ಗುಣಮಟ್ಟದ ಉತ್ಪನ್ನದಿಂದ ರೈತರಿಗೆ ಉತ್ತಮ ಮಾರುಕಟ್ಟೆ: ಶಿವಪ್ರಕಾಶ ಶಿವಾಚಾರ್ಯ ಶ್ರೀ
ದಾವಣಗೆರೆ: ರೈತರಿಗೆ ಉತ್ತಮ ಮತ್ತು ಪ್ರಾಮಾಣಿಕ ಸೇವೆ ಒದಗಿಸುವ ಮೂಲಕ ವ್ಯವಹಾರ ಮಾಡಿ. ಪ್ರಸ್ತುತ ದಿನಗಳಲ್ಲಿ ಬ್ರ್ಯಾಂಡ್ ನೇಮ್ ಹುಟ್ಟು ಹಾಕದಿದ್ದರೆ ವಾಣಿಜ್ಯೀಕರಣಗೊಳಿಸುವುದು ತುಂಬಾ ಕಷ್ಟ ಎಂದು ಹರಳಕಟ್ಟದ ತರಳಬಾಳು ಶಾಖಾಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರು ಯುವ ಉದ್ಯಮಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಶೀಪುರ ಕ್ಯಾಂಪ್ ನಲ್ಲಿ ಶುಕ್ರವಾರ ಜಿಂಗಾಡೆ ರೈಸ್ ಇಂಡಸ್ಟ್ರೀಸ್ (ಪೂರ್ಣಿಮಾ ರೈಸ್ ಇಂಡಸ್ಟ್ರೀಸ್) ಉದ್ಘಾಟನೆ, ಪೂರ್ಣಿಮಾ ಅಕ್ಕಿ ಗಿರಣಿಗೆ ಭೂಮಿ ಪೂಜೆ ನೆರವೇರಿಸಿ, ನಂತರ ನಡೆದ ಶ್ರೀಮತಿ ಮೀನಾಕ್ಷಿ ರಾಮಪ್ರಭು ಅವರ ಷಷ್ಠಾಬ್ಧಿ, ಜಿ.ರಾಮಪ್ರಭು ಅವರ ವಜ್ರಮಹೋತ್ಸವ ಮತ್ತು ಸಿರಿಗೆರೆಯ ಎಂ.ಬಸವಯ್ಯ ವಸತಿ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ರಾಮಪ್ರಭು ಅವರಿಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
"ಆರಂಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟಂತೆ" ಗ್ರಾಮೀಣ ಭಾಗದ ಈ ರೈಸ್ ಮಿಲ್ ರೈತರಿಗೆ ಯಾವ ರೀತಿಯಲ್ಲಿ ಅನುಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಎದುರು ನೋಡಬೇಕಿದೆ” ಎಂದರು. ಆದರೆ ಇವರು ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ರೈಸ್ ಮಿಲ್ ಆರಂಭಿಸುತ್ತಿದ್ದಾರೆ. ರಾಮಪ್ರಭು ಶಿಷ್ಯರಿಗೆ ಮನೆಯಿಂದ ಡ್ರೈಪ್ರೂಟ್ ಕೊಟ್ಟು ಬೆಳೆಸಿದ ಹಾಗೆ ಕೊಡಲು ಹೋಗಬೇಡಿ. ರೈತರಿಗೆ ಉತ್ತಮ ಸೇವೆ ಕೊಡಿ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.
ರೈಸ್ ಮಿಲ್ ಉಳಿಸಿ, ಬೆಳೆಸಿ. ಮುಂದಿನ 15-20 ವರ್ಷಗಳಲ್ಲಿ ಈಗಿನ ರೈಸ್ ಮಿಲ್ ನಿರುಪಯುಕ್ತವಾಗಬಹುದು. ಆಗ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿಮಗೆ ಸಾಮರ್ಥ್ಯ ಇರಬೇಕು. ಆಗ ಮತ್ತೆ ಸಾಲ ಮಾಡುವುದು, ಮಕ್ಕಳಿಗೂ, ಮೊಮ್ಮಕ್ಕಳಿಗೂ ಸಾಲ ಹೊರಿಸಿ ಹೋಗುವ ಕೆಲಸ ಆಗಬಾರದು ಎಂದು ಎಚ್ಚರಿಸಿದರು.
