ಸಿರಿಗೆರೆ: ದಂದಣ-ದತ್ತಣ ಗೋಷ್ಠಿ : ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಚನ

  •  
  •  
  •  
  •  
  •    Views  

ಸಿರಿಗೆರೆ: ಕೊರೊನಾ ಬಂದ ನಂತರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗಿತ್ತು. ಈಗ ಆ ಕರಾಳ ದಿನಗಳು ಮುಗಿದು ಮತ್ತೆ ಉತ್ಸಾಹದಿಂದ ವಿದ್ಯಾರ್ಥಿ/ವಿದ್ಯಾರ್ಥಿನೀಯರು ಶಾಲಾ ಆವರಣಕ್ಕೆ ಬಂದು ಆಟ-ಪಾಠಗಳ ಚಟುವಟಿಕೆಯಲ್ಲಿರುವುದರಿಂದ ಒಳ್ಳೆಯ ವಾತಾವರಣ ರೂಪುಗೊಂಡಿದೆ ಎನ್ನುವುದು ಸಂತೋಷ ಸಂಗತಿಯಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಭವನದ ವೇದಿಕೆಯಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ದಂದಣ-ದತ್ತಣ ಗೋಷ್ಠಿ ಕಾರ್ಯಕ್ರಮದಲ್ಲಿ ಆಶೀರ್ಚನ ನೀಡಿದರು.

ನಮ್ಮ ಹಿರಿಯ ಗುರುಗಳ ಕಾಲದಿಂದ ಪ್ರಸ್ತುತಪಡಿಸುತ್ತಾ ಬಂದಿರುವ ದಂದಣ-ದತ್ತಣ ಗೋಷ್ಠಿ ಈ ವರ್ಷ ಪ್ರಾರಂಭವಾಗುತ್ತಿರುವುದು ಸಂತೋಷದ ಸಂಗತಿ. ಆದರೆ ದಂದಣ-ದತ್ತಣ ಗೋಷ್ಠಿಯ ರೂಪ ಸಾಕಾರಗೊಳ್ಳಬೇಕೆಂದರೆ ನಮ್ಮ ಶ್ರೀಮಠದ ಇತಿಹಾಸ, ಪರಂಪರೆ ಪರಿಚಯವಾಗಬೇಕೆಂದರೆ ಕಲಾಸಂಘದ ಕಲಾವಿದರು ವಿಶ್ವಬಂಧು ಮರುಳಸಿದ್ಧರ ನಾಟಕವನ್ನು ಶಾಲಾ-ಕಾಲೇಜುಗಳ ಆರಂಭದ ದಿನದಲ್ಲಿ ತಪ್ಪದೇ ಮುಂಬರುವ ವರ್ಷಗಳಲ್ಲಿ ವೇದಿಕೆಯ ಮೇಲೆ ಏರ್ಪಡಿಸಿದರೆ ಹೆಚ್ಚು ಮಕ್ಕಳಿಗೆ ನಾಟಕವನ್ನು ನೋಡುವುದರ ಮೂಲಕ ಗಮನಸೆಳೆಯುತ್ತಾರೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಆಗ ಶ್ರೀಮಠದ ಇತಿಹಾಸ ಪರಿಚಯವಾಗುತ್ತದೆ ಎಂದು ಭಾವಿಸುತ್ತೇವೆ. 

ಗೋಷ್ಠಿ ಎಂದರೆ ಬರೀ ಉಪನ್ಯಾಸ ಮಾಡುವುದಲ್ಲ. ಹೇಳಿದ ಮಾತುಗಳನ್ನು ಕೇಳಿಸಿಕೊಂಡು, ಆ ವಿಚಾರಗಳ ಮೇಲೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವುದರ ಮೂಲಕ ಮನನ ಮಾಡಿಕೊಳ್ಳುವುದು ಒಳಿತು. ದಂದಣ-ದತ್ತಣ ಎಂದರೆ ಬಸವಣ್ಣನವರ ವಚನದಲ್ಲಿ ಬರುವ ಪದಪುಂಜವಾಗಿದೆ.

