ಹಸಿರು ಶಾಲಿನ ಮುಳ್ಳಿನ ಹಾದಿಯ ಕಥನ...

  •  
  •  
  •  
  •  
  •    Views  

ವರೊಬ್ಬರು ಸರಕಾರಿ ಶಾಲೆಯ ಮೇಷ್ಟ್ರು. ತುಂಬಾ ಶಿಸ್ತಿನ ಮತ್ತು ಸ್ವಾಭಿಮಾನದ ಮನುಷ್ಯ. ಯಾರೊಬ್ಬರ ಮುಲಾಜಿಗೂ ಈಡಾಗದೆ ಸತ್ಯದ ಪಕ್ಷಪಾತಿಯಾಗಿದ್ದರು. ಊರ ಜನರಿಗೆ ಅವರ ಬಗ್ಗೆ ಅಪಾರ ಗೌರವವಿತ್ತು. ಶಿಕ್ಷಕ ವೃತ್ತಿಯ ಜೊತೆಗೆ ಅವರು ವ್ಯವಸಾಯವನ್ನೂ ಮಾಡಿಕೊಂಡು ಬಂದಿದ್ದರು. ಹೊಲದಲ್ಲಿ ಬೆಳೆದ ಬೆಳೆ ಅವರ ಕುಟುಂಬ ನಿರ್ವಹಣೆ ಮತ್ತು ಕೆಲಸಕ್ಕೆ ಬರುತ್ತಿದ್ದ ಕೂಲಿಯಾಳುಗಳಿಗೆ ಸರಿಹೋಗುತ್ತಿತ್ತು. ಮಳೆಗಾಲದ ಒಂದು ದಿನ. ಎಂದಿನಂತೆ ಅಂಗಳದಲ್ಲಿ ಏನೋ ಕೆಲಸ ಮಾಡುತ್ತಾ ನಿಂತಿದ್ದರು. ಇದಕ್ಕಿದ್ದಂತೆಯೇ ತಹಸೀಲ್ದಾರರು ತಮ್ಮ ಸಿಬ್ಬಂದಿಯೊಂದಿಗೆ ಠಾಕುಠೀಕಾಗಿ ಅವರ ಮನೆಯ ಅಂಗಳಕ್ಕೆ ನುಗ್ಗಿದರು. “ಏನ್ರೀ, ಕೊಡಬೇಕಾದ ಲೇವಿ ಪೂರಾ ಕೊಟ್ಟಿಲ್ಲ, ಅರ್ಧ ಮಾತ್ರ ಕೊಟ್ಟಿದ್ದೀರಿ” ಎಂದು ಜೋರು ಮಾಡಿದರು. “ಹೌದ್ರಿ ಸಾಹೇಬ್ರೆ. ಅರ್ಧ ಲೇವಿ ಬಾಕಿ ಉಳ್ಸಿಕೊಂಡಿರೋದು ನಿಜ. ಇದು ಸುಗ್ಗಿ ಕಾಲ ಅಲ್ಲವಲ್ಲ. ಮಳೆಗಾಲ. ಈಗ ಇಟ್ಕೊಂಡಿರೋದು ಮನೆತನಕ್ಕೇ ಸಾಕಾಗಲ್ಲ. ಮುಂದಿನ ಸುಗ್ಗಿಗೆ ಈಗಿಂದೂ ಸೇರ್ಸಿ ಕೊಡ್ತೀನಿ, ಈಗ ಆಗಲ್ಲ ಎಂದು ಮನವಿ ಮಾಡಿಕೊಂಡರು. 

