ಜನ್ಮದಿನ ನಿಜವಾಗಿಯೂ ಸಂಭ್ರಮಿಸುವ ದಿನವೇ?
ಇಂದು ನಮ್ಮ ಜನ್ಮದಿನ. ಅಪರೂಪಕ್ಕೆ ನಮ್ಮ ಅಂಕಣ ಬರಹದ ದಿನವೂ ಇಂದೇ ಕೂಡಿಬಂದಿದೆ. ಹಾಗೆಂದು ನೀವು ಶುಭಹಾರೈಕೆಗಳನ್ನು ಕಳುಹಿಸಲು ಆತುರಪಡದೆ ಮುಂದೆ ಓದಿ. ನಮ್ಮ ಜನ್ಮದಿನಾಂಕಗಳು ಎರಡು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಒಂದು ನಿಜ ಜೀವನದಲ್ಲಿ ಹುಟ್ಟಿದ ದಿನಾಂಕವಾದರೆ (ಜೂನ್ 16) ಮತ್ತೊಂದು ಶಾಲೆಯ ದಾಖಲಾತಿಯಲ್ಲಿರುವ ದಿನಾಂಕ (ಜನವರಿ 15). ಈಗಲೂ ನಮ್ಮ ಪಾಸ್ ಪೋರ್ಟ್ ನಲ್ಲಿರುವುದು ಶಾಲೆಯಲ್ಲಿ ನಮೂದಾದ ಜನ್ಮದಿನಾಂಕವೇ ಹೊರತು ನಿಜವಾದ ಹುಟ್ಟಿದ ದಿನಾಂಕವಲ್ಲ. ಶಾಲೆಗೆ ಸೇರಿಸಲು ಕಡಿಮೆ ವಯಸ್ಸಾಗಿದ್ದರಿಂದ 6 ತಿಂಗಳು ಹೆಚ್ಚಿಗೆ ಮಾಡಿ ಸೇರಿಸಿಕೊಂಡವರು ಶಿಕ್ಷಣ ಪ್ರೇಮಿ ಶಾಲಾ ಶಿಕ್ಷಕರು! ಹೀಗಾಗಿ ಮಕ್ಕಳು ದೇವರ ಸೃಷ್ಟಿಯಾದರೆ ಆ ಮಕ್ಕಳ ಜನ್ಮದಿನಾಂಕದ ಸೃಷ್ಟಿಕರ್ತರು ನಿಃಸಂದೇಹವಾಗಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರು!
ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಬಂದ ನಾವು ಹುಟ್ಟಿದಾರಭ್ಯ ಎಂದೂ ನಮ್ಮ ಜನ್ಮದಿನವನ್ನು ಆಚರಿಸಿಕೊಂಡವರಲ್ಲ. ಎಲ್ಲ ದಿನಗಳಂತೆ ಅದೂ ಒಂದು ದಿನ, ಅದು ನಮಗೆ ನೆನಪಾಗುತ್ತಿದ್ದುದು ಪರದೇಶಗಳಲ್ಲಿರುವ ಆತ್ಮೀಯ ಗೆಳೆಯರಿಂದ ಶುಭಹಾರೈಕೆಗಳು ಬಂದಾಗ ಮಾತ್ರ. ಮಠದ ಸ್ವಾಮಿಗಳಾದವರ ನಿಜವಾದ ಜನ್ಮದಿನ ಪೂರ್ವಾಶ್ರಮದ ತಂದೆತಾಯಿಗಳಿಂದ ಶರೀರವನ್ನು ಪಡೆದ ದಿನವಲ್ಲ. “ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ, ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೇ” ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯು ಹೇಳುವಂತೆ ಗುರುವಿನಿಂದ ಉಪದೇಶವನ್ನು ಪಡೆದ ದಿನವೇ ನಿಜವಾದ ಜನ್ಮದಿನ. ಬಹಳ ವರ್ಷಗಳ ಹಿಂದೆ ಶಿಷ್ಯರು ಕೆಲವರು ನಮ್ಮ ಜನ್ಮದಿನವನ್ನು ಆಚರಿಸಲು ನಿರ್ಧರಿಸಿ ನಮ್ಮ ಹತ್ತಿರ ಬಂದಿದ್ದರು. ಅವರ ಶ್ರದ್ಧಾಭಕ್ತಿಗೆ ಮೆಚ್ಚುಗೆ ಸೂಚಿಸಿ, ತಾತ್ವಿಕ ವಿಚಾರಗಳನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ನಮ್ಮ ಜನ್ಮದಿನೋತ್ಸವ ಸಮಾರಂಭವನ್ನು ಏರ್ಪಡಿಸಲು ಅವಕಾಶ ಕಲ್ಪಿಸಿಕೊಡಲಿಲ್ಲ. ಲೋಕಾರೂಢಿಯಂತೆ ಶಿಷ್ಯರು ಸಂಭ್ರಮದಿಂದ ಆಚರಿಸಿಕೊಳ್ಳುವ ಅವರ ಜನ್ಮದಿನದಂದು ಸ್ವಾಮಿಗಳಾಗಿ ಶುಭ ಹಾರೈಸುವುದೇ ನಮಗಾಗುವ ಸಂತೋಷ.
