ಶ್ರಾವಣ ಸೋಮವಾರ ಶಾಂತಿವನದಲ್ಲಿ ತುಂಬಿ ಹರಿದ ಶಿವಗಂಗೆ !

  •  
  •  
  •  
  •  
  •    Views  

ಸಿರಿಗೆರೆ :  ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕರೆದರೆ ತುಂಗಭದ್ರೆಯರೇ ಓಡೋಡಿ ಬರುವರೆಂಬ ಜನಜನಿತ ವಾದ ಮಾತಿಗೆ ಬಯಲು ಸೀಮೆಯ ಭರಮಸಾಗರ ಕೆರೆಯು ಕಳೆದ ವರ್ಷದಿಂದ ತುಂಬಿ ಹರಿದ ನಿದರ್ಶನವೇ ಸಾಕ್ಷಿ. ರೈತರ ಮುಖದಲ್ಲಿ ಸಂತೋಷ ಎಲ್ಲರ ಮನಸ್ಸುಗಳಿಗೆ ತಂಪು ನೀಡುತ್ತಿರುವುದರ ಜೊತೆಗೆ ನಿನ್ನೆ ಸುರಿದ ಭರಪೂರ ಮಳೆಗೆ ಶಾಂತಿವನದ ಕಿರುಜಲಾಶಯ ಮೈತುಂಬಿ ಹರಿಯುತ್ತಿದೆ. 

ಶಾಂತಿವನದ ಕಿರು ಜಲಾಶಯವು ತುಂಬಿ ಹೆಚ್ಚುವರಿ ನೀರು ಭರಮಸಾಗರ ಕೆರೆಯತ್ತ ಹರಿಯಲು ಪ್ರಾರಂಭಿಸಿದೆ. ಕಳೆದೆರಡು ದಿನಗಳಿದ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಈ ಭಾಗದ ರೈತರ ಮಖದಲ್ಲಿ ಮಂದಹಾಸ ಮೂಡಿದೆ. ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿ ಸಿರಿಗೆರೆ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡುವ ಮಹೋನ್ನತ ಉದ್ದೇಶದಿಂದ ಶಾಂತಿವನದಲ್ಲಿ ನಿರ್ಮಾಣವಾಗಿರುವ “ಶಾಂತಿವನ ಕಿರುಜಲಾಶಯ”ವನ್ನು ಮಠದ ವೆಚ್ಚದಿಂದಲೇ  ನಿರ್ಮಿಸಲಾಗಿದೆ. 300 ಎಕರೆ ವಿಸ್ತೀರ್ಣದ ಮಧ್ಯಭಾಗದಲ್ಲಿ ಅಂದಾಜು ₹100 ಕೋಟಿ ವೆಚ್ಚದಲ್ಲಿ ಜಲಾಶಯವು ಸುಮಾರು 2 ಕಿ.ಮೀ. ಉದ್ದದ ಜಲಾಶಯದಲ್ಲಿ 34 ಅಡಿ ಆಳ 25 ತಡಿ ಆಗಲದಲ್ಲಿ ನೀರು ಸಂಗ್ರಹವಾಗಲಿದೆ.

ಸಿರಿಗೆರೆಯ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲದ ಮಟ್ಟವನ್ನು ಉತ್ಕೃಷ್ಟಗೊಳಿಸಿ, ಸುತ್ತಮುತ್ತಲಿನ ಪ್ರದೇಶದ ನೀರಿನ ಬವಣೆಯನ್ನು ಪರಿಹರಿಸಬೇಕೆಂದು ಸಂಕಲ್ಪಿಸಿದ ಶ್ರೀ ಜಗದ್ಗುರುಗಳವರ ಸಂಕಲ್ಪದ ಶಕ್ತಿಯ ಪರಿಣಾಮ 20ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಮೂಲಕ 500ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸಲು ಮೂಲ ಪ್ರೇರಣೆ ಈ ಶಾಂತಿವನದ ಕಿರು ಜಲಾಶಯ. ಸಿರಿಗೆರೆ ಸುತ್ತಮುತ್ತಲಿನ ರೈತರಿಗೆ ಅನುಕೂಲಕ್ಕಾಗಿ ಶಾಂತಿವನದಲ್ಲಿ ಹದಿನೈದು ವರ್ಷಗಳ ಹಿಂದೆಯೇ ಶ್ರೀ ಬೃಹನ್ಮಠದ ವೆಚ್ಚದಲ್ಲಿ ನಿರ್ಮಾಣವಾಗಿ ಅಂದಿನ ಪ್ರಧಾನಿ ವಾಜಪೇಯಿಯವರ ಸರ್ಕಾರದ ಕೇಂದ್ರ ಕೃಷಿ ಸಚಿವರಾದ ಶ್ರೀ ಅಜಿತ್ ಸಿಂಗ್ ಅವರಿಂದ ದಿನಾಂಕ 24.9.2004 ರಂದು ಲೋಕಾರ್ಪಣೆಗೊಳಿಸಲಾಗಿದೆ. 

