ಶ್ರೀ ತರಳಬಾಳು ಸದ್ಧರ್ಮ ನ್ಯಾಯಪೀಠದ ಮೊರೆಹೋದ ಸಾರಿಗೆ ನೌಕರರು
ಮಾನವೀಯತೆಯ ನೆಲೆಯಲ್ಲಿ ಸಮಸ್ಯೆಯ ಪರಿಹಾರಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರ ಚಿಂತನೆ.
------------------------------------ಒಣ ಮಾತಿನ ವೇದಿಕೆಯ ಭಾಷಣಕ್ಕಿಂತ, ಸಂಕಷ್ಟಿತರಿಗೆ ನೆರವಾಗುವ ಶುದ್ಧ ಕಾಯಕದಲ್ಲಿ ಸಮಾಜದ ಕಲ್ಯಾಣವಿದೆ ಎಂಬುದನ್ನು ಹತ್ತಾರು ಯೋಜನೆಗಳಲ್ಲಿ ಸಾಕ್ಷೀಕರಿಸಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸದ್ಧರ್ಮ ನ್ಯಾಯ ಪೀಠದಲ್ಲಿ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ಇತ್ತೀಚೆಗೆ ವಜಾಗೊಂಡ ಸಾರಿಗೆ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವ ಮತ್ತು ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ಮಾರ್ಗದರ್ಶನ ಮಾಡುವಂತೆ ಅಹವಾಲು ಸಲ್ಲಿಸಿದರು.
ಕೆಲ ದಿನಗಳ ಹಿಂದ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಸಮ್ಮೇಳನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ಕರುಣಿಸಿದ್ದ ಶ್ರೀ ಜಗದ್ಗುರುಗಳವರು ಸಾರಿಗೆ ಸೇವಾ ನೌಕರರ ಸಂಕಷ್ಟ ನಿವಾರಣೆ ಸರ್ಕಾರದ ಹೊಣೆಯಾಗಿದ್ದು, ನಿಗಮದ ಲಾಭ - ನಷ್ಟ ಲೆಕ್ಕಿಸದೆ ಸೂಕ್ತ ವೇತನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ರಾಜ್ಯದ ಸಾರಿಗೆ ನಿಗಮಗಳಲ್ಲಿ 1.25 ಲಕ್ಷ ಉದ್ಯೋಗಿಗಳಿದ್ದಾರೆ. ಇವರು ನೌಕರಿ ಮಾಡುತ್ತಿಲ್ಲ, ಸೇವೆ ಮಾಡುತ್ತಿದ್ದಾರೆ. ಇವರ ಸೇವೆಗಾಗಿ ಲಾಭ - ನಷ್ಟ ಲೆಕ್ಕಿಸದೆ ಸೂಕ್ತ ವೇತನ ನೀಡುವುದು ಸರ್ಕಾರದ ಹೊಣೆ ಎಂದು ತಿಳಿಸಿದರು. ನಿಮ್ಮ ಕಷ್ಟಗಳ ಬಗ್ಗೆ ಸರ್ಕಾರದ ಜೊತೆ ಮಾತನಾಡಲು ಯಾವುದೇ ಸಂಕೋಚ ಇಲ್ಲ. ಆದರೆ ಸರ್ಕಾರದ ಬಳಿ ಸುಲಭವಾಗಿ ಕೆಲಸ ಆಗುವುದಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ಸಮಾನವಾದ ವೇತನ ನೀಡಲು ಸಾವಿರಾರು ಕೋಟಿ ರೂ.ಗಳು ಬೇಕಾಗುತ್ತವೆ, ನೌಕರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೈ ಬಿಡಲು ಸರ್ಕಾರ ಮುಂದಾಗಬೇಕು ಅಲ್ಲದೆ ಇದರಿಂದ ನೌಕರರಿಗೆ ಮಾನಸಿಕ ನೆಮ್ಮದ ಸಿಗುತ್ತದೆ ಎಂದು ತಿಳಿಸಿದರು. ಸಾರಿಗೆ ನೌಕರರ ವಿಷಯ ಕಾನೂನು ಹೋರಾಟವಾಗಬಾರದು. ಮಾನವೀಯತೆಯ ಮೇಲೆ ಕ್ರಮ ಆಗಬೇಕು. ನಿಮ್ಮ ಕಷ್ಟಗಳ ಬಗ್ಗೆ ಸರ್ಕಾರದ ಜೊತೆ ಮಾತನಾಡಲು ನಮಗೆ ಮುಜುಗರ ಇಲ್ಲ. ಈ ಬಗ್ಗೆ ಸರ್ಕಾರದ ಅಧಿಕಾರಸ್ಥರ ಜೊತೆ ಖಾಸಗಿಯಾಗಿ ಮಾತನಾಡುತ್ತೇವೆ ಎಂದು ಶ್ರೀ ಜಗದ್ಗುರುಗಳು ನೌಕರರಿಗೆ ಭರವಸೆ ನೀಡಿದ್ದರು.
