ಮಾಡದ ತಪ್ಪಿಗೆ ನೀಡಿದ ಶಿಕ್ಷೆ - ಒಂದು ಪರಾಮರ್ಶೆ

  •  
  •  
  •  
  •  
  •    Views  

ಚಿಕ್ಕ ಮಕ್ಕಳ ಮುಗ್ಧತೆ ಎಂಥವರ ಮನಸ್ಸನ್ನೂ ಸೂರೆಗೊಳ್ಳುತ್ತದೆ. ಜನಪದಗೀತೆಯಲ್ಲಿ ತಾಯಿಯೊಬ್ಬಳು “ನನ್ನಯ್ಯನಂಥೋರು ಹನ್ನೆರಡು ಮಕ್ಕಳು ಹೊನ್ನೆಯ ಮರದ ನೆರಳಲ್ಲಿ ಆಡುವಾಗ ಸಂನ್ಯಾಸಿ ಜಪವಾ ಮರೆದಾನಾ!” ಎಂದು ಹೃದಯತುಂಬಿ ಹಾಡುತ್ತಾಳೆ. ಮಕ್ಕಳನ್ನು ಮಾತನಾಡಿಸುವ ಪ್ರಸಂಗ ಬಂದಾಗಲೆಲ್ಲಾ ನಾವು ಕೇಳುವ ಸರಳ ಪ್ರಶ್ನೆ: “ಒಂದು ಮರದ ಮೇಲೆ 100 ಗಿಳಿಗಳು ಕೂತಿದ್ದವು. ಬೇಟೆಗಾರನೊಬ್ಬ ತನ್ನ ಬಂದೂಕಿನಿಂದ ಅವುಗಳತ್ತ ಗುಂಡು ಹಾರಿಸಿದ. ಒಂದು ಗಿಳಿಗೆ ಗುಂಡು ತಗುಲಿ ಸತ್ತು ನೆಲಕ್ಕೆ ಬಿತ್ತು. ಮರದ ಮೇಲೆ ಉಳಿದ ಗಿಳಿಗಳು ಎಷ್ಟು?” ಕಣ್ಣರಳಿಸಿ ಕೇಳಿಸಿಕೊಂಡ ಮುಗ್ಧ ಮಕ್ಕಳು ತಕ್ಷಣವೇ ಕೊಡುವ ಉತ್ತರ: “99 ಗಿಳಿಗಳು!” ಗುಂಡಿನ ಶಬ್ಧಕ್ಕೆ ಹೆದರಿ ಅವೆಲ್ಲವೂ ಹಾರಿ ಹೋಗುತ್ತವೆ, ಮರದ ಮೇಲೆ ಒಂದೂ ಇರುವುದಿಲ್ಲ ಎಂದಾಗ ಮಕ್ಕಳು ಪೆಚ್ಚು ಮೋರೆ ಮಾಡಿಕೊಂಡರೂ ಮುಂದಿನ ಪ್ರಶ್ನೆಗೆ ಹಾತೊರೆಯುತ್ತವೆ. ಅಂಕಗಣಿತದ ದೃಷ್ಟಿಯಿಂದ ಮಕ್ಕಳು ಕೊಟ್ಟ ಉತ್ತರ ಸರಿ. ಆದರೆ ವ್ಯಾವಹಾರಿಕ ದೃಷ್ಟಿಯಿಂದ ಅವರ ಉತ್ತರ ತಪ್ಪು. 

