ತಪ್ಪು ಮಾಡದವರಿಗೆ ಶಿಕ್ಷೆ ವಿಧಿಸುವುದು ನ್ಯಾಯವೇ?

  •  
  •  
  •  
  •  
  •    Views  

ಬ್ಬ ಹಳ್ಳಿಯ ರೈತ. ಹಣದ ತೊಂದರೆಯಿಂದಾಗಿ ತನ್ನ ಟ್ರಾಕ್ಟರನ್ನು ಸಂಬಂಧಿಕನಿಗೆ ಮೂರು ಲಕ್ಷ ರೂ.ಗಳಿಗೆ ಮಾರಾಟ ಮಾಡಿದ. ಪೂರಾ ಹಣ ಬಂದಿದ್ದರಿಂದ ಟ್ರಾಕ್ಟರನ್ನು ಅವನ ವಶಕ್ಕೆ ಕೊಟ್ಟ. ಆದರೆ ನಿಯಮಾನುಸಾರ ಅವನ ಹೆಸರಿಗೆ ವರ್ಗಾವಣೆ ಮಾಡಿಸಿಕೊಡಲು ತಲೆ ಕೆಡಿಸಿಕೊಳ್ಳಲಿಲ್ಲ. ಕೊಂಡ ಟ್ರಾಕ್ಟರ್ ತನ್ನ ವಶಕ್ಕೆ ಬಂದಿದ್ದರಿಂದ ಕೊಂಡವನೂ ತಲೆ ಕೆಡಿಸಿಕೊಳ್ಳಲಿಲ್ಲ. ವಾಹನದ ದಾಖಲೆಗಳು ಮಾರಿದ ರೈತನ ಹೆಸರಿನಲ್ಲಿಯೇ ಮುಂದುವರಿದವು. ಕೊಂಡವನು ಇನ್ಶೂರೆನ್ಸ್ ಪ್ರೀಮಿಯಂ ಕಟ್ಟುವ ಗೋಜಿಗೇ ಹೋಗಲಿಲ್ಲ; ಪಾಲಿಸಿ ನಷ್ಟವಾಯಿತು! ದುರದೃಷ್ಟವಶಾತ್ ಒಂದು ದಿನ ಜಮೀನು ಉಳುಮೆಗೆಂದು ಹೋಗಿ ವಾಪಾಸು ಮನೆಗೆ ಬರುವಾಗ ಟ್ರಾಕ್ಟರ್ ಅಪಘಾತ ಸಂಭವಿಸಿತು. ಊರಿಗೆ ಹೊರಟ ಆ ಟ್ರಾಕ್ಟರನ್ನು ಹತ್ತಿದವನು ಮತ್ತು ಹತ್ತಿಸಿಕೊಂಡವನು ಇಬ್ಬರಿಗೂ ಗಂಭೀರ ಗಾಯಗಳಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟರು. ಟ್ರಾಕ್ಟರ್ ಹತ್ತಿದ್ದ ಪಕ್ಕದ ಜಮೀನಿನ ಮೃತ ರೈತನ ಹೆಂಡತಿ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋದಳು. ಟ್ರಾಕ್ಟರ್ ಮಾರಿರುವುದರಿಂದ ಅದು ತನ್ನದಲ್ಲವೆಂಬ ಭಾವನೆಯಿಂದ ಮೂಲ ಮಾಲೀಕನಾದ ರೈತ ಹಿಯರಿಂಗಿಗೆ ಹಾಜರಾಗಲಿಲ್ಲ. ಆದಕಾರಣ ನ್ಯಾಯಾಲಯವು ಏಕಪಕ್ಷೀಯ ನಿರ್ಣಯವನ್ನು (Exparte) ನೀಡಿತು. ದಾಖಲೆಗಳ ಪ್ರಕಾರ ಮಾಲೀಕನೇ ಮೃತ ಕುಟುಂಬಕ್ಕೆ 23 ಲಕ್ಷ ರೂ. ಗಳ ಪರಿಹಾರವನ್ನು ನೀಡಬೇಕೆಂದು ಆದೇಶಿಸಿತು. ನ್ಯಾಯಾಲಯದ ತೀರ್ಪು ಕಾನೂನಿನ ಕಣ್ಣಿನಲ್ಲಿ ಸರಿ. “Ignorance of law is no excuse”. ಆದರೆ ಈ ಅಪಘಾತಕ್ಕೆ ಟ್ರಾಕ್ಟರ್ ಮಾರಿದ ಆ ರೈತ ಕಾರಣನಲ್ಲ. ತನ್ನದಲ್ಲದ ತಪ್ಪಿಗೆ ಅವನು ಶಿಕ್ಷೆಯನ್ನು ಅನುಭವಿಸಬೇಕಾಗಿದೆ. “ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು” ಎಂಬ ನ್ಯಾಯಾಂಗದ ನೀತಿ ಇಲ್ಲಿ ತಲೆಕೆಳಗಾಗಿದೆ! 

ಶಾಲೆಯ ಶಿಕ್ಷಕರೊಬ್ಬರು ತರಗತಿಯನ್ನು ಪ್ರವೇಶಿಸಿ ಪಾಠ ಮಾಡುತ್ತಿರುವಾಗ ಏನನ್ನೋ ಬರೆಯಲೆಂದು ಬೋರ್ಡ್ ಕಡೆ ತಿರುಗಿದರು. ಆ ಸಮಯದಲ್ಲಿ ಎರಡನೆಯ ಸಾಲಿನಲ್ಲಿ ಕುಳಿತಿದ್ದ ಶ್ರೀಮಂತ ಮನೆತನದ ಪುಡಾರಿ ಹುಡುಗನೊಬ್ಬ ಬೆಂಚ್ ಮೇಲೆ ತನ್ನ ಎರಡೂ ಕಾಲುಗಳನ್ನಿಟ್ಟು ಹಿಂದಕ್ಕೆ ಒರಗಿ ಕೈಯಿಂದ ಡ್ರಂ ಬಾರಿಸಿದಂತೆ ಕುಟ್ಟಿ ಕೀಟಲೆ ಮಾಡತೊಡಗಿದ. ಶಬ್ದ ಕೇಳಿದ ಅಧ್ಯಾಪಕರು ಅಸಹನೆಯಿಂದ ಹಿಂತಿರುಗಿ ನೋಡುವಷ್ಟರಲ್ಲಿ ಕಾಲುಗಳನ್ನು ಸರ್ರನೆ ಎಳೆದುಕೊಂಡು ಏನೂ ಮಾಡದವನಂತೆ ಮೌನ ಮುಖಮುದ್ರೆ ಧರಿಸಿದ್ದ. ಅಧ್ಯಾಪಕರು ಅವನ ಪಕ್ಕದಲ್ಲಿ ಕುಳಿತಿದ್ದ ಹುಡುಗನನ್ನು ಎದ್ದು ನಿಲ್ಲಲು ಹೇಳಿ “ಆ ಶಬ್ದ ನಿನ್ನ ಕಡೆಯಿಂದಲೇ ಬಂತು. ಆದರೆ ನೀನು ಸಭ್ಯ ಹುಡುಗ ಹಾಗೆ ಮಾಡಿಲ್ಲವೆಂದು ನನಗೆ ಚೆನ್ನಾಗಿ ಗೊತ್ತು. ಹಾಗೆಯೇ ಶಬ್ದ ಮಾಡಿದವನು ಯಾರೆಂದು ನಿನಗೂ ಗೊತ್ತು. ಹೇಳು ಯಾರವನು?” ಎಂದು ಕೇಳಿದರು. ಆದರೆ ಆ ಸಭ್ಯ ಹುಡುಗ ಯಾರ ಹೆಸರನ್ನೂ ಹೇಳಲು ನಿರಾಕರಿಸಿದ. ಇದರಿಂದ ಕುಪಿತರಾದ ಅಧ್ಯಾಪಕರು ಆ ಹುಡುಗನನ್ನು “Get out” ಎಂದು ತರಗತಿಯಿಂದ ಹೊರಗೆ ಹೋಗುವಂತೆ ಗದರಿಸಿದರು. ವಿಧೇಯನಾದ ಆ ಹುಡುಗ ಮರು ಮಾತಾಡದೆ ತಲೆ ತಗ್ಗಿಸಿಕೊಂಡು ಕ್ಲಾಸಿನಿಂದ ಹೊರನಡೆದ. ಅವನ ಗೆಳೆಯರೆಲ್ಲರೂ ಗಹಗಹಿಸಿ ನಗತೊಡಗಿದರು. ತರಗತಿ ಮುಗಿದ ಮೇಲೆ ಸಂಜೆ ವೇಳೆ ಆ ಹುಡುಗ ಪ್ರಾಧ್ಯಾಪಕರ ಕೊಠಡಿಗೆ ಹೋಗಿ ವಿನಮ್ರನಾಗಿ ಕೇಳಿದ: 

