ಸಿರಿಗೆರೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ದಾಸೋಹ ನಿಧಿಗೆ ದೇಣಿಗೆ ನೀಡಲು ಪ್ರಕಟಣೆ
ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗ ಜಿಲ್ಲೆ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ರೈತರ ಕಲ್ಯಾಣ, ನ್ಯಾಯದಾನ ಹೀಗೆ ನೂರಾರು ಸೇವಾ ಕೈಂಕರ್ಯಗಳನ್ನು ಭಕ್ತರಿಗೆ ಮಾಡುತ್ತಾ ಬಂದಿದೆ. ಭಕ್ತರಲ್ಲಿ ಆಸ್ತಿಕತೆಯನ್ನು ಬೆಳೆಸಿ, ಸಮಾಜಕ್ಕೆ ಧರ್ಮ ನಿಷ್ಠೆ, ಕಾಯಕ ನಿಷ್ಠೆ, ಸನ್ಮಾರ್ಗ ದರ್ಶನ, ಶರಣ ತತ್ವಬೋಧನೆಯಿಂದ ಸತ್ಪಥವನ್ನು ತೋರುವ ಸತ್ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದೆ.
19ನೆಯ ಜಗದ್ಗುರುಗಳಾದ ಶ್ರೀ ಗುರುಶಾಂತರಾಜ ದೇಶಿಕೆಂದ್ರ ಮಹಾಸ್ವಾಮಿಗಳವರು ಅಪೂರ್ವ ಶಿಕ್ಷಣ ಪ್ರೇಮಿಗಳು. ಪೂರ್ವಾಶ್ರಮದಲ್ಲಿ ಸ್ವತಃ ಶಿಕ್ಷಕರಾಗಿದ್ದ ಗುರುವರ್ಯರು ಶ್ರೀ ಮಠದ ಆವರಣದಲ್ಲಿ 1917ರಲ್ಲಿಯೇ ಪ್ರಾಥಮಿಕ ಶಾಲೆಯನ್ನು ತೆರೆದು ವಿದ್ಯಾದಾನಕ್ಕೆ ನಾಂದಿ ಹಾಡಿದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಹಳ್ಳಿಯ ಬಡ ಮಕ್ಕಳಿಗೆ ಅನುಕೂಲವಾಗಲೆಂದು ದಾವಣಗೆರೆಯಲ್ಲಿ 1923ರಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ಉಚಿತ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಿದರು.
20ನೆಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಶಿಯಲ್ಲಿ ಓದಲು ಹೋಗಿ ಅನುಭವಿಸಿದ ತೊಂದರೆಗಳ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಲು ನಿರ್ಧರಿಸಿ ಸ್ವಾತಂತ್ರ್ಯ ಪೂರ್ವದಲ್ಲಿಯೇ 1946 ರಲ್ಲಿ ಸಿರಿಗೆರೆಯಲ್ಲಿ ಪೌಢಶಾಲೆಯನ್ನು ಸ್ಥಾಪಿಸಿದರು. ನಂತರ 1962 ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಾಲಾ ಕಾಲೇಜುಗಳನ್ನು ತೆರೆದರು. “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ”ಎನ್ನುವ ಬಸವಣ್ಣನವರ ವಚನದ ಆಶಯದಂತೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಜ್ಞಾನದ ಜ್ಯೋತಿಯನ್ನು ಹೊತ್ತಿಸಿದರು.
