ಶ್ರೀ ರಾಮನವಮಿ ವಿಶೇಷ : ಶ್ರೀರಾಮ ಕೆಟ್ಟ ಗಂಡನೆ?
“ರಾಮನೊಬ್ಬ ಕೆಟ್ಟ ಗಂಡ” : ದೇಶದ ಹಿರಿಯ ವಕೀಲ ಹಾಗೂ ನುರಿತ ರಾಜಕಾರಣಿ ರಾಂ ಜೇಠ್ ಮಲಾನಿಯವರ ಅಂಬೋಣ. ಹೀಗೆ ತ್ರೇತಾಯುಗದ ಮರ್ಯಾದಾ ಪುರುಷೋತ್ತಮ ರಾಮನನ್ನು ಕಲಿಯುಗದ ಮರ್ಯಾದೆ ಇಲ್ಲದ ಕಟೆಕಟೆಯಲ್ಲಿ ಹಿಡಿದೆಳೆತಂದು ನಿಲ್ಲಿಸಿ ರಾದ್ಧಾಂತವೆಬ್ಬಿಸಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಯಾರೋ ಒಬ್ಬ ಅಗಸ ಕೆಟ್ಟದಾಗಿ ಮಾತನಾಡಿದ ಎಂದ ಮಾತ್ರಕ್ಕೆ ಸೀತೆಯನ್ನು ಕಾಡಿಗಟ್ಟಿದ ರಾಮ ಒಬ್ಬ ಕೆಟ್ಟ ಗಂಡ ಎಂದು ಆರೋಪಿಸಿದ್ದಾರೆ. ಹೀಗೆ ಆರೋಪಿಸಿರುವ ಜೇಠ್ ಮಲಾನಿ ಬಗೆಗೆ ಹಿಂದೂ ಶ್ರದ್ಧಾಳುಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಾರಾದರೂ ಸರಿಯಾದ ಫೀಸನ್ನು ಕೊಟ್ಟಿದ್ದರೆ ಹೆಸರಾಂತ ವಕೀಲರಾದ ರಾಂ ಜೇಠ್ಮಲಾನಿ ರಾಮನ ಪರವಾಗಿ ವಕಾಲತ್ತು ವಹಿಸುತ್ತಿದ್ದರು; ಅವರು ತಮ್ಮ ಹೆಸರನ್ನು “ರಾವಣ್ ಝೂಠ್ಮಲಾನಿ” ಎಂದು ಬದಲಾಯಿಸಿಕೊಳ್ಳುವುದು ಸೂಕ್ತ ಎಂದು ಕೆಲವರು ಕಟಕಿಯಾಡಿದ್ದಾರೆ!
ಯಾವುದೇ ಘಟನೆ ಕುರಿತು ಟೀಕೆ ಮಾಡುವಾಗ ಅದರಲ್ಲೂ ವಿಶೇಷವಾಗಿ ಧಾರ್ಮಿಕ ವಿಚಾರಗಳನ್ನು ಕುರಿತಂತೆ ತುಂಬಾ ಎಚ್ಚರ ವಹಿಸಬೇಕಾಗುತ್ತದೆ. ಹಲವು ದಷ್ಟಿಕೋನಗಳಿಂದ ನೋಡಿ ಸರಿತಪ್ಪುಗಳನ್ನು ವಿವೇಚನೆ ಮಾಡಬೇಕಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವವರು ಸಾರ್ವಜನಿಕ ವೇದಿಕೆಗಳಲ್ಲಿ ಯಾವ ಕಾರಣಕ್ಕೂ ತೂಕತಪ್ಪಿ ಮಾತನಾಡಬಾರದು. ವಾಕ್ ಸ್ವಾತಂತ್ರ್ಯವಿದೆ ಎಂದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವ ಮಾತುಗಳನ್ನೂ ಆಡಬಾರದು.