ಅಕ್ಕಿ ತಯಾರು ಮಾಡಿ, ಇಲ್ಲೇ ಪ್ಯಾಕ್ ಮಾಡಿ, ಇಲ್ಲೇ ಕೂತ್ರೆ ಆಗೊಲ್ಲ. ಬ್ಯಾಂಡ್ ಬೆಳೆಸಬೇಕು ವ್ಯವಹಾರಿವಾಗಿ ಹಲವು ವಿಧಗಳಿವೆ. ನೀವು ಕೈಹಾಕಿರುವ ವ್ಯವಹಾರ ಒಂದು ಬ್ರ್ಯಾಂಡ್ ಮೇಲೆ ನಡೆಯುವಂತಹದ್ದು. ರೈತರಿಗೆ ನೆರವು ಮಾಡುವ ಜತೆಗೆ ಹೆಸರು ಮಾಡಬೇಕು. ಅದರ ಮೂಲಕ ರೈತರಿಗೆ ಇನ್ನೂ ಉತ್ತಮ ತಳಿಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಅವರಿಗೆ ಉತ್ತಮ ಮಾರುಕಟ್ಟೆ ಕಟ್ಟಿಕೊಡಬಹುದು. ಈ ಸಿದ್ಧತೆಯನ್ನು ಮಾಡುತ್ತಾ ಹೋಗಬೇಕು. ಇನ್ನು ಕೆಲವರು ಯಾರದ್ದೋ ಬ್ರ್ಯಾಂಡ್ ನಲ್ಲಿ ಇನ್ಯಾರೋ ಮಾರುತ್ತಾರೆ. ಆದರೆ ಉದ್ದಿಮೆ ಮಾಡುವಾಗ ಪ್ರಾಮಾಣಿಕವಾಗಿ ಗುಣಮಟ್ಟ ಕಾಯ್ದುಕೊಂಡರೆ ಜನ ಹುಡುಕಿಕೊಂಡು ಬಂದು ಖರೀದಿಸುತ್ತಾರೆ ಎಂದು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಅವಲೋಕನ ಮಾಡಿದರು.
ಎಂಬಿಎ ಪದವೀಧರರೂ ಆಗಿರುವ ಜಿ.ಆರ್.ಅಮರ್, ಜಿ.ಆರ್.ಅಜಿತ್ ಮುಂದಿನ ದಿನದಲ್ಲಿ ತಂತ್ರಜ್ಞಾನ ಬದಲಾವಣೆ ಮಾಡಿಕೊಳ್ಳಲು ಬೇಕಾದ ಸಂಪನ್ಮೂಲವನ್ನು ಅತ್ಯಂತಕಾಳಜಿಯಿಂದ ಕ್ರೋಢೀಕರಿಸುತ್ತಾ ಹೋಗಬೇಕು. ಪ್ರಜ್ಞಾಪೂರ್ವಕವಾಗಿ ವ್ಯವಹರಿಸಬೇಕು. ಆಗ ನಿಮ್ಮ ವ್ಯವಹಾರ ಯಶಸ್ವಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಷ್ಟವಾಗುತ್ತದೆ ಎನ್ನುವುದು ನಕಾರಾತ್ಮಕ/ಅಪಶಬ್ದ ಎಂದು ತಿಳಿಯಬಾರದು. ವಿಮಾನ ಹತ್ತಿದಾಗ ಅಪಾಯದ ಸಂದರ್ಭದ ಕುರಿತ ಮುನ್ನೆಚ್ಚರಿಕೆಯ ನಕಾರಾತ್ಮಕ ಮಾತುಗಳನ್ನು ಒಪ್ಪುತ್ತೀರಿ. ಉದ್ಯಮ/ವ್ಯವಹಾರದ ವಿಷಯದಲ್ಲಿ ಒಪ್ಪದೆ ಅಪಶಕುನ ಎನ್ನುತ್ತಾರೆ. ಯೋಜನೆ ಮಾಡುವಾಗ ಸಮಸ್ಯೆ ಉದ್ಭವಿಸುವ ಮುನ್ನವೇ ಚಿಂತನೆ ನಡೆಸಬೇಕು.