ಆಳಿಗೊಂಡಿಹರೆಂದು ಅಂಜಲದೇಕೆ?
ನಾಸ್ತಿಕವಾಡಿಹರೆಂದು ನಾಚಲದೇಕೆ?
ಆರಾದಡಾಗಲಿ ಶ್ರೀಮಹಾದೇವಂಗೆ ಶರಣೆನ್ನಿ
ಏನೂ ಅರಿಯೆನೆಂದು ಮೌನಗೊಂಡಿರಬೇಡ
ಕೂಡಲಸಂಗಮದೇವರ ಮುಂದೆ ದಂದಣ-ದತ್ತಣ ಎನ್ನಿ

ವೇದಿಕೆಯಲ್ಲಿ ಏನುಗೊತ್ತಿದೆಯೊ ಅದನ್ನು ತೊದಲುನುಡಿಗಳ ಮೂಲಕ ತಿಳಿಸಿದರೆ ನಿಮಗೆ ಮಾತನಾಡುವ ಕಲೆಯ ಬಗ್ಗೆ ಹೆಚ್ಚು ಮನೋಭಾವ ಮೂಡುತ್ತಾ ಹೋಗುತ್ತದೆ. ನನಗೆ ಬರುವುದಿಲ್ಲ ಎಂದು ಕೀಳರಿಮೆ ಇರಬಾರದು. ಮಾತನಾಡುವಾಗ ತಪ್ಪುಗಳನ್ನು ಗ್ರಹಿಸುವುದು, ಚಿಂತನೆ, ಸಂವಾದ ಮಾಡುವುದು ವಿಚಾರಗಳ ಮಂಥನ ಮಾಡಿ ವಿಚಾರಗಳ ಜ್ಯೋತಿ ಬೆಳಗಬೇಕು. ಈ ಉದ್ದೇಶದಿಂದ ದಂದಣ-ದತ್ತಣ ಗೋಷ್ಠಿಗೆ ಹಿರಿಯ ಗುರುಗಳು ಹುಟ್ಟಿ ಹಾಕಿದ್ದಕ್ಕೆ ಅರ್ಥ ಸಿಕ್ಕಂತಾಗುತ್ತದೆ. 

ವಿದ್ಯಾರ್ಥಿಗಳ ವಯೋಮಾನಕ್ಕೆ ತಕ್ಕಂತೆ ಪ್ರೌಢಶಾಲೆ, ಕಾಲೇಜುಗಗಳಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ಅವರಿಗೆ ಅರಿವು ಮೂಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ವಿಚಾರ ಮುಟ್ಟಿಸುವ ನಿಟ್ಟಿನಲ್ಲಿ ನೃತ್ಯ, ಸಂಗೀತ, ನಾಟಕಗಳಂತಹ ಚಟುವಟಿಕೆಗಳು ಅವರ ಮನಸ್ಸನ್ನು ಕೇಂದ್ರೀಕರಿಸುವುದಕ್ಕೆ ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ನಾ. ಲೋಕೇಶ್ ಒಡೆಯರ್ ಮಾತನಾಡಿ, ಧರ್ಮ ಮತ್ತು ಸಮಾಜವು ಮಾನವನ ಬದುಕಿನ ಅವಿಭಾಜ್ಯ ಅಂಗಗಳು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಧರ್ಮದ ಅರಿವು ಮೂಡಬೇಕಾಗಿದೆ. ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಬೇಕಾದ ವಿದ್ಯೆ, ಸಂಸ್ಕಾರ, ಸಂಸ್ಕೃತಿ, ಆಧ್ಯಾತ್ಮಿಕ ಚಿಂತನೆಗಳ ಮೂಲಕ ಇಂದು ಧಾರ್ಮಿಕ ಸಂಸ್ಥೆಯಾಗಿ ಸಿರಿಗೆರೆ ಶ್ರೀಮಠವು ಬೆಳೆಯುತ್ತಿದೆ.  