21ನೆಯ ಜಗದ್ಗುರುಗಳಾಗಿರುವ ಈಗಿನ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದೇಶ ವಿದೇಶಗಳಲ್ಲಿ ಆಧುನಿಕ ಶಿಕ್ಷಣ ಪಡೆದ ಬಹು ಭಾಷಾ ವಿದ್ವಾಂಸರಾಗಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶೈಕ್ಷಣಿಕ ಸೇವಾ ಕಾರ್ಯದ ಕ್ಷಿತಿಜವನ್ನು ವಿಸ್ತರಿಸಿದರು. ಮಠ ಮತ್ತು ವಿದ್ಯಾಸಂಸ್ಥೆಗೆ ಆರ್ಥಿಕ ಸುಭದ್ರತೆಯನ್ನು ನೀಡಿ ನೂರಾರು ಶಾಲಾ-ಕಾಲೇಜುಗಳಿಗೆ ಭವ್ಯವಾದ ಕಟ್ಟಡಗಳನ್ನು ನಿರ್ಮಿಸಿ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ. ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿಜ್ಞಾನಿಗಳಾಗಿ, ವೈದ್ಯರುಗಳಾಗಿ, ಎಂಜಿನಿಯರುಗಳಾಗಿ, ನ್ಯಾಯಾಧೀಶರಾಗಿ, IAS, IPS, IFS ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತ ರಾಜದೇಶಿಕೇಂದ್ರ ಮಹಾಸ್ವಾಮಿಗಳವರು ದಾವಣಗೆರೆಯಲ್ಲಿ ಸ್ಥಾಪಿಸಿದ್ದ ಉಚಿತ ವಿದ್ಯಾರ್ಥಿ ನಿಲಯಕ್ಕೆ ಈಗ 100 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದಿಂದ ಸಿರಿಗೆರೆಯಲ್ಲಿ ಓದುವ ಎಲ್ಲಾ ಪ್ರತಿಭಾನ್ವಿತ ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆೆ ಜಾತಿಮತ ಭೇದವಿಲ್ಲದೆ ಉಚಿತ ಊಟ-ವಸತಿ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದ್ದಾರೆ.
ತಮ್ಮ ಗುರುಪಿತಾಮಹರ ಸಂಸ್ಮರಣೆಯಲ್ಲಿ ಸುಮಾರು 42 ಕೋಟಿ ರೂ. ಗಳ ವೆಚ್ಚದಲ್ಲಿ ಭವ್ಯವಾದ “ಶ್ರೀ ಗುರುಶಾಂತೇಶ್ವರ ದಾಸೋಹ ಭವನ” ಕಟ್ಟಿಸಿದ್ದಾರೆ. ಈ ವರ್ಷ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಿರಿಗೆರೆಯ ಶಾಲಾ-ಕಾಲೇಜುಗಳ ವಸತಿನಿಲಯಗಳಲ್ಲಿ ಪ್ರವೇಶಾತಿ ಪಡೆದಿದ್ದು ಇವರೆಲ್ಲರಿಗೂ ಉಚಿತ ಪ್ರಸಾದವನ್ನು ಒದಗಿಸಲು 2.5 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಭಕ್ತಾದಿಗಳು ತಮ್ಮ ಉದಾರ ಕಾಣಿಕೆಯನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕೋರಿದೆ. ತಮ್ಮ ಆರ್ಥಿಕ ಸ್ಥಿತಿಗೆ ಅನುಸಾರವಾಗಿ ವಿದ್ಯಾರ್ಥಿಗಳನ್ನು ದತ್ತು ಪಡೆದು ಒಬ್ಬ ವಿದ್ಯಾರ್ಥಿಗೆ 12 ಸಾವಿರ ರೂ. ಗಳಂತೆ ಹಣವನ್ನು ನೀಡಿ ನೆರವಾಗಲು ಕೋರಿದೆ.
ಬ್ಯಾಂಕ್ ಖಾತೆ ವಿವರಗಳು:
Account Name: Sri Taralabalu Jagadguru Brihanmath, Sirigere
Account No: 10032200005995
Bank Name: Canara Bank
Branch: Sirigere
IFSC Code: CNRB0011003
ವಿ.ಸೂ: ಆದಾಯ ತೆರಿಗೆ ವಿನಾಯಿತಿ ಪಡೆಯಲು ಇಚ್ಚಿಸುವವರು ತಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಕಡ್ಡಾಯವಾಗಿ ನೀಡುವುದು.
-ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ
ಸಿರಿಗೆರೆ