ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ವಿಜ್ಞಾನ ಕಾರ್ಯಗಾರ
ಸಿರಿಗೆರೆ: ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ದಿನಾಂಕ 16.07.2022 ರಂದು ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆಗಳ ಮೂಲಕ ಪಠ್ಯ ಬೋಧನೆಯ ಕಾರ್ಯಗಾರ ಜರುಗಿತು. ಈ ಕಾರ್ಯಗಾರದ ಉದ್ಘಾಟನೆಯನ್ನು ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಜೆ.ಡಿ.ಬಸವರಾಜ್ ಅವರು ವೈಜ್ಞಾನಿಕವಾಗಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಮಕ್ಕಳಿಗೆ ಪಾಠಗಳ ಜೊತೆಗೆ ಪ್ರಾಯೋಗಿಕ ಚಟುವಟಿಕೆಗಳು ಅತ್ಯಂತ ಅವಶ್ಯಕ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ವಸಂತ ಎನ್.ಬಡಿಗೇರ್ ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯರಾದ ಎಂ.ಎನ್.ಶಾಂತಮ್ಮ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಾಸನದ ನಿವೃತ್ತ ಉಪಪ್ರಾಂಶುಪಾಲರಾದ ಪ್ರೊ. ಪಾರ್ಥ ಇವರು ತಾವೇ ತಯಾರಿಸಿದ ವಿಜ್ಞಾನ ಪ್ರಯೋಗಗಳ ಮೂಲಕ ವಿಜ್ಞಾನ ಪಠ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧನೆ ಮಾಡಬಹುದೆಂದು ತಮ್ಮ ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳಿಗೆ ತೋರಿಸಿಕೊಟ್ಟರು. 37 ವರ್ಷದ ಬೋಧನಾ ಅನುಭವಿದ್ದು, ಸುಮಾರು 160ಕ್ಕೂ ಹೆಚ್ಚು ಪ್ರಯೋಗಗಳನ್ನು ಮಂಡಿಸಿದ್ದಾರೆ. 10ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ರಸಾಯನಶಾಸ್ತ್ರದ ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ಹಾಗೂ ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ಹಾಗೂ ಲವಣಗಳಿಗೆ ಸಂಬಂಧಿಸಿದಂತೆ ಪುಸ್ತಕದಲ್ಲಿನ ಎಲ್ಲಾ ಚಟುವಟಿಕೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಪ್ರಯೋಗಗಳ ಮೂಲಕ ವಿವರಣೆಯನ್ನು ನೀಡಿದರು. ನಂತರ ಭೌತಶಾಸ್ತ್ರದ ವಿದ್ಯುತ್ ಶಕ್ತಿ ಪಾಠದ ವಿದ್ಯುತ್ ಮಂಡಲ, ವಿದ್ಯುತ್ ವಿಭವಾಂತರ, ರೋಧ, ವಿದ್ಯುತ್ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ವಿಜ್ಞಾನದ ನಿಯಮಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟರು.
ಬೆಳಿಗ್ಗೆ 9:30ರಿಂದ ಪ್ರಾರಂಭವಾದ ಕಾರ್ಯಾಗಾರ ಸಂಜೆ 6:00ವರೆಗೆ ನಿರಂತರವಾಗಿ ನಡೆಯಿತು. ಮಕ್ಕಳು ಸ್ವಲ್ಪವೂ ವಿಚಲಿತರಾಗದೆ ಪ್ರಯೋಗಗಳಲ್ಲಿ ಭಾಗವಹಿಸಿ ಫಲಿತಾಂಶಗಳ ವಿಶ್ಲೇಷಣೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಮಕ್ಕಳ ಭಾಗವಹಿಸುವಿಕೆ ಮತ್ತು ಆಸಕ್ತಿ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆಯ 10ನೇ ತರಗತಿ ಮಕ್ಕಳು ಹಾಗೂ ಬಿಎಲ್ಆರ್ ಪದವಿ ಪೂರ್ವ ಪ್ರೌಢಶಾಲಾ ವಿಭಾಗದ 10ನೇ ತರಗತಿಯ ವಿದ್ಯಾರ್ಥಿಗಳು ಒಟ್ಟಾಗಿ 170 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂತ್ಯಕ್ಕೆ ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾದ ಡಿ.ಎಸ್ ಪಾಟೀಲ್ ವಂದಿಸಿದರು, ಜಿ.ಎಸ್.ಶಿವಕುಮಾರ್, ರೊಟ್ಟಿ ಚನ್ನಕೇಶ್ವರ, ಟಿ.ಓ.ಭಾಗ್ಯ, ಎಂ.ಸೌಮ್ಯ, ಎಸ್.ಅನಿತಾ, ಎಚ್.ಎಂ.ಮಂಜುಳಾ, ಬಿ.ಎನ್.ಸ್ವರ್ಣ, ಎಸ್.ಚೈತ್ರ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ನಂತರ ಸಂಪನ್ಮೂಲ ವ್ಯಕ್ತಿಗಳು ಪೂಜ್ಯರಿಂದ ಆಶೀರ್ವಾದ ಪಡೆದರು.