“ಸಾರ್, ನಾನೇನೂ ತಪ್ಪು ಮಾಡಿಲ್ಲವೆಂದು ನಿಮಗೆ ಗೊತ್ತಿದ್ದರೂ ನನಗೆ ಈ ರೀತಿ ಶಿಕ್ಷೆ ಕೊಡಬಹುದೇ?”

“ಹಾಗಾದರೆ ತಪ್ಪು ಮಾಡಿದವನ ಹೆಸರನ್ನು ನೀನು ಏಕೆ ಹೇಳಲಿಲ್ಲ?”

“ನನ್ನ ಗೆಳೆಯರ ವಿರುದ್ದ ಬೇಹುಗಾರಿಕೆ ಮಾಡುವುದು ಸರಿಯಲ್ಲವೆಂದು ಹೇಳಲಿಲ್ಲ.”

“ತಪ್ಪಿತಸ್ಥ ಯಾರೆಂದು ಗೊತ್ತಿದ್ದರೂ ಮರೆಮಾಚಿದ ನಿನಗೆ ತರಗತಿಯಲ್ಲಿ ಶಿಸ್ತು ಮೂಡಿಸಲು ನಾನು ಕೊಟ್ಟ ಶಿಕ್ಷೆ ಅದು!”

ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಆ ಹುಡುಗ ಬೇರೆ ಯಾರೂ ಅಲ್ಲ. ಮುಂಬೈ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ಎಂ.ಸಿ ಛಾಗಲಾ. ಅವರು ತಮ್ಮ ಇಳಿ ವಯಸ್ಸಿನಲ್ಲಿ ಬರೆದ “Roses in December”ಎಂಬ ಆತ್ಮಚರಿತ್ರೆಯಲ್ಲಿ ಮೇಲ್ಕಂಡ ತಮ್ಮ ಬಾಲ್ಯ ಜೀವನದ ಘಟನೆಯನ್ನು ಸ್ಮರಿಸಿಕೊಂಡು ತಮಗೆ ತಾವೇ ಕೇಳಿಕೊಂಡಿರುವ ಪ್ರಶ್ನೆ:“Which of us was right when we get down to the fundamentals-Joshi or I?” ನಮ್ಮೀರ್ವರಲ್ಲಿ ಯಾರು ಸರಿ ಎಂಬ ಈ ಪ್ರಶ್ನೆಗೆ ಅವರ ಆತ್ಮಚರಿತ್ರೆಯಲ್ಲಿ ಉತ್ತರವಿಲ್ಲ. ಮುಖ್ಯ ನ್ಯಾಯಮೂರ್ತಿಗಳಾಗಿ ಅದೆಷ್ಟೋ ಜಟಿಲವಾದ ಕೇಸುಗಳಲ್ಲಿ ತೀರ್ಪು ನೀಡಿದ ಜಸ್ಟೀಸ್ ಛಾಗಲಾ ಮೇಲ್ಕಂಡ ಪ್ರಶ್ನೆಗೆ ತೀರ್ಪು ನೀಡಲು ತಮ್ಮ ಆತ್ಮಚರಿತ್ರೆಯ ಓದುಗರಿಗೇ ಬಿಟ್ಟಿದ್ದಾರೆ.

