ಸುದ್ದಿರೋಚಕತೆಗಿಂತ ಸತ್ಯಸಂಗತಿ ಎತ್ತಿತೋರಿಸಿ

  •  
  •  
  •  
  •  
  •    Views  

ರಾಜ್ಯದಲ್ಲಿ ಶಿಕ್ಷಕರ ಸಂಘ, ಕಾರ್ಮಿಕರ ಸಂಘ ಇತ್ಯಾದಿ ಅನೇಕ ಸಂಘಗಳು ಇರುವಂತೆ ರಾಜ್ಯದ ಎಲ್ಲಾ ಪತ್ರಕರ್ತರನ್ನು ಒಳಗೊಂಡ ಒಂದು ಸಂಘಟನೆ ಇದೆ. ಅದರ ಹೆಸರು “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ”. ಇದು ಸ್ಥಾಪನೆಯಾಗಿದ್ದು 1932 ರಲ್ಲಿ. ಇದರ ಸಂಸ್ಥಾಪಕರು ಮಹಾನ್ ದಾರ್ಶನಿಕರೂ, ಪತ್ರಕರ್ತರೂ ಆಗಿದ್ದ ಡಿ.ವಿ.ಗುಂಡಪ್ಪನವರು. ನಾಳೆ ಅವರ ಜನುಮದಿನ (ಜುಲೈ1). ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ರವರು ಆ ಕಾಲದಲ್ಲಿ 5 ಸಾವಿರ ರೂ ಗಳನ್ನು ಈ ಸಂಘಕ್ಕೆ ಕೊಡುಗೆ ನೀಡಿದ್ದರಲ್ಲದೆ ಇದರ ಪೋಷಕರೂ ಆಗಿದ್ದರು ಎಂಬ ಸಂಗತಿ ಸ್ಮರಣೀಯ. ಆಗ ಪತ್ರಕರ್ತರ ಸಂಖ್ಯೆ ಬೆರಳೆಣಿಕೆಯಷ್ಟು ಇದ್ದು ಈಗ ಎಂಟು ಸಾವಿರಕ್ಕೂ ಹೆಚ್ಚು ಪತ್ರಕರ್ತ ಸದಸ್ಯರು ಈ ಸಂಘದಲ್ಲಿದ್ದಾರೆ. ಯಾವುದೇ ಪತ್ರಿಕೆಯ/ದೂರದರ್ಶನದ ವರದಿಗಾರರಿರಲಿ ಈ ಸಂಘದ ಸದಸ್ಯರು. ದಾವಣಗೆರೆ ಜಿಲ್ಲಾ ಘಟಕದ ಮುಂದಿನ ಮೂರು ವರ್ಷಗಳ ಕಾಲಾವಧಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಈ ತಿಂಗಳ ಮೊದಲ ವಾರದಲ್ಲಿ ಇತ್ತು. ಈ ಸಮಾರಂಭವನ್ನು ನಮ್ಮ ಸಮ್ಮುಖದಲ್ಲಿಯೇ ನಡೆಸಬೇಕೆಂಬುದು ದಾವಣಗೆರೆ ಜಿಲ್ಲಾ ಘಟಕದ ಪದಾಧಿಕಾರಿಗಳ ಆಶಯವಾಗಿತ್ತು. ಅದು ಅವರ ಶ್ರದ್ಧಾಭಕ್ತಿಯ ದ್ಯೋತಕ. ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ದೇವರ, ಗುರುಹಿರಿಯರ ಆಶೀರ್ವಾದವನ್ನು ಪಡೆದು ಆರಂಭಿಸುವುದು ಭಾರತೀಯರ ಹಿರಿದಾದ ಸಂಸ್ಕೃತಿ. 

