ತುಂಬಿದ ತುಪ್ಪದಹಳ್ಳಿ ಕೆರೆಗೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಬಾಗೀನ ಸಮರ್ಪಣೆ
ತುಪ್ಪದಹಳ್ಳಿ : ಏತನೀರಾವರಿ ಯೋಜನೆಯ ನೀರು ಹರಿದ ಪರಿಣಾಮ ತುಪ್ಪದಹಳ್ಳಿ ಕೆರೆ ಕೋಡಿ ದಾಟಿ ನೀರು ಹರಿಯುತ್ತಿದೆ. ತುಂಬಿದ ತುಪ್ಪದ ಹಳ್ಳಿ ಕೆರೆಯ ವೀಕ್ಷೀಸಲು ಸಂತೋಷದ ವ್ಯಕ್ತಪಡಿಸಿದ್ದ ಶ್ರೀ ಜಗದ್ಗುರುಗಳವರು ಕೆರೆ ತುಂಬಿದ ದಿನದಿಂದಲೂ ನಿಗದಿತ ಕಾರ್ಯ ಗೌರವದಿಂದ ಸಾಧ್ಯವಾಗಿರಲಿಲ್ಲ.ಇಂದು ಮಂಗಳವಾರ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತುಂಬಿದ ತುಪ್ಪದಹಳ್ಳಿ ಕೆರೆಗೆ ಬಾಗೀನ ಸಮರ್ಪಿಸಿದರು.
ಹಳ್ಳಿಗಳು ಸಂಸ್ಕೃತಿಯ ತೊಟ್ಟಿಲು, ಕೃಷಿ ಅಭಿವೃದ್ಧಿ ಮೆಟ್ಟಿಲು, ನೀರಾವರಿಯಿಂದ ಭೂಮಿ ಹಸಿರು, ಹಸಿರಿನಿಂದ ರೈತನ ಬಾಳಿಗೆ ಉಸಿರು ಎಂಬಂತೆ ಎಷ್ಟೇ ಆಧುನಿಕತೆ ಬಂದರೂ ಅಂತಿಮವಾಗಿ ಕೃಷಿ ಮತ್ತು ಗ್ರಾಮೀಣ ಜೀವನದ ಸೊಗಡಿನಲ್ಲಿ ಸಿಗುವ ನೈಜ ಉಲ್ಲಾಸ ಮತ್ತು ನೆಮ್ಮದಿ ಬೇರೆಲ್ಲೂ ಸಿಗಲಾರದು.
ಹಳೇ ಮೈಸೂರು ರಾಜ್ಯದ ಚಿತ್ರದುರ್ಗ ಜಿಲ್ಲೆಗೆ ಸೇರಿದ್ದ ಜಗಳೂರಿನ ನೀರಾವರಿ ಸಚಿವರಾಗಿದ್ದ ಇಮಾಂ ಸಾಹೇಬರು ಜೀನಗೀಹಳ್ಳ, ಗಡೀಮಾಕುಂಟೆ ಹಳ್ಳಗಳ ಜಲಮೂಲಗಳ ಮೂಲಕ ತುಪ್ಪದಹಳ್ಳಿ ಕೆರೆಯನ್ನು ನಿರ್ಮಿಸಿದ್ದರು. ಕೆರೆಯು ಹೆಮ್ಮನಬೇತೂರು, ಬಿಳಿಚೋಡು ಕುರುಡಿ, ತುಪ್ಪದಹಳ್ಳಿ ಭಾಗ ಒಳಗೊಂಡಂತೆ1200 ಎಕರೆಯಷ್ಟು ವಿಶಾಲವಾದ ವಿಸ್ತೀರ್ಣ ಹೊಂದಿದೆ. 18 ಅಡಿ ಎತ್ತರವಿರುವ ತುಪ್ಪದಹಳ್ಳಿ ಕೆರೆಯು 1974ರಲ್ಲಿ ಕೋಡಿ ಬಿದ್ದಿತ್ತು. 48 ವರ್ಷಗಳ ನಂತರ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಸಾಕಾರಗೊಂಡ ಏತನೀರಾವರಿ ಯೋಜನೆಯಿಂದ ಹರಿದು ನೀರು ಮತ್ತು ಭರಪೂರ ಮಳೆಯ ಪರಿಣಾಮ ಬೃಹತ್ ಕೆರೆ ತುಂಬಿ ಹರಿದಿದೆ.
