ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು.

  •  
  •  
  •  
  •  
  •    Views  

ತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಚಾಣಾಕ್ಷರು ಎಲ್ಲ ಕಾಲದಲ್ಲೂ ಇದ್ದಾರೆ. ಅಂಥವರು ಸತ್ಯವನ್ನೇ ಸುಳ್ಳೆಂದು, ಸುಳ್ಳನ್ನೇ ಸತ್ಯವೆಂದು ನಂಬಿಸಿ ಜನರನ್ನು ಮೋಸಗೊಳಿಸುತ್ತಾರೆ. ನಂಬದ ಸಂಗತಿಯನ್ನು ನಂಬುವಂತೆ ಮಾಡಲು ಸರಣಿ ಸುಳ್ಳಿನ ಸುದ್ದಿಗಳನ್ನು ಹಬ್ಬಿಸುತ್ತಾರೆ. ಸಂಶಯ ಪಡದ ಜನರ ಮನಸ್ಸಿನಲ್ಲಿ ಸಂಶಯದ ವಿಷಬೀಜ ಬಿತ್ತಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳಲು ಯತ್ನಿಸುತ್ತಾರೆ. ಹಿಂದಿನ ಕಾಲದಲ್ಲಿ ಸುಳ್ಳು ವಾಮನನಂತೆ ನಿಧಾನವಾಗಿ ಹರಡುತ್ತಿತ್ತು. ಆದರೆ ಈಗ ಸಾಮಾಜಿಕ ಜಾಲತಾಣಗಳ “ಕೃಪೆ”ಯಿಂದ ಅದು ಕ್ಷಣಾರ್ಧದಲ್ಲಿ ತ್ರಿವಿಕ್ರಮನಂತೆ ಬೆಳೆದು ನಿಂತು ವಿಶ್ವಾದ್ಯಂತ ಹರಡುತ್ತಿದೆ. “ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದು ಸತ್ಯವಾಗುತ್ತದೆ; ಅದನ್ನು ಜನರು ನಂಬುತ್ತಾರೆ” ಎಂದು ಬಲವಾಗಿ ನಂಬಿದ್ದವನು ಹಿಟ್ಲರನ ಆತ್ಮೀಯನಾಗಿದ್ದ ಗೋಬೆಲ್. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಅವನ ಯುದ್ಧತಂತ್ರದ ಭಾಗವೇ ಆಗಿತ್ತು. “Goebel Truth” ಎಂಬ ಶಬ್ದ ಬಳಕೆಗೆ ಬಂದುದು ಈ ಹಿನ್ನೆಲೆಯಲ್ಲಿ. ಮಹಾಭಾರತ ಯುದ್ದದಲ್ಲಿಯೂ ಭೀಷ್ಮರ ಮರಣಾನಂತರ ಸೇನಾಪತಿಯಾದ ದ್ರೋಣರನ್ನು ಪುತ್ರಶೋಕದಿಂದ ಹತ್ಯೆಗೈಯಲು ಧರ್ಮರಾಯನಿಂದ “ಅಶ್ವತ್ಥಾಮೋ ಹತಃ ಕುಂಜರಃ” (ಅಶ್ವತ್ಥಾಮ ಎಂಬ ಆನೆ ಸತ್ತುಹೋಯಿತು) ಎಂದು ಶ್ರೀಕೃಷ್ಣ ಸತ್ಯವನ್ನೇ ಹೇಳಿಸಿದ್ದರೂ ಅದರ ಹಿಂದಿನ ಆಶಯ ಸುಳ್ಳೇ ಆಗಿತ್ತು. “ಅಶ್ವತ್ಥಾಮೋ ಹತಃ” ಎಂದು ಏರುದನಿಯಲ್ಲಿ ಹೇಳಿಸಿದ್ದು, “ಕುಂಜರಃ” ಎಂದು ಮೆಲುದನಿಯಲ್ಲಿ ಹೇಳಿಸಿ ತಮಟೆಗಳನ್ನು ಬಾರಿಸಿದ್ದು ಯುದ್ಧತಂತ್ರದ ಭಾಗವೇ ಆಗಿತ್ತು. ಧರ್ಮರಾಯ ಹೇಳಿದ ಮಾತಿನಲ್ಲಿ ಸುಳ್ಳೇನೂ ಇರಲಿಲ್ಲ. ಆದರೆ ಆ ಮಾತಿನ ಹಿಂದಿನ ಮನೋಧರ್ಮ ಸುಳ್ಳಿಗಿಂತ ಭಿನ್ನವಾಗಿರಲಿಲ್ಲ. 

