ವಚನ ಸಾಹಿತ್ಯದಲ್ಲಿ ಜಗತ್ತಿನ ಸಮಸ್ಯೆಗಳಿಗೆ ಪರಿಹಾರವಿದೆ
ಶಿವಮೊಗ್ಗ : 12ನೆಯ ಶತಮಾನದ ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ಜಗತ್ತಿನ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಇಂದಿನ ಸಂವಿಧಾನದ ಪರಿಕಲ್ಪನೆಯಾದ ಸಾಮಾಜಿಕ ನ್ಯಾಯವು ವಚನಕಾರರ ಆಶಯವಾಗಿತ್ತು ಎಂದು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ.ರಂಗನಾಥ್ ಅಭಿಪ್ರಾಯಪಟ್ಟರು.
ಇಂದು ಶಿವಮೊಗ್ಗ ಹೊರವಲಯ ತೇವರ ಚಟ್ನಹಳ್ಳಿಯ ಗುರುಭವನದ ಶ್ರೀ ತರಳಬಾಳು ಶಾಲಾ ಸಮುಚ್ಚಯದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಅಣ್ಣನ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪ್ರೊ. ಎಸ್.ಬಿ.ರಂಗನಾಥ್ ಮಾತನಾಡಿದರು.
ವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಡಾ. ಬಸವರಾಜಪ್ಪ, ಇಂದಿನ ಹೊಸಗನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಮೂಲ ಪ್ರೇರಣೆ ವಚನ ಸಾಹಿತ್ಯವಾಗಿದೆ. ದಲಿತ, ಬಂಡಾಯ, ಸ್ತ್ರೀ ಸಂವೇದನೆಗಳನ್ನು ಅಂದಿನ ವಚನ ಸಾಹಿತ್ಯದಲ್ಲಿ ಕಾಣಬಹುದು.
ಜ್ಞಾನ, ವೈರಾಗ್ಯ, ಭಕ್ತಿ ವಚನಕಾರರ ಲೋಕದೃಷ್ಟಿಯಾಗಿತ್ತು. ಅನುಭವ ಮಂಟಪವು ಇಂದಿನ ಸಂಸತ್ತಿನ ಪ್ರತಿರೂಪವಾಗಿದೆ. ನಡೆ ನುಡಿಯ ಅಭೇದಿಂದ ಕಾಯಕವು ಕೈಲಾಸವಾಗಿ ಪರಿಣಮಿಸಿತು. ಸಮಾನತೆ ತತ್ವವನ್ನು ಸಾರಿದ ಶರಣರು ಸಾಮಾಜಿಕ, ಧಾರ್ಮಿಕ, ಸಾಹಿತ್ಯದ ಜ್ಞಾನದ ವಲಯವನ್ನು ವಿಸ್ತರಿಸಿದರು ಎಂದರು.
ತರಳಬಾಳು ಜಗದ್ಗುರು ಶ್ರೀಗಳ ವಚನ ಪ್ರಚಾರ ಕಾರ್ಯದ ಬಗ್ಗೆ ಅಧ್ಯಾಪಕ ನಾಗರಾಜ ಸಿರಿಗೆರೆ ಮಾತನಾಡಿದರು. ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಹಂಜಿ ರುದ್ರಪ್ಪ,ಸಂಘದ ಕಾರ್ಯದರ್ಶಿ ಟಿ ಜಿ ಜಗದೀಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಜಗತ್ತಿಗೆ ವಚನ ಸಾಹಿತ್ಯ ಪ್ರಚಾರವಾಗಬೇಕೆಂಬ ಕನಸು ಕಂಡಿದ್ದರು. ಅದು ಈಗ ನನಸಾಗಿದೆ. ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿ ಕ್ಷಣಾರ್ಧದಲ್ಲಿಯೇ ಬೆರಳ ತುದಿಯಲ್ಲಿ ವಚನ ಸಾಹಿತ್ಯ ದೊರೆಯುವಂತಾಗಿದೆ ಎಂದು ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ಧಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಟಿ.ಇ.ರಮೇಶ್, ವಿದ್ಯಾಸಂಸ್ಥೆಯ ವಲಯಾಧಿಕಾರಿ ಕೆ.ಇ.ಬಸವರಾಜಪ್ಪ ಉಪಸ್ಥಿತರಿದ್ದರು.
ಶಿಕ್ಷಕ ಎಂ ರಂಗಣ್ಣ ಶಿವಶರಣರ ವಚನ ಸಂಪುಟ ಜಾಲತಾಣದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಪ್ರಾರಂಭದಲ್ಲಿ ಕು.ಕೀರ್ತನ ಮತ್ತು ಸಂಗಡಿಗರು ವಚನಗೀತೆ ಹಾಡಿದರು. ಮುಖ್ಯೋಪಾಧ್ಯಾಯ ಪ್ರದೀಪ್ ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕಿ ವೀಣಾ ವಂದನೆ ಸಲ್ಲಿಸಿದರು. ಶಿಕ್ಷಕಿ ವಿನುತ ಕಾರ್ಯಕ್ರಮ ನಿರೂಪಿಸಿದರು.