12ನೆಯ ಶತಮಾನದ ಕನ್ನಡದ ನೆಲದಲ್ಲಿ ಆಗಿ ಹೋದ ಕ್ರಾಂತಿಯ ಫಲವಾಗಿ ಕರ್ನಾಟಕದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸ್ತರದಲ್ಲಿ ಹೊಸ ಸಂಚಲನ ಉಂಟಾಗಿದೆ. “ಸಕಲ ಜೀವಾತ್ಮರಿಗೂ ಲೇಸನು ಬಯಸುವ”, “ದಯವೇ ಧರ್ಮದ ಮೂಲ” ಎಂಬ ಬಸವಾದಿ ಶಿವಶರಣದ ಸದಾಶಗಳನ್ನು ಹೊತ್ತ ಶ್ರೀಮಠವು ವಚನಕಾರರ ತತ್ತ್ವಾದರ್ಶಗಳನ್ನು ಜನಸಾಮಾನ್ಯರಲ್ಲಿ ಬಿತ್ತುತ್ತಿದೆ. ಶ್ರೀಮಠದ ಮೂಲಪುರುಷ ಶ್ರೀ ವಿಶ್ವಬಂಧು ಮರುಳಸಿದ್ಧರು 12ನೆಯ ಶತಮಾನದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮರ ಸಮಕಾಲೀನರಾಗಿದ್ದ ಸಂದರ್ಭದಲ್ಲಿ ವಚನಚಳುವಳಿಯಿಂದ ಪ್ರೇರಿತರಾಗಿದ್ದ ಮರುಳಸಿದ್ಧರು ತಮ್ಮ ಪ್ರಖರ ವೈಚಾರಿಕತೆಯಿಂದ ಕಂದಾಚಾರ, ಮೂಢನಂಬಿಕೆ, ಅಸಮಾನತೆ, ಅಜ್ಞಾನಗಳನ್ನು ಹೋಗಲಾಡಿಸಲು ಉಜ್ಜಯಿನಿಯಲ್ಲಿ ಸದ್ಧರ್ಮ ಸಿಂಹಾಸನವನ್ನು ಸ್ಥಾಪಿಸಿ ತನ್ನ ಉತ್ತರಾಧಿಕಾರಿ ತೆಲುಗುಬಾಳು ಸಿದ್ಧಯ್ಯನಿಗೆ “ತರಳಾ, ಬಾಳು” ಎಂದು ಹರಸಿದರು. ವೈಚಾರಿಕ ತತ್ತ್ವಾದರ್ಶಗಳ ಪ್ರಸಾರಕ್ಕೆ ಅಣಿಗೊಳಿಸಿದ ಸಂದರ್ಭವು ಅಂದಿನಿಂದ ಇಂದಿನವರೆಗೆ ಮುಂದುವರಿದು ಶ್ರೀಮಠದ ಗುರುಪರಂಪರೆಯು “ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಧೀಶ  ಶ್ರೀ ತರಳಬಾಳು ಜಗದ್ಗುರು” ಎಂಬ ಅಭಿಮಾನದಿಂದ ಲೋಕಮಾನ್ಯವಾಗಿದೆ. 

ಮರುಳಸಿದ್ಧ ತನ್ನ ಕ್ರಾಂತಿಕಾರಿಕ ವಿಚಾರಗಳಿಂದ ಜಗ ಬೆಳಗುವ ಜ್ಯೋತಿಯಾಗಿ, ತನ್ನ ಪರಂಪರೆಯನ್ನು ಮುಂದುವರೆಸಲು ಅಣಿ ಮಾಡುತ್ತಾನೆ. ಲೋಕದ ತರಳರೆಲ್ಲರ ಬಾಳು ಉಜ್ವಲವಾಗಲಿ ಎಂಬುದು ಈ ಪಂಚಾಕ್ಷರಿ ಮಂತ್ರದ ವಿಶಾಲವಾದ ಅರ್ಥವಾಗಿದ್ದು ಇಂತಹ ಮಹೋನ್ನತ ಆಶಯಗಳನ್ನು ಹೊತ್ತ ತರಳಬಾಳು ಗುರುಪರಂಪರೆ ಉಜ್ಜಯಿನಿಯಲ್ಲಿ ನೆಲೆಗೊಳ್ಳುತ್ತದೆ.

ಉಜ್ಜಯಿನಿಯಲ್ಲಿದ್ದ ತರಳಬಾಳು ಗುರುಪರಂಪರೆ

1. ಪೀಠ ಸ್ಥಾಪಕರು ಶ್ರೀ ವಿಶ್ವಬಂಧು ಮರುಳಸಿದ್ಧರು
2. ಶ್ರೀ ತರಳಬಾಳು ಜಗದ್ಗುರು ಸಿದ್ಧೇಶ್ವರ
3. ಶ್ರೀ ಗಡ್ಡದ ಸಿದ್ಧಲಿಂಗ ದೇವರು
4. ಶ್ರೀ ಕೆಂಚಪ್ಪ ದೇವರು
5. ಶ್ರೀ ಚನ್ನಬಸಪ್ಪ ದೇವರು
6. ಶ್ರೀ ಗುರುಸಿದ್ಧ ದೇವರು
7. ಶ್ರೀ ಶಿವಲಿಂಗ ದೇವರು
8. ಶ್ರೀ ಗುರುಬಸವ ದೇವರು
9. ಶ್ರೀ ಕರಿಸಿದ್ಧ ದೇವರು
10. ಶ್ರೀ ಶಾಂತವೀರ ದೇವರು
11. ಶ್ರೀ ಕರಿಸಿದ್ಧ ದೇವರು
12. ಶ್ರೀ ಜಂಬಪ್ಪ ದೇವರು(ಉಜ್ಜಯಿನಿಯನ್ನು ತೊರೆದು ಸಿರಿಗೆರೆಗೆ ಬಂದವರು)
13. ಶ್ರೀ ಗುರುಸಿದ್ಧ ದೇವರು
14. ಶ್ರೀ ಸಿದ್ಧಲಿಂಗ ದೇವರು
15. ಶ್ರೀ ಗುರುಸಿದ್ಧ ದೇವರು
16. ಶ್ರೀ ಶಿವಲಿಂಗರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು
17. ಶ್ರೀ ಗುರುಸಿದ್ಧ ದೇಶಿಕೇಂದ್ರ ಮಹಾಸ್ವಾಮಿಗಳವರು
18. ಶ್ರೀ ಶಿವಲಿಂಗರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು
19. ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು
20. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
21. ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

ಪೀಠಾಧಿಪತಿಗಳು ಧಾರ್ಮಿಕ ಚಟುವಟಿಕೆಗಳನ್ನು ಹೊಸ ನೆಲದಲ್ಲಿ ಮುಂದುವರೆಸಿಕೊಂಡು ಮರುಳಸಿದ್ಧರ ನೈಜ ಆಶಯಗಳಿಗೆ ಧಕ್ಕೆ ಬಾರದಂತೆ ಸಮಾಜದ ಸಂಘಟನೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಕಟಿಬದ್ಧರಾಗಿ ಒಂದು ಪ್ರದೇಶಕ್ಕೆ ಸೀಮಿತವಾಗದೆ ನಾಡಿನ ವಿವಿಧೆಡೆ ಶಾಖಾ ಮಠಗಳನ್ನು ಸ್ಥಾಪಿಸುವುದರ ಮೂಲಕ ಸಮಾಜಮುಖಿಯಾಗಿದ್ದಾರೆ. 17ನೆಯ ಜಗದ್ಗುರುಗಳಾದ ಶ್ರೀ ಗುರುಸಿದ್ಧರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಸಿರಿಗೆರೆಯಲ್ಲಿ ಭವ್ಯವಾದ ಮಠವನ್ನು ನಿರ್ಮಿಸಿದರು. ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಪೀಠದ ಬೆಳವಣಿಗೆಗೆ ಶ್ರಮಿಸಿದವರಾಗಿದ್ದಾರೆ. ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಸಮಾಜದ ಸಂಘಟನೆಗೆ ಭದ್ರ ನೆಲೆಯನ್ನು ಒದಗಿಸಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿದ ಕೀರ್ತಿ ಪೂಜ್ಯರದು. 

20ನೆಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಬಸವ ಜಯಂತಿಯಂದೇ ಸದ್ಧರ್ಮ ಸಿಂಹಾಸನವೇರಿ ಬಸವಾದಿ ಶಿವಶರಣರು ನಡೆದ ದಾರಿಯಲ್ಲಿ ತಾವು ನಡೆದು ತರಳಬಾಳು ಶ್ರೀಮಠದ ಕೀರ್ತಿಯನ್ನು ಜಗದಗಲ ಹಬ್ಬುವಂತೆ ಮಾಡಿದ್ದಾರೆ. ಕೇವಲ 40 ವರ್ಷಗಳ ಅವಧಿಯಲ್ಲಿ ನೂರಾರು ವರ್ಷಗಳಲ್ಲಿ ಸಾಧಿಸಬಹುದಾದ್ದನ್ನು ಸಾಧಿಸಿ ತೋರಿಸಿದವರಾಗಿದ್ದಾರೆ. “ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ”, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂದು ತಿಳಿಸಿದವರು. ಮರುಳಸಿದ್ಧರ ವೈಚಾರಿಕ ನಿಲುವುಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಅದರಂತೆ ನಡೆದವರು. 

1962 ರಲ್ಲಿ ಗ್ರಾಮೀಣ ಭಾಗದ ಜನತೆಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಜಾತಿ, ಮತ, ಪಂಥವೆನ್ನದೇ ದೀನ-ದಲಿತ ಹಿಂದುಳಿದ ವರ್ಗಗಳ ಜನತೆಗೆ ಆಶಾಕಿರಣವಾಗಿ ನಾಡಿನ ಹಲವಾರು ಜಿಲ್ಲೆಗಳಲ್ಲಿ ಶಾಲಾ ಕಾಲೇಜು, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾನ ಹಾಗೂ ಸಹಪಂಕ್ತಿ ಭೋಜನವನ್ನು ವ್ಯವಸ್ಥೆ ಮಾಡಿ, ಇವನಾರವ ಇವನಾರವ ಎನ್ನದೇ "ಇವ ನಮ್ಮವ ಇವ ನಮ್ಮವ" ಎನ್ನುವ ಕೈಂಕರ್ಯವನ್ನು ಕೈಗೊಂಡವರು ನಮ್ಮ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.

1979ನೇ ಇಸ್ವಿಯಲ್ಲಿ ಶ್ರೀ ತರಳಬಾಳು ಗುರುಪರಂಪರೆಯ 21ನೇ ಜಗದ್ಗುರುಗಳಾಗಿ ನಿಯುಕ್ತಿಯಾದ ಶ್ರೀ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಪದವಿ, ಆಸ್ಟ್ರೀಯಾದ ವಿಯನ್ನಾದಿಂದ ಡಾಕ್ಟರೇಟ್ ಪದವಿ ಪಡೆದ ಮಹಾ ಮೇಧಾವಿಗಳು. ಪೂಜ್ಯ ಶ್ರೀಗಳು ಸಾಮಾಜಿಕ, ವೈಜ್ಞಾನಿಕ  ಚಿಂತನೆ, ವೈಚಾರಿಕತೆ, ಸಾಮಾಜಿಕ ಕಳಕಳಿಯಿಂದ ಶ್ರೀಮಠದ ಕೀರ್ತಿಯನ್ನು ದೇಶ ವಿದೇಶಕ್ಕೂ ಪಸರಿಸುವಂತೆ ಮಾಡಿದರು.

