N-2515 
  18-04-2024 05:34 PM   
ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?
ಪರಮಪೂಜ್ಯ ಗುರುಗಳ
ಚರಣಾರವಿಂದಗಳಲ್ಲಿ ,
ಪೊಡಮಡುತ್ತಾ,ದಿ.”ದೈವನಿಂದನೆ ಭಕ್ತಿಯಾಗಬಲ್ಲುದೇ?”, ೧೮/೦೪/೨೦೨೪ ರ ತಮ್ಮ ಅಂಕಣಕ್ಕೆ ನನ್ನ ಪ್ರತಿಕ್ರಿಯೆ…..
ಗುರುಗಳು ಲೇಖನಿಸಿರುವ ಮೂರೂ ನಿದರ್ಶನಗಳನ್ನು ಓದಿದಾಗ,ಈ ಭೂಮಿಯ ಮೇಲಿನ ನಮ್ಮ ಪ್ರತಿಯೊಂದು ಕ್ರಿಯೆಗೂ ಕರ್ಮದ ಲೆಕ್ಕಾಚಾರವಿರುತ್ತದೆ ಎಂದೇ ಹೇಳಬಹುದು. ಇಲ್ಲದಿದ್ದರೆ, ನಮ್ಮವರೇ ನಮಗಾಗದಿದ್ದಾಗ, ಯಾರೋ ಸಂಬಂಧವಿಲ್ಲದ ಮೂರನೆಯವರು ಬಂದು ನಮ್ಮ ಆಪತ್ಕಾಲದಲ್ಲಿ ದೇವರಂತೆ ಕಾಪಾಡುವರೆಂದರೆ, ಇದು ದೈವನಿಯಾಮಕವಲ್ಲದೆ ಇನ್ನೇನಾಗಲು ಸಾಧ್ಯ?
ಈಗ ಸಧ್ಯದಲ್ಲಿ ನಾನು ಅಮೆರಿಕದ ಮಗನ ಮನೆಯಲ್ಲಿದ್ದೇನೆ. ಮಗ, ಸೊಸೆ, ಮೂರು ವಾರಗಳ ಪ್ರವಾಸಕ್ಕೆಂದು ಹೋಗಿದ್ದಾರೆ. ಹಾಗಾಗಿ ಮನೆಯಲ್ಲಿ ನಾನೊಬ್ಬಳೆ. ಮಗ ಧೈರ್ಯ ಮಾಡದಿದ್ದರೂ, ನಾನೇ ಬಲವಂತದಿಂದ ಕಳಿಸಿದೆ. ಇಲ್ಲಿನ ನಮ್ಮ ಕುಟುಂಬದ ಆತ್ಮೀಯರೊಬ್ಬರಾದ ದೆಹಲಿ ಮೂಲದ ಹಿಂದಿ ಮಾತನಾಡುವ ಮಧು ಬೆಹೆನ್ ದಿನವೂ ಬೆಳಗ್ಗೆ ನನ್ನ ಯೋಗಕ್ಷೇಮ ವಿಚಾರಿಸುತ್ತಾರೆ. ಬಿಡುವಾದಾಗ ಬಂದು ಮಾತನಾಡುತ್ತಾರೆ. ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಕಳೆದ ಎರಡು ದಿನ ಅವರ ಮನೆಗೆ ಕರೆದುಕೊಂಡು ಹೋಗಿದ್ದಲ್ಲದೆ, ಅತ್ಯಂತ ಪ್ರೀತಿಯಿಂದ ಉಪಚರಿಸಿದ್ದಾರೆ.ನನಗೆ ಇಲ್ಲಿ ಬೇರೆ ಕೆಲವರು ಬಂಧುಗಳಿದ್ದರೂ, ಈ ರೀತಿಯಾದ ಕಾಳಜಿ ಯಾರೂ ತೋರಲಿಲ್ಲ. ಇದೆಲ್ಲ ನೋಡಿದಾಗ, ಅವರಿಗೆ ನನ್ನ ಜೊತೆ ಯಾವ ಜನ್ಮದ ಋಣಾನುಬಂಧ ಇದೆಯೋ ಎನಿಸುತ್ತದೆ.ಇಂಥದೆಲ್ಲಾ ನೋಡಿದಾಗ, ಭಗವಂತನು ತನ್ನ ಯಾವ ಮಕ್ಕಳನ್ನೂ ತಬ್ಬಲಿಗಳನ್ನಾಗಿ ಮಾಡುವುದಿಲ್ಲ. ಅವರವರ ಅವಶ್ಯಕತೆಗನುಗುಣವಾಗಿ ನಮ್ಮ ನಿರೀಕ್ಷೆಗಿಂತಲೂ ಉತ್ತಮವಾದುದನ್ನೇ ಕರುಣಿಸುತ್ತಾನೆ ಎನ್ನುವುದು ಅಷ್ಟೇ ನಿಜ.
ದೇವನೆನ್ನುವವನು ನಮ್ಮ ತಂದೆಯ ಸಮಾನ ಹಾಗಾಗಿ, ಬದುಕಿನ ಕೆಲವು ಬೇನೆಗಳನ್ನು ತಾಳಲಾರದಾಗ
ಬಸವಣ್ಣ, ದಾಸರಾದಿಯಾಗಿ ಸಾಮಾನ್ಯ ಮನುಷ್ಯರಾದ ನಾವೂ ಕೂಡಾ ಅವನನ್ನ ನಿಂದಿಸುತ್ತೇವೆ. ಹಾಗೆಂದ ಮಾತ್ರಕ್ಕೆ ಅವನ ಮೇಲೆ ಭಕ್ತಿ, ಪ್ರೀತಿ, ಗೌರವ ಇಲ್ಲವೆಂದಲ್ಲ. ಆತ ನಮ್ಮ ತಂದೆಯೆನ್ನುವ ಸಲುಗೆಯಿಂದ ಒಂದು ಕ್ಷಣ, ಹಾಗಾಡಿದರೂ, ಮತ್ತೆ ಆ ಕೃಪಾಳು ನಮ್ಮತ್ತ ಸಹಾಯಹಸ್ತ ಬೀಸಿದಾಗ ಎಲ್ಲ ಮರೆತು,”ಅನ್ಯಥಾ ಶರಣಮ್ ನಾಸ್ತಿ, ತ್ವಮೇವ ಶರಣಮ್ ಮಮ”, ಎಂದು ಅವನಿಗೆ ಶರಣಾಗುತ್ತೇವೆ.ಇದೇ ನಮಗೂ ಅವನಿಗೂ ಇರುವ ಸಂಬಂಧ.
ಒಂದೆರೆಡು ಸಾಲು ಬರೆಯಲು ಅನುವು ಮಾಡಿಕೊಟ್ಟ ಗುರುಮಠಕ್ಕೆ ನನ್ನ ಶಿರಸಾಷ್ಟಾಂಗ ವಂದನೆಗಳು.
ರೂಪ ಮಂಜುನಾಥ* ಹೊಳೆನರಸೀಪುರ. ವಾಸ್ತವ್ಯ:ಅಮೆರಿಕ