ಕಾಶೀ ಮಹಾಲಿಂಗ ಸ್ವಾಮಿಗಳವರ ಪರವು : ಶ್ರೀ ತರಳಬಾಳು ಜಗದ್ಗುರುಗಳವರಿಂದ ಭಕ್ತಿಯ ಪುಷ್ಪ ನಮನ

  •  
  •  
  •  
  •  
  •    Views  

ಶ್ರೀ ಕಾಶೀ ಗುರು ನಿತ್ಯನಿರಾಲಂಬ 
ನಿಜಪದ ಸೇವಕ ಶ್ರೀ ಆತ್ಮಾ ಶಿವಯೋಗಿ.
ಮರಳಿ ತೆರಳದಂತೆ ಭವದೊಳು ಬಾರದೆ,
ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ.

ಶ್ರೀಮದ್ ಸದ್ಧರ್ಮ ತರಳಬಾಳು ವಿರಕ್ತ ಪರಂಪರೆಯ ನಿರಂಜನ ಪ್ರಣವ ಸ್ವರೂಪಿ, ಅನುಷ್ಠಾನ ತಪಸ್ವೀಗಳೆಂದು  ಭಕ್ತರಿಂದ ಆರಾಧಿಸಲ್ಪಡುವ, ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರ ಸಂಸ್ಮರಣೆಯ ಸಾಲಂಕೃತ ಪುಷ್ಪ ಪಲ್ಲಕ್ಕಿ ಉತ್ಸವ ಹಾಗೂ ಮಹಾಪ್ರಸಾದ ದಾಸೋಹ (ಪರವು) ವಿನಿಯೋಗವು ಕಡೇ ಶ್ರಾವಣದ ವಿಶೇಷ ಸೋಮವಾರವಾದ  ಇಂದು ಸಿರಿಗೆರೆಯಲ್ಲಿ ಶ್ರೀ ಕಾಶೀ ಮಹಾಲಿಂಗ ಸ್ವಾಮಿಗಳವರ ಗದ್ದುಗೆಯ ಪುಣ್ಯಭೂಮಿಯಲ್ಲಿ ಪ್ರತಿ ವರ್ಷದಂತೆ ಇಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.

ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆಯ ಹೊರವಲಯದಲ್ಲಿರುವ ಕರ್ತೃ ಗದ್ದುಗೆಗೆ ದಯಮಾಡಿಸಿ ಶ್ರದ್ದಾಭಕ್ತಿಯ ಗೌರವಗಳೊಂದಿಗೆ ಪುಷ್ಪ ನಮನ ಸಮರ್ಪಿಸಿ, ಮಹಾ ದಾಸೋಹಕ್ಕೆ ಶ್ರೀ ಜಗದ್ಗುರುಗಳವರೇ ಸ್ವತಃ ಶಿಷ್ಯರಿಗೆ,ವಿದ್ಯಾರ್ಥಿಗಳಿಗೆ ಪ್ರಸಾದ ಬಡಿಸುವ ಮೂಲಕ  ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿಷ್ಯರೊಂದಿಗೆ ಚರ್ಚಿಸಿದ ಶ್ರೀಜಗದ್ಗುರುಗಳವರು ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರಿಗೆ  ನಮ್ಮ  ಪೀಠ ಪರಂಪರೆಯಲ್ಲಿ ದೈವಾನುಗ್ರಹ ಸಂಪನ್ನವಾದ ವಿಶೇಷ ಸ್ಥಾನವಿದ್ದು, ಭಕ್ತರ ಆಶೋತ್ತರಗಳಿಗೆ ಶ್ರಮಿಸಿದ ಸಂತರಾಗಿದ್ದಾರೆ ಎಂದರು. ಸೌಲಭ್ಯಗಳು ಇಲ್ಲದ ಸಮಯದಲ್ಲಿ  ಸಮಾಜವನ್ನು  ಮುನ್ನೆಲೆಗೆ ತರುವಲ್ಲಿ  ಶ್ರೀಗಳು ನಿರ್ವಹಿಸಿದ ಜವಾಬ್ದಾರಿ ಸದಾ ಸ್ಮರಣೀಯವಾದುದು ಎಂದರು. ಈ ಪವಿತ್ರ ಸಾನಿಧ್ಯಕ್ಕೆ ಭಕ್ತರು  ನಿತ್ಯ  ದರ್ಶನ ಪಡೆಯುವಂತಾಗುವ ನಿಟ್ಟಿನಲ್ಲಿ  ಶ್ರೀಗಳವರ  ಕರ್ತೃ ಗದ್ದುಗೆಗೆ ಹೊಂದಿಕೊಂಡಂತೆ ಇರುವ ಸಂಪೂರ್ಣ ಜಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದ್ದು, ಸುತ್ತಲೂ  ಪ್ರದಕ್ಷಿಣೆ ಪಥ, ಉದ್ಯಾನವನ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದೆಂದು ತಿಳಿಸಿದರು. ಹತ್ತಾರು ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಿರಿಗೆರೆ ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಶ್ರೀ ಗುರುವಿನ  ಪರೇವು ಪ್ರಸಾದ ದಾಸೋಹವನ್ನು ಸ್ವೀಕರಿಸಿದರು.