2000 ನೇ ಇಸವಿಯಲ್ಲಿ ಎರಡನೆಯ ಬಾರಿಗೆ ನೂರೈವತ್ತು ಶಿಷ್ಯರೊಂದಿಗೆ ವಿಶ್ವಶಾಂತಿ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಜೂನ್ 16 ರಂದು ಇಟಲಿಯ ರಾಜಧಾನಿ ರೋಂ ನಗರದಲ್ಲಿದ್ದೆವು. ಇಡೀ ದಿನವೆಲ್ಲಾ ಪ್ರವಾಸಿಗರೆಲ್ಲರೂ ಸುತ್ತಾಡಿಕೊಂಡು ಸಂಜೆ ಹೋಟೆಲ್ಗೆ ಹಿಂದಿರುಗಿ ವಿಶಾಲವಾದ ಕೋಣೆಯಲ್ಲಿ ಸೇರಿದ್ದರು. ಪ್ರವಾಸಿಗರೊಬ್ಬರು ಎದ್ದು ನಿಂತು ಒಂದು “surprise” ಸಂಗತಿಯನ್ನು ತಿಳಿಸುವುದಾಗಿ ಹೇಳಿದರು. ನಮ್ಮ ಜನ್ಮದಿನಾಂಕವನ್ನು ಬಲ್ಲ ಅವರು ವಾಪಾಸು ಬರುವಾಗ ದೊಡ್ಡದಾದ “ಬರ್ತ್ಡೇ ಕೇಕ್” ತೆಗೆದುಕೊಂಡು ಬಂದಿದ್ದರು. ಅದನ್ನು ನಮ್ಮ ಮುಂದಿಟ್ಟು ಕತ್ತರಿಸಲು ವಿನಂತಿಸಿಕೊಂಡರು. ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟತೊಡಗಿದರು. “ಬರ್ತ್ಡೇ ಕೇಕ್” ಕತ್ತರಿಸುವುದು ನಮ್ಮ ಸಂಸ್ಕೃತಿಯಲ್ಲ, ಕತ್ತರಿಸದಿದ್ದರೆ ಶಿಷ್ಯರ ಮನಸ್ಸಿಗೆ ನೋವಾಗುತ್ತದೆ. ನಮಗೆ ಇಬ್ಬಂದಿ ಸ್ಥಿತಿಯುಂಟಾಯಿತು. “When in Rome, do as the Romans do” ಎಂಬ ಇಂಗ್ಲಿಷ್ ಗಾದೆಮಾತು ನೆನಪಾಯಿತು. ಆದರೂ ಕೇಕ್ ಕತ್ತರಿಸಲು ಮನಸ್ಸು ಬರಲಿಲ್ಲ, ಹುಟ್ಟು ಹಬ್ಬ ಆಚರಿಸುವುದು ಭಾರತೀಯ ಸಂಸ್ಕೃತಿಯಲ್ಲ; ಪಾಶ್ಚಾತ್ಯ ಸಂಸ್ಕೃತಿ! ರೋಗಿ ಬಯಸಿದ್ದನ್ನು ಕೊಡುವವನು ವೈದ್ಯನಲ್ಲ. ರೋಗಕ್ಕೆ ಬೇಕಾದುದನ್ನು ಕೊಡುವವನು ವೈದ್ಯ. ಆದಕಾರಣ ಶಿಷ್ಯರು ಬಯಸಿದಂತೆ ಕೇಕ್ ಕತ್ತರಿಸದೆ ಹಾಗೆಯೇ ಹಸ್ತದಿಂದ ಮುಟ್ಟಿ ಆಶೀರ್ವದಿಸಿ ಪ್ರವಾಸಿಗರಿಗೆ ಪ್ರಸಾದ ರೂಪದಲ್ಲಿ ಹಂಚಲು ಸೂಚಿಸಿದೆವು. ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ, ಶಂಕರಜಯಂತಿ, ಬಸವಜಯಂತಿ, ಕನಕಜಯಂತಿ ಇತ್ಯಾದಿ ದೇವರ ಮತ್ತು ಪುಣ್ಯಪುರುಷರ ಜನ್ಮದಿನವನ್ನು ಆಚರಿಸುವ ಪದ್ಧತಿ ಇದೆಯೇ ಹೊರತು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವ ಪದ್ಧತಿ ಪ್ರಾಚೀನ ಕಾಲದಿಂದಲೂ ಇಲ್ಲ. ಇತ್ತೀಚೆಗೆ ಸರಕಾರದ ಈ ರಜಾದಿನಗಳು ಮೋಜುಮಸ್ತಿ ಮಾಡಲು ದುರುಪಯೋಗವಾಗುತ್ತಿವೆಯೇ ಹೊರತು ಧರ್ಮಬುದ್ಧಿಯಿಂದ ದೇವರ ಮತ್ತು ಪುಣ್ಯಪುರುಷರ ಸ್ಮರಣೆಯನ್ನು ಮಾಡಿ ಪಾವನರಾಗಲು ಅಲ್ಲ.
ಪಾಶ್ಚಾತ್ಯ ದೇಶಗಳ Birthday Party ಗಳಲ್ಲಿ ಜನ್ಮದಿನ ಆಚರಿಸಿಕೊಳ್ಳುವ ವ್ಯಕ್ತಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಕ್ಯಾಂಡಲ್ಗಳನ್ನು ಕೇಕ್ ಮೇಲೆ ಹಚ್ಚಿಟ್ಟು “ಉಫ್” ಎಂದು ಊದಿ ಆರಿಸುವುದು ಪದ್ಧತಿ. ಆ ವ್ಯಕ್ತಿಯ ಜೀವನದಲ್ಲಿ ಅಷ್ಟು ವರ್ಷಗಳು ಕಳೆದುಹೋದವು ಎಂಬುದರ ಸಂಕೇತ ಅದು. ಚಾಲ್ತಿ ವರ್ಷದ ಸಂಕೇತವಾಗಿ ಇಟ್ಟ ಕ್ಯಾಂಡಲ್ ಮಾತ್ರ ಹಾಗೆಯೇ ಉರಿಯುತ್ತಿರಬೇಕು. ಅದನ್ನು ಅಳಿಸುವಂತಿಲ್ಲ. ಆದರೆ “ಉಫ್” ಎಂದು ಊದುವ ಅವಸರದಲ್ಲಿ ಎಲ್ಲವೂ ಅಳಿಸಿಹೋಗಿ ಭವಿಷ್ಯಜೀವನ ಕಗ್ಗತ್ತಲಿಂದ ಕೂಡಿದೆ ಎಂಬುದರ ಸಂಕೇತವಾದರೆ ಆಶ್ಚರ್ಯಪಡಬೇಕಾಗಿಲ್ಲ. ನಮ್ಮ ಸಂಸ್ಕೃತಿಯಲ್ಲಿ ದೀಪವನ್ನು ಬಾಯಿಂದ ಊದಿ ಆರಿಸುವುದು ಅಮಂಗಲಕಾರಕ. ಸಭ್ಯತೆಯ ನಡವಳಿಕೆಯಲ್ಲ. ಕೈಯಿಂದ ಗಾಳಿಯನ್ನು ಬೀಸಿ ನಂದಿಸುವುದು ನಮ್ಮ ಪದ್ದತಿ. ಶಬ್ದಗಳ ಬಳಕೆಯಲ್ಲಿಯೂ ಒಂದು ವಿಶೇಷತೆ ಇದೆ. ದೀಪ ನಂದಿಸು, ಆರಿಸು ಎನ್ನುತ್ತಾರೆಯೇ ಹೊರತು ದೀಪ ಕೆಡಿಸು ಎನ್ನುವುದಿಲ್ಲ,