ನೆಟ್ಟಗಿರುವ ಕೋಲನ್ನು ನೀರಿನೊಳಗೆ ಇಳಿಯಬಿಟ್ಟರೆ ಡೊಂಕಾಗಿ ಕಾಣುತ್ತದೆ. ಹೊರಗೆ ನೇರವಾಗಿ ಕಂಡ ಕೋಲು ನೀರಿನೊಳಗೆ ಯಾರು ಎಷ್ಟೇ ದಿಟ್ಟಿಸಿ ನೋಡಿದರೂ ಡೊಂಕಾಗಿಯೇ ಕಾಣುತ್ತದೆ. ಇದಕ್ಕೆ “ವಕ್ರೀಭವನ” (refraction) ಎಂದು ಕರೆಯುತ್ತಾರೆಂದು ಬಾಲ್ಯದಲ್ಲಿ ಓದಿದ ನೆನಪು. ಯಾವುದೇ ವಸ್ತು ಅಥವಾ ಘಟನೆಯನ್ನು ಅನೇಕ ದೃಷ್ಟಿಗಳಿಂದ ನೋಡಬಹುದು. ಒಬ್ಬರ ದೃಷ್ಟಿಯಲ್ಲಿ ಸರಿಯೆಂದು ಕಂಡದ್ದು ಇನ್ನೊಬ್ಬರ ದೃಷ್ಟಿಯಲ್ಲಿ ತಪ್ಪಾಗಿ ಕಾಣಬಹುದು. ಹಳದಿ ಕನ್ನಡಕದಲ್ಲಿ ಹಳದಿಯಾಗಿಯೇ ಕಾಣುವುದು ಸರಿ. ಆದರೆ ಹಾಗೆ ಕಂಡ ವಸ್ತು ಹಳದಿ ಎಂದು ಭಾವಿಸುವುದು ತಪ್ಪು. ಈ ಸರಿ-ತಪ್ಪುಗಳು ಅವರವರು ಅನುಸರಿಸುವ ಮಾನದಂಡವನ್ನು ಅವಲಂಬಿಸಿರುತ್ತವೆ. ಎಲ್ಲರೂ ಒಪ್ಪಿಕೊಳ್ಳುವ ಮಾನದಂಡವೆಂದರೆ ಮಾನವೀಯತೆ (humanitarian ground). ಕಾನೂನಿನ ದೃಷ್ಟಿಯಿಂದ ನೋಡಿದರೆ ಈ ಸರಿ-ತಪ್ಪುಗಳು ದೇಶ-ಕಾಲವನ್ನು ಅನುಸರಿಸಿ ಬದಲಾವಣೆಯಾಗುತ್ತಾ ಹೋಗುತ್ತವೆ. ವಾಹನಗಳನ್ನು ಎಡ ಬದಿಯಲ್ಲಿ ಚಲಿಸುವುದು ಭಾರತ, ಇಂಗ್ಲೆಂಡಿನಲ್ಲಿ ಸರಿ; ಇತರೆ ಐರೋಪ್ಯ ರಾಷ್ಟ್ರಗಳು ಮತ್ತು ಅಮೇರಿಕೆಯಲ್ಲಿ ತಪ್ಪು. 

ತಪ್ಪುಗಳಲ್ಲಿ ಎರಡು ವಿಧ: ಗೊತ್ತಿಲ್ಲದೆಯೇ ಮಾಡುವ ತಪ್ಪು, ಗೊತ್ತಿದ್ದೂ ಮಾಡುವ ತಪ್ಪು. ಗೊತ್ತಿಲ್ಲದೆಯೇ ತಪ್ಪು ಮಾಡುವವರು ಕ್ಷಮಾರ್ಹರಾದರೂ ಕೆಲವು ವೇಳೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ. ಬಾಟಲಿಯಲ್ಲಿರುವುದು ವಿಷವೆಂದು ಗೊತ್ತಾಗಲಿಲ್ಲ, ಜೇನುತುಪ್ಪವೆಂದು ಕುಡಿದೆ ಎಂದರೆ ಸಾವು ತಪ್ಪಿದ್ದಲ್ಲ. ಇನ್ನು ಗೊತ್ತಿದ್ದೂ ತಪ್ಪು ಮಾಡುವವರು ಕ್ಷಮಾರ್ಹರಲ್ಲ. ಆದರೆ ಅಂಥವರನೇಕರು ಶಿಕ್ಷೆಗೆ ಒಳಗಾಗುವುದಿಲ್ಲ. ಏಕೆಂದರೆ ಅವರು ತುಂಬಾ ಚಾಣಾಕ್ಷರಿರುತ್ತಾರೆ. ತಮ್ಮ ತಪ್ಪನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಹಾರಿಕೆ ಉತ್ತರ ಕೊಡುತ್ತಾರೆ. ಇಲ್ಲವೇ ಇನ್ನೊಬ್ಬರ ಮೇಲೆ ತಪ್ಪು ಹೊರಿಸುತ್ತಾರೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬೇಕಾದ ಸಂಚನ್ನು ರೂಪಿಸುತ್ತಾರೆ. ಸುಳ್ಳಿಗೆ ಸುಳ್ಳು ಪೋಣಿಸಿ ಮರೆಮಾಚುವ ಪ್ರಯತ್ನ ಮಾಡುತ್ತಾರೆ. “ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸು ಕಾಲ ಬದುಕುವನೋ? ಕೆಡುವೊಡಲ ನೆಚ್ಚಿ, ಕಡು ಹುಸಿಯನೆ ಹುಸಿದು, ಒಡಲ ಹೊರೆವರ ಮೆಚ್ಚ ನಮ್ಮ ಕೂಡಲಸಂಗಮ ದೇವಯ್ಯನೊಲ್ಲ ಕಾಣಿರಣ್ಣಾ” ಎನ್ನುತ್ತಾರೆ ಬಸವಣ್ಣನವರು. 

