ಹರಿಹರನ ರಗಳೆ ಸಾಹಿತ್ಯದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ : ಅಧ್ಯಾಪಕ ಜಿ.ಎಸ್. ಗಿರಿಜಾಶಂಕರ್

  •  
  •  
  •  
  •  
  •    Views  

ಸಿರಿಗೆರೆ: ಕನ್ನಡನಾಡಿನ ಹನ್ನೆರಡನೆಯ ಶತಮಾನದಲ್ಲಿ ಧಾರ್ಮಿಕ ಸಾಮಾಜಿಕ, ಸಾಹಿತ್ಯಕ ಆಂದೋಲನಕ್ಕೆ ಕಾರಣರಾದ ಶಿವಶರಣರನ್ನು ಕುರಿತು ರಚಿಸಿದ ರಗಳೆಗಳನ್ನು ರಚಿಸಿದರವರು ಹರಿಹರ ಕವಿ ಹಾಗೂ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡ ಹರಿಹರ ಪ್ರವರ್ತಕ ಕವಿ, ಕೃಷಿ ಕವಿ, ಭಕ್ತ ಕವಿ, ಮಹಾಕವಿ, ಕ್ರಾಂತಿಕಾರಿ ಕವಿ ಎಂದು ಬಣ್ಣಿಸಿದ್ದಾರೆ ಎಂದು  ಅಧ್ಯಾಪಕ ಜಿ.ಎಸ್. ಗಿರಿಜಾಶಂಕರ್ ತಿಳಿಸಿದರು.

ಇಲ್ಲಿನ ತರಳಬಾಳು ಬೃಹನ್ಮಠದ ಐಕ್ಯಮಂಟಪದ ಆವರಣದಲ್ಲಿ ಜರುಗಿದ ‘ಹರಿಹರ ಮಹಾಕವಿ ಜಯಂತಿ’ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು


“ಹರಿಹರ” ಕನ್ನಡ ಕಾವ್ಯ ಪರಂಪರೆಯಲ್ಲಿ ಬಹು ಮುಖ್ಯ ಕವಿಗಳಲ್ಲಿ ಒಬ್ಬರು. ತನ್ನ ಕಾವ್ಯದ ಸತ್ವದಿಂದಲೇ ಜನಸಮುದಾಯದ ಕವಿಯಾಗಿದ್ದು ಹರಿಹರನ ಹೆಗ್ಗಳಿಕೆ. ಹರಿಹರನು ಪಂಪಾ ಕ್ಷೇತ್ರವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡನು. "ಹಂಪೆಯ ಹರಿಹರ" ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ಲೀನವಾಗಿ ರಗಳೆಯ ಯುಗಾಂತರ ಸೃಷ್ಟಿಸಿದನು.

ಬಸವರಾಜದೇವರ ರಗಳೆ, ಪ್ರಭುದೇವರ ರಗಳೆ, ಮಹಾದೇವಿಯಕ್ಕನ ರಗಳೆ ಮುಂತಾದವು ಪ್ರಮುಖವಾಗಿವೆ ಎಂದರು. ಚಂಪುವಿಗೆ ಪಂಪ, ಷಟ್ಪದಿಗೆ ಕುಮಾರವ್ಯಾಸ, ತ್ರಿಪದಿಗೆ ಸರ್ವಜ್ಞ ಇದ್ದಂತೆ, ರಗಳೆಗೆ ಹರಿಹರನೇ ಸೀಮಾಪುರುಷ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ಹರಿಹರ ಬಹುತೇಕ ಶಿವಶರಣರನ್ನು ಕುರಿತು ರಚಿಸಿದ ಕೃತಿಗಳು ಪ್ರಸಿದ್ಧವಾಗಿವೆ. ಇವರ ರಗಳೆಗಳಲ್ಲಿ ಶಿವನ ಆರಾಧನೆ ಮತ್ತು ಭಕ್ತಿ ಪ್ರಧಾನವಾಗಿದೆ. ವಿದ್ಯಾರ್ಥಿಗಳು ಕಾವ್ಯ ಹಾಗೂ ರಗಳೆಗಳನ್ನು ಓದುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಶಾಲಾ ವಿದ್ಯಾರ್ಥಿಗಳು ಛಲ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

 ಕಾರ್ಯಕ್ರಮದಲ್ಲಿ ಮಹಾಕವಿ ಹರಿಹರನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳ ವಸತಿ ನಿಲಯದ ವಿದ್ಯಾರ್ಥಿಗಳು ಶಿವಮಂತ್ರ ಲೇಖನವನ್ನು ಬರೆದರು. ಶ್ರೀ ನೀಲಾಂಬಿಕ ಬಾಲಿಕಾ ಪ್ರೌಢಶಾಲೆಯ ವರ್ಷಾ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು.ಕೀರ್ತಿ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿದರು ಹಾಗೂ ಬಸಮ್ಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿ.ವಿಜಯಚಾರಿ ಉಪಾಧ್ಯಕ್ಷ ಯು.ಚಂದ್ರಪ್ಪ ,ಮುಖ್ಯೋಪಾಧ್ಯಾಯ ಪಿ.ಎಸ್.ನಾಗರಾಜ, ಶಿಕ್ಷಕ ಸಿದ್ದಲಿಂಗಪ್ಪ, ಗಿರೀಶ್, ಹಚ್. ಸಿ.ಗಿರೀಶ್, ಉಷಾ ಮತ್ತು ಆಶಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.