ಸಮಸ್ಯೆ ಬಾರದ ಹಾಗೆ ಯೋಚಿಸಿ ಮುನ್ನಡೆಯುವುದು ಚಾಣಾಕ್ಷತನ. ರಾಮಪ್ರಭು ಕಷ್ಟಪಟ್ಟು ಇಷ್ಟೆಲ್ಲಾ ಮಾಡಿದ್ದಾರೆ ಅವರ ಪುತ್ರರು ಅದನ್ನು ಕಾಳಜಿಯಿಂದ ಜೋಪಾನ ಮಾಡುತ್ತಾ ಮುನ್ನಡೆಯಲಿ. ಆ ಭಗವಂತ ಅವರಿಗೆ ಒಳಿತು ಮಾಡಲಿ ಎಂದು ಶುಭಕೋರಿದರು.
ಸಂತಸದಲ್ಲಿ ಕಾಣದಂತಾದೆವು.
ರಾಮಪ್ರಭು ಬಗ್ಗೆ ಮಾತನಾಡೋಣ ಅಂದ್ರೆ ಏನೂ ಉಳಿದಿಲ್ಲ. ಬಹಳಷ್ಟು ವರ್ಷಕಾಲ ಅವರು ವೇದಿಕೆಯ ಕೆಳಗೆ ಇದ್ದವರು. ನಿಮ್ಮ ಒತ್ತಾಯಕ್ಕೆ ವೇದಿಕೆಯ ಕೆಳಗೆ ಕುಳಿತವರು ಮೇಲೆ ಬಂದು ಕುಳಿತಿದ್ದಾರೆ. ಹೆಚ್ಚು ಮಾತನಾಡಲ್ಲ, ಅವರು ಬೇರೆಯವರನ್ನು ಮಾತನಾಡಿಸಿದ್ದೇ ಹೆಚ್ಚು. ಕೂಗಿದ್ದೇ ಕೂಗಿದ್ದು, ಅಲ್ಲಿ ಕೂತ್ಕಳ್ಲೇ ಮರೀ, ಇಲ್ಲಿ ಕೂತ್ಕಳ್ಳಲೇ ಮರಿ ಎಂದು. ಬಹುತೇಕ ಸಿರಿಗೆರೆಯ ಗುರುಗಳು ಯಾರನ್ನ ಮರಿ ಎಂದು ಕರೆಯುತ್ತಿದ್ರೋ ಅದಕ್ಕಿಂತ ಹೆಚ್ಚುಪಟ್ಟು ಮರಿಗಳನ್ನಇವ್ರು ಮಾಡಿ ಬಿಟ್ಟಿದ್ದಾರೆ. ಬಹಳಷ್ಟು ವರ್ಷಗಳ ಕಾಲ ರಾಮಪ್ರಭು ವೇದಿಕೆಯ ಮೇಲೆ ಬರಲಿಲ್ಲವೋ, ಹಾಗೆಯೇ ನಾವು ಯಾವ ವೇದಿಕೆಗಳ ಮೇಲೆ ಹತ್ತಿರಲಿಲ್ಲ. 42 ವರ್ಷ ಕೆಲಸ ಮಾಡಿದರೂ ವೇದಿಕೆ ಇಷ್ಟ ಆಗುತ್ತಿರಲಿಲ್ಲ. ಇವತ್ತು ಹೇಗೆ ಖುಷಿ ಆಯ್ತು ಎಂದರೆ ಅವರ ಸಂಭ್ರಮದಲ್ಲಿ, ಸಂತಸದಲ್ಲಿ ನಾವು ಕಾಣದಂತಾಗಿದ್ದು ಬಹಳ ಸಂತೋಷ ಎಂದು ಸ್ವಾಮೀಜಿ ಹೇಳಿದರು.