“ತಪ್ಪು ಮಾಡದವರಿಗೆ ಶಿಕ್ಷೆ ವಿಧಿಸುವುದು ನ್ಯಾಯವೇ?” ಎಂದು ಪ್ರಶ್ನಿಸಿ ಬರೆದ ಕಳೆದ ಬಾರಿಯ ನಮ್ಮ ಅಂಕಣಕ್ಕೆ ಓದುಗರಿಂದ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳೆಲ್ಲವನ್ನೂ ಕ್ರೋಡೀಕರಿಸಿದರೆ ಒಂದು ಕಿರು ಹೊತ್ತಿಗೆಯೇ ಆಗುತ್ತದೆ. ಆಯ್ದ ಕೆಲವು ವಿಚಾರಗಳು ಹೀಗಿವೆ: 

  • ಪರಸ್ಪರರ ಪ್ರೀತಿ ನಂಬಿಕೆಗಳ ಮೇಲೆ ಎಷ್ಟೋ ವ್ಯವಹಾರಗಳು ನಡೆಯುತ್ತವೆ. ಅನಾಹುತ ಸಂಭವಿಸಿದಾಗ ನ್ಯಾಯಾಲಯದಲ್ಲಿ ಪ್ರೀತಿ ವಿಶ್ವಾಸಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಲಿಖಿತ ಪುರಾವೆಗಳ ಆಧಾರದ ಮೇಲೆ ಅಮಾಯಕರು ಶಿಕ್ಷೆಗೊಳಗಾಗುವುದು ಸಹಜ. (ಎಂ.ಎಸ್. ಪ್ರಭುದೇವ್, ಶಿವಮೊಗ್ಗ)

  • ಮಗು ಬಿಸಿಯಾದ ಇಸ್ತ್ರಿ ಪೆಟ್ಟಿಗೆ ಮುಟ್ಟಿದಾಗ ಅದರ ಕೈ ಖಂಡಿತಾ ಸುಡುತ್ತೆ. ಹಾಗೆ ಜೀವನದಲ್ಲಿ ಕೆಲವೊಮ್ಮೆ ನಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುವ ಪ್ರಸಂಗ ಬರಬಹುದು. (ಅನಿತಾ ಶೆಟ್ಟರ್, ಬೆಂಗಳೂರು)

  • ಹೆಂಡತಿಯು ಕೂಲಿನಾಲಿ ಮಾಡಿ ಕಷ್ಟಪಡುತ್ತಿದ್ದರೆ, ಕುಡುಕ ಗಂಡ ಅವಳನ್ನು ಹೊಡೆದು ಬಡಿದು ಅವಳ ಕೈಯಲ್ಲಿರುವ ಪುಡಿಗಾಸನ್ನೂ ಕಿತ್ತುಕೊಂಡು ಹೋಗುತ್ತಾನೆ. ಪಾಪ, ಮಕ್ಕಳಿಗೂ ಆಕೆಗೂ ಆ ದಿನ ತಣ್ಣೀರು ಹಾಗೂ ಕಣ್ಣೀರೇ ಗತಿ. (ರೂಪಾ ಮಂಜುನಾಥ, ಹೊಳೆನರಸೀಪುರ)

  • ಅರಿತೋ ಅರಿಯದೆಯೋ ತಪ್ಪುಗಳು ಎಲ್ಲರ ಜೀವನದಲ್ಲಿಯೂ ಜರುಗುತ್ತವೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದು ಸರಿ. ತಪ್ಪನ್ನೇ ಮಾಡದವರಿಗೆ ಶಿಕ್ಷೆ ವಿಧಿಸುವುದು ತಪ್ಪು. (ಪೂರ್ಣಿಮಾ ಭಗವಾನ್, ಬೆಂಗಳೂರು)

  • ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ನೀತಿಯನ್ನು ಅನುಸರಿಸಿ ನ್ಯಾಯಾಲಯವೂ ಸರಿಯಾದ ತೀರ್ಪು ನೀಡಲು ಆಗುತ್ತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಬೇಕಾಗುತ್ತದೆ. (ಕಾಂತಾ ರಾಮುಲು, ಬೆಂಗಳೂರು)