ಶ್ರೀಗಳು ವರುಣನ ಅವಕೃಪೆಯಿಂದ ಹತಾಶೆಗೆ ಒಳಗಾಗಿ ಸಾಕಷ್ಟು ತೊಂದರೆಯಲ್ಲಿದ್ದ ರೈತ ಸಮುದಾಯಕ್ಕೆ ಭಗೀರಥರಾದವರು. ಕರ್ನಾಟಕ ಸರ್ಕಾರದ ಜಲಯೋಜನೆಗಳು ಸಮರ್ಪಕವಾಗಿ ಸಾಕಾರಗೊಳ್ಳುವಲ್ಲಿ ಶ್ರೀಗಳು ವಹಿಸಿದಂತಹ ಪಾತ್ರ ಅದ್ವೀತಿಯ ಹಾಗೂ ಅವರ್ಣನೀಯ. ನದಿಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಮಳೆಗಾಲದಲ್ಲಿ ವಿದ್ಯುತ್ಯಂತ್ರಗಳ ಸಹಾಯದಿಂದ ಕೆರೆಗಳಿಗೆ ನೀರು ಹರಿಸಿ ರೈತನ ಬರದ ಬವಣೆಯನ್ನು ನೀಗಿಸಿದ ಮಹಾನ್ ಭಗೀರಥರು. ಕೆರೆಯಿಂದ ಕೆರೆಗೆ ನೀರನ್ನು ಹರಿಸಿ ರೈತನ ಮುಖದಲ್ಲಿ ಮಂದಹಾಸ ಮೂಡಲು ಕಾರಣೀಭೂತರಾಗಿದ್ದಾರೆ.

ಸುಮಾರು ಒಂದು ನೂರು ಪೂರ್ವ ಪ್ರಾಥಮಿಕ ಹಾಗೂ ಶಾಲಾ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಅಂದು ಬಿತ್ತಿದಂತಹ ಬೀಜವು ಇಂದು ಹೆಮ್ಮರವಾಗಿ ಬೆಳೆದು ಸಾಕಷ್ಟು ಸಂಖ್ಯೆಯ ಭಕ್ತರಿಗೆ, ಜನರಿಗೆ ನೆರಳಾಗಿದೆ. "ಚಿರಮಭಿ ವರ್ಧತಾಂ, ತರಳಬಾಳು ಸಂತಾನಶ್ರೀ" ಎಂದು ಗುಣಗಾನ ಮಾಡಿದರು.

ಸಮಾರಂಭದಲ್ಲಿ ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ಧಯ್ಯ ಪ್ರಾಸ್ತಾವಿಕನುಡಿಗಳನ್ನಾಡಿದರು. ಜಿ.ವಿ.ಪ್ರೀತಿ ಸ್ವಾಗತಿಸಿದರು, ಶ್ರೀ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಜಿ.ವಿ.ಪ್ರೀತಿ ತರಳಬಾಳು ಗುರುಪರಂಪರೆಯ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರನ್ನು ಕುರಿತು ಮಾತನಾಡಿದರು, ಎಲ್.ಸ್ವಪ್ನ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರನ್ನು ಕುರಿತು ಮಾತನಾಡಿದರು, ಬಸಮ್ಮ ಎನ್. ಬಣಕಾರ್ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕುರಿತು ಮಾತನಾಡಿದರು, ವಿ.ಮೇಘನಾ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಕುರಿತು ಮಾತನಾಡಿದರು, ಬಿ.ಯು.ಕೀರ್ತಿ ವಂದಿಸಿದರು

ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ಪ್ರಾಚಾರ್ಯ ಶಿವನಗೌಡ ಕೆ. ಸುರಕೋಡ ವೇದಿಕೆಯಲ್ಲಿದ್ದರು. 

ಕುಮಾರಿ ಸಂಗೀತಾ ಯೋಗೇಶ್ ವಚನ ವರ್ಷಿಣಿ ತಂಡ ದಿಬ್ಬೂರು, ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ ಇವರು ವಚನ ಗಾಯನ ನಡೆಸಿಕೊಟ್ಟರು. 

ಕಲಾಸಂಘದ ಅಧ್ಯಕ್ಷ ರಾಜಶೇಖರ್, ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಮುಖ್ಯಶಿಕ್ಷರು, ಉಪನ್ಯಾಸಕರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ದಂದಣ-ದತ್ತಣ ಗೋಷ್ಠಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.