ವಿಶ್ವಗುರು ಬಸವಣ್ಣನವರು ಶ್ರೇಷ್ಠ ಸಮಾಜ ಸುಧಾರಕರು
ಸಿರಿಗೆರೆ: ವಿಶ್ವಗುರು ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಸಮಾಜವನ್ನು ಸುಧಾರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದವರು ಎಂದು ಮುಖ್ಯೋಪಾಧ್ಯಾಯ ಕೆ.ಈ.ಬಸವರಾಜಪ್ಪನವರು ಮಾತನಾಡಿದರು.
ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಅಣ್ಣನ ಬಳಗದವರು ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ವಿಶ್ವ ಸಾಹಿತ್ಯಕ್ಕೆ ಕನ್ನಡ ವಚನ ಸಾಹಿತ್ಯ ನೀಡಿರುವ ಕೊಡುಗೆ ಅಪಾರವಾದುದು. ಜನರಾಡುವ ಭಾಷೆಯಲ್ಲಿ ಬಸವಾದಿ ಶಿವಶರಣರು ತಮ್ಮ ಅನುಭವ, ಅಭಿಪ್ರಾಯ ಮತ್ತು ಆದರ್ಶಗಳನ್ನು ವಚನಗಳ ಮೂಲಕ ತಿಳಿಸಿದ್ದಾರೆ ಎಂದರು.
ಇಂದಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳ ಪುಣ್ಯ ಗರ್ಭದಲ್ಲಿ ಕ್ರಿ.ಶ. 1134 ರಲ್ಲಿ ಜನಿಸಿದರು. ಬಾಲ್ಯದಿಂದಲೂ ಪ್ರಶ್ನಿಸುವ ಮನೋಭಾವವನ್ನು ಬೆಳಸಿಕೊಂಡ ಅವರು ಸಮಾಜದಲ್ಲಿನ ಜಾತೀಯತೆ, ಲಿಂಗ ತಾರತಮ್ಯ, ಮೂಢನಂಬಿಕೆ, ಕಂದಾಚಾರ ಮತ್ತು ಅಂಧಶ್ರದ್ಧೆಯ ವಿರುದ್ಧ ಹೋರಾಡಿ ಸಮಾಜವನ್ನು ಸುಧಾರಣೆ ಮಾಡಿದರು. ಸಮಾಜದಲ್ಲಿ ಕಾಯಕ ದಾಸೋಹದ ಮಹತ್ವವನ್ನು ತಿಳಿಸಿದರು. ಬಸವಣ್ಣನವರು ಮಹಾಮಾನವತಾವಾದಿ, ಮಹಾನಾಯಕ, ಜಗಜ್ಯೋತಿ ಬಸವೇಶ್ವರ, ಭಕ್ತಿಭಂಡಾರಿ ಬಸವಣ್ಣ , ಕರ್ನಾಟಕದ ಮಾರ್ಟಿನ್ ಲೂಥರ್, ಎಂಬ ಅಭಿದಾನಗಳಿಂದ ಪ್ರಖ್ಯಾತರಾಗಿದ್ದರು. ವಚನಗಳನ್ನು ರಚಿಸಿ ಕಲ್ಯಾಣದಲ್ಲಿ ಕ್ರಾಂತಿ ಮಾಡಿದರು. ಅನುಭವ ಮಂಟಪ ಸ್ಥಾಪಿಸಿ ಶರಣ ಶರಣೆಯರು, ಶೋಷಿತರು, ತಳ ಸಮುದಾಯದವರು ಭಾಗವಹಿಸಿ ಆಧುನಿಕ ಲೋಕತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಣ್ಣನ ಬಳಗದ ಅಧ್ಯಕ್ಷರಾದ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ ಬಸವಣ್ಣನವರ ಸಂದೇಶಗಳು ಸರ್ವಕಾಲಕ್ಕೂ ಯೋಗ್ಯವಾಗಿವೆ. ಭಾರತದ ಸಂವಿಧಾನದಲ್ಲಿ ಬಸವಣ್ಣನವರ ಸಂದೇಶಗಳು ಸೇರ್ಪಡೆ ಮಾಡಿ ಅನುಷ್ಠಾನಕ್ಕೆ ತಂದಿರುವುದು ಬಸವಣ್ಣನವರಿಗೆ ನೀಡಿದ ಗೌರವವಾಗಿದೆ ಎಂದರು. ಬಸವಣ್ಣನವರ ವಚನಗಳನ್ನು ಮೊಟ್ಟಮೊದಲ ಬಾರಿಗೆ ಸಂಶೋಧಿಸಿ ಸಂಗ್ರಹಿಸಿದವರು ಫ.ಗು.ಹಳಕಟ್ಟಿಯವರು ಆದ್ದರಿಂದ ಅವರನ್ನು ವಚನ ಸಾಹಿತ್ಯದ ಪಿತಾಮಹ ಎನ್ನುತ್ತೇವೆ ಎಂದರು.
ಬಸವಣ್ಣನವರ ವಚನಗಳನ್ನು ಪ್ರಚಾರ ಮಾಡಿದವರಲ್ಲಿ ಪ್ರಮುಖರು ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರು ವಚನ ಪ್ರಚಾರಕ್ಕೆ ಸಂಗೀತ, ಸಾಹಿತ್ಯ ಮತ್ತು ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡುರು. ಬಸವಣ್ಣನವರ ವಚನಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಿಗೆ ಅನುವಾದ ಮಾಡಿಸಿದ್ದರು ಎಂದು ಸ್ಮರಿಸಿದರು. ಪ್ರಸ್ತುತ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಜಗತ್ತಿಗೆ ಬೆರಳ ತುದಿಯಲ್ಲಿ ವಚನಗಳು ಸಿಗುವಂತೆ ಮಾಡಿದ್ದಾರೆ. ಬೆಂಗಳೂರಿನ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಸುಮಾರು 21000 ವಚನಗಳನ್ನು ಮೊಬೈಲ್ ಆ್ಯಮಪ್ ನಲ್ಲಿ ದೊರೆಯುವಂತೆ ಮಾಡಿದ್ದಾರೆ ಎಂದರು. ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ಸಂದೇಶವನ್ನು ವಿದ್ಯಾರ್ಥಿಗಳಾದ ನೀವು ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಒದುವುದೇ ಕಾಯಕ ಎಂದು ತಿಳಿದು ಸತತ ಪ್ರಯತ್ನದಿಂದ ನಿಮ್ಮ ಗುರಿ ತಲುಪಬೇಕು ಎಂದರು.
ಕುಮಾರಿ ಡಿ.ಕೆ.ಅರ್ಪಿತ ವಚನ ಗಾಯನ ನಡೆಸಿಕೊಟ್ಟರು. ಎಸ್.ಪಿ.ಅಪೂರ್ವ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಪಲ್ಲವಿ ಸ್ವಾಗತಿಸಿದರೆ, ವಿ.ರಕ್ಷಾ ವಂದಿಸಿದರು.
ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಿ.ಎಸ್.ನಾಗರಾಜ್, ಶಿಕ್ಷಕ ಗಿರೀಶ್ ಮತ್ತು ಉಷಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶಿವಮಂತ್ರ ಲೇಖನದಲ್ಲಿ ಭಾಗಿಯಾಗಿದ್ದರು.