  • ತಪ್ಪು ಮಾಡದೆ ಇದ್ದರೂ ಶಿಕ್ಷೆ ಅನುಭವಿಸಿರುವ ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದು ಅಪರಿಮಿತ ನೋವನ್ನು ಅನುಭವಿಸಿದ್ದೇನೆ. ಹಿಂದಿನ ಜನ್ಮಗಳ ಸಂಚಿತ ಕರ್ಮಗಳ ಫಲ ಇರಬಹುದು ಎಂದು ನನ್ನನ್ನು ನಾನು ಸಂತೈಸಿಕೊಂಡಿದ್ದೇನೆ. (ಸತ್ಯಪ್ರಭಾ ವಸಂತಕುಮಾರ್, ಚಿತ್ರದುರ್ಗ)

  • ತಪ್ಪು ಮಾಡದವರನ್ನು ಶಿಕ್ಷಿಸಿದರೆ ನ್ಯಾಯವೇ? | ಒಪ್ಪದೆ ಕೇಳುತಿದೆ ಮಾನವತೆ ಕೂಗಿ!| ತಪ್ಪು ಒಪ್ಪುಗಳ ನಿರ್ಧಾರ ಯಾರದು?| ಸತತ ತಪ್ಪದಿಹ ವಿಧಿಯದೇ! ಪರಮಾತ್ಮನೆ? (ಕೃಷ್ಣಕವಿ, ಬೆಂಗಳೂರು)

  • ಕಾನೂನು ಕಣ್ಣಿದ್ದೂ ಕುರುಡು. ಹೀಗಾಗಿ ಕೆಲವು ಸಾರಿ ಇಂತಹ ಪ್ರಮಾದಗಳು ನಡೆಯುತ್ತವೆ. ವಕೀಲರ ಚಾಕಚಕ್ಯತೆ ನ್ಯಾಯದಾನದಲ್ಲಿ ಎಡರು ತೊಡರುಗಳನ್ನು ಸೃಷ್ಟಿಸಿ ನ್ಯಾಯಾಧೀಶರಿಗೆ ಸತ್ಯವನ್ನು ಹೆಕ್ಕಿ ತೆಗೆಯುವುದು ಧಾನ್ಯಗಳ ರಾಶಿಯಲ್ಲಿ ಸೂಜಿ ಹುಡುಕಿದಂತೆಯೇ ಸರಿ! ಇಂತಹ ದೃಷ್ಟಾಂತಗಳನ್ನೆಲ್ಲ ಯಾವುದೋ ಜನ್ಮದ ಪಾಪದ ಫಲ, ಹಣೆಬರಹ, ದೇವರ ಇಚ್ಛೆ ಎನ್ನದೆ ಬೇರೆ ಮಾರ್ಗವಿಲ್ಲ. (ನಾರಾಯಣ ದೊಂತಿ, ಚಿತ್ರದುರ್ಗ)

  •  “ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ, ತಪ್ಪು ಮಾಡದ ವ್ಯಕ್ತಿ ಶಿಕ್ಷೆ ಪಡೆಯುವ ಹಾಗೆ” ಆರನೆಯ ತರಗತಿಯಲ್ಲಿದ್ದಾಗ ಓದಿದ ಡಾ.ಸಿ.ಪಿ.ಕೆ ಯವರ ಈ ಕವನದ ಸಾಲುಗಳಲ್ಲಿ ಅಂಕಣದ ಪೂರ್ಣ ತಾತ್ಪರ್ಯ ಅಡಗಿದೆ. (ಯು. ಪ್ರಸನ್ನ, ಸಿರಿಗೆರೆ)

  • ತಪ್ಪಿತಸ್ಥ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ ಸಾಕ್ಷ್ಯಾಧಾರವಿಲ್ಲದೆ ಅಪರಾಧಿಗಳು ಕಾನೂನಿನ ಬೇಲಿಯನ್ನು ದಾಟಿ ರಾಜಾರೋಷವಾಗಿ ಬದುಕುತ್ತಾರೆ. ನಿರಪರಾಧಿಗಳು, ಸಾತ್ವಿಕರು ಸಾಕ್ಷಿಯ ಕೊರತೆಯಿಂದಾಗಿ ಶಿಕ್ಷೆ ಅನುಭವಿಸುತ್ತಾರೆ. (ರವಿನಾಗ್, ತಾಳ್ಯ)

