ಜಾನಪದ ವಿದ್ವಾಂಸ ಪ್ರೊ|| ಶಂಕರನಾರಾಯಣ ನಿಧನಕ್ಕೆ ಶ್ರೀ ಜಗದ್ಗುರುಗಳವರ ಸಂತಾಪ

  •  
  •  
  •  
  •  
  •    Views  


ಪ್ರಸಿದ್ಧ ಸಾಹಿತಿ ತೀ.ನಂ. ಶ್ರೀಕಂಠಯ್ಯನವರ ಮೊಮ್ಮಗ ಕುವೆಂಪು ವಿಶ್ವವಿದ್ಯಾಲಯದ  ಕನ್ನಡ ವಿಭಾಗದ ನಿವೃತ್ತ  ಪ್ರೊಫೆಸರ್ ಶಂಕರನಾರಾಯಣ ರವರ ನಿಧನಕ್ಕೆ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ನೆಲೆಸಿದ್ದ ಜಾನಪದ ವಿದ್ವಾಂಸರಾದ ಶಂಕರನಾರಾಯಣ ರವರ ಅಗಲಿಕೆ ಜಾನಪದ ಸಂಶೋಧನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರು ವಿಜ್ಞಾನ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದರೂ, ಕನ್ನಡದ ಮೇಲಿನ ಅಭಿಮಾನದಿಂದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪ್ರವೇಶ ಪಡೆದು ಆರನೆಯ ರ್ಯಾಂಕ್ ಗಳಿಸಿದ್ದರು, ಎಂದು ಅವರೊಂದಿಗಿನ ವ್ಯಾಸಾಂಗದ ದಿನಗಳನ್ನು ಶ್ರೀ ಜಗದ್ಗುರುಗಳವರು ನೆನೆದರು.

ತೀ.ನಂ.ಶ್ರೀ ಯವರ ಮನೆಯ ಸಾಹಿತ್ಯಿಕ ಪರಿಸರ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಜಿ., ಬೇಂದ್ರೆ, ಪು.ತಿ.ನ, ಎ.ಎನ್. ಮೂರ್ತಿರಾವ್, ಡಿ.ಎಲ್.ಎನ್  ಮುಂತಾದವರುಗಳ ಸಾಹಿತ್ಯದ ಪ್ರಭಾವ ಶಂಕರನಾರಾಯಣರವರ ಮೇಲೆ ಬೀರಿತ್ತು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ  ಪ್ರೊಫೆಸರ್ ಹುದ್ದೆಯ ಜೊತೆ ಜೊತೆಗೆ ಹಲವಾರು ವಿಭಾಗಗಳ ಮುಂಚೂಣಿ ಸ್ಥಾನಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು. ನಸುಹಾಸ್ಯ ಸ್ವಭಾವದ ಶಂಕರನಾರಾಯಣ ಅವರು ಓಲೈಕೆ ರಾಜಕಾರಣದಿಂದ ದೂರವಿದ್ದವರು. ಯಾರನ್ನೂ ತೀವ್ರವಾಗಿ ಹಚ್ಚಿಕೊಳ್ಳದ  ಭಾವಜೀವಿಯೂ ಆಗಿದ್ದರು. ಅವರಲ್ಲಿ ಜೀವಸ್ಪಂದನೆಯ ಗುಣವಿತ್ತು. ಸ್ಥಿತಪ್ರಜ್ಞೆಯ, ಪಂಥ, ಸೈದ್ಧಾಂತಿಕ ಗೊಂದಲಗಳಿಲ್ಲದ ಅಧ್ಯಯನಶೀಲತೆ ಸಂವೇದನೆ ಹೊಂದಿದ್ದರು.  ಅವರು ಅಪರೂಪದ ಜಾನಪದ ಕಣಜ ಎನ್ನಲು  ಫಿನ್ ಲೆಂಡ್ ಜನಪದ ಮಹಾಕಾವ್ಯವಾದ "ಕಾಲೆವಾಲ" ಮತ್ತು ಮಾನವ ಶಾಸ್ತ್ರದ ಅತಿ ಮಹತ್ವದ ಕೃತಿಯಾದ ಫ್ರೆಜರ್ ರವರ "ಗೋಲ್ಡನ್ ಬೊ" ಎಂಬ ಎರಡು ಮೌಲಿಕ ಕೃತಿಗಳೇ ಸಾಕ್ಷಿಯಾಗಿವೆ ಎಂದು ಶ್ರೀ ಜಗದ್ಗುರುಗಳವರು ಅಭಿಮಾನ ವ್ಯಕ್ತಪಡಿಸಿದರು.

ಶಂಕರನಾರಾಯಣರವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿ ಅವರು ಪುತ್ರಿಯರಿಗೆ, ಕುಟುಂಬ ಸದಸ್ಯರುಗಳಿಗೆ ವಿಶ್ವಬಂಧು ಮರುಳಸಿದ್ಧರು ಬಸವಾದಿ ಪ್ರಮಥರು ದಯಪಾಲಿಸಲೆಂದು ಸಂತಾಪ ವ್ಯಕ್ತಪಡಿಸಿದ್ದಾರೆ.