ಶಿವಮೊಗ್ಗದ ಸಾಂಸ್ಕೃತಿಕ ರಾಯಭಾರಿ ಮೋಹನ್ ಭಾರದ್ವಾಜ್ ಅವರ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರ ಸಂತಾಪ.

  •  
  •  
  •  
  •  
  •    Views  

Dear Srinivas S/o Mohan Bharatdwaj,

Very sad to know that your father passed away. I was planning to see him on the 12th of this month when I came to Shimoga. But somehow I had to postpone it due to one meeting in the village Suguru. I wish I had seen him and talked to him. He was a guiding force for my early education.

May God bless his soul with eternal Peace!

- Taralabalu Swamiji

-----------------------------------

60 ವರ್ಷಗಳ ಬಾಂಧವ್ಯವನ್ನು  ಅನಾವರಣಗೊಳಿಸಿದ ಶ್ರೀ ಜಗದ್ಗುರುಗಳವರ ಸಂದೇಶ

ಶಿವಮೊಗ್ಗ 22-6-2022 : ಶಿವಮೊಗ್ಗ ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾದ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ ಎಂ. ಭಾರಧ್ವಾಜ್(89) ಅವರು ಮಂಗಳವಾರ ಸಂಜೆ ವಯೋಸಹಜ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೋಹನ್ ಭಾರದ್ವಾಜ್ ರವರ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿ,

ಇದೆ ತಿಂಗಳ 12 ರಂದು ಶಿವಮೊಗ್ಗಕ್ಕೆ ಬಂದಾಗ ನಿಮ್ಮ ತಂದೆಯವರನ್ನು ಭೇಟಿ ಮಾಡುವ ಯೋಚನೆಯಲ್ಲಿದ್ದೆವು ಆದರೆ ಸೂಗೂರಿನಲ್ಲಿ ನಿಗದಿಯಾಗಿದ್ದ  ಸಭೆಯ ಕಾರಣದಿಂದ ಮುಂದೂಡಲಾಯಿತು. ಅವರೊಂದಿಗೆ ಫೋನಿನಲ್ಲಿ ಮಾತನಾಡಿದೆವು. 

