ಶಿವಶರಣರ ವಚನಗಳು ಮಕ್ಕಳ ಬಾಳಿಗೆ ಭೂಷಣ : ಶರಣ ಎಂ.ಬಿ. ಸಂಗಮೇಶ್ವರ ಗೌಡ್ರು ಅಭಿಪ್ರಾಯ
ದಾವಣಗೆರೆ: ಶಿವಶರಣರ ವಚನಗಳು ಮಕ್ಕಳ ಬಾಳಿಗೆ ಭೂಷಣವಾಗಿರುವುದರಿಂದ ಶರಣರ ವಚನಗಳು ಮಕ್ಕಳಿಗೆ ಜ್ಞಾನಭಂಡಾರವಾಗಬೇಕು ಮತ್ತು ಅವರ ವ್ಯಕ್ತಿತ್ವದ ಆಭರಣಗಳು ಆಗಬೇಕು ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿವೃದ್ಧಿಪಡಿಸಿದ ಶಿವಶರಣರ ವಚನಗಳ ತಂತ್ರಾಂಶವನ್ನು ಉತ್ತಮವಾಗಿ ಬಳಸುವುದನ್ನು ಶಿಕ್ಷಕರು ಮೊದಲು ಕಲಿಯಬೇಕು ನಂತರ ಮಕ್ಕಳಿಗೆ ಹೇಗೆ ಬಳಸಬೇಕೆಂಬುದರ ಬಗ್ಗೆ ತಿಳಿಸಿಕೊಡಬೇಕು ಎಂದು ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಶರಣ ಎಂ.ಬಿ. ಸಂಗಮೇಶ್ವರ ಗೌಡ್ರು ಅಭಿಪ್ರಾಪಟ್ಟರು.
ಶಿವಶರಣರ ವಚನ ಸಾಹಿತ್ಯ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣೆ ಎ.ಜಿ. ಸುಮತಿ ಜಯಪ್ಪ ಮಾತನಾಡಿ ವಚನಗಳು ಜನರಾಡುವ ಭಾಷೆಯಲ್ಲಿ ಸರ್ವರಿಗೂ ಅರ್ಥವಾಗುವ ರೀತಿಯಲ್ಲಿ ರಚಿತವಾಗಿವೆ. ವಚನ ಎಂದರೆ ಮಾತು, ಪ್ರಮಾಣ, ಭಾಷೆ ಎಂದರ್ಥವಿದೆ. ಪದ್ಯವೂ ಅಲ್ಲದ ಒಂದು ವಿಶಿಷ್ಟ ಪ್ರಕಾರವೇ ವಚನಗಳು.
ಬಸವಾದಿ ಶಿವಶರಣರು ಕಾಯಕ ಹಾಗೂ ದಾಸೋಹ ತತ್ತ್ವಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಸಕಲ ಜೀವಿಗಳು ಬದುಕುವಂತೆ ಆಶ್ರಯ ನೀಡುವುದು ನಿಜವಾದ ಧರ್ಮ ಎಂದರು. ರಾಜಮಹಾರಾಜರುಗಳು ಸಾಹಿತ್ಯ ರಚನೆ ಮತ್ತು ಪ್ರಚಾರಕ್ಕರ ಆಶ್ರಯ ನೀಡಿದ್ದರು.ವಚನ ಸಾಹಿತ್ಯಕ್ಕೆ ಜನರ ಆಶ್ರಯ ದೊರೆತಿರುವುದು ತುಂಬಾ ಶ್ಲಾಘನೀಯ ಎಂದರು.
ಇಂದು ಜಾತಿ-ಜಾತಿಗಳ ನಡುವೆ ಧರ್ಮ-ಧರ್ಮಗಳ ನಡುವೆ ಸಂಘರ್ಷಗಳು ಉಂಟಾಗುತ್ತಿವೆ ವಚನಗಳಿಂದ ಎಲ್ಲಾ ಸಂಘರ್ಷಗಳಿಗೆ ಪರಿಹಾರ ಇದೆ ಎಂದರು. ಮೊದಲ ಬಾರಿಗೆ ಸಂಸದೀಯ ವ್ಯವಸ್ಥೆಯನ್ನು ಜಗತ್ತಿಗೆ ಪರಿಚಯಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು, ಸ್ತ್ರೀ-ಪುರುಷರ ಸಮಾನತೆ, ಜಾತ್ಯಾತೀತ ಮನೋಭಾವ ಲಿಂಗಬೇಧ - ವಯೋಬೇಧವಿಲ್ಲದೆ ಸರ್ವರನ್ನು ಗೌರವಿಸಿದ್ದು ಅನುಭವ ಮಂಟಪ. ಇಂದು ಜನರು ಹಣ -ಸಂಪತ್ತು ಸಂಗ್ರಹದ ಬೆನ್ನು ಹತ್ತಿದ್ದಾರೆ. ಹಣ ಜನರನ್ನು ಸಂಸ್ಕಾರಹೀನರನ್ನಾಗಿ ಮಾಡುತ್ತಿದೆ.ಮಕ್ಕಳಿಗೆ ಆಚಾರ-ವಿಚಾರ ಸಂಸ್ಕಾರ ವಚನಗಳಿಂದ ದೊರೆಯುತ್ತದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಅಣ್ಣನ ಬಳಗದ ಅಧ್ಯಕ್ಷರಾದ ಶರಣ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ ವಚನ ಸಾಹಿತ್ಯವನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿಯವರು, ನಂತರದಲ್ಲಿ ತರಳಬಾಳು ಜಗದ್ಗುರು ಬೃಹನ್ಮಠದ ಹಿರಿಯಗುರುಗಳಾದ ಲಿಂ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಚನಗಳ ಪ್ರಚಾರ ಮಾಡಿದವರಲ್ಲಿ ಅಗ್ರಗಣ್ಯರು.