ಅನೇಕ ರಾಜ ಮಹಾರಾಜರುಗಳು ಬಹುಪತ್ನೀ ವಲ್ಲಭರು. “ರಾಜಾನಃ ಬಹುವಲ್ಲಭಾಃ” ಎಂಬ ನಾಣ್ಣುಡಿಯೇ ಇದೆ! ಆದರೆ ಇದಕ್ಕೆ ಅಪವಾದವಾಗಿ ಶ್ರೀರಾಮ ಮಾತ್ರ ಏಕಪತ್ನೀವ್ರತಸ್ಥ. ಅದನ್ನು ತನ್ನ ಜೀವನದ ಕೊನೆಯವರೆಗೂ ಬಿಡದೆ ಪಾಲಿಸಿಕೊಂಡು ಬಂದವನು. ಹೆಂಡತಿಗೆ ಕಿರುಕುಳ-ಹಿಂಸೆ ಕೊಡುವ ಕೆಟ್ಟ ಗಂಡಂದಿರು ಇಲ್ಲದಿಲ್ಲ. ತಾನು ಬಯಸಿದಷ್ಟು ವರದಕ್ಷಿಣೆ ಸಿಗಲಿಲ್ಲವೆಂದು ಹಿಂಸೆ ಕೊಡುವ ಗಂಡಂದಿರಿಗೆ ಈಗಿನ ಕಾಲದಲ್ಲಿ ಬರವಿಲ್ಲ. ಬ್ರಿಟನ್ನಿನ ಇತಿಹಾಸವನ್ನು ಅವಲೋಕಿಸಿದರೆ ಹೆಂಡತಿ ಜೀವಂತವಿದ್ದಾಗ ಬೇರೊಬ್ಬಳನ್ನು ಮದುವೆಯಾಗಲು ಅಡ್ಡ ಬಂದ ಧರ್ಮವನ್ನು ಧಿಕ್ಕರಿಸಿ ರಾಣಿಯ ತಲೆಯನ್ನೇ ತುಂಡರಿಸಿದ ರಾಜನ (ಹೆನ್ರಿ:1509-47) ಉದಾಹರಣೆಯೂ ಇದೆ. ಅಂತಹ ಕೆಟ್ಟ ಗಂಡ ಶ್ರೀರಾಮನಲ್ಲ. ಸೀತೆಯನ್ನು ಅಪಹರಿಸಿಕೊಂಡು ಹೋದ ರಾವಣನೊಂದಿಗೆ ಅವನು ದೊಡ್ಡ ಯುದ್ಧವನ್ನೇ ಮಾಡುತ್ತಾನೆ.
ಯುದ್ಧದಲ್ಲಿ ಜಯಶಾಲಿಯಾಗಿ ಅಯೋಧ್ಯೆಗೆ ಹಿಂದಿರುಗಿದ ಮೇಲೆ ಲೋಕಾಪವಾದಕ್ಕೆ ಅಂಜಿ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಅಂದಮಾತ್ರಕ್ಕೆ ಅವನಿಗೆ ಕೆಟ್ಟ ಗಂಡ ಎಂಬ ಹಣೆಪಟ್ಟಿ ಹಚ್ಚುವುದು ಸರಿಯಲ್ಲ. ಬೇರೆಯವಳನ್ನು ಮದುವೆಯಾಗ ಬಯಸಿ ಸೀತೆಯನ್ನು ಕಾಡಿಗೆ ಅಟ್ಟಿದ್ದರೆ ಕೆಟ್ಟ ಗಂಡ ಎನ್ನಬಹುದಾಗಿತ್ತು. ಅಶ್ವಮೇಧ ಯಾಗ ಮಾಡುವಾಗ ಸಪತ್ನೀಕನಾಗಿ ಮಾಡಬೇಕೆಂಬ ನಿಯಮವಿದ್ದರೂ ಬೇರೆ ಮದುವೆ ಮಾಡಿಕೊಳ್ಳದೆ ಸೀತೆಯ ಸುವರ್ಣ ಪುತ್ಥಳಿಯನ್ನು ಮಾಡಿಸಿ ಪಕ್ಕದಲ್ಲಿಟ್ಟುಕೊಂಡು ಯಾಗ ಮಾಡುತ್ತಾನೆ. ಸೀತೆಯನ್ನು ಎಂದೂ ಸಂದೇಹ ದಷ್ಟಿಯಿಂದ ರಾಮ ನೋಡಿದವನಲ್ಲ. ‘‘ಅಂತರಾತ್ಮಾ ಚ ಮೇ ವೇತ್ತಿ ಸೀತಾಂ ಶುದ್ಧಾಂ ಯಶಸ್ವಿನೀಮ್” ಅಂದರೆ ಸೀತೆ ಪರಿಶುದ್ಧಳು