ನಮ್ಮ ಬಾಲ್ಯ ಜೀವನದ ಒಂದು ಪ್ರಸಂಗ. ನಾವು ಹುಟ್ಟಿದ ಊರು ಶಿವಮೊಗ್ಗಕ್ಕೆ 8 ಮೈಲಿ ದೂರದಲ್ಲಿ ತುಂಗಾನದಿಯ ದಡದಲ್ಲಿರುವ ಸೂಗೂರು. ಶಿವಮೊಗ್ಗದ ಸರಕಾರಿ ಪ್ರೌಢಶಾಲೆಯಲ್ಲಿ ಓದಲು ನಮ್ಮ ಪೂರ್ವಾಶ್ರಮದ ತಂದೆಯವರು ಸೇರಿಸಿದ್ದರು. ಹತ್ತಿರದ ತೆವರಚಟ್ನಳ್ಳಿ ಎಂಬ ಊರಿನಲ್ಲಿದ್ದ ಬಂಧುಗಳ ಮನೆಯಲ್ಲಿದ್ದು ಶಾಲೆಗೆ ಓಡಾಡಲು ಅನುಕೂಲವಾಗುವಂತೆ Atlas ಕಂಪನಿಯ ಒಂದು ಸೈಕಲ್ಲನ್ನು ಕೊಡಿಸಿದ್ದರು. ಸಂಜೆಯ ಹೊತ್ತಿನಲ್ಲಿ ಶಾಲೆ ಮುಗಿದ ನಂತರ ಸಂಗೀತ ಪಾಠ. ಒಂದು ದಿನ ಹೀಗಾಯಿತು: ನಾವು ವಾಸಿಸುತ್ತಿದ್ದ ಮನೆಯ ಯಜಮಾನರು ಎಲ್ಲಿಗೋ ಹೋಗಿ ಬರಲು ಸೈಕಲ್ಲನ್ನು ಕೇಳಿದರು. ಬಂಧುತ್ವಕ್ಕೆ ಕಟ್ಟುಬಿದ್ದು ಇಲ್ಲ ಎನ್ನಲು ಆಗಲಿಲ್ಲ. ನಡೆದುಕೊಂಡೇ ಶಾಲೆಗೆ ಹೋದೆವು. ಅನಿವಾರ್ಯವಾಗಿ ಆ ದಿನ ಸಂಜೆ ಸಂಗೀತ ಪಾಠಕ್ಕೆ ಚಕ್ಕರ್! ಸೈಕಲ್ ಇಲ್ಲದೆ ನಡೆದುಕೊಂಡು ಹೋಗುತ್ತಿದ್ದುದನ್ನು ಊರಿನವರು ಯಾರೋ ನೋಡಿ ತಂದೆಯವರಿಗೆ ತಿಳಿಸಿದರು.

