ಶಿವಶರಣರ ವಚನ ಸಂಪುಟ ಜಾಲತಾಣ: ತರಳಬಾಳು ಶ್ರೀಗಳಿಗೆ ಋಣಿ
ಚಿತ್ರದುರ್ಗ ಮೇ.21: 12ನೆಯ ಶತಮಾನದಲ್ಲಿ ಶರಣರು ವಚನಗಳ ಮೂಲಕ ಮಾಡಿದ ಕ್ರಾಂತಿಯು ರೂಢಮೂಲ ತಿಳಿವಳಿಕೆಯನ್ನು ಬದಲಾಯಿಸುವಂತಾದ್ದಾಗಿತ್ತು. ಬದುಕಿನ ಮೌಲ್ಯವನ್ನು ಉನ್ನತಿಕರಿಸುವ ವಚನ ಸಾಹಿತ್ಯವನ್ನು ಅಂಗೈಯಲ್ಲಿ ದೊರಕುವಂತೆ ಮಾಡಿದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಕಾರ್ಯ ಸ್ತುತ್ಯರ್ಹವಾದುದು ಎಂದು ಸಂಶೋಧಕ ಡಾ. ರಾಜಶೇಖರಪ್ಪ ಅಭಿಪ್ರಾಯಪಟ್ಟರು.
ಇಂದು ಚಿತ್ರದುರ್ಗದ ತರಳಬಾಳು ಶಾಲಾ ಸಮುಚ್ಚಯದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಅಣ್ಣನ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಚಾರ ಗೋಷ್ಠಿಯಲ್ಲಿ ರಾಜಶೇಖರಪ್ಪನವರು ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಸಮಾನತೆ ತತ್ವವನ್ನು ಸಾರಿದ ಶರಣರು ಸಾಮಾಜಿಕ, ಧಾರ್ಮಿಕ, ಸಾಹಿತ್ಯದ ಜ್ಞಾನದ ವಲಯವನ್ನು ವಿಸ್ತರಿಸಿದರು. ಜಾತಿ, ವೃತ್ತಿ, ಸ್ಥಾನಗಳೆಂಬ ಮೇಲರಿಮೆಗಳು ಕೃತಕವಾದವು. ಶ್ರದ್ಧೆ, ಭಕ್ತಿ, ವಿನಯ, ಸೌಜನ್ಯ, ಪ್ರಮಾಣಿಕತೆಗಳೇ ನಿಜವಾದ ಆತ್ಮಶೋಧನೆಯ ಮಾರ್ಗಗಳು. ಅನುಭವದಿಂದ ಹೊರಹೊಮ್ಮಿದ ವಚನಗಳು ನಡೆ ನುಡಿ ಒಂದು ಮಾಡಿದವು. ಶರಣರ ತತ್ವಗಳು ಬದುಕಿನೊಳಗೆ ಅಳವಡಿಸಿಕೊಂಡು ನಡೆದಾಗ ಸಾರ್ಥಕವಾಗುತ್ತದೆ ಎಂದು ರಾಜಶೇಖರಪ್ಪನವರು ಹೇಳಿದರು.
ವಚನ ಜಾಲತಾಣದ ಬಗ್ಗೆ ಮಾತನ್ನಾಡಿದ ಅಧ್ಯಾಪಕ ನಾಗರಾಜ ಸಿರಿಗೆರೆ, ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸಿದರು. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ವಚನ ಸಾಹಿತ್ಯವನ್ನು ಬಹುಮಾಧ್ಯಮದ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿದರು. ಪೂಜ್ಯರ ದೂರದೃಷ್ಟಿಯ ಆಲೋಚನೆಯಿಂದ ಬಸವಣ್ಣನವರ ವಚನಗಳು ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತಂತ್ರಜ್ಞಾನದ ಆಸಕ್ತಿಯ ಫಲವಾಗಿ ಶರಣರ 22ಸಾವಿರ ವಚನಗಳು ಉಚಿತವಾಗಿ ಜಾಲತಾಣದಲ್ಲಿ ದೊರಕುವಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್ ಮಾತನಾಡಿ, ಇಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಲಯದ ಪ್ರಕ್ಷುಬ್ಧ ವಾತಾವರಣದಲ್ಲಿ ವಚನ ಸಾಹಿತ್ಯವು ಸಂಜೀವಿನಿಯಾಗಿವೆ. ಬದುಕಿನ ಎಲ್ಲಾ ರಂಗಗಳ ಸಮಸ್ಯೆಗಳಿಗೆ ವಚನಸಾಹಿತ್ಯದಲ್ಲಿ ಪರಿಹಾರವಿದೆ ಎಂದರು. ಅಧ್ಯಾಪಕ ರಂಗಣ್ಣ ವಚನ ಸಂಪುಟ ಜಾಲತಾಣನ್ನು ಬಳಸುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯ ವಸಂತ ಬಡಿಗೇರ ಮತ್ತು ಶಶಿಕಲಾ ಸಂಗಡಿಗರು ವಚನ ಗೀತೆಗಳನ್ನು ಹಾಡಿದರು. ವಿದ್ಯಾಸಂಸ್ಥೆಯ ಚಿತ್ರದುರ್ಗ ವಲಯಾಧಿಕಾರಿ ಎಂ ಆರ್ ರಾಥೋಡ್ ಸ್ವಾಗತಿಸಿದರು. ಅಣ್ಣನ ಬಳಗದ ಅಧ್ಯಕ್ಷ ಬಿ ಎಸ್ ಮರುಳಸಿದ್ಧಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಂದಿಸಿದರು. ವೇದಿಕೆಯಲ್ಲಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಚಂದ್ರಶೇಖರಯ್ಯ ಉಪಸ್ಥಿತರಿದ್ದರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಚಿತ್ರದುರ್ಗ ವಲಯದ ಶಾಲಾ ಕಾಲೇಜುಗಳ ನೌಕರರು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.