ಸಾಮಾನ್ಯವಾಗಿ ಲೇವಿಯನ್ನು ಸುಗ್ಗಿ ದಿನಗಳಲ್ಲಿ ಮಾತ್ರ ರೈತರಿಂದ ಸಂಗ್ರಹಿಸಬೇಕು ಎಂಬ ನಿಯಮವಿತ್ತು. ಮಳೆಗಾಲದಲ್ಲಿ ರೈತರ ಮೇಲೆ ದುಂಡಾವರ್ತನೆ ಮಾಡುವಂತಿರಲಿಲ್ಲ. ಮೇಷ್ಟ್ರಿಗೆ ಇದ್ದ ಈ ಕಾನೂನು ತಿಳುವಳಿಕೆ ತಹಸೀಲ್ದಾರರ ಅಹಮ್ಮನ್ನು ಕೆಣಕಿತ್ತು. “ಓಹ್ ಹೌದಾ, ಹಾಗಾದರೆ ಬಾಕಿ ಕಂದಾಯ ಯಾಕ್ ಕಟ್ಟಿಲ್ಲ, ಅದನ್ನೂ ಕೇಳಬಾರ್ದಾ?” ಎಂದು ತಹಸೀಲ್ದಾರರು ತಮ್ಮ ಮಾತನ್ನು ಲೇವಿಯಿಂದ ಕಂದಾಯದ ಕಡೆಗೆ ತಿರುಗಿಸಿದರು. “ಇಲ್ಲ ಸಾಹೇಬ್ರೆ. ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ. ನಾನು ಯಾವ ಕಂದಾಯವನ್ನೂ ಬಾಕಿ ಉಳಿಸ್ಕೊಂಡಿಲ್ಲ” ಎಂದು ಮೇಷ್ಟ್ರು ತಮ್ಮಲ್ಲಿದ್ದ ಹಳೆಯ ಕಂದಾಯದ ರಸೀದಿಗಳೆಲ್ಲವನ್ನೂ ತೋರಿಸಿದರು. ಇದರಿಂದ ಅವಮಾನಿತನಾದ ತಹಸೀಲ್ದಾರ್ ತಾನು ಕರೆತಂದಿದ್ದ ಹಮಾಲಿಗಳತ್ತ ತಿರುಗಿ “ಏಯ್, ಏನ್ ನೋಡ್ತೀರೋ, ಪಳತದ ಬೀಗ ಒಡೆದು ಚೀಲಗಳಿಗೆ ಭತ್ತ ತುಂಬಿಕೊಳ್ರೋ” ಎಂದು ಗದರಿಸಿದ. ಪಳತದತ್ತ ಕಾಲಿಡುತ್ತಿದ್ದ ಹಮಾಲಿಗಳ ಮುಂದೆ ಮೇಷ್ಟ್ರು ತಮ್ಮ ಎರಡೂ ತೋಳುಗಳನ್ನು ಅಗಲಿಸಿ ಅಡ್ಡಗಟ್ಟಿ ನಿಂತು “ಬೇಡಿ ಸಾಹೇಬ್ರೆ, ಮನೆ ಊಟಕ್ಕೆ ಅಂತ ಇಟ್ಟುಕೊಂಡಿರೋ ದವಸ ಅದು. ಅದನ್ನೂ ನೀವು ತಗೊಂಡ್ ಹೋದ್ರೆ ನಾಳೆ ಮಕ್ಳು ಮರಿ ಉಪವಾಸ ಸಾಯಬೇಕಾಗುತ್ತೆ. ಮುಂದಿನ ಸಲ, ತಪ್ಪಿಸ್ದಂಗೆ ಈ ಬಾಕಿನೂ ಸೇರ್ಸಿ ಕೊಡ್ತೀನಿ” ಎಂದು ಅಂಗಲಾಚಿ ಬೇಡಿಕೊಂಡರು. ತಹಸೀಲ್ದಾರ್ ಕ್ಯಾರೆ ಎನ್ನದೆ ಹಮಾಲಿಗಳತ್ತ ಕೆಂಗಣ್ಣು ಹಾಯಿಸಿ “ಏಯ್, ಏನ್ ಮುಖ ನೋಡ್ತಾ ನಿಂತಿದ್ದೀರೋ, ನಿಮ್ಮನ್ನ ಕರಕೊಂಡು ಬಂದಿರೋದ್ ಯಾತಕ್ಕೆ? ಅವನ್ನ ಪಕ್ಕಕ್ಕೆ ಎಳೆದು ಬಿಸಾಕಿ, ಪಳತದ ಬೀಗ ಒಡೆದು ಭತ್ತ ತುಂಬಿಕೊಳ್ರೋ” ಎಂದು ಕಟ್ಟಪ್ಪಣೆ ಮಾಡಿದ. ಒಬ್ಬ ಹಮಾಲಿಯು ಮೇಷ್ಟ್ರ ತೋಳಿಗೆ ಕೈ ಹಾಕಿ ಎಳೆದು ಬಿಸಾಡಿದ. ಮೇಷ್ಟ್ರು ಅಷ್ಟು ದೂರಕ್ಕೆ ಹೋಗಿ ದಢಾರನೆ ಬಿದ್ದರು. ಊರ ಜನರಿಂದ ಅಷ್ಟೊಂದು ಮರ್ಯಾದೆ ಪಡೆದಿದ್ದ ಮೇಷ್ಟ್ರು ಒಬ್ಬ ಸರಕಾರಿ ಅಧಿಕಾರಿಯ ದರ್ಪ-ದೌರ್ಜನ್ಯಗಳಿಂದ ಅವಮಾನಿತರಾಗಿ ನೆಲಕ್ಕೆ ಉರುಳಿ ಬಿದ್ದಿದ್ದರು. ತಂದೆಗಾದ ಅವಮಾನವನ್ನು ನೋಡಿ 14 ವರ್ಷದ ಅವರ ಹಿರಿಯ ಮಗನ ರಕ್ತ ಕುದಿಯುತ್ತಿತ್ತು. ಆದರೆ ಏನೂ ಮಾಡುವಂತಿರಲಿಲ್ಲ. ಮೂಕ ಪ್ರೇಕ್ಷಕನಾಗಿ ನಿಂತಿದ್ದ. ತಹಸೀಲ್ದಾರ್ ಆದೇಶಿಸಿದಂತೆ ಹಮಾಲಿಗಳು ಬಲವಾದ ಕಲ್ಲೊಂದನ್ನು ತಂದು ಪಳತಕ್ಕೆ ಹಾಕಿದ್ದ ಬೀಗವನ್ನು ಒಡೆದು, ದವಸ ಧಾನ್ಯಗಳನ್ನು ತುಂಬಿ ಗಾಡಿಗೆ ಹೇರಿಕೊಂಡು ಹೋದರು. 

ಈ ಮನ ಮಿಡಿಯುವ ಘಟನೆ ಲೇಖಕರಾದ ಗಿರೀಶ್ ತಾಳೀಕಟ್ಟೆ ಮತ್ತು ಕೆ.ಎಲ್.ಅಶೋಕ್ ನಿರೂಪಿಸಿದ “ಹಸಿರು ಹಾದಿಯ ಕಥನ” (ಪ್ರಕಾಶಕರು: ಗೌರಿ ಮೀಡಿಯಾ ಟ್ರಸ್ಟ್, ಬೆಂಗಳೂರು) ಪುಸ್ತಕದಲ್ಲಿ ಬರುವ “ಬಾಲ್ಯದ ಆ ಘಟನೆ...” ಎಂಬ ಮೊದಲ ಅಧ್ಯಾಯದ ಪರಿಷ್ಕೃತ ನಿರೂಪಣೆ. ಇದು ಬ್ರಿಟಿಷರ ಆಳ್ವಿಕೆಯಲ್ಲಿ ನಡೆದ ದೌರ್ಜನ್ಯ ಅಲ್ಲ. ಭಾರತ ಸ್ವತಂತ್ರಗೊಂಡ ಆರಂಭದ ವರ್ಷಗಳಲ್ಲಿ ಪ್ರಜಾಪ್ರಭುತ್ವದ ಎರಡನೆಯ ಅಂಗವಾದ ಕಾರ್ಯಾಂಗದ ಅಧಿಕಾರಶಾಹಿಯಿಂದ ಪ್ರಜ್ಞಾವಂತ ಪ್ರಜೆಯೊಬ್ಬನ ಮೇಲೆ ನಡೆದ ದೌರ್ಜನ್ಯ. ಹೀಗೆ ಅವಮಾನ ಮತ್ತು ದೌರ್ಜನ್ಯಕ್ಕೆ ಒಳಗಾದ ಆ ರೈತ ಭದ್ರಾವತಿ ತಾಲ್ಲೂಕು ಹನುಮಂತಾಪುರದ ಬಡ ಸ್ಕೂಲ್ ಮೇಷ್ಟ್ರು ಎ.