ಶನಿವಾರ ಊರಿಗೆ ಹಿಂದಿರುಗಿದಾಗ ರೌದ್ರಾವತಾರ ತಾಳಿದ ತಂದೆಯವರಿಂದ ನಮ್ಮ ಕೋರ್ಟ್ ಮಾರ್ಷಲ್! “ಸೈಕಲ್ಲನ್ನು ಅವರಿಗೆ ಹೇಗೆ ಕೊಟ್ಟೆ? ಸಂಗೀತ ಪಾಠಕ್ಕೆ ಏಕೆ ತಪ್ಪಿಸಿಕೊಂಡೆ? ವಾಪಾಸು ಶಿವಮೊಗ್ಗಕ್ಕೆ ಕಾಲುನಡಿಗೆಯಲ್ಲಿಯೇ ಹೋಗಬೇಕು, ಯಾವ ಬಸ್ಸನ್ನೂ ಹತ್ತಬಾರದು, ಹುಷಾರ್!” ಎಂದು ಗದರಿಸಿ ನಮಗೆ ಕೊಟ್ಟಿದ್ದ ಸೈಕಲ್ಲನ್ನು ಮುಟ್ಟುಗೋಲು ಹಾಕಿಕೊಂಡರು. ಮುಖ ಸಪ್ಪಗೆ ಮಾಡಿಕೊಂಡು ಒಂದೆರಡು ಕಿಲೋ ಮೀಟರ್ ದೂರ ನಡೆದು ಹೋದಾಗ ಹಿಂದಿನಿಂದ ಬಂದ ಊರಿನ ಹಿರಿಯರೊಬ್ಬರು ತಡೆದು ನಿಲ್ಲಿಸಿದರು. ಏಕೆಂದು ಕೇಳಿದರು. ಹನಿಗಣ್ಣಾಗಿ ನಡೆದ ಸಂಗತಿಯನ್ನೆಲ್ಲಾ ವಿವರಿಸಿ ಹೇಳಿದಾಗ ಅವರು ನಮ್ಮ ಮೇಲೆ ಅನುಕಂಪ ತೋರಿ “ಆ ಅಯ್ನೋರಿಗೆ ಬುದ್ದಿ ಇಲ್ಲ! ಹತ್ತು ನನ್ನ ಸೈಕಲ್ಲನ್ನು” ಎಂದು ಒತ್ತಾಯಿಸಿದರು. ತಂದೆಯ ಆದೇಶವನ್ನು ಉಲ್ಲಂಘಿಸಿದರೆ ಮತ್ತೊಂದು ಶಿಕ್ಷೆ ವಿಧಿಸಬಹುದೆಂಬ ಭಯದಿಂದ ಹತ್ತಲಿಲ್ಲ. ಆದರೆ ಆ ಹಿರಿಯರು ಬಲವಂತವಾಗಿ ನಮ್ಮನ್ನು ಅವರ ಸೈಕಲ್ ಮೇಲೆ ಹತ್ತಿಸಿ ಕೂರಿಸಿಕೊಂಡು ಶಾಲೆಯನ್ನು ಮುಟ್ಟಿಸಿದರು. Atlas(t) ಸೈಕಲ್ ವಾರದ ನಂತರ ನಮ್ಮ ಕೈಸೇರಿತು. ಬಂಧುಗಳ ಮನೆಯನ್ನು ಬಿಡಿಸಿ ಶಿವಮೊಗ್ಗ ನಗರದಲ್ಲಿ ಒಂದು ಬಾಡಿಗೆ ರೂಮನ್ನು ಕೊಡಿಸಿ ಸ್ವತಂತ್ರವಾಗಿ ಕೈಯಡಿಗೆ ಮಾಡಿಕೊಂಡು ಓದಲು ವ್ಯವಸ್ಥೆ ಮಾಡಿದರು. ಬೇಕೆಂದೇ ಸಂಗೀತ ಪಾಠಕ್ಕೆ ಚಕ್ಕರ್ ಹೊಡೆಯದ ತಪ್ಪಿಗೆ ನಮಗೆ ಕೊಟ್ಟ ಶಿಕ್ಷೆ ಸರಿಯೇ ತಪ್ಪೇ? ಜಸ್ಟೀಸ್ ಛಾಗಲಾ ರವರಂತೆ ಓದುಗರ ವಿಶ್ಲೇಷಣೆಗೆ ಬಿಟ್ಟ ವಿಚಾರ.

ರಾಮಾಯಣದ ಅಹಲ್ಯಾ ಪ್ರಸಂಗ:

ಗೌತಮ ಮಹರ್ಷಿ ಕಠೋರ ತಪಸ್ಸನ್ನು ಮಾಡಿ ಸಿದ್ದಿ ಪಡೆಯುವ ಹಂತದಲ್ಲಿರುತ್ತಾನೆ. ಸಿದ್ದಿ ದೊರಕಿಬಿಟ್ಟರೆ ಅವನೇ ಇಂದ್ರನ ಪದವಿಗೇರುತ್ತಾನೆ. ಸಿಂಹಾಸನದಲ್ಲಿರುವ ಇಂದ್ರನು ಪದವಿಯನ್ನು ಕಳೆದುಕೊಳ್ಳುತ್ತಾನೆ. ಇದನ್ನು ಅರಿತ ಇಂದ್ರ ಗೌತಮನ ತಪಸ್ಸನ್ನು ಸಿದ್ದಿಸದಂತೆ ಕೆಡಿಸುವ ಮಾರ್ಗವನ್ನು ಹುಡುಕುತ್ತಾನೆ. ಗೌತಮನ ಶಕ್ತಿ ಇರುವುದೆಲ್ಲವೂ ಆತನ ಸತಿ ಅಹಲ್ಯೆಯ ಪಾತಿವ್ರತ್ಯದಲ್ಲಿ. ಅವಳ ಪಾತಿವ್ರತ್ಯವನ್ನು ಭಂಗ ಮಾಡಿಬಿಟ್ಟರೆ ಗೌತಮನ ತಪಸ್ಸು ಸಿದ್ದಿಸುವುದಿಲ್ಲ. ಆದರೆ ಹಾಗೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ತನ್ನ ಮಾಯಾವಿದ್ಯೆಯನ್ನು ಬಳಸಿ ಇಂದ್ರನೇ ಸಾಕ್ಷಾತ್ ಗೌತಮನಾಗಿ ಅಹಲ್ಯೆಯ ಬಳಿ ಬಂದು ಆಕೆಯನ್ನು ಕೂಡುತ್ತಾನೆ. ಅವಳ ಪಾತಿವ್ರತ್ಯ ಅವಳಿಗೇ ಅರಿವಿಲ್ಲದಂತೆ ಭಂಗವಾಗಿಬಿಡುತ್ತದೆ. ಎಂದಿನಂತೆ ಆ ದಿನ ತಪಸ್ಸಿನಲ್ಲಿ ತೊಡಗಲು ಸಾಧ್ಯವಾಗದೆ ಗೌತಮನು ತೊಳಲಾಡಿ ಕುಟೀರಕ್ಕೆ ಬಂದು ನೋಡುತ್ತಾನೆ - ಗೌತಮನ ವೇಷದ ಇಂದ್ರನ ತೋಳ್ತೆಕ್ಕೆಯಲ್ಲಿ ತನ್ನ ಸತಿ ಅಹಲ್ಯೆ! ಋಷಿಯು ಕೋಪಾವಿಷ್ಟನಾಗಿ ಇಂದ್ರನಿಗೂ, ತನ್ನ ಸತಿ ಅಹಲ್ಯೆಗೂ ಶಾಪ ಕೊಡುತ್ತಾನೆ. ಅಂದಿನಿಂದ ಯುಗ ಯುಗಗಳವರೆಗೆ ಕಲ್ಲುಬಂಡೆಯಾಗಿ ಬಿದ್ದಿದ್ದ ಅಹಲ್ಯೆಯನ್ನು ಕುವೆಂಪು ಅವರು “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯದಲ್ಲಿ “ಶಿಲಾ ತಪಸ್ವಿನಿ” ಎಂದು ಕರೆಯುತ್ತಾರೆ. ಕಲ್ಲಾಗಿದ್ದ ಅಹಲ್ಯೆಯು ರಾಮನ ಪಾದಸ್ಪರ್ಶವಾದ ಕೂಡಲೇ ಶಾಪವಿಮೋಚನೆಯಾಗಿ ಪುನಃ ಹೆಣ್ಣಾಗುತ್ತಾಳೆ. ಈ ಸಂದರ್ಭವನ್ನು ಕುವೆಂಪು ತಮ್ಮ ಕಾವ್ಯದಲ್ಲಿ ತುಂಬಾ ಮನಮಿಡಿಯುವಂತೆ ಚಿತ್ರಿಸಿದ್ದಾರೆ: “ಪೆತ್ತ ತಾಯಂ ಮತ್ತೆ ಪಡೆದಂತಾಗಿ ನಮಿಸಿದನೋ ರಘುಜನುಂ ಗೌತಮ ಸತಿಯ ಪದಕೆ – ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!” ಗೌತಮನೂ ಆಶ್ರಮಕ್ಕೆ ಮರಳಿ ಬರುತ್ತಾನೆ. ಸತಿ ಪತಿಗಳ ಸಂಗಮವು ರಾಮಸನ್ನಿಧಿಯಲ್ಲಿ ಆಗುತ್ತದೆ. ತನ್ನ ತಪ್ಪು ಸಾಸಿವೆಯ ಷಡ್ಭಾಗದಷ್ಟೂ ಇಲ್ಲದ ಪತಿಪರಾಯಣೆಯಾದ ಅಹಲ್ಯೆಗೆ ಮಹರ್ಷಿ ಗೌತಮ ನೀಡಿದ ಘನಘೋರ ಶಿಕ್ಷೆ ನ್ಯಾಯವೇ?

