ದೇವರ ಒಲುಮೆಯನ್ನು ಗಳಿಸಲು ಮಾಡಬೇಕಾದುದೇನು?
ಶಾಲಾಕಾಲೇಜುಗಳಲ್ಲಿ ವಿಜ್ಞಾನ ಬೋಧನೆಗೆ ಎರಡು ಆಯಾಮಗಳಿರುತ್ತವೆ. ಒಂದನೆಯದು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಗ್ರಂಥವನ್ನು ಆಧರಿಸಿ ಶಿಕ್ಷಕರು ಮಾಡುವ ಸೈದ್ದಾಂತಿಕ ಬೋಧನೆ (Theoretical lesson). ಎರಡನೆಯದು ಆ ಬೋಧನೆಗೆ ಅನುಗುಣವಾಗಿ ವಿದ್ಯಾರ್ಥಿಗಳ ಕೈಯಿಂದ ಪ್ರಯೋಗಶಾಲೆಯಲ್ಲಿ ಉಪಕರಣಗಳನ್ನು ಅಳವಡಿಸಿ ಪ್ರಾಯೋಗಿಕವಾಗಿ ಮಾಡಿಸಿ ತೋರಿಸುವುದು (Practical lesson). ಆಗ ಪಠ್ಯಗ್ರಂಥದಲ್ಲಿರುವ ಜ್ಞಾನ ವಿದ್ಯಾರ್ಥಿಗಳ ಸ್ವಾನುಭವಕ್ಕೆ ಬಂದು ಸದೃಢಗೊಳ್ಳುತ್ತದೆ.
ಹಾಗೆಯೇ ಜಗತ್ತಿನ ಎಲ್ಲ ಧರ್ಮಸಂಸ್ಥಾಪಕರು ಮಾಡಿದ ಧರ್ಮ ಬೋಧನೆಯೂ ಸಹ ವಿಜ್ಞಾನದ ಬೋಧನಾ ಕ್ರಮದಂತೆಯೇ ಇದೆ. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಧರ್ಮಗ್ರಂಥವಿರುತ್ತದೆ. ಆ ಧರ್ಮಗ್ರಂಥದಲ್ಲಿ ಆಯಾಯ ಧರ್ಮದ ಮೂಲತತ್ವಗಳು ಅಡಕವಾಗಿರುತ್ತವೆ. ಧರ್ಮಗ್ರಂಥಗಳಲ್ಲಿರುವ ಬೋಧನೆಗಳು ಸಿದ್ದಾಂತಗಳಾದರೆ (Theory) ಜನರ ಬದುಕು ಒಂದು ಪ್ರಯೋಗಶಾಲೆ (Lab). ವಿದ್ಯಾರ್ಥಿಗಳು ಪಠ್ಯಗ್ರಂಥಗಳನ್ನು ಓದಿ ಪ್ರಯೋಗಶಾಲೆಯಲ್ಲಿ ಕಾರ್ಯರೂಪಕ್ಕೆ ತರುವಂತೆ ಜನರು ಧರ್ಮಗ್ರಂಥಗಳನ್ನು ಓದಿ ಅವುಗಳ ಸದಾಶಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಗತ್ತಿನ ಎಲ್ಲ ಧರ್ಮಗಳು ಶಾಂತಿ, ಪ್ರೀತಿ, ಸಹಬಾಳ್ವೆಯನ್ನೇ ಬೋಧಿಸುತ್ತವೆ. ಆದರೆ ಇತಿಹಾಸದುದ್ದಕ್ಕೂ, ಇಂದೂ ಸಹ ಅದಕ್ಕೆ ತದ್ವಿರುದ್ಧವಾಗಿ ಅಶಾಂತಿ, ಅಸಹನೆ, ದ್ವೇಷ, ಸಂಘರ್ಷಗಳಿಗೆ ಕಾರಣವಾಗಿವೆ.
