ಮನುಷ್ಯನಾಗಿ ಹುಟ್ಟಿದ ಮೇಲೆ ನಿಷ್ಕಲ್ಮಶ ಮನಸ್ಸಿನಿಂದ ಒಳ್ಳೆಯ ಕೆಲಸ ಮಾಡಿ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದಿನಾಂಕ 21-04-2022(ತಿಪಟೂರು) :  ಮನುಷ್ಯನಾಗಿ ಹುಟ್ಟಿದ ಮೇಲೆ ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಕೆಲಸ ಮಾಡುವ ಮೂಲಕ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು  ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು  ಜಗದ್ಗುರು ಶ್ರೀ 1108 ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಂದೇಶ ದಯಪಾಲಿಸಿದರು.

ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಪಟ್ರೇಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯವರ ನೂತನ ದೇವಾಲಯದ ಪ್ರಾರಂಭೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಜಗದ್ಗುರುಗಳವರು, ಮನುಷ್ಯ ದೂಷಿಸುವ ಗುಣವನ್ನು ಮೊದಲು ಬಿಡಬೇಕು. ನಾನು ಸರಿಯಾಗಿದ್ದೇನೆಯೇ ಪ್ರಶ್ನೆಯನ್ನು ಹಾಕಿಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕು. ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದೇ ಇರುತ್ತಾರೆ ಇದು ಮನುಷ್ಯ ಸ್ವಭಾವ. ಆದರೆ ಕೆಟ್ಟದ್ದನ್ನು ಪ್ರೇರೇಪಿಸುವ, ಇನ್ನೊಬ್ಬರ ಮೇಲೆ ಬೆರಳು ಮಾಡುವ ಗುಣ ಬೆಳೆಸಿಕೊಳ್ಳಬೇಡಿ. ಮನುಷ್ಯ ಸಾತ್ವಿಕ, ಸಜ್ಜನ, ಪ್ರಾಮಾಣಿಕ ಹಾಗೂ ಶೀಲವಂತನಾಗಬೇಕು. ಧಾರ್ಮಿಕ ಶ್ರದ್ಧೆ ನಮ್ಮಲಿರಬೇಕು. ಒಬ್ಬರಿಗೆ ನೋವುಂಟು ಮಾಡುವ ಕೆಲಸ ಮಾಡದೆ ಒಳ್ಳೆಯದಾಗುವ ಕೆಲಸ ಮಾಡಿದಾಗ ಜೀವನಲ್ಲಿ ಶಾಂತಿ, ನೆಮ್ಮದಿಯನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ದೇವಾಲಗಳ ನಿರ್ಮಾಣದಿಂದ ಸ್ವಾರ್ಥಪರ ಚಿಂತನೆಯಲ್ಲಿ ಮುಳುಗಿರುವ ಮನುಷ್ಯನಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ ಲಭಿಸಲಿದೆ. ಮನುಷ್ಯ ಧಾರ್ಮಿಕ ನಂಬಿಕೆಯಿಂದ ಆತ್ಮ ಜಾಗೃತಗೊಳ್ಳುವುದಲ್ಲದೆ ಮನುಷ್ಯ ಮನುಷ್ಯನ ನಡುವೆ ಒಡೆದು ಹೋಗಿರುವ ಮನಸ್ಸುಗಳನ್ನು ಒಗ್ಗೂಡಿಸಲಿದೆ. ಪ್ರತಿಯೊಬ್ಬರಲ್ಲಿ ಅಂತರಾತ್ಮವಾಗಿ ಅಡಗಿರುವ ಶಕ್ತಿಯನ್ನು ಜಾಗೃತಿಗೊಳಿಸಿ ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಪೂರ್ವಜರು ಹಾಕಿಕೊಟ್ಟ ದಾರಿಯೇ ಧಾರ್ಮಿಕ ಕೇಂದ್ರಗಳು. ಆದ್ದರಿಂದ ಒಗ್ಗಟ್ಟು ಮತ್ತು ಸಹಬಾಳ್ವೆಯಿಂದ ಜೀವನ ನಡೆಸಿ ಸಮಾಜದ ಅಭಿವೃದ್ದಿಗೆ ಶ್ರಮಿಸಿ ಎಂದರು.

 ಕುಪ್ಪೂರು-ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಸ್ವಾರ್ಥಪರ ಚಿಂತನೆಗಳಲ್ಲಿ ಲೀನವಾಗಿ ನಾನು ನನ್ನದು ನನಗಾಗಿ ಎಂಬ ಮನೋಭಾವನೆ ಬೆಳೆಯುತ್ತಿದೆ. ಇಂತಹ ಸ್ವಾರ್ಥ ಭಾವನೆ ಬಿಟ್ಟು ಒಂದಿಷ್ಟು ಧಾನ ಧರ್ಮವನ್ನು ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ನಮ್ಮ ಭಾರತೀಯ ಹಿಂದೂ ಧರ್ಮದ ಮೇಲೆ ಸಾವಿರಾರು ವರ್ಷಗಳಿಂದ ಆಕ್ರಮಣ ಮಾಡಿದರೂ ನಮ್ಮ ದೇಶದ ಧರ್ಮ, ಸಂಸ್ಕೃತಿ, ಸಂಸ್ಕಾರ ಕಳೆದುಹೋಗಿಲ್ಲ ಇದಕ್ಕೆ ಕಾರಣ ಮಠಮಾನ್ಯಗಳು. ಭಾರತೀಯ ಸಂಸ್ಕಾರ, ಸಂಸ್ಕೃತಿಗಳನ್ನು ಉಳಿಸುವ ಕೆಲಸವನ್ನು ಮಠಮಾನ್ಯಗಳು ಮಾಡುತ್ತಿವೆ. ಶಿಕ್ಷಣ ವ್ಯವಸ್ಥೆಯ ಮೇಲೆ ದೇಶದ ಭವಿಷ್ಯ ನಿಂತಿದ್ದು, ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸಮಾಜ ಹಾಗೂ ಕುಟುಂಬದ ವ್ಯವಸ್ಥೆ ಹಾಳಾಗದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುತ್ತಿದೆ ಎಂದರು.  

 ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ರೈತರ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ರೈತರು ಮಳೆ ಬರಲಿಲ್ಲ, ಬೆಳೆ ಕೈಸೇರಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಯಂತಹ ದಾರಿ ಹಿಡಿಯುವುದು ಸರಿಯಲ್ಲ. ಯಾವುದೋ ಒಂದು ಬೆಳೆಗೆ ಸೀಮಿತವಾಗಿ ನಷ್ಟ ಅನುಭವಿಸುವ ಬದಲು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದಾಗಿದ್ದು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದ್ದು ಸರ್ಕಾರ ನಿಮ್ಮೊದಿಗಿದೆ ಎಂದರು.

ಸಮಾರಂಭದಲ್ಲಿ  ಮಾಜಿ ಶಾಸಕ ಬಿ. ನಂಜಾಮರಿ, ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್, ಕೆಎಂಎಫ್ ನಿರ್ದೇಶಕ ಎಂ.ಕೆ. ಪ್ರಕಾಶ್, ಸಾಧುವೀರಶೈವ ಸಮಾಜದ ತಾ. ಅಧ್ಯಕ್ಷ ನಂಜುಂಡಪ್ಪ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಎಲ್ಲರಿಗೂ ಅನ್ನದಾಸೋಹ ಏರ್ಪಡಿಸಲಾಗಿತ್ತು.