N-2495 
  06-04-2024 04:14 PM   
ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ
ಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತಾ,
*ಜೀವನ ಸಿಹಿಕಹಿ ನೆನಪುಗಳ ತೂಗುಯ್ಯಾಲೆ* ಅಂಕಣಕ್ಕೆ ಪ್ರತಿಕ್ರಿಯೆ.
ಪೂಜ್ಯರ ಅಂಕಣವನ್ನು ಓದಿದ ಮೇಲೆ ನನಗೆ ಅಲ್ಲಮಪ್ರಭುವಿನ ವಚನ ನೆನಪಾಯಿತು.
ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ ?ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
ಜೀವನ ಸಿಹಿಕಹಿಗಳ ಹೂರಣ. "ರಸವೇ ಜೀವನ ವಿರಸವೇ ಮರಣ ಸಮರಸವೇ ಜೀವನ" ಎಂಬ ಬೇಂದ್ರೆಯವರ ಮಾತುಗಳನ್ನು ನೆನಪಿಸಿಕೊಳ್ಳಬಹುದು. ವ್ಯಕ್ತಿಯು ಜೀವನದಲ್ಲಿ ಬರುವ ಕಷ್ಟ ,ಸುಖ,ನೋವು, ನಲಿವುಗಳನ್ನು ಸಮನಾಗಿ ಸ್ವೀಕರಿಸಿದರೆ ಮಾತ್ರ ಬಾಳಲು ಸಾಧ್ಯ. ಪೂಜ್ಯ ಗುರುಗಳು ವಿಯೆನ್ನಾದಲ್ಲಿ ವ್ಯಾಸಂಗ ಮಾಡುವಾಗ ಭಾರತೀಯ ಮೂಲದವರು ಆರತಿ ಮುಖರ್ಜಿಯವರ ಪರಿಚಯವಾದದ್ದು, ಅವರ ಮನೆಯಲ್ಲಿನ ಆತಿಥ್ಯ, ತಾಯಿತನದ ಪ್ರೀತಿಯನ್ನು ಲೇಖನದಲ್ಲಿ ಮನೋಜ್ಞವಾಗಿ ತಿಳಿಸಿದ್ದಾರೆ. ವ್ಯಕ್ತಿ-ವ್ಯಕ್ತಿಗಳ ನಡುವೆ ಸಂಬಂಧಗಳು ಗಟ್ಟಿಗೊಳ್ಳುವುದು ಅವರು ತೋರಿಸುವ ಪ್ರೀತಿ,ವಾತ್ಸಲ್ಯ,ಕರುಣೆ, ಮಮತೆ,ನಂಬಿಕೆ,ವಿಶ್ವಾಸದಿಂದ ಮಾತ್ರ. ಆರತಿ ಮುಖರ್ಜಿಯವರು ಮರಣಶಯ್ಯೆಯಲ್ಲಿರುವಾಗ ಅವರ ಆಶೀರ್ವಾದಕೋಸ್ಕರ ಜೀವ ಹಿಡಿದುಕೊಂಡಿದ್ದು, ಅವರ ಚಿತಾಭಸ್ಮವನ್ನು ಸಿರಿಗೆರೆಯ ಶಾಂತಿವನದ ಜಲಾಶಯದಲ್ಲಿ ಲೀನವಾಗುವ ಸಂಗತಿ ತಿಳಿದು ಕಣ್ಣುಗಳು ತೇವಗೊಂಡವು. ರಕ್ತ ಸಂಬಂಧಗಳಿಗಿಂತಲೂ ಮಿಗಿಲಾದ ಸಂಬಂಧಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂಬುದನ್ನು ಪೂಜ್ಯರು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಗುರುಗಳ ಅಂಕಣಕ್ಕೆ ಪ್ರತಿಕ್ರಿಯೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ನನ್ನ ಗುರುಗಳಾದ ರಾ. ವೆಂಕಟೇಶ ಶೆಟ್ರು ಸರ್ ಅವರಿಗೆ ಪ್ರಣಾಮಗಳು.
*ಸುಮಾ ಎಸ್.ಸಿ*
ಕಲ್ಲಮ್ಮ ಪ್ರೌಢಶಾಲೆ ಬಹದ್ದೂರ್ಘಟ್ಟ.