ಧರ್ಮಗ್ರಂಥಗಳು ಆಯಾಯ ಧರ್ಮದ ಅನುಯಾಯಿಗಳಿಗೆ ಮಾತ್ರ ಆರಾಧನಾ ಗ್ರಂಥಗಳಾಗಿ ಬೇರೆಯವರ ಅವಜ್ಞೆಗೆ ಗುರಿಯಾದಾಗ ವಿಭಿನ್ನ ಸಮುದಾಯಗಳಲ್ಲಿ ಗೊಂದಲ, ಗೋಜಲು, ಸಂಘರ್ಷಗಳು ಉಂಟಾಗುತ್ತವೆ. ಇಡೀ ಮಾನವತೆಯ ಒಳಿತನ್ನು ಹಾರೈಸಿ ಮಾಡಿದ ಧರ್ಮ ಬೋಧನೆ ಮತೀಯ ಚೌಕಟ್ಟಿಗೆ ಒಳಪಟ್ಟಾಗ, Preaching and Practice ಬೇರೆ ಬೇರೆಯಾಗಿ ಉಂಟಾಗುವ ಅನಾಹುತವಿದು. ಧರ್ಮಗ್ರಂಥಗಳ ಬೋಧನೆಯಲ್ಲಿ ಯಾವುದೇ ದೋಷವಿಲ್ಲ. ಆದರೆ ಆಯಾಯ ಧರ್ಮದ ಅನುಯಾಯಿಗಳು ಅದನ್ನು ತಮ್ಮ ಬದುಕಿನ ಪ್ರಯೋಗಶಾಲೆಯಲ್ಲಿ ಅಳವಡಿಸಿಕೊಳ್ಳುವಾಗ ತಪ್ಪು ಹೆಜ್ಜೆಯಿಟ್ಟು ಆಕ್ರೋಶ, ಅನಾಹುತಗಳಿಗೆ ಕಾರಣರಾಗುತ್ತಾರೆ. ವಿದ್ಯಾರ್ಥಿಗಳು ಪ್ರಯೋಗಶಾಲೆಯ ಪ್ರನಾಳದಲ್ಲಿ (test tube) ನೀರಿಗೆ ಆಸಿಡ್ ಹಾಕುವ ಬದಲು ಆಸಿಡ್ಗೆ ನೀರು ಹಾಕಿ ಆಸ್ಪೋಟಕ್ಕೆ ಕಾರಣವಾಗುವಂತೆ!
ಜಗತ್ತಿನ ಯಾವುದೇ ಧರ್ಮವಿರಲಿ ಜೀವ, ಜಗತ್ತು ಮತ್ತು ದೇವರು ಈ ಮೂರರ ಪರಸ್ಪರ ಸಂಬಂಧಗಳ ವಿಶ್ಲೇಷಣೆಯನ್ನು ಮಾಡುತ್ತದೆ. ಮನುಷ್ಯನಿಗೂ ಈ ಜಗತ್ತಿಗೂ ಇರುವ ಸಂಬಂಧ ಏನು? ಈ ಸೃಷ್ಟಿಯಾಚೆ ಇರುವ ದೈವೀಶಕ್ತಿಗೂ ಮತ್ತು ಮನುಷ್ಯನಿಗೂ ಏನು ಸಂಬಂಧ? ಆ ದೈವೀಶಕ್ತಿಗೂ ಮತ್ತು ಜಗತ್ತಿಗೂ ಇರುವ ಸಂಬಂಧ ಏನು? ಈ ತ್ರಿಕೋನ ಸಂಬಂಧವನ್ನು ಕುರಿತು ವಿಭಿನ್ನ ಧರ್ಮಗಳು ವಿಭಿನ್ನ ಚಿಂತನೆ ನಡೆಸಿ ವಿಭಿನ್ನ ಸಿದ್ಧಾಂತಗಳನ್ನು ರೂಪಿಸಿವೆ. ಈ ಜೀವ, ಜಗತ್ತು ಮತ್ತು ದೇವರನ್ನು ಕುರಿತು ನಡೆಸಿರುವ ತಾತ್ವಿಕ ಚಿಂತನೆಯೇ ಬೇರೆ, ಮನುಷ್ಯ ಮನುಷ್ಯರ ಮಧ್ಯೆ ಇರುವ ಸಂಬಂಧವನ್ನು ಕುರಿತು ನಡೆಸಿರುವ ಮಾನವೀಯ, ನೈತಿಕ ಚಿಂತನೆಗಳೇ ಬೇರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ತಾತ್ವಿಕ ಸಿದ್ದಾಂತಗಳು ಬೇರೆ ಬೇರೆಯಾಗಿ ಕಂಡುಬಂದರೂ ಮಾನವೀಯ ನೆಲೆಗಟ್ಟಿನ ಮೇಲೆ ನಡೆಸಿರುವ ಚಿಂತನೆಗಳು ಮಾತ್ರ ಎಲ್ಲ ಧರ್ಮಗಳಲ್ಲಿಯೂ ಒಂದೇ ತೆರನಾಗಿವೆ. ಉದಾಹರಣೆಗೆ ಸುಳ್ಳು ಹೇಳಬಾರದು, ಕದಿಯಬಾರದು, ದ್ವೇಷಿಸಬಾರದು, ಕೋಪಿಸಬಾರದು, ಕೊಲ್ಲಬಾರದು ಇತ್ಯಾದಿ.