ಕ್ಯಾಂಡಲ್ ಊದಿ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಎಲ್ಲರೂ ನಗುಮುಖ ಬೀರಿ ಖುಷಿಪಟ್ಟು ಕರತಾಡನ ಮಾಡುತ್ತಾ “Happy Birthday to you!” ಎಂದು ಒಕ್ಕೊರಲಿನಿಂದ ರಾಗಬದ್ದವಾಗಿ ಹಾಡುತ್ತಾರೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ವ್ಯಕ್ತಿಯ ಹೆಸರನ್ನು ಆ ಹಾಡಿಗೆ ಜೋಡಿಸಿ ಶುಭ ಹಾರೈಸುವುದು ಲೋಕಾರೂಢಿ. ಆದರೆ ಮಗುವಾಗಿ ಅಳುತ್ತಾ ಹುಟ್ಟಿದ ದಿನದಂದು ಹೀಗೆ ಹಾರೈಸುವುದು ಸರಿಯೇ? ಅದು ಖುಷಿಪಡುವ ದಿನವೇ? ಎಂಬ ಪ್ರಶ್ನೆ ಬಹಳ ದಿನಗಳಿಂದ ನಮ್ಮನ್ನು ಕಾಡಿಸಿದೆ. ಹಳ್ಳಿಗಳಲ್ಲಿ ಜಗಳವಾದಾಗ ತನಗಾಗದ ವ್ಯಕ್ತಿಯನ್ನು ಕುರಿತು “ಹುಟ್ಟಿದ್ ದಿನ ಕಾಣಿಸಿಬಿಡ್ತೇನೆ ನೋಡು” ಎಂದು ಸಿಟ್ಟಿನಿಂದ ಬೈಯುವುದನ್ನು ನೀವು ಕೇಳಿರಬಹುದು. ಭಾರತೀಯ ದಾರ್ಶನಿಕರ ದೃಷ್ಟಿಯಲ್ಲಿ ಹುಟ್ಟು ಸಂತಸಪಡುವ ದಿನವಲ್ಲ, “ಗರ್ಭೋಪನಿಷತ್” ಎಂಬ ಒಂದು ಉಪನಿಷತ್ ಇದೆ. ಅದರ ಪ್ರಕಾರ ತಾಯಗರ್ಭದಲ್ಲಿರುವ ಶಿಶುವು 6ನೆಯ ತಿಂಗಳಲ್ಲಿ ಮುಖ, ಕಣ್ಣು, ಕಿವಿ, ಮೂಗು ಇತ್ಯಾದಿ ಇಂದ್ರಿಯಗಳನ್ನು ಪಡೆಯುತ್ತದೆ. 7ನೆಯ ತಿಂಗಳಲ್ಲಿ ಜೀವಾತ್ಮ ಪ್ರವೇಶಿಸಿ ಹಿಂದಿನ ಜನ್ಮಜನ್ಮಾಂತರಗಳ ಬಾಧೆಯನ್ನು ಸ್ಮರಿಸಿಕೊಂಡು ದುಃಖಿಸುತ್ತದೆ. 8ನೆಯ ತಿಂಗಳಲ್ಲಿ ಶಿಶುವು ಸಂಪೂರ್ಣವಾಗಿ ಬೆಳೆಯುತ್ತದೆ. ಹುಟ್ಟುವುದೆಂದರೆ ಜೀವಾತ್ಮನು ಶರೀರದ ಬಂಧನಕ್ಕೆ ಒಳಗಾಗುವುದು. ಆದಕಾರಣ ಈ ಶರೀರದೊಳಗಿರುವ ಆತ್ಮವನ್ನು ಬದ್ಧಜೀವಾತ್ಮ ಎಂದು ಕರೆಯುತ್ತಾರೆ. ಮನುಷ್ಯನ ಗುರಿ ಈ ಭವಬಂಧನದಿಂದ ಪಾರಾಗಿ ನಿತ್ಯಸುಖವಾದ ಮುಕ್ತಿಯನ್ನು ಪಡೆಯುವುದು. “ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು ಇನ್ನೆಂದಿಗೆ ಮೋಕ್ಷವಹುದೋ ಕೂಡಲ ಸಂಗಮದೇವಾ?" ಎಂದು ಉದ್ಗರಿಸುತ್ತಾರೆ ಬಸವಣ್ಣನವರು. ಮಗು ಅಳುತ್ತಾ ಹುಟ್ಟಿದರೂ ತಂದೆ ತಾಯಿಗಳು, ಬಂಧು ಮಿತ್ರರು ಸಂತೋಷಪಡುತ್ತಾರೆ. ಅವರಿಗೆ ಮಾತ್ರ ಜನುಮದಿನ ಖುಷಿಯ ದಿನವೇ ಹೊರತು ಮಗುವಿಗಲ್ಲ! ಆದರೂ ಅಳುತ್ತಾ ಹುಟ್ಟಿದ ಮಗು ಮುಂದೆ ಮುಗುಳುನಗೆ ಬೀರಿ ಎಲ್ಲರನ್ನೂ ಖುಷಿಪಡಿಸುವಂತೆ ಜೀವನದಲ್ಲಿ ನಗು ನಗುತ್ತಾ ಬದುಕಲು ಬರುತ್ತದೆ. ಆದರೆ ಕೆಲವೊಮ್ಮೆ ಕೌಟುಂಬಿಕ ಜೀವನದಲ್ಲಿ ಹಠಾತ್ತಾಗಿ ಬಂದೆರಗುವ ಸಂಕಷ್ಟಗಳು, ಘೋರ ವಿಪತ್ತುಗಳು ಮುಖದಲ್ಲಿದ್ದ ಮಂದಹಾಸವನ್ನು ಹೊಸಕಿಹಾಕಿಬಿಡುತ್ತವೆ. ಅಂತಹ ಸಂದರ್ಭಗಳಲ್ಲಿ ಬಸವಣ್ಣನವರೂ ಸಹ ವಿಷಾದದಿಂದ ಹೇಳುವ ಮಾತು:
ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ, ಶಿವ ನಿನಗಿನಿತು ಕೃಪೆಯಿಲ್ಲ
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ?
ಪರಲೋಕ ದೂರನ ಏಕೆ ಹುಟ್ಟಿಸಿದೆ?
ಕೂಡಲ ಸಂಗಮದೇವಾ ಕೇಳಯ್ಯಾ,
ಎನಗಾಗಿ ಮತ್ತೊಂದು ತರುಮರನಿದ್ದಿಲ್ಲವೆ?
“ದೇವರೇ ನನ್ನನ್ನು ಮನುಷ್ಯನನ್ನಾಗಿ ಹುಟ್ಟಿಸುವ ಬದಲು ಯಾವುದೋ ಗಿಡಮರವನ್ನಾಗಿ ಹುಟ್ಟಿಸಬಾರದಿತ್ತೆ?” ಎನ್ನುವ ಈ ಉದ್ಗಾರ ತೀವ್ರತರವಾದ ವೇದನೆಯಿಂದ ಕೂಡಿದೆ. ಬಸವಣ್ಣನವರು ಲೌಕಿಕ ಜೀವನದಲ್ಲಿ ಬಹಳ ನೋವನ್ನು ಅನುಭವಿಸಿದ ಯಾವುದೋ ವಿಷಮ ಸಂದರ್ಭದಲ್ಲಿ ಈ ವಚನವನ್ನು ಬರೆದಂತೆ ಕಾಣುತ್ತದೆ. ಮನುಷ್ಯನಿಗೆ ದುಃಖ-ದುಮ್ಮಾನಗಳು ಇರುವಂತೆ ಗಿಡಮರಗಳಿಗೂ ಇರುವುದಿಲ್ಲವೆ? ಮನುಷ್ಯನು ಎಲ್ಲಿಗೆ ಬೇಕಾದರಲ್ಲಿಗೆ ಹೋಗಿ ಬದುಕು ಕಟ್ಟಿಕೊಳ್ಳುವಂತೆ ಮರಗಳು