ಎಲ್ಲ ಧರ್ಮಗಳಲ್ಲಿಯೂ ಸುಳ್ಳು ಹೇಳಬಾರದು ಸತ್ಯವನ್ನೇ ಹೇಳಬೇಕು ಎಂದು ಉಪದೇಶಿಸಲಾಗಿದೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎನ್ನುತ್ತಾರೆ ಬಸವಣ್ಣನವರು. “ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್” ಎನ್ನುತ್ತದೆ ಮನುಸ್ಮೃತಿ (4.138). ಆದರೆ ಸುಳ್ಳು ಹೇಳುವುದು ಎಲ್ಲ ಸಂದರ್ಭಗಳಲ್ಲೂ ನೀತಿಬಾಹಿರ (unethical) ಕೃತ್ಯವೇ? ಎಂಬ ಪ್ರಶ್ನೆಯನ್ನು ಕುರಿತು ದಾರ್ಶನಿಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಬುದ್ದಿಮಾಂದ್ಯಳಾಗಿ (dementia) ಮರೆವು ಆವರಿಸಿ ಆಸ್ಪತ್ರೆಗೆ ದಾಖಲಾದ ವೃದ್ಧ ವಿಧವೆಯೊಬ್ಬಳು “ನನ್ನ ಗಂಡ ನನ್ನನ್ನು ನೋಡಲು ಯಾವಾಗ ಬರುತ್ತಾನೆ?” ಎಂದು ತನ್ನನ್ನು ಶುಶ್ರೂಷೆ ಮಾಡುತ್ತಿರುವ ದಾದಿಯನ್ನು ಕೇಳಿದರೆ ದಾದಿ ಏನು ಹೇಳಬೇಕು? ನಿನ್ನ ಗಂಡ ಸತ್ತು ಬಹಳ ವರ್ಷಗಳಾದವು ಎಂದು ಹೇಳಬೇಕೇ, ನಿನ್ನ ಗಂಡ ಈಗ ಬದುಕಿಲ್ಲ ಎಂದು ನಿಧಾನವಾಗಿ ಆಕೆಗೆ ಮನದಟ್ಟು ಮಾಡಿಕೊಡಬೇಕೇ ಅಥವಾ ನಾಳೆ ನಾಡಿದ್ದರಲ್ಲಿ ಬರಬಹುದು ಎಂದು ಸುಳ್ಳು ಹೇಳಬೇಕೇ? ಆಕೆಯ ಮನಃಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ದಾದಿ ಸುಳ್ಳು ಹೇಳಿದರೆ ಏನು ತಪ್ಪು? ತಾತ್ವಿಕವಾಗಿ ಸುಳ್ಳು ಹೇಳುವುದು ತಪ್ಪು, ನಿಜ. ಆದರೆ ಆಕೆಯ ಆರೋಗ್ಯದ ದೃಷ್ಟಿಯಿಂದ ಇಲ್ಲಿ ದಾದಿ ಸುಳ್ಳು ಹೇಳುವುದು ಅನಿವಾರ್ಯ. ದಾರಿಯಲ್ಲಿ ಕಾರು ಡಿಕ್ಕಿ ಹೊಡೆದು ಅದರಲ್ಲಿದ್ದವರು ಸ್ಥಳದಲ್ಲಿಯೇ ಮೃತಪಟ್ಟರೆ ಅವರ ಹತ್ತಿರದ ಬಂಧುಗಳಿಗೆ ಕಾರು ಅಪಘಾತದಲ್ಲಿ ಎಲ್ಲರೂ ಮರಣ ಹೊಂದಿದ್ದಾರೆಂದು ಯಾರೂ ಹೇಳುವುದಿಲ್ಲ, ಸ್ವಲ್ಪ ಸೀರಿಯಸ್ ಆಗಿದೆ, ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ, ಬೇಗ ಬನ್ನಿ ಎಂದು ಸುಳ್ಳು ಹೇಳುತ್ತಾರೆ. “ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ಮಾ ಬ್ರೂಯಾತ್ ಸತ್ಯಮಪ್ರಿಯಂ” (ಸತ್ಯವನ್ನೇ ಹೇಳಬೇಕು, ಪ್ರಿಯವಾದುದನ್ನೇ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು) ಎಂಬ ಅನುಶಾಸನವಿದ್ದರೂ, “ಪ್ರಿಯಂ ಚ ನಾನೃತಂ ಬ್ರೂಯಾತ್” ಅಂದರೆ ಪ್ರಿಯವಾಗಿರಲಿ ಎಂದು ಸುಳ್ಳು ಮಾತ್ರ ಹೇಳಬಾರದು ಎಂಬ ನಿಷೇಧವೂ ಇದೆ.