ಪ್ರತಿಯೊಬ್ಬ ಪತ್ರಕರ್ತನಿಗೂ ವೃತ್ತಿ ಜೀವನದ ಜೊತೆಗೆ ತನ್ನದೇ ಆದ ಕೌಟುಂಬಿಕ ಜೀವನವಿರುತ್ತದೆ. ಅದರ ನಿರ್ವಹಣೆಯ ಹೊಣೆಗಾರಿಕೆ ಅವನ ಮೇಲೆ ಇರುತ್ತದೆ. ಈ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಕಳೆದ ತಿಂಗಳು ನಮ್ಮನ್ನು ಭೇಟಿಯಾದಾಗ ಅವರು ಬರೆದ “ಕೋವಿಡ್ ಕಥೆಗಳು” ಎಂಬ ಪುಸ್ತಕವನ್ನು ಕೊಟ್ಟಿದ್ದರು. ಕುತೂಹಲದಿಂದ ಓದಲು ಆರಂಭಿಸಿದಾಗ ಆ ಪುಸ್ತಕ ಕಾಲ್ಪನಿಕ ಕಟ್ಟು ಕಥೆಗಳ ಸಂಕಲನವಾಗಿರಲಿಲ್ಲ. ಕೋವಿಡ್ ಕಾಲದಲ್ಲಿ "ನಿನ್ನೆ ಇದ್ದು ಇಂದು ಇಲ್ಲವಾಗಿ ಹೋದ” ಹಲವಾರು ಪತ್ರಕರ್ತ ಕುಟುಂಬಗಳ ಕರಾಳ ಸತ್ಯದಿಂದ ಕೂಡಿದ ಕರುಳು ಹಿಂಡುವ ಕಣ್ಣೀರಿನ ಕಥೆಗಳು. ಸಾವಿಗೆ ಹೆದರಿ ಮನೆಯಲ್ಲಿ ಕ್ವಾರೆಂಟೈನ್ ಆಗದೆ “ಅಭಿಮನ್ಯುವಿನಂತೆ ನುಗ್ಗಿ ಸುದ್ದಿ ಹೆಕ್ಕಿ ತರುವ ಸವಾಲು ಮತ್ತು ಕರ್ತವ್ಯ” ನಿರ್ವಹಿಸಿ ಕೋವಿಡ್ ಚಕ್ರವ್ಯೂಹದಿಂದ ಹೊರಬರಲಾಗದೆ ಕೊನೆಯುಸಿರೆಳೆದವರ ಸಾಹಸ ಗಾಥೆಗಳು. ಎಲೆಕ್ಟ್ರಾನಿಕ್ ಮೀಡಿಯಾ ಬಂದ ಮೇಲಂತೂ “ಸಂಜೆ ಹೊತ್ತಿಗೆ ಸುದ್ದಿ ಕೊಟ್ಟರೆ ಆಯ್ತು ಅನ್ನೋ ಕಾಲ” ಹೋಯಿತು. “ಈಗಿನ ಸುದ್ದಿ ಈಗಲೇ, ನಾವೇ ಮೊದಲು ಅನ್ನೋ ಪೈಪೋಟಿಯಲ್ಲಿ” ಅನೇಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಸುದ್ದಿಮನೆಯ ಒತ್ತಡದಲ್ಲಿ ಸಾವಿನ ಮನೆ ಸೇರುತ್ತಿದ್ದಾರೆ. “ಫ್ರಂಟ್ ಲೈನ್ ವಾರಿಯರ್ಸ್” ಎಂದು ಕರೆಸಿಕೊಂಡಿದ್ದರೂ ಯಾವುದೇ ಪರಿಹಾರವಿಲ್ಲದೆ ಪರಿತಪಿಸುತ್ತಿದ್ದಾಗ ಪತ್ರಕರ್ತರ ಸಂಘವು ಹೋರಾಡಿ ಅಂತಹ ಸಂತ್ರಸ್ತ ಕುಟುಂಬಗಳಿಗೆ ಸರಕಾರದಿಂದ ಸಹಾಯಧನವನ್ನು ದೊರೆಯುವಂತೆ ಮಾಡಿದೆ. 