ರುದ್ರಪ್ಪನವರು. ಅವರ ಮಗನೇ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಚುಕ್ಕಾಣಿ ಹಿಡಿದಿರುವ ಹೆಚ್.ಆರ್.ಬಸವರಾಜಪ್ಪ. ಎಳವೆಯಲ್ಲಿ ತನ್ನ ತಂದೆಗೆ ಆದ ಅವಮಾನ ಮತ್ತು ದೌರ್ಜನ್ಯವನ್ನು ನೋಡಿ ಅಧಿಕಾರ ಶಾಹಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತೀಕಾರ ಭಾವನೆ ಅವರ ಮನಸ್ಸಿನಲ್ಲಿ ಮೊಳಕೆಯೊಡೆಯಿತು. ಮುಂದೊಂದು ದಿನ(1982), ಭ್ರಷ್ಟತನದಿಂದ ಸಂಪಾದನೆ ಮಾಡಿದ ತಹಸೀಲ್ದಾರರ ಮನೆಗಳನ್ನು ಜಪ್ತಿ ಮಾಡುವ ಸಾಹಸ ಕಾರ್ಯವನ್ನು 30 ವರ್ಷದ ತರುಣ ಬಸವರಾಜಪ್ಪ ಮಾಡಿದ್ದು ಮೈನವಿರೇಳಿಸುವ ಅನೂಹ್ಯ ಇತಿಹಾಸ! 

ಇತಿಹಾಸ ಎಂದರೆ  “ಹೀಗೆಯೇ ಇತ್ತು” ಎಂದರ್ಥ. ಇತಿಹಾಸವನ್ನು ಸೃಷ್ಟಿ ಮಾಡಿದವರಿಗೆ ಸ್ವತಃ ಇತಿಹಾಸವನ್ನು ಬರೆಯಲು ಪುರುಸೊತ್ತು ಇರುವುದಿಲ್ಲ. ಕಾಲಾನಂತರ ಬೇರೆಯವರು ಅವರನ್ನು ಕುರಿತು ದಾಖಲೆಗಳ ಆಧಾರದ ಮೇಲೆ ಒಬ್ಬೊಬ್ಬರು ಒಂದೊಂದು ರೀತಿ ಬರೆಯುತ್ತಾರೆ. ಆದರೆ  “ಹಸಿರು ಹಾದಿಯ ಕಥನ” ಎನ್ನುವ  ಹೆಚ್.ಆರ್.ಬಸವರಾಜಪ್ಪನವರ ಜೀವನಾಧಾರಿತ ಪುಸ್ತಕ ಅವರೇ ಹೇಳಿ ಬರೆಸಿದ್ದು. ದಿನ ನಿತ್ಯ ತಮ್ಮ ಡೈರಿಯಲ್ಲಿ ಪ್ರಮುಖ ಘಟನೆಗಳನ್ನು ದಾಖಲಿಸುವ ಅಭ್ಯಾಸವಿಟ್ಟುಕೊಂಡಿದ್ದ ಅವರು ಆ ಟಿಪ್ಪಣಿಗಳ ಆಧಾರದ ಮೇಲೆ ನಿರೂಪಕರಿಗೆ ಹೇಳಿ ಬರೆಸಲು ಸಾಧ್ಯವಾಗಿದ್ದು ಕೊರೊನಾದಿಂದಾದ “ಗೃಹಬಂಧನ”ದ ಕಾಲದಲ್ಲಿ. ಕಳೆದ ಐದು ದಶಕಗಳಿಂದ ನಡೆಸುತ್ತಾ ಬಂದ ಅವರ ರೈತಪರ ಕಾಳಜಿಯ ಪ್ರಾಮಾಣಿಕ ಹೋರಾಟಕ್ಕೆ ಎರಡು ವರ್ಷಗಳ ಕಾಲ ಮನೆ ಬಿಟ್ಟು ಹೊರಗೆ ಹೋಗದಂತೆ “ಕದನ ವಿರಾಮ” ತಂದ ಕೊರೊನಾ ರೈತ ಸಂಘದ ನಿಜವಾದ ಇತಿಹಾಸವನ್ನು ಅವರಿಂದ ದಾಖಲಿಸಲು ನೆರವಾಯಿತು. 

