ಶ್ರೀ ತರಳಬಾಳು ಜಗದ್ಗುರುಗಳವರ ಸಂಕಲ್ಪದ ಫಲಶೃತಿ: ಬ್ಯಾಡಗಿ ತಾಲ್ಲೂಕಿನ ಆಣೂರು-ಬುಡಪನಹಳ್ಳಿ 36 ಕೆರೆಗಳಿಗೆ ತುಂಬಿಸುವ ಯೋಜನೆ ಸಾಕಾರ.!
ಬ್ಯಾಡಗಿ ತಾಲ್ಲೂಕಿನ ಆಣೂರು-ಬುಡಪನಹಳ್ಳಿ 36 ಕೆರೆಗಳಿಗೆ ತುಂಬಿಸುವ ಯೋಜನೆ ಸಾಕಾರ.! ಕೆರೆಗಳಿಗೆ ಪರೀಕ್ಷಾರ್ಥ ನೀರು ಹರಿಸುವಿಕೆ ಯಶಸ್ವಿ.
ಶ್ರೀ ಜಗದ್ಗುರುಗಳವರಿಗೆ ಧನ್ಯತೆಯ ಕೃತಜ್ಞತಾ ಸಂದೇಶ ರವಾನಿಸಿದ ಉತ್ತರ ಕರ್ನಾಟಕದ ಅನ್ನದಾತರು!
ಸಿರಿಗೆರೆ: ನೀರು ಮನುಷ್ಯನ ಪ್ರಮುಖ ಅವಶ್ಯಕತೆಗಳಲ್ಲಿ ಒಂದು. ರೈತರಿಗಂತೂ ಪ್ರಾಣ ಜೀವಾಳ, ಹಳ್ಳಿಯ ಜನಜಾನುವಾರುಗಳ “ಜೀವನಾಡಿ ಕೆರೆ” ಎಂಬ ವಾಕ್ಯದಲ್ಲಿ ಕಾಯಾ, ವಾಚಾ, ಮನಸಾ ವಿಶ್ವಾಸ ಹೊಂದಿರುವ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಾವಣಗೆರೆ ಜಿಲ್ಲೆಯ ಜಗಳೂರು, ಚನ್ನಗಿರಿ, ದಾವಣಗೆರೆ ಅಲ್ಲದೆ ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ, ಹಾಸನ ಜಿಲ್ಲೆಗಳಲ್ಲಿ ನೂರಾರು ಕೆರೆಗಳನ್ನು ತುಂಬಿಸಿರುವ ಕರುನಾಡಿನ ಭಗೀರಥರಾಗಿದ್ದಾರೆ. ರೈತ ಮೆಚ್ಚಿದ ಶ್ರೀ ತರಳಬಾಳು ಜಗದ್ಗುರುಗಳು ಕರೆದರೆ ಸಾಕು ತುಂಗಭದ್ರೆಯರು ಜುಳು-ಜುಳೆಂದು ಹರಿದು ಬರುವರೆಂಬ ಅಭಿಮಾನದ ನುಡಿ ಹಳ್ಳಿ-ಹಳ್ಳಿಗಳಲ್ಲಿ ಮನೆಮಾತಾಗಿದೆ.
ಪೂಜ್ಯ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗಳಲ್ಲಿ ಒಂದಾದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಆಣೂರು ಮತ್ತು ಬುಡ್ಡಪ್ಪನಹಳ್ಳಿ ಕೆರೆ ತುಂಬಿಸುವ ಯೋಜನೆಯಡಿ 36 ಕೆರೆಗಳನ್ನು ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ತುಂಬಿಸುವ ಯೋಜನೆಯ ಕಾಮಗಾರಿ ಮುಕ್ತಾಯಗೊಂಡು ಇಂದು ಪರೀಕ್ಷಾರ್ಥ ಪ್ರಯೋಗವಾಗಿ ನೀರು ಹರಿಸಿರುವುದು ಯಶಸ್ಸು ಕಂಡಿದೆ.