ಅಂದಿನ ಸಮಾರಂಭದಲ್ಲಿ ಮಾತನಾಡಿದ ಹಲವಾರು ಮುಖಂಡರು, ಶ್ರೀ ತರಳಬಾಳು ಜಗದ್ಗುರುಗಳು ನೌಕರರ ಪರವಾಗಿ ಸರ್ಕಾರದ ಜೊತೆ ಮಾತನಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೂಜ್ಯರು, ನೀವು ನಮ್ಮನ್ನು ಆಹ್ವಾನಿಸಿ, ತಪ್ಪು ಮಾಡಿದಿರಿ. ನ್ಯಾಯಾಧೀಶರಾದವರು ವಕೀಲರ ರೀತಿ ಒಬ್ಬರ ಪರವಾಗಿ ಮಾತನಾಡಲು ಆಗುವುದಿಲ್ಲ. ಈ ರೀತಿ ಕರೆಸಿ ರಾಜಕಾರಣಿಗಳ ಜೊತೆ ಮಾತನಾಡುವಂತೆ ಕೇಳಿ, ಅವರಿಗೆ ಬೇರೆ ದೃಷ್ಟಿ ಆಗುವಂತೆ ಮಾಡಿದ್ದು ತಪ್ಪು ಎಂದವರು ಹೇಳಿದರು. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಚಿತ್ರವೊಂದನ್ನೇ ದೊಡ್ಡದಾಗಿ ಪ್ರಕಟಿಸಿ ಉಳಿದ ಆಹ್ವಾನಿತ ರಾಜಕಾರಣಿಗಳ ಚಿತ್ರ ಪ್ರಕಟಿಸಿರಲಿಲ್ಲ. ಈ ಬಗ್ಗೆ ತಮ್ಮ ಆಕ್ಷೇಪವಿತ್ತು. ಮತ್ತೊಂದು ಆಹ್ವಾನ ಪತ್ರಿಕೆ ಪ್ರಕಟಿಸಿ ಅದರಲ್ಲಿ ಆಹ್ವಾನಿತ ರಾಜಕಾರಣಿಗಳ ಚಿತ್ರಗಳನ್ನು ಪ್ರಕಟಿಸುವಂತೆ ತಿಳಿಸಿದ್ದೆವು. "ಯಾವ ದೇವರಿಂದ ಫಲ ಬೇಕೋ ಆ ದೇವರ ಪೂಜೆ ಮಾಡಬೇಕು". ಬೇಡಿಕೆ ಈಡೇರಿಸುವ ಧುರೀಣರ ನಿರ್ಲಕ್ಷ್ಯ ಮಾಡಿದರೆ ಅವರಿಗೆ ಬೇಸರ ಆಗುತ್ತದೆ ಎಂದು ಶ್ರೀ ಜಗದ್ಗುರುಗಳು ಕಿವಿಮಾತು ಹೇಳಿದ್ದರು.
ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಮಾತನಾಡಿ, ಸಾರಿಗೆ ನೌಕರರು ಸರ್ಕಾರದ ಉದ್ಯೋಗಿಗಳಿಗಿಂತ ಹೆಚ್ಚು ಕೆಲಸ ಮಾಡಿದರೂ ಶೇ.40ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಮುಷ್ಕರದ ನಂತರ 2,500 ನೌಕರರು ವಜಾ ಹಾಗೂ 3,200 ನೌಕರರು ವರ್ಗಾವಣೆ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ನೌಕರರ ಕುಟುಂಬಗಳನ್ನು ಕಾಪಾಡುವಂತೆ ಶ್ರೀ ಜಗದ್ಗುರುಗಳವರಲ್ಲಿ ಮನವಿ ಮಾಡಿದರು. ನೌಕರರ ಕೂಟದ ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.