ಅವರ ಪುಸ್ತಕ ಕಳೆದ ವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಮ್ಮಿಂದ ಲೋಕಾರ್ಪಣೆಗೊಂಡಿತು. ಆ ಸಮಾರಂಭಕ್ಕೆಂದು ದಾರಿಯುದ್ದಕ್ಕೂ ಓದುತ್ತಾ ಪ್ರಯಾಣಿಸಿದಾಗ ಈ ಪುಸ್ತಕಕ್ಕೆ “ಹಸಿರು ಹಾದಿಯ ಕಥನ” ಎನ್ನುವ ಬದಲು “ಹಸಿರು ಶಾಲಿನ ಮುಳ್ಳಿನ ಹಾದಿಯ ಕಥನ” ಎಂಬ ಹೆಸರಿಟ್ಟಿದ್ದರೆ ಚೆನ್ನಾಗಿತ್ತು ಎನಿಸಿತು. “ಇದನ್ನು ಬಸವರಾಜಪ್ಪನವರ ಆತ್ಮಕಥೆ ಎನ್ನುವುದಕ್ಕಿಂತ ರಾಜ್ಯ ರೈತ ಹೋರಾಟದ ಸತ್ಯಕಥೆ" ಎನ್ನುವುದು ಸೂಕ್ತ. ಈ ಕೃತಿಯಲ್ಲಿ ಅವರ ಅಂತರಂಗಕ್ಕಿಂತ ಹೆಚ್ಚಾಗಿ ಇರುವುದು ಅವರು ಕಂಡ ಮತ್ತು ಅನುಭವಿಸಿದ ಬಹಿರಂಗ. ಲೇಖಕರ ಬದುಕಿನ ವಿವರಣೆಗಿಂತ ಹೆಚ್ಚಾಗಿ ಕರ್ನಾಟಕದ ಕಳೆದ ಐದು ದಶಕಗಳ ರೈತ ಚಳುವಳಿಯ ಏಳು-ಬೀಳುಗಳ ನಿರೂಪಣೆ ಇಲ್ಲಿದೆ” ಎನ್ನುತ್ತಾರೆ ಇದಕ್ಕೆ ಮುನ್ನುಡಿ ಬರೆದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನದಾಸ್ ರವರು. 

ಅಪ್ಪಟ ಗಾಂಧೀವಾದಿ ಹೆಸ್.ಎಸ್.ರುದ್ರಪ್ಪನವರಿಂದ ರೂಪುಗೊಂಡ ರೈತ ಸಂಘದ ಹುಟ್ಟಿನಿಂದ ಹಿಡಿದು ಅದರ ಬೆಳವಣಿಗೆ ಮತ್ತು ವಿಘಟನೆಯ ಇಳಿಜಾರಿನವರೆಗೆ ನಡೆದ ಎಲ್ಲ ಪ್ರಮುಖ ಘಟನಾವಳಿಗಳನ್ನು ಬಸವರಾಜಪ್ಪನವರು ಪರಿಪೂರ್ಣವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. “ಕರ್ನಾಟಕ ರಾಜ್ಯ ರೈತ ಸಂಘ ಎಂಬ ಅಧ್ಯಾಯವೊಂದು ನನ್ನ ಜೀವನದ ಪುಟದಲ್ಲಿ ಕಾಣಿಸಿಕೊಳ್ಳದೇ ಹೋಗಿದ್ದರೆ ನನ್ನ ಇಡೀ ಬದುಕು ಖಾಲಿ ಪುಟದಂತಿರುತ್ತಿತ್ತು. ಎಲ್ಲ ಸಾಮಾನ್ಯರಂತೆ ಸಾಮಾನ್ಯವಾಗಲಿದ್ದ ನನ್ನ ಜೀವನವನ್ನು ವಿಶೇಷಗೊಳಿಸಿದ್ದೆ ರೈತ ಸಂಘ. ಎಲ್ಲಾ ರೈತರಂತೆ ನಾನೂ ಒಬ್ಬ ರೈತನಾಗಿ ಹೊಲ, ಮನೆ, ತೋಟ, ಮಕ್ಕಳು ಅಂತ ಕಳೆದುಹೋಗಿರುತ್ತಿದ್ದೆ. ಅಂತಹ ಸಹಜ ಬದುಕಿನಿಂದ ನನ್ನನ್ನು ಎತ್ತರಿಸಿ ನಿಲ್ಲಿಸಿದ್ದು ನನ್ನ ರೈತಸಂಘ, ನನ್ನ ನಾಯಕರುಗಳು, ನನ್ನ ಹೋರಾಟದ ಒಡನಾಡಿಗಳು” ಎಂದು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಪ್ರತಿಯೊಬ್ಬ ಹೋರಾಟಗಾರನಿಗೂ ತನ್ನದೇ ಆದ ಕೌಟುಂಬಿಕ ಜೀವನ ನಿರ್ವಹಣೆಯ ಹೊಣೆಗಾರಿಕೆ ಇರುತ್ತದೆ. ಆದರೆ ಅವನಿಗೆ ಅತ್ತ ಗಮನ ಹರಿಸಲು ಆಗುವುದಿಲ್ಲ. ಅಂಥವರ ಜೀವನವನ್ನು ಒಳಹೊಕ್ಕು ನೋಡಿಯೇ ರೂಪುಗೊಂಡ ಗಾದೆ ಮಾತು: “ಊರಿಗೆ ಉಪಕಾರಿ ಮನೆಗೆ ಮಾರಿ”. ಹೋರಾಟಗಾರನಿಗೆ ಸಾರ್ವಜನಿಕ ಬದುಕು ಪ್ರಧಾನವಾಗಿ ವೈಯಕ್ತಿಕ ಬದುಕು ಗೌಣವಾಗುತ್ತದೆ. ತ್ಯಾಗ/ಬಲಿದಾನ ಎನಿಸಿಕೊಳ್ಳುವುದು ಆಗಲೇ. ರೈತ ಪರ ಹೋರಾಟದಲ್ಲಿ ಸಮಾಜದ ಒಳಿತನ್ನು ಯಾವತ್ತಿಗೂ ತನ್ನ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡು ಕುಟುಂಬದ ಒಳಿತನ್ನು ಎರಡನೆಯ ಆದ್ಯತೆಯಾಗಿಸಿಕೊಂಡ ಬಸವರಾಜಪ್ಪನವರು ಮಾನಸಿಕ ಹೊಯ್ದಾಟಕ್ಕೆ ಒಳಗಾಗಬೇಕಾದ ಅನೇಕ ಪ್ರಸಂಗಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಉದಾಹರಣೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರ ಧರ್ಮಪತ್ನಿ ಗಂಗಾಂಬಿಕೆಯ ಶಸ್ತ್ರಚಿಕಿತ್ಸೆಗೆ ನಿಗದಿಯಾದ ದಿನದಂದೇ ಅವರು ಯಾವುದೋ ಚಳುವಳಿಗೆ ಕರೆ ಕೊಟ್ಟಿದ್ದು ಅದನ್ನು ವೈಯಕ್ತಿಕ ಕಾರಣಕ್ಕಾಗಿ ಮುಂದೂಡಲು ಅವರಿಗೆ ಮನಸ್ಸು ಬರಲಿಲ್ಲ. ತಮ್ಮ ಹೆಂಡತಿಗೆ ಧೈರ್ಯ ಹೇಳಿ ಅವಳ ಕಣ್ಣೀರನ್ನೂ ಲೆಕ್ಕಿಸದೆ ಹೆಗಲ ಮೇಲೆ ಹಸಿರು ಶಾಲನ್ನು ಹಾಕಿಕೊಂಡು