ವಚನಸಾಹಿತ್ಯ ವಿಶ್ವದೆಲ್ಲೆಡೆ ಪ್ರಚಾರವಾಗಬೇಕೆಂಬುದು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕನಸಾಗಿತ್ತು....
ಬೆಂಗಳೂರು ತರಳಬಾಳು ಕೇಂದ್ರದಲ್ಲಿ ಬಸವ ಜಯಂತಿ ಕಾರ್ಯಕ್ರಮ
ಬೆಂಗಳೂರು : ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಜರುಗಿದ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಕ್ರಾಂತಿಯು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಯುಗಪುರುಷ ಬಸವಣ್ಣನವರ ನೇತೃತ್ವದಲ್ಲಿ ರೂಪಗೊಂಡ ಸಮಾಜೋ ಧಾರ್ಮಿಕ ಈ ಆಂದೋಲನದ ಉಪ ಉತ್ಪನ್ನವೇ ವಚನ ಸಾಹಿತ್ಯ.
ಈ ವಚನ ಸಾಹಿತ್ಯವು ವಿಶ್ವಸಾಹಿತ್ಯಕ್ಕೆ ಕನ್ನಡ ನೀಡಿದ ಅಪೂರ್ವ ಕೊಡುಗೆ. ಇಂತಹ ವಚನ ಸಾಹಿತ್ಯವನ್ನು 20ನೆಯ ಶತಮಾನದಲ್ಲಿ ಬಹುಮುಖದಲ್ಲಿ ಪ್ರಚುರಪಡಿಸಿದ ಕೀರ್ತಿ ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು.
ಪರಮಪೂಜ್ಯರು ವಚನ ಸಾಹಿತ್ಯದ ಪರಿಮಳವನ್ನು ರಂಗಭೂಮಿ, ಉಪನ್ಯಾಸ, ಸಂಗೀತ, ಪುಸ್ತಕ ಪ್ರಕಟಣೆ ಮುಂತಾದ ಬಹುಮಾಧ್ಯಮಗಳ ಮೂಲಕ ನಾಡಿನ ತುಂಬೆಲ್ಲಾ ಪಸರಿಸುವಂತೆ ಮಾಡಿದರು. ವಚನ ಸಾಹಿತ್ಯವನ್ನು ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಿಗೆ ಶ್ರೀಮಠದಿಂದ ಅನುವಾದ ಮಾಡಿಸಿದ್ದು ವಚನ ಸಾಹಿತ್ಯದ ಇತಿಹಾಸದಲ್ಲಿ ದಾಖಲಾರ್ಹವಾದ ಸ್ಮರಣೀಯ ಕೆಲಸ. ಪೂಜ್ಯರು ವಚನ ಸಾಹಿತ್ಯದ ಪ್ರಚಾರದ ಬಗ್ಗೆ ಕಂಡ ಇನ್ನಷ್ಟು ಕನಸುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನನಸು ಮಾಡುತ್ತಿರುವುದು ಪ್ರಸ್ತುತ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
90ರ ದಶಕದಲ್ಲಿಯೇ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇಡೀ ವಚನ ಸಾಹಿತ್ಯವನ್ನು ಬೆರಳತುದಿಯಲ್ಲಿ ನಿಲುಕುವಂತೆ ಮಾಡಿದ ಏಕಮಾತ್ರರು. “ಗಣಕ ಋಷಿ” ಎಂಬ ಬಿರುದಿಗೆ ಭಾಜನರಾದ ಪೂಜ್ಯರು ಭಾರತದಲ್ಲಿ ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ಕಣ್ಣು ಬಿಡುತ್ತಿದ್ದ ಕಾಲ. ಕ್ರಿಸ್ತ ಪೂರ್ವದ ಸಂಸ್ಕೃತದ ವೈಯ್ಯಾಕರಣಿ ಪಾಣಿನಿ ಮಹರ್ಷಿಯ “ಅಷ್ಟಾಧ್ಯಾಯಿ” ಎಂಬ ವ್ಯಾಕರಣ ಗ್ರಂಥವನ್ನು ಮತ್ತು ಬಸವಾದಿ ಶಿವಶರಣರ 21000 ವಚನಗಳನ್ನು ಕಂಪ್ಯೂಟರೀಕರಣ ಮಾಡಿ, “ಗಣಕಾಷ್ಟಾಧ್ಯಾಯಿ” ಮತ್ತು “ಗಣಕ ವಚನ” ಸಾಫ್ಟ್ ವೇರ್ ಸಿದ್ಧಪಡಿಸಿದ್ದು ಪೂಜ್ಯರ ತಂತ್ರಜ್ಞಾನದ ಆಸಕ್ತಿಯ ಫಲ.
