ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಸಭೆ : ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಚನ

  •  
  •  
  •  
  •  
  •    Views  

ಸಿರಿಗೆರೆ: ಜುಲೈ 17ರ ಭಾನುವಾರ  ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿ  ಹಾಗೂ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಇಂದು ಜರುಗಿದ ಸಾಧು ಸದ್ಧರ್ಮ ವೀರಶೈವ ಸಂಘದ ಸರ್ವಸದಸ್ಯರ ಸಭೆಯಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಶೀರ್ವಚನ ನೀಡಿದರು.

ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ ಕಾಲದಲ್ಲಿ 1922ರಲ್ಲಿ ಬೈಲಾ ರೂಪಿತವಾಗಿದೆ. ಅದನ್ನು ಅವರು 1923 ರಲ್ಲಿ ನೋಂದಣಿ ಮಾಡಿಸಿದ್ದಾರೆ. ನಮ್ಮ ಕಾಲದಲ್ಲಿ ಬೈಲಾ ತಿದ್ದುಪಡಿಯೇ ಆಗಿಲ್ಲ ಎಂದು ಶ್ರೀಗಳು ಸ್ಪಷ್ಟ ಪಡಿಸಿದರು.

ಸಾಧು ಸದ್ಧರ್ಮ ಸಂಘದ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ತರುವ ಅವಶ್ಯಕತೆ ಇದ್ದು ಕೊರೋನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಆ ಕೆಲಸ ತಡವಾಗಿದ್ದು, ಸಂಘದ ವಿಶೇಷ ಸಭೆ ಕರೆದು ಅದಕ್ಕೆ ಚಾಲನೆ ನೀಡಬೇಕು ಎಂದು ಶ್ರೀಗಳು ಹೇಳಿದರು.

ರಾಜ್ಯದಾದ್ಯಂತ ಚದುರಿಹೋಗಿರುವ ಸಾಧುಸದ್ಧರ್ಮ ವೀರಶೈವ ಸಂಘದ ಸಮುದಾಯವನ್ನು ಸಂಘಟಿಸುವ ಸಲುವಾಗಿ ತಾಲ್ಲೂಕು ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದ ಸಮಾಜದ ಜನರ ಒಗ್ಗೂಡುವಿಕೆಗೆ ಅನುಕೂಲವಾಗಿದೆ.

ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಭದ್ರಾವತಿ ತಾಲ್ಲೂಕು ಹನುಮಂತಾಪುರದ ರೈತ ಹೋರಾಟಗಾರ ಎಚ್.ಆರ್.ಬಸವರಾಜಪ್ಪ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ. ಮೂಗಪ್ಪ ಕೊಟ್ಟೂರು ಅವರಿಗೆ ಅಭಿನಂದಿಸಿದರು.

ಈ ಸಂಬಂಧ ರಾಜ್ಯದ ವಿವಿಧ ತಾಲ್ಲೂಕು ಸಮಿತಿಯ ಅಧ್ಯಕ್ಷರುಗಳ ಸಂಘದವರೊಂದಿಗೆ ಶ್ರೀಗಳು ಚರ್ಚೆ ನಡೆಸಿದರು. ನಂತರ ಹರಪನಹಳ್ಳಿಯ ಮಂಜುನಾಥ್ ಬಸವರಾಜಪ್ಪನವರ ಆಯ್ಕೆಯನ್ನು ಪ್ರಕಟಿಸಿದರು. ಈಗಾಗಲೇ ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಹೊತ್ತಿರುವ ಬಸವರಾಜಪ್ಪ ಅವರ ಹೆಗಲಿಗೆ ಸಾಧು ಸದ್ಧರ್ಮ ಸಂಘದ ಜವಾಬ್ದಾರಿಯೂ ಬಿದ್ದಂತಾಗಿದೆ.

ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜಪ್ಪ ಮಾತನಾಡಿ, ಸಂಘ ಸಂಸ್ಥೆಗಳೆಂದರೆ ಅಪಸ್ವರಗಳು ಇದ್ದದ್ದೇ ಅದಕ್ಕೆ ಶ್ರೀಗಳು ವಿಚಲಿತರಾಗಬೇಕಾದ ಅಗತ್ಯ ಇಲ್ಲ. ಇಡೀ ಸಮಾಜವು ಅವರೊಟ್ಟಿಗೆ ಇರುತ್ತದೆ. ಇರುವ ತೊಂದರೆಗಳನ್ನು ಕುಟುಂಬದ ಸಮಸ್ಯೆಗಳು ಎಂದು ತಿಳಿದು ತಾಳ್ಮೆಯಿಂದ ತಿಳಿಗೊಳಿಸೋಣ ಎಂದರು.

ರಾಜ್ಯಸಭೆಯ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪನವರ ನಿಧನದ ನಂತರ ಪ್ರಭಾರೆ ಅಧ್ಯಕ್ಷನಾಗಿ ಕೆಲಸ ಮಾಡುವಂತ ಅವಕಾಶವನ್ನು ಸಮಾಜವು ತಮಗೆ ಕಲ್ಪಿಸಿಕೊಟ್ಟಿತ್ತು. ಅತ್ಯಂತ ಹೊಣೆಗಾರಿಕೆಯಿಂದ ಆ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಅದಕ್ಕೆ ಪೂಜ್ಯ ಶ್ರೀಗಳ ಪ್ರೇರಣೆ ಕಾರಣವಾಗಿತ್ತು ಎಂದು ಬಿ.ಎಲ್. ಶಿವಳ್ಳಿ ಹೇಳಿದರು.

ಭಕ್ತರು ದಾನಶೂರರು: 

ನಮ್ಮ ಮಠಕ್ಕೆ ಇರುವ ಶಿಷ್ಯ ಸಂಪತ್ತು ಬೇರೆ ಮಠಗಳಿಗೆ ಇಲ್ಲ. ಗುರುಗಳ ಪಾದಗಳಿಗೆ ನಮಸ್ಕರಿಸಿ ಕಾಣಿಕೆ ಅರ್ಪಿಸುವ ದೊಡ್ಡಗುಣ ಇರುವುದೇ ತರಳಬಾಳು ಮಠದ ಭಕ್ತರಲ್ಲಿ. ನಮ್ಮ ಮಠದ ಭಕ್ತರು ದಾನಶೂರರು ಇದ್ದಂತೆ ಎಂದು ತರಳಬಾಳು ಶ್ರೀಗಳು ಭಕ್ತರನ್ನು ಕೊಂಡಾಡಿದರು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್, ಆಡಳಿತಾಧಿಕಾರಿ ಡಾ ಎಚ್.ವಿ.ವಾಮದೇವಪ್ಪ, ಭರಮಸಾಗರ ಕೆರೆ ಹೋರಾಟ ಸಮಿತಿಯ ಚೌಲಿಹಳ್ಳಿ ಶಶಿ ಪಾಟೀಲ್, ಗ್ರಾ.ಪಂ ಅಧ್ಯಕ್ಷ ಎಂ.ಜಿ.ದೇವರಾಜ, ನಿವೃತ್ತ ಐ.ಎಫ್.ಎಸ್ ಅಧಿಕಾರಿ ನಾಗರಾಜ್ ಹಂಪೋಳ್, ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಮುಂತಾದವರು ಇದ್ದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ಧಯ್ಯ ಸ್ವಾಗತಿಸಿದರು. ತಾಲ್ಲೂಕು ಸಮಿತಿ ಪದಾಧಿಕಾರಿಗಳು, ಸದ್ಭಕ್ತರು ಭಾಗವಹಿಸಿದ್ದರು.