ಚಳುವಳಿ ನಡೆಸುವ ಸ್ಥಳಕ್ಕೆ ಹೊರಟೇಬಿಟ್ಟರು. ತಮ್ಮ ಹೆಂಡತಿಯ ಕಣ್ಣುಗಳಲ್ಲಿ ತುಂಬಿಕೊಂಡಿದ್ದ ಕಂಬನಿಯಿಂದ ಕ್ಷಣ ಕಾಲ ವಿಚಲಿತರಾದರೂ “ಎಲ್ಲ ಹೋರಾಟಗಾರರಿಗೂ ಒಂದಿಲ್ಲೊಂದು ಕಾಲಘಟ್ಟದಲ್ಲಿ ಹೋರಾಟ ಮತ್ತು ಕುಟುಂಬ ಎಂಬ ಆಯ್ಕೆಗಳು ತೀರಾ ಸಂದಿಗ್ಧತೆಯನ್ನು ಸೃಷ್ಟಿಸುತ್ತವೆ. ಆದರೆ ನಿಜವಾದ ಹೋರಾಟಗಾರನಿಗೆ ಅವು ಹೆಚ್ಚು ಬಾಧಿಸಲಾರವು. ಮೈಕೊಡವಿಕೊಂಡು ಸಮಾಜದ ಸಂಗಡ ಹೊರಟುಬಿಡುತ್ತಾನೆ. ಆ ಸಮಾಜದಲ್ಲಿ ಅವನ ಕುಟುಂಬವೂ ಇರುತ್ತದೆ ಅನ್ನೋದನ್ನ ಮರೆಯಬಾರದು” ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ. 

“ಕೂಡು ಹಾದಿಯ ಕವಲು ದಾರಿಗಳು” ಎಂಬ ಅಧ್ಯಾಯದಲ್ಲಿ ಮದ್ಯಪಾನ ನಿಷೇಧ, ಕೆರೆಗಳಿಗೆ ನೀರು ತುಂಬಿಸುವುದು, ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಮತ್ತಿತರ ರೈತಪರ ಕಾಳಜಿಯನ್ನಿರಿಸಿಕೊಂಡು ನಮ್ಮ ಮಠದಿಂದ ಹಮ್ಮಿಕೊಂಡಿದ್ದ ಕಾರ್ಯಾಚರಣೆಗಳಿಗೆ ರೈತ ಸಂಘ ಕೈಜೋಡಿಸಿದ ವಿವರಗಳು ಇವೆ. 1990 ರಲ್ಲಿ ನಾವು ಕೈಗೊಂಡ ಮದ್ಯಪಾನ ನಿಷೇಧ ಆಂದೋಲನದ ವೇಳೆ ಶಿವಮೊಗ್ಗ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ನಡೆಸಿದ ಪಾದಯಾತ್ರೆಗಳಲ್ಲಿ ಹೆಚ್.ಎಸ್.ರುದ್ರಪ್ಪನವರು ಮತ್ತು ಎನ್.ಡಿ.ಸುಂದರೇಶ್ ರವರು ಹೆಜ್ಜೆಗೆ ಹೆಜ್ಜೆ ಹಾಕಿದ್ದ ಆ ದಿನಗಳು ಅವಿಸ್ಮರಣೀಯ. 1982ರ ಮೇ.25 ರಂದು ನಾಗಸಮುದ್ರದಲ್ಲಿ ನಡೆದ ಗೋಲಿಬಾರ್ ಪ್ರಕರಣ ಕುರಿತ ಅಧ್ಯಾಯವಂತೂ ಸ್ವಾತಂತ್ರ್ಯ ಸಂಗ್ರಾಮದ “ಜಲಿಯನ್ವಾಲಾ ಬಾಗ್ ಹತ್ಯಾಕಾಂಡ” ವನ್ನು ನೆನಪಿಗೆ ತರುತ್ತದೆ. 