ಯಾವ ವ್ಯಕ್ತಿಯೂ ತನ್ನ ಮತ್ತು ತನ್ನ ಮನೆತನದ ಬಗ್ಗೆ ಮತ್ತೊಬ್ಬರು ಆಡುವ ಅವಹೇಳನದ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ ಮತ್ತು ಸಹಿಸಿಕೊಳ್ಳುವುದೂ ಇಲ್ಲ. ಇಲ್ಲಿ ವ್ಯಕ್ತಿಗೌರವದ ಪ್ರಶ್ನೆ ಉದ್ಭವಿಸುತ್ತದೆ. ವ್ಯಕ್ತಿನಿಂದನೆಯ ಮಾತುಗಳು ಕಲಹಕ್ಕೆ ಕಾರಣವಾಗುತ್ತವೆ. ಹಾಗೇನೆ ಒಂದು ಧರ್ಮದವರ ನಂಬಿಕೆಗಳ ಬಗ್ಗೆ ಅವಹೇಳನಕಾರಿಯಾಗಿ ಇನ್ನೊಂದು ಧರ್ಮದವರು ಮಾತನಾಡಲು ಹೊರಟರೆ ಅದು ಕೋಮುಘರ್ಷಣೆಗೆ ಇಂಬುಗೊಡುತ್ತದೆ. ತಾತ್ವಿಕ ಅರ್ಥ ಏನೇ ಇದ್ದರೂ ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯ ಧಾರ್ಮಿಕ ಆಚರಣೆಗಳು ಇರುತ್ತವೆ. ಆ ಧಾರ್ಮಿಕ ವಿಧಿ ವಿಧಾನಗಳೇ ಧರ್ಮವಲ್ಲ. ಅವುಗಳ ಸಾಂಕೇತಿಕ ಅರ್ಥವೇ ಬೇರೆ. ಹೀಗಿರುವಾಗ ತನ್ನ ಧರ್ಮದ ಆಚರಣೆಗಳ ಬಗ್ಗೆ ಹೆಮ್ಮೆಪಟ್ಟುಕೊಂಡು ಬೇರೆ ಧರ್ಮದ ಆಚರಣೆಗಳನ್ನು ಹೀಗಳೆಯುವುದು ತಪ್ಪು. ಕೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಪೂಜೆ ಮಾಡುವುದು, ಜನಿವಾರ ಧರಿಸಿ ಸಂಧ್ಯಾವಂದನೆ ಮಾಡುವುದು, ಗುಡಿಗೆ ಹೋಗಿ ದೇವರ ದರ್ಶನ ಮಾಡುವುದು, ಮಸೀದಿಗೆ ಹೋಗಿ ನಮಾಜು ಮಾಡುವುದು, ಚರ್ಚಿಗೆ ಹೋಗಿ ಪ್ರಾರ್ಥನೆ ಮಾಡುವುದು - ಇವೆಲ್ಲ ವಿಭಿನ್ನ ಆಚರಣೆಗಳಾಗಿ ಕಂಡುಬಂದರೂ ಇವುಗಳ ಮೂಲ ಆಶಯ ಸೃಷ್ಟಿಯ ಅಚೆ ಇರುವ ಏಕೈಕ ಭಗವಂತನನ್ನು ಭಕ್ತಿಯಿಂದ ಆರಾಧಿಸುವುದು.