ನಾವು 1960 ರಲ್ಲಿ ಶಿವಮೊಗ್ಗದ ಸರಕಾರಿ ಪ್ರೌಢಶಾಲೆಗೆ ಸೇರುವಾಗ ಯಾವ ಐಚ್ಚಿಕ ವಿಷಯಗಳನ್ನು ತೆಗೆದುಕೊಳ್ಳಬೇಕೆಂಬ ಪರಿಜ್ಞಾನ ಗ್ರಾಮೀಣ ಪ್ರದೇಶದಿಂದ ಬಂದ ನಮಗೆ ಇರಲಿಲ್ಲ. ಈಗಿನ ಪ್ರೌಢಶಾಲೆಯ ಮಕ್ಕಳಂತೆ ಎಲ್ಲರೂ ಸಮಾನವಾಗಿ ಓದುವ ಪಠ್ಯಕ್ರಮ ಆಗ ಇರಲಿಲ್ಲ. ಈಗ ಪಿಯುಸಿ ಯಲ್ಲಿ ಆಯ್ಕೆ ಮಾಡಿಕೊಳ್ಳುವಂತೆ ಆಗ ಪ್ರೌಢಶಾಲೆಯ 8 ನೆಯ ತರಗತಿಯಲ್ಲಿಯೇ Arts ಅಥವಾ Science ವಿಷಯಗಳನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಅದರಲ್ಲಿಯೂ ಸೈನ್ಸ್ ವಿಷಯದಲ್ಲಿ ಪಿಸಿಎಂ ಅಥವಾ ಪಿಸಿಬಿ ಎಂಬ ಐಚ್ಛಿಕ ವಿಷಯಗಳಿದ್ದವು. ಅಷ್ಟಾಗಿ ವಿದ್ಯಾವಂತರಲ್ಲದಿದ್ದರೂ ಹಿರಿದಾದ ಜೀವನಾನುಭವವುಳ್ಳವರಾಗಿದ್ದ ನಮ್ಮ ಪೂರ್ವಾಶ್ರಮದ ತಂದೆ ಈಶ್ವರಯ್ಯನವರು ತಮ್ಮ ವ್ಯವಹಾರದಲ್ಲಿ ನಿಕಟಸಂಪರ್ಕವಿದ್ದ ಶಿವಮೊಗ್ಗದ ದೊರೆಸ್ವಾಮಿ ಅಯ್ಯಂಗಾರ್ ರವರ ಅಂಗಡಿಗೆ ನಮ್ಮನ್ನು ಕರೆದುಕೊಂಡು ಹೋದರು. ಅವರ ಮಗ ಮೋಹನ್ ಭಾರದ್ವಾಜ್ ಅಂಗಡಿಯಲ್ಲಿ ಕುಳಿತಿದ್ದರು. ಅವರ ಹಣೆಯ ಮಧ್ಯದಲ್ಲಿ ಹುಬ್ಬುಗಳ ನಡುವೆ ಉದ್ದನೆಯ ಹಾಗೂ ತೆಳುವಾದ ಕೆಂಪು ಬಣ್ಣದ ನಾಮದ ಗೆರೆ ರಾರಾಜಿಸುತ್ತಿತ್ತು. “ನನ್ನ ಮಗನಿಗೆ ಏನನ್ನು ಓದಲು ಹೇಳಬೇಕು?” ಎಂದು ಸಲಹೆ ಕೇಳಿದರು. “The Hindu” ಆಂಗ್ಲ ಪತ್ರಿಕೆಯನ್ನು ಓದುತ್ತಿದ್ದ ಅವರು ನನ್ನತ್ತ ತಿರುಗಿ “ನಮ್ಮ ಅಂಗಡಿಯ ಬೋರ್ಡ್ ಓದಿದೀಯಾ? ಅದನ್ನು ತೆಗೆದುಕೊ” ಎಂದು ಹೇಳಿದರು. ಓಡಾಡಲು ಅವರ ಅಂಗಡಿಯಿಂದಲೇ Atlas ಕಂಪನಿಯ ಸೈಕಲ್ಲನ್ನು ತಂದೆಯವರು ಕೊಡಿಸಿದ್ದರಿಂದ ಅವರ ಅಂಗಡಿಯ ಹೆಸರು “The Popular Cycle and Motor Co” ಎಂದು ನಮಗೆ ಚೆನ್ನಾಗಿ ನೆನಪಿತ್ತು. ಒಗಟಿನೋಪಾದಿಯಲ್ಲಿದ್ದ ಅವರ ಪ್ರಶ್ನೆಯನ್ನು ಕುರಿತು ಕ್ಷಣಕಾಲ ಚಿಂತಿಸಿ ಅವರ ಅಂಗಡಿಯ ಹೆಸರಿನ ಒಂದೊಂದೇ ಪದದ ಮೊದಲನೇ ಅಕ್ಷರವನ್ನು ಗಮನದಲ್ಲಿರಿಸಿಕೊಂಡು “ನೀವು PCM = Physics, Chemistry, Mathematics ತೆಗೆದುಕೊಳ್ಳಲು ಸಲಹೆ ಮಾಡುತ್ತಿದ್ದೀರಿ” ಎಂದು ಹೇಳಿದಾಗ ಭಾರದ್ವಾಜ್ ನಕ್ಕು “ನಿಮ್ಮ ಹುಡುಗ ತುಂಬಾ ಜಾಣನಿದ್ದಾನೆ” ಎಂದು ಮೆಚ್ಚುಗೆಯ ಮಾತನ್ನಾಡಿದರು. ಅವರ ಸಲಹೆಯಂತೆಯೇ PCM ಆಯ್ಕೆ ಮಾಡಿಕೊಂಡು ಓದಲು ಆರಂಭಿಸಿದ ನಮಗೆ ಭಾರದ್ವಾಜ್ ಓದುತ್ತಿದ್ದ “The Hindu” ಇಂಗ್ಲೀಷ್ ದಿನಪತ್ರಿಕೆಯ ಹಾಳೆಗಳೇ ಅಂದು ನಮ್ಮ ಪಠ್ಯಪುಸ್ತಕಗಳನ್ನು ಹಾಳಾಗದಂತೆ ಜೋಪಾನವಾಗಿ ಇಟ್ಟುಕೊಳ್ಳಲು ರಕ್ಷಾಕವಚಗಳಾಗಿ ಬಳಕೆಯಾಗಿದ್ದವು. ಅವರ ಮನೆಗೆ ಹೋದಾಗಲೆಲ್ಲ ಸದಾ ಕೆಂಪು ಸೀರೆಯನ್ನು ಉಡುತ್ತಿದ್ದ ಅಜ್ಜಿ ಕುಮುದಮ್ಮ ಅಕ್ಕರೆಯಿಂದ ಘಮ ಘಮಿಸುವ ಬಿಸಿ ಬಿಸಿ ಕಾಫಿಯನ್ನು ತಂದುಕೊಡುತ್ತಿದ್ದರು. 