ತರಳಬಾಳು ಶ್ರೀ ಜಗದ್ಗುರು ಪೀಠ ಪರಂಪರೆಯಲ್ಲಿ ವಿರಕ್ತ ಪೂಜ್ಯರಾದ ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರು ತಮ್ಮ ತಪೋ ಮತ್ತು ಅನುಷ್ಠಾನ ಸಾಧನಾ ಶಕ್ತಿಯಿಂದ ಸದ್ದರ್ಮ ಪೀಠದ ಕಾರಣೀಕ ಗುರವರ್ಯರಾಗಿದ್ದಾರೆ. ಪೂಜ್ಯರ ಪೂರ್ವಾಶ್ರಮ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಿರಕ್ತ ಗುರುಸ್ಥಾನದೊಂದಿಗೆ ಸೇವಾ ಕಾರ್ಯಗಳನ್ನು ಮಾಹೇಶ್ವರ ನಿಷ್ಠೆಯಿಂದ ನಿರ್ವಹಿಸಿದವರು.

ಶಕ್ತಿ ಸಂಕಲ್ಪ ಸಂತ ಶ್ರೀಕಾಶೀಮಹಾಲಿಂಗ ಸ್ವಾಮಿಗಳು..!

ಜನರ  ಕಷ್ಟಗಳನ್ನು ತಮ್ಮ ತಪೋ ಸಂಕಲ್ಪ ಶಕ್ತಿಯಿಂದ  ಪರಿಹರಿಸುವ ಗುರುಗಳೆಂದೇ  ಶಿಷ್ಯರು ಪೂಜ್ಯರನ್ನು ಭಕ್ತಿ ಗೌರವದಿಂದ  ಆರಾಧಿಸುತ್ತಿದ್ದರು. ಪೂಜ್ಯರದು ಕೊಟ್ಟರೆ ವರ, ನುಡಿದದ್ದೇ ನಡೆಯುವುದು ಎಂಬ ಭಕ್ತಿಯ  ಬಲವಾದ ಭಾವನೆಯನ್ನು  ಶಿಷ್ಯರೆಲ್ಲರೂ ಹೊಂದಿದ್ದರು. ಅದರಂತೆ ಸಿರಿಗೆರೆಯ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಈಗಲೂ ಬರ ಕಾಣಿಸಿಕೊಂಡರೆ ಕಾಶೀಮಹಾಲಿಂಗ ಸ್ವಾಮಿಗಳವರ "ಪರೇವು" ನಡೆಸಿದರೆ  ಸಾಕು ಮಳೆ ಬಂದೇ ಬರುತ್ತದೆ ಎಂಬ ಅಚಲ ನಂಬಿಕೆ  ಹತ್ತಾರು ಬಾರಿ ಸತ್ಯವಾಗಿದೆ.