ವರದಿಗಾರರಾದವರಿಗೆ ಮಾನಸಿಕ ಮತ್ತು ಶಾರೀರಿಕ ಸದೃಢತೆ ಇರಬೇಕಾಗುತ್ತದೆ. ಇವರಿಗೆ ಕಾರ್ಯಾಲಯದಲ್ಲಿ ಕೆಲಸ ಮಾಡುವ ಇತರೆ ನೌಕರರಂತೆ ನಿಗದಿತ ಆಫೀಸ್ ವೇಳೆ ಎಂಬುದಿರುವುದಿಲ್ಲ. ಇವರದು ಒಂದು ರೀತಿಯಲ್ಲಿ Software ಇಂಜಿನಿಯರುಗಳಂತೆ ಸದಾ “Work from Home”! ಆದರೂ ಸಭೆ ಸಮಾರಂಭಗಳು, ಚಳುವಳಿಗಳು ಮತ್ತಿತರ ಸಂದರ್ಭಗಳನ್ನು ಮುಂಚಿತವಾಗಿಯೇ ತಿಳಿದುಕೊಂಡು ಅಲ್ಲಿಗೆ ಖುದ್ದಾಗಿ ಹೋಗಬೇಕಾಗುತ್ತದೆ. ಅಲ್ಲಿ ನಡೆಯುವುದನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ವರದಿಯನ್ನು ಬರೆದು ಮುಗಿಸಿ ಸುದ್ದಿಸಂಪಾದಕರಿಗೆ ಕಳುಹಿಸಬೇಕಾಗುತ್ತದೆ. ಚಳುವಳಿಗಳು ನಡೆಯುವಾಗ, ಪೊಲೀಸ್ ಲಾಠಿಪ್ರಹಾರ ಆಗುವಾಗ, ಪ್ರಭಾವಿ ವ್ಯಕ್ತಿಗಳ ವಿರುದ್ಧ ಬರೆಯುವಾಗ, ಸುನಾಮಿ ಭೂಕಂಪ ಮತ್ತಿತರ ಪ್ರಾಕೃತಿಕ ಅವಘಡಗಳು ಸಂಭವಿಸಿದಾಗ, ಯುದ್ಧಭೂಮಿಗೆ ಹೋಗಿ ವರದಿ ಮಾಡುವಾಗ ಪತ್ರಕರ್ತರಾದವರಿಗೆ ಎಂಟೆದೆಯೇ ಬೇಕು. ಅಂತಹ ಸಂದರ್ಭಗಳಲ್ಲಿ ಸತ್ಯಶೋಧನೆಗೆ ಹೊರಟ ಅನೇಕ ವರದಿಗಾರರು ತಮ್ಮ ಪ್ರಾಣ ತೆತ್ತಿದ್ದಾರೆ. ಇನ್ನು ಕೆಲವರು Sensational News ಮಾಡುವ ಅವಸರದಲ್ಲಿ ತಮ್ಮ ನಂಜಾದ ಲೇಖನಿಯಿಂದ ತಿವಿದು ಏನೂ ತಪ್ಪು ಮಾಡದ, ಮಾನಮರ್ಯಾದೆಗಳಿಗೆ ಅಂಜುವವರ ಪ್ರಾಣಕ್ಕೂ ಎರವಾಗಿದ್ದಾರೆ. 

ಪತ್ರಿಕಾ ವರದಿಗಳು ಸಮಾಜದ ಅಂದಂದಿನ ವಿದ್ಯಮಾನಗಳನ್ನು ಪ್ರತಿಫಲಿಸುವ ಒಂದು ಕನ್ನಡಿ ಇದ್ದಂತೆ. ಅದು ಎಷ್ಟು ಶುಭ್ರವಾಗಿದೆ ಅಥವಾ ಧೂಳಿನಿಂದ ಕೂಡಿದೆ ಎಂಬುದು ಆಯಾಯ ವರದಿಗಾರನ ಮನಃಸ್ಥಿತಿಯನ್ನು ಅವಲಂಬಿಸಿರುತ್ತದೆ. ಅದು ಕೆಲವೊಮ್ಮೆ ಒಡೆದ ಕನ್ನಡಿಯಂತೆ ತೋರಬಹುದು ಇಲ್ಲವೇ ರಾಹು ಹಿಡಿದ ಕನ್ನಡಿಯಂತೆಯೂ ಕಾಣಬಹುದು. ವರದಿಗಳು ಓದುಗರ ಅಭಿಪ್ರಾಯವನ್ನು ರೂಪಿಸುತ್ತವೆ. ಸಂಚಲನ ಸುದ್ದಿಗಳನ್ನಾಗಿ (Sensational news) ಮಾಡುವ ಭರದಲ್ಲಿ ಸಜ್ಜನರ ಮನಸ್ಸನ್ನು ಇರಿಯಬಾರದು. ಸುದ್ದಿಸಂಚಲನ ಮಾಡುವ ದೃಷ್ಟಿಯನ್ನು ಇಟ್ಟುಕೊಳ್ಳದೆ ಸತ್ಯಸಂಗತಿಯನ್ನು ಎತ್ತಿತೋರಿಸುವುದಾಗಬೇಕು. ಪತ್ರಕರ್ತರನ್ನು