ಉತ್ತರ ಕರ್ನಾಟಕದ ಅನ್ನದಾತರಿಗೆ ನೆರವಾಗಲೇಬೇಕು ಎನ್ನುವ ಶ್ರೀ ಜಗದ್ಗುರುಗಳವರು ಸಂಕಲ್ಪ ಸಾಕಾರಗೊಂಡಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು, ಏಲಕ್ಕಿ ನಗರ ಖ್ಯಾತಿಯ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಆಣೂರು ಮತ್ತು ಬುಡ್ಡಪ್ಪನಹಳ್ಳಿ ಕೆರೆ ತುಂಬಿಸುವ ಯೋಜನೆಯಡಿ 36 ಕೆರೆಗಳನ್ನು ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ತುಂಬಿಸಲು ಆಣೂರು ವ್ಯಾಪ್ತಿಯಲ್ಲಿ 212 ಕೋಟಿ ರೂಗಳು ಹಾಗೂ ಬುಡಪನಹಳ್ಳಿ ವ್ಯಾಪ್ತಿಯಲ್ಲಿ ಕೆರೆಗಳಿಗೆ 157 ಕೋಟಿ ರೂಗಳು ಸೇರಿದಂತೆ ಒಟ್ಟು 369 ಕೋಟಿ ರೂಪಾಯಿಗಳ ವೆಚ್ಚದ ಈ ಯೋಜನೆ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ರೂಪುಗೊಂಡಿತ್ತು.
ಏತನೀರಾವರಿ ಸಾಕಾರಗೊಂಡ ಹಿನ್ನಲೆ:
ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ರೈತರು ತಮ್ಮ ಭಾಗದ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು ಏತನೀರಾವರಿ ಯೋಜನೆಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರು.ಈ ಭಾಗದ ಕೆರೆಗಳು ಖಾಲಿಯಾಗಿ ಹತ್ತಾರು ವರ್ಷಗಳೇ ಕಳೆದಿದ್ದವು, ಹೀಗಾಗಿ ಅಂತರ್ಜಲ ಸಹ ಉಳಿದಿರಲಿಲ್ಲ. ತಾಲೂಕಿನಾದ್ಯಂತ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಶೇ.90ರಷ್ಟು ಕೆರೆಗಳು ಮಳೆಯನ್ನೇ ನಂಬಿಕೊಂಡು
ಭರ್ತಿಯಾಗುತ್ತಿವೆ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿದು ವ್ಯರ್ಥವಾಗಿ ಸಮುದ್ರಕ್ಕೆ ಹೋಗುತ್ತಿದ್ದರು ಆ ನೀರನ್ನು ಕೆರೆಗಳಿಗೆ ಹರಿಸುವ ಇಚ್ಛಾಶಕ್ತಿ ನಮ್ಮ ನೇತಾರರಿಗೆ ಇಲ್ಲದಿರುವುದರಿಂದ ಜನ -ಜಾನುವಾರುಗಳು ಪರಿತಪಿಸುವಂತಾಗಿತ್ತು.
