ಸ್ಥಾವರವಾಗಿದ್ದ ಬದುಕನ್ನು ಜಂಗಮವಾಗಿಸಿದ್ದು ವಚನ ಚಳವಳಿ : ಚಿಂತಕ ನಾಗರಾಜರಾವ್ ಕಲ್ಕಟ್ಟೆ

  •  
  •  
  •  
  •  
  •    Views  

ಚಿಕ್ಕಮಗಳೂರು : ವ್ಯಕ್ತಿ ಪ್ರಜ್ಞೆಯಿಂದ ಸಮಷ್ಟಿ ಪ್ರಜ್ಞೆ ಯನ್ನು ಜಾಗೃತಗೊಳಿಸಿ, ಸ್ಥಾವರವಾಗಿದ್ದ ಬದುಕನ್ನು ಜಂಗಮವಾಗಿಸಿದ್ದು ವಚನ ಚಳವಳಿ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಚಿಂತಕ ನಾಗರಾಜರಾವ್ ಕಲ್ಕಟ್ಟೆ ಅಭಿಪ್ರಾಯ ಪಟ್ಟರು.

ಕುವೆಂಪು ಕಲಾಮಂದಿರದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಅಣ್ಣನ ಬಳಗದ  ವತಿಯಿಂದ ಶಿವಶರಣರ ವಚನ ಸಂಪುಟ ಜಾಲತಾಣ ಪ್ರಾತ್ಯಕ್ಷಿಕೆ ಮತ್ತು ವಿಚಾರ ಗೋಷ್ಠಿಯಲ್ಲಿ  ನಾಗರಾಜರಾವ್ ಕಲ್ಕಟ್ಟೆಯವರು  ವಚನ ಸಾಹಿತ್ಯ ಕುರಿತು  ವಿಶೇಷ ಉಪನ್ಯಾಸ ನೀಡಿದರು.

ವಚನ ಚಳವಯು ಧರ್ಮ ಮತ್ತು ಆರ್ಥಿಕತೆಯ ನಡುವಿನ ಎಳೆಯನ್ನು ಜೋಡಿಸುವುದರ ಮೂಲಕ ಏಕಕಾಲಕ್ಕೆ ದಲಿತ ಚಳವಳಿ, ಸ್ತ್ರೀ ಸಂವೇದನೆ ಮತ್ತು ಬಂಡಾಯ ಮನೋಭಾವ ಹುಟ್ಟು ಹಾಕಿತು. ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯ ಕಂದಾಚಾರಗಳನ್ನು ವಿರೋಧಿಸುವುದರ ಜೊತೆಗೆ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ ತೋರಿತು. ವೈಚಾರಿಕ ನೆಲೆಗಟ್ಟಿನಲ್ಲಿ, ಸಮಾನತೆ, ಸ್ವಾತಂತ್ರ್ಯತೆಯ ಸುಂದರ ಸಮಾಜ ನಿರ್ಮಾಣ ಮಾಡುವ ಕನಸು ವಚನಕಾರರದ್ದಾಗಿತ್ತು ಎಂದರು.

ಶಿಕ್ಷಣ ಪ್ರೇಮಿ ಡಾ.ವಿನಾಯಕ ಸಿಂಧಿಗೆರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಿಕ್ಕಮಗಳೂರು ತಾಲ್ಲೂಕು ಶ್ರೀಮದ್ ಸಾಧು ಸದ್ಧರ್ಮ ಸಂಘದ ಎಂ.ಎಸ್.ನಿರಂಜನ್ ಅಧ್ಯಕ್ಷತೆ ವಹಿಸಿದ್ದರು.  ಅಧ್ಯಾಪಕ ನಾಗರಾಜ ಸಿರಿಗೆರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಎಮ್.ರಂಗಣ್ಣ ಶಿವಶರಣರ ವಚನ ಸಂಪುಟ ಜಾಲತಾಣದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.   

ವಿದ್ಯಾಸಂಸ್ಥೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಸಿ.ಜಗದೀಶ್, ವಲಯಾಧಿಕಾರಿ ರಮೇಶ್, ಅಣ್ಣನ ಬಳಗದ ಉಪಾಧ್ಯಕ್ಷ ಯು.ಚಂದ್ರಪ್ಪ ಉಪಸ್ಥಿತರಿದ್ದರು. ವಲಯಾಧಿಕಾರಿ ನಂಜುಂಡಪ್ಪ ಸ್ವಾಗತಿಸಿದರು. ಪ್ರಾಚಾರ್ಯ ಲೋಹಿತಕುಮಾರ್ ವಂದನೆ ಸಲ್ಲಿಸಿದರು. ಚಿಕ್ಕಮಗಳೂರು ಮತ್ತು ಬೀರೂರು ವಲಯದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನೌಕರರು ಮತ್ತು ನಾಗರಿಕರು ಭಾಗವಹಿಸಿದ್ದರು.