ಸಾಮಾಜಿಕ ಕಳಕಳಿಯ ಸಾಕ್ಷಿರೂಪ ಶ್ರೀ ತರಳಬಾಳು ಜಗದ್ಗುರುಗಳವರು
ಹನ್ನೆರಡನೇ ಶತಮಾನದಲ್ಲಿ ವಿಶ್ವಬಂಧು ಮರುಳಸಿದ್ಧರಿಂದ ಸ್ಥಾಪಿತಗೊಂಡ ತರಳಬಾಳು ಜಗದ್ಗುರು ಪೀಠವು ಇಂದು ಉಚ್ಛಾಯಮಾನವಾಗಿ ಬೆಳಗಲು ಕಾರಣೀಭೂತರು ಶ್ರೀ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ತದನಂತರ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ವಿಶ್ವದಾದ್ಯಂತ ಹೆಸರು ಪಡೆಯಲು ಕಾರಣೀಭೂತರಾದವರು ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಶ್ರೀಮಠದ ಹೆಸರು ಅಷ್ಟ ದಿಕ್ಕುಗಳಲ್ಲಿ ಪಸರಿಸಲು ಪೂಜ್ಯ ಹಿರಿಯ ಶ್ರೀಗಳು ಹಾಗೂ ಪೂಜ್ಯ ಶ್ರೀಗಳು ಕಾರಣರು.
1962 ರಲ್ಲಿ ಗ್ರಾಮೀಣ ಭಾಗದ ಜನತೆಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಜಾತಿ, ಮತ, ಪಂಥವೆನ್ನದೇ ದೀನ-ದಲಿತ ಹಿಂದುಳಿದ ವರ್ಗಗಳ ಜನತೆಗೆ ಆಶಾಕಿರಣವಾಗಿ ನಾಡಿನ ಹಲವಾರು ಜಿಲ್ಲೆಗಳಲ್ಲಿ ಶಾಲಾ ಕಾಲೇಜು, ಹಾಸ್ಟೆಲ್ ಗಳನ್ನು ನಿರ್ಮಿಸಿ ಸಹ ಪಂಕ್ತಿ ಭೋಜನವನ್ನು ವ್ಯವಸ್ಥೆ ಮಾಡಿ, ಇವನಾರವ ಇವನಾರವ ಎನ್ನದೇ "ಇವ ನಮ್ಮವ ಇವ ನಮ್ಮವ" ಎನ್ನುವ ಕೈಂಕರ್ಯವನ್ನು ಕೈಗೊಂಡವರು ನಮ್ಮ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
1979ನೇ ಇಸ್ವಿಯಲ್ಲಿ ಶ್ರೀ ತರಳಬಾಳು ಗುರುಪರಂಪರೆಯ 21ನೇ ಜಗದ್ಗುರುಗಳಾಗಿ ನಿಯುಕ್ತಿಯಾದ ಶ್ರೀ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಪದವಿ, ಆಸ್ಟ್ರೀಯಾದ ವಿಯನ್ನಾದಿಂದ ಡಾಕ್ಟರೇಟ್ ಪದವಿ ಪಡೆದ ಮಹಾ ಮೇಧಾವಿಗಳು. ಪೂಜ್ಯ ಶ್ರೀಗಳು ಸಾಮಾಜಿಕ, ವೈಜ್ಞಾನಿಕ ಚಿಂತನೆ, ವೈಚಾರಿಕತೆ, ಸಾಮಾಜಿಕ ಕಳಕಳಿಯಿಂದ ಶ್ರೀಮಠದ ಕೀರ್ತಿಯನ್ನು ದೇಶ ವಿದೇಶಕ್ಕೂ ಪಸರಿಸುವಂತೆ ಮಾಡಿದರು. ಬಡತನ, ಅನಕ್ಷರತೆ, ಮೂಡನಂಬಿಕೆಗಳಿಂದ ಹಾಗೂ ತಾರತಮ್ಯ, ತಿರಸ್ಕಾರಗಳಿಗೆ ಒಳಗಾಗಿದ್ದ ಸಮಾಜವಿಂದು "ನಿನಗೆ ಸಮ ನಾನು" ಎಂದು ಹೆಮ್ಮೆಯಿಂದ ತಲೆಯೆತ್ತಿ ನಿಲ್ಲಲು ಉಭಯ ಶ್ರೀಗಳವರ ಸತ್ಸಂಕಲ್ಪ, ಧೈರ್ಯ, ದಿಟ್ಟತನ ಹೋರಾಟಗಳ ಫಲ. ಪಾಟೀಲ ಪುಟ್ಟಪ್ಪನವರು ಹೇಳಿರುವಂತೆ ಶ್ರೀಗಳವರು ಮೈಸೂರಿನಲ್ಲಿ ಬೆಳಗಿ, ಕಾಶಿಯಲ್ಲಿ ತೊಳಗಿ ವಿಯನ್ನಾದಲ್ಲಿ ಹೊಳೆದು ಬಂದಿದ್ದಾರೆ. ಅವರ ಕೈಯಲ್ಲಿ ಸಂಗೀತ ಸುಧೆ ಇದೆ. ಬಾಯಲ್ಲಿ ವಚನ ಜೇನು ಇದೆ, ಹೃದಯದಲ್ಲಿ ನಿಷ್ಕಪಟ ಸಂಸ್ಕೃತಿ ಇದೆ. ಅವರು ಎನಗಿಂತ ಕಿರಿಯರಿಲ್ಲ ಎಂಬ ವಿನಮ್ರತೆಯನ್ನು ತಮ್ಮಲ್ಲಿರಿಸಿಕೊಂಡು ದೊಡ್ಡವರಿಗಿಂತ ದೊಡ್ಡವರಾಗಿ ಬೆಳೆದಿದ್ದಾರೆ.
ಶ್ರೀಗಳು ಸಮಾಜದ ಹಾಗೂ ನಾಡಿನ ಬೆಳವಣಿಗೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಸಮಾಜಮುಖಿ ಕಾರ್ಯಗಳನ್ನು ಸಾಕಾರಗೊಳಿಸಿದ್ದಾರೆ. ಪ್ರಮುಖವಾಗಿ ವರುಣನ ಅವಕೃಪೆಯಿಂದ ಹತಾಶೆಗೆ ಒಳಗಾಗಿ ಸಾಕಷ್ಟು ತೊಂದರೆಯಲ್ಲಿದ್ದ ರೈತ ಸಮುದಾಯಕ್ಕೆ ಭಗಿರಥರಾದವರು. ಕರ್ನಾಟಕ ಸರ್ಕಾರದ ಜಲಯೋಜನೆಗಳು ಸಮರ್ಪಕವಾಗಿ ಸಾಕಾರಗೊಳ್ಳುವಲ್ಲಿ ಶ್ರೀಗಳು ವಹಿಸಿದಂತಹ ಪಾತ್ರ ಅದ್ವೀತಿಯ ಹಾಗೂ ಅವರ್ಣೀನೀಯ. ಅನಾವೃಷ್ಠಿಯ ಬೇಗೆಯಿಂದ ಬೇಯುತ್ತಿದ್ದ ಚನ್ನಗಿರಿ, ಜಗಳೂರು, ಭರಮಸಾಗರ, ಚಿತ್ರದುರ್ಗ, ಹೊಳಲ್ಕೆರೆ, ದಾವಣಗೆರೆ, ಬೇಲೂರು, ಸಿರಿಗೆರೆ ಮುಂತಾದ ಕಡೆಗಳಲ್ಲಿ ನದಿಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಮಳೆಗಾಲದಲ್ಲಿ ವಿದ್ಯುತ್ಯಂತ್ರಗಳ ಸಹಾಯದಿಂದ ಕೆರೆಗಳಿಗೆ ನೀರು ಹರಿಸಿ ರೈತನ ಬರದ ಬವಣೆಯನ್ನು ನೀಗಿಸಿದ ಮಹಾನ್ ಭಗೀರಥರು. ಕೆರೆಯಿಂದ ಕೆರೆಗೆ ನೀರನ್ನು ಹರಿಸಿ ರೈತನ ಮುಖದಲ್ಲಿ ಮಂದಹಾಸ ಮೂಡಲು ಕಾರಣೀಭೂತರಾದರು.
