ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಬೆಳ್ಳೂಡಿ : ನೂತನ ಕೊಠಡಿ ಉದ್ಘಾಟನಾ ಸಮಾರಂಭ

  •  
  •  
  •  
  •  
  •    Views  

ಬೆಳ್ಳೋಡಿ : ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಪುರಾಣಗಳ ಕಾಲದಿಂದಲೂ ಇದೆ. ಆದರೆ ಇಷ್ಟು ಪ್ರಾಚೀನತೆ ಇದ್ದರೂ ಗಣನೀಯ ಸಾಧನೆ ಇನ್ನೂ ಆಗಬೇಕಾಗಿದೆ. ಆದುದರಿಂದ ಕೇಂದ್ರ ಸರಕಾರ ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಾಗಿ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿದೆ. ಅದೇ “ಅಟಲ್ ಟಿಂಕರಿಂಗ್ ಲ್ಯಾಬ್”. ಭಾರತ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಮೌಲ್ಯವರ್ಧಿತ ಶಿಕ್ಷಣ ನೀಡುವ ದೃಷ್ಟಿಯಿಂದ ಈ ಪ್ರಯೋಗಾಲಯವನ್ನು ಭಾರತ ದೇಶಾದ್ಯಂತ 14,916 ಶಾಲೆಗಳಲ್ಲಿ ಸ್ಥಾಪಿಸುತ್ತಿದೆ. ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗ ಮತ್ತು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಜಂಟಿಯಾಗಿ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿದ್ದ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಈ ಪ್ರಯೋಗಾಲಯಗಳು ಈಗಾಗಲೇ ಹಲವು ಶಾಲೆಗಳಲ್ಲಿ ಸ್ಥಾಪಿತವಾಗಿವೆ. ಇನ್ನೂ ಹಲವು ಶಾಲೆಗಳಲ್ಲಿ ಸ್ಥಾಪಿತವಾಗಬೇಕಾಗಿದೆ.

ಪ್ರಸ್ತುತ ಪೌಢಶಾಲಾ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಪ್ರಯೋಗಾಲಯಗಳು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಟುವಟಿಕೆಗಳನ್ನು ಹೆಚ್ಚಿಸಿ ಅವರಲ್ಲಿರುವ ಕೌಶಲ್ಯದ ಗುಣವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿವೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳು ನಿಂತ ನೀರಾಗಿರದೆ ಅವು ಸದಾ ನಿರಂತರತೆಯ ಚಲನಶೀಲತೆಯನ್ನು ಹೊಂದಬೇಕಾಗಿವೆ. ನಾಗಾಲೋಟದಲ್ಲಿ ಬದಲಾಗುತ್ತಿರುವ ಈ ಕ್ಷೇತ್ರಗಳಲ್ಲಿ ಹಲವಾರು ದೇಶಗಳು ಪ್ರಭುತ್ವವನ್ನು ಸಾಧಿಸಿವೆ. ಇದರಿಂದ ಭಾರತವು ಪ್ರಗತಿ ಸಾಧಿಸಿದ ದೇಶಗಳಿಂದ  ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಸಹಾಯ ಕೇಳುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಭಾರತವು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸ್ವಸಾಮರ್ಥ್ಯ ಸಾಧಿಸಲು ತಳಮಟ್ಟದಿಂದಲೆ ಅಭಿವೃದ್ಧಿ ಪಡಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಪ್ರೌಢಶಾಲಾ ಹಂತದಲ್ಲಿಯೆ ವಿದ್ಯಾರ್ಥಿಗಳು ಈ ಕ್ಷೇತ್ರಗಳಲ್ಲಿ ಪ್ರಭುತ್ವ ಸಾಧಿಸಲು ಈ ಯೋಜನೆಯನ್ನು ರೂಪಿಸಿದೆ.

ವಿಜ್ಞಾನ-ತಂತ್ರಜ್ಞಾನದ ಎಲ್ಲ ಸಿದ್ಧಾಂತಗಳು, ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್ ರಚಿತವಾಗಬೇಕು. ವಸ್ತುನಿಷ್ಠತೆ, ಪುನರಾವೃತ್ತಿಯ ಸಾಮರ್ಥ್ಯ, ದೃಢತೆ, ವಿಶ್ವಮಾನ್ಯತೆಯನ್ನು ಗಳಿಸುವ ನಿಟ್ಟಿನಲ್ಲಿ “ಅಟಲ್ ಟಿಂಕರಿಂಗ್ ಲ್ಯಾಬ್” ಸಹಾಯಕವಾಗುತ್ತದೆ. ಲ್ಯಾಬ್ನಲ್ಲಿ ಇರುವ ಕೊಲಾಬ್ಕ್ಯಾಡ್ 3ಡಿ ವಿನ್ಯಾಸಗಳನ್ನು ರಚಿಸುವಲ್ಲಿ, “ರೋಬೋಟಿಕ್ ಇಂಟರ್ ನೆಟ್ ಆಫ್ ಥಿಂಗ್ಸ್ಗಳು” ಮತ್ತು ಅತ್ಯುತ್ತಮ ದರ್ಜೆಯ ಟಿಲಿಸ್ಕೋಪ್ ಹೊಸ ಶೋಧನೆಗಳನ್ನು ಶೋಧಿಸಲು ಸಹಕಾರಿಯಾಗಿವೆ. ವಿದ್ಯಾರ್ಥಿಗಳೇ ಸ್ವತಃ ಪ್ರಯೋಗಶಾಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನವೀನ ಹಾಗೂ ಸೃಜನಾತ್ಮಕ ಶೋಧನೆಗಳನ್ನು ಅನ್ವೇಷಿಸಲು ಈ ಲ್ಯಾಬ್ ಸಹಕಾರಿಯಾಗಿದೆ.

ಈ ಲ್ಯಾಬನ್ನು ಸ್ಥಾಪಿಸಲು ವಿಜ್ಞಾನ-ತಂತ್ರಜ್ಞಾನದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹರಿಹರ ತಾಲ್ಲೂಕಿನ ಬೆಳ್ಳೋಡಿಯ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯನ್ನು ಗುರುತಿಸಲಾಗಿದೆ. 12ಲಕ್ಷ ರೂಪಾಯಿಗಳ ಮೊತ್ತದ ವಿಜ್ಞಾನ ಪರಿಕರಗಳನ್ನು ಈ ಲ್ಯಾಬ್ ಹೊಂದಿರುತ್ತದೆ. ಆನಂತರ ನರ್ವ ಹಣೆಗಾಗಿ  8ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ.  ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಸಕ್ತಿ, ಕುತೂಹಲ ಮೂಡಿಸುವ ಈ ಯೋಜನೆ ಗ್ರಾಮೀಣ ಮಕ್ಕಳ ಪಾಲಿನ ಆಶಾಕಿರಣವಾಗಿದೆ. ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಇಂದು (05-08-2022) “ಅಟಲ್ ಟಿಂಕರಿAಗ್ ಲ್ಯಾಬ್”ನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಉದ್ಘಾಟಿಸಲಿದ್ದಾರೆ. 

ಮಮತಾ ಎಂ 

ಸಹ ಶಿಕ್ಷಕಿ
ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆ
ಬೆಳ್ಳೋಡಿ, ಹರಿಹರ ತಾಲ್ಲೂಕು