ಚೆನ್ನಾಗಿ ನೋಡಿಕೊಂಡರೆ ಚೆನ್ನಾಗಿ ವರದಿ ಮಾಡುತ್ತಾರೆಂಬ ನಂಬಿಕೆ ಜನರಲ್ಲಿದೆ. ಆದಕಾರಣ ಅವರಿಗೆ ಸಭೆ ಸಮಾರಂಭಗಳಲ್ಲಿ ಸಂಘಟಕರಿಂದ ಮುಖ್ಯ ಅತಿಥಿಗಳಿಗೆ ಸಮನಾದ ರಾಜಾತಿಥ್ಯ ದೊರೆಯುತ್ತದೆ. ಪತ್ರಕರ್ತನಿಗೆ ಕಾನೂನಿನ ಅರಿವು ಇರಬೇಕಾಗುತ್ತದೆ. ಕಾನೂನಿನ ಅರಿವಿನ ಜೊತೆಗೆ ನೈತಿಕತೆಯ ಜವಾಬ್ದಾರಿಯೂ ಇರಬೇಕಾಗುತ್ತದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಯ ಗೌರವ ಘನತೆಗೆ ಧಕ್ಕೆ ಬರುವಂತಹ ವರದಿಗಳನ್ನು ಮುದ್ರಿಸಿದ ಪತ್ರಿಕೆಯ ವಿರುದ್ಧ ನೊಂದವರು ನ್ಯಾಯಾಲಯಗಳಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. 

ಪತ್ರಿಕೆಗಳು ಇಲ್ಲದ ಕಾಲದಲ್ಲಿ ವರದಿಗಾರರು ಇದ್ದರೆ? ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಮೋಡವು ಯಕ್ಷನ ಪ್ರೀತಿಯ ಸಂದೇಶವನ್ನು ಆತನ ಪ್ರಿಯತಮೆಗೆ ಹೊತ್ತೊಯ್ಯೋ ಮೆಸೆಂಜರ್ ಆಗಿ ಕಾಣಿಸಿದರೆ, ಮಹಾಭಾರತದ ಸಂಜಯನು ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧದ ಸುದ್ದಿಯನ್ನು ಪ್ರತ್ಯಕ್ಷದರ್ಶಿಯಾಗಿ ವಿವರಿಸಿದ ಮೊದಲ ವರದಿಗಾರನಾಗಿ ಕಾಣಿಸುತ್ತಾನೆ. ಬೆಳಗಿನ ಹೊತ್ತು ಕಾಫಿಯನ್ನು ಗುಟುಕರಿಸುತ್ತಾ ಪೇಪರ್ ಓದುತ್ತಿರುವವರನ್ನು “ಈ ದಿನ ಏನ್ ಸುದ್ದಿ!” ಎಂದು ಕೇಳುವಂತೆ “ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ” (ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಕಾದಾಡಲು ಸೇರಿರುವ ನನ್ನ ಮಕ್ಕಳು ಮತ್ತು ಪಾಂಡವರು ಏನು ಮಾಡಿದರು?) ಎಂದು ಧೃತರಾಷ್ಟ್ರನು ಸಂಜಯನನ್ನು ಕೇಳುತ್ತಾನೆ. ಯುದ್ಧಭೂಮಿಯಲ್ಲಿ ನಡೆದ ವಿದ್ಯಮಾನಗಳೆಲ್ಲವನ್ನೂ ಕುರಿತು ಸಂಜಯ ನೀಡಿದ ವಿವರವಾದ ವರದಿ ಭಗವದ್ಗೀತೆಯ ಆರಂಭದ ಅಧ್ಯಾಯದಲ್ಲಿ ದಾಖಲಾಗಿದೆ. ಈ ವರದಿಯ ವಿಶೇಷವೆಂದರೆ ಸಂಜಯನು ಯಾರ ಪರವನ್ನೂ ವಹಿಸದೆ ನಿಜ ಸಂಗತಿಗಳನ್ನು ಕ್ರೋಢೀಕರಿಸಿ ವಿಶ್ಲೇಷಣೆ (analyze) ಮಾಡಿ ಹೇಳಿದ್ದು, ಎರಡೂ ಕಡೆಯವರು ಯುದ್ದಮಾಡಲು ಸನ್ನದ್ದರಾಗಿ ತಮ್ಮ ತಮ್ಮ ಶಂಖಗಳನ್ನು ಗಟ್ಟಿಯಾಗಿ ಊದಿದರು ಎಂದು ವಿವರಿಸುತ್ತಾ “ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್” ಅಂದರೆ ಪಾಂಡವರು ಮೊಳಗಿಸಿದ ಶಂಖನಾದ ಭೂಮ್ಯಾಕಾಶವನ್ನು ಆವರಿಸಿ ನಿನ್ನ ಮಕ್ಕಳ ಹೃದಯವನ್ನು ತಲ್ಲಣಗೊಳಿಸಿತು ಎಂದು ಹೇಳುತ್ತಾನೆ. ಈ ಮಾತು ಧೃತರಾಷ್ಟ್ರನಿಗೆ ಕೇಳಲು ಎಷ್ಟೇ ಕರ್ಣಕಠೋರವೆನಿಸಿದರೂ ನಡೆದ ಘಟನಾವಳಿಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಸಂಜಯ ವರದಿ ಮಾಡಿದ್ದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ. ಪುರಾಣ ಪುಣ್ಯಕಥೆಗಳಲ್ಲಿ ಬರುವ ನಾರದನನ್ನು ಸಂಜಯನಿಗಿಂತಲೂ ಮೊದಲ ವರದಿಗಾರನೆಂದು ಕೆಲವರು ಹೇಳುತ್ತಾರೆ. ಆದರೆ ಅವನು ಚಾಡಿಕೋರನೆಂದು ಹೀಗಳೆಯುವವರೂ ಇದ್ದಾರೆ. ಆದರೆ ಅವನು ಏನೇ ಹೇಳಿದರೂ ಅದರ ಹಿಂದಿನ ಆಶಯ ಒಳ್ಳೆಯದೇ ಆಗಿತ್ತು ಎಂದು ಸಮರ್ಥನೆ ಮಾಡುವವರೂ ಇದ್ದಾರೆ.

 ಪತ್ರಿಕಾಧರ್ಮವನ್ನು ಪಾಲಿಸುವ ಪತ್ರಕರ್ತರನ್ನು ಸುದ್ದಿ ಸಂಗ್ರಹ ಮಾಡುವ ದುಂಬಿಗಳು ಎನ್ನಬಹುದು. ದುಂಬಿಯು ಇಡೀ ದಿನವೆಲ್ಲಾ ಹೊರಗೆ ಹಾರಿ ಹೋಗಿ ಅರಳಿದ ಹೂಗಳ ಮೇಲೆ ಕುಳಿತು ಮಕರಂದವನ್ನು ಹೀರಿ ಸಂಜೆಯೊಳಗೆ ಜೇನುಗೂಡಿಗೆ ಬಂದು ಜೇನುತುಪ್ಪವನ್ನು ತಯಾರಿಸುವಂತೆ ಪತ್ರಕರ್ತನು ತನಗೆ ನಿಗದಿಪಡಿಸಿದ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಿಂದ ಸುದ್ದಿಯನ್ನು ಸಂಗ್ರಹಿಸಿ ಕಳುಹಿಸಬೇಕಾಗುತ್ತದೆ. ಸುದ್ದಿಯನ್ನಾಗಿ ಮಾಡಲು ಬೇಕಾದ ಮಾಹಿತಿಯನ್ನು ಬಲ್ಲ ಮೂಲಗಳಿಂದ ಸಂಗ್ರಹಿಸುವುದು, ದೊರೆತ ಮಾಹಿತಿ ಸರಿಯೇ ತಪ್ಪೇ ಎಂದು ಪರಿಶೀಲಿಸುವುದು ಮತ್ತು ಅದನ್ನು ವಿಶ್ಲೇಷಣೆ ಮಾಡಿ ವರದಿ ಮಾಡಲು ಯೋಗ್ಯವೇ ಎಂದು ತೀರ್ಮಾನ ಕೈಗೊಳ್ಳುವುದು ಪತ್ರಕರ್ತನ ಹೊಣೆಗಾರಿಕೆ. ಇದು ಒಂದು ರೀತಿಯಲ್ಲಿ “ಶ್ರೋತವ್ಯಂ, ಮಂತವ್ಯಂ, ನಿಧಿಧ್ಯಾಸಿತವ್ಯಂ” ಅಂದರೆ ಕೇಳುವುದು, ಮನನ ಮಾಡಿಕೊಳ್ಳುವುದು ಮತ್ತು ಚಿಂತನೆ ಮಾಡುವುದು ಎನ್ನುವ ಉಪನಿಷತ್ತಿನ ಉಪದೇಶಕ್ಕೆ ಸಮನಾಗಿದೆ. ಕೆಲವೊಮ್ಮೆ ದುಂಬಿಗಳು ದಾರಿಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿರುವ ವ್ಯಕ್ತಿಗಳನ್ನು ಕಚ್ಚುವಂತೆ ಯಾರದೋ ಪ್ರಚೋದನೆಯಿಂದ ಕೆಲವು ಪತ್ರಕರ್ತರು ಸ್ಥಾನಮಾನವುಳ್ಳ ಪ್ರತಿಷ್ಠಿತ ವ್ಯಕ್ತಿಗಳನ್ನು ಕಚ್ಚುತ್ತಾರೆ, ಇಲ್ಲವೇ ಸತ್ಯಸಂಗತಿಯನ್ನು ತಿರುಚಿ ಬರೆದು ಅವರ ಬಗ್ಗೆ ಬೇರೆಯವರ ಮನಸ್ಸಿನಲ್ಲಿ ತಪ್ಪು ಗ್ರಹಿಕೆಯುಂಟಾಗುವಂತೆ ಮಾಡುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳು. ಕಾರ್ಯಾಂಗ ತಪ್ಪು ಮಾಡಿದರೆ ಅದನ್ನು ನಿಯಂತ್ರಿಸುವ ಶಕ್ತಿ ಶಾಸಕಾಂಗಕ್ಕೆ ಇದೆ. ಇವೆರಡೂ ತಪ್ಪು ಮಾಡಿದರೆ ಅವುಗಳನ್ನು ನಿಯಂತ್ರಿಸುವ ಶಕ್ತಿ ನ್ಯಾಯಾಂಗಕ್ಕೆ ಇದೆ. ಇವು ಮೂರನ್ನೂ ನಿಯಂತ್ರಿಸುವ ಶಕ್ತಿ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆನಿಸಿದ ಪತ್ರಿಕಾರಂಗಕ್ಕೆ ಇದೆ. ಅದನ್ನು ದುರುಪಯೋಗಪಡಿಸಿಕೊಳ್ಳುವುದು ಹೇಯಕೃತ್ಯ. ನೂರು ವರ್ಷಗಳ ಹಿಂದೆ ಸ್ವಯಂ ಪತ್ರಕರ್ತರಾಗಿ ಸತ್ಯ ಮತ್ತು ಅಹಿಂಸೆಯ ಕೂರಲಗನ್ನು ಹಿಡಿದು ತನ್ನನ್ನೇ ದಂಡಿಸಿಕೊಂಡು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧೀಜಿ ಹೇಳುವ ಈ ಮುಂದಿನ ಕಟುವಾದ ಮಾತು ಪತ್ರಿಕಾರಂಗಕ್ಕಿಂತಲೂ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಅನ್ವಯಿಸುವಂತೆ ತೋರುತ್ತದೆ. ಇತ್ತೀಚೆಗೆ ಸ್ಮಾರ್ಟ್ ಫೋನ್ ಬಳಕೆದಾರರೆಲ್ಲರೂ ಪತ್ರಕರ್ತರಾಗಿ ಪರಿಣಮಿಸಿದ್ದಾರೆ! ಪತ್ರಿಕಾರಂಗದಲ್ಲಿನ ಆಗಿನ ಪ್ಲೇಗ್ ಮಹಾಮಾರಿ ಈಗಿನ ವಾಟ್ಸಾಪ್ ಮತ್ತು ಫೇಸ್ಬುಕ್ ಗಳಲ್ಲಿ ಕೊರೊನಾ ಮಹಾಮಾರಿಯಾಗಿದೆ!

“The newspaperman has become a walking plague. 
He spreads the contagion of lies and calumnies” 

(ಪತ್ರಕರ್ತ ಎಲ್ಲೆಡೆ ಹರಡುವ ಮಹಾಮಾರಿ ಪ್ಲೇಗ್ ಇದ್ದಂತೆ. ಸುಳ್ಳು ಮತ್ತು ಮಿಥ್ಯಾರೋಪಗಳ ಸಾಂಕ್ರಾಮಿಕ ರೋಗವನ್ನು ಆತ ಸುಲಭವಾಗಿ ಹರಡಬಲ್ಲ!)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ. 30-6-2022.