ಸಾಧನೆ ಮಾಡಿ ಮಾಡಿ ಶ್ರೇಷ್ಠ ಸ್ಥಾನಕ್ಕೆ ಹೋದರೂ ಗುರುವಿನ ಮುಂದೆ ಶಿಷ್ಯ ಶಿಷ್ಯನೇ. ಸಾಧನೆ ಸಾಧಕನ ಕೈವಶವಾಗುತ್ತದೆ. ರಾಮಪ್ರಭು ಸಾಧನೆ ಮಾಡೆದೆ ಉಳಿದಿರುವುದನ್ನು ಮಾಡಿ. ಅದು ಹೇಗಿರಬೇಕೆಂದರೆ ಹಿಮಾಲಯದ ತುತ್ತತುದಿಗೇರಿದಾಗ ಅಲ್ಲೊಂದು ಕಲ್ಲು ಇಟ್ಟು ಬನ್ನಿ, ನಂತರ ಹೋದವರು ಅದರ ಮೇಲೊಂದು ಕಲ್ಲು ಇಟ್ಟು ಎತ್ತರ ಹೆಚ್ಚಿಸುವಂತಹ ಸಾಧನೆ ತೋರಬೇಕು. ಹೀಗೆ ಸಾಧನೆ ಕೊನೆ ಆಗಬಾರದು ನಿರಂತರವಾಗಿರಬೇಕು. ಗುರುವಿನ ಸಾಧನೆಯನ್ನು ಶಿಷ್ಯ ಮುರಿದಾಗ ಗುರುವಿಗೊಂದು ಬೆಲೆ ಬರುತ್ತದೆ ಎಂದರು.
ಕ್ರೀಡೆಯಲ್ಲಿ ದಾಖಲೆಗಳನ್ನು ಬರೆದವರು ತಮ್ಮ ನಂತರ ಬಂದವರು ತಮ್ಮ ದಾಖಲೆಯನ್ನು ಮುರಿಯಲಿ ಎಂದು ಬಯಸಬೇಕು. ಆಗ ದಾಖಲೆ ಮುರಿಯಲು ಅವಕಾಶವಾಗುತ್ತದೆ ಎಂದು ಸಲಹೆ ನೀಡಿದರು.
ಸಿರಿಗೆರೆಯ ಎಂಬಿಆರ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಿ.ರಾಮಪ್ರಭು ಶ್ರೀಮತಿ ಮೀನಾಕ್ಷಿ ದಂಪತಿಯನ್ನು ಸನ್ಮಾನಿಸಿ ಬೆಳ್ಳಿ ಗದೆ ಕಾಣಿಕೆ ನೀಡಿ ಗೌರವಿಸಿ ಅಭಿನಂದನಾನುಡಿಗಳನ್ನಾಡಿದರು.
ಗುರುವಂದನೆ ಸ್ವೀಕರಿಸಿದ ಜಿ.ರಾಮಪ್ರಭು ಅವರು ಮಾತನಾಡಿ, ನಿಮ್ಮೆಲ್ಲರ ಸಾಧನೆ, ಪ್ರೀತಿ, ಅಭಿಮಾನ ನನ್ನನ್ನು ಈ ಎತ್ತರಕ್ಕೆ ಬೆಳೆಸಿದೆ. ನಾನು ಸದಾ ನಿಮಗೆ ಚಿರಋಣಿ ಎಂದು ಭಾವುಕರಾದರು.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳು ಮಲ್ಲಿಕಾರ್ಜುನ, ದಾವಣಗೆರೆಯ ಲೆಕ್ಕ ಪರಿಶೋಧಕ ಅಂಬರ್ ಕರ್ ವಿರೂಪಣ್ಣ, ಬೆಂಗಳೂರಿನ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್ ಇತರರು ಇದ್ದರು.