ಆನಗೋಡು ಜಿ.ಚನ್ನಪ್ಪ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗೆ ಐ.ಎ.ಎಸ್. ಪದವಿ : ಶ್ರೀ ಎಂ.ಎಸ್.ದಿವಾಕರ ಅವರಿಗೆ ಸನ್ಮಾನ
ಆನಗೋಡು : ಆನಗೋಡಿನ ಜಿ.ಚನ್ನಪ್ಪ ಪದವಿ ಪೂರ್ವ ಕಾಲೇಜಿನಲ್ಲಿ 1994ನೇ ಸಾಲಿನಲ್ಲಿ ಪಿ.ಯು.ಸಿ ವಿದ್ಯಾಭ್ಯಾಸ ಮುಗಿಸಿ ದಾವಣಗೆರೆ ಜಿಲ್ಲೆಯ ಪ್ರಥಮ ಐ.ಎ.ಎಸ್. ಪದವಿ ಪಡೆದ ಹಿರಿಯ ವಿದ್ಯಾರ್ಥಿ ಗಂಗನಕಟ್ಟೆ ಗ್ರಾಮದ ಶ್ರೀ ಎಂ.ಎಸ್. ದಿವಾಕರ ಅವರನ್ನು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಸ್ಥಳೀಯ ಸಲಹಾ ಸಮಿತಿ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು. ಶ್ರೀಯುತರು ಎಲ್ಲರ ಪರವಾಗಿ ಸನ್ಮಾನವನ್ನು ಸ್ವೀಕರಿಸಿ ವಿದ್ಯಾರ್ಥಿ ಜೀವನದ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳಿಗೆ ಅವರಲ್ಲಿರುವ ಚೈತನ್ಯ ಶಕ್ತಿಯ ಬಗ್ಗೆ ಅರಿವು ಮೂಡುವಂತೆ ಸರಳವಾಗಿ ಮನಮುಟ್ಟುವಂತೆ ಮಾತನಾಡಿದರು.
ಸನ್ಮಾನಿತಗೊಂಡ ಎಂ.ಎಸ್.ದಿವಾಕರ್ ಅವರು ಮಾತನಾಡುತ್ತಾ "ವಿದ್ಯಾರ್ಥಿಗಳೇ ನಾನೂ ನಿಮ್ಮಂತೆಯೇ ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದು ಸರ್ಕಾರಿ ಕನ್ನಡ ಶಾಲೆಯಲ್ಲಿ ಅಧ್ಯಯನ ಮಾಡಿದ್ದೇನೆ. ಗುರುಗಳ ಮಾರ್ಗದರ್ಶನದಂತೆ ಅವರ ಸಲಹೆ-ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದ್ದೇನೆ. ನನ್ನ ಹಿನ್ನೆಲೆ ಚಿಕ್ಕದಾಗಿದ್ದರೂ ಗುರಿದೊಡ್ಡದಾಗಿತ್ತು. ಅದ್ದರಿಂದಲೇ ಬಿ.ಎಸ್ಸಿ ಯಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಲು ಸಾಧ್ಯವಾಯಿತು". ಮುಂದೆ ಎಂ.ಎಸ್ಸಿ ದಿಕ್ಸೂಚಿಯಾಗಿ ಒಂದು ಉನ್ನತ ಹುದ್ದೆಗೇರಲು ದಾರಿಯಾಯಿತು. ಇಂದು ಐ.ಎ.ಎಸ್ ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮಲ್ಲಿ ನನಗಿಂತಲೂ ಹೆಚ್ಚಿನ ಪ್ರತಿಭೆ ಸಾಮರ್ಥ್ಯವಿದೆ. ಅದನ್ನು ಸಾಬೀತು ಪಡಿಸಲು ಗುರು-ಹಿರಿಯರ ಮಾರ್ಗದರ್ಶನ, ಆದರ್ಶ ವ್ಯಕ್ತಿಗಳ ಅದರ್ಶಗಳು ಮೈಗೊಡಿಸಿಕೊಂಡರೆ ನೀವುಗಳು ನನ್ನಂತೆಯೇ ವೇದಿಕೆಯ ಮೇಲೆ ಬಂದು ಸಾಧನೆಗೆ, ಸನ್ಮಾನಕ್ಕೆ, ಅಭಿನಂದನೆಗೆ ಸಾಕ್ಷಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಓದಿನ ಉತ್ಸಾಹ ತುಂಬಿದರು. ಇಂತಹ ಶ್ರೀಸಂಸ್ಥೆಯಲ್ಲಿ ನೀವು ಗುರುಗಳ ಮಾರ್ಗದರ್ಶನದಂತೆ ಓದುತ್ತಿರುವುದು ನಿಮ್ಮೆಲ್ಲರ ಪುಣ್ಯ. ಕಾಲೇಜಿಗೆ ನಿಮ್ಮ ಗ್ರಾಮಕ್ಕೆ ನಿಮ್ಮ ಹೆತ್ತವರಿಗೆ ಕೀರ್ತಿತರುತ್ತೀರಿ ಎಂಬ ಆಶಾಭಾವನೆ ನನ್ನದಾಗಿದೆ. ಶುಭವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಚಾರ್ಯರಾದ ಡಾ.ಎಂ.