ಶ್ರೀಗಳವರು ಸಮಾಜಮುಖಿ ತರಳಬಾಳು ಹುಣ್ಣಿಮೆ ಮಹೋತ್ಸವಗಳ ಮೂಲಕ ಭಾವೈಕ್ಯತೆ, ಭ್ರಾತೃತ್ವ, ಶಾಂತಿ, ಸೌಹಾರ್ದ ಮೂಡಿಸುವುದರೊಂದಿಗೆ ನಾಡಿನ ನಾನಾ ಭಾಗಗಳಲ್ಲಿ ಹುಣ್ಣಿಮೆ ಮಹೋತ್ಸವದ ನಿಧಿಯಲ್ಲಿ ಆಸ್ಪತ್ರೆ, ಶಾಲಾ ಕಾಲೇಜು ಹಾಗೂ ಕಲ್ಯಾಣ ಮಂಟಪ ನಿರ್ಮಿಸಿ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
1994 ರಲ್ಲಿ ಶ್ರೀಗಳು ಗಲಭೆ ಪೀಡಿತ ದಾವಣಗೆರೆಯಲ್ಲಿ ಪಾದಯಾತ್ರೆ ಮಾಡಿ ಪರಿಸ್ಥಿತಿ ತಿಳಿಗೊಳಿಸಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದ್ದನ್ನು ಹಿರಿಯರು ಇಂದಿಗೂ ಸಹ ನೆನೆಯುತ್ತಾರೆ. ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ನೊಂದ ಕುಟುಂಬಗಳಿಗೆ ಪರಿಹಾರ ಕಾರ್ಯಕ್ರಮದ ಮೂಲಕ ಸಂತ್ರಸ್ಥರಿಗೆ ನೆರವಾದರು. 1993ರಲ್ಲಿ ಜಗಳೂರಿನಲ್ಲಿ ಸವರ್ಣೀಯರು ಹಾಗೂ ಹರಿಜನರ ನಡುವಿನ ತಿಕ್ಕಾಟವನ್ನು ಸಂಬಂಧಿಸಿದವರೆಲ್ಲರಿಗೂ ತಿಳಿ ಹೇಳಿ ಶಾಂತಿಯಿಂದ ಬಾಳಲು ಅನುವು ಮಾಡಿಕೊಟ್ಟರು. 2004ರಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆಯನ್ನು ನೀಡಿ ಕೊಳವೆಬಾವಿಯನ್ನು ಕೊರೆಸಲಾಯಿತು. 2010 ರಲ್ಲಿ ನೆರೆಸಂತ್ರಸ್ಥರಿಗೆ ನೆರವು ನೀಡಲಾಯಿತು. ಪ್ರಸ್ತುತ ಎರಡು ವರ್ಷಗಳಲ್ಲಿ ಕೋರೋನಾ ಭೀತಿಯ ಕಾರಣ ಹುಣ್ಣಿಮೆ ಮಹೋತ್ಸವವು ಮುಂದೂಡಲ್ಪಟ್ಟಿದೆ.
ಬೆಳೆ ವಿಮೆ ಹಾಗೂ ಬೆಳೆ ನಷ್ಟದ ಪರಿಹಾರದ ಯೋಜನೆಗಳಲ್ಲಿನ ದೋಷಗಳನ್ನು ಗ್ರಹಿಸಿದ ಶ್ರೀಗಳು ಸರ್ಕಾರ ರೂಪಿಸಿದ್ದ "ಭೂಮಿ ತಂತ್ರಾಂಶ" ದಲ್ಲಿನ ದೋಷಗಳನ್ನು ಸರಿಪಡಿಸಿ ರೈತರಿಗೆ ಸರ್ಕಾರದಿಂದ ನೀಡುವ ಪರಿಹಾರ ಧನವು ಯಾವುದೇ ಮಧ್ಯವರ್ತಿಯಿಲ್ಲದೇ ನೇರವಾಗಿ ರೈತರ ಖಾತೆಗೆ ಜಮಾ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದರು. ಹಾಗೂ ಈಗ ಈ ಸುಧಾರಿತ ತಂತ್ರಾಂಶವು ರೈತ ಸ್ನೇಹಿಯಾಗಿದೆ.