ಈ ಪರಿಸ್ಥಿತಿಯಲ್ಲಿ ಆಣೂರು ಮತ್ತು ಬುಡಪನಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಈ ಭಾಗದ ಜನತೆ ದಶಕಗಳ ಕಾಲದಿಂದ ಹೋರಾಟ ಮಾಡಿದರು ಅದು ಕೈಗೂಡಿರಲಿಲ್ಲ. ಅನೇಕ ಬಾರಿ ಆಣೂರು ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆದಿರುವ ಪತ್ರ ಚಳವಳಿ ತೀವ್ರ ಕಾವು ಪಡೆದುಕೊಂಡಿತ್ತು. ರೈತ ಸಂಘ ಹಾಗೂ ಸಾರ್ವಜನಿಕರು ಉಪವಾಸ ಸತ್ಯಾಗ್ರಹ, ರಸ್ತೆ ತಡೆ ಸೇರಿದಂತೆ ಶಾಲೆಯ ಮಕ್ಕಳೂ ಸಹ ಬೀದಿಗಿಳಿದು ಹೋರಾಟ ನಡೆಸಿದ್ದರು. ಅನೇಕ ಬಾರಿ ಮುಖ್ಯಮಂತ್ರಿಗಳಿಗೆ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಅನುಷ್ಠಾನಗೊಳಿಸಲು ಸಾಧ್ಯವೇ ಆಗಿರಲಿಲ್ಲ. ಅದು ಸಾಕಾರಗೊಳ್ಳದ ಕಾರಣ ಸಿಟ್ಟಿಗೆದ್ದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡದೆ ಚುನಾವಣೆಯನ್ನೇ ಬಹಿಷ್ಕರಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದರು.ಈ ಭಾಗದ ಎಲ್ಲಾ ರೈತ ಮುಖಂಡರು ಹಾಗೂ ಹೋರಾಟ ಸಮಿತಿಯವರು ತಮ್ಮ ಅಳಲು ತೋಡಿಕೊಂಡು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಶ್ರೀಜಗದ್ಗುರುಗಳವರ ನೇತೃತ್ವದ ಸದ್ಧರ್ಮ ನ್ಯಾಯಪೀಠಕ್ಕೆ ನಾಲ್ಕೈದು ವರ್ಷಗಳ ಹಿಂದೆ ಅಹವಾಲಿನ ಗಟ್ಟಿ ನಿರ್ಧಾರವನ್ನು ನಿವೇದಿಸಿಕೊಂಡರು. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಿಮ್ಮ ಹಕ್ಕು, ಒಂದು ಪವಿತ್ರ ಕರ್ತವ್ಯವೂ ಸಹ. ಅದನ್ನು ಚಲಾಯಿಸದೇ ಇರುವುದು ಹೊಣೆಗೇಡಿತನ, ಚುನಾವಣೆ ಮುಗಿದ ಮೇಲೆ ಪ್ರಯತ್ನಿಸೋಣ ಎಂದು ಶ್ರೀ ತರಳಬಾಳು ಜಗದ್ಗುರು ಗಳವರು ತಿಳಿ ಹೇಳಿದ ಮೇಲೆ ಮತದಾನ ಮಾಡಲು ಸಮೃತಿಸಿದರು.
ವಾಸ್ತವವಾಗಿ ಆಣೂರು, ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಯು ಮುಖ್ಯಮಂತ್ರಿಗಳ ಟಿಪ್ಪಣಿ ಹೊರತಾಗಿಯೂ, ಆರ್ಥಿಕ ಇಲಾಖೆಯು ಆಣೂರು ಮತ್ತು ಬುಡಪನಹಳ್ಳಿ ವ್ಯಾಪ್ತಿಯಲ್ಲಿ ಮಳೆ ಚೆನ್ನಾಗಿ ಆಗಿರುವ ಕಾರಣದಿಂದ ಈ ಯೋಜನೆಯ ವರದಿಯನ್ನು ತಿರಸ್ಕಾರ ಮಾಡಿತ್ತು. ವಿಷಯದ ಕುರಿತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ ಶ್ರೀಜಗದ್ಗುರುಗಳವರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಯೋಜನೆಯು ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್(DPR) ಆಗಿರುವುದಿಲ್ಲ ಎಂಬುದು ತಿಳಿದು ಬಂದಿತು. ಆಗ ಶ್ರೀಜಗದ್ಗುರುಗಳವರು ಸಮಿತಿಯವರಿಗೆ ರೈತರು ಹೋರಾಟ ನಿಲ್ಲಿಸುವುದು ಬೇಡ "ಜೀವ ಬಿಟ್ಟೇವು ಜೀವ ಜಲ ಬಿಡಲಾರೆವು" ಎಂಬ ಘೋಷಣೆಯೊಂದಿಗೆ ನಿಮ್ಮ ಹೋರಾಟ ನಿರಂತರವಾಗಿರಲಿ ನಿಮ್ಮ ಹೋರಾಟದ ಬೆಂಗಾವಲಾಗಿ ನಾವು ಇದ್ದು, ಸಂಬಂಧಪಟ್ಟ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಯೋಜನೆಯನ್ನು ರೂಪಿಸಿ ಪರಿಹಾರ ಕಂಡುಕೊಳ್ಳವ ಕುರಿತು ಕಾರ್ಯಮಗ್ನರಾಗುವುದಾಗಿ ತಿಳಿಸಿ ಆಶೀರ್ವದಿಸಿದ್ದರು.