ಹಾಗಾದರೆ ಈ ವಿಧಿ-ನಿಷೇಧಗಳಲ್ಲಿ ಯಾವುದೇ ಸುಳ್ಳನ್ನು ಸರಿ ತಪ್ಪು ಎಂದು ನಿರ್ಧರಿಸುವುದು ಹೇಗೆ? ಅದರ ಮಾನದಂಡವಾದರೂ ಏನು? ನೀವು ಹೇಳುವ ಸುಳ್ಳಿನ ಪರಿಣಾಮ ವ್ಯಕ್ತಿಯ ಮೇಲೆ ಸಮಾಜದ ಮೇಲೆ ಏನಾಗುತ್ತದೆ ಎಂಬುದನ್ನು ಆಧರಿಸಿ ಸರಿ/ತಪ್ಪುಗಳನ್ನು ನಿರ್ಧರಿಸಬಹುದು ಎಂದು ಕೆಲವರು ಹೇಳುತ್ತಾರೆ. ನಿಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ತೇಜೋವಧೆ ಮಾಡಲು ಸುಳ್ಳು ಹೇಳಿದರೆ, ನಿಮ್ಮ ಸುಳ್ಳಿನಿಂದ ಬೇರೆಯವರಿಗೆ ಹಾನಿಯುಂಟಾಗುವುದಾದರೆ ಅಂತಹ ಸುಳ್ಳು, ನೀತಿಬಾಹಿರ, ಪರಾರ್ಥಕ್ಕಾಗಿ ಅಂದರೆ ಇನ್ನೊಬ್ಬರ ಹಿತದೃಷ್ಟಿಯಿಂದ ಸುಳ್ಳು ಹೇಳಿದರೆ ಅದು ಸರಿ ಎಂದು ಅವರ ವಾದ. ಸ್ವಾರ್ಥವೋ, ಪರಾರ್ಥವೋ ಸತ್ಯ ಸತ್ಯವೇ, ಸುಳ್ಳು ಸುಳ್ಳೇ. 

ಸತ್ಯಕ್ಕೆ ನಾನಾ ಅರ್ಥಗಳಿವೆ. ಇದನ್ನು ಸ್ಥೂಲವಾಗಿ ಎರಡು ವಿಧವಾಗಿ ವಿಂಗಡಿಸಬಹುದು: ಒಂದು ಲೌಕಿಕ ಸತ್ಯ (emphirical truth) ಮತ್ತೊಂದು ಪಾರಲೌಕಿಕ ಸತ್ಯ (metaphysical truth), ಲೌಕಿಕ ಸತ್ಯವನ್ನು ಸುಲಭವಾಗಿ ಗ್ರಹಿಸಿದಂತೆ ಪಾರಲೌಕಿಕ ಸತ್ಯವನ್ನು ಅಷ್ಟು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಲೌಕಿಕ ಸತ್ಯ ಲೋಕವ್ಯವಹಾರದಲ್ಲಿ ಒಂದು ಘಟನೆಗೆ ಸಂಬಂಧಪಟ್ಟ ಮಾತಾದರೆ (rhetoric) ಪಾರಲೌಕಿಕ ಸತ್ಯ ಈ ಸೃಷ್ಟಿಯ ಆಚೆ ಇರುವ ಆತ್ಯಂತಿಕ ಸತ್ಯದ ಇರುವಿಕೆಗೆ (existence) ಸಂಬಂಧಪಟ್ಟ ವಿಚಾರ. ಪಾರಲೌಕಿಕ ಸತ್ಯದ ಸಾಕ್ಷಾತ್ಕಾರಕ್ಕೆ ನೆರವಾಗುವ ಜೀವನ ಮೌಲ್ಯ ಲೌಕಿಕಸತ್ಯ. ಒಟ್ಟಾರೆ ಇದ್ದುದನ್ನು ಇದ್ದಂತೆ ಹೇಳುವುದು ಸತ್ಯ. ಆದರೆ ಆ ಇರುವಿಕೆಯ ಗ್ರಹಿಕೆಯಲ್ಲಿ ವ್ಯತ್ಯಾಸವಾದರೆ ಯಾವುದು ಸರಿ, ಯಾವುದು ತಪ್ಪು, ಅದನ್ನು ಅಳೆಯುವ ಮಾನದಂಡ ಯಾವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಪಾರಲೌಕಿಕ ಸತ್ಯ ಕುರಿತಂತೆ ವಿಭಿನ್ನ ಧರ್ಮಗಳಲ್ಲಿ ಅನೇಕ ಸೈದ್ದಾಂತಿಕ ವ್ಯತ್ಯಾಸಗಳುಂಟಾಗಿ ವಿಭಿನ್ನ ಮತಭೇದಗಳಿಗೆ ಎಡೆಮಾಡಿಕೊಟ್ಟಿದೆ. ಲೌಕಿಕ ಸತ್ಯ ಹಾಗಲ್ಲ, ಅದನ್ನು ಪತ್ತೆ ಹಚ್ಚಿ ಪ್ರಮಾಣೀಕರಿಸಬಹುದು. ದುಡ್ಡಿನಿಂದ ಅದನ್ನು ಮರೆಮಾಚಲು ಪ್ರಯತ್ನ ಮಾಡಿದರೂ ಸತ್ಯವನ್ನು ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. “ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ” ಅಂದರೆ ಬಂಗಾರದ ಬಿಂದಿಗೆಯಲ್ಲಿ ಸತ್ಯದ ಮುಖವು ಅಡಗಿದೆ ಎಂಬ ಅನುಭಾವದ ಮಾತೊಂದು ಬೃಹದಾರಣ್ಯಕ ಉಪನಿಷತ್ತಿನಲ್ಲಿ (5.15.1) ಬರುತ್ತದೆ. ಯಾವಾತನು ಹೊರಗೆ ಕಾಣಿಸುವ ಬಂಗಾರಕ್ಕೆ ಮಾರುಹೋಗುತ್ತಾನೋ ಅವನಿಗೆ ಸತ್ಯದ ಸಾಕ್ಷಾತ್ಕಾರವಾಗುವುದಿಲ್ಲ ಎಂಬುದು ಈ ಉಪನಿಷತ್ತಿನ ಜೀವನಸಂದೇಶ, ಸತ್ಯವನ್ನು ಹೇಳುವವರು ಸತ್ವಪರೀಕ್ಷೆಗೆ ಒಳಗಾಗುತ್ತಾರೆ. ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಲು ಅವರು ಸಿದ್ದರಾಗಬೇಕಾಗುತ್ತದೆ. ಮನೆಮಠಗಳನ್ನು ಕಳೆದುಕೊಂಡರೂ ಸತ್ಯವೇ ಅವರಿಗೆ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಅವರು ಎಂದೂ ರಾಜಿಮಾಡಿಕೊಳ್ಳಲು ಸಿದ್ದರಾಗುವುದಿಲ್ಲ, ಜೀವನವೆಂಬ ಪಯಣದಲ್ಲಿ ಸತ್ಯಪಥವನ್ನು ತುಳಿಯುವವರಿಗೆ ಸಂಕಷ್ಟಗಳು ಒಂದರ ಮೇಲೊಂದು ಬೆನ್ನಟ್ಟಿಕೊಂಡು ಬರುತ್ತವೆ. ಸತ್ಯಸಂಧನು ಅವುಗಳನ್ನು ಧೈರ್ಯವಾಗಿ ಎದುರಿಸಬೇಕಾಗುತ್ತದೆ. ಬಂಗಾರವನ್ನು ಒರೆಹಚ್ಚಿ ನೋಡಿ ಸುಂದರವಾದ ಆಭರಣವನ್ನು ಮಾಡುವಂತೆ, ಶ್ರೀಗಂಧವನ್ನು ಸಾಣೇಕಲ್ಲಿನ ಮೇಲೆ ಅರೆದು ಸುಗಂಧವನ್ನು ಮೈಗೆ ಲೇಪಿಸಿಕೊಂಡಂತೆ, ಕಬ್ಬನ್ನು ಗಾಣದಲ್ಲಿ ಹಾಕಿ ಅರೆದು ಸವಿಯಾದ ಬೆಲ್ಲವನ್ನು ಮಾಡುವಂತೆ ದೇವರು ಭಕ್ತನಿಗೆ ಸಾಕಷ್ಟು ಕಷ್ಟಕೋಟಲೆಗಳನ್ನು ಕೊಟ್ಟು ಪರೀಕ್ಷಿಸಿ ಅವನ ವ್ಯಕ್ತಿತ್ವ ಹೊಳಪುಗೊಳ್ಳುವಂತೆ ಮಾಡುತ್ತಾನೆಂದು ದೇವರ ದಾಸಿಮಯ್ಯನವರು ಈ ಮುಂದಿನ ವಚನದಲ್ಲಿ ವಿಶ್ಲೇಷಿಸಿದ್ದಾರೆ: 

ಹರ ತನ್ನ ಭಕ್ತರ ತಿರಿವಂತೆ ಮಾಡುವ 
ಒರೆದು ನೋಡುವ ಸುವರ್ಣದ ಚಿನ್ನದಂತೆ 
ಅರೆದು ನೋಡುವ ಚಂದನದಂತೆ 
ಅರಿದು ನೋಡುವ ಕಬ್ಬಿನ ಕೋಲಿನಂತೆ 
ಬೆದರದೆ ಬೆಚ್ಚದೆ ಇದ್ದಡೆ 
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥ!

