ಮಾಗೋಡ್ ಲೇಸರ್ ಘಟಕದ 25 ವರ್ಷಗಳ ಸಂಭ್ರಮ : ಶ್ರೀ ತರಳಬಾಳು ಜಗದ್ಗುರುಗಳವರಿಂದ ಉದ್ಘಾಟನೆ
ಬೆಂಗಳೂರು: ಮಾಗೋಡ್ ಲೇಸರ್ ನೂತನ ತಯಾರಿಕ ಘಟಕದ 25 ವರ್ಷಗಳ ಸಂಭ್ರಮವನ್ನು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಉದ್ಘಾಟಿಸಿದರು.
1997 ರಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರಿಂದ ಪ್ರಾರಂಭವಾಗಿ ಯಶಸ್ವಿಯಾಗಿ ಬೆಳೆದ ಮಾಗೋಡ್ ಲೇಸರ್ ಕಂಪನಿಯ ಮಾಲೀಕರು ಜಗದ್ಗುರುಗಳವರಿಗೆ ಭಕ್ತಿ ಸಮರ್ಪಣೆ ಮಾಡಿದರು.
ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬೆಂಗಳೂರಿನ ಆನೇಕಲ್ ನ ಮಾಗೋಡ್ ಲೇಸರ್ 25 ವರ್ಷಗಳ ಸಂಭ್ರಮ, ಹೊಸ ಟ್ಯೂಬ್ ಲೇಸರ್ ಕತ್ತರಿಸುವ ಯಂತ್ರ ಹಾಗೂ ನೂತನ ಘಟಕವನ್ನು 6-ಮೇ- 2022 ರ, ಶುಕ್ರವಾರ ಬೆಳಗ್ಗೆ ಉದ್ಘಾಟಿಸಿ ಆಶೀರ್ವಚನ ಕರುಣಿಸಿದರು.
1997ರಲ್ಲಿ ಜಿಗಣಿ ಘಟಕವನ್ನು ಉದ್ಘಾಟಿಸಿದ್ದನ್ನು ನೆನಪಿಸಿಕೊಂಡ ಪೂಜ್ಯರು ದಾವಣಗೆರೆ ಜಿಲ್ಲೆಯ ಹೊಳೆ ಸಿರಿಗೆರೆಯ ಶಿಕ್ಷಕರಾದ ಬಸಪ್ಪನವರ ಮಕ್ಕಳಲ್ಲಿ ಒಬ್ಬರಾದ ದಿವಂಗತ ಕರ್ನಾಲ್ ರವೀಂದ್ರನಾಥ್ ಕಾರ್ಗೀಲ್ ಯುದ್ದದಲ್ಲಿ ವಿರೋಚಿತವಾಗಿ ಹೋರಾಡಿ ದೇಶಕ್ಕಾಗಿ ಹುತಾತ್ಮರಾಗಿ ಅಮರರಾದರೆ ಅವರ ಇನ್ನೀರ್ವ ಪುತ್ರರಾದ ಹಾಲಸ್ವಾಮಿ ಮತ್ತು ರಾಜೇಂದ್ರರವರು ಕೈಗಾರಿಕಾ ಕ್ಷೇತ್ರದಲ್ಲಿ ಮಾಗೋಡ್ ಲೇಸರ್ ಹೆಸರನ್ನು ಗುರುತಿಸುವಂತೆ ಮಾಡಿರುವುದು ಅವರ ಪರಿಶ್ರಮ ಮತ್ತು ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಿದರು.
ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳ ಆಶೀರ್ವಾದದಿಂದ 1997 ರಲ್ಲಿ ಪ್ರಾರಂಭವಾದ ಮಾಗೋಡು ಲೇಸರ್ ಭಾರತೀಯ ಕೈಗಾರಿಕೆಗಳಿಗೆ ಇತ್ತೀಚಿನ ಉತ್ಪಾದನಾ ಪ್ರಕ್ರಿಯೆಗಳನ್ನು ಲಭ್ಯವಾಗುವಂತೆ ಮಾಡುವ ದೃಷ್ಟಿಯೊಂದಿಗೆ ಪ್ರಾರಂಭವಾಯಿತು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿ, ಗುಣಮಟ್ಟದ ಉತ್ಪನ್ನಗಳಿಗೆ ಹೆಸರಾದ ಮಾಗೋಡ್ ಲೇಸರ್ ಬೆಂಗಳೂರು (ಜಿಗಣಿ, ಪೀಣ್ಯ, ದಾಬಸ್ ಪೇಟೆ), ಧಾರವಾಡ, ಚೆನ್ನೈ (ಅಂಬತ್ತೂರು ಮತ್ತು ಶ್ರೀಪೆರುಂಪುದೂರು) ಮತ್ತು ಪುಣೆಯಲ್ಲಿರುವ ಮಾಗೋಡ್ ಫ್ಯೂಷನ್ ಉಪ ಘಟಕದ ಏಳು ಸ್ಥಳಗಳಲ್ಲಿ ಭಾರತದಲ್ಲಿ ಲೇಸರ್ ಆಧಾರಿತ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.
ಶೀಟ್ ಗಳು ಮತ್ತು ಪ್ಲೇಟ್ ಗಳ ಲೇಸರ್ ಕಟಿಂಗ್, ಟ್ಯೂಬ್ಗಳು ಮತ್ತು ಪೈಪ್ಗಳ ಲೇಸರ್ ಕಟಿಂಗ್, 3D ರೂಪುಗೊಂಡ ಭಾಗಗಳ 5-ಆಕ್ಸಿಸ್ ಲೇಸರ್ ಕಟಿಂಗ್, ಲೇಸರ್ ವೆಲ್ಡಿಂಗ್, ಲೇಸರ್ ಕ್ಲಾಡಿಂಗ್, ಲೇಸರ್ ಹಾರ್ಡನಿಂಗ್, ಲೇಸರ್ ಡ್ರಿಲ್ಲಿಂಗ್, ಮೆಟಲ್ 3ಡಿ ಪ್ರಿಂಟಿಂಗ್, ಡೈ & ಎಮ್ಒಲ್ಡ್ ರಿಪೇರಿಯಲ್ಲಿ ನಾವು ಜಾಬ್ವರ್ಕ್ ಸೇವೆಗಳನ್ನು ಒದಗಿಸುವುದರ ಜೊತೆಯಲ್ಲಿ ಕೈಗಾರಿಕೆಗಳಿಗೆ ವಿನ್ಯಾಸ ಮತ್ತು ಉತ್ಪನ್ನ ಅಭಿವೃದ್ಧಿ ಬೆಂಬಲವನ್ನು ಫೂರೈಸುವ ಉದ್ದಿಮೆಯಾಗಿದೆ.
ಮಾಗೋಡು ಲೇಸರ್ ಮಾಲೀಕರಾದ ಶರಣ ಹಾಲಸ್ವಾಮಿ ಮತ್ತು ಶರಣ ರಾಜೇಂದ್ರ ಕುಟುಂಬದವರು ಶ್ರೀ ಜಗದ್ಗುರುಗಳವರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ಕಣ್ತುಂಬಿ ಸ್ಮರಿಸಿದರು. ಮಾಗೋಡು ಲೇಸರ್ 25 ನೇ ವಾರ್ಷಿಕೋತ್ಸವದ ತನ್ನಿಮಿತ್ತ ಪೂಜ್ಯರ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.