ಸಿ ಕಾವೇರಿಗೌಡರ್ ಮಾತನಾಡುತ್ತಾ, "ಬದುಕಿನ ಪ್ರಾರಂಭ ಚಿಕ್ಕದಾಗಿದ್ದರೂ ಅಂತಿಮ ಗುರಿ ದೊಡ್ಡದಾಗಿರಬೇಕು" ಏಕೆಂದರೆ ಒಂದು ಕಾಲದಲ್ಲಿ FDA ಆಗಿದ್ದ ಜಾನಕಿ ಎಂಬ ಮಹಿಳೆ ಕಠಿಣ ಪರಿಶ್ರಮದಿಂದ ಇಂದು IAS ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಕಾರಣ ಅವರು ಕಂಡ ಕನಸು ಕೂಡದೊಡ್ಡದಾಗಿತ್ತು. ಎಂತಹ ಕನಸನ್ನು ನೀವು ಕಾಣಬೇಕೆಂದರೆ ಕನಸು ನಮ್ಮನ್ನು ಮಲಗಲು ಬಿಡದೆ ಗುರಿಯೆಡೆಗೆ ಸದಾಕಾಲವೂ ಎಚ್ಚರಿಸುವಂತೆ ಇರಬೇಕು. ಡಿವಿಜಿಯವರ ಉಕ್ತಿಯಂತೆ "ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ, ಮೇರುವರು ಮರೆತಂದೆ ನರಕಕ್ಕೆ ದಾರಿ" ದೂರವಾದೊಡೇನು? ಕಾಲು ಕುಂಟಿರಲೇನು? ಊರ ನೆನಪೇ ಬಲವೊ ಮಂಕುತಿಮ್ಮ ಎಂಬ ಕಗ್ಗದಂತೆ ಭೂಮಿಯ ಮೇಲೆ ಹುಟ್ಟಿ ಬದುಕುವಾಗ ಗುರಿ ಉನ್ನತವಾಗಿರಲಿ ಉನ್ನತವಾದ ಗುರಿಯನ್ನು ಮರೆತರೇ ಅದೇ ನರಕಕ್ಕೆ ದಾರಿ. ಉನ್ನತವಾದ ಗುರಿ ದೂರವಿದ್ದರೇನು? ಅದನ್ನು ತಲುಪಲು ಕಾಲು ಕುಂಟವಾಗಿದ್ದರೂ ನಮ್ಮ ಊರನ್ನು ನೆನೆದರೆ ನಾವು ಅಲ್ಲಿಗೆ ತಲುಪಲು ಬಲವನ್ನು ಕೊಡುತ್ತದೆ. ಎಂಬಂತೆ ನಮ್ಮ ಪ್ರಯತ್ನ ಸದಾಕಾಲವೂ ಚೈತನ್ಯ ಮತ್ತು ಚಲನಶೀಲವಾಗಿರಲಿ. ಹಾಗಾಗಿ ದಿವಾಕರ್ ಅವರು ನಮ್ಮಂತಹ ಗ್ರಾಮಾಂತರ ಪ್ರದೇಶದ ಕಾಲೇಜಿನಲ್ಲಿ ಓದಿ ಸಾಧಕರಾಗಿದ್ದಾರೆ. ಇಂಥವರ ದಾರಿಯಲ್ಲಿ ನೀವು ಕೂಡ ಮುನ್ನಡೆದು ಸಾಧಿಸಬೇಕು ಎಂದು ಆಶಿಸುವೆ ಎಂದು ನುಡಿದರು.
ಸಾಧಕ ಸನ್ಮಾನಿತರನ್ನು ಪರಿಚಯ ಮಾಡಿದ ಸಮಾಜಶಾಸ್ತ್ರ ಉಪನ್ಯಾಸಕರಾದ ಡಾ.ಸಿ.ಅಜ್ಜಯ್ಯ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ನುಡಿಯನ್ನು ಉಲ್ಲೇಖಿಸುತ್ತಾ "ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು" ಎಂಬಂತೆ ಎಂ.ಎಸ್.ದಿವಾಕರ್ ಅವರು ಶಿಕ್ಷಣವೆಂಬ ಹುಲಿಯ ಹಾಲನ್ನು ಕುಡಿದು ಘರ್ಜಿಸಿದ್ದರಿಂದಲೇ ಇಂದು ಐ.ಎ.ಎಸ್ ಆಗಿದ್ದು, ದೇಶದ ಅನ್ನದಾತರಾದ ರೈತರಿಗೆ "ಕಿಸಾನ್" ಎಂಬ ಹೊಸ App ಕಂಡು ಹಿಡಿದಿದ್ದು. ಇವೆಲ್ಲವೂ ಅಪರೂಪದ ಕಾರ್ಯಕ್ರಮವಾಗಿವೆ. ದಾವಣಗೆರೆ ಜಿಲ್ಲೆಯ ಐ.ಎ.ಎಸ್ ಪದವಿ ಎಂಬ ಹುದ್ದೆಗೆ ಪ್ರಪ್ರಥಮರಾಗಿ ಹೊಸ ವ್ಯಾಖ್ಯಾನ ಕೊಟ್ಟವರಾಗಿದ್ದಾರೆ. ಇಂತಹ ಅಪರೂಪದ ಆದರ್ಶ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯರಾದ ಡಾ. ಎಂ.ಸಿ.ಕಾವೇರಿಗೌಡರ್ ವಹಿಸಿದ್ದರು. ಉಪನ್ಯಾಸಕ ಕಾರ್ಯದರ್ಶಿಯಾದ ಎಸ್.ವಿ. ಮಾಳದಕರ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಸಿ.ಅಜ್ಜಯ್ಯ ಗೌರವಾನ್ವಿತರನ್ನು ಪರಿಚಯಿಸಿದರು. ಉಪನ್ಯಾಸಕರಾದ ಬಿಂದುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ನೌಕರರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.