N-2708 
  01-11-2024 11:43 AM   
ದೀಪಾವಳಿಯೋ ಪಟಾಕಿಗಳ ಹಾವಳಿಯೋ?
ಪೂಜ್ಯರ ಇಂದಿನ ಅಂಕಣವು ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ವೈಶಿಷ್ಟ್ಯಗಳನ್ನು ಒಳಗೊಂಡು ಉತ್ತಮ ಸಂದೇಶವನ್ನು ಅಭಿವ್ಯಕ್ತಿಸಿದೆ. Baa baa black sheep ಎಂಬ ಇಂಗ್ಲಿಷ್ ಭಾಷೆಯ ರೈಮ್ಸ್ ಹೇಳುವ ಮಕ್ಕಳು ಇಂಗ್ಲೀಷ್ ಕಲಿಯುವ ಅವಸರದಲ್ಲಿ ಕನ್ನಡ ಮರೆತು ಕುರಿಗಳಂತೆ ಆಗಬಾರದು ಎಂಬ ಕನ್ನಡಪರ ಕಳಕಳಿ ಈ ಅಂಕಣದಲ್ಲಿ ವಿಶೇಷವಾಗಿ ಪ್ರಸ್ತಾಪವಾಗಿದೆ. ವ್ಯಾವಹಾರಿಕವಾಗಿ ಯಾವ ಭಾಷೆ ಕಲಿತರೂ ತಪ್ಪಲ್ಲ. ಆದರೆ ಮಾತೃಭಾಷೆಯನ್ನು ಮಾತ್ರ ಮರೆಯದೇ ಬಳಸಬೇಕು ಎಂಬ ಸಂದೇಶ ಪರೋಕ್ಷವಾಗಿ ವ್ಯಕ್ತವಾಗಿದೆ.
ಹಾಗೆಯೇ ದೀಪಾವಳಿಯ ವೈಶಿಷ್ಟ್ಯವೇ ಬೆಳಕನ್ನು ಹರಿಸುವುದು ಎಂಬುದನ್ನು ಪೂಜ್ಯರು ಸಾಂದರ್ಭಿಕ ಉದಾಹರಣೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಬೆಳಕು ಚೆಲ್ಲಲು ದೀಪ ಹಚ್ಚಬೇಕು. ಆ ದೀಪವನ್ನು ಮಣ್ಣಿನಿಂದ ಮಾಡುವವನು ಕುಂಬಾರ. ಅದಕ್ಕೆ ಬೇಕಾದ ಎಣ್ಣೆಯನ್ನು ಗಾಣದ ಮೂಲಕ ತೆಗೆಯುವವನು ಗಾಣಿಗ. ದೀಪಕ್ಕೆ ಹಾಕುವ ಬತ್ತಿಯನ್ನು ಮಾಡಲು ಬಳಸುವ ಹತ್ತಿಯನ್ನು ಬೆಳೆಯುವವನು ರೈತ. ಬೆಂಕಿ ಕಡ್ಡಿ ತಯಾರು ಮಾಡುವವನು ಉದ್ಯಮಿ. ಆದರೆ ಇವನ್ನೆಲ್ಲ ಬಳಸಿ ದೀಪ ಹಚ್ಚುವ ಕೈಗಳು ಯಾವ ಜಾತಿಯವರಾದರೇನು? ಯಾವ ವರ್ಗದವರಾದರೇನು? ಆದರೆ ಆತ ದೀಪದಿಂದ ಚೆಲ್ಲುವ ಬೆಳಕು ಮಾತ್ರ ಯಾವ ಜಾತಿಯೂ ಅಲ್ಲ, ಧರ್ಮವೂ ಅಲ್ಲ. ಎಲ್ಲಾ ಜಾತಿ ಧರ್ಮದವರ ಕಾಯಕದ ಫಲವನ್ನು ತನ್ನೊಳಗೆ ಒಳಗೊಂಡು ಹೊರಹೊಮ್ಮುವ ಬೆಳಕು ಮಾತ್ರ ವಿಶ್ವಮಾನ್ಯವಾದುದು. ಬೆಳಕು ನಿರಂತರ. ದೀಪವು ಕಾಲಾನಂತರ ಸವೆದು ಹೋಗುತ್ತದೆ. ಬತ್ತಿಯು ಸುಟ್ಟು ಹೋಗುತ್ತದೆ. ದೀಪ ಉರಿದಂತೆ ಎಣ್ಣೆಯು ಕರಗಿ ಹೋಗುತ್ತದೆ. ಎಲ್ಲವೂ ಉಳಿದರೆ ಬೆಳಕು ಉಳಿಯುವುದು. ಬರೀ ದೀಪ ಮತ್ತು ಬತ್ತಿಯಿಂದ ಬೆಳಕು ಬರುವುದಿಲ್ಲ, ಎಣ್ಣೆ ಬೇಕೇ ಬೇಕು. ಬರೀ ದೀಪ ಮತ್ತು ಎಣ್ಣೆಯಿಂದ ಬೆಳಕು ಬರುವುದಿಲ್ಲ, ಅದಕ್ಕೆ ಬತ್ತಿ ಬೇಕೇ ಬೇಕು. ಬರೀ ಎಣ್ಣೆ ಮತ್ತು ಬತ್ತಿಯಿಂದ ಬೆಳಕು ಬರುವುದಿಲ್ಲ, ಅದಕ್ಕೆ ದೀಪ ಇರಲೇಬೇಕು. ಹೀಗೆ ವ್ಯವಸ್ಥೆಯೊಳಗೆ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬೆಳಕು ಹರಿಸಲು ಅಸಾಧ್ಯ. ಸಾಮರಸ್ಯ ಎಂಬುದು ಬಹಳ ಮುಖ್ಯ. ಅಂತಹ ಸಾಮರಸ್ಯವನ್ನು ಕದಡುವ ವ್ಯವಸ್ಥೆಯೊಳಗೆ ಇರುವ ಮತ್ಸರದ ರಾಯಭಾರಿಗಳಿಗೆ ಎಚ್ಚರಿಸುವ ತಮ್ಮ ಕವನವನ್ನು ಉಲ್ಲೇಖಿಸಿರುವ ಪೂಜ್ಯರಿಗೆ ಪ್ರಣಾಮಗಳು. ಇಂತಹ ಮತ್ಸರದ ರಾಯಭಾರಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಎಲ್ಲೆಲ್ಲಿ ಬೆಂಕಿ ಹಚ್ಚುತ್ತಾರೆ ಎಂಬುದು ಮಾತ್ರ ಸುಲಭವಾಗಿ ಅರ್ಥವಾಗುವುದಿಲ್ಲ. ವ್ಯವಸ್ಥೆಯೊಳಗೆ ಸಾಮರಸ್ಯ ಇರಲೇಬೇಕು ಎನ್ನುವುದಾದರೆ ಮತ್ಸರದ ರಾಯಭಾರಿಗಳ ಬೆನ್ನಿನ ಮೇಲೆ ಬಾರಿಸಬೇಕು. ತಮ್ಮ ಜೀವನ ಸುಸೂತ್ರವಾಗಿ ನಡೆಯಲಿ ಎಂಬ ಏಕೈಕ ಉದ್ದೇಶಕ್ಕಾಗಿ ಕೆಲವು ಸಮಸ್ಯೆಗಳನ್ನು ಜೀವಂತವಾಗಿ ಇಡುವ ಇಂತವರು ಮುಂದೊಮ್ಮೆ ಅನುಭವಿಸುವ ನರಕ ಊಹಿಸಲು ಅಸಾಧ್ಯ. ಇಂತವರು ಯಾರೊಂದಿಗೆ ಇರುತ್ತಾರೋ ಅವರಿಗೂ ಸಹ ವೇದನೆಗಳು ನಿರಂತರ.
ಇನ್ನು ದೀಪಾವಳಿಯಂದು ಸುಡುವ ಪಟಾಕಿಗಳ ಬಗ್ಗೆ ಅಂಕಣದಲ್ಲಿ ಸ್ವಾರಸ್ಯಕರವಾಗಿ ಪೂಜ್ಯರು ಉಲ್ಲೇಖ ಮಾಡಿದ್ದಾರೆ. ಪಟಾಕಿಗಳು ಈ ಪ್ರಪಂಚಕ್ಕೆ ಹೇಗೆ ಪರಿಚಿತವಾದವು ಎಂಬುದು ಈಗಲೂ ಸರಿಯಾಗಿ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬವಾದ ದೀಪಾವಳಿಯ ದಿನ ಪಟಾಕಿಗಳನ್ನು ಏಕೆ ಸುಡುತ್ತಾರೆ ಎಂಬುದು ಇಂದಿಗೂ ಅಸ್ಪಷ್ಟ. ಆದರೆ ಈ ಪಟಾಕಿಗಳನ್ನು ಸುಡುವಾಗ ಮೂಡುವ ಬಣ್ಣಬಣ್ಣದ ಚಿತ್ತಾರಗಳು ಮತ್ತು ಬೆಳಕು ಮನಸ್ಸಿನೊಳಗೆ ಉಲ್ಲಾಸ ಮೂಡಿಸುತ್ತವೆ. ಆ ಕ್ಷಣಕ್ಕೆ ಮನಸ್ಸಿನ ಒಳಗೆ ಆವರಿಸಿರುವ ದುಗುಡ ಸ್ವಲ್ಪ ಹೊತ್ತಾದರೂ ಮಾಯವಾಗುತ್ತದೆ. ಪಟಾಕಿಗಳು ಸೃಷ್ಟಿಸುವ ಬೆಳಕು ಮನಸ್ಸನ್ನು ಅರಳಿಸುತ್ತದೆ. ಹಿಂದೂ ಸಂಪ್ರದಾಯದ ಈ ಆಚರಣೆ ಧನಾತ್ಮಕವಾಗಿ ಉತ್ತಮ ಸಂದೇಶವನ್ನು ಸಾರುತ್ತದೆ ಎಂಬುದನ್ನು ತುಂಬಾ ಚೆನ್ನಾಗಿ ಪೂಜ್ಯರು ಈ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.
ದೀಪಾವಳಿ ಎಂದಾಕ್ಷಣ ನೆನಪಾಗುವುದು ಅಲ್ಲಮ ಪ್ರಭು ದೇವರ ಈ ವಚನ:
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ !
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ.
ಬಸವಣ್ಣನೆಂಬ ಜ್ಯೋತಿ ಮನೆಗಳನ್ನು ಮನಗಳನ್ನು ಬೆಳಗಲಿ.
ಶರಣು ಶರಣಾರ್ಥಿಗಳು. 🙏🙏
ಪ್ರಸನ್ನ ಯು.
ಸಿರಿಗೆರೆ