ಹಿಂದಿನ ಅಂಕಣದಲ್ಲಿ ಉಲ್ಲೇಖಿಸಿದ ಒಂದೊಂದು ಪ್ರಕರಣವನ್ನೂ ಕುರಿತು ಮಾನವೀಯ ದೃಷ್ಟಿಯಿಂದ ವಿಶ್ಲೇಷಣೆ ಮಾಡಿದರೆ ತಪ್ಪು ಬೇರೆ ಯಾರದೋ ಆಗುತ್ತದೆ. ಮೊದಲನೆಯದು ರೈತನೊಬ್ಬ ತನ್ನ ಟ್ರ್ಯಾಕ್ಟರ್ ಅನ್ನು ಬೇರೊಬ್ಬ ರೈತನಿಗೆ 3 ಲಕ್ಷ ರೂ. ಗಳಿಗೆ ಮಾರಾಟ ಮಾಡಿದ ಮೇಲೆ ಆ ಟ್ರ್ಯಾಕ್ಟರ್ ಅಪಘಾತಕ್ಕೆ ಒಳಗಾಗಿ ನ್ಯಾಯಾಲಯದಲ್ಲಿ 24 ಲಕ್ಷ ರೂ. ದಂಡ ತೆರಬೇಕಾದ ಪ್ರಕರಣ. ವಾಹನದ ದಾಖಲೆಗಳು ವಾಹನವನ್ನು ಕೊಂಡ ರೈತನ ಹೆಸರಿಗೆ ಇರದೆ ಮಾರಿದ ರೈತನ ಹೆಸರಿಗೆ ಇದ್ದ ಕಾರಣ ನ್ಯಾಯಾಲಯವು ಮೂಲ ಮಾಲೀಕನಿಗೆ ವಿಧಿಸಿದ ಬಹು ಮೊತ್ತದ ದಂಡ ಕಾನೂನಿನ ದೃಷ್ಟಿಯಿಂದ ಸರಿಯೆನಿಸಿದರೂ ಅಮಾನವೀಯವೆನಿಸುತ್ತದೆ. “ಕಾನೂನು ಕತ್ತೆ” (Law is an ass) ಎನ್ನುವುದು ಇದಕ್ಕಾಗಿಯೇ.

ಇಲ್ಲಿ ವಾಸ್ತವವಾಗಿ ತಪ್ಪು ಮಾಡಿದವರು ಇಬ್ಬರು: ಫಿರ್ಯಾದುದಾರಳು ಮತ್ತು ವಕೀಲರು. ಟ್ರ್ಯಾಕ್ಟರ್ ಓಡಿಸುತ್ತಿದ್ದವನು ಮೂಲ ಮಾಲೀಕನ ನೌಕರನಲ್ಲ; ಖರೀದಿ ಮಾಡಿದವನು. ಮೂಲ ಮಾಲೀಕನ ನೌಕರನು ಓಡಿಸುತ್ತಿದ್ದನೆಂದು ನ್ಯಾಯಾಲಯಕ್ಕೆ ಸುಳ್ಳು, ಮಾಹಿತಿ ಕೊಟ್ಟು ನ್ಯಾಯಾಲಯ ದಂಡ ವಿಧಿಸುವಂತೆ ಮಾಡಿದವನು ಜಾಣ ವಕೀಲ. ತನ್ನ ಕಕ್ಷಿದಾರನ ಹಿತ ಕಾಪಾಡಲು ತಪ್ಪು ಮಾಡದವನ ಮೇಲೆ ತಪ್ಪು ಹೊರಿಸುವುದು ಘನಘೋರ ಅಪರಾಧ. ಸದ್ಯ ಟ್ರ್ಯಾಕ್ಟರ್ ಖರೀದಿಸಿದ ರೈತನ ಕುಟುಂಬದ ಮೇಲೆ ಕೇಸು ದಾಖಲಿಸದೇ ಇರುವುದು ಪುಣ್ಯಕಾರ್ಯವೆನ್ನಬಹುದು. ಎಷ್ಟೋ ವೇಳೆ ತಮ್ಮ ಕಕ್ಷಿದಾರರೇ ತಪ್ಪು ಮಾಡಿದ್ದಾರೆಂದು ಚೆನ್ನಾಗಿ ಗೊತ್ತಿದ್ದರೂ professional ethics ಎಂಬ ಆಧಾರದ ಮೇಲೆ ನ್ಯಾಯವಾದಿಗಳು “ಅನ್ಯಾಯವಾದಿ”ಗಳಾಗುತ್ತಾರೆ. ಆದಕಾರಣವೇ “Lawyers are liars” ಎಂಬ ಗಾದೆ ಮಾತು ಹುಟ್ಟಿಕೊಂಡದ್ದು, ಸುಳ್ಳು ವಾದ ಮಂಡಿಸಿದ ವಕೀಲರನ್ನು ಶಿಕ್ಷಿಸುವ ತೀರ್ಪುಗಳು ನ್ಯಾಯಾಲಯಗಳಲ್ಲಿ ಯಥೇಚ್ಛವಾಗಿ ಬಂದರೆ ಅಪರಾಧಿಗಳ ಸಂಖ್ಯೆ ಕಡಿಮೆಯಾಗಬಹುದು ಮತ್ತು ಕೇಸುಗಳು ತ್ವರಿತ ಗತಿಯಲ್ಲಿ ವಿಲೇವಾರಿಯಾಗಬಹುದು. 

