2023ರ ಜನವರಿ ವೇಳೆಗೆ ಸಾಸ್ವೇಹಳ್ಳಿ ಏತನೀರಾವರಿ ಯೋಜನೆ ಪ್ರಾಯೋಗಿಕ ನೀರು ಹರಿಸಲು ಶ್ರೀ ತರಳಬಾಳು ಜಗದ್ಗುರುಗಳವರು ಸೂಚನೆ.

  •  
  •  
  •  
  •  
  •    Views  

ದಾವಣಗೆರೆ :ನೀರಿಲ್ಲದೆ ನಾವಿಲ್ಲ, ನೀರೇ ಎಲ್ಲ, ಸಂಸ್ಕೃತದಲ್ಲಿ “ಜೀವನ ಎಂದರೆ ನೀರು”. ಅದೆಷ್ಟು ಅರ್ಥಪೂರ್ಣ! ನಮ್ಮ ಜೀವನವವು ನೀರಿನಿಂದ ಕೂಡಿದೆ.  ಹುಟ್ಟಿದ ಕೂಡಲೇ ಮಗುವನ್ನು ಸ್ವಚ್ಛ ಮಾಡಲು ನೀರು ಬೇಕು. ಬೆಳೆಯುತ್ತಾ ದೇಹಕ್ಕೆ ಪೋಷಕಾಂಶ ಸಿಗುವುದು ನೀರಿನಿಂದಲೇ. ಮದುವೆಯಾಗುವಾಗ ಧಾರೆ ಎರೆಯೋಕೆ ಅಥವಾ ಪಡೆದುಕೊಳ್ಳಲು ನೀರೇ ಬೇಕು. ಕೊನೆಗೆ ಅಂತ್ಯ ಸಂಸ್ಕಾರಕ್ಕೂ ನೀರು ಬೇಕು.

ವಿಶ್ವಾದ್ಯಂತ ದೇಶಗಳಿಗೆ ನೀರಿನ ಕೊರತೆ ಎಂಬುದು ಗಂಭಿರ ಸಮಸ್ಯೆಯಾಗಿದೆ. ತಮಿಳುನಾಡಿನಲ್ಲಿ 2019ರಲ್ಲಿ,ಎಲ್ಲ ಕೆರೆಗಳೂ ಬತ್ತಿ ಹೋದಾಗ “ಶೂನ್ಯ ದಿನ” ಎಂದು ಸ್ಥಳೀಯ ಆಡಳಿತವು ಘೋಷಣೆ ಮಾಡಿದಾಗ ಚೆನ್ನೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಕೆರೆಗಳು ಪರಿಸರದ ಅಮೂಲ್ಯ ಜಲರಾಶಿಗಳು. ಈ ಅಮೂಲ್ಯ ಸಾಂಪ್ರದಾಯಿಕ ಜಲರಾಶಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಅತ್ಯಂತ ಮಹತ್ವದ್ದಾಗಿದ್ದು ಬತ್ತದಿರಲಿ ನೀರು, ಬಾಡದಿರಲಿ ಬದುಕು ಎಂಬ ಸಂಕಲ್ಪದಿಂದ ನಾಡಿನ ನೂರಾರು ಕೆರೆಗಳ ಗಂಗಾವತರಣಕ್ಕೆ ಕಾರಣೀಕೃತರಾದ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ಅನುಷ್ಠಾನಿತ ಯೋಜನೆಯಾದ,ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ, ಚನ್ನಗಿರಿ, ಮಾಯಕೊಂಡ, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನ 121 ಕೆರೆಗಳಿಗೆ ನೀರು ತುಂಬಿಸುವ ₹604 ಕೋಟಿಯ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಶ್ರೀ ತರಳಬಾಳು ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಮಂಗಳವಾರ ದಾವಣಗೆರೆಯ ಜಿ.ಎಂ.ಐ.ಟಿ.ಸಭಾಂಗಣದಲ್ಲಿ ನಡೆಯಿತು 

ಲ್ಯಾಪ್ ಟಾಪ್ ಪ್ರಾತ್ಯಕ್ಷಿಕೆಯೊಂದಿಗೆ ಶ್ರೀ ಜಗದ್ಗುರುಗಳವರ ಮಾರ್ಗದರ್ಶನ :


ಯೋಜನೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರಾತ್ಯಕ್ಷಿಕೆಯನ್ನು ತಮ್ಮ ಲ್ಯಾಪ್ ಟಾಪ್ ಮೂಲಕ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ ಶ್ರೀ ಜಗದ್ಗುರುಗಳವರು, ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯನ್ನು ಸಾಧಕ–ಬಾಧಕ ಏನೇ ಇದ್ದರೂ 2023ರ ಜನವರಿ ವೇಳೆಗೆ ಸಂಪೂರ್ಣಗೊಳಿಸಿ ಮುಂದಿನ ವರ್ಷದ ಜನವರಿ ವೇಳೆಗೆ ಪ್ರಾಯೋಗಿಕ ಚಾಲನೆ ನೀಡುವುದನ್ನು ಅಧಿಕಾರಿಗಳಿಗೆ ವಿವರಿಸಿದರು.ಮುಂದಿನ ಪ್ರಗತಿ ಪರಿಶೀಲನಾ ಸಭೆಯು ಸೂಳೆಕೆರೆಯಲ್ಲಿ ನಿಗದಿಪಡಿಸಿ ಆ ವೇಳೆಗೆ ಪಂಪ್ ಹೌಸ್ ಗಳು, ಡೆಲಿವರಿ ಛೇಂಬರ್ ಗಳು, ಎಲೆಕ್ಟ್ರಿಕಲ್ ಸಬ್ ಸ್ಟೇಷನ್ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ನಿರ್ಮಿಸಬೇಕಿರುವ ವಿದ್ಯತ್ ಟವರ್ ಕಾಮಗಾರಿಗಳಿಗೆ  ಯಾವುದೇ ಅಡೆತಡೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಸಂಸದರ, ಶಾಸಕರುಗಳು ಮೊದಲ ಆದ್ಯತೆ ಯೊಂದಿಗೆ ಪರಿಹರಿಸುವಂತೆ ಸೂಚನೆ ನೀಡಿದರು.

ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳು ಆರಂಭಗೊಂಡು ಎರಡೇ ವರ್ಷಗಳಲ್ಲಿ ಮುಗಿಯುತ್ತಿದೆ. ಸಾಸ್ವೆಹಳ್ಳಿ ಯೋಜನೆ ಮಾತ್ರ 2017ರಲ್ಲಿ ಆರಂಭಗೊಂಡಿದ್ದರೂ ಇನ್ನೂ ಮುಗಿದಿಲ್ಲ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, “ಜನ ಹಿಡಿಶಾಪ ಹಾಕುವ ಮೊದಲು ಕೆರೆಗಳಿಗೆ ನೀರು ಕೊಡ” ಶಿವಮೊಗ್ಗ,ಹೊನ್ನಾಳಿ, ಮಾಯಕೊಂಡ, ಚನ್ನಗಿರಿ, ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲ್ಲೂಕುಗಳ 120 ಕೆರೆಗಳಿಗೆ ಯೋಜನೆಯ ಪ್ರಕಾರ 30 ತಿಂಗಳ ಅವಧಿಯಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆಗೆ ಕೆರೆಗಳನ್ನು ಸೇರಿಸುವುದರಿಂದ ಯೋಜನೆ ವಿಳಂಬವಾಗುತ್ತಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.

ಜಕ್ಕಲಿ ಹಾಗೂ ಚನ್ನೇಶಪುರ ಪಂಪ್ ಹೌಸ್ ಗಳಿಗೆ ಸಂಬಂಧಿಸಿದಂತೆ ಏನಾದರೂ ಅಡೆತಡೆಗಳಿದ್ದರೆ ಕೂಡಲೇ ನನ್ನನ್ನು ಸಂಪರ್ಕಿಸಿ, ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಶಾಸಕ ಮಾಡಾಳ್ ವಿರುಪಾಕ್ಷಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಎಸ್.ಡಿ.ಎಲ್ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಎಸ್.ವಿ.ರಾಮಚಂದ್ರ, ಡಾ|| ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಪ್ರೊ. ಲಿಂಗಣ್ಣ, ಕರ್ನಾಟಕ  ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.