N-2720 
  10-11-2024 10:50 AM   
ಸಂಸ್ಕಾರಯುತ ಶಿಕ್ಷಣ ಮಠಗಳ ಆದ್ಯ ಕರ್ತವ್ಯ : ತರಳಬಾಳು ಶ್ರೀ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿರಿಗೆರೆಯಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ವಚನ ವಾಚನ ಮಾಡಿದಂತಹ ಸುಂದರ ಕ್ಷಣ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಸದಾವಕಾಶ ಒದಗಿಸಿಕೊಟ್ಟಂತಹ ಸಿರಿಗೆರೆಯ ರವಿ ಸರ್, ನಾಗರಾಜ್ ಸರ್ ಹಾಗೂ ಕವಿಗೋಷ್ಠಿಗೆ ಹೋಗಿ ಬರಲು ಅನುಮತಿ ನೀಡಿದ ಸೋಮಶೇಖರ್ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಕವಿಗೋಷ್ಠಿಯಲ್ಲಿ ನಾನು ವಾಚನ ಮಾಡಿದ ವಚನಗಳಿಂತಿವೆ..
ವಚನ - ಪೊರೆಯುವರು
ಮಾರ್ಜಾಲ ತನ್ನ ಮರಿಯನು
ಮಮತೆಯಿಂದ ರಕ್ಷಿಸುವಂತೆ
ಮರ್ಕಟದ ಮರಿಯು ತನ್ನಯ
ಮಾತೆಯನು ಆಶ್ರಯಿಸುವಂತೆ
ಮತ್ಸ್ಯದ ಮರಿಯು ತನ್ನಯ
ವಾತ್ಸಲ್ಯದ ತಾಯಿಯ ಸ್ಮರಿಸುವಂತೆ
ಶ್ರೀ ತರಳಬಾಳು ಸದ್ಗುರುವು ತನ್ನಯ
ಶಿಷ್ಯರ ತಪ್ಪು ಒಪ್ಪುಗಳನು ಪರಿಶೀಲಿಸಿ
ಮಾರ್ಜಾಲ, ಮರ್ಕಟ, ಮತ್ಸ್ಯಗಳ
ಕಿಶೋರ ನ್ಯಾಯದ ತರಹ ಪೊರೆಯುವರು.
ಪೂಜಿಸುವವೆವು.
ಬರಡಾದ ಭೂತಾಯಿಯ
ಒಡಲಿಗೆ ಭದ್ರೆಯ ಹರಿಸಿ
ಕೆರೆಕಟ್ಟೆಗಳ ಮಡಿಲ ತುಂಬಿಸಿ
ಬರದ ಛಾಯೆಯ ದೂರಾಗಿಸಿ
ಧರೆಯ ಮಕ್ಕಳ ಮೊಗದಿ
ಸಂತಸದ ನಗೆಯ ಮೂಡಿಸಿದ
ಶ್ರೀ ತರಳಬಾಳು ಸದ್ಗುರುವ
ತರಳರೆಲ್ಲರು ನಿತ್ಯ ಪೂಜಿಸುವವೆವು.
ಸಾಧ್ಯ
ಕುಳಿತವರ ಕಷ್ಟ
ನಿಂತವರಿಗೇನು ಗೊತ್ತು
ಕೇಳುವವರ ಕಷ್ಟ
ಹೇಳುವವರಿಗೇನು ಗೊತ್ತು
ಕುಳಿತು ಕೇಳಿದರಲ್ವೇ
ನಿಂತು ಹೇಳಲು ಸಾಧ್ಯ.
ಬರೆಯುವವರ ಕಷ್ಟ
ಬರೆಯುವವರಿಗೇನು ಗೊತ್ತು
ಓದುವವರ ಕಷ್ಟ
ಓದಿಸುವವರಿಗೇನು ಗೊತ್ತು
ಬರೆದು ಓದಿದರಲ್ವೇ
ಓದಿ ಬರೆಸಲು ಸಾಧ್ಯವೆಂದರು
ನಮ್ಮ ಶ್ರೀ ತರಳಬಾಳು ಸದ್ಗುರುವು.
ವಚನ - ಮರೆತರೆ
ಕಾವಿಯ ತೊಟ್ಟರೇನಯ್ಯ
ಕಾಮದ ಮನವ ಬಿಡದಿರೆ
ಖಾದಿಯ ಉಟ್ಟರೇನಯ್ಯ
ಗಾದಿಯ ಆಸೆಯ ಬಿಡದಿರೆ
ಖಾಕಿಯ ಧರಿಸಿದರೇನಯ್ಯ
ಶೋಕಿಯ ಲಂಚವ ಬಿಡದಿರೆ
ಭಕ್ತರಂತೆ ನಾಮವ ಹಾಕಿದರೇನಯ್ಯ
ಶಿವ ಶರಣರನು ಅರಿಯದಿರೆ
ಮಾನವರಾಗಿ ಹುಟ್ಟಿದರೇನಯ್ಯ
ಶ್ರೀತರಳಬಾಳು ಸದ್ಗುರುವ ಮರೆತರೆ.
ವಚನ - ಶರಣೆಂಬೆ
ಭಕ್ತರ ಹೃದಯ ಸಿಂಹಾಸನವೇರಿದ ಗುರುವೇ
ಜನರ ಮನೆಮನದಿ ಪೂಜಿಸುವ ಮಹಾಗುರುವೇ
ತರಳರ ಬಾಳನುದ್ದರಿಸಲು ಬಂದ ಜಗದ್ಗುರುವೇ
ಕಾಯಕ ಕಾಲ ಕಾಸಿನ ಮಹತ್ವ ಸಾರಿದ ಪ್ರಭುವೇ
ಶ್ರೀ ತರಳಬಾಳು ಸದ್ಗುರುವೇ ಶರಣು ಶರಣೆಂಬೆ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್,
ಅನುಭವಮಂಟಪ, ದಾವಣಗೆರೆ..
ದೂ.ಸಂ. 9591417815.
ಶಿವಮೂರ್ತಿ ಹೆಚ್
India