ಎರಡನೆಯ ತಪ್ಪಿತಸ್ಥಳು ಸತ್ತು ಹೋದ ಪಕ್ಕದ ಹೊಲದವನ ಹೆಂಡತಿಯಾದ ಫಿರ್ಯಾದುದಾರಳು. ಅವಳ ಗಂಡನನ್ನು ಟ್ರ್ಯಾಕ್ಟರ್ ಮೇಲೆ ಹತ್ತಿಸಿಕೊಳ್ಳದಿದ್ದರೆ ಈ ಪ್ರಕರಣವೇ ಉದ್ಭವಿಸುತ್ತಿರಲಿಲ್ಲ. ಆದರೆ ಊರಿಗೆ ವಾಪಾಸು ಬರುವಾಗ ಹತ್ತಿಸಿಕೊಳ್ಳುವ ಸೌಜನ್ಯ ತೋರಲಿಲ್ಲವೆಂದು ಬೇರೊಂದು ರೀತಿಯ ಜಗಳಕ್ಕೆ ಕಾರಣವಾಗುತ್ತಿತ್ತು.

ಎರಡನೆಯ ಪ್ರಕರಣ ಮುಂಬೈ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಂ.ಸಿ. ಛಾಗ್ಲಾರವರು ವಿದ್ಯಾರ್ಥಿಗಳಾಗಿದ್ದಾಗ ನಡೆದದ್ದು. ಅಧ್ಯಾಪಕರು ಬೋರ್ಡಿನತ್ತ ತಿರುಗಿದಾಗ ಪಕ್ಕದಲ್ಲಿದ್ದ ಹುಡುಗ ಮೇಜು ಕುಟ್ಟಿ ಕೀಟಲೆ ಮಾಡಿದನೆಂದು ಗೊತ್ತಿದ್ದರೂ ಛಾಗ್ಲಾ ಹೇಳಲಿಲ್ಲವಲ್ಲಾ ಎಂಬ ಸಿಟ್ಟು ಅಧ್ಯಾಪಕರಿಗೆ. ಛಾಗ್ಲಾ ತಪ್ಪು ಮಾಡಿಲ್ಲವೆಂದು ಶಿಕ್ಷಕರಿಗೆ ಗೊತ್ತು. ಪಕ್ಕದ ಹುಡುಗ ತಪ್ಪು ಮಾಡಿದ್ದಾನೆಂದು ಅವರ ಗ್ರಹಿಕೆ. ಆದರೆ ಅವನೇ ಎಂಬುದಕ್ಕೆ ಸಾಕ್ಷಿ ಬೇಕಾಗಿತ್ತು. ಛಾಗ್ಲಾ ಮಾತ್ರ ತಪ್ಪು ಮಾಡಿಲ್ಲ ಎಂಬುದಕ್ಕೆ ಆತನ ಹಿಂದಿನ ನಡವಳಿಕೆ ಕಾರಣ ಎನ್ನುವುದಾದರೆ, ಪಕ್ಕದ ಹುಡುಗನ ಹಿಂದಿನ ನಡವಳಿಕೆಯನ್ನು ಆಧರಿಸಿ ಏಕೆ ಶಿಕ್ಷೆ ವಿಧಿಸಲಿಲ್ಲ? ಸಿಟ್ಟಿನಿಂದ Get out ಎಂದು ನೀಡಿದ ಆದೇಶಕ್ಕೆ ಮರು ಮಾತನಾಡದೆ ಹೊರ ನಡೆದ ಛಾಗ್ಲಾ ವಿಧೇಯತೆ ಮೆಚ್ಚುವಂತಹದು. ಫಟಿಂಗ ಹುಡುಗನ ಹೆಸರು ಹೇಳಿದ್ದರೆ ತರಗತಿಯ ಹೊರಗೆ ಜಗಳವಾಗುತ್ತಿತ್ತು. ಗಹಗಹಿಸಿ ನಕ್ಕ ಉಳಿದ ವಿದ್ಯಾರ್ಥಿಗಳನ್ನು ಶಿಕ್ಷಕ ತರಾಟೆಗೆ ತೆಗೆದುಕೊಂಡು “ಛಾಗ್ಲಾ ಕೀಟಲೆ ಮಾಡಿದ ಹುಡುಗನೇ?” ಎಂದು ಕೇಳಿದ್ದರೆ ಹುಡುಗರು ತಲೆತಗ್ಗಿಸುತ್ತಿದ್ದರು. ಹೊರಗೆ ಕಳುಹಿಸಿದ್ದ ಛಾಗ್ಲಾರವರನ್ನು ಒಳಗೆ ಬರಹೇಳಿ ಕೀಟಲೆ ಮಾಡಿದ ಹುಡುಗನನ್ನು Get out you idiot! ಎಂದು ಹೊರಗೆ ಕಳುಹಿಸಬಹುದಿತ್ತು. ಆಗ ತರಗತಿಯಲ್ಲಿ ಶಿಸ್ತು ಮೂಡುತ್ತಿತ್ತು. ಇಲ್ಲಿ ಛಾಗ್ಲಾ ತಪ್ಪಿಲ್ಲ; ಶಿಕ್ಷಕರದೇ ತಪ್ಪು. 