ಚೆಕ್ ಡ್ಯಾಂ ಗೆ ನೀರುಬರುತ್ತಿರುವ ವಿಚಾರ ತಿಳಿದ ಶ್ರೀಜಗದ್ಗುರುಗಳು ಇಂದು ಪ್ರಾತಃ ಕಾಲವೇ  ಕಿರುಜಲಾಶಯವನ್ನು ವೀಕ್ಷಿಸಿದರು. ಒಳಹರಿವಿನ ನೀರಿನ ವೇಗವು ಹೆಚ್ಚಾಗಿದ್ದು ಬಹಳ ಬೇಗನೆ ಭರ್ತಿಗೊಂಡಿದೆ. ನೀರು ತುಂಬಿದ ಪ್ರಕೃತಿಯ ಆನಾಂದನುಭವವು ಪೂಜ್ಯ ಶ್ರೀ ಜಗದ್ಗುರುಗಳವರ ಸಂತೋಷವನ್ನು ನೂರ್ಮಡಿಗೊಳಿಸಿತು. ನೀರು ಹರಿದು ಬರುತ್ತಿರುವ ವಿಷಯ ಸಾಮಾಜಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಮುಂಜಾನೆಯಿಂದಲೆ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ತುಂಬಿ ಹರಿದ ಶಿವಗಂಗೆಯನ್ನು ವೀಕ್ಷಿಸಿದರು. ಪೂಜ್ಯ ಶ್ರೀ ಜಗದ್ಗುರುಗಳವರ ದಿವ್ಯ ಮಾರ್ಗದರ್ಶನದಲ್ಲಿ ಅತ್ಯುನ್ನತ ವೈಜ್ಞಾನಿಕ ಮತ್ತು ತಾಂತ್ರಿಕ ಮಾನದಂಡದಲ್ಲಿ ಯೋಜನಾ ಬದ್ಧವಾಗಿ ಜಲಾಶಯವು ನಿರ್ಮಾಣಗೊಂಡಿದೆ. ಸುತ್ತಲಿನ  ಹತ್ತಾರು ಹಳ್ಳಿಗಳ ರೈತರ ಸಾವಿರಾರು ಎಕರೆ ಭೂಪ್ರದೇಶದಲ್ಲಿ ಅಂತರ್ಜಲ ಮಟ್ಟವು ವೃದ್ಧಿಯಾಗಿ ರೈತರ ಪವಿತ್ರ  ಆರಾಧನೆಯ ತಾಣವಾಗಿದೆ. ತೋಟಗಳ ಕೊಳವೆ ಬಾವಿಗಳಿಗೆ, ಪಶು, ಪಕ್ಷಿ-ಪ್ರಾಣಿಗಳಿಗೆ ಆಸರೆಯಾಗಿದೆ. ಜಲಾಶಯ ಪೂರ್ಣಗೊಂಡಾಗಿನಿಂದ ಹಲವಾರು ಬಾರಿ ತುಂಬಿ ಹರಿದಿದ್ದು, ಕಳೆದ ವರ್ಷ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿದ ಸಂದರ್ಭಗಳಲ್ಲಿ ಪೂಜ್ಯ ಶ್ರೀ ಜಗದ್ಗುರುಗಳವರು ತಾವೇ ಖುದ್ದಾಗಿ ಜಲಾಶಯದ ಅಗತ್ಯ ಮುಂದುವರೆದ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ಜೆಸಿಬಿಗಳ ಮೂಲಕ ಎತ್ತಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಜನ ಜಾನುವಾರು ಮತ್ತು ಅನ್ನದಾತರ ಬಾಳಿಗೆ ಬೆಳಕಾಗಿರುವ ತರಳಬಾಳು ಶ್ರೀಗಳ ಸ್ಮರಣೀಯ ಕಾರ್ಯವನ್ನು ಈ ಭಾಗದ ಜನರು ಧನ್ಯತೆಯಿಂದ ನೆನೆಯುತ್ತಿದ್ದಾರೆ.


ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲೆಂದು ಈ  ಕಿರು ಜಲಾಶಯದಲ್ಲಿ ಸುಮಾರು 60 ಅಡಿ ಆಳವಾದ ಜಲಾಶಯಕ್ಕೆ ಭದ್ರತೆ ದೃಷ್ಟಿಯಿಂದ ಕಾಮಗಾರಿಯು ನಡೆದಿತ್ತು. ಗಾದ್ರಿಗುಡ್ಡ ಡಿ.ಮೆದಕೇರಿಪುರದ ಗುಡ್ಡ. ಪಳಿಕೇಹಳ್ಳಿ ಗುಡ್ಡಗಳಿಗೆ ಹೆಚ್ಚು ಮಳೆಯಾಗಿರುವುದರಿಂದ  ಜಲಾಶಯಕ್ಕೆ ನೀರು ಬರುವುದು ಖಚಿತವಾಗಿತ್ತು.  ಸುತ್ತಮು-ತ್ತಲಿನ ಹಳ್ಳಿಗಳಾದ ಹಳೇರಂಗಾಪುರ, ಸೀಗೇಹಳ್ಳಿ, ಹಳವುದರ, ಹಂಪನೂರು, ಲಿಂಗವ್ವನಾಗ್ತಿಹಳ್ಳಿ,  ಅಳಗವಾಡಿ, ಅರಭಗಟ್ಟಿ, ಹೆಗ್ಗರೆ,  ಕೊಳಹಾಳು ಗ್ರಾಮಗಳಿಗಳ ಬೋರ್ವೆಲ್ಗಳಲ್ಲಿ ಅಂತರ್ಜಲ ತಜ್ಞರ ಪ್ರಕಾರ  ಹೆಚ್ಚಿನ ನೀರು ಕಾಣಬಹುದಾಗಿದೆ.