ಚುನಾವಣೆಯ ನಂತರ ರಾಜಕೀಯ ಧುರೀಣರೊಂದಿಗೆ ಸಮಾಲೋಚನೆ ನಡೆಸಿದ ಶ್ರೀ ತರಳಬಾಳು ಜಗದ್ಗುರುಗಳವರು ಈ ಭಾಗದ ಜನರ ಕಷ್ಟವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟ ಮೇಲೆ ಬ್ಯಾಡಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ 369 ಕೋಟಿ ರೂ. ಗಳ ಆಣೂರು ಮತ್ತು ಬುಡಪನಹಳ್ಳಿ ಏತ ನೀರಾವರಿ ಯೋಜನೆಗಳಿಗೆ ಮುಂಜೂರಾತಿ ದೊರಕಿತು.
ಕರ್ನಾಟಕದಲ್ಲಿ ಏತನೀರಾವರಿ ಯೋಜನೆಗಳ ಮೂಲಕ ನೂರಾರು ಕೆರೆಗಳಿಗೆ ನೀರು ತುಂಬಿಸಿ ಯಶೋಗಾಥೆ ಬರೆದಿರುವ ಶೀ ತರಳಬಾಳು ಜಗದ್ಗುರುಗಳವರು ಆಣೂರು ಬುಡಪನಹಳ್ಳಿ ಏತನೀರಾವರಿ ಯೋಜನೆಯನ್ನು ಸಮಗ್ರವಾಗಿ ಅಧ್ಯಯನದೊಂದಿಗೆ,ಯೋಜನೆಯಲ್ಲಿ ಕೆಲ ಅಂಶಗಳನ್ನು ಪರಿಷ್ಕರಿಸಿ ನೀರಾವರಿ ನಿಗಮದ ಎಂಜಿನಿಯರ್ ಗಳಿಗೆ ಸೂಕ್ತ ಸಲಹೆ ನೀಡಿದ ತರುವಾಯ ಈ ಯೋಜನೆಯು ಮುಂದೆ ಸಾಗಿತು. ನಿರಂತರವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ತುಂಗಭದ್ರಾ ನದಿಯ ಸಮೀಪದ ಪ್ರದೇಶವಾದ ಕೋಟೇಹಾಳ್ ನಲ್ಲಿ ಜಾಕ್ವೆಲ್ ನಿರ್ಮಿಸಿ, ಈ ಜಾಕ್ವೆಲ್ ಮೂಲಕ ನದಿ ನೀರನ್ನು ನೇರವಾಗಿ ನೀರನ್ನು ಮೇಲೆತ್ತುವ ರೇಚಕ ಚಕ್ರ (Pump)ದ ಸಹಾಯದಿಂದ ಆಣೂರು ಕೆರೆಗೆ ನೇರವಾಗಿ ಹರಿಸಿ ತದನಂತರ ಗುರುತ್ವಾಕರ್ಷಣೆ (Gravity) ಶಕ್ತಿಯ ಬಲದ ಮೂಲಕ ಯೋಜನೆಯ ಶಿಡನೂರು,ಹಿರೇನಂದಿಹಳ್ಳಿ, ಬಿದರಕಟ್ಟಿ, ತಡಸಾ, ಮತ್ತೂರು, ನೆಲ್ಲಿಕೊಪ್ಪ, ಮಾಸಾನಿಗಿ, ತಿಮ್ಕಾಪುರ ಸೇರಿದಂತೆ ಇನ್ನಿತರ ಗ್ರಾಮಗಳ 35 ಕೆರೆಗಳನ್ನು ತುಂಬಿಸುವ ಪರಿಷ್ಕರಿಸಿದ, ರೈತ ಹಿತಕಾಯುವ ಈ ಯೋಜನೆಯನ್ನು ಶ್ರೀ ಜಗದ್ಗುರುಗಳವರು ರೈತ ಹಿತಕಾಯುವ ಈ ಯೋಜನೆಯನ್ನು ಜಾರಿಗೆ ತರಲು ಮುಖ್ಯಮಂತ್ರಿಗಳಿಗೆ ಸೂಚಿಸಿದ ತತ್ಪರಿಣಾಮವಾಗಿ 36 ಕೆರೆಗಳನ್ನು ತುಂಬಿಸುವ 369 ಕೋಟಿ ರೂಗಳ ಈ ಯೋಜನೆಗೆ ಹಣ ಬಿಡುಗಡೆಯಾಗಿ, ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿ ಭರದಿಂದ ಸಾಗಿ, ಕೆರೆಯಿಂದ ಕೆರೆಗೆ ಪೈಪ್ ಲೈನ್ ಮೂಲಕ ಬೃಹತ್ ಗಾತ್ರದ ಉತ್ತಮ ಗುಣಮಟ್ಟದ ಪೈಪ್ ಗಳ ಮೂಲಕ ಪರೀಕ್ಷಾರ್ಥನೀರು ಹರಿಸುವ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ.
ಶ್ರೀಜಗದ್ಗುರುಗಳವರಿಗೆ ಅನ್ನದಾತರ ಧನ್ಯತೆಯ ನಮನ :
ನೀರು ಕೆರೆಗೆ ಹರಿಯುವ ದೃಶ್ಯವನ್ನು ಕಣ್ತುಂಬಿಕೊಂಡ ಈ ಭಾಗದ ರೈತ ಮುಖಂಡರು, ಹೋರಾಟಗಾರರು, ರೈತರು ಅಳಿತಪ್ಪಿ ಹೋಗಿ ಆರ್ಥಿಕ ಇಲಾಖೆಯಿಂದ ತಿರಸ್ಕೃತಗೊಂಡು, ಭ್ರಮನಿರಸರಾಗಿದ್ದ ಅನ್ನದಾತರಿಗೆ ಆಸರೆಯಾಗಿ ಯೋಜನೆಗೆ ಕರಣಾದಾರತ್ವ ವಹಿಸಿದ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಭಕ್ತಿ ಕಣ್ಣಾಲಿಗಳಿಂದ ಹರ್ಷಗೊಂಡು ಸಂದೇಶದ ಮೂಲಕ ಧನ್ಯತೆಯ ನಮನಗಳೊಂದಿಗೆ ಸ್ಮರಿಸುತ್ತಿದ್ದಾರೆ.
ನದಿಯಿಂದ ನೀರಿನಿಂದ ಕೆರೆಗಳನ್ನುತುಂಬಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಶ್ರೀ ತರಳಬಾಳು ಜಗದ್ಗುರುಗಳವರ ನೇತೃತ್ವದಲ್ಲಿ ಕೆರೆಗಳಿಗೆ ಗಂಗಾವತಾರಣವಾಗಿದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಪುರಾಣದಲ್ಲಿ ದೇವಲೋಕದ ಗಂಗೆ ಆಕಾಶದಿಂದ ಭೂಮಿಗೆ ಇಳಿದು ಬರುವುದಕ್ಕಿಂತಲೂ ಕಷ್ಟದಾಯಕ ಕಾರ್ಯವು ಶ್ರೀ ಜಗದ್ಗುರುಗಳವರ ಕರಣಾಧಾರತ್ವದಿ ಕೈಗೂಡಿದೆ.
“ದೇಶಗಳು ಮತ್ತು ಸರ್ಕಾರಗಳು ಬರುತ್ತವೆ, ಹೋಗುತ್ತವೆ; ಆದರೆ ನದಿಗಳು ಬೆಟ್ಟಗಳು ಯಾವಾಗಲೂ ಇರುತ್ತವೆ” (Nations and governments come and go where as rivers and mountains remain forever) ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನದಲ್ಲಿ ಹೇಳಿರುವ ನುಡಿಗಟ್ಟು.