19 ನೇ ಶ್ರೀ ತರಳಬಾಳು ಜಗದ್ಗುರು  ಶ್ರೀ ಗುರುಶಾಂತರಾಜದೇಶಕೇಂದ್ರ ಮಹಾಸ್ವಾಮಿಗಳವರು  ಲಿಂಗೈಕ್ಯ  ಶ್ರೀ ತರಳಬಾಳು ಜಗದ್ಗುರು ಶ್ರೀ  ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಲಮಾನದಲ್ಲಿ ಸಮಾಜದ  ಶ್ರೇಯೋಭಿವೃದ್ದಿಗೆ ಹೆಗಲಾಗಿ ದುಡಿದು ಮಠದ ದಾಸೋಹದ ಧವಸ ದೇಣಿಗೆಗೆ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಸಮಾಜ ಸಂಘಟನೆಗೆ ಭದ್ರ ಬುನಾದಿ ಹಾಕಿದ ಪೂಜ್ಯರಿಗೆ  ಪೀಠದ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಮಹಾಲಿಂಗಸ್ವಾಮಿಗಳಾಗಿದ್ದ ಪೂಜ್ಯರು ಕಾಶಿಯಲ್ಲಿ ಅಧ್ಯಯನ ಪೂರ್ಣಗೊಳಿಸಿದ ನಂತರ ಕಾಶೀಮಹಾಲಿಂಗ ಸ್ವಾಮಿಗಳೆಂದು ಜನಮನದಲ್ಲಿ  ಸ್ಥಾಯಿಯಾದರು. ಗ್ರಾಮೀಣ ಸಾಂಪ್ರಾದಾಯಿಕ   ಕಲೆಗಳ ಪ್ರೋತ್ಸಾಹದ ಬಗ್ಗೆ ಪೂಜ್ಯರಿಗೆ  ವಿಶೇಷವಾದ ಕಾಳಜಿ ಇತ್ತು.  ಪೂಜ್ಯರ ಆಶಯದಂತೆ  ಶ್ರೀ ಜಗದ್ಗುರುಗಳವರು ಕಳೆದ ಐವತ್ತು ವರ್ಷಗಳಿಂದಲೂ ಸಂಸ್ಮರಣೆಯ ದಿನದಂದು ವೀರಗಾಸೆ ಸ್ಪರ್ಧೆಗಳನ್ನು, ಕಮ್ಮಟಗಳನ್ನು ಸಿರಿಗೆರೆಯಲ್ಲಿ  ಆಯೋಜಿಸಿ ಮಧ್ಯ ಕರ್ನಾಟಕದ ಎಲ್ಲಾ ಜಿಲ್ಲೆಗಳ ನೂರಾರು ತಂಡಗಳು ಭಾಗವಹಿಸುವಂತೆ  ಕಾರ್ಯಕ್ರಮ ರೂಪಿಸಿ, ನಗದು ಪುರಸ್ಕಾರದಿಂದ ಪ್ರೋತ್ಸಾಹಿಸಿ ಅರ್ಥಪೂರ್ಣವಾಗಿ  ಪುಣ್ಯ ಸ್ಮರಣೆಯನ್ನು ನಡೆಸುತ್ತಾ ಬಂದಿದ್ದಾರೆ.

ಹೆಸರಿಟ್ಟು ಹರಸಿದ ಕಾರಣೀಕ ಗುರು..!

1947 ರ ಜೂನ್ ತಿಂಗಳಲ್ಲಿ  ಶಿವಮೊಗ್ಗ ಜಿಲ್ಲೆಯ ಸೂಗೂರಿಗೆ ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರು ಆಕಸ್ಮಿಕವಾಗಿ ದಯಮಾಡಿಸಿದ್ದ ದಿನವೇ ಸರ್ವತ್ರ ಪೂಜನೀಯ  ಶ್ರೀ ತರಳಬಾಳು ಜಗದ್ಗುರು ಶ್ರೀ  1108 ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪೂರ್ವಾಶ್ರಮದ ಗೃಹದಲ್ಲಿ ಶ್ರೀ ಜಗದ್ಗುರುಗಳವರಿಗೆ ನಾಮಕರಣ ಕೈಂಕರ್ಯವು ಏರ್ಪಟ್ಟಿತ್ತು. ಶ್ರೀ ಜಗದ್ಗುರುಗಳವರ ಪೂರ್ವಾಶ್ರಮದ ತಂದೆಯವರಾದ ಲಿಂಗೈಕ್ಯವೇ॥ ಮ॥ಮೂ॥ ಈಶ್ವರಯ್ಯನವರಿಗೆ ಊರಿನ ಪ್ರಮುಖರು ನಿಮ್ಮ ಪುತ್ರನ ನಾಮಕರಣದ ದಿನವಾದ ಇಂದೇ ಸ್ವಾಮಿಗಳೊಬ್ಬರು  ಊರಿಗೆ ದಯಮಾಡಿಸಿರುವದು ದೈವೀ ಸುಯೋಗವೆಂಬಂತಿದೆ. ಆ ಪೂಜ್ಯ ಸ್ವಾಮಿಗಳಿಂದ  ನಾಮಕರಣ ಕಾರ್ಯವನ್ನು ಮಾಡಿಸುವುದು ಸೂಕ್ತ ಎಂದರು. ಅವರ ಸಲಹೆಯನುಸಾರ ಆಕಸ್ಮಿಕವಾಗಿ ದಯಮಾಡಿಸಿದ್ದ  ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರನ್ನು ಕೂಡಲೇ  ದರ್ಶನಗೈದ ಲಿಂಗೈಕ್ಯ ವೇ॥ ಮ॥ಮೂ॥ ಈಶ್ವರಯ್ಯನವರು, ತಮ್ಮ ದಿವ್ಯ ಸಾನಿಧ್ಯದಲ್ಲಿ  ನಮ್ಮ  ಪುತ್ರನ ನಾಮಕರಣ ನಡೆಯಲೆಂಬ ಭಕ್ತಿಯ ಬಿನ್ನಹವನ್ನು ಮನ್ನಿಸಿದ ಪೂಜ್ಯ ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರು ಪೂಜ್ಯ ಶ್ರೀ ಜಗದ್ಗುರುಗಳವರಿಗೆ “ಶಿವಮೂರ್ತಿ” ಎಂದು ನಾಮಕರಣಗೈದು ಆಶೀರ್ವದಿಸಿದರು. ತರಳಬಾಳು  ಪರಂಪರೆಯ ಗುರುಗಳಿಂದ ನಾಮಕರಣವಾದ  ಸೂಗೂರಿನ ಆ ಕಂದ ಅದೇ ತರಳಬಾಳು ಪೀಠದ  ಸದ್ದರ್ಮ ಸಿಂಹಾಸನಾಧೀಶರಾಗಿ ಜಗದ್ವಂದ್ಯರಾಗಿ ವಿದ್ವತ್ಪೂರ್ಣರಾಗಿ  ಸರ್ವ ಸಮಾಜದವರ ಬಾಳಿಗೆ ಬೆಳಕು ತಂದಿರುವುದು  ದೈವೀ ಪ್ರೇರಣೆಯ ಸತ್ಯ  ಸಾಕ್ಷಾತ್ಕಾರದ ಸಂಕಲ್ಪವಾಗಿದೆ.