ಭಾರದ್ವಾಜ್ ಅವರ ಕಿರಿಯ ಮಗ ಶ್ರೀನಿವಾಸ್ ನಮಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇದೆಯೆಂದು ತಿಳಿದು ಇತ್ತೀಚೆಗೆ ಒಂದು ಭಾವಗೀತೆಯ ವೀಡಿಯೋ ಕಳುಹಿಸಿಕೊಟ್ಟಿದ್ದಾರೆ. ಗಾಯಕಿ ದಿವ್ಯಾ ಗಿರಿಧರ್ ಸ್ವತಃ ರಚಿಸಿ ಸುಶ್ರಾವ್ಯವಾಗಿ ಹಾಡಿದ ಆ ಭಾವಗೀತೆಯ ಆಯ್ದ ಸಾಲುಗಳು ಹೀಗಿವೆ: 

ಎಷ್ಟೇ ಊರನು ಸುತ್ತಿ ಬಂದರೂ ನನ್ನಯ ಊರಿಗೆ ಸಮವೇನು? 
ಸಾಗರವೆಂದರೆ ನನ್ನೂರು, ನನ್ನಯ ಹೆಮ್ಮೆಯ ತವರೂರು! 
ವಪ್ಪನಾಯಕ ಚೆನ್ನಮ್ಮಾಜಿಯ ಹೆಮ್ಮೆಯ ಕೆಳದಿಯ ಸಂಸ್ಥಾನ 
ಅಘೋರೇಶ್ವರನ ಇಕ್ಕೇರಿಯದು ಶಿಲ್ಪಕಲೆಯ ಅದ್ಭುತ ತಾಣ! 
ಜೋಗದಿ ಧುಮುಕುವ ತಾಯಿ ಶರಾವತಿ | 
ಕರುನಾಡಿಗೆ ಬೆಳಕನ್ನು ನೀಡಿಹಳು! 
ಕೃಷಿಕರ ಪಾಲಿಗೆ ಸ್ವರ್ಗವಿದು 
ತೆಂಗು ಕಂಗಿನ ತಾಯಿನಾಡು, ಗಂಧದ ಕಲೆಯ ನೆಲೆವೀಡು!

ಮೋಹನ್ ಭಾರದ್ವಾಜ್ ರವರು ಲಿಂಗೈಕ್ಯರಾಗಿರುವುದು  ಶಿವಮೊಗ್ಗೆಯು ಹಿರಿಯ ಸರಳ ಸಜ್ಜನಿಕೆಯ ಸಾಂಸ್ಕೃತಿಕ ಕೊಂಡಿ ಕಳಚಿಕೊಂಡತಾಗಿದೆ. ಶಿವಮೊಗ್ಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸಿದ್ದ ಪಾಪ್ಯುಲರ್ ಸೈಕಲ್ ಶಾಪ್ ಭಾರಧ್ವಾಜ್ ಎಂದೇ ಪ್ರಸಿದ್ಧರಾದ ಇವರು ಅನೇಕ ಸಂಘ ಸಂಸ್ಥೆಗಳ ಪೋಷಕರಾಗಿ, ದಾನಿಯಾಗಿ ಚಿರಪರಿಚಿತರಾಗಿದ್ದರು. ಭಾರತೀಯ ವಿದ್ಯಾಭವನದ ಶಿವಮೊಗ್ಗ ಶಾಖೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ನಮ್ಮ ಆರಂಭಿಕ ಶಿಕ್ಷಣದ ಮಾರ್ಗದರ್ಶಿಯಾದ ಮೋಹನ್ ಭಾರದ್ವಾಜ್ ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ. ತೀವ್ರ ದುಃಖದಲ್ಲಿರುವ ಪತ್ನಿ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿಗೆ   ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.

 - ಶ್ರೀ ತರಳಬಾಳು ಜಗದ್ಗುರು
ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ.