ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶದ ಉದ್ಯೋಗಾಕಾಂಕ್ಷಿಗಳ ಆಶಾಕಿರಣ ಶ್ರೀ ತರಳಬಾಳು ಜಗದ್ಗುರು ಪಾಲಿಟೆಕ್ನಿಕ್
ಸಿರಿಗೆರೆ : ರಾಜ್ಯದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಡಾ. ಡಿ.ಎಂ ನಂಜುಂಡಪ್ಪ ನೇತೃತ್ವದ ಸಮಿತಿ ಹರಪನಹಳ್ಳಿ ತಾಲ್ಲೂಕನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ತಾಲ್ಲೂಕೆಂದು ಗುರುತಿಸುತ್ತಾರೆ. 1971 ರ ಪೂರ್ವದಲ್ಲಿ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ತೀರಾ ಹಿಂದುಳಿದ ಪ್ರದೇಶವಾಗಿದ್ದ ಹರಪನಹಳ್ಳಿಯಲ್ಲಿ ಯಾವುದೇ ಕಾಲೇಜು ಶಿಕ್ಷಣವನ್ನು ಪಡೆಯುವ ಸೌಲಭ್ಯವಿರಲಿಲ್ಲ. ಇದನ್ನು ಮನಗಂಡ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು, ತಾವು 1962 ರಲ್ಲಿ ಸ್ಥಾಪಿಸಿದ್ದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಹರಪನಹಳ್ಳಿಯಲ್ಲಿ ಹಿರೇಮೇಗಳಗೇರಿ ಪಾಟೀಲ್ ಸಿದ್ದನಗೌಡ ಪದವಿ ಪೂರ್ವ ಕಾಲೇಜು ಮತ್ತು ಹಿ.ಪಾ.ಸಿ ಪದವಿ ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡವರು, ದೀನ ದಲಿತರು, ಹಿಂದುಳಿದ ವರ್ಗದವರು ಹಾಗೂ ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆಯಲು ಅವಕಾಶ ಒದಗಿಸಿ ಕೊಟ್ಟರು.
1980ರ ದಶಕದಲ್ಲಿ ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುವಂತಹ ಯಾವುದೇ ವಿದ್ಯಾಸಂಸ್ಥೆಗಳು ಇರಲಿಲ್ಲ. ಬಳ್ಳಾರಿ ಅಥವಾ ದಾವಣಗೆರೆಯಂತಹ ಸ್ಥಳಗಳಲ್ಲಿ ಮಾತ್ರ ತಾಂತ್ರಿಕ ಶಿಕ್ಷಣ ದೊರೆಯುತ್ತಿತ್ತು. ತಾಂತ್ರಿಕ ಶಿಕ್ಷಣವನ್ನು ಹಿಂದುಳಿದ ಪ್ರದೇಶದ ಜನರಿಗೆ ಕೈಗೆಟುಕುವಂತೆ ನಾವೇಕೆ ಮಾಡಬಾರದು ಎಂಬ ಆಲೋಚನೆ ಇಲ್ಲಿಯ ಮುಖಂಡರಲ್ಲಿ ಉದಯಿಸಿತು. ಸ್ಥಳೀಯ ಮುಖಂಡರಾದ ಶರಣ ಪಿ. ರಾಮನಗೌಡ್ರು, ಹಡಗಲಿ ವಿದಾನ ಸಭಾ ಕ್ಷೇತ್ರದ ಶಾಸಕರಾದ ಶರಣ ಕೋಗಳಿ ಎಸ್ ಕರಿಬಸವನಗೌಡರು ಹಾಗೂ ಹೆಚ್.ಪಿ.ಎಸ್ ಪದವಿ ಪೂರ್ವ ಕಾಲೇಜಿನ ಅಂದಿನ ಪ್ರಾಚಾರ್ಯರಾಗಿದ್ದ ಹೆಚ್.ಎಸ್ ಸಿದ್ದಯ್ಯನವರು ಶ್ರೀ ತ.ಜ.ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಡಾ. ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳವರ ಮುಂದೆ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲು ಪ್ರಸ್ತಾವನೆಯನ್ನು ಮುಂದಿಟ್ಟರು. ಪೂಜ್ಯರ ಅನುಮತಿಯ ಮೇರೆಗೆ ಹರಪನಹಳ್ಳಿಯಲ್ಲಿ 1980 ರಲ್ಲಿ ಶ್ರೀ ತರಳಬಾಳು ಜಗದ್ಗುರು ಪಾಲಿಟೆಕ್ನಿಕ್ನ್ನು ಪ್ರಾರಂಭಿಸಲಾಯಿತು. ಅಂದಿನ ಮುಖ್ಯಮಂತ್ರಿಗಳಾದ ಶರಣ ಆರ್ .ಗುಂಡುರಾವ್ ಮತ್ತು ಶಿಕ್ಷಣ ಸಚಿವರಾದ ಶರಣ ಜಿ.ಬಿ.ಶಂಕರ್ ರಾವ್ ರವರು ಶ್ರೀ ಸಂಸ್ಥೆಯ ಮೇಲಿನ ಅಭಿಮಾನದಿಂದ ಪಾಲಿಟೆಕ್ನಿಕ್ ಮಂಜೂರು ಮಾಡಿದರು. 1980 ರಲ್ಲಿ ಸಿವಿಲ್ ಮತ್ತು ಎಲೆಕ್ಟ್ರಿಕಲ್ ವಿಭಾಗಗಳೊಂದಿಗೆ ಆರಂಭವಾದ ಪಾಲಿಟೆಕ್ನಿಕ್ ನಂತರ ಮೆಕ್ಯಾನಿಕಲ್ ವಿಭಾಗವನ್ನು ಆರಂಭಿಸಿತು.
ಈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದಂತಹ ಶರಣ ಎಸ್.ಆರ್ ಬಸಪ್ಪನವರು ಮತ್ತು ಶರಣ ಎಂ.ಸಿ.ಬಸವಂತಪ್ಪನವರು ಪಾಲಿಟೆಕ್ನಿಕ್ ಗೆ ಅವಶ್ಯಕವಾದ ಕಟ್ಟಡ ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಂತ ಹಂತವಾಗಿ ಬೆಳೆಯುತ್ತಾ ಬಂದಿರುವ ಪಾಲಿಟೆಕ್ನಿಕ್ನಲ್ಲಿ 1992 ರಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಿಂದ ಅನುಮತಿ ಪಡೆದು ಆರಂಭಿಸಲಾಯಿತು.
ಶ್ರೀ ತರಳಬಾಳು ಜಗದ್ಗುರು ಪಾಲಿಟೆಕ್ನಿಕ್ ಕಾಲೇಜು 6.22 ಎಕರೆ ವಿಸ್ತೀರ್ಣದ ವಿಶಾಲವಾದ ಆವರಣದಲ್ಲಿ ಗಿಡಮರಗಳೊಂದಿಗೆ ಪ್ರಶಾಂತ ವಾತಾವರಣ ಹೊಂದಿದೆ. ಕಾಲೇಜು ಆವರಣದಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಒದಗಿಸಲು ವಸತಿನಿಲಯವನ್ನು ಸ್ಥಾಪಿಸಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುವಲ್ಲಿ ಪಾಲಿಟೆಕ್ನಿಕ್ ಯಶಸ್ವಿಯಾಗಿದೆ. ಈ ಪಾಲಿಟೆಕ್ನಿಕ್ ನಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಉದ್ಯೋಗದಲ್ಲಿದ್ದಾರೆ. ಇನ್ನು ಕೆಲವರು ಸ್ವಯಂ ಉದ್ಯೋಗಗಳನ್ನು ಕೈಗೊಂಡು ಉದ್ಯಮಶೀಲರಾಗಿದ್ದಾರೆ.
1992 ರಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾದಂತಹ ಶ್ರೀ ಎನ್.ಕೆ.ರವಿಯವರು ಕಾಲೇಜಿನ ಸರ್ವತೋಮುಖ ಅಭವೃದ್ಧಿಗೆ ಶ್ರಮಿಸಿದ್ದಾರೆ. ಇವರು 2005 ರವರೆಗೆ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಕಾಲೇಜಿಗೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಜನವರಿ 2006 ರಿಂದ ಶ್ರೀ ಯು.ಜಿ.ಶರಣಪ್ಪನವರು ಪಾಲಿಟೆಕ್ನಿಕ್ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಆಡಳಿತ ಮಂಡಳಿ ಹಾಗೂ ಇತರರಿಂದ ದೇಣಿಗೆ ಸಂಗ್ರಹಿಸಿ ಕಾಲೇಜಿನ ಮುಖ್ಯ ಕಟ್ಟಡ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಕಾಲೇಜು ಇಂದು ಆರು ವಿಭಾಗಗಳನ್ನು ಹೊಂದಿದ್ದು ಸುಸಜ್ಜಿತವಾದ ಕಟ್ಟಡದಲ್ಲಿ ನಡೆಯುತ್ತಿದೆ. ಕಾಲೇಜು ಕಟ್ಟಡವು ಹದಿನೆಂಟು ಕೊಠಡಿಗಳು, ಸಿಬ್ಬಂದಿ ಕೊಠಡಿ, ಪ್ರಾಚಾರ್ಯರ ಕೊಠಡಿ, ಆರು ವಿಭಾಗಕ್ಕೆ ಆಗುವಷ್ಟು ಸುಸಜ್ಜಿತ ಪ್ರಯೋಗಾಲಯಗಳು ಹಾಗೂ ಒಂದು ಗ್ರಂಥಾಲಯ ಕೊಠಡಿಯನ್ನು ಹೊಂದಿರುತ್ತದೆ. ಕಾಲೇಜಿನಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ತೆರೆದ ಸಭಾಂಗಣವನ್ನು ನಿರ್ಮಿಸಲಾಗಿದೆ. ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳ ಮೂಲಕ ಶಿಕ್ಷಣ ನೀಡಬಹುದಾದ ಎಲ್ಲಾ ಸೌಲಭ್ಯಗಳನ್ನು ಕಾಲೇಜು ಹೊಂದಿದೆ. ಈ ಕಾಲೇಜಿನ ಅನುಭವಿ ಉಪನ್ಯಾಸಕ ವೃಂದ ಕಾಲೇಜು ಪ್ರಗತಿ ಪಥದಲ್ಲಿ ಮುನ್ನಡೆಯಲು ಕಾರಣಕರ್ತರಾಗಿದ್ದಾರೆ. ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಆಸಕ್ತಿ ತುಂಬಿ ಸನ್ನಡತೆಯುಳ್ಳವರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ತಂತ್ರಜ್ಞರನ್ನು ನೀಡುತ್ತಿದ್ದಾರೆ.
ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಪೂಜ್ಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರು ಹಾಗೂ ಕೇಂದ್ರೀಯ ಸಲಹಾ ಸಮಿತಿ, ಸ್ಥಳೀಯ ಸಲಹಾ ಸಮಿತಿ ಸದಸ್ಯರ ಪ್ರೇರಣೆ, ಸಹಕಾರ ಹಾಗೂ ಮಾರ್ಗದರ್ಶನದಿಂದ ಮಧ್ಯ ಕರ್ನಾಟಕದ ಒಂದು ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಶ್ರೀ ತರಳಬಾಳು ಜಗದ್ಗುರು ಪಾಲಿಟೆಕ್ನಿಕ್ ರೂಪುಗೊಂಡು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ.
ಡಾ. ಹೆಚ್.ವಿ.ವಾಮದೇವಪ್ಪಆಡಳಿತಾಧಿಕಾರಿಗಳು,
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ(ರಿ),
ಸಿರಿಗೆರೆ.