ಇನ್ನು ಮೂರನೆಯ ಪ್ರಕರಣ ನಮ್ಮ ಬಾಲ್ಯಜೀವನಕ್ಕೆ ಸಂಬಂಧಿಸಿದ್ದು. ಇದು ನಮ್ಮದೇ ಪ್ರಕರಣವಾದ್ದರಿಂದ “Not before me” ಎಂದು ಹೇಳಬೇಕು. ಆದರೂ ನಿರ್ಲಿಪ್ತರಾಗಿ ಹೇಳಬಹುದಾದರೆ ನಮ್ಮನ್ನು ಶಾಲೆಗೆ ಕಾಲುನಡಿಗೆಯಲ್ಲಿಯೇ ಹೋಗುವಂತೆ ನಮ್ಮ ಪೂರ್ವಾಶ್ರಮದ ತಂದೆ ದಂಡಿಸಿದ್ದು ಬಂಧುಗಳಿಗೆ ಸೈಕಲ್ಲನ್ನು ಕೊಟ್ಟಿದ್ದಕ್ಕೆ ಅಲ್ಲ, ಶಾಲಾ ತರಗತಿಯ ನಂತರ ಸಂಗೀತ ಪಾಠಕ್ಕೆ ಗೈರು ಹಾಜರಾಗಿದ್ದಕ್ಕೆ. ಮುಂದೆಯೂ ಅದನ್ನೇ ನೆಪ ಮಾಡಿಕೊಂಡು ಸಂಗೀತ ಪಾಠಕ್ಕೆ ಚಕ್ಕರ್ ಹೊಡೆಯಬಾರದೆಂದು ಶಿಸ್ತು ಮೂಡಿಸಲಿಕ್ಕೆ! ಬಂಧುತ್ವದ ದಾಕ್ಷಿಣ್ಯಕ್ಕೆ ಒಳಗಾಗಬಾರದೆಂದೇ ಅವರು ನಂತರ ಪೇಟೆಯಲ್ಲಿ ಬಾಡಿಗೆಯ ರೂಮು ಕೊಡಿಸಿದ್ದು. ಇಲ್ಲಿ ಯಾರ ತಪ್ಪೂ ಇಲ್ಲ. ಶಿಕ್ಷೆಯ ಮೂಲ ಉದ್ದೇಶ ಸಿಟ್ಟು, ಸೇಡಲ್ಲ, ಅಪರಾಧಗಳನ್ನು ನಿಯಂತ್ರಿಸುವುದು, 