ಆಧ್ಯಾತ್ಮಿಕ ಹಸಿವನ್ನು ಹಿಂಗಿಸಿಕೊಳ್ಳಲು ಇರುವ ಇಷ್ಟಲಿಂಗ, ಜನಿವಾರ, ಶಿಲುಬೆ ಮುಂತಾದವುಗಳು ಧಾರ್ಮಿಕ ಲಾಂಛನಗಳು ಮಾತ್ರ; ಅವುಗಳನ್ನು ಧರಿಸಿದ ಮಾತ್ರಕ್ಕೆ ಯಾರೂ ಧರ್ಮದುರಂಧರರಾಗುವುದಿಲ್ಲ. ಅವುಗಳನ್ನು ಪಡೆಯಲು ಬಯಸುವವನಿಗೆ ತೀವ್ರವಾದ ಆಧ್ಯಾತ್ಮಿಕ ತುಡಿತವಿರಬೇಕು. ಅಂತಹ ತುಡಿತವು ಶಿಶುನಾಳ ಶರೀಫರಿಗಿತ್ತು. ಗುರುಗೋವಿಂದರಿಂದ ಉಪನಯನವಾದ ಸಂದರ್ಭವನ್ನು ಕುರಿತು "ಹಾಕಿದ ಜನಿವಾರವಾ, ಸದ್ಗುರುರಾಯ ನೂಕಿದಾ ಭವಭಾರವಾ!" ಎಂದು ಹಾಡಿದ ಅವರ ತತ್ವಪದ ಸಾರಿ ಹೇಳುವುದು ಇದನ್ನೇ. ಅಂತಹ ಆಧ್ಯಾತ್ಮಿಕ ತುಡಿತ ಇಲ್ಲದವರಿಗೆ ಲಿಂಗದೀಕ್ಷೆಯನ್ನು ಮಾಡಿದರೆ ದನಗಾಯಿಯು ತನ್ನ ಕವಣೆಕೋಲಿನಿಂದ ಕಲ್ಲನ್ನು ಬೀಸಿ ಒಗೆದಂತೆ ಎಂದು ಅಲ್ಲಮಪ್ರಭುದೇವರು ಈ ಮುಂದಿನ ವಚನದಲ್ಲಿ ಲೇವಡಿ ಮಾಡಿದ್ದಾರೆ:
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು? ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೇ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೇ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ ಗುಹೇಶ್ವರಾ.
ಕವಣೆಯಿಂದ ಬೀಸಿ ಎಸೆದ ಕಲ್ಲು ಮೆಳೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಹಾಗಂತ ಆ ಕಲ್ಲು ಲಿಂಗವೂ ಅಲ್ಲ. ಆ ಮೆಳೆಯು ಶಿವಭಕ್ತನೂ ಅಲ್ಲ. ಕಲ್ಲೆಸೆದ ದನಗಾಯಿ ಗುರುವೂ ಅಲ್ಲ. ಸಭೆಗೆ ಬಂದ ಜನನಾಯಕರ ಕೊರಳಿಗೆ ಹಾರ ಹಾಕುವುದು, ಶಾಲು ಹೊದೆಸುವುದು, ಸ್ಮರಣಿಕೆಗಳನ್ನು ನೀಡಿ ಗೌರವಿಸುವುದು ಶಿಷ್ಟಾಚಾರ. ಆದರೆ ಬಂದ ಪ್ರತಿಷ್ಠಿತ ವ್ಯಕ್ತಿಗಳ ಕೊರಳಿಗೆ ಲಿಂಗ ಕಟ್ಟುವುದು ಅವರಿಗೆ ಮುಜುಗರವನ್ನುಂಟುಮಾಡುತ್ತದೆ. ಅದು ಧಾರ್ಮಿಕ ಲಾಂಛನಕ್ಕೆ ಮಾಡುವ ಅಪಚಾರವೂ ಆಗುತ್ತದೆ.
ಜನರು ಅವರವರ ಅಭಿರುಚಿಗೆ ಅನುಗುಣವಾಗಿ, ವಯೋಮಾನಕ್ಕೆ ತಕ್ಕಂತೆ ವಿಭಿನ್ನ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ. ಅವು ಮೇಲು ನೋಟಕ್ಕೆ ಬೇರೆ ಬೇರೆಯಾಗಿ ಕಾಣುತ್ತವೆ. ಆದರೆ ಅವುಗಳ ಮೂಲ ಆಶಯ ಮಾತ್ರ ಒಂದೇ. ಅದುವೇ ಮಾನ ರಕ್ಷಣೆ! ವಿಭಿನ್ನ ಧರ್ಮಗಳ ಪ್ರಾರ್ಥನಾ ಪದ್ಧತಿಯೂ ಹಾಗೇನೆ. ಆಯಾಯ ಧರ್ಮೀಯರ ಭಾವನೆ ಮತ್ತು ನಂಬುಗೆಗಳಿಗೆ ಅನುಗುಣವಾಗಿ ಮಾಡುವ ಪೂಜೆ ಮತ್ತು ಪ್ರಾರ್ಥನೆಗಳು ಬೇರೆ ಬೇರೆಯಾಗಿ ಕಂಡುಬಂದರೂ ಅವುಗಳ ಮೂಲ ಉದ್ದೇಶ ಭಗವಂತನ ಆರಾಧನೆ! ಪ್ರಾರ್ಥನೆಯ ವಿಧಿವಿಧಾನಗಳ ಹಿಂದೆ ಸಾಂಕೇತಿಕ ಅರ್ಥವಿರುತ್ತದೆ. ಅದನ್ನು ಅಲಕ್ಷಿಸಿ ಬಾಹ್ಯ ಆಚರಣೆಗಳಿಗಷ್ಟೇ ಮಹತ್ವ ನೀಡಿದರೆ ಅದು ಕೇವಲ ಯಾಂತ್ರಿಕವಾದ ಆಚರಣೆಯಾಗಿ ಪರಿಣಮಿಸುತ್ತದೆ. ಅವುಗಳ ಮೂಲಾರ್ಥದ ಕಡೆ ಗಮನ ಸೆಳೆಯದೆ ಬರೀ ಟೀಕಿಸುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ.