ಕಂಪ್ಯೂಟರ್ ತಂತ್ರಜ್ಞಾನವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೇಗೆ ಬಳಸಿಕೊಳ್ಳುಬಹುದು ಎಂಬುದನ್ನು ಮೊದಲು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಶ್ರೀ ತರಳಬಾಳು ಜಗದ್ಗುರುಗಳವರದು. ಪೂಜ್ಯರ ಈ ಕೊಡುಗೆಯಿಂದ ಇಂದು ಜಗದಗಲ ಶಿವಶರಣರ ವಚನ ಸಾಹಿತ್ಯ ಮತ್ತು ಪಾಣಿನಿಯ ಅಷ್ಟಾಧ್ಯಾಯಿ ಕ್ಷಣಮಾತ್ರದಲ್ಲಿ ಆಸಕ್ತರಿಗೆ ದೊರಕುವಂತಾಗಿದೆ.
ಇದೀಗ ಗಣಕ ವಚನ ಸಾಫ್ಟ್ ವೇರ್ ನ್ನು ಪರಿಷ್ಕರಿಸಿ, ಈ ಕ್ಷಣದ ತಂತ್ರಜ್ಞಾನಕ್ಕೆ ತಕ್ಕಂತೆ ಇನ್ನಷ್ಟು ಆಧುನೀಕರಣಗೊಳಿಸಿ ಮೊಬೈಲ್ ಆ್ಯಪ್ ನಲ್ಲೂ ದೊರಕುವಂತೆ ಮಾಡಲಾಗಿದೆ.
ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಲದಲ್ಲಿಯೇ ಬಸವಣ್ಣನವರ ವಚನಗಳನ್ನು ಕೊಟ್ಟರಿನ ನಿವೃತ್ತ ಅಧ್ಯಾಪಕ ಬಣಕಾರ ಗೌಡಪ್ಪನವರು ಹಿಂದಿ ಭಾಷೆಗೆ ಅನುವಾದಿಸಿದ್ದರು. ಜೊತೆಗೆ ತೆಲುಗು ಭಾಷೆಗೂ ಬಾಡಾಲು ರಾಮಯ್ಯ ಎಂಬ ತೆಲುಗು ವಿದ್ವಾಂಸರು ಬಸವಣ್ಣನವರ ವಚನಗಳನ್ನು ತೆಲುಗಿಗೆ ಅನುವಾದಿಸಿ ಈಗಾಗಲೇ ಪ್ರಕಟಿಸಲಾಗಿತ್ತು. ಈಗ ಅದರ ಮರುಮುದ್ರಣದ ಆವೃತ್ತಿಗಳನ್ನು ಸಿದ್ಧಮಾಡಲಾಗಿದೆ. ಮೈಸೂರಿನ ಶ್ರೀ ಚಂದ್ರಶೇಖರ್ ರಚಿಸಿರುವ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನವನ್ನು ಆಧರಿಸಿದ ಕಾದಂಬರಿ “ಧೀರಸನ್ಯಾಸಿ” ಕೃತಿ, ಮೊಬೈಲ್ ಆ್ಯಪ್ ಹಾಗೂ ವಚನ ಗಣಕ ಸಂಪುಟ ವೆಬ್ ಸೈಟ್ ಲೋಕಾರ್ಪಣೆಗೊಳ್ಳಲಿವೆ.
ಈ ಎಲ್ಲಾ ಈ ಕಾರ್ಯಕ್ರಮಗಳನ್ನು ಮೇ.3 ರ ಮಂಗಳವಾರ ಸಂಜೆ 6.30ಕ್ಕೆ ಬಸವ ಜಯಂತಿಯ ಅಂಗವಾಗಿ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಅಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮಾಧುಸ್ವಾಮಿ, ಆಂದ್ರ ಪ್ರದೇಶ ಸರಕಾರದ ಸಚಿವೆ ಉಷಾ ಶ್ರೀ ಚರಣ್, ರಾಮಚಂದ್ರ ರೆಡ್ಡಿ, ವಿಪ್ರೊ ಸಂಸ್ಥೆಯ ಸಿಇಒ ಪಿ ಸುಬ್ರಹ್ಮಣ್ಯ, ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ಸಾಹಿತಿಗಳಾದ ಡಾ. ಹಂಪನಾ ಮತ್ತು ವೀರಣ್ಣ ರಾಜೂರ ಮುಂತಾದವರು ಭಾಗವಹಿಸುವರು.
- ನಾಗರಾಜ್ ಸಿರಿಗೆರೆ
ಕನ್ನಡ ಅಧ್ಯಾಪಕರು
ಸ್ವತಂತ್ರ ಜ್ಯೋತಿ ಪ್ರೌಢಶಾಲೆ ರಂಗಾಪುರ ಹೊಳಲ್ಕೆರೆ ತಾಲ್ಲೂಕು