ಮಕ್ಕಳ ಮೇಲೆ ಅಪಾರ ಪ್ರೀತಿ ವಾತ್ಸಲ್ಯ ಹೊಂದಿದ್ದ ಕಾಶೀ ಮಹಾಲಿಂಗ  ಶ್ರೀಗಳು ತಮ್ಮ ಕಾಷಾಯ ವಸ್ತ್ರದ ಜೇಬಿನಲ್ಲಿ ಸಿಹಿ ಪದಾರ್ಥಗಳನ್ನು ಇಟ್ಟುಕೊಂಡು ಮಕ್ಕಳಿಗೆ ಹಂಚುತ್ತಿದ್ದರು. ಪೂಜ್ಯರ ಜೊತೆ ಮಕ್ಕಳ ಸೈನ್ಯವೇ ಸುತ್ತುವರೆದಿರುತ್ತಿರುವುದ ಬಗ್ಗೆ ಹಿರಿಯರು ನೆನಪು ಮಾಡಿಕೊಡುವಾಗ ಕಣ್ಣು ತೇವಗೊಳ್ಳುತ್ತವೆ. 

ಕಾಶೀಮಹಾಲಿಂಗ ಶ್ರೀಗಳು ಆಶೀರ್ವಾದ ಮಾಡಿದರೆ, ಅವರಿಂದ ನಾಮಕರಣಗೊಂಡ ಮಕ್ಕಳು ಕೀರ್ತಿ ಶಾಲಿಗಳಾಗುವರೆಂಬ ಭಾವನೆ ಶಿಷ್ಯ ಸಮಾಜದವರ ನಂಬಿಕೆಯಾಗಿತ್ತು. ಆ ನಂಬಿಕೆ  ಹುಸಿಯಾಗದೆ ಪೂಜ್ಯರಿಂದ ನಾಮಕರಣಗೊಂಡು ಆಶೀರ್ವಾದ ಪಡೆದವರು ಇಂದು ದೇಶ ವಿದೇಶದಲ್ಲಿ  ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಉದಾಹರಣೆಗಳಿವೆ.


ದೈವೀ ಶಕ್ತಿಯ ಪೂಜ್ಯರು ಶ್ರೀ ತರಳಬಾಳು ಜಗದ್ಗುರು ಸದ್ದರ್ಮ ಪೀಠಕ್ಕಿರುವ ಪವಿತ್ರ ಸಂಕಲ್ಪ ಶಕ್ತಿಯನ್ನು ಪರಿಚಯಿಸಿದ ಮಹಾಮಹಿಮರು. ಪೂಜ್ಯ ಶ್ರೀ ಕಾಶೀಮಹಾಲಿಂಗ ಸ್ವಾಮಿಗಳವರ ಸ್ಮರಣೆಯ ಮಹಾಪ್ರಸಾದ ದಾಸೋಹ (ಪರವು) ದಿನವಾದ ಇಂದು ಪೂಜ್ಯರ ಪವಿತ್ರ ಚರಣಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು. ಅವರ ಮಂಗಳ ಮಹಾಶೀರ್ವಾದವು  ಎಲ್ಲರ ಕಾಪಾಡಲೆಂಬ  ಪ್ರಾರ್ಥನೆಯೊಂದಿಗೆ ನಮಃ ಕುಸುಮಾಂಜಲಿಗಳು.