ಆಧುನಿಕ ಭಗೀರಥರು, ಜಲಕ್ರಾಂತಿಯ ಜಲಋಷಿ ಅಭಿದಾನದ ಸರ್ವರ ಕಲ್ಯಾಣದ ಪೂಜ್ಯ ಶ್ರೇಷ್ಠರು, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಸಂಕಲ್ಪದಂತೆ ರಾಜ್ಯದ ವಿವಿಧ ಭಾಗಗಳಲ್ಲಿ 20 ಕ್ಕೂ ಅಧಿಕ ಏತ ನೀರಾವರಿ ಯೋಜನೆಗಳ ಅಡಿ 500 ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ದಶಕಗಳ ಕಾರ್ಯವು ಫಲಪ್ರದವಾದವಾಗಿ ಅನ್ನದಾತರ ಬಾಳು ಹಸನಾಗುತ್ತಿದೆ.
ಬಾಗೀನ ಸಮರ್ಪಿಸಿ ಆಶೀರ್ವಚನ. ದಯಪಾಲಿಸಿದ ಶ್ರೀ ಜಗದ್ಗುರುಗಳವರು: ತುಪ್ಪದಹಳ್ಳಿ ಕೆರೆ ಕೆರೆಯಲ್ಲ ಸಾಗರ. ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದು ಹರಿಯುತ್ತಿರುವ ದೃಶ್ಯ ಬಂಗಾರ ಬಿತ್ತಿ ಬೆಳೆಯ ಬೆಳೆಯುವಷ್ಟು ಸಂತಸ ತಂದಿದೆ ಎಂದು. ದೃಷ್ಟಾಂತದೊಂದಿಗೆ ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ., ಯಡಿಯೂರಪ್ಪ ಸೇರಿದಂತೆ ಮೂರು ಸರ್ಕಾರಗಳ ಸಹಕಾರ, ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ್ಬೊಮ್ಮಾಯಿಯ ಸಹಕಾರದಿಂದ ಭರಮಸಾಗರ ಹಾಗೂ ಜಗಳೂರು ಕ್ಷೇತ್ರದ ೫೭ ಕೆರೆಗಳ ಕೆರೆತುಂಬಿಸುವ ಯೋಜನೆಗಳು ಯಶಸ್ವಿಯಾಗಿವೆ. ಧರ್ಮದ ತಳಹದಿಯ ಮೇಲೆ ನಾವು ಕಾರ್ಯನಿರ್ವಹಿಸಿದ್ದೇವೆ. ನಾವು ಬಿಜೆಪಿ ,ಕಾಂಗ್ರೇಸ್, ಜೆಡಿಎಸ್ ಪಕ್ಷಗಳಿಗೆ ಅಂಟಿಕೊಂಡಿಲ್ಲ. ಕರ್ನಾಟಕ ಸರ್ಕಾರವೇ ಮುಖ್ಯವೆಂದು ಆಯಾ ಘಟ್ಟಕ್ಕೆ ತಕ್ಕಂತೆ ಮೂರು ಮುಖ್ಯಮಂತ್ರಿಗಳಿಂದ ಕೆಲಸ ತೆಗೆದುಕೊಂಡಿದ್ದು ಅಭಿವೃದ್ಧಿಗೆ ಸಹಕರಿಸಿದ ಮಾಜಿ ಮುಖ್ಯಮಂತ್ರಿಗಳಿಗೂ, ಹಾಲಿ ಮುಖ್ಯಂತ್ರಿಗಳಿಗೂ, ಮಾಜಿ ಸಚಿವರಾದ ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಜಿ.ಎಂ.ಸಿದ್ದೇಶ್ವರ್, ಕ್ಷೇತ್ರದ ಜೋಡೆತ್ತುಗಳಾದ ಶಾಸಕರಾದ ಎಸ್.ವಿ.ರಾಮಚಂದ್ರ ಮಾಜಿ ಶಾಸಕರಾದ ಎಚ್.ಪಿ.ರಾಜೇಶ್ ಅವರಿಗೂ ಸಚಿವರುಗಳಿಗೂ ರೈತರ ಪರವಾಗಿ ಅಭಿನಂದಿಸಿದರು.