ಎಂದು ತನ್ನ ಅಂತರಾತ್ಮಕ್ಕೆ ಗೊತ್ತು ಎಂದು ಸ್ಪಷ್ಟವಾದ ಶಬ್ದಗಳಲ್ಲಿ ಹೇಳುತ್ತಾನೆ. ಲಕ್ಷ್ಮಣನು ಅಣ್ಣನ ಆದೇಶದಂತೆ ಅತ್ತಿಗೆಯನ್ನು ಕಾಡಿನಲ್ಲಿ ವಾಲ್ಮೀಕಿ ಮಹರ್ಷಿಗಳ ಆಶ್ರಮದ ಸಮೀಪ ಬಿಟ್ಟುಬಂದಮೇಲೆ ರಾಮ ಅಂತಃಪುರದಲ್ಲಿ ಒಬ್ಬನೇ ಕಣ್ಣೀರು ಸುರಿಸುತ್ತಿರುವುದನ್ನು ನೋಡುತ್ತಾನೆ. “ಹೆಂಡತಿಯನ್ನು ಕಾಡಿಗೆ ಅಟ್ಟಿ ಅರಮನೆಯಲ್ಲಿ ಅಳುತ್ತಾ ಕುಳಿತಿದ್ದಾನೆ” ಎಂಬ ಮತ್ತೊಂದು ಲೋಕಾಪವಾದಕ್ಕೆ ನೀನು ಗುರಿಯಾಗುತ್ತೀಯಾ (ಅಪವಾದಃ ಸ ಕಿಲ ತೇ ಪುನರೇಷ್ಯತಿ ರಾಮ!) ಎಂದು ಲಕ್ಷ್ಮಣ ಅಣ್ಣನನ್ನು ಎಚ್ಚರಿಸುತ್ತಾನೆ. ಸೀತಾಪರಿತ್ಯಾಗದಿಂದ ದುಃಖಿಸದೆ ಪ್ರಜಾಪರಿಪಾಲನೆಯ ಕಾರ್ಯದಲ್ಲಿ ನಿರತನಾಗುವಂತೆ ಮಾಡುತ್ತಾನೆ.
ಸಾಮಾನ್ಯ ಮನುಷ್ಯನ ಮೊದಲ ಆದ್ಯತೆ ಏನಿದ್ದರೂ ತಾನು ಮತ್ತು ತನ್ನ ಕುಟುಂಬದ ಹಿತ, ಸಮಾಜದ ಹಿತ ಗೌಣ. ಆದರೆ ಜೀವನಾದರ್ಶಗಳನ್ನು ಹೊಂದಿದವರಿಗೆ ಸಾರ್ವಜನಿಕ ಹಿತವೇ ಮುಖ್ಯ, ಅದೇ ಅವರ ಮೊದಲ ಆದ್ಯತೆ. ತಾನು ಮತ್ತು ತನ್ನ ಕುಟುಂಬದ ಹಿತವನ್ನು ಬಲಿ ಕೊಟ್ಟಾದರೂ ಅವರು ಸಾರ್ವಜನಿಕ ಹಿತಕ್ಕಾಗಿ ನಿಸ್ವಾರ್ಥತೆಯಿಂದ ದುಡಿಯುತ್ತಾರೆ. ಅವರದು ವ್ಯಷ್ಟಿಪ್ರಜ್ಞೆಯಲ್ಲ; ಸಮಷ್ಟಿಪ್ರಜ್ಞೆ. ಅಂತಹ ಸಮಷ್ಟಿಪ್ರಜ್ಞೆಯುಳ್ಳವರ ಬದುಕು ಒಂದು ದೊಡ್ಡ ಮೌಲ್ಯವಾಗುತ್ತದೆ. ಸಾರ್ವಜನಿಕ ಹಿತಕ್ಕಾಗಿ ವೈಯಕ್ತಿಕ ಹಾಗೂ ಕೌಟುಂಬಿಕ ಹಿತವನ್ನು ಕಡೆಗಣಿಸುವ ಅವರ ಕಠಿಣ ನಿರ್ಧಾರವನ್ನು ಲೌಕಿಕ ಸ್ತರದಲ್ಲಿ ನಿಂತು ಟೀಕಿಸುವುದು ಅನುಚಿತ. ಅವರ ನಡೆ ಅತ್ಯಂತ ದುರ್ಗಮ. ಅವರ ದಾರಿಯಲ್ಲಿ ನಡೆಯಬೇಕೆಂದವರಿಗೆ ಎಂಟೆದೆ ಬೇಕು. “ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣಾ” ಎಂದು ಬಸವಣ್ಣನವರು ನುಡಿದದ್ದು ಈ ಅರ್ಥದಲ್ಲಿ.
ಇಷ್ಟೆಲ್ಲಾ ಬೇಗುದಿಗೆ ಕಾರಣವಾಗಿದ್ದು ಅಗಸನೊಬ್ಬ ತನ್ನ ಹೆಂಡತಿಯನ್ನು ಕುರಿತು “ಬೇರೆಯವರ ಮನೆಯಲ್ಲಿದ್ದು ಬಂದ ನಿನ್ನನ್ನು ಮನೆಯೊಳಗೆ ಬಿಟ್ಟುಕೊಳ್ಳಲು ನಾನೇನೂ ರಾಮನಲ್ಲ” ಎಂದು ಆಡಿದ ಕುಚೋದ್ಯದ ಮಾತು ಎಂದು ಪ್ರಚಲಿತದಲ್ಲಿದೆ. ಆದರೆ ವಾಲ್ಮೀಕಿಯ ಮೂಲ ರಾಮಾಯಣದಲ್ಲಿಯೇ ಆಗಲಿ, ಮೂಲ ರಾಮಾಯಣವನ್ನು ಆಧರಿಸಿ ಬರೆದ ಕಾಳಿದಾಸನ ರಘುವಂಶ ಮತ್ತಿತರ ಸಾಹಿತ್ಯ ಗ್ರಂಥಗಳಲ್ಲಿಯೇ ಆಗಲಿ ಎಲ್ಲಿಯೂ ಅಗಸ ಹಾಗೆ ಮಾತಾಡಿದನೆಂಬ ಉಲ್ಲೇಖವಿಲ್ಲ. ಜನರು ಹಾಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂದು ಮೂಲ ರಾಮಾಯಣದಲ್ಲಿದ್ದರೆ, ಶ್ರೀಮದ್ಭಾಗವತದಲ್ಲಿ ಶ್ರೀರಾಮನು ವೇಷ ಮರೆಸಿಕೊಂಡು ರಾತ್ರಿ ಹೊತ್ತು ಹೊರಗೆ ಹೋದಾಗ ಯಾರೋ ಒಬ್ಬ (ಕಸ್ಯಚಿತ್) ತನ್ನ ಹೆಂಡತಿಯನ್ನು ಹಾಗೆ ಗದರಿಸುತ್ತಿದ್ದುದು ಕಿವಿಗೆ ಬಿದ್ದು ಘಾಸಿಗೊಂಡನೆಂಬ ಉಲ್ಲೇಖ ಮಾತ್ರ ಇದೆ. ಹೀಗಿದ್ದಾಗ್ಯೂ ಊರ ಬಟ್ಟೆಗಳ ಕೊಳೆಯನ್ನು ತೊಳೆಯುವ ಪವಿತ್ರ ಕಾಯಕದ ಮಡಿವಾಳನ ತಲೆಗೆ ಕೊಳಕು ಮಾತಿನ ತಪ್ಪನ್ನು ಕಟ್ಟಿರುವುದು ವಿಷಾದನೀಯ. ಶುದ್ಧಚಾರಿತ್ರ್ಯವುಳ್ಳವನು ಲೋಕಾಪವಾದಕ್ಕೆ ಹೆದರಬೇಕಾಗಿಲ್ಲ. ಆದರೆ ನಿಸ್ವಾರ್ಥ ಸಾಮಾಜಿಕ ಬದುಕನ್ನು ನಡೆಸುವವರಿಗೆ ಆಧಾರರಹಿತವಾದ ಗಾಳಿಸುದ್ದಿಗಳು, ವಾಸ್ತವತೆಯಿಂದ ಕೂಡಿರದ ಟೀಕೆ ಟಿಪ್ಪಣಿಗಳು ಹೇಗೆ ಘಾಸಿಗೊಳಿಸುತ್ತವೆಂಬುದಕ್ಕೆ ರಾಮನ ಸೀತಾ ಪರಿತ್ಯಾಗ ಒಂದು ಜ್ವಲಂತ ಉದಾಹರಣೆ. ಆಗಿನ್ನೂ ಈಗಿನಂತೆ ಅನಾಮಧೇಯ ಪತ್ರಗಳನ್ನು ಬರೆಯುವ ಕೆಟ್ಟ ಹವ್ಯಾಸ ಇದ್ದಂತೆ ಎಲ್ಲೂ ಉಲ್ಲೇಖವಿಲ್ಲ.
ಜೇಠ್ಮಲಾನಿಯವರ ವಾದವನ್ನು ಮುಂದುವರಿಸಿದರೆ ಮಧ್ಯರಾತ್ರಿಯಲ್ಲಿ ಮುದ್ದಿನ ಹೆಂಡತಿ ಮತ್ತು ಮಗನನ್ನು ಬಿಟ್ಟು ಸತ್ಯಾನ್ವೇಷಣೆಗಾಗಿ ಅರಮನೆಯಿಂದ ಹೊರ ನಡೆದ ಗೌತಮ ಬುದ್ಧನನ್ನೂ ಕೆಟ್ಟ ಗಂಡನೆನ್ನಬೇಕಾಗುತ್ತದೆ. ಸತ್ಯವನ್ನೇ ಪ್ರಾಣವಾಗಿಸಿಕೊಂಡು, ತನ್ನನ್ನೇ ಪಣವಿಟ್ಟು ಸ್ಮಶಾನದ ಕಾವಲುಗಾರನಾಗಿ ತನ್ನ ಮಡದಿ ಚಂದ್ರಮತಿಯ ಕೊರಳಿಗೆ ಖಡ್ಗಪ್ರಹಾರ ಮಾಡಲು ಮುಂದಾದ ಸತ್ಯಹರಿಶ್ಚಂದ್ರನನ್ನೂ ಕೆಟ್ಟಗಂಡನೆನ್ನಬೇಕಾಗುತ್ತದೆ. ಅವರೆಲ್ಲರೂ ಭಾರತೀಯ ಪರಂಪರೆಯಲ್ಲಿ ಆದರ್ಶಪುರುಷರಾಗಿ ಗೌರವಕ್ಕೆ ಪಾತ್ರರಾದವರು. ಅಂಥವರನ್ನು ಲೌಕಿಕ ನೆಲೆಯಲ್ಲಿ ನಿಂತು ಟೀಕಿಸದೆ ಜೀವನಾದರ್ಶಗಳ ನೆಲೆಯಲ್ಲಿ ನಿಂತು ನೋಡಬೇಕು. ಆಗ ಮಾತ್ರ ಅವರ ಕಠಿಣ ನಿರ್ಧಾರಗಳ ಹಿಂದಿನ ಮನೋಧರ್ಮ ಅರ್ಥವಾಗುತ್ತದೆ. ಆದರೆ ಅಂಥವರ ನಿಸ್ವಾರ್ಥ ಬದುಕನ್ನು ಜನರು ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಆದಕಾರಣವೇ ಬಂದ ಗಾದೆ ಮಾತು:
“ಊರು ಉಪಕಾರವರಿಯದು, ಹೆಣ ಶಂಗಾರವರಿಯದು”!
-ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ.