ವೀರಗಾಸೆ ಕುಣಿತ ಪ್ರಧಾನವಾದ ಕಲೆಯಾಗದೆ ಕಥಾ ಪ್ರಧಾನವಾದ ಕಲೆಯಾಗಿರಬೇಕು : ಡಾ.ಚಂದ್ರಪ್ಪ ಸೊಬಟೆ
ಸಿರಿಗೆರೆ ದಿನಾಂಕ 11-04-2022 :- ವೀರಗಾಸೆ ಕಲೆಯು ಭಾರತದ ಶೈವ ಆರಾಧನೆ ಕಲೆಯಾಗಿದೆ. ಶೈವ ಆರಾಧನೆ ಮಾಡುವ ಈ ಕಲೆಗಳಲ್ಲಿ ವಿಭಿನ್ನವಾದ ಚಹರೆಯನ್ನು ವೀರಗಾಸೆ ಕಲೆ ಮೂಡಿಸಿಕೊಂಡಿದೆ. ಇದಕ್ಕಿಂತ ಐಡೆಂಟಿಟಿ ಇರುವ ಯಾವ ಕಲೆಯೂ ಸಿಗುವುದಿಲ್ಲ. ಕರ್ನಾಟಕದಲ್ಲಿ ಶೈವ ಆರಾಧನೆ ಕಲೆಗಳಿವೆ. ಶೈವ ಆರಾಧನೆ ಪ್ರಧಾನ ಕಲೆಗಳಾದ ಡೊಳ್ಳು ಕುಣಿತ, ಗೊರವರ ಕುಣಿತ, ಗಟ್ಟಿ ಕುಣಿತ ಕಲಾ ಪ್ರಕಾರಗಳಿವೆ. ಅದರ ಜೊತೆಯಲ್ಲಿ ವೀರಭದ್ರನ ಆರಾಧನೆ ಮಾಡುವ ವೀರಗಾಸೆಯೂ ಕಲೆಯೂ ಹೌದು ಜನಪದ ಸಾಹಿತ್ಯ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟೆ.
ಸಾಂಸ್ಕೃತಿಕ ಮಹತ್ವ, ವೀರಗಾಸೆ ಪ್ರತಿಪಾದನೆ ಮಾಡುವ ಅಥವಾ ಅನಾವರಣ ಮಾಡುವ ಕಥನದ ಮಾದರಿ ಬೇರೆಯ ಕಲೆಗಳಿಗೆ ಇರಲು ಸಾಧ್ಯವಿಲ್ಲ. ವೀರಭದ್ರನ ಆರಾಧನೆಯ ಕಲೆಯುಳ್ಳ ಅಥವಾ ವೀರಶೈವ ಧರ್ಮಕ್ಕೆ ಸೇವೆ ಸಲ್ಲಿಸಿದ ಸಾಂಸ್ಕೃತಿಕ ನಾಯಕರನ್ನು, ಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ತಿಳಿಸುವಷ್ಟಕ್ಕೇ ಮಾತ್ರ ಸೀಮಿತವಾಗಿಲ್ಲ. ಶಿವಶರಣರ ವಚನಗಳನ್ನು, ಮಹಾಭಾರತ ಪ್ರಸಂಗಗಳನ್ನು ಹಾಗೂ ಮನರಂಜನೆಯನ್ನು ನೀಡುವ ಕಲೆ ವೀರಗಾಸೆಗಿದೆ. ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣಕ್ಕೆ ಸಂಬಂಧಿಸಿದ ಮಹತ್ವವನ್ನೂ ಸಹ ನೀಡುತ್ತಿದೆ. ಇಂತಹ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡದಿರುವುದಕ್ಕೆ ಸಮಾಜದಲ್ಲಿ ದುರಂತಗಳಾಗುತ್ತಿವೆ.
ತನ್ನನ್ನು ತಾನು ಗುರುತಿಸಿಕೊಂಡು ಬಂದಿರುವ ಕಲೆಯೆಂದರೆ ವೀರಗಾಸೆ ಕಲೆಯಾಗಿದೆ. ವೀರಗಾಸೆಗೆ ಅನೇಕ ಪರಿಭಾಷೆಗಳು ಇವೆ ಕರಡಿ ಮೇಳ, ಕರಡಿ ಮಜಲು, ಪುರವಂತಿಕೆ ಮೇಳ, ಲಿಂಗ ದೇವರು, ಖಡ್ಗ ಕುಣಿತಗಳಾಗಿವೆ. ಈ ರೀತಿ ಬೇರೆ ಬೇರೆ ಹೆಸರುಗಳನ್ನು ಗುರುತಿಸಿಕೊಂಡಿದ್ದೇವೆ. ವೀರಶೈವರ ಕಥನವನ್ನು ಪ್ರದರ್ಶನ ಮಾಡುವ ಕಥೆಯಲ್ಲಿ ಖಡ್ಗ ಮುಖ್ಯವಾಗಿ ಪ್ರದರ್ಶನವಾಗುತ್ತಿದೆ. ಕಲೆಗಳಲ್ಲಿ ಹೆಚ್ಚು ಪ್ರಾಧಾನ್ಯತೆ ಅಥವಾ ಮುಂಚೂಣಿಯಲ್ಲಿರುವುದು ವೀರಗಾಸೆ. ಕಲೆ ಆಯಾ ಪ್ರದೇಶದಲ್ಲಿ ಕಲೆಗಳಿಗೆ ತನ್ನದೇ ಆದ ಮಹತ್ವ ನೀಡಿದೆ.
ಕರ್ನಾಟಕದಲ್ಲಿ ಈ ಬಗೆಯ ಆರಾಧನೆ ಇರುವುದಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮೂರು ದಿನಗಳ ಕಾಲ, ರಾತ್ರಿಯಿಡೀ ನಡೆಯುತ್ತಿರುವಂತಹ ಮನರಂಜನೆಯ ಕಲೆಗಳು ಈಗ ಎರಡು 2ರಿಂದ 3ನಿಮಿಷಕ್ಕೆ ಬಂದಿರುವುದು ದುರದೃಷ್ಟಕರ. ಅದಕ್ಕಾಗಿ ಕಲೆಗಳನ್ನು ಶ್ರೀಮಂತಗೊಳಿಸಬೇಕಾದರೆ, ಪೋಷಿಸಬೇಕಾದರೆ ಇಂತಹ ವೇದಿಕೆಗಳು ಹೆಚ್ಚು ಹೆಚ್ಚು ಪರಿಣಾಮಕಾರಿ.
ಇಂತಹ ಕಲೆಗಳನ್ನು ವೇದಿಕೆಗೆ ಸ್ಪರ್ಧೆಗಳಿಗಾಗಿ ತರುತ್ತಿದ್ದೇವೆ. ಕುಣಿತ ಪ್ರಧಾನವಾದ ಕಲೆಯಾಗದೆ ಕಥಾ ಪ್ರಧಾನವಾದ ಕಲೆಯಾಗಬೇಕು. ಹೆಚ್ಚು ಸಂಭಾಷಣೆ ಮೂಲಕ ನಮ್ಮನ್ನು ಮನರಂಜಿಸುವ, ಜೀವನಕ್ಕೆ ಬೇಕಾಗುವ, ಬದುಕಿಗೆ ಬೇಕಾಗುವ ಮೌಲ್ಯಗಳನ್ನು ತಿಳಿಸುವಂತಹ ಎಲ್ಲಾ ಆಯಾಮಗಳನ್ನು ವೀರಗಾಸೆ ಕಂಡುಕೊAಡಿದೆ.
ಯಾವ ಕಲೆಗೆ ಬಹು ಆಯಾಮಗಳು ಇರುತ್ತದೆಯೋ ಆ ಕಲೆ ಮಾತ್ರ ಸಮಾಜದಲ್ಲಿ ಬಹುಮುಖ್ಯವಾಗಿ ಉಳಿಯಲು ಸಾಧ್ಯ.
ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಇರುವುದು ಜನಪದರಲ್ಲಿ ಅಥವಾ ಜಾನಪದ ಕಲೆಗಳಲ್ಲಿ ಆದರೆ ದುರದೃಷ್ಟವಶಾತ್ ತಂತ್ರಜ್ಞಾನ, ವೈಜ್ಞಾನಿಕ ಭರಾಟೆಯಿಂದಾಗಿ ಜಾನಪದ ಕಲೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಪ್ರತಿ ಹಳ್ಳಿಗಳಲ್ಲಿ ಭಜನೆ, ಕೋಲಾಟ, ವೀರಗಾಸೆ ಇರುತ್ತಿದ್ದವು, ಅವುಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಜಾನಪದ ಕಲೆಗಳು ನಶಿಸುತ್ತಿರುವುದು ವಿಷಾದನೀಯ. ಲಿಂ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಿಂದಿನ ದಿನಮಾನಗಳಲ್ಲಿ ಕಲಾಸಂಘ, ಅಕ್ಕನ ಬಳಗ, ಅಣ್ಣನ ಬಳಗದ ಮೂಲಕ ಗ್ರಾಮೀಣ ಭಾಗದಲ್ಲಿ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಲ್ಲದೆ ಮತ್ತು ಅವುಗಳನ್ನು ಪೋಷಿಸುತ್ತಿದ್ದರು.
ಅಂತೆಯೇ ತರಳಬಾಳು ಬೃಹನ್ಮಠದ ಜಗದ್ಗುರುಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾ,ಮಿಗಳವರೂ ಸಹ ಇಂದು ಶೈಕ್ಷಣಿಕವಾಗಿ ಅಲ್ಲದೆ ಸಾಂಸ್ಕೃತಿಕವಾಗಿಯೂ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುತ್ತಿರುವುದು ಸಂತಸದ ವಿಚಾರವಾಗಿದೆ.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಓಂಕಾರಪ್ಪ, ಶಿವಮೊಗ್ಗ ಸಹ್ಯಾದಿ ವಿಜ್ಞಾನ ಕಾಲೇಜು ಸಹ ಪ್ರಾಧ್ಯಾಪಕ ಹಾ.ಮ.ನಾಗಾರ್ಜುನ ವೇದಿಕೆಯಲ್ಲಿದ್ದರು.
ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ರಾಜ್ಯ ಮಟ್ಟದ ವೀರಗಾಸೆ ಮೇಳವನ್ನು ಡಾ.ಚಂದ್ರಪ್ಪ ಸೊಬಟೆ ಸಮಾಳ ಭಾರಿಸುವ ಮೂಲಕ ಉದ್ಘಾಟಿಸಿದರು.
20ಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದಿತ್ತು.