ಲದವನು ಬಡವ. ಭಡವ ಎಂದು ಏರಿದ ದನಿಯಲ್ಲಿ ಹೇಳಿದರೂ ತಪ್ಪಿಲ್ಲ. Blessed are the poor in Spirit, for their’s is the Kingdom of Heaven, ಯಾರು ಆಧ್ಯಾತ್ಮಿಕ ಸಾಧನೆಯಲ್ಲಿ ತನ್ನನ್ನು ತಾನು ಬಡವನೆಂದು ತಿಳಿದುಕೊಂಡು ಆ ದಾರಿಯಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟು ಮುಂದೆ ಸಾಗುತ್ತಾನೋ ಅವನಿಗೆ ದೇವರ ಸಾಮ್ರಾಜ್ಯವೇ ದೊರೆಯುತ್ತದೆ.
ಶಿವರಾತ್ರಿ ವರ್ಷಕ್ಕೊಮ್ಮೆ ಆಚರಿಸುವ ಒಂದು ದಿನದ ಧಾರ್ಮಿಕ ಆಚರಣೆಯಾಗಬಾರದು. ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು ಎನ್ನುತ್ತಾರೆ ಬಸವಣ್ಣನವರು. ಅಂದರೆ ನಿತ್ಯವೂ ರಾತ್ರಿ ಜಾಗರಣೆ ಮಾಡಬೇಕೆಂದರ್ಥವಲ್ಲ. ತನ್ನ ನಡೆ-ನುಡಿಗಳಲ್ಲಿ ಮನುಷ್ಯ ಸದಾ ಜಾಗರೂಕನಾಗಿರಬೇಕೆಂದರ್ಥ.
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೋ,
ಶರಣ ನಡೆದುದೆ ಪಾವನ ಕಾಣಿರೋ,
ಶರಣ ನುಡಿದುದೆ ಶಿವತತ್ವ ಕಾಣಿರೋ!
ಕೂಡಲ-ಸಂಗನ ಶರಣನ
ಕಾಯವೇ ಕೈಲಾಸ ಕಾಣಿರೋ!
ತನ್ನ ನಡೆ-ನುಡಿಯಲ್ಲಿ ಪರಿಶುದ್ದನಾದ ವ್ಯಕ್ತಿ ರಾತ್ರಿ ಹೊತ್ತು ಸಾಂಪ್ರದಾಯಿಕವಾಗಿ ಜಾಗರಣೆ ಮಾಡದೆ ನಿದ್ರೆ ಮಾಡಿದರೂ ಅದು ಒಂದು ರೀತಿಯಲ್ಲಿ ಶಿವನ ಧ್ಯಾನವೇ ಆಗಿರುತ್ತದೆ. ಹಗಲು ಹೊತ್ತು ಎದ್ದು ಕುಳಿತು ತನ್ನ ದೈನಂದಿನ ಕೆಲಸದಲ್ಲಿ ತೊಡಗಿದ್ದರೂ ಅದು ಪವಿತ್ರವಾದ ಶಿವರಾತ್ರಿಯ ಜಾಗರಣೆಯಾಗಿರುತ್ತದೆ. ಅಂತರಂಗ-ಬಹಿರಂಗ ಶುದ್ದಿಯುಳ್ಳ ಅಂತಹ ವ್ಯಕ್ತಿಯ ಶರೀರವೇ ಶಿವನ ಆವಾಸ ಸ್ಥಾನವಾದ ಕೈಲಾಸವಾಗಿರುತ್ತದೆ! ಕಾಯಕವೇ ಕೈಲಾಸ ಬಹಿರಂಗ ಕ್ರಿಯೆಯಲ್ಲಿ ಕಂಡುಬರುವ ಪರಿಶುದ್ಧಿಯಾದರೆ ಕಾಯವೇ ಕೈಲಾಸ ಅಂತರಂಗದಲ್ಲಿ ಕಂಡುಬರುವ ಪರಿಶುದ್ಧಿ.
ಇದನ್ನರಿಯದೆ ವರ್ಷಕ್ಕೊಮ್ಮೆ ಯಾಂತ್ರಿಕವಾಗಿ ಆಚರಿಸುವ ಶಿವರಾತ್ರಿ ನಿದ್ದೆಗೇಡು. ನಿದ್ದೆಗಣ್ಣಿನಲ್ಲಿ ಆಕಳಿಸುತ್ತಾ ಮಾಡುವ ಮಾರನೆಯ ದಿನದ ಕೆಲಸವೂ ಹಾಳು! ರಾತ್ರಿಯೆಲ್ಲಾ ತೂಕಡಿಸದೆ ಜಾಗರಣೆ ಮಾಡಬೇಕೆಂದು ಟಿ.ವಿ. ಮುಂದೆ ಕುಳಿತು ಒಂದರ ಮೇಲೊಂದು ಸಿನಿಮಾ ನೋಡಿದರೆ ಅದು ಸಿನಿಮಾ ರಾತ್ರಿಯಾಗಬಲ್ಲುದೇ ಹೊರತು ಶಿವರಾತ್ರಿಯಾಗಲು ಖಂಡಿತಾ ಸಾಧ್ಯವಿಲ್ಲ.
ಸಹೃದಯ ಓದುಗರೇ! ನಿಮ್ಮೆಲ್ಲರಿಗೂ ಆತ್ಮೋನ್ನತಿಯ ಮಾರ್ಗವನ್ನು ತೋರಿಸುವ ಮಹಾಶಿವರಾತ್ರಿಯ ಶುಭಾಶಂಸನೆಗಳು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 5.3.2008.