ದೇವರನ್ನು ಒಲಿಸಿಕೊಳ್ಳಲು ಅಂತರಂಗ ಶುದ್ದಿಯೊಂದೇ ಸಾಕು. ಗಂಟೆ, ಜಾಗಟೆ, ಪೂಜೆಯ ಅಗತ್ಯವಿಲ್ಲ ಎಂದರೆ ಕಾವಿಧಾರಿಗಳು ಕಾವಿಯನ್ನೇಕೆ ಧರಿಸಬೇಕು? ಕೊರಳಲ್ಲಿ ರುದ್ರಾಕ್ಷಿಸರವಾದರೂ ಏಕೆ ಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತರಂಗ ಶುದ್ದಿಗೆ ಬಾಹ್ಯಶುದ್ದಿಯು ಪೂರಕವೇ ಹೊರತು ಮಾರಕವಲ್ಲ. ಸಾಧನಾವಸ್ಥೆಯಲ್ಲಿ ಪೂಜೆ ಆವಶ್ಯಕ. ಪೂಜೆಗೆ ಕುಳಿತಾಗ ಮಾಡುವ ಸುಮಧುರ ಘಂಟಾನಾದ “ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಂ” ಎನ್ನುವಂತೆ ಚಂಚಲ ಮನಸ್ಸಿನಲ್ಲಿರುವ ರಾಕ್ಷಸೀಗುಣಗಳನ್ನು ಹೊಡೆದೋಡಿಸಿ ದೈವೀಗುಣಗಳನ್ನು ಆಹ್ವಾನಿಸಿಕೊಳ್ಳುವ ಸಲುವಾಗಿ. “ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು, ಮಾಡಿದ ಪೂಜೆಯ ನೋಡುವುದು, ಶಿವತತ್ವಗೀತವ ಪಾಡುವುದು, ಶಿವನ ಮುಂದೆ ನಲಿನಲಿದಾಡುವುದು, ಭಕ್ತಿಸಂಭಾಷಣೆಯ ಮಾಡುವುದು, ನಮ್ಮ ಕೂಡಲಸಂಗನ ಕೂಡುವುದು!” ಎನ್ನುತ್ತಾರೆ ಬಸವಣ್ಣನವರು. ಅಷ್ಟವಿಧಾರ್ಚನೆಯ (ಜಲ, ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ) ಪೂಜಾ ಪರಿಕರಗಳನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಂಡು ಶಿವನ ಒಲುಮೆ ಗಳಿಸಬಹುದೆಂದು ಭಕ್ತಿ ಭಾವತುಂಬಿ ಹಾಡಿದ್ದಾಳೆ ಅಕ್ಕಮಹಾದೇವಿ:
“ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು.
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಾ.?”
ಆದಿ ಶಂಕರರು ತಮ್ಮ ಶಿವಮಾನಸ ಸ್ತೋತ್ರದಲ್ಲಿ ಅಷ್ಟವಿಧಾರ್ಚನೆ, ಷೋಡಶೋಪಚಾರದ ಪರಿಕರಗಳನ್ನು ಮನಸ್ಸಿನಲ್ಲಿಯೇ ಭಕ್ತಿಯಿಂದ ಸೃಜಿಸಿ (ಮನಸಾ ಮಯಾ ವಿರಚಿತಂ ಭಕ್ತಾ ಪ್ರಭೋ ಸ್ವೀಕುರು) ಅರ್ಪಣೆ ಮಾಡಿ ತಿಳಿದೋ ತಿಳಿಯದೆಯೋ ಮಾಡಿದ ತನ್ನೆಲ್ಲ ತಪ್ಪುಗಳನ್ನು ಕ್ಷಮಿಸುವಂತೆ ಶಿವನಲ್ಲಿ ಅಂಗಲಾಚಿ ಬೇಡಿಕೊಂಡಿದ್ದಾರೆ:
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್
ಕರಚರಣಕೃತಂ ವಾ ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.11-8-2022.