40 ವರ್ಷಗಳ ಹಿಂದೆ ಪೋಲೀಸರ ಗುಂಡಿನ ದಾಳಿಗೆ ಅಮಾಯಕ ರೈತರು ಬಲಿಯಾದ ಕರುಣಾಜನಕ ದೃಶ್ಯದ ನಿರೂಪಣೆ ಎಂತಹ ಕಲ್ಲುಹೃದಯವನ್ನೂ ಕರಗಿಸುವಂತಿದೆ. ಆ ಸಂದರ್ಭದಲ್ಲಿ ಪ್ರಾಣದ ಹಂಗನ್ನು ತೊರೆದು ಪೋಲೀಸರನ್ನು ಬೆನ್ನಟ್ಟಿ ಹೋಗಿ ಎಲ್ಲ ಯಾತನೆಯನ್ನು ಅನುಭವಿಸಿದ ತರುಣ ಬಸವರಾಜಪ್ಪ ಒಬ್ಬ ಅಪ್ರತಿಮ ವೀರಯೋಧನಾಗಿ ಕಾಣಿಸುತ್ತಾರೆ. “ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ತೊಲಗಿರಬಹುದು. ಆದರೆ ತಮ್ಮ ಸಮಸ್ತ ಕ್ರೌರ್ಯವನ್ನು ಮೂಟೆ ಕಟ್ಟಿ ಈ ಪೋಲೀಸರೊಳಗೆ ಬಿಟ್ಟುಹೋಗಿದ್ದಾರೆ ಅಂತ ಕಾಣಿಸುತ್ತದೆ; ನಮ್ಮ ದೇಶಕ್ಕಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ” ಎಂದು ವಿಷಾದಿಸುತ್ತಾರೆ ಬಸವರಾಜಪ್ಪ. 

ಹಿರಿಯ ತಲೆಮಾರಿನ ನಾಯಕರುಗಳಾದ ಹೆಚ್.ಎಸ್.ರುದ್ರಪ್ಪ ಮತ್ತು ಎನ್.ಡಿ. ಸುಂದರೇಶ್ ರವರ ಕಾಲದಲ್ಲಿ ರೈತ ಸಂಘದ ಸೇನಾನಿಯಾಗಿ ಸೇರಿಕೊಂಡ ಹೆಚ್.ಆರ್. ಬಸವರಾಜಪ್ಪ ಇದೀಗ ಅದರ ಸೇನಾಧಿಪತಿಯೇ ಆಗಿದ್ದಾರೆ. ರೈತರು ಯಾವುದೇ ರಾಜಕೀಯ ಪಕ್ಷದಲ್ಲಿರಲಿ, ಯಾರಿಗೇ ಓಟು ಕೊಡಲಿ “ಕರ್ನಾಟಕ ರಾಜ್ಯ ರೈತ ಸಂಘ” ರೈತರ ಹಿತವನ್ನು ಕಾಪಾಡುವ ಸಲುವಾಗಿ ಅಧಿಕಾರಾರೂಢ ಪಕ್ಷದವರನ್ನು ಮಣಿಸುವ ಸಂಘಟನೆಯಾಗಿ ರೂಪುಗೊಳ್ಳಲಿ, ಅಧಿಕಾರದಾಸೆಗೆ ಕಿತ್ತಾಡುವ ಮತ್ತೊಂದು ರಾಜಕೀಯ ಪಕ್ಷವಾಗದಿರಲಿ. ಸಂಸ್ಥಾಪಕ ಅಧ್ಯಕ್ಷರಾದ ಹೆಚ್.ಎಸ್.ರುದ್ರಪ್ಪನವರು ಐದು ದಶಕಗಳ ಹಿಂದೆ ಶಿವಮೊಗ್ಗದಲ್ಲಿ ಮೊಳಗಿಸಿದ ರೈತಪರ ಕಾಳಜಿಯ ಕಹಳೆ ಮತ್ತೆ ಮಾರ್ದನಿಸಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ದಿನಾಂಕ : 2-6-2022.

ಸ್ಥಳ : ಸೋಲನ್ (ಹಿಮಾಚಲ ಪ್ರದೇಶ್)