ಕೊಡುಗೈ ದಾನಿಗಳಾದ ಶರಣ ಜಿ.ಆರ್. ಪರಮೇಶ್ವರಪ್ಪನವರು ಶಿವೈಕ್ಯ : ಶ್ರೀ ತರಳಬಾಳು ಜಗದ್ಗುರುಗಳವರು ಸಂತಾಪ

  •  
  •  
  •  
  •  
  •    Views  

ಸಿರಿಗೆರೆ: ಚಿತ್ರದುರ್ಗ ತಾಲ್ಲೂಕು ಗೊಡಬನಹಾಳ್ ಗ್ರಾಮದ ಶರಣ ಜಿ.ಆರ್. ಪರಮೇಶ್ವರಪ್ಪ, ನಿವೃತ್ತ ಡೆಪ್ಯುಟಿ ಕಮೀಷನರ್ ಆಫ್ ಪೋಲೀಸ್, ಬೆಂಗಳೂರು ಇವರು ತಮ್ಮ ಪತ್ನಿಯಾದ ಲಿಂ|| ಶ್ರೀಮತಿ ಸರೋಜಮ್ಮ (ತವರೂರು ಕಂದಗಲ್ಲು, ದಾವಣಗೆರೆ ತಾಲ್ಲೂಕು) ಇವರ ಹೆಸರಿನಲ್ಲಿ ಗ್ರಾಮೀಣ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ 15 ಲಕ್ಷ ರೂ.ಗಳ ದತ್ತಿ ನಿಧಿಯನ್ನು ಸ್ಥಾಪಿಸಿ, ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶ್ರೀ ಗುರುಶಾಂತೇಶ್ವರ ಪ್ರೌಢಶಾಲೆ,  ಗೊಡಬನಹಾಳ್ ಮತ್ತು ಶ್ರೀ ಹೆಚ್. ಸಿದ್ಧವೀರಪ್ಪ ಪ್ರೌಢಶಾಲೆ, ಕಂದಗಲ್ಲು, ಈ ಶಾಲೆಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿನಿಯಂತೆ ಒಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಸಿರಿಗೆರೆಯಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಅಂದರೆ ಪಿಯುಸಿ ವಿದ್ಯಾಭ್ಯಾಸವನ್ನು ಮುಂದುವರೆಸಲು ಉಚಿತ ಊಟ, ವಸತಿ ಮತ್ತು ಕಾಲೇಜು ಶುಲ್ಕವನ್ನು ನೀಡಲಾಗುತ್ತಿದ್ದು, ಇದರಂತೆ ಅನೇಕ ವಿದ್ಯಾರ್ಥಿನಿಯರು ಈ ದತ್ತಿ ನಿಧಿಯ ಉಪಯೋಗ ಪಡೆದುಕೊಂಡಿರುತ್ತಾರೆ.

ಈ ದತ್ತಿ ನಿಧಿಯ ಸ್ಥಾಪಕರಾದ, ಕೊಡುಗೈ ದಾನಿಗಳಾದ ಶರಣ ಜಿ.ಆರ್. ಪರಮೇಶ್ವರಪ್ಪನವರು ದಿನಾಂಕ 1.7.2022 ರಂದು ಶಿವೈಕ್ಯರಾಗಿದ್ದಾರೆಂಬ ದುಃಖಕರ ಸಂಗತಿ ತಿಳಿದು ಬಂದಿರುತ್ತದೆ.

ಈ ಬಗ್ಗೆ  ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಶಿವೈಕ್ಯರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುತ್ತಾರೆ. ಶ್ರೀ ಜಗದ್ಗುರುಗಳವರು ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿದ್ದಾಗ ಈ ಸುದ್ದಿ ತಿಳಿಯಿತು. ದಿನಾಂಕ 2.7.2022 ರಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ಇವರ ಮನೆಗೆ  ತೆರಳಿ ಶಿವೈಕ್ಯರಾದ ಶರಣ ಜಿ.ಆರ್. ಪರಮೇಶ್ವರಪ್ಪನವರಿಗೆ ಪುಷ್ಪಾಂಜಲಿ ಸಲ್ಲಿಸುವ ಮುಖಂತರ ಅವರಿಗೆ ಗೌರವ ಸಲ್ಲಿಸಲಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದ್ದಾರೆ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಶಿವಶರಣರು ಕರುಣಿಸಲೆಂದು ಆಶಿಸಿದ್ದಾರೆ.

ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೇ ಮಹಾನವಮಿ.