ಶ್ರೀ ತರಳಬಾಳು ಜಗದ್ಗುರುಗಳವರ ಆಶಯದಂತೆ ಮೈದುಂಬಿ ಹರಿದ ಸಾಸ್ವೇಹಳ್ಳಿ ಹಳ್ಳ.
ಲೇಸೆ ಕೇಳಿಸಲಿ ಕಿವಿಗೆ,
ನಾಲಗೆಗೆ ಲೇಸೆ ನುಡಿದು ಬರಲಿ,
ಲೇಸೆ ಕಾಣಿಸಲಿ ಕಣ್ಗೆ,
ಜಗದೊಳಗೆ ಲೇಸೆ ಹಬ್ಬುತಿರಲಿ.
ಲೇಸೆ ಕೈಗಳಿಂದಾಗುತಿರಲಿ,
ತಾ ಬರಲಿ ಲೇಸೆ ನಡೆದು.
ಲೇಸನುಂಡು, ಲೇಸುಸಿರಿ ಇಲ್ಲಿರಲಿ.
ಎಂಬ ಕವಿವಾಣಿಯು ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಹಲವು ದಶಕಗಳ ಸಮಾಜಮುಖಿ ಕಾರ್ಯಗಳಲ್ಲಿ ವ್ಯಕ್ತವಾಗುತ್ತಿದೆ.
ಪ್ರೊ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು 3ನೇ ಸ್ಥಾನ ಪಡದಿದೆ. ಬಿಸಿಲು ನಾಡಿನ ಹಣೆಪಟ್ಟಿಯನ್ನು ಹೊತ್ತ ಈ ತಾಲ್ಲೂಕಿನ ಅನ್ನದಾತರ ಸಂಕಷ್ಟಗಳಿಗೆ ಸಂಜೀವಿನಿಯಾದ ಶ್ರೀ ತರಳಬಾಳು ಜಗದ್ಗುರುಗಳವರು ಈ ಭಾಗದ ಹಲವು ಕೆರೆಗಳನ್ನು ಜಗಳೂರು ಏತನೀರಾವರಿ ಯೋಜನೆಯಡಿ ಸೇರಿಸಿದ ಫಲವಾಗಿ ಸೇರ್ಪಡೆಯಾದ ಕೆರಗಳಲ್ಲಿ ಕೆಲವೇ ದಿನಗಳಲ್ಲಿ ಗಂಗಾವತರಣವಾಗಲು ಕಾಲ ಸಮೀಪಿಸಿದೆ.
ಹರಪನಹಳ್ಳಿ ತಾಲ್ಲೂಕಿನ ಸಾಸ್ವಿಹಳ್ಳಿಯ ಬೃಹತ್ ಪ್ರಮಾಣದ ಹಳ್ಳವು ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲ ವೃದ್ಧಿಗೆ, ಜನಜಾನುವಾರುಗಳಿಗೆ ಆಸರೆಯಾಗಿದೆ. ಈ ಹಳ್ಳಕ್ಕೆ ಭರಮಸಾಗರ, ತುಪ್ಪದಹಳ್ಳಿ ಕೆರೆಗಳ ಜೀವಸೆಲೆ ಯಿಂದ ನೀರು ಹರಿದುಬರುತ್ತದೆ. ಈ ಹಳ್ಳವು ಹರಿಯುತ್ತಾ ಸುಮಾರು 30 ಕ್ಕೂ ಹೆಚ್ಚು ಚೆಕ್ ಡ್ಯಾಂ ಗಳು ತುಂಬಲು ಕಾರಣೀಕೃತವಾಗಿ ಅಂತಿಮವಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯವನ್ನು ಸೇರಲಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಬಂದ ಹಳ್ಳ ಹರಿದು ನಂತರ ನಿಂತಿತ್ತು. ಆದರೆ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಡನೆ ಚರ್ಚಿಸಿ ಏತನೀರಾವರಿ ಯೋಜನೆಯಡಿ ಹರಿಯುವ ನೀರನ್ನು ತುಪ್ಪದ ಹಳ್ಳಿ ಕೆರೆಯಿಂದ ಹರಿಸಿದ್ದರಿಂದ ತುಪ್ಪದಹಳ್ಳಿ ಏತ ನೀರಾವರಿಯ ನೀರು ಕಳೆದ ನಾಲ್ಕು ದಿನಗಳಿಂದ ಭರಪೂರವಾಗಿ ಹರಿದ ಪರಿಣಾಮ ಬತ್ತಿ ಬರಡಾಗಿದ್ದ ಹಳ್ಳವು ಮೈದುಂಬಿಕೊಂಡು ಸೋಮವಾರ ಸಂಜೆ ಹರಿಯುತ್ತಿದ್ದು ಈ ಭಾಗದ ಅನ್ನದಾತರು ಧನ್ಯತೆಯಿಂದ ಶ್ರೀ ಜಗದ್ಗುರುಗಳವರನ್ನು ನೆನೆಯುತ್ತಿದ್ದಾರೆ.