ಬಾರ್ ಅಂಡ್ ರೆಸ್ಟೋರೆಂಟ್ಗೆ ಮಾರು ಹೋಗಬೇಡಿ:
ನಮ್ಮ ರೈತರು ಕೆರೆ ರಕ್ಷಣೆಯ ಪುಣ್ಯದ ಕೆಲಸಕ್ಕೆ ಕೈಜೋಡಿಸಬೇಕು. ಈಗಿನ ಯುವಕರು ಬಾರ್ ಅಂಡ್ ರೆಸ್ಟೋರೆಂಟ್ಗೆ ಹೋಗದೇ ತಮ್ಮ ಹೊಲದಲ್ಲಿ ಬೆಳೆದ ಎಳೇ ನೀರು, ಹಾಲು ಕುಡಿದು ಮೋಜು ಮಸ್ತಿ ಮಾಡಬೇಕು. ಈಗಿನ ಸಂಸ್ಕೃತಿ ತೆಗೆದು ಹಿಂದಿನ ಸಂಸ್ಕೃತಿ ಬೆಳೆಸಿ ಉಳಿಸಬೇಕು. ಫಲವತ್ತತೆಯ ಮಣ್ಣಿರುವ ತಾವು ಮಲೆನಾಡಿಗೆ ಸವಾಲೆಸೆದು ಉತ್ತಮ ಫಸಲು ಬೆಳೆದು ಲಾಭ ಪಡೆಯಬಹುದು. ಕೇವಲ ಅಡಿಕೆ ಬೆಳೆಗೆ ಮಾರುಹೋಗದೆ ಡ್ರ್ಯಾಗನ್ ಫ್ರೂಟ್ ನಂತಹ ವಿನೂತನ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಬರದ ಜಗಳೂರು ತಾಲ್ಲೂಕು ಕೆಲವೇ ವರ್ಷಗಳಲ್ಲಿ ಮಲೆನಾಡನ್ನು ಮೀರಿಸಲಿದೆ. ಈಗ ನೂರಾರು ಕಾರುಗಳು ಸ್ವಾಗತಕ್ಕೆ ಬಂದಿವೆ ಮುಂದಿನ ದಿನಗಳಲ್ಲಿ ಸಾವಿರಾರು ಕಾರುಗಳನ್ನು ರೈತರು ತರುವಂತಾಗಲಿ ಎಂದು ಆಶಿಸಿದರು.
ನರೇಂದ್ರ ಮೋದಿಯಿಂದ ಉದ್ಘಾಟನೆಯಾಗಲಿ:
ಹೊಗಳಿಕೆಗೆ ತೆಗಳಿಕೆಗೆ ನಾವು ಮಾರು ಹೋಗಲ್ಲ. ಸಿರಿಗೆರೆ ಗುರುಗಳ ಮೇಲಿನ ಶ್ರದ್ದೆ ಭಕ್ತಿಯಿಂದ ನೀರಾವರಿ ಯೋಜನೆ ಯಶಸ್ವಿಯಾಗಿದೆ. ಶಾಸಕ ಎಸ್.ವಿ.ರಾಮಚಂದ್ರರ ಆಸೆಯಂತೆ ಕೆರೆ ತುಂಬಿಸುವ ಯೋಜನೆಯನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಂದಲೇ ಉದ್ಘಾಟಿಸುವುದು ನಮ್ಮ ಅಭಿಲಾಷೆಯು ಆಗಿದೆ ತಾವು ಸಿದ್ದತೆಗೆ ಸನ್ನದ್ದರಾಗಿ ಎಂದು ಸಮ್ಮತಿ ನೀಡಿದರು.
ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿ, ಸಿರಿಗೆರೆ ಶ್ರೀಗಳ ಅವಿರತ ಪ್ರಯತ್ನ,ಹಾಗೂ ಮಾಜಿ ಮುಖ್ಯಮಂತ್ರಿಗಳ ಪಕ್ಷಾತೀತ ಸಹಕಾರದಿಂದ ಯೋಜನೆ ಸಕಾರಗೊಂಡು ಯಶಸ್ವಿಯಾಗಿ ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಅಲ್ಲದೆ ಭದ್ರಾಮೇಲ್ದಂಡೆ ಹಾಗೂ ೫೭ ಕೆರೆ ತುಂಬಿಸುವ ಯೋಜನೆಗಳಿಂದ ಬರದನಾಡು ಕೆಲವೇ ವರ್ಷಗಳಲ್ಲಿ ಹಸಿರುನಾಡಾಗಿ ಕಂಗೊಳಿಸಿ ಶ್ರೀಮಂತನಾಡಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಸಿರಿಗೆರೆ ಶ್ರೀಗಳು ವಿಧಾನಸಭಾ ಕ್ಷೇತ್ರದ ಪಾಲಿಗೆ ಕಲ್ಪವೃಕ್ಷದಂತಾಗಿದ್ದು. ಪರಮಪೂಜ್ಯರು ಬರದನಾಡು ಹಸಿರುನಾಡಾಗಲು ನಮ್ಮ ಪಾಲಿನ ದೇವ ಮಾನವರಾಗಿದ್ದಾರೆ. ಈ ಭಾಗದ ನೀರಾವರಿ ಹೊರಾಟ ಸಮಿತಿ ದಿವಂಗತ ಡಾ.ಮಂಜುನಾಥ್ ಗೌಡರು ನಮ್ಮೊಂದಿಗೆ ಇರಬೇಕಿತ್ತು ಎಂದು ಸ್ಮರಿಸಿದರು. ಬೇರೆ ತಾಲೂಕಿನಲ್ಲಿ ಹಸಿರು ನಾಡನ್ನು ಕಂಡು.ನನ್ನ ಕ್ಷೇತ್ರವನ್ನು ಸ್ಮರಿಸಿಕೊಂಡರೆ ಬೇಸರವಾಗುತ್ತಿತ್ತು.ಇದೀಗ ಕೆರೆ ಕೋಡಿ ಬಿದ್ದಿರುವುದು ನನ್ನನ್ನು ಮೂಕಪ್ರೇಕ್ಷಕನನ್ನಾಗಿಸಿದೆ ಎಂದು ಆನಂದಭಾಷ್ಪ ಸುರಿಸಿದರು.
ಊಹಪೋಹಗಳಿಗೆ ಕಿವಿಗೊಡಬೇಡಿ ಇದೇ ವರ್ಷದ ಸೆಪ್ಟೆಂಬರ್ ಮಾಹೆಯೊಳಗೆ ತಾಲೂಕಿನ ಎಲ್ಲಾ ಕೆರೆಗಳು ಭರ್ತಿಯಾಗಲಿವೆ.ಅವ್ಯವಹಾರಕ್ಕೆ ಅವಕಾಶ ಕಲ್ಪಿಸದೆ ಗುಣಮಟ್ಟದ ಕಾಮಗಾರಿಗೆ ಶ್ರೀಗಳು ಕಾಳಜಿವಹಿಸಿದ್ದಾರೆ ಕೆರೆಗಳು ಭರ್ತಿಯಾಗುವುದು ಖಚಿತ.ನಂತರ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಆಹ್ವಾನಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೆ ಪೈಪ್ ಲೈನ್ ಕಾಮಗಾರಿಗೆ ಅಗತ್ಯವಿರುವ ೩೦೦ ಪೈಪ್ ಗಳನ್ನು ತಿಂಗಳೊಳಗೆ ಪೂರೈಕೆ ಮಾಡಬೇಕು. ಇಲ್ಲವಾದರೆ ನಾನೇ ಮನೆಬಾಗಿಲ ಮುಂದೆ ಕುಳಿತುಕೊಳ್ಳುವೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ಬರದನಾಡಿನ ಭಗೀರಥರು ಸಿರಿಗೆರೆ ಶ್ರೀಗಳಾಗಿದ್ದು.ತರಳಬಾಳು ಹುಣ್ಣಿಮೆಯ ಕನಸಿನ ಅವಳಿ ಕೂಸುಗಳು ಜನಿಸಿದ ಫಲವಾಗಿ ಭರಮಮಸಾಗರ ಹಾಗೂ ತುಪ್ಪದಹಳ್ಳಿ ಕೆರೆಗಳಿಗೆ ನೀರು ಹರಿದುಬಂದಿವೆ ಎಂದರು.