ತಿಳಿದಲ್ಲಿಗೆ ಹೋಗಲು ಬರುತ್ತದೆಯೇ? ನಿಂತಲ್ಲಿ ನಿಂತೇ ಇರಬೇಕು. “ಮರಕ್ಕೆ ಮೂಲ ಕೊಡಲಿ ಕಾವು” ಎಂಬಂತೆ ತಾನು ಬೆಳೆಸಿದ ರೆಂಬೆಕೊಂಬೆಗಳೇ ಕಾಡುಗಳ್ಳರ ಕೈಸೇರಿ ಕೊಡಲಿಗೆ ಆಹುತಿಯಾಗುತ್ತವೆ, ಕಾಳ್ಗಿಚ್ಚಿಗೆ ಬಲಿಯಾಗುತ್ತವೆ, ಸಿಡಿಲು ಬಡಿದರೆ ಸುಟ್ಟು ಬೂದಿಯಾಗುತ್ತವೆ, ಬಿರುಗಾಳಿ ಎದ್ದಾಗ ನೆಲಕ್ಕೆ ಉರುಳಿ ಬೀಳುತ್ತವೆ. ಎಂತಹ ಸಂದರ್ಭದಲ್ಲೂ ಪ್ರತಿಭಟಿಸಲು, ರಕ್ಷಿಸಿಕೊಳ್ಳಲು, ಓಡಿಹೋಗಲು ಮರಗಳಿಗೆ ಸಾಧ್ಯವಾಗುವುದಿಲ್ಲ. ಇಂತಹ ಕರುಣಾಜನಕ ಸ್ಥಿತಿಯಲ್ಲಿ ಸದಾ ಬದುಕುವ ಮರವು “ಕರುಣ ಬಂದರೆ ಕಾಯೋ, ಮರಣ ಬಂದರೆ ಒಯ್ಯೋ” ಎಂದು ದೇವರನ್ನು ಪ್ರಾರ್ಥಿಸುವುದನ್ನು ಬಿಟ್ಟರೆ ಬೇರೆ ವಿಧಿಯಿಲ್ಲ!
ಮನುಷ್ಯನಿಗೆ ಒಂದು ಕಡೆ ಲೌಕಿಕ ಕಾಮನೆಗಳ ಈಡೇರಿಕೆಯ ಹಂಬಲ ಮತ್ತೊಂದು ಕಡೆ ಪಾರಮಾರ್ಥಿಕ ಸತ್ಯವನ್ನು ಅರಿಯುವ ಹಂಬಲ, ಬೆಟ್ಟ ಗುಡ್ಡಗಳನ್ನು ದಾಟಿ ಕಡಲಿನ ಕಡೆಗೆ ಧಾವಿಸುವ ತೊರೆಯಂತೆ ಎಂದೂ ಕಾಣದ, ಆದರೆ ಪರಂಪರೆಯಲ್ಲಿ ಕೇಳಿ ಬಂದ ವಿಶ್ವಚೈತನ್ಯವೆಂಬ ಅಪಾರ ವಾರಿಧಿಯಲ್ಲಿ ಲೀನವಾಗುವ ಆಸೆ. ಜಗದ ಜಂಜಡಗಳಲ್ಲಿ ಮುಳುಗಿದ ಜೀವಕ್ಕೆ ಊಹೆಗೂ ನಿಲುಕದ ಅನಂತ ಆನಂದ ಸಾಗರವನ್ನು ಸೇರಿ ಮಿಂದು ನಲಿದಾಡುವ ಬಯಕೆ. ಅಂತಹ ಜೀವಾತ್ಮನ ತುಡಿತ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ “ತೊರೆಯ ಹಂಬಲ” ಎಂಬ ಕವಿತೆಯಲ್ಲಿ ತುಂಬಾ ಮನೋಜ್ಞವಾಗಿ ಮೂಡಿ ಬಂದಿದೆ:
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ?
ಕಡಲನು ಕೂಡಬಲ್ಲೆನೆ ಒಂದು ದಿನ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.16-6-2022.