ನಾಲ್ಕನೆಯದಾದ ಅಹಲ್ಯಾ ಪ್ರಕರಣ ಕುರಿತು ಹೇಳುವುದಾದರೆ ಅಹಲ್ಯೆ ಜಾರಿಣಿಯಲ್ಲ. ಪರಮ ಪತಿವ್ರತೆ. ಅವಳು ಇಂದ್ರನ ತೋಳತೆಕ್ಕೆಯಲ್ಲಿದ್ದುದು ಇಂದ್ರನ ಸೌಂದರ್ಯಕ್ಕೆ ಮಾರುಹೋಗಿ ಅಲ್ಲ. ಮಹರ್ಷಿ ಗೌತಮನ ಮಾರುವೇಷದಲ್ಲಿದ್ದ ಅವನನ್ನು ತನ್ನ ಪತಿಯೆಂದೇ ತಿಳಿದು ರಮಿಸಿದಳು. ತ್ರಿಕಾಲ ಜ್ಞಾನಿಯಾದ ಗೌತಮನಿಗೆ ತನ್ನ ಪತ್ನಿ ಮೋಸ ಹೋಗಿದ್ದು ಗೊತ್ತಿರಲೇ ಬೇಕು. ಆದರೆ ಲೋಕದ ದೃಷ್ಟಿಯಲ್ಲಿ ಜಾರಿಣಿ ಎನಿಸಿದ ಅವಳೊಂದಿಗೆ ದಾಂಪತ್ಯ ಜೀವನವನ್ನು ನಡೆಸುವುದಾದರೂ ಹೇಗೆ? ಕಲ್ಲು ಹೃದಯ ಮಾಡಿಕೊಂಡು ಅವಳನ್ನು ಕಲ್ಲಾಗುವಂತೆ ಶಪಿಸುತ್ತಾನೆ. ಅವಳ ತಪ್ಪಿಲ್ಲವೆಂದು ಮನಗಂಡೇ ಶ್ರೀರಾಮನಿಂದ ಶಾಪವಿಮೋಚನೆಯನ್ನೂ ಅನುಗ್ರಹಿಸುತ್ತಾನೆ.

ರಾವಣನನ್ನು ವಧಿಸಿ ಲಂಕೆಯಿಂದ ಸೀತೆಯನ್ನು ಅಯೋಧ್ಯೆಗೆ ಕರೆತಂದ ರಾಮನಿಗೂ ಎದುರಾಗಿದ್ದು ಇದೇ ಸವಾಲು. ಲೋಕಾಪವಾದ ಬಂದಾಗ ಸೀತೆಯನ್ನು “ಅಗ್ನಿಪರೀಕ್ಷೆ”ಗೆ ಒಳಪಡಿಸಿ ಸ್ವೀಕರಿಸಿದ ಮೇಲೆ ಮತ್ತೆ ಯಾರೋ ಏನೋ ಹಂಗಿಸಿ ಮಾತನಾಡಿದರೆಂದು ತುಂಬು ಗರ್ಭಿಣಿಯನ್ನು ಕಾಡಿಗೆ ಅಟ್ಟಿದ್ದು ತಪ್ಪು. ಆಗಲೂ “ಮರ್ಯಾದಾ ಪುರುಷ”ನೆನಿಸಿದ ಶ್ರೀರಾಮನು ರಾಜ್ಯಲಕ್ಷ್ಮಿಗೆ ಮಾರು ಹೋಗಿ ಸಹಧರ್ಮಿಣಿಯನ್ನು ಅಮಾನವೀಯವಾಗಿ ಕಾಡಿಗೆ ಅಟ್ಟಿದನೆಂಬ ಲೋಕಾಪವಾದ ಬಂದಿರಲೂ ಸಾಕು. ಕಾಡಿನಲ್ಲಿ ಅತ್ತಿಗೆಯನ್ನು ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಹೇಳಿ ಕಳುಹಿಸಿ ಅರಮನೆಯಲ್ಲಿ ಏಕಾಂಗಿಯಾಗಿ ಕುಳಿತು ಕಣ್ಣೀರು ಸುರಿಸುವ ಬದಲು ಲಕ್ಷ್ಮಣನಿಗೇ ರಾಜ್ಯಭಾರ ಮಾಡಲು ವಹಿಸಿ ತಾನೇ ಸೀತೆಯನ್ನು ಕಾಡಿಗೆ ಕರೆದೊಯ್ದು ಪರ್ಣಕುಟೀರದಲ್ಲಿರಲು ಬಯಸಿದ್ದರೆ ಆಗಲೂ ಲಕ್ಷ್ಮಣ ಒಪ್ಪುತ್ತಿರಲಿಲ್ಲ. ರಾಮಾಯಣದ ಕಥೆಯೇ ಬೇರೆಯಾಗುತ್ತಿತ್ತು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.28-7-2022.