ಕಲ್ಲುಮುಳ್ಳು ಲೆಕ್ಕಿಸದೆ ನಡೆದಾಡಿದ ಶ್ರೀಗಳು:
ಬಾಗೀನ ಅರ್ಪಿಸುವ ಮುನ್ನ 101 ಮಹಿಳೆಯರು ಕುಂಭ ಮತ್ತು ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ಶ್ರೀಗಳನ್ನು ಕೆರೆಕೋಡಿ ಬಳಿಗೆ ಸಂಭ್ರಮದಿಂದ ಸ್ವಾಗತಿಸಿದರು. ನಂತರ ಶ್ರೀಗಳು ಕಿರಿದಾದ ಕೋಡಿಯ ಮೇಲೆ ಉತ್ಸಾಹದ ನಡಿಗೆ, ಕೆರೆ ಅಂಚಿನಲ್ಲಿ ಕಲ್ಲುಮುಳ್ಳುಲೆಕ್ಕಿಸದೆ ನಡೆದಾಡಿ ಹರಿಯುವ ನೀರನ್ನು ವೀಕ್ಷಿಸಿದ್ದು ಯುವಕರನ್ನು ನಾಚಿಸುವಂತಿತ್ತು. ಶ್ರೀಗಳ ನಡಿಗೆ ಭಕ್ತರಮನದಲ್ಲಿ ಹರ್ಷಮೂಡಿಸಿತು. ತುಪ್ಪದಹಳ್ಳಿ, ಬಿಳಿಚೊಡು, ಕುರುಡಿ, ಹೆಮ್ಮನಬೇತೂರು, ಅಸಗೋಡು, ಪಲ್ಲಾಗಟ್ಟೆ ಸೇರಿದಂತೆ ಸುತ್ತಮುತ್ತಲಿನ ಅಪಾರ ಸಂಖ್ಯೆಯ ರೈತರು ಭಾಗವಹಿಸಿದ್ದರು.
ಸುಧೀರ್ಘ ವರ್ಷಗಳ ನಂತರ ಕೆಲವೇ ದಿನಗಳಲ್ಲಿ ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದು ನೀರು ಹರಿಯುವ ದೃಶ್ಯವನ್ನು ಇಲ್ಲಿನ ರೈತರು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಈ ಭಾಗದ ರೈತರ ಬಾಳಿನ ಸಂಜೀವಿನಿಯಾಗಿ, ಕೆರೆಗೆ ಬಾಗಿನ ಅರ್ಪಿಸಿದ ಬರದ ನಾಡಿನ ಭಗೀರಥ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಸಾವಿರಾರು ರೈತರು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದ್ದು ರೈತರ ಕಂಗಳಲ್ಲಿ ಸಾರ್ಥಕ ಭಾವದ ಜಯ ಘೋಷದೊಂದಿಗೆ ದ್ಯೋತಕದಂತಿತ್ತು.
ಈ ಸಂದರ್ಭದಲ್ಲಿ ಶಾಸಕರ ಪತ್ನಿಇಂದಿರಾ ರಾಮಚಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲರೆಡ್ಡಿ, ನಿವೃತ್ತ ಉಪನ್ಯಾಸಕ ಸುಭಾಷ್ ಚಂದ್ರ ಬೋಸ್, ಕೆ.ಪಿ.ಪಾಲಯ್ಯ, ಚಿಕ್ಕಮ್ಮನಹಟ್ಟಿ ಬಿ.ದೆವೇಂದ್ರಪ್ಪ, ಮಾಜಿ ಜಿ.ಪಂ ಸದಸ್ಯ ಬಸವಂತಪ್ಪ, ಚಂದ್ರಣ್ಣ, ನೀರಾವರಿ ನಿಗಮದ ಇಂಜಿನಿಯರ್ಗಳಾದ ಚಂದ್ರಹಾಸ್, ಮಲ್ಲಪ್ಪ, ಶಶಿಧರ್ ಪಾಟೀಲ್, ಮಂಜುಳಾ ಮಂಜುನಾಥ್ ಗೌಡ, ಕಾಡಂಜ್ಜಿರ ಕೆ.ಬಿ.ಶಿವಕುಮಾರ್ ,ಚಂದ್ರನಾಯ್ಕ, ವಕೀಲರಾದ ಬಸವರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.