ವಿಜ್ಞಾನಿ ಮತ್ತು ತತ್ವಜ್ಞಾನಿಯಾದ ಗೆಲಿಲಿಯೋ ಜೀವನದ ಕತೆಯನ್ನು ಸ್ವಲ್ಪ ಕೇಳಿ, ಭೂಮಿಯ ಸುತ್ತ ಸೂರ್ಯ ಮತ್ತು ಇತರ ಗ್ರಹಗಳು ತಿರುಗುತ್ತವೆ ಎಂಬ ಭೂಕೇಂದ್ರಿತ ಸಿದ್ದಾಂತವನ್ನು ಅಲ್ಲಗಳೆದು ಸೂರ್ಯನ ಸುತ್ತ ಭೂಮಿ ಮತ್ತಿತರ ಗ್ರಹಗಳು ತಿರುಗುತ್ತವೆ ಎಂಬ ಸೂರ್ಯಕೇಂದ್ರಿತ ಸಿದ್ದಾಂತವನ್ನು ಪ್ರತಿಪಾದಿಸತೊಡಗಿದ. ಭೂಮಿಯು ಸ್ಥಿರವಾಗಿ ನಿಂತಿದೆ; ಸೂರ್ಯ ಚಂದ್ರಾದಿಗಳು ಭೂಮಿಯನ್ನು ಸುತ್ತುತ್ತಾರೆ ಎಂಬುದು ಆ ಕಾಲದ ನಂಬಿಕೆಯಾಗಿತ್ತು. ಅದನ್ನು ಅಲ್ಲಗಳೆದು ಭೂಮಿಯು ಸ್ಥಿರವಾಗಿಲ್ಲ; ಅದು ಚಲಿಸುತ್ತಿದೆ ಎಂದು ಆತ ಪ್ರತಿಪಾದಿಸಿದ. ಅವನನ್ನು ಹಿಡಿದು, ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆಗೆ ಒಳಪಡಿಸಿ ಅಪರಾಧಿಯೆಂದು ತೀರ್ಮಾನಿಸಿ ಶಿಕ್ಷೆ ನೀಡಲಾಯಿತು. ಆ ಕಾಲದ ಪದ್ಧತಿಯಂತೆ ಗೋಣಿ ತಾಟನ್ನುಟ್ಟು ಮೈಗೆ ಬೂದಿ ಬಳಿದುಕೊಂಡು ಮೊಳಕಾಲೂರಿ ಕುಳಿತು “ನಾನು ಅಪರಾಧಿ, ನಾನು ಬೋಧಿಸಿದುದೆಲ್ಲವೂ ಸುಳ್ಳು, ಭೂಮಿ ಚಲಿಸುತ್ತಿಲ್ಲ; ಸ್ಥಿರವಾಗಿ ನಿಂತಿದೆ” ಎಂದು ಬಹಿರಂಗವಾಗಿ ಸಾರಬೇಕಾಯಿತು. ಮೇಲಕ್ಕೇಳುವಾಗ ತಗ್ಗಿದ ದನಿಯಲ್ಲಿ “ನಾನು ಏನೇ ಹೇಳಿರಲಿ, ಅದು ಚಲಿಸಿಯೇ ಚಲಿಸುತ್ತದೆ” ಎಂದು ಹೇಳಿದನಂತೆ! ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಸತ್ಯ ಪ್ರತಿಪಾದನೆಗೆ ತೊಡಗಿದವರನ್ನು ಕ್ರೂರವಾಗಿ ಕೊಂದಿರುವುದು ಕಾಣಬರುತ್ತದೆ. ಸತ್ಯ ಹೇಳುವವನು ಸತ್ತರೂ ಸತ್ಯ ಸಾಯುವುದಿಲ್ಲ. ತತ್ಕಾಲದಲ್ಲಿ ಸುಳ್ಳು ವಿಜೃಂಭಿಸಿದರೂ ಸದಾಕಾಲ ಉಳಿಯುವುದೇ ಸತ್ಯ. ಸತ್ಯದ ಮುಂದೆ ಸುಳ್ಳು ಮಂಡಿಯೂರಲೇಬೇಕಾಗುತ್ತದೆ.

 “ಸತ್ಯಮೇವ ಜಯತೇ”!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.19-5-2022.