ಗ್ರಾಮೀಣ ಅಭಿವೃದ್ಧಿಯ ಕನಸನ್ನು ನನಸು ಮಾಡಲು ಶ್ರೀಗಳವರು 1982 ರಲ್ಲಿ ತರಳಬಾಳು ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ಕೇಂದ್ರ ಸರ್ಕಾರವು "ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ" ಪ್ರಶಸ್ತಿಯನ್ನು 1987 ರಲ್ಲಿ ನೀಡಿ ಗೌರವಿಸಿದೆ. ಈ ಸಂಸ್ಥೆಯ ಆಶ್ರಯದಲ್ಲಿನ ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಶ್ರೀಗಳ ಆಶಯದಂತೆ ಶಾಂತಿವನದಲ್ಲಿ ನಿರ್ಮಿಸಿರುವ ಬೃಹತ್ ಚೆಕ್ ಡ್ಯಾಂ ಅಂತರ್ಜಲ ಹೆಚ್ಚಾಗಲು ಸಹಕಾರಿಯಾಗಿದೆ. ಸುಮಾರು ಒಂದು ಸಾವಿರ ಎಕರೆ ವ್ಯಾಪ್ತಿಯ ಶಿವಕುಮಾರ ವನದಲ್ಲಿ ಗೋಶಾಲೆ ನಿರ್ಮಾಣಕಾರ್ಯ ನಡೆದಿದೆ.
ಪ್ರತಿ ಸೋಮವಾರದಂದು ಶ್ರೀಗಳವರು ಸದ್ಧರ್ಮ ನ್ಯಾಯಪೀಠವನ್ನು ನಡೆಸುತ್ತಾರೆ. ಈ ನ್ಯಾಯಪೀಠದಲ್ಲಿ ಶ್ರೀಗಳು ನೀಡುವ ತೀರ್ಪು ಕಾನೂನಿನ ನೆಲೆಗಟ್ಟಿಗಿಂತ ಧರ್ಮದ ನೆಲೆಗಟ್ಟಿನ ಮೇಲೆ ಅವಲಂಬಿತವಾಗಿರುತ್ತದೆ. ಈ ನ್ಯಾಯಪೀಠದ ವೀಕ್ಷಣೆಗೆ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಬರುವುದುಂಟು.
ಸಂಸ್ಕೃತ ಭಾಷೆ ಹಾಗೂ ಕಂಪ್ಯೂಟರ್ ಕ್ಷೇತ್ರದಲ್ಲಿ ಶ್ರೀಗಳು ಹೊಂದಿರುವ ಪ್ರೌಢಿಮೆಯಿಂದ ಎರಡೂವರೆ ಸಾವಿರ ವರ್ಷಗಳ ಹಿಂದೆ ಸಂಸ್ಕೃತ ವ್ಯಾಕರಣ ಕೋವಿದ ಪಾಣಿನಿ ಮಹರ್ಷಿಯವರ "ಅಷ್ಟಧ್ಯಾಯಿ" ಯನ್ನು "ಗಣಕಾಷ್ಟಧ್ಯಾಯಿ" ಎಂಬ ಹೆಸರಿನಲ್ಲಿ ಗಣಕ ರೂಪದಲ್ಲಿ ಸರಳಗೊಳಿಸಿದ್ದಾರೆ. ಅಂತರ್ಜಾಲದಲ್ಲಿ ಲಭ್ಯವಿರುವ ಈ ತಂತ್ರಾಂಶವನ್ನು ದೇಶ ವಿದೇಶದ ವಿಶ್ವವಿದ್ಯಾಲಯಗಳು, ವಿದ್ವಾಂಸರು ಬಳಸುತ್ತಿದ್ದಾರೆ.
ಇತ್ತೀಚಿನ ಶಿವಶಂರಣರ 22,000 ವಚನಗಳನ್ನು ಜನರ ಕೈಬೆರಳ ತುದಿಗೆ ಲಭ್ಯವಿರುವಂತೆ ಅಂಡ್ರಾಯ್ಡ್ ತಂತ್ರಾಂಶವನ್ನು ಒಳಗೊಂಡ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಗೊಳಿಸಿದ್ದಾರೆ. ಈ ವಚನಗಳನ್ನು ಇಂಗ್ಲೀಷ್, ಹಿಂದಿ, ತೆಲುಗು ಭಾಷೆಗಳಿಗೆ ಅನುವಾದ ಮಾಡಿಸಿರುವುದು ಬಸವ ತತ್ವಾಭಿಮಾನಿಗಳಿಗೆ ತುಂಬಾ ಸಹಕಾರಿಯಾಗಿದೆ.
ಹಿರಿಯ ಶ್ರೀಗಳ 70 ವರ್ಷದ ಸವಿನೆನಪಿಗೆ 1984ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ತರಳಬಾಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವು ಪ್ರಮುಖ ಸಾಂಸ್ಕೃತಿಕ ವೇದಿಕೆಗಳಲ್ಲಿ ಒಂದಾಗಿದೆ. ಸುಸಜ್ಜಿತ ಸಭಾಂಗಣ, ವಸತಿ ಸೌಲಭ್ಯ, ಗ್ರಂಥಭಂಡಾರಗಳನ್ನು ಹೊಂದಿರುವ ಇದು ಸಾಹಿತ್ಯಿಕ-ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದೆ. ಶ್ರೀಗಳವರ ನೇತೃತ್ವದಲ್ಲಿ 1997ರಲ್ಲಿ ಹತ್ತನೆಯ ವಿಶ್ವ ಸಂಸ್ಕೃತ ಸಮ್ಮೇಳನ ಯಶಸ್ವಿಯಾಗಿ ಜರುಗಿತು.
ಅಮೇರಿಕಾದ ಕೋಸ್ಟರಿಕಾದಲ್ಲಿ 1991 ರಲ್ಲಿ ಜರುಗಿದ ಸಮಾವೇಶದಲ್ಲಿ ಇಂಡೋ-ಫ್ರಾನ್ಸ್ ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಶ್ರೀಗಳವರು ಭಾಗಿಯಾಗಿರುತ್ತಾರೆ. 2003 ರಲ್ಲಿ ದಕ್ಷಿಣ ಕೋರಿಯಾದ ಸಿಯೋಲ್ ನಲ್ಲಿ ನಡೆದ ಶಾಂತಿ ಸ್ಥಾಪನೆಯ ಶೃಂಗಸಭೆಯಲ್ಲಿ ಭಾರತವನ್ನು ಶ್ರೀಗಳವರು ಪ್ರತಿನಿಧಿಸಿರುತ್ತಾರೆ. 2006 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ಜರುಗಿದ ವಿಶ್ವ ಲೋಕಸಭಾ ಸದಸ್ಯರ ಶಾಂತಿ ಸಮ್ಮೇಳನದಲ್ಲಿ ಭಾಗಿಯಾಗಿರುತ್ತಾರೆ. 1994 ಹಾಗೂ 2000ನೇ ಇಸ್ವಿಯಲ್ಲಿ ತಮ್ಮ ಅನುಯಾಯಿಗಳೊಡನೆ ವಿಶ್ವಶಾಂತಿ ಯಾತ್ರೆ ಮಾಡಿರುತ್ತಾರೆ. ವೀರಶೈವ ಸಮಾಜದ ನಾರ್ತ್ ಅಮೇರಿಕಾ ಕಾರ್ಯಕ್ರಮಗಳು ಹಾಗೂ "ಅಕ್ಕ" ಸಮ್ಮೇಳನಗಳಲ್ಲಿ ಭಾಗಿಯಾಗಿರುತ್ತಾರೆ.
ಶ್ರೀಗಳವರು ಹಲವಾರು ಕೃತಿಗಳನ್ನು ತಮ್ಮ ಲೇಖನಿಯೊಂದಿಗೆ ಹೊರತಂದಿದ್ದಾರೆ. "ರಿಲಿಜಿನ್ ಅಂಡ್ ಸೊಸೈಟಿ ಅಟ್ ಕ್ರಾಸ್ ರೋಡ್ಸ್", "ಹಿಂದು ವಿಷನ್ಸ್ ಆಫ್ ಗ್ಲೋಬಲ್ ಪೀಸ್", "ಕಮ್ಯೂನಲ್ ಕಾನ್-ಫ್ಲಿಕ್ಟ್ ಇನ್ ಇಂಡಿಯಾ", "ಹಿಂದೂಯಿಸಂ ಅಂಡ್ ಹಾರ್ಮನಿ" ಹಾಗೂ ಬೇವು ಬೆಲ್ಲ, ಧರ್ಮ ಮತ್ತು ವಿದ್ಯೆ, ಬುದ್ಧಿ ಮತ್ತು ಹೃದಯ, ಆತ್ಮ ನಿವೇದನೆ(ಸ) ಇತ್ಯಾದಿ.
ಬಹುಭಾಷಾ ವಿದ್ವಾಂಸರಾದ ಶ್ರೀಗಳವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿ ಎರಡು ವಾರಗಳಿಗೊಮ್ಮ(ಗುರುವಾರ) ಬರೆಯುವ ಪಾಂಡಿತ್ಯ ಪೂರ್ಣ ಅಂಕಣ "ಬಿಸಿಲು ಬೆಳದಿಂಗಳು" ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಲೇಖನವಾಗಿದೆ.
ಹಿರಿಯ ಶ್ರೀಗಳು 1937-38 ರಲ್ಲಿ ಬರೆದ ದಿನಚರಿಯನ್ನು ಶ್ರೀಗಳು ಅಚ್ಚುಕಟ್ಟಾಗಿ ಸಂಪಾದಿಸಿ " ಆತ್ಮ ನಿವೇದನೆ" ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಹಿರಿಯ ಶ್ರೀಗಳು "ಈ ಡೈರಿಯನ್ನು ಯಾವ ಪುಣ್ಯಾತ್ಮ ಓದುತ್ತಾನೋ ಅವನೇ ಧನ್ಯನು" ಎಂದು ಬರೆದಿರುವುದನ್ನು ಓದಿದ ಶ್ರೀಗಳು ಇಂದೂ ಕೂಡ ಭಾವುಕರಾಗುತ್ತಾರೆ. ಹಿರಿಯ ಶ್ರೀಗಳ ಕುರಿತು ಅಪಾರ ಭಕ್ತಿ-ಗೌರವ ಹೊಂದಿರುವ ಶ್ರೀಗಳು "ಮೊದಲು ನಾವು ತುಂಗಾನದಿಯ ದಡದಲ್ಲಿ ಬಿದ್ದಿದ್ದ ಒಂದು ಕಾಡುಗಲ್ಲು. ಅಂತಹ ಕಲ್ಲನ್ನು ಬಡಿದು, ಕುಟ್ಟಿ, ಶಿವಮೂರ್ತಿಯನ್ನಾಗಿ ಸಂಸ್ಕರಿಸಿ ಸದ್ಧರ್ಮ ಗದ್ದುಗೆಯನ್ನೇರಿಸಿ, ಜಗದ್ವಂಧ್ಯರನ್ನಾಗಿ ಮಾಡಿ, ಲೋಕ ಕಲ್ಯಾಣಕ್ಕೆ ಕಟಿಬದ್ಧರನ್ನಾಗಿಸಿದವರು ನಮ್ಮ ಪರಮಾರಾಧ್ಯ ಹಿರಿಯ ಜಗದ್ಗುರುಗಳವರು" ಎಂದು ಹೃದಯ ತುಂಬಿ ಸ್ಮರಿಸುತ್ತಾರೆ.
ಇಂದು ಕರ್ನಾಟಕ ರಾಜ್ಯದ ಹದಿನಾಲ್ಕು ಜಿಲ್ಲೆಗಳ 270 ಶಾಲಾ ಕಾಲೇಜು, ಹಾಸ್ಟೆಲ್ಗಳನ್ನು ಶ್ರೀ ಸಂಸ್ಥೆಯು ಸ್ಥಾಪಿಸಿದೆ. ಸುಮಾರು ಒಂದು ನೂರು ಪೂರ್ವ ಪ್ರಾಥಮಿಕ ಹಾಗೂ ಶಾಲಾ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಅಂದು ಬಿತ್ತಿದಂತಹ ಬೀಜವು ಇಂದು ಹೆಮ್ಮರವಾಗಿ ಬೆಳೆದು ಸಾಕಷ್ಟು ಸಂಖ್ಯೆಯ ಭಕ್ತರಿಗೆ, ಜನರಿಗೆ ನೆರಳಾಗಿದೆ.
"ಚಿರಮಭಿ ವರ್ಧತಾಂ, ತರಳಬಾಳು ಸಂತಾನಶ್ರೀ"
ಪ್ರಧಾನ ಕಾರ್ಯದರ್ಶಿಗಳು,
ಪ್ರೊ. ಎಸ್.ಬಿ.ರಂಗನಾಥ್
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ), ಸಿರಿಗೆರೆ.