 ಷೇಕ್ಸ್-ಪಿಯರನ “ಒಥೆಲೋ” ನಾಟಕದಲ್ಲಿ ನಾಯಕಿ ಅಪ್ರತಿಮ ಸುಂದರಿ ಡೆಸ್ಡೆಮೋನಾಳ ಜೊತೆ ಕ್ಯಾಸಿಯೋ ಎಂಬುವನ ಅಕ್ರಮ ಸಂಬಂಧವಿದೆಯೆಂದು ಖಳನಾಯಕ ಇಯಾಗೋ ಕಥೆ ಕಟ್ಟುತ್ತಾನೆ. ಅದಕ್ಕೆ ಪುರಾವೆಯನ್ನೂ ಒದಗಿಸುತ್ತಾನೆ. ಡೆಸ್ಡೆಮೋನಾಳ ಗೆಳತಿಯಾದ ತನ್ನ ಹೆಂಡತಿಯಿಂದಲೇ ಅವಳ ಕರವಸ್ತ್ರವನ್ನು ಸಂಪಾದಿಸಿ ಕ್ಯಾಸಿಯೋನ ಮಲಗುವ ಕೋಣೆಯಲ್ಲಿ ಹಾಕುತ್ತಾನೆ. ಅದನ್ನು ಕೈಲಿ ಹಿಡಿದು ಕಸೂತಿಯ ಕಲೆಗೆ ಮಾರುಹೋಗಿ ಕ್ಯಾಸಿಯೋ ಮಾತನಾಡುವುದನ್ನು ದೂರದಿಂದ ಒಥೆಲೋಗೆ ತೋರಿಸಿ ನಂಬಿಸುತ್ತಾನೆ. ಕೋಪದಿಂದ ಕುದಿಯುತ್ತಾ ಒಥೆಲೋ ತನ್ನ ಹೆಂಡತಿಯನ್ನೇ ಕೊಲ್ಲುತ್ತಾನೆ. ತಾನು ಮಾಡಿದುದು ತಪ್ಪು, ನಂಬಿದ ತನ್ನ ಸತಿಯನ್ನೇ ಕೊಂದದ್ದು ಘನಘೋರವೆಂಬುದು ನಂತರ ತಿಳಿಯುತ್ತದೆ. ಅವನೂ ತನ್ನನ್ನು ತಾನೇ ಇರಿದುಕೊಂಡು ಸಾಯುತ್ತಾನೆ! ಈಗ ನೀವೇ ಹೇಳಿ: “ಡೆಸ್ಡೆಮೋನಾಗೆ ದೊರೆತ ಶಿಕ್ಷೆ ನ್ಯಾಯವೇ?”

ಮೊನ್ನೆ ಮೊನ್ನೆ ಅತ್ಯಂತ ಶ್ರದ್ಧಾಭಕ್ತಿಯಿಂದ ಹಿಮಲಿಂಗ ದರ್ಶನ ಮಾಡಲು ಅಮರನಾಥಕ್ಕೆ ತೆರಳಿದ ಭಕ್ತರು ಹಿಮ ಸಮಾಧಿಯಾಗಿ ಹೋಗಿದ್ದಾರೆ. ಈ ಭಕ್ತರಿಗೆ ದೊರೆತ ಶಿಕ್ಷೆ ನ್ಯಾಯವೇ! ಅವರು ಮಾಡಿದ ತಪ್ಪಾದರೂ ಏನು ಭಗವಂತ? – 

“ನಿಮ್ಮ ಮಹಿಮೆಯ ನೀವೇ ಬಲ್ಲಿರಿ ಶಂಭು ಜಕ್ಕೇಶ್ವರಾ!” (ಹಿರೇಜಂಬೂರು ಸತ್ಯಕ್ಕ).

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ. 14-7-2022.