ವಚನ ಪ್ರಚಾರಕ್ಕಾಗಿ ಅಣ್ಣನ ಬಳಗ,ಅಕ್ಕನ ಬಳಗ,ತರಳಬಾಳು ಕಲಾಸಂಘ,ತರಳಬಾಳು ಪ್ರಕಾಶನ, ರಂಗಭೂಮಿ ಇತ್ಯಾದಿ ಬಹುಮಾಧ್ಯಮಗಳನ್ನು ಆಯ್ಕೆಮಾಡಿಕೊಂಡರು. ವಚನಗಳಿಗೆ ಖ್ಯಾತ ಸಂಗೀತಗಾರರಿಂದ ರಾಗಸಂಯೋಜನೆ ಮಾಡಿಸಿದರು. ಸರ್ವ ಶರಣ ಸಮ್ಮೇಳನಗಳಲ್ಲಿ ವಚನ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ವಿಚಾರಗೋಷ್ಠಿ, ವಿಚಾರ ಸಂಕಿರಣ, ದಂದಣ-ದತ್ತಣ ಗೋಷ್ಠಿಗಳನ್ನು ಏರ್ಪಡಿಸಿ ವಚನ ಸಾಹಿತ್ಯದ ಪರಿಮಳವನ್ನು ನಾಡಿಗೆ ಪಸರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶರಣ ಬಿ.ವಾಮದೇವಪ್ಪ ಮಾತನಾಡಿ ಪರಮಪೂಜ್ಯರು ಅಭಿವೃದ್ಧಿಪಡಿಸಿದ ಶಿವಶರಣರ ಸಂಪುಟ ತಂತ್ರಾಂಶದಲ್ಲಿರುವ 21,000 ವಚನಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಿವಶರಣರ ವಚನಗಳು ಹಾಗೂ ಶಿವಶರಣರ ವಚನಗಳು ತಂತ್ರಾಂಶದ ಪ್ರಾತ್ಯಕ್ಷಿಕೆ ಹಾಗೂ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಎಸ್.ಬಿ. ರಂಗನಾಥ್ ಮಾತನಾಡಿ ಶರಣರ ವಚನಗಳು ಅಕ್ಷಯ ನಿಧಿಯಂತಿವೆ. ಸಮಾಜ ಸುಧಾರಣೆಗಾಗಿ ವಚನಗಳ ಅಗತ್ಯವಿದೆ ಅಸ್ಪೃಶ್ಯತೆ, ಮೇಲು-ಕೀಳು ನಿವಾರಣೆ, ಮಹಿಳಾ ಸಮಾನತೆ ಯಂತಹ ಸುಧಾರಣೆಗಳಿಗೆ ವಚನಗಳು ಅತ್ಯವಶ್ಯಕವಾಗಿವೆ ಎಂದರು. ನಮ್ಮ ಮಕ್ಕಳ ಬಾಳಿಗೆ ವಚನಗಳು ಅತ್ಯಗತ್ಯ ಎಂದರು
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಎಚ್.ವಿ.ವಾಮದೇವಪ್ಪ ಮಾತನಾಡಿ ತುಂಬಾ ಸರಳವಾದ ಈ ತಂತ್ರಾಂಶವನ್ನು ಮಕ್ಕಳು ಬಳಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಪ್ರತಿದಿನ ಪ್ರಾರ್ಥನೆಯ ಸಂದರ್ಭದಲ್ಲಿ ಶಿವಶರಣರ ವಚನಗಳನ್ನು ಪರಿಣಾಮಕಾರಿಯಾಗಿ ಓದಿಸಿ ಅವುಗಳ ಅರ್ಥವನ್ನು ಮಕ್ಕಳಿಗೆ ತಿಳಿಸುವಂತೆ ಪ್ರೇರೇಪಿಸಬೇಕು ಎಂದರು.
ದಾವಣಗೆರೆ ವಲಯಾಧಿಕಾರಿ ಗಳಾದ ಶರಣ ಎಸ್.ಆರ್. ಶಿರಗಂಬಿ ಸ್ವಾಗತಿಸಿದರು, ಶರಣ. ಎಂ.ಮಲ್ಲಪ್ಪ ವಂದಿಸಿದರು, ಬಾಡ ಗ್ರಾಮದ ಅಣಬೇರು ಕೆಂಚಪ್ಪ ಪ್ರೌಢಶಾಲೆಯ ಶಿಕ್ಷಕಿಯರು ವಚನ ಗಾಯನ ಮತ್ತು ನಿರೂಪಣೆಯನ್ನು ನಡೆಸಿಕೊಟ್ಟರು.
ಶ್ರೀ ಅಮೃತೇಶ್ವರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಎಂ.ರಂಗಣ್ಣ ತಂತ್ರಾಂಶದ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ದಾಸೋಹಿಗಳಾದ ಶರಣ ಸಿ.ಕೆ.ಸಿದ್ದಪ್ಪ, ಕುಮಾರ್ ಜ್ಯುಯೆಲಸ್೯, ದಾವಣಗೆರೆ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ದಿಲ್ಲಪ್ಪ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ದಾವಣಗೆರೆ ವಲಯದ ವ್ಯಾಪ್ತಿಯಲ್ಲಿ ಬರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಉಪನ್ಯಾಸಕರು ಶಿಕ್ಷಕರು ಮತ್ತು ನೌಕರ ವರ್ಗದವರು ಭಾಗವಹಿಸಿದ್ದರು. ಮಾಕನೂರು ಮಲ್ಲೇಶಪ್ಪ ಶಿಕ್ಷಣ ವಿದ್ಯಾಲಯ ಹಾಗೂ ಸರ್ವಮಂಗಳಮ್ಮ ನಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.