ಭಾರತ ದೇಶದಲ್ಲಿ ದೇವರ ಬಗ್ಗೆ ವಿಶೇಷ ಪರಿಕಲ್ಪನೆ ಇದೆ : ಪ್ರಾಚಾರ್ಯ ಡಿ.ಎಂ.ನಾಗರಾಜ್
ಸಿರಿಗೆರೆ: ಭಾರತ ದೇಶದಲ್ಲಿ ದೇವರ ಬಗ್ಗೆ ವಿಶೇಷವಾದ ಒಲವು ಮತ್ತು ವಿಶೇಷವಾದ ಒಂದು ಪರಿಕಲ್ಪನೆ ಇದೆ.ಆ ಕಲ್ಪನೆಗಳಿಗೆ ತಕ್ಕಂತೆ ಪ್ರತಿಯೊಂದು ದೇವರಿಗೆ ಅದಕ್ಕೆ ತಕ್ಕಂತೆ ವಿವಿಧ ಹೆಸರುಗಳು,ನಾನಾ ಬಗೆಯ ರೂಪಗಳನ್ನು ನಾವು ಸೃಷ್ಟಿಸಿದ್ದೇವೆ ಎಂದು ಪ್ರಾಚಾರ್ಯ ಡಿ.ಎಂ.ನಾಗರಾಜು ತಿಳಿಸಿದರು.
ಇಲ್ಲಿನ ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ದೇವರು ಮತ್ತು ಪವಾಡ ವಿಷಯದ ದಂದಣ-ದತ್ತಣ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ನಾಗರಿಕತೆಯ ಕಾಲಘಟ್ಟದಲ್ಲಿ ಪ್ರವೇಶ ಮಾಡಿದಂತೆ ತನ್ನ ಸಹಜ ಮುಗ್ಧತೆಯನ್ನು ಕಳಚಿಕೊಳ್ಳುತ್ತ ನಂತರ ಆಚರಣೆಗಳತ್ತ ಆಕರ್ಶಿತನಾಗುತ್ತ ಸಾಗುತ್ತಾನೆ. ಪ್ರಕೃತಿಯ ವಿಸ್ಮಯಗಳಿಂದ ಬೆರಗುಗೊಂಡ ಮನುಷ್ಯ ಆರಂಭದಲ್ಲಿ ನಿಸರ್ಗವನ್ನೇ ದೇವರೆಂದು ಭಾವಿಸುತ್ತಾನೆ. ಕೆಲವು ಭಯ ಮತ್ತು ಭಕ್ತಿಗಳ ರೂಪವು ಮನಷ್ಯನಲ್ಲಿ ದೇವರೆಂಬ ಪರಿಕಲ್ಪನೆಯು ಹುಟ್ಟಿಗೆ ಮೂಲ ಪ್ರೇರಣೆಯಾಗಿವೆ.
ನಿಸರ್ಗ ಶಕ್ತಿಯನ್ನು ದೇವರೆಂದು ಪರಿಭಾವಿಸಿ ಪೂಜಿಸುವ ಪದ್ಧತಿ ಮುಂದುವರೆದು ಅದು ಕಲ್ಲು, ಮಣ್ಣು, ಪಂಚಲೋಹಗಳಿಂದ ಮೂರ್ತಿರೂಪ ಪಡೆದು ಇಂದು ಆರಾಧಿಸುವ ಪರಿಕಲ್ಪನೆಗೆ ಜನ್ಮ ನೀಡಿರುವುದು ಸತ್ಯಸಂಗತಿಯಾಗಿದೆ.
ವಿಜ್ಞಾನ ವಿಭಾಗದ ಜಿ.ಆರ್.ರಕ್ಷಿತ ದೇವರ ಹುಟ್ಟು ಮತ್ತು ಪರಿಕಲ್ಪನೆ, ಎಂ.ಎಲ್.ಪಲ್ಲವಿ ವಿವಿಧ ಕಾಲಘಟ್ಟದಲ್ಲಿ ದೇವರ ಬೆಳವಣಿಗೆ, ಡಿ.ಕೆ.ರುಕ್ಮಿಣಿ ಪವಾಡದ ಅರ್ಥ, ಕೆ.ಎಂ.ಶ್ರೀರಕ್ಷ ಪವಾಡಗಳು ಮತ್ತು ವೈಜ್ಞಾನಿಕ ವಿಶ್ಲೇಷಣೆ ಬಗ್ಗೆ ವಿಷಯ ಮಂಡಿಸಿದರು.
ಪ್ರೀತಿ ಸಂಗಡಿಗರು ಪ್ರಾರ್ಥಿಸಿದರು, ಎಚ್.ಎಲ್.ಮನೋಜ್ ಸ್ವಾಗತಿಸಿದರು, ಕೆ.ಎಂ.ಸೋಮೇಶ್ ವಂದಿಸಿದರು, ಬಿ.ರಾಜೇಶ್ ನಿರೂಪಿಸಿದರು.
ಉಪನ್ಯಾಸಕ ವರ್ಗ ಹಾಗೂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.